ರಣಜಿ ಟ್ರೋಪಿ 2021/22 – ಒಂದು ಮುನ್ನೋಟ

– ರಾಮಚಂದ್ರ ಮಹಾರುದ್ರಪ್ಪ.

ಬಾರತದ ಪ್ರತಿಶ್ಟಿತ ದೇಸೀ ಟೂರ‍್ನಿಯಾಗಿರುವ ರಣಜಿ ಟೂರ‍್ನಿಗೆ ಸುಮಾರು ತೊಂಬತ್ತು ವರುಶಗಳ ಇತಿಹಾಸವಿದೆ. 1934/35 ರಲ್ಲಿ ಮೊದಲ್ಗೊಂಡು ಈ ಟೂರ‍್ನಿ ತೊಡಕಿಲ್ಲದೆ ಎರಡನೇ ವಿಶ್ವಯುದ್ದದ ಹೊತ್ತಿನಲ್ಲೂ ನಡೆದು ದೊಡ್ಡ ಹೆಗ್ಗಳಿಕೆ ಗಳಿಸಿತ್ತು. ಆದರೆ 2020/21 ರ ಸಾಲಿನಲ್ಲಿ ಕೊರೋನಾ ವೈರಸ್ ನ ಕಾರಣದಿಂದಾಗಿ ಮೊದಲ ಬಾರಿಗೆ ರಣಜಿ ಟೂರ‍್ನಿ ನಡೆಯಲಿಲ್ಲ. ಅದರ ಮುಂದಿನ 2021/2022 ರ ಟೂರ‍್ನಿ ಜನವರಿ ಮೊದಲ ವಾರದಲ್ಲಿ ಮೊದಲ್ಗೊಳ್ಳಬೇಕಿತ್ತು. ಆದರೆ ಕೊರೋನಾ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗಿದ್ದರಿಂದ ಟೂರ‍್ನಿಯನ್ನು ಮುಂದೂಡಲಾಗಿತ್ತು. ಹಾಗಾಗಿ ಐಪಿಎಲ್ ಗೂ ಮುನ್ನ ಸಿಗುವ ಎರಡು ತಿಂಗಳಲ್ಲಿ ನಡೆಯಬೇಕಿದ್ದ ಟೂರ‍್ನಿ ಈ ಸಾಲಿನಲ್ಲೂ ಸಾಗದು ಎಂಬ ಊಹಾಪೋಹಗಳು ಹಬ್ಬತೊಡಗಿದವು. ಈ ಪ್ರತಿಶ್ಟಿತ ಟೂರ‍್ನಿ ಬಗೆಗೆ ಬಿಸಿಸಿಐನ ನಿರ‍್ಲಕ್ಶೆ ಕೂಡ ತೀವ್ರ ಟೀಕೆಗೆ ಗುರಿಯಾಯಿತು. ಯಾವ ದೇಶದಲ್ಲೂ ಕೊರೋನಾ ನೆಪವೊಡ್ಡಿ ಸತತ ಎರಡು ವರುಶಗಳ ಕಾಲ ಪ್ರಮುಕ ದೇಸೀ ಟೂರ‍್ನಿಯನ್ನು ಕೈಬಿಟ್ಟಿಲ್ಲ, ಆದರೆ ತನ್ನ ತೆಕ್ಕೆಯಲ್ಲಿ ಸಾವಿರಾರು ಕೋಟಿ ಹಣ ಹೊಂದಿರುವ ಅತ್ಯಂತ ಶ್ರೀಮಂತ ಬಾರತದ ಕ್ರಿಕೆಟ್ ಮಂಡಳಿ ಮಾತ್ರ ದೇಸೀ ಟೂರ‍್ನಿಯನ್ನು ಇಶ್ಟು ಹಗುರವಾಗಿ ಪರಿಗಣಿಸುತ್ತಿದೆ ಎಂದು ಕೆಲವು ಕ್ರಿಕೆಟ್ ವಿಮರ‍್ಶಕರು ಕಾರವಾಗಿ ನುಡಿದರು. ಹಾಗೂ ಕೇವಲ ರಣಜಿ ಟೂರ‍್ನಿ ಗಳಿಕೆಯಿಂದಲೇ ಬದುಕು ನಡೆಸುತ್ತಿರುವ ನೂರಾರು ಕ್ರಿಕೆಟಿಗರು ಅನುಬವಿಸುತ್ತಿರುವ ತೊಡಕುಗಳ ಬಗ್ಗೆ ಹಲವಾರು ಪತ್ರಕರ‍್ತರು ವರದಿ ಮಾಡಿ, ಟೂರ‍್ನಿ ನಡೆಸುವ ಬಗ್ಗೆ ಆಲೋಚಿಸುವಂತೆ ಬಿಸಿಸಿಐ ಮೇಲೆ ಒತ್ತಡ ಹೇರಿದರು. ಇದರ ಬೆನ್ನಲ್ಲೇ ಕೊರೋನಾ ಪ್ರಕರಣಗಳು ಕೂಡ ಇಳಿಮುಕವಾದ್ದರಿಂದ ಕಡೆಗೂ ಬಿಸಿಸಿಐ ಮನಸ್ಸು ಮಾಡಿ ಇದೇ ಪೆಬ್ರವರಿ 17 ರಿಂದ ಹೊಸ ಸ್ವರೂಪದಲ್ಲಿ ರಣಜಿ ಟೂರ‍್ನಿ ನಡೆಸಲು ತೀರ‍್ಮಾನ ಕೈಗೊಂಡಿತು. ಈ ದಿಟ್ಟ ಹೆಜ್ಜೆಯಿಂದ ಕಡೆಗೆ ಬಿಸಿಸಿಐ ತೀವ್ರ ಮುಜುಗುರಕ್ಕೊಳಗಾಗುವುದನ್ನು ತಪ್ಪಿಸಿಕೊಂಡಿತು ಎಂದರೆ ತಪ್ಪಾಗಲಾರದು.

2021/22 ರ ರಣಜಿ ಟೂರ‍್ನಿ ಸ್ವರೂಪ

ಪ್ರಪಂಚದಲ್ಲೇ ಅತ್ಯದಿಕ ಒಟ್ಟು 38 ದೇಸೀ ಕ್ರಿಕೆಟ್ ತಂಡಗಳನ್ನು ಹೊಂದಿರುವ ಬಾರತದಲ್ಲಿ ಮೂರೂ ಬಗೆಯ ದೇಸೀ ಟೂರ‍್ನಿಗಳನ್ನು ಆಯೋಜಿಸುವುದು ಪ್ರಯಾಸದ ಕೆಲಸವೇ ಸರಿ. ಹಾಗೂ ಈ ಬಾರಿ ಇರುವ ಕಡಿಮೆ ಹೊತ್ತಿನಲ್ಲಿ ರಣಜಿ ಟೂರ‍್ನಿ ನಡೆಸುವ ಉದ್ದೇಶದಿಂದ ಪಂದ್ಯಾವಳಿಯ ಸ್ವರೂಪದಲ್ಲಿ ಹಲವಾರು ಮಾರ‍್ಪಾಡುಗಳನ್ನು ಮಾಡಲಾಗಿದೆ. ಹಾಗಾಗಿ ಒಟ್ಟು 32 ಎಲೈಟ್ ತಂಡಗಳನ್ನು 4 ತಂಡಗಳ 8 ಗುಂಪುಗಳಾಗಿ ಬೇರ‍್ಪಡಿಸಿ, ಇನ್ನುಳಿದ 6 ಪ್ಲೇಟ್ ತಂಡಗಳು ಒಂದು ಗುಂಪಿನಲ್ಲಿ ಸೆಣಸುವಂತೆ ಟೂರ‍್ನಿಯ ಸ್ವರೂಪವನ್ನು ರೂಪಿಸಲಾಗಿದೆ. ಪ್ರತೀ ಎಲೈಟ್ ತಂಡಕ್ಕೆ ಕೇವಲ ಮೂರು ಲೀಗ್ ಪಂದ್ಯಗಳು ಮಾತ್ರ ಸಿಗುವುದರಿಂದ ಕೊಂಚ ಎಡವಿದರೂ ಕ್ವಾರ‍್ಟರ್ ಪೈನಲ್ ತಲುಪುವ ಅವಕಾಶವನ್ನು ಬಲಿಶ್ಟ ತಂಡಗಳೂ ಕಳೆದುಕೊಳ್ಳುವ ಸಾದ್ಯತೆ ಇದೆ. ಏಕೆಂದರೆ ಪ್ರತೀ ಎಲೈಟ್ ಗುಂಪಿನಿಂದ ಅತಿ ಹೆಚ್ಚು ಗೆಲುವು ಸಾದಿಸಿ, ಹೆಚ್ಚು ಅಂಕ ಪಡೆದ ಒಂದು ತಂಡ ಮಾತ್ರ ಕ್ವಾರ‍್ಟರ್ ಪೈನಲ್ ತಲುಪಲಿದೆ. ಮಾರ‍್ಚ್ ಕಡೇ ವಾರದಲ್ಲಿ ಐಪಿಎಲ್ ಮೊದಲ್ಗೊಳ್ಳುವ ಮೊದಲು ರಣಜಿ ಟೂರ‍್ನಿಯ ಲೀಗ್ ಪಂದ್ಯಗಳು ನಡೆಯಲಿದ್ದು ಐಪಿಎಲ್ ಬಳಿಕ ಜೂನ್ ತಿಂಗಳಿನಲ್ಲಿ ನಾಕೌಟ್ ಪಂದ್ಯಗಳಾದ ಕ್ವಾರ‍್ಟರ್ ಪೈನಲ್, ಸೆಮಿ ಪೈನಲ್ ಹಾಗೂ ಪೈನಲ್ ಪಂದ್ಯಗಳು ಜರುಗಲಿವೆ. ಎರಡು ಪ್ರತ್ಯೇಕ ಬಾಗಗಳಲ್ಲಿ ಈ ಬಾರಿಯ ಟೂರ‍್ನಿ ನಡೆಯುವುದು ಆಟಗಾರರಿಗೆ ತಮ್ಮ ನಿರಂತರತೆಯನ್ನು ಕಾಪಾಡಿಕೊಳ್ಳುವುದರ ಬಗೆಗೆ ಹೊಸ ಸವಾಲನ್ನು ಒಡ್ಡಿದೆ ಎಂದೇ ಹೇಳಬೇಕು. ಸಾಕಶ್ಟು ದೇಸೀ ಆಟಗಾರರು ರಣಜಿ ಲೀಗ್ ಪಂದ್ಯಗಳ ಬೆನ್ನಲ್ಲೇ ಆರರಿಂದ ಏಳು ವಾರಗಳ ಕಾಲ ಐಪಿಎಲ್ ನಲ್ಲಿ ಟಿ-20 ಮಾದರಿಯ ಹೊಡಿ-ಬಡಿ ಕ್ರಿಕೆಟ್ ಆಡಿ ಆನಂತರ ಮತ್ತೊಮ್ಮೆ ಸಾಂಪ್ರದಾಯಿಕ ಶೈಲಿಯ ರಣಜಿ ಪಂದ್ಯಗಳನ್ನಾಡಬೇಕಿದೆ. ಅಜಗಜಾಂತರ ವ್ಯತ್ಯಾಸ ಇರುವ ಎರಡು ಬೇರೆ-ಬೇರೆ ಮಾದರಿಯ ಕ್ರಿಕೆಟ್ ಗೆ ಈ ಆಟಗಾರರು ಹೇಗೆ ಅಣಿಯಾಗಿ ಕಡಿಮೆ ಹೊತ್ತಿನಲ್ಲಿ ತಮ್ಮ ಆಟವನ್ನು ಬೇಡಿಕೆಗೆ ತಕ್ಕಂತೆ ಮಾರ‍್ಪಡಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಬಿಮಾನಿಗಳಲ್ಲಿ ಮನೆಮಾಡಿದೆ. ಈ ಬಾರಿ ಕಡಿಮೆ ಪಂದ್ಯಗಳಿದ್ದರೂ ಎರಡು ವರುಶಗಳ ಬಳಿಕ ಯಾವುದೋ ಬಗೆಯಲ್ಲಿ ರಣಜಿ ಟೂರ‍್ನಿ ಮರಳಿರುವುದು ಮಾತ್ರ ಆಟಗಾರರಿಗೆ ಮತ್ತು ಅಬಿಮಾನಿಗಳಿಗೆ ನಲಿವಿನ ವಿಶಯವೇ.

ಈ ಬಾರಿಯ ಕರ‍್ನಾಟಕ ತಂಡ

 

ಕಳೆದ 15 ವರುಶಗಳ ರಣಜಿ ಪಂದ್ಯಾವಳಿಗಳಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದಿರುವ ಹೆಗ್ಗಳಿಕೆ ಕರ‍್ನಾಟಕ ತಂಡಕ್ಕಿದ್ದರೂ ಈ ಅವದಿಯಲ್ಲಿ ಕೇವಲ ಎರಡು ಟೂರ‍್ನಿಗಳನ್ನು ಮಾತ್ರ ಗೆದ್ದಿರುವುದು ಬೇಸರದ ವಿಶಯವೇ. ರಾಜ್ಯ ತಂಡ ತನ್ನ ಅಳವಿಗೆ ತಕ್ಕಂತೆ ಟೂರ‍್ನಿ ಗೆದ್ದಿಲ್ಲ ಎಂಬುದು ಎದ್ದು ಕಾಣುತ್ತದೆ. ಹೀಗಿದ್ದರೂ ಪ್ರತೀ ರಣಜಿ ಟೂರ‍್ನಿ ಮೊದಲ್ಗೊಳ್ಳುವ ಮುನ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿಯೇ ಕರ‍್ನಾಟಕ ಕಣಕ್ಕಿಳಿಯುತ್ತದೆ. ಮನೀಶ್ ಪಾಂಡೆ ಮುಂದಾಳ್ತನದ ರಾಜ್ಯ ತಂಡ ಈ ಬಾರಿ ಜಮ್ಮು ಮತ್ತು ಕಾಶ್ಮೀರ, ಪುದುಚ್ಚೇರಿ ಹಾಗೂ ರೈಲ್ವೇಸ್ ತಂಡಗಳನ್ನೊಳಗೊಂಡ ‘ಎಲೈಟ್ ಸಿ’ ಗುಂಪಿನಲ್ಲಿ ಲೀಗ್ ಹಂತದಲ್ಲಿ ಸೆಣಸಲಿದೆ. ಮೇಲ್ನೋಟಕ್ಕೆ ಮೂರೂ ಎದುರಾಳಿ ತಂಡಗಳು ಬಲಿಶ್ಟ ಕರ‍್ನಾಟಕದ ಎದುರು ಸಾದಾರಣವೆಂಬಂತೆ ಕಂಡು ಬಂದರೂ, ಕ್ರಿಕೆಟ್ ಆಟದಲ್ಲಿ ಯಾರನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಕೊರೋನಾ ಕಾರಣದಿಂದ ‘bio-bubble’ ವ್ಯವಸ್ತೆಯಲ್ಲಿ ಪಂದ್ಯಾವಳಿ ನಡೆಯುವುದರಿಂದ ಪ್ರತೀ ತಂಡಕ್ಕೂ ಹೆಚ್ಚುವರಿ ಆಟಗಾರರನ್ನು ಆರಿಸುವ ಅವಕಾಶ ಬಿಸಿಸಿಐ ನೀಡಿದೆ. ಹಾಗಾಗಿ ರಾಜ್ಯ ತಂಡ ಒಟ್ಟು 20 ಆಟಗಾರರನ್ನು ಆಯ್ಕೆ ಮಾಡಿದೆ. ನಾಯಕ ಮನೀಶ್ ಗೆ ಉಪನಾಯಕನಾಗಿ ಅನುಬವಿ ಬ್ಯಾಟ್ಸ್ಮನ್ ಸಮರ‍್ತ್ ಆಯ್ಕೆಯಾಗಿದ್ದಾರೆ. ಇವರಿಬ್ಬರೊಟ್ಟಿಗೆ ಅಂತರಾಶ್ಟ್ರೀಯ ಕ್ಯಾತಿಯ ಮಾಯಾಂಕ್ ಅಗರ‍್ವಾಲ್, ಕರುಣ್ ನಾಯರ್, ದೇವ್ದತ್ ಪಡಿಕ್ಕಲ್, ಸಿದ್ದಾರ‍್ತ್ ಹಾಗೂ ನಿಶ್ಚಲ್ ತಂಡಕ್ಕೆ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಇತ್ತೀಚಿಗೆ ಕಿರಿಯರ ವಿಶ್ವಕಪ್ ಗೆದ್ದ ಬಾರತ ತಂಡದಲ್ಲಿದ್ದ ಒಬ್ಬೇ ಒಬ್ಬ ಕನ್ನಡಿಗ ಆಲ್ ರೌಂಡರ್ ಅನೀಶ್ವರ್ ಗೌತಮ್ ಮೊದಲ ಬಾರಿ ರಾಜ್ಯ ತಂಡದಲ್ಲಿ ಎಡೆ ಪಡೆದಿದ್ದಾರೆ. ಇನ್ನು ಅನುಬವಿಗಳಾದ ಶ್ರೇಯಸ್ ಗೋಪಾಲ್, ಕ್ರಿಶ್ಣಪ್ಪ ಗೌತಮ್, ಸುಚಿತ್ ಹಾಗೂ ಕೆ.ಸಿ ಕಾರಿಯಪ್ಪ ಜೊತೆಗೆ ಒಂದು ಪಂದ್ಯ ಆಡಿರುವ ಯುವ ಸ್ಪಿನ್ ಆಲ್ ರೌಂಡರ್ ಶುಬಾಂಗ್ ಹೆಗ್ಡೆ ರಾಜ್ಯ ತಂಡದ ಸ್ಪಿನ್ ಅಸ್ತ್ರಗಳಾಗಿ ಆಯ್ಕೆಯಾಗಿದ್ದಾರೆ. ಈಗ ಅಂತರಾಶ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಕನ್ನಡಿಗ ಪ್ರಸಿದ್ ಕ್ರಿಶ್ಣ, ಅನುಬವಿ ರೋನಿತ್ ಮೋರೆ, ಯುವಕರಾದ ವೈಶಾಕ್, ವಿದ್ಯಾದರ್ ಪಾಟೀಲ್ ಮತ್ತು ವೆಂಕಟೇಶ್ ಎಮ್. ವೇಗಿಗಳ ಎಡೆ ತುಂಬಲಿದ್ದಾರೆ. ವೇಗದ ಬೌಲಿಂಗ್ ವಿಬಾಗದಲ್ಲಿ ಕೊಂಚ ಅನುಬವದ ಕೊರತೆ ಕಂಡುಬಂದರೂ ಪ್ರತಿಬೆಯ ಕೊರತೆ ಕಂಡಿತ ಇಲ್ಲ. ಆದ್ದರಿಂದ ರೋನಿತ್ ಮತ್ತು ಪ್ರಸಿದ್ ತಮ್ಮ ಅನುಬವದಿಂದ ಯುವ ವೇಗಿಗಳಿಗೆ ದಾರಿತೋರುಗರಾಗಬೇಕಿದೆ. ಶರತ್ ಶ್ರೀನಿವಾಸ್ ಮತ್ತು ಬಿ.ಆರ್ ಶರತ್ ವಿಕೆಟ್ ಕೀಪರ್ ಹೊಣೆಯನ್ನು ಹೊರಲಿದ್ದಾರೆ. ಇಬ್ಬರಿಗೂ ಮೂರ‍್ನಾಲ್ಕು ದೇಸೀ ರುತುಗಳಲ್ಲಿ ಆಡಿರುವ ಅನುಬವ ಇದ್ದು, ಇಬ್ಬರೂ ಒಳ್ಳೆ ಬ್ಯಾಟ್ಸ್ಮನ್ ಗಳಾಗಿರುವುದು ತಂಡಕ್ಕೆ ಬೇಕಾದ ಸಮತೋಲನ ನೀಡುವಲ್ಲಿ ಸಹಕಾರಿಯಾಗಲಿದೆ.

ಕರ‍್ನಾಟಕದ ಮುಂದಿರುವ ಹಾದಿ

2014/15 ರಲ್ಲಿ ತನ್ನ ಎಂಟನೇ ರಣಜಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಕರ‍್ನಾಟಕ ಆ ಬಳಿಕ ಒಳ್ಳೆ ತಂಡ ಹೊಂದಿದ್ದರೂ ಒಂದೂ ಪ್ರಶಸ್ತಿ ಗೆಲ್ಲದೆ ಪ್ರತೀ ವರುಶ ಬೇಸರ ಮೂಡಿಸಿದೆ. ಕಡೆಯ ಮೂರು ಟೂರ‍್ನಿಗಳಲ್ಲಿ ಸೆಮಿಪೈನಲ್ ಹಂತದಲ್ಲಿ ಸತತವಾಗಿ ಮುಗ್ಗುರಿಸಿರುವುದು ಒತ್ತಡವನ್ನು ನಿಬಾಯಿಸುವಲ್ಲಿ ತಂಡ ಸೋತಿರುವುದಕ್ಕೆ ಸಾಕ್ಶಿಯಾಗಿದೆ. ವಿನಯ್, ಮಿತುನ್, ಅರವಿಂದ್, ಬಿನ್ನಿ, ಉತ್ತಪ್ಪ, ಸಿ.ಎಮ್ ಗೌತಮ್ ರಂತಹ ಆಟಗಾರರ ನೆರವು ಈಗ ತಂಡಕ್ಕಿಲ್ಲ. ಆದರೂ ಅವರ ಎಡೆ ತುಂಬಬಲ್ಲ ಕೆಲವು ಯುವಕರು ಈಗ ತಂಡದಲ್ಲಿದ್ದಾರೆ. ಹೆಚ್ಚು ಯುವಕರೇ ತುಂಬಿದ್ದ ಮನೀಶ್ ರ ತಂಡ ಈ ವರ‍್ಶದ ಮುಶ್ತಾಕ್ ಅಲಿ ಟಿ-20 ಪಂದ್ಯಾವಳಿಯ ಪೈನಲ್ ಹಾಗೂ ವಿಜಯ್ ಹಜಾರೆ ಟೂರ‍್ನಿಯ ಕ್ವಾರ‍್ಟರ್ ಪೈನಲ್ ತಲುಪಿದ್ದು ಈ ಯುವ ಆಟಗಾರರ ಅಳವಿಗೆ ಎತ್ತುಗೆ ಎಂದೇ ಹೇಳಬೇಕು. ಹಾಗಾಗಿ ರಣಜಿ ಟೂರ‍್ನಿಯಲ್ಲೂ ಈ ತಂಡದ ಮೇಲೆ ಬರವಸೆ ಇಟ್ಟುಕೊಳ್ಳಬಹುದು. ಮನೀಶ್ ನಾಯಕನಾಗಿ ಈಗ ಸಾಕಶ್ಟು ಪಳಗಿದ್ದಾರೆ. ಅವರಿಗೆ ಬೆಂಬಲವಾಗಿ ನಿಂತು ಎಲ್ಲಾ ಅನುಬವಿ ಆಟಗಾರರು ತಂಡದ ನೊಗ ಹೊತ್ತು ಒತ್ತಡದಲ್ಲೂ ತಮ್ಮ ಎಂದಿನ ಆಟ ಆಡಿದರೆ, ಕರ‍್ನಾಟಕ ತನ್ನ ಒಂಬತ್ತನೇ ರಣಜಿ ಟೂರ‍್ನಿ ಗೆಲ್ಲಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ಕಳೆದ ದಶಕದಲ್ಲಿ ರಾಜ್ಯ ತಂಡ ಗೆಲ್ಲಬೇಕಿದ್ದ ಕೆಲವು ಪಂದ್ಯಗಳನ್ನು ಕಳಪೆ ಅಂಪೈರಿಂಗ್ ನಿಂದಾಗಿ ಸೋತರೆ, ಇನ್ನೂ ಕೆಲವು ಪಂದ್ಯಗಳಲ್ಲಿ ಒತ್ತಡದಲ್ಲಿ ಕುಗ್ಗಿ ಕೂದಲೆಳೆಯಲ್ಲಿ ಸೋತಿದೆ. ಇದು ಇಂದಿಗೂ ಕರ‍್ನಾಟಕದ ಪ್ರತೀ ಅಬಿಮಾನಿಗೂ ನುಂಗಲಾರದ ತುತ್ತಾಗಿ ಕಾಡುತ್ತಿದೆ. ದಶಕದ ಈ ಮಾಸದ ನೋವುಗಳನ್ನು ಮರೆಯುವಂತ ಆಟ ನಮ್ಮ ಆಟಗಾರರು ಆಡಿ, ಒಂಬತ್ತನೇ ರಣಜಿ ಟೂರ‍್ನಿಯನ್ನು ಕರ‍್ನಾಟಕಕ್ಕೆ ಗೆದ್ದು ತರಲಿ ಎಂಬುದೇ ಕನ್ನಡಿಗರೆಲ್ಲರ ವರುಶಗಳ ಹೆಬ್ಬಯಕೆ. ಪ್ರಶಸ್ತಿಯನ್ನು ಎದುರು ನೋಡುತ್ತಾ ಈ ಬಾರಿಯ ರಣಜಿ ಟೂರ‍್ನಿಗೆ ಮನೀಶ್ ರ ಕನ್ನಡಿಗರ ಪಡೆಗೆ ಶುಬ ಕೋರೋಣ.

(ಚಿತ್ರ ಸೆಲೆ: sportzwiki.com , news18.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: