ವಿಸ್ಡೆನ್ – 150 ನಾಟ್ ಅವ್ಟ್!
The Little Wonder ಎಂದು ಹೆಗ್ಗಳಿಕೆ ಪಡೆದಿದ್ದ ಜಾನ್ ವಿಸ್ಡೆನ್, ಮೂರು ಕೌಂಟಿ ತಂಡಗಳನ್ನು ಪ್ರತಿನಿದಿಸಿ, 187 ಮೊದಲ ದರ್‍ಜೆಯ ಪಂದ್ಯಗಳಾಡಿದ ಓರ್‍ವ ಇಂಗ್ಲಿಶ್ ಕ್ರಿಕೆಟಿಗ. ಮೊನ್ನೆ ಸೆಪ್ಟೆಂಬರ್ 5 ಆತನ ಹುಟ್ಟಿದ ದಿನ.
ವಿಸ್ಡೆನ್ ಹುಟ್ಟಿದ್ದು ಇಂಗ್ಲೆಂಡ್ ದೇಶದ ಬ್ರಯಿಟನ್ ನಗರದಲ್ಲಿ ಅನ್ನೋದು ಬಿಟ್ಟರೆ ಇವರ ಮೊದಲ ದಿನಗಳು ಬಗ್ಗೆ ವಿಶಯಗಳು ಎಲ್ಲಿಯೂ ಹೆಚ್ಚಾಗಿ ಇಲ್ಲ. 19ನೆ ವಯಸ್ಸಿನಲ್ಲಿ ಚೊಚ್ಚಲ ಮೊದಲ ದರ್‍ಜೆಯ ಕ್ರಿಕೆಟ್ ಪಂದ್ಯ ವಾಡಿದ್ದು ಸಸೆಕ್ಸ್ ತಂಡಕ್ಕೆ. 1864 ರಲ್ಲಿ ಎಮ್.ಸಿ.ಸಿ. ವಿರುದ್ದ ನಡೆದ ಈ ಪಂದ್ಯದಲ್ಲಿ ವಿಸ್ಡೆನ್ಗೆ ಸಿಕ್ಕಿದ್ದು 6 ವಿಕೆಟ್ಟುಗಳು. ವಿಸ್ಡೆನ್ ತನ್ನ ಕ್ರಿಕೆಟ್ ಜೀವನ ಶುರು ಮಾಡಿದ್ದು ಎಡಗಯ್ಯಿ ವೇಗದ ಬವ್ಲರ್ ಆಗಿ. ಆದರೆ ಕೆಲವೇ ವರ್‍ಶಗಳಲ್ಲಿ ತನ್ನ ವೇಗ ಕಳೆದುಕೊಂಡು ‘ಆಪ್-ಕಟರ್’ಗಳನ್ನು ಹಾಕಲು ಶುರು ಮಾಡಿದ. ಈ ಪರಿ ‘ಆಪ್-ಕಟರ್’ಗಳನ್ನು ಹಾಕಲು ಶುರು ಮಾಡಿದ ಮೇಲೆ 1850 ರಲ್ಲಿ ತೆಂಕಣಕ್ಕಾಗಿ ಬಡಗಣದ ಎದುರು ಆಡಿದ ಪಂದ್ಯದಲ್ಲಿ 10 ವಿಕೆಟ್ ಗಳನ್ನು ಒಂದೇ ಪಂದ್ಯದಲ್ಲಿ ಅದೂ ಎಲ್ಲರನ್ನೂ ಬವ್‍ಲ್ಡ್ ಮಾಡಿ ದಾಕಲೆ ಮಾಡಿದರು. ಬ್ಯಾಟಿಂಗಿನಲ್ಲೂ ವಿಸ್ಡೆನ್ ಬಹಳ ಪ್ರಬಾವಶಾಲಿ ಆಗಿದ್ದರು. 1850ರಲ್ಲಿ ಕೆಂಟ್ ವಿರುದ್ದದ ಪಂದ್ಯದಲ್ಲಿ 100 ಹಾಗು ಯಾರ್‍ಕ್ ಶಯರ್ ವಿರುದ್ದ 148 ಬಾರಿಸಿದರು. ತನ್ನ ಕ್ರಿಕೆಟ್ ಜೀವನ ಮುಗಿದಾಗ ವಿಸ್ಡೆನ್ ಪಂದ್ಯಕ್ಕೆ 10 ವಿಕೆಟ್ ರೀತಿಯಲ್ಲಿ 1,109 ವಿಕೆಟ್ಗಳನ್ನು ಹಾಗು ಪಂದ್ಯಕ್ಕೆ 14.12 ರಂತೆ 4,140 ರನ್ ಗಳನ್ನು ಬಾರಿಸಿದ್ದರು.
ಆಟ ಆಡಬೇಕಾದರೆ ವಿಸ್ಡೆನ್ ಕ್ರಿಕೆಟ್ ಸಾಮಾಗ್ರಿಗಳ ವ್ಯಾಪಾರ ನೆಡಸುತಿದ್ದರು. 1850ರಲ್ಲಿ, ಲೆಮಿಂಗ್ಟನ್ ಸ್ಪ ಎಂಬ ನಗರದಲ್ಲಿ ಕ್ರಿಕೆಟ್ ಸಾಮಗ್ರಿಗಳ ವ್ಯಾಪಾರವನ್ನು, 1855ರಲ್ಲಿ, ಲಂಡನ್ ನಗರದಲ್ಲಿ, ‘cricket and cigar’ ಅಂಗಡಿಯನ್ನು ತೆಗೆದರು. ಗಂಟಿನ ಉರಿಯೂತದಿಂದಾಗಿ (rheumatism) 37ನೆ ವಯಸ್ಸಿನಲ್ಲಿ ವಿಸ್ಡೆನ್ ತನ್ನ ಆಟದ ಜೀವನಕ್ಕೆ ವಿದಾಯ ಹೇಳಿದರೂ ಕ್ರಿಕೆಟ್’ಗೆ ಹೇಳಲಿಲ್ಲ. ಕ್ರಿಕೆಟ್ ಸಾಮಗ್ರಿ ಮಾರುವುದನ್ನು ಬಿಟ್ಟು ತರತರದ ಆಟದ ಸಾಮಗ್ರಿಯನ್ನು ಮಾಡುವ ಕಡೆಗೆ ತಿರುಗಿದರು. ಇದೇ ವರ್‍ಶ, ಅಂದರೆ 1863-1864 ರಲ್ಲಿ, ಕ್ರಿಕೆಟರ್‍ಸ್ ಅಲ್ಮನ್ಯಾಕ್ (Cricketers’ Almanack) ಕೂಡ ಶುರು ಮಾಡಿದರು. ಆಟದಲ್ಲಿ ಹಾಗು ವ್ಯಾಪಾರದಲ್ಲಿ ಹೆಸರು ಮಾಡಿದ್ದರೂ ವಿಸ್ಡೆನ್ ಹೆಸರು ಕ್ರಿಕೆಟ್ ಪ್ರಪಂಚದಲ್ಲಿ ಮನೆ ಮಾತಾಗಿದ್ದು ಈ Cricketers’ Almanack ಇಂದಾಗಿ.
ಪ್ರತಿ ವರ್‍ಶ ಏಪ್ರಿಲ್ ತಿಂಗಳಲ್ಲಿ ಹೊರಬರುವ ಈ ವಾರ್‍ಶಿಕವು 1864 ರಿಂದ ತಪ್ಪದೆ ಪ್ರಕಟವಾಗುತ್ತಿರುವ ಜಗತ್ತಿನ ಒಂದೇ-ಒಂದು ಆಟಗಳ ಬಗೆಗಿನ ವಾರ‍್ಶಿಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಳದಿ ಹೊರಮಯ್ಯಿನ 1500+ ಪುಟಗಳುಳ್ಳ ಈ ವಾರ್‍ಶಿಕವು, ಈ ವರ್‍ಶ, 150ರ ಸಂಬ್ರಮದಲ್ಲಿದೆ. ಇದರ ವಿಶೇಶತೆ ಏನಂದರೆ, ಕ್ರಿಕೆಟ್ ಪ್ರಪಂಚದಲ್ಲಿ ನಡೆಯುವ ಎಲ್ಲ ಮೊದಲ ದರ್‍ಜೆಯ ಪಂದ್ಯಗಳ ವಿವರಗಳು ಹಾಗು ಒಂದು ದಿನ ಮತ್ತು ಟೆಸ್ಟ್ ಪಂದ್ಯಗಳ ಸ್ಕೋರ್ ವಿವರಗಳು ಮತ್ತು ವರದಿಗಳು ಇದರಲ್ಲಿ ಇರುತ್ತದೆ. ಅಶ್ಟೇ ಅಲ್ಲದೆ ಆಯಾ ವರ್‍ಶದ ಉತ್ತಮ ಆಗುಹಗಳು, ಅತ್ಯುತ್ತಮ ಬರಹಗಳು, ಕ್ರಿಕೆಟ್ ನಿಯಮಗಳು, ಮುಂಬರುವ ಪಂದ್ಯಗಳ ವಿಚಾರ, ಸಾವಿನಸುದ್ದಿಗಳು ಕೂಡ ಇರುತ್ತದೆ. ಇದು ಕ್ರಿಕೆಟ್ ಪ್ರೇಮಿಗಳ ಬಳಿ ಇರಲೇಬೇಕಾದ ಹೊತ್ತಗೆ, Must-Have, Cricketers Bible ಎಂದೆಲ್ಲ ಬಹಳ ಕಡೆ ಹೇಳಲಾಗಿದೆ. ಇದಶ್ಟೇ ಅಲ್ಲದೆ 1889 ರಿಂದ ಪ್ರತಿ ವರ್‍ಶ, 5 ಜನ ಕ್ರಿಕೆಟಿಗರಿಗೆ Wisden Cricketers of the Year ಪ್ರಶಸ್ತಿ ಕೂಡಲಾಗುತ್ತದೆ. (2004ರಲ್ಲಿ Wisden Leading Cricketer in the World ಎಂದು ಇದನ್ನು ಬದಲಾಯಿಸಲಾಗಿದೆ).
ಇಂತಹ ವಾರ್‍ಶಿಕ ಪ್ರಾರಂಬಿಸಿದ ಜಾನ್ ವಿಸ್ಡೆನ್ ಇವತ್ತಿಗೆ ಬದುಕಿಲ್ಲದಿದ್ದರೂ ಇಂತಹ ಒಂದು ಅದ್ಬುತ ಕೊಡುಗೆ ನೀಡಿದ ವಿಸ್ಡೆನ್ ಈಸ್ 150 ನಾಟ್ ಅವ್ಟ್ ಅಂತ ಹೇಳಬಹುದೆ?
ಮಾಹಿತಿ ಸೆಲೆ: ವಿಕಿಪೀಡಿಯಾ
(ಚಿತ್ರ: espncricinfo.com)
ಇತ್ತೀಚಿನ ಅನಿಸಿಕೆಗಳು