ಕೊಳವೆ ಸಾರಿಗೆಯ ಕಯ್ತಿಟ್ಟ ಬಿಡುಗಡೆ!

-ಜಯತೀರ‍್ತ ನಾಡಗವ್ಡ

ಹೊಸದಾಗಿ ಹೊಮ್ಮಲಿರುವ ಕೊಳವೆ ಸಾರಿಗೆ ಹಮ್ಮುಗೆಯ ಬಗ್ಗೆ ಈ ಮುಂಚೆ ತಿಳಿಸಿದ್ದೆ. ಈ ಹಮ್ಮುಗೆಯ ಮುಂದಾಳು ಎಲೋನ್ ಮಸ್ಕ್ ಕೊಳವೆ ಸಾರಿಗೆಯ ತಮ್ಮ ಕನಸನ್ನು ನನಸಾಗಿಸವತ್ತ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಇತ್ತೀಚಿಗೆ ಅವರು ’ಹಯ್ಪರ್ ಲೂಪ್’ ಕೊಳವೆ ಸಾರಿಗೆ ಹೇಗೆ ಕೆಲಸ ಮಾಡಲಿದೆ ಎಂದು ತೋರಿಸುವ ಕಯ್ತಿಟ್ಟ (sketch) ಬಿಡುಗಡೆ ಮಾಡಿದ್ದಾರೆ. ಈ ಕುರಿತು ಈಗ ತಿಳಿಯೋಣ ಬನ್ನಿ.

ಕೊಳವೆ ಸಾರಿಗೆ ಈ ಕೆಳಗೆ ತೋರಿಸಿರುವ ಬಾಗಗಳನ್ನು ಹೊಂದಿರುತ್ತದೆ.

kolave

ವೇಗದ ಉಗಿ ಬಂಡಿಗಳು ಅಳವಡಿಸಿಕೊಂಡಿರುವ ಮ್ಯಾಗ್ನಾಲೀವ್ (ಸೆಳೆಗಲ್ಲ ತೇಲುವಿಕೆ) ತಿಳಿಮೆಯೇ ಬಿರುಸಿನಿಂದ ಓಡುವ ಕೊಳವೆ ಬಂಡಿಯ ಹಿಂದಿರುವ ಹೊಳಹು. ಅತಿ ವೇಗದ ಬುಲೆಟ್ ಬಂಡಿಗಳು ಬಿರುಸಿನಲ್ಲಿ ಮುನ್ನುಗ್ಗಲು ಉಜ್ಜಾಟ ಮತ್ತು ಗಾಳಿಯ ತಡೆತನ ಅಡ್ಡಿಯಾಗಿವೆ. ಅದಕ್ಕೆಂದೇ ಹಯ್ಪರ‍್ಲೂಪ್ ಕೊಳವೆಯ ಚಿಪ್ಪುಗಳು ಗಾಳಿಯಿರದ ವಾತಾವರಣದಲ್ಲಿ ಯಾವುದೇ ಅಡೆತಡೆಯಿರದೆ ಗಂಟೆಗೆ ಸಾವಿರಾರು ಮಯ್ಲಿ ವೇಗದಲ್ಲಿ ಓಡುತ್ತವೆ.

ಕೊಳವೆ ಸಾರಿಗೆಯಲ್ಲಿ ಬಳಸಲಾಗುವ ಕೊಳವೆಗಳು ಮುಚ್ಚಳಿಕೆ ಹೊಂದಿರುವ ಚಿಪ್ಪಿನಂತಿದ್ದು,ಉಕ್ಕಿನಿಂದ ಮಾಡಲ್ಪಟ್ಟಿವೆ. ಗಾಳಿ-ಹಾಕಿಯಾಟದಲ್ಲಿ (air-hockey) ಬಳಸಲಾಗುವ ’ಪಕ್” (Puck) ತೇಲುವಂತೆ ಈ ಚಿಪ್ಪುಗಳು 0.5 ರಿಂದ 1.3 ಮಿಲಿಮೀಟರಗಳಶ್ಟು ಪದರ ದಪ್ಪದ ಗಾಳಿಯೊತ್ತಡ ಸಹಿಸಬಲ್ಲ ಜಾರುಪಟ್ಟಿಗಳ(ski) ಮೇಲೆ ಸಾಗಿಕೊಂಡು ಹೋಗುತ್ತವೆ. ಇದರಿಂದ ಸೆಳೆಗಲ್ಲಿನ ತೇಲುವಿಕೆಯ ಹೊಳಹಿಗೂ ಕೊಳವೆ ಸಾರಿಗೆಯ ಹೊಳಹಿಗೂ ಹೆಚ್ಚಿನ ವ್ಯತ್ಯಾಸ ಇರುವುದು ಅರಿವಾಗುತ್ತದೆ.

ಕೊಳವೆಗಳು ಸಾಗುವ ದಾರಿಯುದ್ದಕ್ಕೂ ವೇಗ ಹೆಚ್ಚು,ಕಡಿಮೆ ಮಾಡಿಕೊಳ್ಳಲು ಇಲ್ಲವೆ ದಾರಿಗೆ ತಕ್ಕಂತೆ ತಿರುವು ಪಡೆಯಲು ಇವುಗಳು ಉಂಟುಮಾಡಿಕೆಯ ಓಡುಗೆಗಳನ್ನು(induction motors) ಅಳವಡಿಸಿಕೊಂಡಿವೆ.ಈ ಮೂಲಕ ಉರುಳುವಿಕೆಯ ತಡೆತನ(rolling resistance) ಮತ್ತು ಗಾಳಿಯ ಎಳೆತ(air drag) ಕಡಿಮೆಗೊಳಿಸಿಕೊಂಡು ಕೊಳವೆಗಳು ಸುಯ್ಯನೆ ಜಾರಿಕೊಂಡು ಮುಂದೆ ಹೋಗಬಲ್ಲವು.

ಕೊಳವೆಗಳ ಮುಂಬಾಗದಲ್ಲಿ ಮಿಂಗಸುವಿನ ಬೀಸಣಿಗೆ ಮತ್ತು ಗಾಳಿ ಒತ್ತುಕಗಳಿದ್ದು, ಎದುರಾಗುವ ಹೆಚ್ಚಿನ ಒತ್ತಡದ ಗಾಳಿಯನ್ನು ಕೊಳವೆಗಳ ಹಿಂಬಾಗಕ್ಕೆ ತಳ್ಳಿ ಮುನ್ನುಗ್ಗಲು ನೆರವಾಗುತ್ತವೆ. ಹೆಚ್ಚಿನ ಒತ್ತಡದ ಗಾಳಿಯ ಒಂದು ಬಾಗ ಈ ಜಾರುಪಟ್ಟಿಗಳಿಗೂ ಹೋಗುತ್ತೆ!

ಗಾಳಿ-ಹೊಯ್ದಾಟದ ಅಳವುತನ (aerodynamic efficiency) ಕಾಪಾಡಿಕೊಂಡು ಸಾಗಲು ಈ ಚಿಪ್ಪುಗಳು ಗಂಟೆಗೆ 1220 ಕಿಲೋಮೀಟರ್‍ ಓಡುವಂತೆ ತಯಾರಿಸಲಾಗಿದೆ ಮತ್ತು ಬಾನೋಡಗಳಲ್ಲಿ ಮಂದಿ ಅನುಬವಿಸುವ ಸೊಂಬಿನ ಬಿರುಹೆಚ್ಚಿಕೆ(inertial acceleration) ಈ ಕೊಳವೆ ಸಾರಿಗೆಯಲ್ಲಿ ಇದು ತೀರಾ ಕಡಿಮೆಯೇ ಆಗಿರುವುದೆಂದು ಹೇಳಿಕೊಂಡಿದ್ದಾರೆ ಎಲೊನ್ ಮಸ್ಕ್.

ಹೆಚ್ಚಿನ ಬಂಡವಾಳ ಹಾಗೂ ಗಾಳಿಯಿರದಿರುವ ಬರಿದಾದ ವಾತಾವರಣವನ್ನು ದೂರದೂರಗಳವರೆಗೆ ಕಾಪಾಡಿಕೊಳ್ಳುವುದು ಎಲೊನ್ ಮಸ್ಕ್ ರವರ ಹಾಯ್ಪರ‍್ಲೂಪ್ ಹಮ್ಮುಗೆಗೆ ದೊಡ್ಡ ಪಣವೊಡ್ಡಿವೆ. ಅದು ಅಲ್ಲದೆ ಅನೇಕ ಹಿರಿಯ ಅರಿಮೆಗಾರರು ಈ ಹೊಳಹಿನ ಬಗ್ಗೆ ಸಾಕಶ್ಟು ಕೇಳ್ವಿಗಳನ್ನು ಮುಂದಿಟ್ಟಿದ್ದಾರೆ.

ಜಗತ್ತಿನೆಲ್ಲೆಡೆ ಬಾರಿ ಸುದ್ದಿ ಮಾಡಿರುವ ಮಸ್ಕ್ ಎಲ್ಲವನ್ನು ಎದುರಿಸಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಹಾಕಿದ್ದಾರೆ. ಇವರಿಗೆ ಒಳ್ಳೆಯದಾಗಲಿ!

(ತಿಟ್ಟಸೆಲೆ: ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: