ಎಲ್ಲೆ ದಾಟಿದ ವೋಯಜರ್ – 1
12.09.2013, ಅಮೇರಿಕಾ ಕಳುಹಿಸಿದ ಬಾನಬಂಡಿ (space craft) ವೋಯಜರ್–1 ಮೊಟ್ಟಮೊದಲ ಬಾರಿಗೆ ನೇಸರ-ಕೂಟದ (solar system) ಎಲ್ಲೆ ದಾಟುವ ಮೂಲಕ ಮನುಶ್ಯರು ಮಾಡಿದ ವಸ್ತುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ದೂರದಲ್ಲಿರುವ ವಸ್ತು ಅನ್ನುವ ಹೆಗ್ಗಳಿಕೆಯನ್ನು ತನ್ನತಾಗಿಸಿಕೊಂಡಿತು.
25.09.2013 ಕ್ಕೆ ನೇಸರನಿಂದ ವೋಯಜರಿನ ದೂರ 125.75 AU ಅಂದರೆ ಸುಮಾರು 1.881 X 1010 ಕಿಲೋ ಮೀಟರಗಳಶ್ಟು! ನೇಸರ ಮತ್ತು ನೆಲಕ್ಕೆ ಇರುವ ದೂರವನ್ನು 1 ಬಾನಳತೆ ಇಲ್ಲವೇ ಅಸ್ಟ್ರೋನಾಮಿಕಲ್ ಯುನಿಟ್ (Astronomical Unit – AU) ಅಂತಾ ಕರೆಯುತ್ತಾರೆ. ಅಂದರೆ ನೆಲವು ನೇಸರಕ್ಕೆ ಇರುವ ದೂರದ ಸರಿಸುಮಾರು 125 ಪಟ್ಟು ಹೆಚ್ಚು ದೂರದಲ್ಲಿ ವೋಯಜರ್ ಈಗ ಸಾಗುತ್ತಿದೆ.
(ನೇಸರಕೂಟ, ಅದರ ಎಲ್ಲೆಗಳು, ಸುತ್ತುಗಗಳು ಮತ್ತು ವೋಯಜರ್-1 ರ ಎಡೆಯನ್ನು ತೋರಿಸುತ್ತಿರುವ ತಿಟ್ಟ)
ನೇಸರನ ಸುತ್ತ ಸುತ್ತುವ 8 ಸುತ್ತುಗಗಳು (planets) ಮತ್ತು ಅವುಗಳ ಮರಿ-ಸುತ್ತುಗಗಗಳನ್ನು (satellite) ಒಳಗೊಂಡ ಏರ್ಪಾಟಿಗೆ ’ನೇಸರ-ಕೂಟ’ (solar system) ಅಂತಾ ಕರೆಯಲಾಗುತ್ತದೆ. ನೇಸರನ ಒಂಬತ್ತನೇ ಸುತ್ತುಗ ಎಂದು ಗುಂಪಿಸಲಾಗಿದ್ದ ಪ್ಲೂಟೋವನ್ನು 2006 ರಲ್ಲಿ ಪಟ್ಟಿಯಿಂದ ಹೊರಗಿಡಲಾಯಿತು ಹಾಗಾಗಿ ನೇಸರ ಕೂಟದಲ್ಲಿ ಇದೀಗ 8 ಸುತ್ತುಗಗಳನ್ನಶ್ಟೇ ಎಣಿಸಲಾಗುತ್ತದೆ. ಇವೆಲ್ಲವುಗಳನ್ನು ದಾಟಿಕೊಂಡು ವೋಯಜರ್–1 ಮುನ್ನಡೆಯುತ್ತಿದೆ.
ಸಪ್ಟಂಬರ್ 5, 1977 ರಂದು ಅಮೇರಿಕಾದ ಬಾನರಿಮೆಯ ಕೂಟ ನಾಸಾ (NASA), ನೇಸರಕೂಟದ ಆಚೆಗಿನ ಪಾಡನ್ನು ತಿಳಿದುಕೊಳ್ಳಲು ವೋಯಜರ್–1 (Voyager-1) ಬಾನಬಂಡಿಯನ್ನು ಹಾರಿಸಿತ್ತು. ಬಾನ ತೆರವು (space) ತಲುಪಿದ ಮೇಲೆ 1979 ರಲ್ಲಿ ಗುರು ಸುತ್ತುಗದ ಏರ್ಪಾಟು (Jovian system) ಮತ್ತು 1980 ರಲ್ಲಿ ಶನಿ ಸುತ್ತುಗದ ಏರ್ಪಾಟಿನ (Saturnine system) ಕುರಿತು ಹಲವಾರು ವಿಶಯಗಳನ್ನು ವೋಯಜರ್–1 ತಿಳಿಸಿಕೊಟ್ಟಿತ್ತು.
(ವೋಯಜರ್-1 ಸೆರೆಹಿಡಿದ ತಿಟ್ಟಗಳು)
ವೋಯಜರ್ – ಅಡಕಗಳು:
ಬಾನ್ದೆರವಿನಲ್ಲಿ ದೊರೆಯುವ ಮಾಹಿತಿಗಳನ್ನು ಕಲೆಹಾಕಲು ವೋಯಜರ್–1 ಹಲವು ಬಗೆಯ ಸಲಕರಣೆಗಳನ್ನು ಹೊಂದಿದೆ. ತಿಟ್ಟಗಳನ್ನು ಸೆರೆಹಿಡಿಯಲು ತಿಟ್ಟುಕಗಳ (camera) ಏರ್ಪಾಟು, ಸುತ್ತಣದ ಗುಣಗಳನ್ನು ತಿಳಿದುಕೊಳ್ಳಲು ನೆರವಾಗುವು ರೆಡಿಯೋ ಅಲೆಗಳ ಸಲಕರಣೆಗಳು, ಸೆಳೆಗಲ್ಲ ಬಯಲನ್ನು (magnetic field) ಅಳೆಯುವ ಸೆಳೆಯಳಕಗಳು (magnetometers), ಸಲಕರಣೆಗಳನ್ನು ಹಿಡಿತದಲ್ಲಿಡುವ ಕಂಪ್ಯೂಟರ್ ಮುಂತಾದವುಗಳನ್ನು ವೋಯಜರ್ ಒಳಗೊಂಡಿದೆ. ಸಲಕರಣೆಗಳಿಗೆ ಕಸುವು ನೀಡಲು ವೋಯಜರಿನಲ್ಲಿ ಪ್ಲುಟೋನಿಯಮ್-238 ಆಕ್ಸಾಯಡ್ಸನಿಂದ ಮಾಡಿದ ಬ್ಯಾಟರಿಗಳಿವೆ.
ಬಾನಾಚೆಗೆ ಸಾಗುತ್ತಿರುವ ವೋಯಜರ್–1 ಬಾನಬಂಡಿಗೆ ಯಾವುದಾದರೂ (ಯಾರಾದರೂ!) ಜಾಣ್ಮೆ, ತಿಳುವಳಿಕೆ ಹೊಂದಿದ ಜೀವಿಗಳು ಎದುರಾದರೆ ನಮ್ಮ ಕುರಿತು, ನಾವಿರುವ ನೆಲದ ಕುರಿತು ತಿಳಿಸಿಕೊಡಲು ಮೇಲಿನ ಸಲಕರಣೆಗಳ ಜೊತೆಗೆ ಚಿನ್ನದ ಹೊದಿಕೆಯಿರುವ ಅಡಕತಟ್ಟೆಯೊಂದನ್ನು ಇರಿಸಲಾಗಿದೆ. ಈ ಅಡಕತಟ್ಟೆಯಲ್ಲಿ ನೆಲದ ತಿಟ್ಟಗಳು, ಜೀವಿಗಳ ಬದುಕು, ಅರಿಮೆಯ ಹಲವಾರು ವಿಶಯಗಳು, ಮುಂದಾಳುಗಳ ಹಾರಯ್ಕೆಗಳು ಅಡಕಗೊಂಡಿವೆ. ’ನೆಲದ ದನಿಗಳು’ (sounds of earth) ಎಂದು ಹೆಸರಿಟ್ಟಿರುವ ಕಡತದಲ್ಲಿ ತಿಮಿಂಗಲಿನ ಕೂಗಾಟ, ಮಗುವಿನ ಅಳುವು, ಕಡಲ ತೆರೆಗಳ ಅಪ್ಪಳಿಸುವ ದನಿ ಮತ್ತು ಹಲವು ಬಗೆಯ ಇನಿತದ (music) ಕಟ್ಟುಗಳಿವೆ.
1977 ರಶ್ಟು ಮುಂಚೆಯೇ ಬಾನಿನಲ್ಲಿ ತೇಲಿದ ವೋಯಜರ್–1, ತನಗೊಪ್ಪಿಸಿದ ಕೆಲಸವನ್ನು ಕೊರತೆಯಿಲ್ಲದಂತೆ ಮಾಡಿ ತೋರಿಸಿದೆ. ಇಶ್ಟು ವರುಶಗಳ ಬಳಿಕವೂ, ಅಶ್ಟೊಂದು ದೂರ ಸಾಗಿದರೂ ನಮ್ಮೊಡನೆ ಒಡನಾಡುತ್ತಿರುವ ವೋಯಜರ್, ಅರಿಮೆಯ ಹಿರಿಮೆಯನ್ನು ಎತ್ತಿ ತೋರಿಸುತ್ತಿದೆ.
2025 ಕ್ಕೆ ಬ್ಯಾಟರಿಗಳ ಕಸುವು ಕೊನೆಗೊಳ್ಳುವದರಿಂದ ವೋಯೋಜರ್–1, ಮನುಶ್ಯರ ಒಡನಾಟವನ್ನು ಕಡಿದುಕೊಳ್ಳುತ್ತ ಕೊನೆಯಿರದ ಬಾನಂಗಳದಲ್ಲಿ ಕಣ್ಮರೆಯಾಗಲಿದೆ.
(ತಿಳಿವಿನ ಮತ್ತು ತಿಟ್ಟಗಳ ಸೆಲೆ: ವಿಕಿಪೀಡಿಯಾ)
2 Responses
[…] ನೇಸರನಿಂದ ಅದರ ಸರಾಸರಿ ದೂರ 1.5 ಬಾನಳತೆ (Astronomical Unit – AU) ಅಂದರೆ ಸುಮಾರು 23,00,00,000 ಕಿಲೋ […]
[…] ವೋಯೆಜರ್-1 ನಮ್ಮ ನೆಲದಿಂದ ಈಗ ಸರಿಸುಮಾರು 130 ಬಾನಳತೆಯ (Astronomical Unit-AU) ದೂರದಲ್ಲಿ ಅಂದರೆ ಸುಮಾರು 1.954 x 1010 km ದೂರದಲ್ಲಿ ಸಾಗುತ್ತಿದೆ. ಇಶ್ಟು ದೂರದವರೆಗೆ ವಸ್ತುವೊಂದನ್ನು ಸಾಗಿಸಿ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಮನುಶ್ಯರ ಅರಿವಿನ ಎಲ್ಲೆ ಚಾಚಿಕೊಂಡಿದೆ. ಆದರೆ ಈ ಬರಹದಲ್ಲಿ ನಾನು ಹೇಳಹೊರಟಿರುವುದು ವೋಯೇಜರ್ ಬಗ್ಗೆ ಅಲ್ಲ. ಬಾನಾಳದಲ್ಲಿ ಇಶ್ಟು ದೂರ ಸಾಗಬಲ್ಲೆವಾದರೂ ನಾವು ನೆಲೆ ನಿಂತಿರುವ ನೆಲದಲ್ಲಿ ಎಶ್ಟು ಆಳವನ್ನು ತಲುಪಲು ಇಲ್ಲಿಯವರೆಗೆ ಆಗಿದೆ ಅನ್ನುವುದರ ಕುರಿತು. […]