ನಾವು ಇವರಂತೆ ಯಾವಾಗ ಆಗೋದು?

ಚೇತನ್ ಜೀರಾಳ್.

ಪ್ರಪಂಚದಲ್ಲಿನ ಹಲವು ನಾಡುಗಳಲ್ಲಿರುವ ಕಲಿಕಾ ಏರ್‍ಪಾಡನ್ನು ಹೇಗೆ ಅಳೆಯಬಹುದು ಅನ್ನುವುದಕ್ಕೆ ಹಲವಾರು ರೀತಿಗಳಿವೆ ಎಂದು ಹೇಳಬಹುದು. ಎತ್ತುಗೆಗೆ ಆ ನಾಡಿನ ಏರ್‍ಪಾಡಿನಲ್ಲಿ ಎಶ್ಟು ಮಂದಿ ಕಲಿಕೆಯನ್ನು ಪಡೆದಿದ್ದಾರೆ ಎನ್ನುವುದೇ ಒಂದು ಅಳತೆಗೋಲಾಗಬಹುದು, ಆ ನಾಡಿನ ಕಲಿಕೆಯೇರ‍್ಪಾಡು ಕಲಿಯುವವರಿಗೆ ನೀಡುವ ಸವ್ಲಬ್ಯಗಳು, ಆ ಏರ್‍ಪಾಡಿನಿಂದ ಹೊರ ಬಂದಿರುವ ಅರಿಕೆಗಳು (Research), ಪೇಟೆಂಟುಗಳು, ಹೊಸ ವಿಶಯಗಳು ಹೀಗೆ ಹಲವಾರು ರೀತಿಯಲ್ಲಿ ಒಂದು ಕಲಿಕೆಯೇರ‍್ಪಾಡನ್ನು ತೂಗಿ ನೋಡಬಹುದು. ಇತ್ತೀಚಿಗೆ ಹೊಸದೊಂದು ರೀತಿಯಲ್ಲಿ ಕಲಿಕೆಯೇರ‍್ಪಾಡನ್ನು ಅಳೆಯುವ ಕೆಲಸ ಮಾಡಲಾಗಿದೆ. ಪಾರ್‍ಚೂನ್ ಪತ್ರಿಕೆಯವರು ಪ್ರತಿ ವರ್‍ಶ ಪ್ರಪಂಚದ ಮಾರುಕಟ್ಟೆಯಲ್ಲಿ ಗೆದ್ದು ಮುಂಚೂಣಿಯಲ್ಲಿರುವ 500 ಸಂಸ್ತೆಗಳ ಪಟ್ಟಿಯನ್ನು ಹೊರತರುತ್ತಾರೆ. ಈ ಪಟ್ಟಿಯನ್ನು ಪಾರ್‍ಚೂನ್ 500 ಪಟ್ಟಿಯೆಂದು ಕರೆಯುತ್ತಾರೆ. ಈ 500 ಕಂಪನಿಗಳ ಮುಂದಾಳು (ಸಿ.ಇ.ಒ) ಗಳು ಯಾವ ಯಾವ ಯುನಿವರ್‍ಸಿಟಿಯಲ್ಲಿ ಓದಿದ್ದಾರೆಂಬುದನ್ನು ಪಟ್ಟಿ ಮಾಡಿ, ಯಾವ ಯುನಿವರ್‍ಸಿಟಿಯಿಂದ ಅತಿ ಹೆಚ್ಚು ಸಿ.ಇ.ಒ ಗಳು ಹೊರಬಂದಿದ್ದಾರೆ ಎಂಬುದರ ಮೇಲೆ ಈ ಯುನಿವರ್‍ಸಿಟಿಗಳಿಗೆ ಅಂಕ ನೀಡಿದ್ದಾರೆ.

ಯಾವ ಯುನಿವರ್‍ಸಿಟಿಗಳು ಮುಂದಿವೆ?
ಹೀಗೆ ಆರಿಸಲಾಗಿರುವ ಒಟ್ಟು ನೂರು ಯುನಿವರ್‍ಸಿಟಿಗಳ ಪಟ್ಟಿ ಸಿದ್ದ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮೊದಲನೇ ಜಾಗ ಪಡೆದಿರುವುದು ಹಾರ್‍ವರ್‍ಡ್ ಕಲಿಕೆಮನೆ, ಎರಡನೆಯದು ಟೋಕಿಯೋ ಕಲಿಕೆಮನೆ, ಮೂರನೆಯದು ಸ್ಟ್ಯಾನ್ಪೋರ್‍ಡ್ ಕಲಿಕೆಮನೆ. ಹೀಗೆ ಪಟ್ಟಿ ಮುಂದೆ ಸಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಈ ಪಟ್ಟಿಯಲ್ಲಿರುವ ಮೊದಲ ಹತ್ತು ಯುನಿವರ್‍ಸಿಟಿಗಳಲ್ಲಿ 4 ಅಮೇರಿಕಾ, 3 ಪ್ರಾನ್ಸ್, 2 ಜಪಾನ್, 1 ಕೋರಿಯಾ ದೇಶದ್ದು. ಈ ಪಟ್ಟಿಯ ಮೊದಲ ಹತ್ತು ಕಲಿಕೆಮನೆಗಳ ಪಟ್ಟಿ ಈ ಕೆಳಗಿನಂತಿದೆ.

Alma Matter Index

ಇವರಿಗೆ ಮಾತ್ರ ಹೇಗೆ ಸಾದ್ಯ?
ಪಟ್ಟಿಯ ಮೊದಲು ಹತ್ತು ಬಿಡಿ, ನೂರು ಹೆಸರು ಹುಡುಕಿದರೂ ನಮ್ಮ ಕನ್ನಡ ನಾಡಿನ ಒಂದೇ ಒಂದು ಕಲಿಕೆಮನೆ ಇಲ್ಲದಿರುವುದು ನೋವಿನ ಸಂಗತಿಯೇ ಸರಿ. ಇದಕ್ಕೆ ಮೂಲ ಕಾರಣ ಹುಡುಕಿದರೆ ಕಾಣುವುದು ಆಯಾ ದೇಶದ ಕಲಿಕೆಮನೆಗಳಲ್ಲಿ ತಮ್ಮ ತಾಯಿನುಡಿಗೆ ನೀಡಲಾಗಿರುವ ಒತ್ತು ಎದ್ದು ಕಾಣುತ್ತದೆ. ಅಮೇರಿಕಾದ ನಾಲ್ಕು ಕಲಿಕೆಮನೆಗಳು ಇಂಗ್ಲಿಶ್ ನಲ್ಲಿ, ಪ್ರಾನ್ಸ್ ನ ಕಲಿಕೆಮನೆಗಳು ಪ್ರೆಂಚ್ ನಲ್ಲಿ, ಜಪಾನಿನ ಕಲಿಕೆಮನೆಗಳಲ್ಲಿ ಜಪಾನಿ ನುಡಿ ಹಾಗೂ ಕೋರಿಯಾದ ಕಲಿಕೆಮನೆಗಳಲ್ಲಿ ಕೋರಿಯನ್ ನುಡಿಗಳಲ್ಲಿ ಕಲಿಕೆ ಒದಗಿಸಲಾಗುತ್ತದೆ. ತಮ್ಮ ತಾಯಿ ನುಡಿಯಲ್ಲೇ ಕಲಿಯುವ ಜನರಿಗೆ ಮತ್ತೊಂದು ನುಡಿಯ ಮೂಲಕ ವಿಶಯಗಳನ್ನು ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ, ಹಾಗಾಗಿ ಕಲಿಕೆ ಇವರಿಗೆ ಹೊರೆಯನ್ನಿಸುವುದಿಲ್ಲ. ಇದರಿಂದ ಇವರಿಗೆ ಹೆಚ್ಚಿನ ಮಟ್ಟಿಗೆ ಗೆಲುವು ಸಿಗುತ್ತಿದೆ. ತಮ್ಮ ತಾಯಿನುಡಿಯಲ್ಲೇ ಕಲಿಯುವ ಇವರು ಜೊತೆಗೆ ವ್ಯಾಪಾರ ವಹಿವಾಟಿಗೆ ಬೇಕಿರುವ ಇಂಗ್ಲಿಶ್ ಅತವಾ ಇತರೇ ನುಡಿಗಳನ್ನು ಕಲಿತುಕೊಳ್ಳುತ್ತಾರೆ. ಎಲ್ಲಾ ಹಂತದಲ್ಲೂ ತಮ್ಮ ತಾಯಿನುಡಿಯಲ್ಲಿ ಕಲಿಕೆಯನ್ನು ಒದಗಿಸುತ್ತಿರುವ ಈ ನಾಡುಗಳೆಲ್ಲಾ ಮುಂದುವರಿದ ನಾಡುಗಳ ಪಟ್ಟಿಗೆ ಸೇರುತ್ತವೆ.

ನಮ್ಮಲ್ಲೇನಾಗಿದೆ?
ಜಾಗತೀಕರಣದ ಈ ದಿನದಲ್ಲಿ ಕರ್‍ನಾಟಕದಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವ ಬಂದಿರುವುದು ಸುಳ್ಳಲ್ಲ. ಆದರೆ, ಕಲಿಕೆ ಯಾವ ನುಡಿಯಲ್ಲಾಗಬೇಕು? ಕಲಿಕೆಯ ಒಟ್ಟು ರೂಪ ಹೇಗಿರಬೇಕು? ಮಕ್ಕಳಿಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಬೇಕಿರುವ ವಿದಾನವೇನು? ಈ ಮುಂತಾದ ವಿಶಯಗಳು ಹಾಳೆಗಳಲ್ಲಿ ಮಾತ್ರ ಹರಿದಾಡುತ್ತಿವೆ. ಇವು ಶಾಲೆಗಳನ್ನು ತಲುಪಿ ಮಕ್ಕಳಿಗೆ ದಾರಿತೋರುಕವಾಗಿರುವುದು ನಾವು ಕಾಣುತ್ತಿಲ್ಲ. ಹೆಚ್ಚಾಗಿ ಇಂದಿನ ಕಲಿಕೆಯಂದರೆ ಇಂಗ್ಲಿಶ್ ಒಂದನ್ನು ಸರಿಯಾಗಿ ಓದಲು, ಬರೆಯಲು ಮತ್ತು ಮಾತನಾಡಲು ಬಂದರೆ ಸಾಕು ಎನ್ನುವ ಹಂತಕ್ಕೆ ಬಂದು ನಿಂತಿದೆ. ಆದರೆ ನಿಜವಾದ ಕಲಿಕೆಗೆ ಸಿಗಬೇಕಾಗಿದ್ದ ಒತ್ತು ಇಂದು ಸಿಗುತ್ತಿಲ್ಲ. ತಾಯಿನುಡಿಯಲ್ಲಿ ಕಲಿಕೆ ಮಗುವಿನ ವಿಕಾಸಕ್ಕೆ ಅಗತ್ಯ ಅನ್ನುವ ಹಲವಾರು ಅರಿಕೆಗಳು ಕಣ್ಣಮುಂದಿದ್ದರೂ, ಯಾಕೋ ನಮ್ಮ ಸರಕಾರಗಳಿಗೆ ಇದು ತಲೆಗೆ ಹೊಕ್ಕಂತೆ ಕಾಣುತ್ತಿಲ್ಲ. ಇದು ಸರಿಯಾಗಬೇಕಾಗಿದೆ. ಜಾಗತೀಕವಾಗಿ ನಾವು ಬೇರೆ ನಾಡುಗಳಿಗೆ ಪಯ್ಪೋಟಿ ಒಡ್ಡುವಂತಹ ಕಲಿಕೆಮನೆಗಳನ್ನು ಕಟ್ಟಬೇಕಾಗಿದೆ, ಇದರ ಮೂಲಕ ಹೆಚ್ಚಿನ ಅರಿಕೆಗಳು, ಉದ್ದಿಮೆದಾರರು ಹುಟ್ಟುವಂತಾಗಬೇಕು. ಇದಾಗಬೇಕಿದ್ದಲ್ಲಿ ತಳಹದಿಯಿಂದ ಯುನಿವರ್‍ಸಿಟಿಯವರೆಗೂ ತಮ್ಮ ತಮ್ಮ ತಾಯಿನುಡಿಯಲ್ಲೇ ಜನರಿಗೆ ಕಲಿಕೆ ದೊರಕುವಂತಾಗಬೇಕು. ಆಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಯನ್ನು ಸರಿದಾರಿಯಲ್ಲಿ ಮುನ್ನೆಡಸಲು ಸಾದ್ಯ. ನೀವೇನಂತೀರಿ?

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: