ದೇಶವನ್ನು ಒಡೆಯುತ್ತಿರುವ ಹಿಂದೀ ಹೇರಿಕೆ

ಸಿ. ಮರಿಜೋಸೆಪ್

imposition-of-hindi

ದೇಶದ ತುಂಬೆಲ್ಲ “ಹಿಂದೀ ರಾಶ್ಟ್ರಬಾಶೆ” ಎಂಬ ವ್ಯವಸ್ತಿತ ಸುಳ್ಳನ್ನು ಹರಡಲಾಗುತ್ತಿದೆ ಎಂಬುದು ಆತಂಕಕಾರೀ ವಿಚಾರ. ಆದರೆ ಹಾಗೆ ಹರಡುತ್ತಿರುವವರು ಯಾರು ಎಂಬುದನ್ನು ನೋಡಿದಾಗ ರಾಶ್ಟ್ರಬಾಶೆಗೂ ರಾಜಬಾಶೆಗೂ ವ್ಯತ್ಯಾಸ ತಿಳಿಯದ ಹಾಗೂ ರಾಜಬಾಶೆಯನ್ನೇ ರಾಶ್ಟ್ರಬಾಶೆ ಎಂಬುದಾಗಿ ಪರಿಬಾವಿಸುವ ಜನರೇ ಎಂಬುದು ತಿಳಿಯುತ್ತದೆ. ಹಿಂದೀ ನಮ್ಮ ದೇಶದ ರಾಜಬಾಶೆ ಎಂಬುದಾಗಿ ಕೇಂದ್ರಸರ್‍ಕಾರ ಗೋಶಿಸಿದೆ. ರಾಜಬಾಶೆ ಎಂದರೆ ಅದಿಕ್ರುತ ಬಾಶೆ ಅತವಾ ಆಡಳಿತ ಬಾಶೆ ಎಂದರ್‍ತ.

ಪ್ರಾನ್ಸ್, ಜಪಾನ್, ರಶ್ಯಾಗಳು ತಮ್ಮದೇ ಆದ ದೇಶಬಾಶೆಯನ್ನು ಹೊಂದಿ ಏಳಿಗೆ ಹೊಂದಿರುವುದಲ್ಲದೆ ತಮ್ಮದೇ ಆದ ಒಂದು ಆತ್ಮಗವ್ರವ ಉಳಿಸಿಕೊಂಡಿವೆ. ಅವು ಎಂದೂ ಪರಕೀಯ ಬಾಶೆಯಾದ ಇಂಗ್ಲೀಶಿನ ಮೊರೆ ಹೊಕ್ಕಿಲ್ಲ, ಹಾಗೆ ಮಾಡದೆಯೂ ಅವು ತಮ್ಮ ಉತ್ಪನ್ನಗಳನ್ನು ಎಲ್ಲೆಡೆ ಹಂಚಲು ಸಾದ್ಯವಾಗಿದೆ ಎಂಬುದನ್ನು ಗಮನಿಸಿದಾಗ ದೇಶಕ್ಕೆಲ್ಲ ಒಂದೇ ಬಾಶೆಯಿರತಕ್ಕದ್ದೆಂಬ ವಾದ ಒಂದೆಡೆಯಿದೆ.

ಆದರೆ ನಮ್ಮ ದೇಶದ ಸಂದರ್‍ಬಕ್ಕೆ ಅದು ಅನ್ವಯಿಸುವುದೇ ಎಂಬುದು ಚರ್‍ಚಾರ್‍ಹ ಸಂಗತಿ. ಏಕೆಂದರೆ ನಮ್ಮ ದೇಶವು ಹಲವು ಬಾಶೆಗಳ ತವರು. ವಿಸ್ತಾರ, ವಯ್ವಿದ್ಯತೆ ಹಾಗೂ ಸಾಂಸ್ಕ್ರುತಿಕ ಬಿನ್ನತೆಗಳ ಕಾರಣದಿಂದಾಗಿ ನಮ್ಮಲ್ಲಿ ಹಲವಾರು ಸಂಪದ್ಬರಿತ ಬಾಶೆಗಳಿವೆ. ಅವು ಹಿಂದೀ ಮತ್ತು ಇಂಗ್ಲಿಶಿನ ಪ್ರವೇಶಕ್ಕೆ ಮುನ್ನವೇ ಶ್ರೀಮಂತವಾಗಿ ಬೆಳೆದುಬಂದಿವೆ. ಇವೆಲ್ಲವೂ ತಮ್ಮದೇ ಆದ ಪ್ರಾಂತ್ಯಗಳಲ್ಲಿ ತಮ್ಮದೇ ಆದ ರಾಜಾಳ್ವಿಕೆಗಳಲ್ಲಿ ತಮ್ಮದೇ ಬಾಶಿಕ ಜನರ ಹ್ರುದಯಗಳಲ್ಲಿ ಗಾಳಿನೀರಿನಂತೆ ವಿಪುಲವಾಗಿ ಸಮ್ರುದ್ದಿಗೊಂಡು ಬಂದಿವೆ. ಅವು ಹಾಗೇ ಇದ್ದಿದ್ದರೆ ಚೆನ್ನಾಗಿತ್ತೇನೋ?

ಆದರೆ ನಮ್ಮ ಈ ವಿಶಾಲ ಬೂಕಂಡದ ಮೇಲೆ ವಾಣಿಜ್ಯೋದ್ದೇಶಗಳಿಗಾಗಿ ಹೊರಗಿನವರ ಅತಿಕ್ರಮಣ ಪ್ರಾರಂಬವಾದ ಮೇಲೆ ನಾವೆಲ್ಲ ಒಂದೇ ದೇಶದವರು ಎನ್ನುವ ಪರಿಕಲ್ಪನೆ ಮೂಡಿಬಂದಿತು. ಈ ಒಂದು ಪರಿಕಲ್ಪನೆಯ ಮುಂದುವರಿದ ಬಾಗವಾಗಿ ನಮಗೆಲ್ಲ ಒಂದೇ ಬಾಶೆ ಇದ್ದರೆ ಒಳ್ಳೆಯದು ಎಂಬ ವಾದವನ್ನೂ ತೇಲಿಬಿಡಲಾಯಿತು. ಅಂತಹ ವಾದವನ್ನು ಸಂತೋಶದಿಂದ ಸ್ವೀಕರಿಸಿದ ದೂರದ್ರುಶ್ಟಿಯಿಲ್ಲದ ಕೆಲ ನಾಯಕರು ಅದನ್ನು ಜಾರಿಗೊಳಿಸಲು ಶತಾಯಗತಾಯ ಪ್ರಯತ್ನಪಟ್ಟರು ಹಾಗೂ ಅದು ನಿರ್‍ವಿಗ್ನವಾಗಿ ನಡೆಯುತ್ತಿರುವುದನ್ನು ಕಂಡು ಸಂಬ್ರಮಪಟ್ಟರು.

ವಾಸ್ತವವಾಗಿ ದಕ್ಶಿಣ ಇಂಡಿಯಾದ ಜನರು ಈ ವಿಚಾರವನ್ನು ಮೊದಲಿಗೇ ತಡೆಯಬೇಕಿತ್ತು. ಆದರೆ ತಮ್ಮದೇ ರಾಜ್ಯಕಟ್ಟುವ ಹುನ್ನಾರ ಹೊಂದಿದ್ದ ಕೆಲ ಹಿತಾಸಕ್ತಿಗಳು ಇಲ್ಲಿನ ಸಂಪದ್ಬರಿತ ಬಾಶೆಗಳನ್ನು ಬಲಿಗೊಟ್ಟು ಹಿಂದೀಯನ್ನು ಪೋಶಿಸಿದರೆಂಬುದೇ ಇತಿಹಾಸದ ವ್ಯಂಗ್ಯ. ಇನ್ನೊಂದು ಬಾಶೆಯನ್ನು ಸಂವಹನಕ್ಕಾಗಿ ಕಲಿಯಬೇಕೆನ್ನುವುದು ಕುಶಿಯ ವಿಚಾರವೇನೋ ಸರಿಯೇ ಆದರೆ ಆ ಇನ್ನೊಂದು ಬಾಶೆಯನ್ನು ಬಲವಂತವಾಗಿ ಹೇರುವಾಗ ಅದು ಮನಸಿಗೆ ಕಸಿವಿಸಿ ಮಾಡುವುದಂತೂ ನಿಜ.

ಉನ್ನತ ವ್ಯಾಸಂಗ ನಿಮಿತ್ತ ಅತವಾ ಉದ್ಯೋಗನಿಮಿತ್ತ ನೀವು ಪ್ರಾನ್ಸ್ ದೇಶಕ್ಕೆ ಹೋಗಬೇಕಾಗುತ್ತದೆ ಎಂದುಕೊಳ್ಳೋಣ. ಆಗ ನೀವು ಪ್ರೆಂಚ್ ಬಾಶೆಯನ್ನು ಕಲಿಯಲೇಬೇಕು. ನೀವಾಗೇ ನಿಮ್ಮ ಪರಿಶ್ರಮದಿಂದ ಅದನ್ನು ಕಲಿತರೂ ಅಲೆಯೆನ್ಸ್ ಪ್ರಾಂಚೇಸ್ ಎಂಬ ಪ್ರೆಂಚ್ ಸರ್‍ಕಾರದ ಏಜೆನ್ಸಿಯಲ್ಲಿ ನಿಮ್ಮ ಪರಿಣತಿಯನ್ನು ಒರೆಗೆ ಒಡ್ಡಿ ಪ್ರಮಾಣಿತರಾಗಬೇಕು. ಆಗಲೇ ನಿಮಗೆ ಪ್ರಾನ್ಸ್ ದೇಶದ ವೀಸಾ ದೊರೆಯುವುದು. ಅದನ್ನೇ ನಮ್ಮ ದೇಶಕ್ಕೂ ಅನ್ವಯಿಸಿ ನಿಮಗೆ ಹಿಂದೀ ಗೊತ್ತಿದ್ದರೆ ಮಾತ್ರವೇ ಸರ್‍ಕಾರೀ ನವ್ಕರಿ ಎಂದು ಯಾರಾದರೂ ಹೇಳಿದರೆ ಆತಂಕವಾಗುವುದು ಸಹಜವೇ. ಆದರೆ ಈ ಆತಂಕವನ್ನು ಸ್ರುಜಿಸುವುದು ಸರ್‍ಕಾರವಲ್ಲ ಬದಲಿಗೆ ಅದರ ನೀತಿಯನ್ನು ತಪ್ಪಾಗಿ ಅರ್‍ತಯ್ಸುವ ಅದರ ನವ್ಕರಶಾಹಿ ಎಂದರೆ ತಪ್ಪಾಗದು. ತಮ್ಮ ವಯ್ಯಕ್ತಿಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಈ ಆತಂಕವಾದಿಗಳು ಅತವಾ ಬಯೋತ್ಪಾದಕರು ಹಿಂದೀ ಇಲ್ಲದಿದ್ದರೆ ನೀನು ಬದುಕಲಾರೆ ಎಂಬಂತಹ ಬಯವನ್ನು ಹುಟ್ಟಿಸುತ್ತಾರೆ.

ಹಾಗೆ ನೋಡಿದರೆ ಇಂಗ್ಲೀಶ್ ಆಳ್ವಿಕೆಯ ಪಲವಾಗಿ ನಮ್ಮ ದೇಶದ ಆಡಳಿತ ವ್ಯವಸ್ತೆಯಲ್ಲಿ ಹಾಗೂ ನ್ಯಾಯಾಂಗದಲ್ಲಿ ಇಂಗ್ಲೀಶು ಸಾರ್‍ವತ್ರಿಕವಾಗಿ ಹಬ್ಬಿ ಹರಡಿದೆ. ಅದು ಹಿಂದೀಗೆ ಪರ್‍ಯಾಯವಾಗಿ ಅದಿಕ್ರುತ ಬಾಶೆಯಾಗಿದೆ ಮಾತ್ರವಲ್ಲ ಸಂಪರ್‍ಕ ಬಾಶೆಯಾಗಿಯೂ ಇದೆ. ಜಗತ್ತಿನ ಎಲ್ಲ ರಂಗಗಳಲ್ಲೂ ಇಂಗ್ಲೀಶು ತನ್ನ ಸ್ತಾನವನ್ನು ಬದ್ರಪಡಿಸಿಕೊಂಡಿರುವುದರಿಂದ ಇಂಗ್ಲೀಶನ್ನು ಇನ್ನಶ್ಟು ಕಾಲ ನಮ್ಮ ದೇಶದ ಆಡಳಿತ ಬಾಶೆಯಾಗಿ ಮುಂದುವರಿಸುವುದರಲ್ಲಿ ಏನೇನೂ ತಪ್ಪಿಲ್ಲ.

ಆದರೆ ಸಂವಹನೆಯ ಬಾಶೆಯಾಗಿ ಸ್ತಳೀಯ ಬಾಶೆಗೂ ಸ್ತಾನ ಕಲ್ಪಿಸಬೇಕಾದ್ದು ನ್ಯಾಯ. ಈ ಸ್ತಳೀಯ ಬಾಶೆಯ ಸ್ತಾನವನ್ನು ಹಿಂದೀಯು ಎಂದೆಂದೂ ಪಡೆಯಲು ಸಾದ್ಯವಿಲ್ಲ. ಏಕೆಂದರೆ ನುಡಿಯುವ ಹಿಂದೀಗೂ ಬರೆಯುವ ಹಿಂದೀಗೂ ಅಜಗಜಾಂತರ ವ್ಯತ್ಯಾಸವಿದೆ. ನುಡಿಯುವ ಹಿಂದೀಯನ್ನು ಅಲ್ಪ ಮಟ್ಟಿಗೆ ಅರ್‍ತ ಮಾಡಿಕೊಳ್ಳಬಹುದಾದರೂ ಬರೆಯುವ ಹಿಂದೀ ಕ್ಲಿಶ್ಟವಾದ ಕಬ್ಬಿಣದ ಕಡಲೆಯಾಗಿದೆ. ಬಂಗಾಲಿ, ಅಸ್ಸಾಮಿ, ಒಡಿಯಾ ರಾಜ್ಯಗಳವರ ಬಾವನೆಯೂ ಇದೇ ಆಗಿದೆ. ಹಿಂದೀಯನ್ನು ಬಲವಾಗಿ ವಿರೋದಿಸುವವರ ಸಾಲಿನಲ್ಲಿ ಬಂಗಾಳಿಗರಿಗೆ ಹೆಚ್ಚಿನ ಸ್ತಾನವಿದೆ. ತಮಿಳರು ಹಿಂದೀ ಹೇರಿಕೆಯನ್ನು ವಿರೋದಿಸುತ್ತಾರಾದರೂ ದೆಹಲಿಯ ಆಯಕಟ್ಟಿನ ಅದಿಕಾರಸ್ತಾನದಲ್ಲಿ ಕುಳಿತು ತಮಗೆ ಬೇಕಾದ್ದನ್ನು ಹಿಂದೀ ಮೂಲಕವೇ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಬಂಗಾಳಿಗರು ಹಾಗಲ್ಲ, ಹಿಂದೀ ಮಾತನಾಡುವವರ ಮೇಲೆ ಅವರಿಗೆ ಜನಾಂಗೀಯ ದ್ವೇಶವಿದೆ.

ಹೀಗೆಂದ ಮಾತ್ರಕ್ಕೆ ನಾನು ಹಿಂದೀ ದ್ವೇಶವನ್ನು ಪ್ರತಿಪಾದಿಸುತ್ತಿದ್ದೇನೆಂದು ಅರ್‍ತವಲ್ಲ. ಕೆಲಸದ ನಿಮಿತ್ತ ದೇಶ ಸುತ್ತುವ ನನಗೆ ಹಿಂದೀ ಸಂಪರ್‍ಕ ಬಾಶೆಯಾಗಿ ಬರುತ್ತದೆ. ಆದರೆ ಹಿಂದೀಯ ಆಡಳಿತ ಪದಕೋಶವು ನನಗಿನ್ನೂ ಜೀರ್‍ಣವಾಗದ ಸಂಗತಿ. ಹಾಗಾಗಿ ನನಗೆ ಹಿಂದೀ ಒಂದು ಪಾರಿನ್ ಲ್ಯಾಂಗ್ವೇಜ್. ಇಲ್ಲಿ ಪಾರಿನ್ ಎಂದರೆ ವಿದೇಶೀ ಎಂದಲ್ಲ ಅಪರಿಚಿತ ಎಂಬುದಾಗಿ ಪರಿಬಾವಿಸಬೇಕು.

ಅರ್‍ಜಿಯೊಂದು ಇಂಗ್ಲಿಶಿನಲ್ಲಿದ್ದರೆ ಇಂಗ್ಲಿಶಿನಲ್ಲೇ ತುಂಬುವ ನಾನು ಅದು ಇಂಗ್ಲಿಶ್ ಮತ್ತು ಹಿಂದೀಯಲ್ಲಿದ್ದರೆ ಕನ್ನಡದಲ್ಲಿ ತುಂಬುತ್ತೇನೆ. ಏಕೆಂದರೆ ಅದು ಹಿಂದೀ ವಿರುದ್ದದ ನನ್ನ ಪ್ರತಿಬಟನೆಯ ಸಂಕೇತ. ಮತ್ತು ಆ ಸಂದರ್‍ಬಗಳಲ್ಲಿ ನನ್ನೊಂದಿಗೆ ಜಗಳಾಡುವವರು ಹಿಂದೀ ಬಾಶಿಕರಾಗಿರದೆ ಕನ್ನಡಿಗರೇ ಆಗಿರುತ್ತಾರೆಂಬುದೂ ವಿಪರ್‍ಯಾಸ. ಈ ರೀತಿಯ ಹಿಂದೀ ಬಳಕೆಗೆ ಕೇಂದ್ರಸರ್‍ಕಾರದ ರಾಜಬಾಶಾ ಇಲಾಕೆಯಿಂದ ಸಂಬಾವನೆ ಸಿಗುತ್ತದೆಂಬುದೂ ಅಶ್ಟೇ ನಿಜ. ಅಂದರೆ ತೆರಿಗೆದಾರನ ಹಣದ ಒಂದಶ್ಟು ಪಾಲು ಈ ರೀತಿಯ ತೆವಲಿಗಾಗಿ ಬಳಕೆಯಾಗುತ್ತದೆ ಎಂದಂತಾಯಿತು.

ನಾನು ಉದ್ಯೋಗದಲ್ಲಿರುವ ಸಂಸ್ತೆಯಲ್ಲಿ ಪ್ರತಿವರ್‍ಶ ಹಿಂದೀ ಪಕ್ಶಾಚರಣೆ, ಹಿಂದೀ ಪತ್ರಿಕೆಯ ಪ್ರಕಟನೆ, ಹಿಂದೀ ನಾಮಪಲಕ, ಹಿಂದೀ ಸೂಚನೆಗಳು, ಹಿಂದೀ ಟಿಪ್ಪಣಿಗಳು ಮುಂತಾದವಕ್ಕಾಗಿ ಅಪಾರ ಹಣದ ವ್ಯಯವಾಗುತ್ತದೆ. ಇದಕ್ಕೆಲ್ಲ ಆ ರಾಜಬಾಶಾ ಇಲಾಕೆಯಿಂದಲೇ ಹಣ ಹರಿದುಬರುತ್ತದೆ. ಹಿಂದೀಯನ್ನು ಎಶ್ಟರಮಟ್ಟಿಗೆ ಅನುಶ್ಟಾನಕ್ಕೆ ತರಲಾಗುತ್ತಿದೆ ಎಂಬುದನ್ನು ಅಳೆಯಲು ಆಡಿಟ್ ವ್ಯವಸ್ತೆಯೂ ಇದೆ. ಹಿಂದೀ ಬಳಕೆಗೆ ನೀಡುವ ಪ್ರೋತ್ಸಾಹವನ್ನು ಹಣದ ರೂಪದಲ್ಲೇ ನೀಡಲಾಗುತ್ತದೆ. ಇನ್ನಾವ ಉಡುಗರೆಯ ರೂಪದಲ್ಲಲ್ಲ. ಹಿಂದೀ ಬಾಶೆಯ ಪ್ರದೇಶದ ಹಿಂದೀ ಮಾತುಗಾರರು, ಹಿಂದೀ ನೆಲದ ಅನ್ಯ ಬಾಶಿಕರು ಹಾಗೂ ಹಿಂದೀಯೇತರ ನೆಲದ ಅನ್ಯ ಬಾಶಿಕರು ಎಂಬುದಾಗಿ ದೇಶವನ್ನು ವಿಂಗಡಿಸಿ ಈ ಕೊನೆಯ ಬಾಗದವರಿಗೆ ಗರಿಶ್ಟ ಹಣ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಹೀಗೆ ಈ ಕೊನೆಯ ಬಾಗದವರು ಹಣದ ಪ್ರಲೋಬನೆಗೆ ಸೋತು ತಮಗೆ ಅರ್‍ತವಾಗಲೀ ಬಿಡಲೀ ತಪ್ಪು ತಪ್ಪು ಹಿಂದೀ ಪ್ರಯೋಗಿಸುತ್ತಾ ಹಿಂದೀ ಪ್ರಚಾರಕರಾಗುತ್ತಾರೆ.

ಹೀಗೆ ತಮ್ಮತನವನ್ನು ಮಾರಿಕೊಳ್ಳುವುದರಿಂದ ನಮ್ಮ ಮುಂದಿನ ಪೀಳಿಗೆಯ ಸ್ವಂತಿಕೆಯನ್ನು ಚಿವುಟುತ್ತಿದ್ದೇವೆಂಬ ಹಾಗೂ ಉದ್ಯೋಗಾವಕಾಶಗಳನ್ನು ಮೊಟಕುಗೊಳಿಸುತ್ತಿದ್ದೇವೆಂಬ ಸತ್ಯವನ್ನು ಅವರು ಅರಿಯಬೇಕು.

(ಚಿತ್ರ: globalvoiceonline.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: