ನಾಡಿಗೆ ತಕ್ಕಂತೆ ಉದ್ದಿಮೆಯ ನಡೆಯಿರಲಿ

ರತೀಶ ರತ್ನಾಕರ

customer service

ಇಂಡಿಯಾವು ಹಲತನಗಳ ದೇಶ. ನುಡಿಯ ಆದಾರದ ಮೇಲೆ ಮೂಡಿರುವ ರಾಜ್ಯಗಳನ್ನು ಗಮನಿಸಿದರೆ ಆದಶ್ಟು ಬೇರ್‍ಮೆ ಕಾಣಸಿಗುತ್ತವೆ. ಎತ್ತುಗೆಗೆ, ಕರ್‍ನಾಟಕದ ಮಂದಿಯ ಉಡುಗೆ, ತಿನಿಸು, ಊಟ, ಮಾತು, ಆಟೋಟ, ಯೋಚನೆಗಳು ಮತ್ತು ಆಸಕ್ತಿಗಳು ಒರಿಸ್ಸಾ ರಾಜ್ಯದ ಮಂದಿಗಿಂತ ಬೇರೆಯಾಗಿಯೇ ಇದೆ. ಇಂತಹ ಹಲವು ಬೇರ್‍ಮೆಗಳನ್ನು ಇಂಡಿಯಾದ ರಾಜ್ಯಗಳ ನಡುವೆ ನೋಡಬಹುದು.

ಹೀಗೆ ಹಲತನದಿಂದ ಕೂಡಿರುವ ದೇಶದಲ್ಲಿ ಯಾವುದೇ ಉದ್ದಿಮೆ ಒಂದೇ ರೀತಿಯ ಯೋಜನೆ ಮತ್ತು ಸೇವೆಯಿಂದ ಎಲ್ಲ ಮಂದಿಯನ್ನು ತಲುಪಲಾಗದು. ಎತ್ತುಗೆಗೆ, ಒಂದು ಅಡುಗೆ ಎಣ್ಣೆ ತಯಾರಿಸುವ ಉದ್ದಿಮೆಯವರು ತಮ್ಮ ಎಣ್ಣೆಯ ಬಯಲರಿಕೆಯನ್ನು ಕರ್‍ನಾಟಕ ಇಲ್ಲವೇ ತಮಿಳುನಾಡಿನ ಟಿವಿಗಳಲ್ಲಿ ನೀಡುವಾಗ ವಡೆಯನ್ನು ಮಾಡಿಯೋ, ಇಲ್ಲವೆ ಇನ್ಯಾವುದಾದರು ತೆಂಕಣ ಇಂಡಿಯಾದ ತಿಂಡಿ ಮಾಡಿ ತೋರಿಸದರೆ ಅದು ಇಲ್ಲಿಯವರಿಗೆ ಹತ್ತಿರವೆನಿಸುತ್ತದೆ ಮತ್ತು ಆ ಎಣ್ಣೆಯ ಬಯಲರಿಕೆಯೂ ಗೆಲುವನ್ನು ಪಡೆಯಲು ಸಹಕಾರಿಯಾಗುತ್ತದೆ. ಹಾಗೆಯೇ, ಅದೇ ಎಣ್ಣೆಯ ಬಯಲರಿಕೆಯನ್ನು ಬಡಗಣ ಬಾರತದ ರಾಜ್ಯಗಳಲ್ಲಿ ನೀಡುವಾಗ ಕಚೋರಿ, ಸಮೋಸದಂತಹ ತಿಂಡಿಯನ್ನು ಮಾಡಿ ತೋರಿಸಿದರೆ ಅದು ಅವರಿಗೆ ಹತ್ತಿರವೆನಿಸುತ್ತದೆ. ಒಂದು ವೇಳೆ, ಎಣ್ಣೆಯನ್ನು ಬಳಸಿ ಕಚೋರಿಯನ್ನು ಮಾಡಿ ತೋರಿಸುವ ಬಯಲರಿಕೆಯನ್ನು ತೆಂಕಣದ ರಾಜ್ಯಗಳಲ್ಲಿ ತೋರಿಸಿದರೆ ಅದು ಆ ರಾಜ್ಯದ ಮಂದಿಯನ್ನು ಅಶ್ಟಾಗಿ ಮುಟ್ಟುವುದಿಲ್ಲ. ಇನ್ನೊಂದು ಎತ್ತುಗೆ ನೋಡಬಹುದಾದರೆ, ಒಂದು ಉದ್ದಿಮೆಯು ಮಂದಿ ಆಚರಿಸುವ ಹಬ್ಬಗಳಿಗೆ ಹಾರಯ್ಸುವ ಮೂಲಕ ತನ್ನ ಪ್ರಚಾರವನ್ನು ಮಾಡುತ್ತಿದ್ದರೆ, ಪಂಜಾಬಿನಲ್ಲಿ ಕನ್ನಡಿಗರ ಹಬ್ಬವಾದ ಯುಗಾದಿ ಹಬ್ಬಕ್ಕೆ ಹಾರಯ್ಸುವುದು, ಕರ್‍ನಾಟಕದಲ್ಲಿ ಪಂಜಾಬಿಯವರ ಹಬ್ಬವಾದ ‘ರಾನಕ’ಗೆ ಹಾರಯ್ಸುವುದು ಅಲ್ಲಲ್ಲಿನ ಮಂದಿಯನ್ನು ಅಶ್ಟಾಗಿ ತಲುಪುವುದಿಲ್ಲ. ಹೀಗಿರುವುದರಿಂದ ಆಯಾ ರಾಜ್ಯಗಳಿಗೆ ತಕ್ಕ ಹಾಗೆ ಮಾರುಕಟ್ಟೆ ತಂತ್ರವನ್ನು ಉದ್ದಿಮೆಯವರು ರೂಪಿಸಿಕೊಳ್ಳಬೇಕಾಗುತ್ತದೆ.

 ರಾಜ್ಯದ ಮಂದಿಯ ನಡೆ-ನುಡಿಯಶ್ಟೆ ಅಲ್ಲದೇ, ಮಂದಿಯ ಸಿರಿತನದಲ್ಲು ಕೂಡ ರಾಜ್ಯಗಳು ಬೇರೆ ಬೇರೆಯಾಗಿವೆ. ಬೇರೆ ಬೇರೆ ರಾಜ್ಯಗಳ ಮಂದಿಯೆಣಿಕೆ ಮತ್ತು ಸಿರಿತನದ ಪಟ್ಟಿಯನ್ನು ಈ ಕೊಂಡಿಯಲ್ಲಿ ನೀಡಲಾಗಿದೆ. ಕರ್‍ನಾಟಕದ ಮಂದಿಯೆಣಿಕೆ ಮುಂದುವರಿದ ದೇಶವಾದ ‘ಇಟಲಿ’ಯ ಮಂದಿಯೆಣಿಕೆಗೆ ಸಮಾನವಾಗಿದೆ ಆದರೆ ಸಿರಿತನದಲ್ಲಿ ಪಿಲಿಪಯ್ನ್ಸ್ ಗೆ ಸಮನಾಗಿದ್ದೇವೆ! ಹಾಗೆಯೇ, ಬಿಹಾರದ ಮಂದಿಯೆಣಿಕೆ ರಶ್ಯಾದ ಮಂದಿಯೆಣಿಕೆಯಶ್ಟಿದೆ ಆದರೆ ಸಿರಿತನವು ಇತಿಯೋಪಿಯಾಗೆ ಸಮನಾಗಿದೆ! (ಪಟ್ಟಿಯ ಆಯ್ದ ವಿವರ ಕೆಳಗೆ ನೀಡಲಾಗಿದೆ). ಸಿರಿತನದ ಮಟ್ಟ ಹೆಚ್ಚಿರುವ ರಾಜ್ಯದಲ್ಲಿ (ಕರ್‍ನಾಟಕ, ಆಂದ್ರ ಪ್ರದೇಶ, ಗುಜರಾತ್) ಹೆಚ್ಚು ಬೆಲೆಯುಳ್ಳ ಸೋಪುಗಳನ್ನು (ಡವ್, ಮಯ್ಸೂರು ಸ್ಯಾಂಡಲ್) ಮಾರುಕಟ್ಟೆಗೆ ತಂದು ಪ್ರಚಾರ ನೀಡಿ, ಮಾರಾಟಮಾಡಿ ಲಾಬಗಳಿಸಬಹುದು. ಅಲ್ಲಿನ ಹೆಚ್ಚಿನ ಮಂದಿ ಆ ಸೋಪಿಗೆ ಬೇಕಾದ ಹಣವನ್ನು ಕೊಡಬಲ್ಲವರಾಗಿರುತ್ತಾರೆ. ಆದರೆ ಅದೇ ಸೋಪಿನ ಪ್ರಚಾರವನ್ನು ಕಡಿಮೆ ಸಿರಿತನವಿರುವ ರಾಜ್ಯದಲ್ಲಿ (ಬಿಹಾರ, ಒರಿಸ್ಸಾ) ಮಾಡಿದರೆ ಮಾರಟವು ಅಶ್ಟಕ್ಕಶ್ಟೆ ಆಗಿರುತ್ತದೆ. ಈ ನಿಟ್ಟಿನಲ್ಲಿಯೂ ಕೂಡ ಉದ್ದಿಮೆಯವರು ನೋಡಬೇಕಿದೆ.

ರಾಜ್ಯ

 

ಮಂದಿಯೆಣಿಕೆ (ಮಿಲಿಯನ್)

ಮಂದಿಯೆಣೆಕೆಗೆ ಹೋಲುವದೇಶ

ಸಿರಿತನ (GDP-per capita) (ರೂ.) 

ಸಿರಿತನಕ್ಕೆ ಹೋಲುವ ದೇಶ 

ದೆಹಲಿ

19

ರೊಮೇನಿಯಾ

175,812

ಮೊರೊಕ್ಕೊ

ಕರ್‍ನಾಟಕ

62

ಇಟಲಿ

69,493

ಪಿಲಿಪಯ್ನ್ಸ್

ಬಿಹಾರ

139

ರಶ್ಯಾ

27,681

ಇತಿಯೋಪಿಯ

ಒರಿಸ್ಸಾ

42

ಅರ್‍ಜೆಂಟೀನ

46,150

ಜಿಂಬಾಬ್ವೆ

(ಮಾಹಿತಿ  ಸೆಲೆ)

ಇಟಲಿ ಹಾಗು ರಶ್ಯಾ ದೇಶಗಳ ನಡುವೆ ಇರುವ ನಡೆ-ನುಡಿ ಮತ್ತು ಸಿರಿತನದ ಬೇರ್‍ಮೆ ಕರ್‍ನಾಟಕ ಹಾಗು ಬಿಹಾರ ರಾಜ್ಯಗಳ ನಡುವೆ ಇದೆ. ಹೀಗಾಗಿ ಇಡೀ ದೇಶಕ್ಕೆ ಸರಿ ಹೊಂದುವ ಹಾಗೆ ಒಂದೇ ಒಂದು ಯೋಜನೆ, ಸೇವೆ ಇಲ್ಲವೇ ನಿಯಮವನ್ನು ತರುವುದು ಸಾದ್ಯವಿಲ್ಲ. ಹಾಗೆ ಮಾಡಿದ್ದಲ್ಲಿ ಅದು ಎಲ್ಲಾ ಮಂದಿಯನ್ನು ತಲುಪುವುದಿಲ್ಲ ಮತ್ತು ಆ ಯೋಜನೆಯು ಅಂದುಕೊಂಡ ಗೆಲುವನ್ನು ಕಾಣುವುದಿಲ್ಲ. ಒಂದೇ ಬಗೆಯ ಸೇವೆಯಿಂದ ದೇಶದ ಎಲ್ಲಾ ರಾಜ್ಯವನ್ನು ತಲುಪುವ ಪ್ರಯತ್ನ ಆ ಉದ್ದಿಮೆಯ ಬೆಳವಣಿಗೆಗೆ ಸಹಕಾರಿಯಾಗಿರುವುದಿಲ್ಲ. ಪ್ರತಿ ರಾಜ್ಯವನ್ನು ಒಂದು ನಾಡಿನಂತೆ ನೋಡಿ ಅಲ್ಲಿನ ಸಿರಿತನ, ಮಂದಿಯ  ನಡೆ-ನುಡಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸಿಕೊಂಡಲ್ಲಿ ಉದ್ದಿಮೆಯ ಏಳಿಗೆಗೆ ಸಹಕಾರಿ.

(ಚಿತ್ರ: ಒರಾಕಲ್ ಡಿಜಿಟಲ್)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.