ಪೋಕರ್ ಒಂದು ಜೂಜಿನಾಟವೇ?

– ಬಾಬು ಅಜಯ್

Pius-Heinz-WSOP-champ

ಈ ಆಟದ ಇಡೀ ಹೆಸರು ಟೆಕ್ಸಾಸ್ ಹೋಲ್ಡ್ಎಂ ನೋ ಲಿಮಿಟ್ (Texas Hold ’em-No Limit). ಇದು ಹಲವಾರು ರೀತಿಯ ಎಲೆಯಾಟಗಳಲ್ಲಿ ಬಹಳ ಹೆಸರುವಾಸಿಯಾದ ಎಲೆಯಾಟ. ಒಮ್ಮೆ ಶುರುವಾದ ಮೇಲೆ ಎಶ್ಟು ಹೊತ್ತು ಬೇಕಿದ್ದರೂ ನಡೆಯಬಹುದಾದ ಈ ಆಟದ ನಿಯಮಗಳನ್ನು ಇಲ್ಲಿ ತಿಳಿದುಕೊಳ್ಳಬಹುದು.

ಅಮೇರಿಕಾದ ಸ್ಟೇಟನ್ ಅಯ್ಲೆಂಡಿನ ಒಂದು ಗೋದಾಮಿನ ಕೋಣೆಯಲ್ಲಿ ಒಮ್ಮೆ ನಡೆಯುತ್ತಿದ್ದ ಪೋಕರ್‍ ಆಟಕ್ಕೆ 300 ಡಾಲರ್‍ ಪ್ರವೇಶ ಶುಲ್ಕವಿತ್ತು. ಲಾರೆನ್ಸ್ ಡಿ ಕ್ರಿಸ್ಟಿನ ಅವರು ಈ ಆಟದ ಏರ‍್ಪಾಡುಗಾರರಾಗಿದ್ದರು. ಲಾರೆನ್ಸ್ ಡಿ ಕ್ರಿಸ್ಟಿನ ಅವರನ್ನು ಜೂಜಿನ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ಕಾರಣ ಕೊಟ್ಟು ಕಳೆದ ಬೇಸಿಗೆಯಲ್ಲಿ ಸೆರೆಹಿಡಿಯಲಾಗಿತ್ತು.

ಡಿ ಕ್ರಿಸ್ಟಿನ ಅವರ ವಕೀಲರಾದ ಕಣ್ಣನ್ ಸುಂದರಂ ಅವರು, “ಎಲೆಯಾಟದಲ್ಲಿ ಗೆಲ್ಲಲು ಹಣೆಯ ಮೇಲಿನ ಗೆರೆಯೊಂದೇ ಸಾಲದು ಅದಕ್ಕೆ ನಿಪುಣತೆ ಹೊಂದಿರಬೇಕು, ಆದ್ದರಿಂದ ಇದು ಜೂಜು ಕಾನೂನಿಗೆ ಒಳಪಡುವುದಿಲ್ಲ” ಎಂದು ವಾದಿಸಿದ್ದರು. ಇದಕ್ಕಾಗಿ ಒಬ್ಬ ಹಣಕಾಸರಿಗ (economist), ಎಣಿಕೆಯರಿಗ (statistician) ಮತ್ತು ಹೆಸರಾಂತ ಆಟಗಾರರಾದ ರಾಂಡಲ್ ಡಿ. ಹೀಬ್ ಅವರನ್ನು ಸಾಕ್ಶಿಯಾಗಿ ವಿಚಾರಣೆಗೊಳಪಡಿಸಿದ್ದರು. ಪೋಕರ್‍ ಎಲೆಯಾಟ ಆಡುವವರ ಮೆಚ್ಚುಗೆ ಗಳಿಸಿದ ತೀರ್‍ಪಿನಲ್ಲಿ ಜಡ್ಜ್ ಜಾಕ್ ಬಿ. ವಯ್ನ್‍ಸ್ಟೇಯ್ನ್ ಅವರು ಜೂಜಿನಾಟ ನಡೆಸುತ್ತಿದ್ದ ಲಾರೆನ್ಸ್ ಡಿ ಕ್ರಿಸ್ಟಿನ ತಪ್ಪು ಮಾಡಿಲ್ಲ ಎಂದು ಹೇಳಿಬಿಟ್ಟರು.

ಜಡ್ಜ್ ಕೊಟ್ಟ ಕಾರಣ: ಎಲೆಯಾಟದಲ್ಲಿ ಗೆಲ್ಲಲು ಆಟಗಾರನು ನಿಪುಣತೆ ಹೊಂದಿರಬೇಕು. ಕೇವಲ ತೆರಹು (chance) ಒಂದರಿಂದಲೇ ಸಾದ್ಯವಿಲ್ಲ . ಆದ್ದರಿಂದ ಆಟದ ಮೇಲಾಳನ್ನು(manager) ಒಪ್ಪುಕೂಟದ ಕಟ್ಟಲೆಯ (federal law) ಅಡಿಯಲ್ಲಿ ವಿಚಾರಣೆ ಮಾಡಲಾಗುವುದಿಲ್ಲ ಎಂಬ ತೀರ‍್ಪು ನೀಡಿದ್ದರು.

ಹಾಗಿದ್ದರೆ ಪದನೆರಕೆಯ ಪ್ರಕಾರ ಜೂಜಿನಾಟ ಅಂದರೇನು? ಯಾವ ಆಟದಲ್ಲಿ ಸೋಲು-ಗೆಲುವು ತೆರಹಿನ ಮೇಲೆ ನಿಂತಿರುತ್ತದೋ, ಅಂತಹ ಆಟದಲ್ಲಿ ಜನರು ಹಣ ತೊಡಗಿಸಿ ಆಡುವುದನ್ನು ಜೂಜಿನಾಟ ಎಂದು ಕರೆಯಲಾಗುತ್ತೆ.

ಹಾಗಿದ್ದರೆ ನಿಪುಣತೆ(skill) ಬೇಡುವ ಆಟ ಅಂದರೇನು? ಆಟ ಶುರುವಾದಾಗ ಗೆಲ್ಲಲು ಎಲ್ಲ ಆಟಗಾರರಿಗೂ ಒಂದೇ ತೆರನಾದ ತೆರಹುಗಳಿರಬೇಕು. ಉದಾ : ಚದುರಂಗದಾಟ. ಚದುರಂಗದಾಟದಲ್ಲಿ ಇಬ್ಬರು ಆಟಗಾರರು 16 ಕಾಯಿಗಳಿಂದ ಶುರು ಮಾಡುತ್ತಾರೆ. ನಂತರ ತಮ್ಮ ಗ್ನಾನ ಮತ್ತು ಕುಶಲತೆ ಉಪಯೋಗಿಸಿ ಆಟದಲ್ಲಿ ಗೆಲ್ಲಬೇಕಾಗುತ್ತದೆ. ಇಲ್ಲಿ ಬಾಜಿ ಮಾಡಿದರೂ ಆಟ ಗೆಲ್ಲುವುದಕ್ಕಾಗುವುದು ಆಟಗಾರನ ಕುಶಲತೆಯಿಂದಲೇ ಹೊರತು ತೆರಹುವಿನಿಂದ ಅಲ್ಲ.

ಹಾಗಾದರೆ ಪೋಕರ್‍ ಎಲೆಯಾಟ ಯಾವ ಬಗೆಯ ಆಟ? ಹೆಚ್ಚಿನ ಎಲೆಯಾಟಗಳಲ್ಲಿ ಎಲ್ಲಾ ಆಟಗಾರರೂ ಒಂದೇ ತರಹದ ಎಲೆಗಳಿಂದ ಶುರು ಮಾಡುವುದಿಲ್ಲ. ಒಬ್ಬೊಬ್ಬ ಆಟಗಾರನಿಗೂ ಸಿಗುವ ಎಲೆಗಳಿಂದ ಮತ್ತು ಮೇಜಿನ ಮೇಲೆ ಹರಡಿಸುವ ಎಲೆಗಳಿಂದ ಆಟಗಾರನ ಸೋಲು-ಗೆಲುವು ನಿರ‍್ದರಿಸಲಾಗುತ್ತೆ. ಈ ಎಲೆಗಳನ್ನ ಹಂಚುವ ಸಮಯದಲ್ಲಿ ಬಾಜಿ ಮಾಡಲಾಗುವುದರಿಂದ ಅವನ್ನು ಒಂದು ಜೂಜಿನಾಟ ಎಂದು ಕರೆಯಬಹುದು.

ಆದರೆ ಸ್ವಲ್ಪ ಒಳ ಹೊಕ್ಕಿ ನೋಡಿದಾಗ, ಪೋಕರ್‍ ಎಲೆಯಾಟಕ್ಕೆ ದೇಹದ ಮೇಲಿನ ನಿಯಂತ್ರಣ, ಎದುರಾಳಿಗಳ ಮುಕದ ಹಾವ-ಬಾವ ಗಮನಿಸುವುದು, ನೆನಪು, ಊಹೆ ಮತ್ತು ತಾಳ್ಮೆ ಅಗತ್ಯವಾದದ್ದು. ಈ ಆಟದಲ್ಲಿ ಮೇಜಿನ ಮೇಲೆ ಹಾಕುವ ಎಲೆಗಳು ಮತ್ತು ಆಟಗಾರರಲ್ಲಿರುವ ಎಲೆಗಳನ್ನ ಹೊಂದಾಣಿಕೆ ಮಾಡಿ ಯಾರದ್ದು ಅಯ್ದು ಅತ್ಯುತ್ತಮ ಎಲೆಗಳಾಗುತ್ತೋ ಅವರು ಪಾಟ್ ಹಣವನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಪೋಕರ್‍ ಆಟವನ್ನು ನಿಪುಣತೆ ಬೇಡುವ ಆಟವೆಂದು ಕರೆಯಬಹುದು.

ಮಾಹಿತಿ ಸೆಲೆ: ನ್ಯೂ ಯಾರ‍್ಕ್ ಟಯ್ಮ್ಸ್

(ಚಿತ್ರ: erni68s.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: