ನವೆಂಬರ್ ಕನ್ನಡ

ಜೋಗನಹಳ್ಳಿ ಗುರುಮೂರ‍್ತಿ

ನವೆಂಬರ್_ಕನ್ನಡ
ಕನ್ನಡ ಕಾಲ್ಜಾರಿ ಬಿದ್ದಿತ್ತು ದಾರಿಯಲಿ
ಅತ್ತಿತ್ತ ನೋಡಿದೆ,
ಎಲ್ಲಾ ಕಾರ್‍ಯನಿಮಿತ್ತರು
ಸಹಾಯಕ್ಕೆ ದೊರೆಯರು
ಒಬ್ಬನೆ ಎತ್ತಿ ಒಳಗೆ ತಂದೆ
ಕಟ್ಟಿಗೆಯ ಮಂಚ ಮುರಿದಿತ್ತು
ಹಳೆಯ ಹಾಸಿಗೆ ಹರಿದಿತ್ತು
ಹರಿದಿದ್ದ ಮರೆ ಮಾಡಿ ಹಾಸಿದೆ
ಇದ ಮಲಗಿಸಿ ಪುಸಲಾವಣೆಯ ಗಾಳಿ ಬೀಸಿದೆ
‘ಅಯ್ಯೋ….” ನರಳಿತು ಒಮ್ಮೆ
ದಿಂಬು ಸಾಲದೇನೊ!
ಹಳೆ ದಿಂಬಿಗೆ ಮತ್ತಶ್ಟು ಅನಾಚಾರ ಅತ್ಯಾಚಾರ
ಸುಳ್ಳು ಪೊಳ್ಳು ತುಂಬಿ ದುಂಡಗೆ ಮಾಡಿ ತಲೆಗಿಟ್ಟೆ
“ನನ್ನ ಕಾಲು……” ಕಿರುಚಿತು.

ಏನಾಗಿದೆ ಎಂದು ಕಾಲು ನೋಡಿದೆ
ಕಾಲು ನೇತಾಡುತಿತ್ತು.
ಇದರ ಕಶ್ಟ ನೋಡಲಾರದೆ
ಇಂಗ್ಲಿಶ್ ಡಾಕ್ಟರ ಕರೆಸಿದೆ
ಅವ ಬಂದು ನೋಡಿ
ಬ್ರಶ್ಟಾಚಾರದ ಇಂಜಕ್ಶನ್ ಕೊಟ್ಟ,
ಇದು ‘ಲಬ್ಬೂ…ಲಬ್ಬೂ…’ಬಾಯಿ ಬಡಿಯಿತು.
ಆತ ಸ್ವಾರ್‍ತದ ಮೂರು ಮಾತ್ರೆ
ಒಂದು ನಂಬುಗೆ ದ್ರೋಹದ ಮುಲಾಮು ಬರೆದಿಟ್ಟ.
ಪೀಜು ಕೊಟ್ಟು ಕಳುಹಿಸಿದೆ.
‘ತಿನ್ನಲಿಕ್ಕೆ ಏನು ಬೇಕು? ನಾ ಕೇಳಿದೆ.
ಅದು ತಲೆ ಅಲ್ಲಾಡಿಸಿತು.
ಅದು ಬೇಡವೆಂದಾಕ್ಶಣ ನಾನು ಸುಮ್ಮನಿರಲಾಗುತ್ತದೆಯೆ?!
ಒಂದು ‘ಕೋಮು ಗಲಬೆ ಹಲ್ವ’ ತಿನ್ನಿಸಿ
‘ಗುಂಪು ಗರ್‍ಶಣೆ’ ಹಾಲು ಕುಡಿಸಿ ಮಲಗಿಸಿದೆ.

ಸ್ವಲ್ಪ ‘ಮತ್ತು’ ಬಂದಿರಬೇಕು.
‘ಕಲಬೆರೆಕೆ’ ರಗ್ಗು ಕವಚಿದ ಮೇಲೆ ನಿದ್ದೆ ಹೋಯಿತು.
ನಾನು ಸುಸ್ತಾಗಿ ಕುರ್‍ಚಿ ಎಳೆದು ಕುಂತೆ.
ಅರೆ ನಿದ್ರಾವಸ್ತೆ
‘ನೀರೂ…ನೀರೂ…” ಕೂಗಿತು.
ಎಚ್ಚರಗೊಂಡೆ
ನಿರಬಿಮಾದ ನೀರು ಕುಡಿಸಿದೆ.
ಬೆವತು ನೀರಾಗಿದ್ದ ಇದಕ್ಕೆ ನಿರಾಳವಾಗಿಬಹುದು.
ಅರೆ,
ಇದೇನಿದು!
ಬಾಗಿಲ ತಳ್ಳಿ ಬಂದರು
ಒಳ ನುಗ್ಗಿ ಬಂದರು.
ಹಿಂಡು ಹಿಂಡಾಗಿ ದಂಡುಗಟ್ಟಿ ಬಂದರು
“ಓ…..ಕನ್ನಡ…” ಮರುಗಿದರು
ಚಕಿತರಾದರು.

ಬಿದ್ದಿದ್ದನ್ನು ಉಪಚರಿಸಿದ್ದಕ್ಕೆ
ನನ್ನ ಬೆನ್ನು ಚಪ್ಪರಿಸಿದರು.
ನನಗೆ ಹೆಮ್ಮೆ ಎನಿಸಿತು.
ಈ ಕನ್ನಡ ಹೀಗೆ ಬಿದ್ದಿರಲಿ
ಜನ ಬರುತ್ತಿರಲಿ ಹೋಗುತ್ತಿರಲಿ.
ಹೋಗಿ ಬಂದು ನನ್ನ ಹೊಗಳುತ್ತಿರಲಿ.
ಇದರ ನೋವು ನೋಡಲಾರದೆ
ಮತ್ತೆ ಒಬ್ಬ ಡಾಕ್ಟರ್ ಕರೆತಂದ.
ಬಂದ ಡಾಕ್ಟರ್ ಅದರ ಕಾಲು ನೋಡಿ
“ಇಲ್ಲಿ ‘ಅಂತಹ ಚಕ್ಶಾಲಯ’ ಎಲ್ಲಿದೆ?” ಎಂದ.
ನಾ ಗರಬಡಿದಂತೆ ನಿಂತೆ.
ಉಳಿದವರು ‘ವಾಟ್…ವಾಟ್..’ ಎಂದರು
ಅದೆ ‘X’ ray …ಎಂದ.
ಎಲ್ಲರಿಗೂ ಅರ್‍ತವಾಯಿತು.
ಕ್ಲಿನಿಕ್ಕಿಗೆ ಕರೆದೂಯ್ದು ಎಕ್ಸ್‌ರೇ ಮಾಡಿಸಿದೆ.
ಡಾಕ್ಟರು ಹೋದರು
‘ಅವ್ವಾ…”ಎಂದೆ.
“ಮಗು……ನನಗೆ ಚಿಕಿತ್ಸೆ ಸಾಕು”
ಶಕ್ತಿ ಬೇಕು; ಮಗು ನನಗೆ ಶಕ್ತಿ ಬೇಕು”
“ಏನವ್ವ…..!?
“ಕಾಸರಗೋಡು ಕಯ್ ತಪ್ಪಿತು ಮಕ್ಕಳೆ
ಅಕ್ಕಲಕೋಟೆ ಕಂಡವರ ಪಾಲಾಯಿತು.
ಕಾವೇರಿಯ ಬಸಿದುಕೊಂಡರು ಕೊಂಗರು
ನನ್ನ ಶಕ್ತಿ ಉಡುಗಿ ಹೋಗಿದೆ…”
“ನಾವೇನು ಮಾಡಬೇಕವ್ವ…”?
ಎಲ್ಲರೂ ಸ್ವಲ್ಪ ತ್ಯಾಗ ಮಾಡದೆ ರೋಗ ವಾಸಿಯಾಗದು ಮಗ
“ನನಗೆ ಶಕ್ತಿ ಬೇಕು ಮಕ್ಕಳೆ
ಅದಕೆ ನಿಮ್ಮ ಬಲಿ ಬೇಕು….”
“ಏನವ್ವ ಬಲಿಯ…..!?”
“ಹವ್ದು ಮಕ್ಕಳೆ ಬಲಿ ಬೇಕು”
ಮಾತು ನಿಂತಿತು ಮಕ್ಕಳದು
ಮೋರೆ ಕಂದಿತು ಮವ್ನದಲ್ಲಿ
ಹಿಂಡು ಕರಗಿತು ಕ್ಶಣದಲ್ಲಿ
“ಮಕ್ಕಳೆ…”
“ಅವ್ವ…”
“ನನ್ನ ಮಕ್ಕಳೆಲ್ಲಿ…?
“ಅವ್ವ ನಾನೊಬ್ಬ ಉಳಿದಿದ್ದೇನೆ ಹೇಳವ್ವ…”
“ನೀನಾ…ಮಹಾ ಸ್ವಾರ್‍ತಿ
ಸದಾ ಕಾಮಿಸುತ್ತೀಯ ಕೀರ್‍ತಿ
ನನಗಿನ್ನು ಮಕ್ಕಳಿಲ್ಲ ಬಿಡು…”
ಮವ್ನವಾಂತಳು ತಾಯಿ
ಮತ್ತೆ ಹನ್ನೊಂದು ತಿಂಗಳು

(ಚಿತ್ರ: ಬರತ್ ಕುಮಾರ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: