ನೀರಿನಡಿಯ ಜಗತ್ತನ್ನು ಸೆರೆಹಿಡಿಯುವ ನೀರ‍್ಗುಂಗಿಗಳು!

– ರತೀಶ ರತ್ನಾಕರ.

ಈಗ ಎಲ್ಲೆಲ್ಲೂ ಬಾನ್ಗುಂಗಿಗಳದ್ದೇ(drones) ಸದ್ದು! ಮೊದಲಿಗೆ ಮಿಲಿಟರಿ ಹಾಗೂ ದೊಡ್ಡ ದೊಡ್ದ ಅರಕೆಗಳಿಗಾಗಿ (researches) ಬಳಸಲಾಗುತ್ತಿದ್ದ ಬಾನ್ಗುಂಗಿಗಳು ಈಗ ಸಿನೆಮಾ ತೆಗೆಯುವುದರಿಂದ ಹಿಡಿದು ಸಣ್ಣ ಮಕ್ಕಳ ಆಟಿಕೆಗಳಾಗಿಯೂ ಬಳಕೆಗೆ ಬಂದಿವೆ. ಕೈಗೆಟುಕುವ ಬೆಲೆಯಲ್ಲಿಯೂ ಇವೆ. ಬಾನೆತ್ತರಕ್ಕೆ ಇವನ್ನು ಹಾರಿಸಿ, ಅದರೊಳಗೆ ಅಳವಡಿಸಿರುವ ಕ್ಯಾಮೆರಾದ ನೆರವಿನಿಂದ ವೀಡಿಯೋ, ಚಿತ್ರಗಳನ್ನು ತೆಗೆಯಲು ಬಾನ್ಗುಂಗಿಗಳು ಇನ್ನಿಲ್ಲದಂತೆ ನೆರವಾಗಿವೆ. ರೇಡಿಯೋ ಅಲೆಗಳ ನೆರವಿನಿಂದ ನೀವು ನಿಂತಲ್ಲಿಯೇ ಬಾನ್ಗುಂಗಿಗಳು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ತಿಳಿಸಬಹುದು, ಅವು ಸೆರೆಹಿಡಿಯುವ ಚಿತ್ರಗಳನ್ನು, ವೀಡಿಯೋಗಳನ್ನು ನೇರವಾಗಿ ನೋಡಲೂಬಹುದು.

ಇವೇ ಬಾನ್ಗುಂಗಿಗಳನ್ನು ನೀರಿನಾಳಕ್ಕೂ ಇಳಿಸಿ ನೀರೊಳಗಿನ ಜಗತ್ತನ್ನು ಸೆರೆಹಿಡಿಯಲು ಪ್ರಯತ್ನಿಸಿದರೆ ಏನಾಗಬಹುದು! ಊಹುಂ, ಆಗಲ್ಲ. ನಿಮ್ಮ ಬಾನ್ಗುಂಗಿ ನೀರಿನಲ್ಲಿ ಕಳೆದುಹೋಗಬಹುದು, ನೀರಿನಾಳಕ್ಕೆ ಇಳಿಯಲಾಗದೆ ಸುಮ್ಮನೆ ನೀರ ಮೇಲೆ ಈಜುಬಾರದವರು ಕೈಕಾಲು ಬಡಿದುಕೊಳ್ಳುವಂತೆ ಬಡಿದುಕೊಳ್ಳಬಹುದು.

ನೀರಿನಾಳದಲ್ಲಿ ಸಾಗಿ ಅಲ್ಲಿನ ಚಿತ್ರಗಳನ್ನು, ವೀಡಿಯೋಗಳನ್ನು ಸೆರೆಹಿಡಿಯಬಲ್ಲ, ದಡದಲ್ಲಿ ನಿಂತುಕೊಂಡೆ ನಾವು ಅದನ್ನು ಅಂಕೆಯಲ್ಲಿರಿಸಿಕೊಳ್ಳಲು ಆಗುವಂತಹ, ಬಾನ್ಗುಂಗಿಗಳಂತೆ ಕೈಗೆಟುಕುವ ಬೆಲೆಯಲ್ಲಿ ಮಂದಿಗೆ ದೊರಕುವಂತಹ ನೀರ‍್ಗುಂಗಿಗಳನ್ನು (underwater drones) ಹೊರತರುವ ಪ್ರಯತ್ನ ಹಲವಾರು ವರುಶಗಳಿಂದ ನಡೆಯುತ್ತಿದೆ. ಆ ಪ್ರಯತ್ನದ ಹಾದಿಯಲ್ಲಿ ಹಲವಾರು ಎಡರು-ತೊಡರುಗಳೂ ಎದುರಾಗಿವೆ.

ಕಡಲಿನ ಉಪ್ಪು ನೀರಿನಲ್ಲಿ ರೇಡಿಯೋ ಅಲೆಗಳ ಆಟ ನಡೆಯುವುದೇ ಇಲ್ಲ.

ನೀರಿನಲ್ಲಿ ಸಾಗುವ ಅಳವು ರೇಡಿಯೋ ಅಲೆಗಳಿಗೆ ಅಶ್ಟಾಗಿ ಇಲ್ಲ! ರೇಡಿಯೋ ಅಲೆಗಳ ತಳಹದಿಯ ಮೇಲೆ ಕಟ್ಟಿರುವ ಚಳಕಗಳಾದ ಜಿಪಿಎಸ್, ವೈಪೈ, ರಾಡಾರ್ ನಂತಹ ಚಳಕಗಳು ನೀರಿನೊಳಗೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಕೆಲಸ ಮಾಡಿದರೂ ಅವುಗಳು 10 ರಿಂದ 20 ಅಡಿಗಳ ತನಕ ಮಾತ್ರ ಸಾಗಬಲ್ಲವು. ಸಾಮಾನ್ಯ ರೇಡಿಯೋ ಅಲೆಗಳ ಸಲದೆಣಿಕೆಗಿಂತ(frequency) ತುಂಬಾ ಕಡಿಮೆ ಸಲದೆಣಿಕೆ ಹೊಂದಿರುವ, ಅಂದರೆ 1 ಕಿಲೋ ಹರ‍್ಟ್ಜ್(kHz) ಆಸುಪಾಸಿನ, ಅಲೆಗಳು ತುಂಬಾ ದೂರದ ತನಕ ನೀರಿನಲ್ಲಿ ಸಾಗಬಲ್ಲವು (ಕೆಲವು ಮಿಲಿಟರಿ ಸಬ್‍ಮೆರಿನ್ ಗಳಲ್ಲಿ ಈ ಅಲೆಗಳನ್ನು ಬಳಸಲಾಗುತ್ತಿದೆ). ಆದರೆ ಮಿಲಿಟರಿ ಬಳಕೆಯನ್ನು ಹೊರತುಪಡಿಸಿ ಸಾಮಾನ್ಯ ಬಳಕೆಗೆ 27 ಮೆಗಾ ಹರ‍್ಟ್ಜ್ (MHz)ಗಿಂತ ಕಡಿಮೆ ಸಲದೆಣಿಕೆ ಇರುವ ಅಲೆಗಳನ್ನು ಬಳಸಬಾರದೆಂಬ ಕಟ್ಟಳೆ ಎಲ್ಲಾ ನಾಡುಗಳಲ್ಲಿ ಇದೆ. ಜೊತೆಗೆ ಇಶ್ಟು ಕಡಿಮೆ ಸಲದೆಣಿಕೆಯ ಅಲೆಗಳನ್ನು ಹುಟ್ಟುಹಾಕಲು ತುಂಬಾ ಹೆಚ್ಚಿನ ಮಿಂಚು (electricity) ಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ, “ಬಾನ್ಗುಂಗಿಗಳಂತೆ ಕಡಿಮೆ ಮಿಂಚನ್ನು ಬಳಸಿ, ತುಂಬಾ ಹೊತ್ತು ಕೆಲಸ ಮಾಡುವ ಪುಟ್ಟ ನೀರ‍್ಗುಂಗಿಯನ್ನು ಮಾಡಲು ರೇಡಿಯೋ ಅಲೆಗಳನ್ನು ಬಳಸಿದರೆ ಆಗದು” ಎಂಬುದನ್ನು ಅರಿಗರು ಕಂಡುಕೊಂಡಿದ್ದಾರೆ.

ನೀರಿನಲ್ಲಿ ‘ಬೆಳಕಿ’ಗಿಂತ ‘ಸಪ್ಪಳ’ ತುಂಬಾ ದೂರದ ತನಕ ಸಾಗಬಲ್ಲದು!

ದಡದಲ್ಲಿರುವ ನಮಗೂ, 100-200 ಅಡಿಗಳಶ್ಟು ನೀರಿನಾಳದಲ್ಲಿ ಸಾಗಬೇಕಿರುವ ನೀರ‍್ಗುಂಗಿಗೂ ಅರುಹನ್ನು (communication) ನೆಲೆಸಲು ಬೇರೆಯದ್ದೇ ಬಗೆಯ ಚಳಕ ಬೇಕು. ಬೆಳಕಿನ ರೇಡಿಯೋ ಅಲೆಗಳ ತೊಡಕುಗಳನ್ನು ಮನಗಂಡ ಮೇಲೆ ಅರಿಗರು ನೋಡಿದ್ದು ಮಿಲಿಟರಿ ಸಬ್‍ಮೆರಿನ್‍ಗಳಲ್ಲಿ ಬಳಕೆಯಲ್ಲಿರುವ ಚಳಕಗಳನ್ನು. ಕಡಲಾಳಾದಲ್ಲಿರುವ ಡಾಲ್ಪಿನ್ ಹಾಗೂ ತಿಮಿಂಗಿಲಗಳು ತಮ್ಮ ನಡುವೆ ಮಾತುಕತೆಯನ್ನು ನಡೆಸಲು ಒಂದು ಬಗೆಯ ಸದ್ದು ಇಲ್ಲವೇ ಸಪ್ಪಳವನ್ನು ಬಳಸುತ್ತವೆ. ಆ ಸಪ್ಪಳದ ಅಲೆಯ (Sound Waves) ತಳಹದಿಯ ಮೇಲೆ ಸೋನಾರ್ (SONAR – SOund Navigation And Ranging) ಎಂಬ ಚಳಕವನ್ನು ಹುಟ್ಟುಹಾಕಿ ಸಬ್‍ಮೆರಿನ್‍ಗಳ ಜೊತೆಗೆ ಅರುಹನ್ನು ನಡೆಸಲಾಗುತ್ತಿದೆ. ಇದೇ ಚಳಕವನ್ನು ನೀರ‍್ಗುಂಗಿಗಳನ್ನು ಮಾಡಲು ಬಳಸಬಹುದೆಂದು ಅರಿಗರು ಕಂಡುಕೊಂಡಿದ್ದಾರೆ.

ನೀರಿನೊಳಗೆ ಸಪ್ಪಳ ತುಂಬಾ ದೂರದ ತನಕ ಸಾಗಬಲ್ಲದು ಆದರೂ ಇದರಲ್ಲಿ ಕೆಲವು ತೊಡಕುಗಳಿವೆ;
– ಸಪ್ಪಳದ ಅಲೆಗಳು ನೀರಿನ ಒತ್ತಡಕ್ಕೆ ಸಿಕ್ಕಿ ದಾರಿತಪ್ಪಬಹುದು.
– ಸಪ್ಪಳದ ಅಲೆಗೆ ಹೆಚ್ಚಿನ ಮಾಹಿತಿಯನ್ನು(bits/second) ಕೊಂಡೊಯ್ಯುವ ಕಸುವಿಲ್ಲ.
ಆದರೂ ಈಗಿರುವ ಚಳಕಗಳಲ್ಲಿ ಸಪ್ಪಳದ ಅಲೆಯೇ ನೀರ‍್ಗುಂಗಿಗಳನ್ನು ಮಾಡಲು ಇರುವ ಬೇಡಿಕೆಗೆ ತಕ್ಕುದಾದ ಚಳಕವಾಗಿದೆ.

ದಡದಲ್ಲಿರುವ ನಮಗೂ ನೀರಿನಾಳದಲ್ಲಿರುವ ನೀರ‍್ಗುಂಗಿಗೂ ಅರುಹನ್ನು ನಡೆಸಲು ಸಪ್ಪಳದ ಅಲೆಯನ್ನು ಬಳಸುವ ತೀರ‍್ಮಾನವೇನೋ ಆಯಿತು. ಆದರೆ ಇದು ಪೂರ‍್ತಿಯಾಗಿ ಕೆಲಸ ಮಾಡಬೇಕೆಂದರೆ ಇನ್ನೂ ಕೆಲವು ಬೇಡಿಕೆಗಳಿವೆ;
– ನೀರಿನ ಒತ್ತಡವನ್ನು, ಹರಿವನ್ನು ಮೀರಿ ನಾವು ಹೇಳಿದ ಕಡೆ ನೀರ‍್ಗುಂಗಿ ಮುಂದೆ ಹೋಗಬೇಕು ಅಂದರೆ ಅದಕ್ಕೆ ಪುಟ್ಟದಾದ ತಳ್ಳುಕಗಳು (propeller) ಬೇಕು.
– ನೀರಿನೊಳಗೆ ನಮಗೆ ಬೇಕಾದ ವೀಡಿಯೋ, ಚಿತ್ರಗಳನ್ನು ತೆಗೆಯಲು ಒಳ್ಳೆಯದಾದ ಹಾಗೂ ಪುಟ್ಟದಾದ ಕ್ಯಾಮೆರಾ ಬೇಕು.
– ನೀರಿನ ಆಳಕ್ಕೆ ಹೋದಂತೆ ಬೆಳಕು ಇರುವುದಿಲ್ಲ ಅದನ್ನು ಪೂರೈಸಲು ಎಲ್ಇಡಿ ಬಲ್ಪುಗಳು ಬೇಕು.
– ನೀರಿನ ಒತ್ತಡವನ್ನು ತಡೆದುಕೊಳ್ಳುವಂತಹ, ನೀರಿನಲ್ಲಿ ಸಾಗಲು ಸುಳುವಾಗುವಂತಹ ಮೈಕಟ್ಟು ಇರಬೇಕು.
– ಕಡಿಮೆ ಎಂದರೂ 2 ಗಂಟೆಗಳ ಕಾಲ ನೀರಿನಡಿಯಲ್ಲಿ ತಿರುಗಾಡುವಂತಿರಬೇಕು. ಅದಕ್ಕೆ ಬೇಕಾದ ಮಿಂಕಟ್ಟನ್ನು (battery) ಹೊಂದಿರಬೇಕು.
– ಒಂದು ವೇಳೆ ಮಿಂಕಟ್ಟು ಕೈಕೊಟ್ಟರೆ ಇಲ್ಲವೇ ಏನಾದರು ಹಾಳಾದರೆ ಅದು ತಾನಾಗಿಯೇ ನೀರಿನ ಮೇಲ್ಬಾಗಕ್ಕೆ ಬಂದು ತೇಲುವಂತಿರಬೇಕು.
– ಬಾನ್ಗುಂಗಿಗಳಂತೆ ಪುಟ್ಟದಾಗಿರಬೇಕು.
– ಚೂಟಿಯುಲಿ(smartphone)ಯಂತಹ ಹೊಸ ಚಳಕಗಳೊಂದಿಗೆ ಹೊಂದಿಕೊಂಡು ಅದರಲ್ಲಿ ವೀಡಿಯೋ, ಚಿತ್ರಗಳನ್ನು ಸಾಗಿಸುವಂತಿರಬೇಕು.
– ಕೈಗೆಟುಕುವ ಬೆಲೆಯಲ್ಲಿರಬೇಕು.

ಇವೆಲ್ಲವನ್ನು ಹಂತ ಹಂತವಾಗಿ ಅಳವಡಿಸಿಕೊಂಡು ಹಲವಾರು ನೀರ‍್ಗುಂಗಿಗಳು ಈಗ ಮಾರುಕಟ್ಟೆಗೆ ಬರುತ್ತಿವೆ. ಮಿಲಿಟರಿ ಬಳಕೆಗೆ ಮಾತ್ರ ಬಳಸಲ್ಪಡುತ್ತಿದ್ದ ಇವು ಇಂದು ಹೆಚ್ಚು ಮಂದಿಯ ಕೈಗೆಟಕುವಂತಿವೆ. ದಡದಲ್ಲಿ ನಿಂತು ನಿಮ್ಮ ಚೂಟಿಯುಲಿಯನ್ನು (smartphone) ಬಳಸಿ ನೀರ‍್ಗುಂಗಿಗಳನ್ನು ಅಂಕೆಯಲ್ಲಿರಸಬಹುದಾಗಿದೆ. ಹಾಗೆಯೇ ಅವು ಹೋಗುವ ಜಾಗದಲ್ಲಿರುವ ನೀರಿನಡಿಯ ಜಗತ್ತನ್ನು ಚೂಟಿಯುಲಿಯ ತೆರೆಯಲ್ಲಿ ನೇರವಾಗಿ ನೋಡಿ ಸವಿಯಬಹುದಾಗಿದೆ.

ಇದಲ್ಲದೇ ಇನ್ನೂ ಹಲವು ಉಪಯೋಗಗಳಿವೆ;

– ಮೀನುಗಾರರಿಗೆ ಕಡಲಾಳದಲ್ಲಿ ಮೀನುಗಳಿರುವ ಜಾಗವನ್ನು ತಿಳಿಯಲು ಇದು ನೆರವಾಗುತ್ತದೆ.
– ಸಿನೆಮಾ ತೆಗೆಯುವವರಿಗೆ ಇದು ವರದಾನವಾಗಿದೆ. ಕಡಲು, ನದಿಗಳ ಅಡಿಯ ನೋಟಗಳನ್ನು ಸೆರೆಹಿಡಿಯಲು ಇದು ಉಪಕಾರಿ.
– ಕಡಲರಿಗರಿಗೆ ಅರಕೆಗಳನ್ನು ನಡೆಸಲು, ನೀರಿನಡಿಯ ಜಗತ್ತನ್ನು ಅರಿಯಲು ನೆರವಾಗುತ್ತಿದೆ.
– ನೀರಿನಲ್ಲಿ ತಪ್ಪಿಸಿಕೊಂಡು ಹೋದವರನ್ನು ಇಲ್ಲವೇ ತೀರಿಹೋದವರ ಕಳೆಬರವನ್ನು ಹುಡುಕಲು ಬಳಸಬಹುದು.
– ಅಣೆಕಟ್ಟುಗಳ ಹೂಳನ್ನು ಒರೆಹಚ್ಚಲು ಹಾಗೂ ಅಣೆಕಟ್ಟುಗಳಲ್ಲಿ ಬಿರುಕುಗಳೇನಾದರು ಇದ್ದರೆ ಕಂಡುಹಿಡಿಯಲು ಬಳಸಲಾಗುತ್ತಿದೆ.
– ಸ್ಕೂಬಾ ಡೈವಿಂಗ್ ನಂತಹ ಕಡಲಿನಡಿಯ ತಿರುಗಾಟಗಳಲ್ಲಿ ಹೆಚ್ಚಾಗಿ ಇದರ ಬಳಕೆಯಾಗುತ್ತಿದೆ.

ಸುಮಾರು 100-150 ಅಡಿ ಆಳಕ್ಕೆ ಇಳಿಯಬಲ್ಲ, 4k UHD ಕ್ಯಾಮೆರಾ ಉಳ್ಳ ನೀರ‍್ಗುಂಗಿಯ ಬೆಲೆ ಸುಮಾರು 1 ಲಕ್ಶದವರೆಗೂ ಇದೆ. ಹಲವಾರು ಹೊಸ ಕಂಪನಿಗಳು ಇನ್ನೂ ಕಡಿಮೆ ಬೆಲೆಯಲ್ಲಿ ಸಿಗುವಂತೆ ಮಾಡಲು ಹೊಸ ಚಳಕಗಳನ್ನು ಪ್ರಯತ್ನಿಸುತ್ತಿದ್ದಾರೆ. ನೀರ‍್ಗುಂಗಿಗಳಲ್ಲಿ ಬಳಕೆಯಾಗುವ ಸಪ್ಪಳದ ಅಲೆಗಳು ಡಾಲ್ಪಿನ್ ಹಾಗೂ ತಿಮಿಂಗಿಲಗಳಿಗೆ ತೊಂದರೆ ಉಂಟುಮಾಡಬಹುದು ಎಂಬ ದೂರು ಇದೆ. ಹಾಗೆಯೇ, ಇವುಗಳ ಬಳಕೆ ಹೆಚ್ಚಾದರೆ ನೀರಿನಲ್ಲಿ ಬದುಕುವ ಉಸಿರಿಗಳ ಬದುಕಿಗೆ ತೊಂದರೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲವನ್ನು ಮೀರಿ ನೀರ‍್ಗುಂಗಿಗಳು ಮಾರುಕಟ್ಟೆಯಲ್ಲಿ ಹೇಗೆ ಬೆಳೆಯಲಿವೆ ಎಂದು ಕಾದುನೋಡಬೇಕಿದೆ.

ಮಾಹಿತಿ ಸೆಲೆ :  electronicspecifier.comkickstarter.comen.wikipedia.orgwiki/Sonarboundless.compowervision.me )
(ಚಿತ್ರ ಸೆಲೆ: vimeo.combeareyes.com.cn, newatlas.com, nordicstartupbits.com, mashable.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: