ಕರ‍್ವಾಲೊ – ಒಂದು ಸೀಳುನೋಟ

ಪ್ರಶಾಂತ್ ಇಗ್ನೇಶಿಯಸ್

“ನಾನು ಮೂಡುಗೆರೆ ಜೇನು ಸೊಸಯ್ಟಿಯ ಬಾಗಿಲುಗಳನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ….” ಎಂದು ಪ್ರಾರಂಬವಾಗುವ ತೇಜಸ್ವಿಯವರ ಕರ್‍ವಾಲೊ ಕಾದಂಬರಿಯ ಮೊದಲ ಸಾಲುಗಳಲ್ಲೇ ಒಂದು ರೀತಿಯ ಗೊಂದಲ ಮೂಡುತ್ತಿತ್ತು. ಹಾಗೇ ನೋಡಿದರೆ ತೇಜಸ್ವಿಯವರ ಕಾದಂಬರಿ, ಕತೆಗಳನ್ನು ಅದರ ಮೊದಲ ಸಾಲು, ಪುಟ ಅತವಾ ಅದ್ಯಾಯದಿಂದ ಅಳೆಯಲಾಗದು. ಎಲ್ಲಿಯೋ ಅರಂಬವಾಗಿ ಯಾವುದೇ ಅನಗತ್ಯ ತಿರುವುಗಳಿಲ್ಲದೆ, ಹಂತ ಹಂತವಾಗಿ ಅಚ್ಚರಿಗೊಳಿಸುತ್ತ ಮತ್ತೆಲ್ಲಿಯೋ ಹೋಗಿ ಮುಟ್ಟುವ ಪರಿ ಅವರ ಓದುಗರಿಗೆ ಪರಿಚಿತವೇ. ಆದರೂ ಹಾರುವ ಓತಿಯ ಹುಡುಕಾಟದ ಬಗೆಗಿನ ಕಾದಂಬರಿ ಎಂದು ಗೊತ್ತಿತ್ತಾದರಿಂದ, ಈ ಕರ್‍ವಾಲೊ ಎಂಬ ವಿಚಿತ್ರ ಹೆಸರು ಯಾರದು? ಇದ್ಯಾವುದೋ ಕ್ರಾಂತಿಕಾರಿ ವ್ಯಕ್ತಿಯ ಹೆಸರಿರಬಹುದೇ, ಹಾರುವ ಓತಿಗೂ ಮೂಡುಗೆರೆಗೂ ಎಲ್ಲಿಯ ಸಂಬಂದ, ಅದು ಕಾಡಿನ ಸಾಹಸ ಕತೆಯಾದರೆ ಅದಕ್ಕೂ ಮೂಡುಗೆರೆ ಜೇನು ಸೊಸಯ್ಟಿಗೂ ಯಾವುದು ನಂಟು ಎಂಬುದರಲ್ಲೇ ಕರ್‍ವಾಲೋ ಓದುವುದನ್ನು ಬೇಕಂತಲೇ ಮುಂದೂಡತ್ತಲೇ ಬಂದಿದ್ದೆ.

ಪೂರ್‍ಣ ಚಂದ್ರ ತೇಜಸ್ವಿಯವರು ಕುವೆಂಪುರವರ ಮಗ ಎಂದು ತಿಳಿದಿತ್ತಾದರೂ ಅವರ ಬರಹಗಳ ಪರಿಚಯ ಆಗಿದ್ದು ಲಂಕೇಶ್ ಪತ್ರಿಕೆಯಲ್ಲಿನ ’ಆಣ್ಣನ ನೆನಪು’ ಅಂಕಣದಿಂದಾಗಿಯೇ. ಆಗ ಲಂಕೇಶ್ ಪತ್ರಿಕೆ ಬಹಳ ಜನಪ್ರಿಯವಾಗಿದ್ದರೂ ಅದರಲ್ಲಿ ನನಂತವನಿಗೆ ಅರ್‍ತವಾಗುತ್ತಿದ್ದದ್ದು, ನೀಲು ಚುಟುಕುಗಳು, ಸಿನಿಮಾ, ಅನಂತ್ ನಾಗ್ ರ ’ನನ್ನ ತಮ್ಮ ಶಂಕರ’, ಅಣ್ಣನ ನೆನಪು ಯಂತ ಅಂಕಣಗಳು ಮಾತ್ರವೇ. ಅಲ್ಲಿಂದಲೇ ತೇಜಸ್ವಿಯವರ ಬರಹಗಳ ಬಗ್ಗೆಯೂ ಒಂದು ಕುತೂಹಲ ಮೂಡಿತು. ಈ ಕುತೂಹಲದಿಂದಾಗಿ ಮುಂದೆ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕಿರುಗೂರಿನ ಗಯ್ಯಾಳಿಗಳು ಮುಂತಾದ ಪುಸ್ತಕಗಳು ಓದುವಂತೆಯೂ ಆಯಿತು. ಮತ್ತೊಂದು ಪುಸ್ತಕದಲ್ಲಿ ತಮ್ಮ ಮನೆಯ ಬಳಿ ಹಾವೊಂದು ಕಪ್ಪೆಯನ್ನು ನುಂಗಿ, ಅದರ ಬಾರಕ್ಕೆ ಮುಂದೆ ಸಾಗಲಾರದೆ ಸಣ್ಣ ಪಕ್ಶಿಯೊಂದಕ್ಕೆ ಆಹಾರವಾಗುವ ಪ್ರಸಂಗವನ್ನು ತೇಜಸ್ವಿ ಎಶ್ಟು ಅದ್ಬುತವಾಗಿ ವರ್‍ಣಿಸಿದ್ದಾರೆಂದರೆ ಅವರ ಎಲ್ಲಾ ಬರಹಗಳನ್ನೂ ಓದಬೇಕೆಂಬ ಆಸೆ ಬೆಳೆಯಿತು. ಅದರೂ ಎಲ್ಲರೂ ಕ್ಲಾಸಿಕ್ ಎಂದೇ ಕರೆಯುತ್ತಿದ್ದ ’ಕರ್‍ವಾಲೊ’ ಓದಲು ಮನಸ್ಸಾಗಿರಲಿಲ್ಲ.

ಒಂದಶ್ಟು ಪುಟಗಳನ್ನು ಓದಿ ಬಿಟ್ಟಿದ್ದ ಅದನ್ನು ಓದಲು ಮತ್ತೆ ಶುರು ಮಾಡಿದ್ದೊಂದೆ ನೆನಪು. ಹೇಗೆ ಮುಗಿಯಿತೋ ಕಾಣೆ. ಕರ್‍ವಾಲೊ ಒಂದು ಹೊಸ ಜಗತ್ತನ್ನೆ ತೆರೆದಿಟ್ಟಂತೆ ಆಯಿತು ಎಂಬುದು ನಿಜವಾದರೂ, ಅದಕ್ಕಿಂತ ಮುಕ್ಯವಾಗಿ ಈ ಕಾದಂಬರಿಯಲ್ಲಿ ಅಶ್ಟೇನೂ ಮುಕ್ಯವಲ್ಲದ ಎಶ್ಟೊ ಸಣ್ಣ ಸಣ್ಣ ಪ್ರಶ್ನೆಗಳಿಗೆ ಉತ್ತರ ದೊರಕುತ್ತಾ ಹೋಯಿತು. ಇನ್ನೂ ಕಾದಂಬರಿಗೆ ಕರ್‍ವಾಲೊ ಎಂಬ ಹೆಸರು ಇದೆಯಾದರೂ ಅಲ್ಲಿನ ಯಾವ ಪಾತ್ರದ ಹೆಸರನ್ನೂ ಇಟ್ಟರೂ ಸರಿಯೇ ಎಂಬಶ್ಟು ಎಲ್ಲಾ ಪಾತ್ರಗಳೂ ಲೀಲಾಜಾಲವಾಗಿ ನಮ್ಮನ್ನು ಅವರಿಸಿಕೊಳ್ಳುತ್ತವೆ. ಜಗತ್ತಿನ ವಿಕಸನದ ರಹಸ್ಯದ ಅದ್ಯಾಯವೊಂದನ್ನು ತನ್ನಲೇ ಇಟ್ಟುಕೊಂಡು ಅದರ ಬಗ್ಗೆ ಯಾವುದೇ ಅರಿವಿಲ್ಲದಂತೆ ಬಾಳುತ್ತಿರುವ ಓತಿ, ಅದನ್ನು ಹುಡುಕಿಕೊಂಡು ಹೊರಟವರಲ್ಲಿನ ಅದೇ ನಿರ್‍ಬಾವ, ಕರ‍್ವಾ‍ಲೊಗೆ ಮಾತ್ರ ತಿಳಿದಿರುವ ಅದರ ಮಹತ್ವ ಹಾಗೂ ಆದರೂ ಅವರು ತೋರುವ ಸಂಯಮ, ಮಂದಣ್ಣನ ಬೇಜವಬ್ದಾರಿ, ಬಿರಿಯಾನಿ ಕರಿಯಪ್ಪನ ರಸಿಕತನ, ನಾಯಿ ’ಕಿವಿ’ ಯ ನಾಯ್ತನ(?), ಸ್ವತಹ ತೇಜಸ್ವಿಯವರ ಉತ್ಸಾಹ, ಹಾಸ್ಯ, ಹತಾಶೆ, ಬೇಸರ, ಪ್ರಬಾಕರನ ಪ್ರಜ್ನೆ, ಕೆಲಸದಾಳು ಪ್ಯಾರನ ಮುಗ್ದತೆ, ಮೂಡುಗೆರೆಯಂತ ಊರುಗಳಲ್ಲಿನ, ಕಾಡುಗಳಲ್ಲಿನ ಬಾರತ, ಎಲ್ಲವೂ ಓದುಗನ ಬಾವ ಪ್ರಪಂಚದಲ್ಲಿ ಲೀನವಾಗಿತ್ತಾ ಹೋಗುವ ಪರಿಯಿಂದಾಗಿಯೇ ಕರ್‍ವಾಲೋ ಏಕೆ ಕನ್ನಡ ಸಾಹಿತ್ಯದಲ್ಲಿ ಒಂದು ಆಪ್ತ ಹೆಸರು ಎಂಬ ಸತ್ಯ ಅರಿವಾಗುತ್ತದೆ. ಆ ಹುಡುಕುವ ಪಯಣದ ರೋಮಾಂಚದಲ್ಲಿ ಮುಳುಗಿ ಏಳುವ ಓದುಗನಿಗೆ ಓತಿ ಸಿಕ್ಕರೂ ಸಿಕ್ಕದಿದ್ದರೂ ನಿರಾಸೆಯಂತೂ ಆಗುವುದಿಲ್ಲ.

ಈ ಕಾದಂಬರಿಯಲ್ಲಿ ಮೂಡುಗೆರೆಯಂತ ಊರುಗಳ, ಜನರ ಬವಣೆಗಳ ವಿವರಗಳ ಜೊತೆಗೆ ಕಾಡಿನ ಅಗಾದತೆ, ಅನಂತತೆಯ ಬಗೆಗಿನ ವಿವರಗಳು ಆಶ್ಚರ್‍ಯ, ಬಯ, ರೋಮಾಂಚನ ಎಲ್ಲವನ್ನೂ ಉಂಟು ಮಾಡುತ್ತದೆ. ತೇಜಸ್ವಿಯವರು ಮೂಡುಗೆರೆಗೆ ಬಂದು ಮನೆಗೆ ಇನ್ನೂ ವಿದ್ಯುತ್ ಶಕ್ತಿ ಸಂಪರ್‍ಕ ಹಾಕಿಸಕೊಳ್ಳದ ವರ್‍ಶಗಳಲ್ಲಿ ಈ ಕಾದಂಬರಿಯನ್ನು ಬರೆದರು ಎಂಬ ತೇಜಸ್ವಿಯವರ ಪತ್ನಿ ರಾಜೇಶ್ವರಿ ನೀಡುವ ಮಾಹಿತಿಯೊಂದಾಗಿ ’ಕರ್‍ವಾಲೊ’ ಕತ್ತಲ್ಲಲ್ಲಿ ಹೊಳೆಯುವ ದಿವ್ಯ ತಾರೆಯಂತೆ ಆಪ್ತವಾಗಿ ಕಾಣುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಹೌದು, ತುಂಬಾ ಚೆನ್ನಾಗಿದೆ ಈ ಕಾದಂಬರಿ.

ಜಗದೀಶ್ ಗೌಡ ಗೆ ಅನಿಸಿಕೆ ನೀಡಿ Cancel reply