ಬಂಡಿ ಬರುತಿದೆ ಉಗಿಬಂಡಿ ಬರುತಿದೆ
– ರತೀಶ ರತ್ನಾಕರ.
ಬಂಡಿ ಬರುತಿದೆ ಉಗಿಬಂಡಿ ಬರುತಿದೆ
ಬೀಡಿಗೆ ಮಲೆನಾಡಿಗೆ|
ಹಸಿರು ಹೆತ್ತು ಹೊತ್ತು ನಿಂತ
ಬೆಟ್ಟಗಳನು ಒಟ್ಟಿ ನಿಂತ
ಕರಿನೆಲದ ಹಸಿರು ಕಾಡಿಗೆ…
ಬಂಡಿ ಬರುತಿದೆ ಉಗಿಬಂಡಿ ಬರುತಿದೆ।
ಕಯ್ಯ ಮೇಲೆ ಕೆನ್ನೆ ಹೊತ್ತು
ಕಾದುಕುಳಿತ ಹಗಲು ಎಶ್ಟೋ?
ಮಾತನಿತ್ತು ಮರೆತು ಹೋದ
ಜಾಣ ಕುರುಡ ಕಾದಿಯೆಶ್ಟೋ?
ಕಾಲವಂತು ಕೂಡಿಬಂತು
ಹಳಿಯ ಮೇಲೆ ಗಾಲಿ ಉರುಳಿ
ಬಂಡಿ ಬರುತಿದೆ ಉಗಿಬಂಡಿ ಬರುತಿದೆ!
ಸಾಲು ಸಾಲು ಡಬ್ಬಿಗಳು
ಕಂಬಿ ಮೇಲೆ ಹರಿದು ಬರಲು
ಹಿಂದಿ ಅಲ್ಲಿ ಮೆರೆಯುತಿದೆ
ಮಂದಿಯನ್ನು ಕೆಣಕುತಿದೆ ।
ಕರುನಾಡಿನ ಊರೊಳಗೆ
ಹೆರನುಡಿಯ ಹೊರೆ ಏಕೋ?
ಬಂಡಿ ಬರುತಿದೆ ಹಿಂದಿ ಹೊರೆಯ ತಂದಿದೆ!
ಬಂಡಿಯ ಬಿಣಿಗೆಯು
ಕಪ್ಪು ಹೊಗೆಯ ಉಗುಳುವಂತೆ
ಒಕ್ಕೂಟದಾಳ್ಕೆಗೆ ಹಿಂದಿ
ಹರಡೋ ದೊಡ್ಡ ಚಿಂತೆ!
ಸಿದ್ದರಿಲ್ಲ ಯಾರು ಇಲ್ಲಿ
ಬಿಸಿ ಕೆಂಡವ ನುಂಗಲು।
ಬಂಡಿಯೊಡನೆ ಹಿಂದಿ ಬರುತಿದೆ, ನಮಗೆಚ್ಚರವೂ ಇದೆ!
(ಚಿತ್ರ : http://kannada.oneindia.in)
ಇತ್ತೀಚಿನ ಅನಿಸಿಕೆಗಳು