ಕೇಳುವವರಿಲ್ಲದ ಹಣಕ್ಕೆ ಹುಳುಕಿನ ನುಡಿನೀತಿ ಮುಕ್ಯ ಕಾರಣ

– ರತೀಶ ರತ್ನಾಕರ.

An employee arranges Indian currency notes at a cash counter inside a bank in Agartala

ಇತ್ತೀಚಿಗೆ ಲೋಕಸಬೆಯಿಂದ ಒಂದು ಸುದ್ದಿ ಹೊರಬಿದ್ದಿದೆ. ಹಣಕಾಸು ಸಚಿವ ಪಿ.ಚಿದಂಬರಂ ಅವರು ಹಣಕಾಸಿಗೆ ಸಂಬಂದಪಟ್ಟಂತೆ ಬೆರಗಿನ ಒಂದು ಸುದ್ದಿಯನ್ನು ಹೊರಹಾಕಿದ್ದಾರೆ. ಯಾವ ವಾರಸುದಾರರು ಇಲ್ಲದಿರುವ, ತಮ್ಮದು ಎಂದು ಯಾರೂ ಹಕ್ಕು ಸಾದಿಸದೇ ಇರುವ 3,652 ಕೋಟಿ ಮೊತ್ತದ ಹಣ ಇಂಡಿಯಾದ ಹಣಮನೆಗಳಲ್ಲಿ ಹಾಗೆಯೇ ಕೊಳೆಯುತ್ತಿದೆ! ಹಣಮನೆಗಳಲ್ಲಿ ಉಳಿತಾಯ ಕಾತೆ, ವಿಮೆ, ಉಳಿತಾಯ ಬಾಂಡ್, ಮುಂಗಡ ಹಣ ಹಾಗು ಇನ್ನಿತರ ಉಳಿತಾಯ ಯೋಜನೆಗಳಲ್ಲಿರುವ, ಕಳೆದ ಹತ್ತು ವರುಶಗಳಿಂದ ಯಾವುದೇ ವಹಿವಾಟು ನಡೆಯದೇ, ತಮ್ಮದು ಎಂದು ಯಾರೂ ಕೂಡ ಬಂದು ತೆಗೆದುಕೊಳ್ಳದ ಹಣದ ಮೊತ್ತ ಇದಾಗಿದೆ. [ವರದಿ: ಪ್ರಜಾವಾಣಿ ಸುದ್ದಿಹಾಳೆ, ದಿನಾಂಕ 14-ಡಿಸೆಂಬರ್‍-2013]

ಇಶ್ಟು ದೊಡ್ಡ ಮೊತ್ತದ ಹಣ ಮಂದಿಗೆ ಸೇರಿದ್ದು, ಅದು ಮಂದಿಯ ನೆರವಿಗೆ ಬರದೆ ಹೀಗೆ ಹಣಮನೆಗಳಲ್ಲಿ ಕೊಳೆಯುತ್ತಿರುವುದು ಮಂದಿಯ ಹಣಕಾಸು ಸ್ತಿತಿಗೆ ಪೆಟ್ಟು ಕೊಟ್ಟ ಹಾಗೆ. ಅದೆಲ್ಲಾ ಸರಿ, ಆದರೆ ಯಾಕೆ ಹೀಗೆ ಆಗುತ್ತದೆ? ಒಬ್ಬರು ಯಾವುದೋ ಉಳಿತಾಯಕ್ಕೆಂದು ಹಣಮನೆಯಲ್ಲಿ ಕಾತೆಯನ್ನು ತೆರೆದೋ, ಇಲ್ಲವೇ ವಿಮೆಯನ್ನು ಪಡೆದೋ, ಇಲ್ಲವೇ ಮುಂಗಡ ಕಾತೆಯನ್ನು ತೆರೆದೋ ಅದರಲ್ಲಿ ಹಣವಿರಿಸಿ, ಬಳಿಕ ಅದರ ಗೋಜಿಗೆ ಹೋಗದಿರುವ ಕಾರಣವಾದರೂ ಏನು? ಹಣಕಾಸಿಗೆ ಸಂಬಂದಪಟ್ಟಂತೆ ಈ ಬಗೆಯ ಅಸಡ್ಡೆಯನ್ನಂತೂ ಮಂದಿ ತೋರುವುದಿಲ್ಲ, ತಾವು ಕೂಡಿಟ್ಟ ಹಣದ ಬಗ್ಗೆ ಅವರಿಗೆ ಎಚ್ಚರಿಕೆ ಇದ್ದೇ ಇರುತ್ತದೆ. ಒಂದು ವೇಳೆ ಹಣವನ್ನು ಕೂಡಿಟ್ಟ ವ್ಯಕ್ತಿಗೆ ಏನಾದರು ಹೆಚ್ಚುಕಡಿಮೆ ಆಗಿದ್ದರೆ ಅವರ ಮನೆಯವರಾದರೂ ಆ ಹಣವನ್ನು ಪಡೆದುಕೊಳ್ಳುವ ಏರ್‍ಪಾಡು ಇದೆಯಲ್ಲವೇ? ಆದರೂ ಇಶ್ಟು ದೊಡ್ಡ ಮೊತ್ತದ ಹಣ ಕೇಳುವವರೇ ಇಲ್ಲದೆ ಉಳಿದಿದ್ದು ಹೇಗೆ?

ಮೇಲಿನ ಕೇಳ್ವಿಗಳ ಕುರಿತು ಯೋಚಿಸಿದಾಗ, ಇದಕ್ಕೆಲ್ಲ ಮೊದಲ ಮುಕ್ಯ ಕಾರಣ ಹಣಮನೆಗಳು ಅನುಸರಿಸುತ್ತಿರುವ ಹುಳುಕಿನ ನುಡಿನೀತಿ ಎಂದು ಗೊತ್ತಾಗುತ್ತದೆ. ಹವ್ದು, ಹಣಮನೆಗಳು ಮಂದಿಯನ್ನು ತಲುಪಲು ಮಂದಿಯ ನುಡಿಯನ್ನು ಬಳಸದೇ ಕೇವಲ ಹಿಂದಿ ಮತ್ತು ಇಂಗ್ಲೀಶನ್ನು ನೆಚ್ಚಿಕೊಂಡಿರುವುದು ಕೊಳೆಯುವ ಹಣದ ಮೊತ್ತವನ್ನು ಹೆಚ್ಚಾಗಿಸಿದೆ. ಬನ್ನಿ, ಸುಮ್ಮನೆ ಒಂದು ಎತ್ತುಗೆಯನ್ನು ನೋಡೋಣ. ಒಂದು ಕುಟುಂಬದಲ್ಲಿ ದುಡಿಯುತ್ತಿರುವ ಒಬ್ಬ, ಉಳಿತಾಯಕ್ಕೆಂದು ಹಣಮನೆಯಲ್ಲಿ ಹಣವಿರಿಸಿದ್ದಾನೆ ಎಂದುಕೊಳ್ಳೋಣ. ಅವನಿಗೊಂದು ಕೆಟ್ಟ ಗಳಿಗೆ ಬಂದು ತೀರಿ ಹೋದನೋ ಇಲ್ಲವೇ ಮನೆಯಿಂದ ಹೊರಗೆ ಓಡಾಡಲು ಆಗದ ಪರಿಸ್ತಿತಿ ಬಂದಿದೆ ಎಂದುಕೊಳ್ಳಿ. ಅವನ ಮನೆಯವರಿಗೆ ಅವನು ಹಣಮನೆಯಲ್ಲಿ ಇಟ್ಟ ಹಣದ ಬಗ್ಗೆ ತಿಳಿದಿದೆ ಆದರೆ ಹೋಗಿ ತರಲು ಒಂದು ಬಗೆಯ ಹಿಂಜರಿಕೆ ಮತ್ತು ಮುಜುಗರ.

ಮಂದಿಯಲ್ಲಿ ಈ ಹಿಂಜರಿಕೆ ಮತ್ತು ಮುಜುಗರವನ್ನು ಹುಟ್ಟಿಸಿದ್ದು ಬೇರೆ ಯಾರೂ ಅಲ್ಲ ಈ ಹಣಮನೆಗಳ ನುಡಿನೀತಿ. ಕರ್‍ನಾಟಕದ ಒಂದು ಹಣಮನೆಯಲ್ಲಿ ಕನ್ನಡದ ವಾತವರಣವಿಲ್ಲದಿದ್ದರೆ ಕನ್ನಡ ಗ್ರಾಹಕರಿಗೆ ಅನುಕೂಲವಾಗುವುದಾದರು ಹೇಗೆ? ಕೇವಲ ಕನ್ನಡ ತಿಳಿದಿರುವವರು ಬಂದು ಹಣಮನೆಯಲ್ಲಿ ವ್ಯವಹರಿಸುವುದಾದರೂ ಹೇಗೆ? ಹಣಮನೆಯ ಚಲನ್ ಗಳಾಗಲಿ, ಚೆಕ್‍ಗಳಾಗಲಿ, ವಿಮೆಯ ಬಾಂಡ್‍ಗಳಾಗಲಿ ಹೀಗೆ ಯಾವುದೇ ಮಾಹಿತಿಗಳು ಕನ್ನಡದಲ್ಲಿ ಸಿಗುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಬೆಂಗಳೂರಿನ ಒಂದು ಹಣಮನೆಯಲ್ಲಿ ಕನ್ನಡ ಮಾತನಾಡಲು ಗೊತ್ತಿರುವ ಒಬ್ಬನೇ ಒಬ್ಬ ಸಿಬ್ಬಂದಿಯೂ ಇಲ್ಲದ ಹಣಮನೆಯೂ ಇದೆ. ನಮ್ಮದೇ ನಾಡಿನಲ್ಲಿ ನಮ್ಮ ನುಡಿಯಲ್ಲಿ ಸೇವೆ ಸಿಗದ ಹಣಮನೆಗಳು ಇರಬೇಕಾದರೆ ಎಲ್ಲಾ ಕನ್ನಡಿಗರಿಗೆ ಅನುಕೂಲಕರ ಸೇವೆ ಸಿಗುವುದು ಅಸಾದ್ಯವಾದ ಮಾತು.

ಮೇಲಿನ ಎತ್ತುಗೆಯಲ್ಲಿ, ಒಂದು ವೇಳೆ ಹಣಮನೆಯಲ್ಲಿ ಹಣವಿಟ್ಟ ವ್ಯಕ್ತಿ, ಆ ಕುರಿತು ಮನೆಯವರಿಗೆ ಹೇಳಿಲ್ಲ ಎಂದಿಟ್ಟುಕೊಳ್ಳೋಣ. ಯಾವುದೋ ಒಂದಶ್ಟು ಹಣಮನೆಯ ಕಾತೆ ಹೊತ್ತಗೆಗಳು, ವಿಮೆಯ ಬಾಂಡ್ ಕಾಗದಗಳು ಇನ್ನಿತರ ಹಣಮನೆಗೆ ಸಂಬಂದಿಸಿದ ಕಾಗದ ಪತ್ರಗಳು ಅವನ ಇಡುಗಂಟಿನಲ್ಲಿ ಮನೆಯವರಿಗೆ ಸಿಕ್ಕಿತು ಎಂದುಕೊಳ್ಳಿ, ಕನ್ನಡವನ್ನು ಮಾತ್ರ ಬಲ್ಲವರು ಅದನ್ನು ಓದಿ ಅದರ ವಿವರ ತಿಳಿದುಕೊಳ್ಳಲು ಸಾದ್ಯವಿಲ್ಲ! ಕಾರಣ ಆ ಕಾಗದ ಪತ್ರಗಳು ಕೇವಲ ಹಿಂದಿ ಮತ್ತು ಇಂಗ್ಲೀಶಿನಲ್ಲಿ ಇರುತ್ತವೆ. ಹಾಗಾಗಿ ಹಣಮನೆಯಲ್ಲಿಟ್ಟ ಹಣದ ವಿವರ ಮನೆಯವರಿಗೆ ತಿಳಿಯದೇ ಹೋಗುತ್ತದೆ ಮತ್ತು ಅದು ಹಣಮನೆಯಲ್ಲೇ ಕೊಳೆಯುತ್ತದೆ.

ಈ ಮೇಲಿನದು ಒಂದು ಎತ್ತುಗೆ ಅಶ್ಟೇ, ಒಕ್ಕೂಟ ಸರಕಾರದ ಅಡಿಯಲ್ಲಿ ಬರುವ ಹಣಮನೆಗಳ ಹುಳುಕಿನ ನುಡಿನೀತಿಯಿಂದಾಗಿ ಮಂದಿಗೆ ಅನಾನುಕೂಲಗಳೇ ಹೆಚ್ಚು. ಮಂದಿಯ ನುಡಿಯಿಂದ ಎಲ್ಲಾ ಮಂದಿಯನ್ನು ತಲುಪುವ ಮತ್ತು ಹಣಮನೆಯಲ್ಲಿ ಮಂದಿಗೆ ಅನುಕೂಲವಾಗುವಂತೆ ಮಂದಿ ನುಡಿಯಲ್ಲಿ ಸೇವೆಯನ್ನು ನೀಡುವ ಕೆಲಸ ಆಗುತ್ತಿಲ್ಲ. ಇದರ ಪರಿಣಾಮಗಳಲ್ಲಿ ಒಂದು, ಈಗ ಇರುವ 3, 652 ಕೋಟಿಗಳಶ್ಟು ಕೊಳೆಯುವ ಹಣ, ಕೇಳುವವರಿಲ್ಲದ ಹಣ. ಈ ಹಣವು ಮಂದಿಗೆ ಸೇರಿದ್ದು, ಮಂದಿಯು ದುಡಿದು ಕೂಡಿಟ್ಟ ದುಡ್ಡು. ಕಿತ್ತು ತಿನ್ನುವ ಬಡತನ ನಮ್ಮ ನಡುವಿನ ಹಲವರನ್ನು ಮೊದಲೇ ಕಾಡುತ್ತಿದೆ. ಹೀಗಿದ್ದಾಗ ಹತ್ತು ಸಾವಿರವೋ, ಇಪ್ಪತ್ತು ಸಾವಿರವೋ ರೂಪಾಯಿ, ಅದು ಯಾವುದೋ ಬಡವನ ಮನೆಯ ಹಣ ಅವನ ಮನೆಯವರಿಗೆ ಸಿಗದೆ ಹಣಮನೆಯಲ್ಲಿ ಕೊಳೆಯುತ್ತಿದೆ. ಇದರಿಂದ ಅವನ ಸಂಸಾರವು ಬಡತನದಲ್ಲಿ ಕೊಳೆಯುತ್ತಿದೆ. ಆ ಹತ್ತು-ಇಪ್ಪತ್ತು ಸಾವಿರ ಕೂಡಿಟ್ಟ ಬಡವನ ಮನೆಗೆ ಬೆಳಾಕಾಗುತ್ತಿತ್ತು, ಬಡಕುಟುಂಬಕ್ಕೆ ತುಸುಮಟ್ಟಿಗೆ ನೆರವಾಗುತ್ತಿತ್ತು. ಇಂತಹ ಎಡವಟ್ಟುಗಳು ಒಕ್ಕೂಟ ಸರಕಾರದ ನುಡಿನೀತಿಯಿಂದಾಗುತ್ತಿದೆ. ಹಣಮನೆಯ ನುಡಿನೀತಿ ಸರಿಪಡಿಸಿ ಮಂದಿಯ ನುಡಿಯಲ್ಲಿ ಸೇವೆ ಕೊಟ್ಟರೆ ಇಂತಹ ಪೋಲಾಗುವ ಹಣವು ಕಡಿಮೆಯಾಗುವುದು.

(ಚಿತ್ರ ಸೆಲೆ: sify.com)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s