ಕನ್ನಡ ನಾಡಿನ ಮೂಲ

ಸಂದೀಪ್ ಕಂಬಿ.

A temple built on a rocky hill that falls in to the Tungabhadra River at dawn.

ಇಂದು ನಾವು ‘ಕನ್ನಡ’ ಎಂಬ ಪದವನ್ನು ನಮ್ಮ ನುಡಿಯನ್ನು ಕುರಿತು ಹೇಳುವುದಕ್ಕಾಗಿ ಬಳಸುತ್ತೇವೆ. ಕನ್ನಡವನ್ನಾಡುವ ಜನರಿರುವ ನಾಡನ್ನು, ಅಂದರೆ ನಮ್ಮ ನಾಡನ್ನು, ಕನ್ನಡ ನಾಡು, ಕರ್‍ನಾಟಕ ಎಂದು ಕರೆಯುತ್ತೇವೆ. ಆದರೆ ಹಿಂದೆ ಕನ್ನಡ ಎಂಬ ಪದ ನಾಡು ಮತ್ತು ನುಡಿ ಎರಡಕ್ಕೂ ಬಳಸಲಾಗುತ್ತಿತ್ತು. ಹಿಂದಿನ ಕನ್ನಡದ ನಲ್ಬರಹಗಳಲ್ಲಿ, ಕಲ್ಬರಹಗಳಲ್ಲಿ ‘ಕನ್ನಡ’ವನ್ನು ನಾಡು, ನುಡಿ ಎರಡರ ಸೂಚಕವಾಗಿಯೂ ಬಳಸಿರುವ ಎತ್ತುಗೆಗಳು ಸಿಗುತ್ತವೆ.

ಕವಿರಾಜಮಾರ್‍ಗದ ಕಾಲವಾದ 9ನೇ ನೂರ್‍ಮಾನದಲ್ಲಿಯೂ ಕನ್ನಡ ಎಂಬ ಪದವನ್ನು ನಾಡು, ನುಡಿ ಎರಡನ್ನು ಕುರಿತಾಗಿಯೂ ಬಳಸಲಾಗುತ್ತಿತ್ತು. ಕವಿರಾಜಮಾರ್‍ಗದಲ್ಲಿಯೇ ಇದಕ್ಕೆ ಎತ್ತುಗೆಗಳು ಸಿಗುತ್ತವೆ. ಎತ್ತುಗೆಗೆ ತುಂಬಾ ಹೆಸರುವಾಸಿಯಾಗಿರುವ ಈ ಕಬ್ಬದ ಈ ಕೆಳಗಿನ ಸಾಲುಗಳನ್ನು ತೆಗೆದುಕೊಳ್ಳೋಣ.

ಕಾವೇರಿಯಿಂದಮಾ ಗೋದಾವರಿವರಮಿರ್‍ದ ನಾಡದಾ ಕನ್ನಡದೊಳ್…

ಕವಿರಾಜಮಾರ್‍ಗವನ್ನು ಬರೆದವನು ಕನ್ನಡ ನಾಡಿನ ಬಿತ್ತರವನ್ನು ತಿಳಿಸುತ್ತ ಕಾವೇರಿಯಿಂದ ಗೋದಾವರಿಯ ವರೆಗೆ ಇರುವ ನಾಡು ಕನ್ನಡ ಎಂದು ಹೇಳಿದ್ದಾನೆ. ಹಾಗಾಗಿ ಇಲ್ಲಿ ‘ಕನ್ನಡ’ ಪದ ನಾಡು ಎಂಬ ಹುರುಳಿನಲ್ಲಿ ಬಳಕೆಯಾಗಿದೆ ಎಂಬುದು ತಿಳಿಯಾಗಿದೆ.

ಇಂದು ಕಾವೇರಿಯಿಂದ ಹೆದ್ದೊರೆ, ಅಂದರೆ ಕ್ರಿಶ್ಣ ನದಿಯ ತೀರದ ವರೆಗೂ ಇರುವ ಕನ್ನಡ ಗೋದಾವರಿಯ ವರೆಗೆ ಇತ್ತು ಎಂದರೆ, ಇದರ ಬರಹಗಾರನು ಕನ್ನಡದ ಮೇಲಿನ ಅಬಿಮಾನದಿಂದ ಈ ಬಗೆಯಲ್ಲಿ ಕನ್ನಡದ ಗಡಿಯನ್ನು ಸುಮ್ಮನೆ ಎಳೆದಿರಬಹುದೆಂಬ ಅನುಮಾನವೇನೋ ಬರುತ್ತದೆ. ಆದರೆ ತೆಂಕಣ ಮಹಾರಾಶ್ಟ್ರದಲ್ಲಿ ಇರುವ ಊರ ಹೆಸರುಗಳು, ಅವುಗಳ ಮೂಲ, ಮತ್ತು ಆ ಬಾಗದಲ್ಲಿ ಸಿಗುವ ಕನ್ನಡದ ಕಲ್ಬರಹಗಳು, ಮತ್ತು ಅವುಗಳಲ್ಲಿ ದೊರೆಯುವ ಊರು ಮತ್ತು ವ್ಯಕ್ತಿಗಳ ಹೆಸರುಗಳನ್ನು ಗಮನಿಸಿದರೆ, 9ನೇ ನೂರ್‍ಮಾನದಲ್ಲಿ ಇಂದಿನ ಮಹಾರಾಶ್ಟ್ರದ ತೆಂಕಣದ ಬಾಗವು ಕನ್ನಡಮಯವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಈ ಪುರಾವೆಗಳನ್ನು ಗಮನಿಸುತ್ತ ಹೋದರೆ ಕವಿರಾಜಮಾರ್‍ಗದಲ್ಲಿ ಹೇಳಿರುವಂತೆ ಕನ್ನಡ ನಾಡಿನ ಬಡಗಣದ ಗಡಿ ಗೋದಾವರಿ ನದಿಯೇ ಆಗಿತ್ತೆಂಬುದು ತಿಳಿಯುತ್ತದೆ. ಇರಲಿ ಇದು ಬೇರೆಯೇ ಚರ್‍ಚೆಯಾಗುತ್ತದೆ, ಸದ್ಯಕ್ಕೆ ನಾವು ಕನ್ನಡ ಎನ್ನುವುದು ನಾಡ ಹೆಸರು ಎಂಬ ವಿಶಯಕ್ಕೆ ಹಿಂದಿರುಗೋಣ.

ಈ ವಿಶಯವಾಗಿ ಶಂಬಾ ಜೋಶಿಯವರು ನಡೆಸಿರುವ ಅರಕೆ ಸಾಕಶ್ಟು ಕುತೂಹಲಕಾರಿಯಾಗಿದೆ. ‘ಕನ್ನಡ’ ಪದದ ಸಂಸ್ಕ್ರುತ ರೂಪಗಳಾದ ಕರ್‍ಣಾಟ, ಕರ್‍ನಾಟಕ ಪದಗಳು ಮಹಾಬಾರತ ಮುಂತಾದ ಹಳೆಯ ಸಂಸ್ಕ್ರುತ ಕಬ್ಬಗಳಲ್ಲಿ ಕಾಣಿಸುತ್ತವೆ. ಜೊತೆಯಲ್ಲಿ ವನವಾಸಿ (ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿ), ಕುಂತಲ ದೇಶ (ಇಂದಿನ ಬಡಗಣ ಕರ್‍ನಾಟಕದ ಕೆಲವು ಬಾಗಗಳು) ಮತ್ತು ಮಹಿಶ ಮಂಡಲಗಳ (ಇಂದಿನ ಮಯ್ಸೂರು) ಕುರಿತಾಗಿಯೂ ಹೇಳಲಾಗಿದೆ ಎಂಬುದನ್ನು ಗಮನಿಸುವ ಅವರು ಕನ್ನಡ ನಾಡಿನಲ್ಲಿ ಬರುವ ಈ ನಾಡುಗಳನ್ನು ಬೇರೆಯಾಗಿ ಹೆಸರಿಸಿರುವುದೇಕೆ ಎಂದು ಕೇಳುತ್ತಾರೆ. ಈ ಕೇಳ್ವಿಯ ಹಿಂದೆ ಹೋಗುತ್ತ ಒಂದೇ ನುಡಿಯನ್ನಾಡುವ ಈ ಎಲ್ಲ ನಾಡುಗಳು ಮೊದಲು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದ್ದವು ಮತ್ತು ಮುಂದೆ ಹಳೆಯ ಕನ್ನಡ/ ಕರ್‍ಣಾಟ ಎಂಬ ನಾಡು ಕಣ್ಮರೆಯಾಗಿ, ಅದರ ಹೆಸರು ಮಾತ್ರ ಉಳಿದುಕೊಂಡು ಮಿಕ್ಕ ನಾಡುಗಳಿಗೂ ಕೂಡಿಸಿ ಹೇಳುವ ಹೆಸರಾಯಿತೆಂದು ತೀರ್‍ಮಾನಿಸುತ್ತಾರೆ.

ಹಾಗಾದರೆ ಈ ಮೊದಲು ಇದ್ದ ನಾಡು ‘ಕನ್ನಡ’ ಯಾವುದು ಎಂಬ ಕೇಳ್ವಿ ಮೂಡುತ್ತದೆ. ಕುಂತಲ, ವನವಾಸಿ, ಮಹಿಶ ಮಂಡಲಗಳೆಲ್ಲವೂ ಈಗ ಕನ್ನಡವನ್ನಾಡುವ ಪ್ರದೇಶಗಳೇ, ಆದರೆ ಈ ‘ಕನ್ನಡ’ ಎಂಬ ಮೊದಲ ಮೂಲ ನಾಡು ಕಣ್ಮರೆಯಾಗಿದೆಯಲ್ಲಾ? ಅದು ಯಾವುದು, ಈಗ ಅದು ಎಲ್ಲಿದೆ, ಎಂದು ಪ್ರಶ್ನಿಸುತ್ತ ಗೋದಾವರಿಯ ಬಡಗಣ ಗಡಿಯಿಂದಾಚೆಗೆ ಅದರ ಕುರುಹುಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ.

ಇಂದಿನ ಮಹಾರಾಶ್ಟ್ರ, ನಡು-ಬಾರತ, ಮತ್ತು ಬಡಗು ಬಾರತಗಳಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗಗಳಾದ ಮಲೇರರು, ಕುರ್‍ಕರು, ಗೊಲ್ಲರು, ಕುರುಬರು, ಹಳಬರು (ಹಳ ಪಯ್ಕರು), ಮುಂತಾದವರುಗಳ ಮೂಲ, ಅವರುಗಳ ನುಡಿಗಳು, ಪೂಜಿಸುವ ದೇವರುಗಳು, ಆಚರಣೆಗಳು, ನೆಲೆಸಿರುವ ಮತ್ತು ಹಿಂದೆ ನೆಲೆಸಿದ ಊರುಗಳು, ಅಲ್ಲಿ ಸಿಗುವ ವೀರಗಲ್ಲುಗಳು, ಇವುಗಳಲ್ಲೆಲ್ಲ ಕನ್ನಡ – ದ್ರಾವಿಡ ಮೂಲಗಳನ್ನು ಸಾಕಶ್ಟು ಪ್ರಮಾಣದಲ್ಲಿ ಹೆಕ್ಕಿ ತೋರಿಸಿದ್ದಾರೆ.

ಅಲ್ಲದೇ, ಕಾನಡರು ಎಂಬ ಒಂದು ಬುಡಕಟ್ಟೇ ಇಂದಿನ ಬಡಗಣ ಮಹಾರಾಶ್ಟ್ರದ ನಾಸಿಕ ಜಿಲ್ಲೆ ಮತ್ತು ಕಾನದೇಶದ ಪ್ರದೇಶಗಳಲ್ಲಿ ಇದೆ. ಅಲ್ಲಿನ ಗೆಜಟಿಯರಿನಲ್ಲಿ ಇವರನ್ನು ದ್ರಾವಿಡ ಜನಾಂಗ ಎಂದು ಹೇಳಲಾಗಿದೆ. ಇಲ್ಲಿ ಕಾನಡ, ಕಾನದೇಶ ಎಂಬ ಪದಗಳನ್ನು ವಿಶೇಶವಾಗಿ ಗಮನಿಸಬೇಕಾಗಿದೆ. ಕನ್ನಡದ ಒತ್ತಕ್ಶರಗಳನ್ನು ಮರಾಟಿಗರಿಗೆ ಸರಿಯಾಗಿ ಉಲಿಯಲು ಬರುವುದಿಲ್ಲ. ಅವರ ಬಾಯಲ್ಲಿ ‘ಕನ್ನಡ’ ‘ಕಾನಡ’ವಾಗುತ್ತದೆ. ಹಾಗಾಗಿ ಕನ್ನಡ-ಕಾನಡ-ಕಾನದೇಶ, ಈ ಪದಗಳಲ್ಲಿ ಸಾಕಶ್ಟು ಒಂದಾಣಿಕೆಯನ್ನು ಕಾಣಬಹುದು.

ಹೀಗೆ ಹಲವು ಕುರುಹುಗಳನ್ನು ಅರಸುತ್ತ ಈ ಜನಾಂಗದ ಹಿಂದಿನ ತಲೆಮಾರಿನವರೇ ಇಲ್ಲಿನ ಮೂಲ ನೆಲೆಸಿಗರೆಂದು, ಇವರ ಮೂಲ ನುಡಿ ಕನ್ನಡವಾಗಿತ್ತೆಂದು ಮತ್ತು ಈಗ ನಂಬಿರುವಂತೆ ಇವರು ಇಲ್ಲಿಗೆ ವಲಸೆ ಬಂದವರಲ್ಲ ಎಂದು ವಾದಿಸುತ್ತಾರೆ ಶಂಬಾ ಜೋಶಿಯವರು. ಈ ಜನಾಂಗದಿಂದಲೇ ಆ ಪ್ರದೇಶಕ್ಕೆ ಕಾನದೇಶ ಎಂಬ ಹೆಸರು ಬಂದಿರಬಹುದು. ಅಲ್ಲದೇ ಇದೇ ಕಾನದೇಶಕ್ಕೆ ಆಂಟಿಕೊಂಡಿರುವ ಅವ್ರಂಗಾಬಾದ ಜಿಲ್ಲೆಯ ಒಂದು ತಾಲೂಕು ಮತ್ತು ಊರಿಗೆ ಕನ್ನಡ ಎಂಬ ಹೆಸರಿದೆ. ಇಲ್ಲಿ (ಮತ್ತು ಮಹಾರಾಶ್ಟ್ರದ ಹಲವೆಡೆಗಳಲ್ಲಿ) ಇರುವ ಊರುಗಳ ಹೆಸರುಗಳು ಕನ್ನಡದ ಮೂಲವನ್ನು ಹೊಂದಿವೆ. ಇವೆಲ್ಲವನ್ನೂ ಗಮನಿಸಿ ಒಂದಕ್ಕೊಂದು ಕೊಂಡಿ ಬೆಸೆದು ಕಳೆದು ಹೋದ ಕನ್ನಡ-ಕರ್‍ನಾಟಕವು ಇಂದು ಬಡಗಣ ಮಹಾರಾಶ್ಟ್ರದಲ್ಲಿ ಇದ್ದಿತೆಂದು ಹಲವು ಪ್ರಮಾಣಗಳನ್ನು ಒಡ್ಡಿ, ಶಂಬಾ ಜೋಶಿಯವರು ವಾದಿಸುತ್ತಾರೆ.

ಬಡಗಣದಿಂದ ಆರ್‍ಯ ನುಡಿಗಳನ್ನಾಡುವವರು ಎಡೆಬಿಡದೆ ಈ ಪ್ರದೇಶಕ್ಕೆ ವಲಸೆ ಬಂದ ಕಾರಣ, ಮೂಲದಲ್ಲಿ ಇದ್ದ ಕನ್ನಡ-ಕರ್‍ಣಾಟ ಮೆಲ್ಲಗೆ ಕಣ್ಮರೆಯಾಗಿರಬಹುದು. ಅಶೋಕನು, ತಾನು ಹೇಳಿಕೊಂಡಂತೆ, ಬುದ್ದನ ಮತದ ಪ್ರಚಾರಕ್ಕಾಗಿ ಬಿಕ್ಕುಗಳನ್ನು ಹಲವು ನಾಡುಗಳಿಗೆ ಕಳಿಸಿದ್ದು ಗೊತ್ತೇ ಇದೆ. ಅವುಗಳಲ್ಲಿ ಬನವಾಸಿ, ಕುಂತಲ ದೇಶಗಳು ಇದ್ದರೆ ಕರ್‍ನಾಟಕವು ಇರುವುದಿಲ್ಲ. ಮಹಾಬಾರತದ ಕಾಲದಲ್ಲಿ ಬನವಾಸಿ, ಕುಂತಲ ದೇಶಗಳಿಂದ ಬೇರೆಯಾಗಿದ್ದ ಕರ್‍ಣಾಟ ದೇಶವು ಅಶೋಕನ ಹೊತ್ತಿಗೆ ಹೆರನಾಡಿನವರ ವಲಸೆಯಿಂದಾಗಿ ಕಣ್ಮರೆಯಾಗಿತ್ತು ಎಂದು ಶಂಬಾ ಜೋಶಿಯವರು ಅಬಿಪ್ರಾಯ ಪಡುತ್ತಾರೆ.

ಶಂಬಾ ಜೋಶಿಯವರು ಅರಕೆಗಾರರು ಮಾತ್ರವಲ್ಲ, ಕನ್ನಡದ ಮೇಲೆ ಅಬಿಮಾನ ಉಳ್ಳವರೂ ಕೂಡ. ಕನ್ನಡದ ಮೇಲ್ಮೆಯ ಕಾಲವನ್ನು ನೆನೆಯುತ್ತ ಕಣ್ಮರೆಯಾದ ಈ ಮೂಲದ ಕನ್ನಡ ನಾಡಲ್ಲದೇ ಮುಂದೆ ನಾವು ಗೋದಾವರಿಯ ತೆಂಕಣದ ಬಾಗವನ್ನೂ ಕಳೆದುಕೊಂಡುದನ್ನು ಹೇಳಿ ಮರುಗುತ್ತಾರೆ. ಸವೆದು ಹೋದ ನೆಲದ ತುಂಡುಗಳಿಗಿಂತ ರಾಜಕೀಯ ಅರಿವನ್ನು ಕಳೆದುಕೊಂಡು, ತಮ್ಮ ಹಿಂದಿನ ಮೇಲ್ಮೆಯ ಅರಿವೇ ಇಲ್ಲದೆ, ಒಂದೇ ಸಮನೆ ತುಳಿತಕ್ಕೆ ಒಳಗಾಗುತ್ತಿರುವ ಕನ್ನಡಿಗರ ಪಾಡು ಅವರಿಗೆ ಇನ್ನೂ ಹೆಚ್ಚಿನ ನೋವುಂಟು ಮಾಡಿದ್ದಂತಿದೆ.

ಈ ಎಲ್ಲ ಅಂಶಗಳನ್ನು ಹೇಳಿರುವ ಅವರ ‘ಕಣ್ಮರೆಯಾದ ಕನ್ನಡ’ (ಶಂಬಾ ಸಂಪುಟ 1, ಕನ್ನಡ ಪುಸ್ತಕ ಪ್ರಾದಿಕಾರ) ಹೊತ್ತಗೆಯ ಕೊನೆಯಲ್ಲಿ ಕನ್ನಡ – ಕನ್ನಡಿಗರಿಗೆ ಇನ್ನೂ ಹೆಚ್ಚಿನ ಕುತ್ತು ಬಂದೊದಗದೆ ಇರಲು ರಾಜಕೀಯವಾಗಿ ಹಲವು ಸಂಸ್ತಾನಗಳು ಮತ್ತು ಬ್ರಿಟಿಶರ ಆಳ್ವಿಕೆಯಲ್ಲಿ ಹರಿದು ಹಂಚಿ ಹೋಗಿದ್ದ ಅಂದಿನ ಕನ್ನಡದ ಪ್ರದೇಶಗಳೆಲ್ಲವೂ ಒಗ್ಗೂಡಬೇಕೆಂದು ಕರ್‍ನಾಟಕದ ಏಕೀಕರಣವನ್ನು ಬಲವಾಗಿ ಪ್ರತಿಪಾದಿಸಿದ್ದರು.

ಹೆರರಾಳ್ವಿಕೆಯಲ್ಲಿದ್ದ ಹಲವು ಕನ್ನಡದ ಪ್ರದೇಶಗಳು ಇಂದು ನಮ್ಮ ಕಯ್ ಬಿಟ್ಟು ನೆರೆ ರಾಜ್ಯಗಳ ಪಾಲಾಗಿದ್ದರೂ ಏಕೀಕರಣವನ್ನೇನೋ ಸಾದಿಸಿದ್ದೇವೆ. ಆದರೆ ಹಿಂದೆ ಇದ್ದ ತನ್ನತನದ ಅರಿವಿನ ಕೊರತೆ ಮತ್ತು ಹೆರ ನುಡಿ-ಸಂಸ್ಕ್ರುತಿಗಳ ದಾಳಿ ಇಂದಿಗೂ ಕರ್‍ನಾಟಕದ ಮೇಲೆ ನಡೆಯುತ್ತಿದೆ. ಕನ್ನಡ ನಾಡು ಅಂದಿನಿಂದ ಇಂದಿನ ವರೆಗೂ ತಡೆಯಿಲ್ಲದೆ ಮೆಲ್ಲನೆ ಸವೆಯುತ್ತಲೇ ಬರುತ್ತಿದೆ. ಕನ್ನಡತನದ ಅರಿವು ಇಲ್ಲದೆ ಹೋದಲ್ಲಿ ನಮ್ಮ ನಾಡು ಪರರ ಪಾಲಾಗುತ್ತದೆ, ಮತ್ತು ಅದರಿಂದ ನಮ್ಮ ಬೀಳ್ಗೆಯಾಗುತ್ತದೆ (ಏಳ್ಗೆ ಸಾದಿಸುವುದು ದೂರದ ಮಾತು) ಎಂಬುದನ್ನು ನಾವು ನಮ್ಮದೇ ಇತಿಹಾಸದಿಂದ ತಿಳಿದುಕೊಳ್ಳಬಹುದು. ಎಚ್ಚೆತ್ತು ಒಗ್ಗೂಡಿ ದಿಟ್ಟತನದಿಂದ ಎದುರು ನಿಲ್ಲುವುದೇ, ತಮ್ಮನ್ನು ಕಾಪಾಡಿಕೊಳ್ಳಲು, ಇಂದು ಕನ್ನಡಿಗರಿಗಿರುವ ಒಂದೇ ಒಂದು ದಾರಿ.

(ಚಿತ್ರ ಸೆಲೆ: lukeduggleby.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. 10/12/2013

    […] ಅವರಂಗಾಬಾದ ಜಿಲ್ಲೆಯ ಪ್ರದೇಶಗಳಲ್ಲಿ ಕಣ್ಮರೆಯಾದ ಕನ್ನಡದ ಕುರುಹುಗಳನ್ನು ಕಾಣಬಹುದೆಂದು ಶಂಬಾ ಜೋಶಿಯವರ ಅರಕೆಗಳು […]

  2. 31/12/2013

    […] ಬರಹವೊಂದರಲ್ಲಿ ಕನ್ನಡ ನಾಡಿನ ಮೂಲ ಮಹಾರಾಶ್ಟ್ರದ […]

ಅನಿಸಿಕೆ ಬರೆಯಿರಿ:

%d bloggers like this: