ನಾ. ಡಿಸೋಜ

ಸಿ. ಮರಿಜೋಸೆಪ್

HSB_8410

ನಮ್ಮೆಲ್ಲರ ಹೆಮ್ಮೆಯ ಹಾಗೂ ಮಕ್ಕಳ ಮೆಚ್ಚಿನ ಕತೆಗಾರ ನಾ ಡಿಸೋಜರ ಬಗ್ಗೆ ಕೇಳದವರಾರು? ಅವರ ಹೆಚ್ಚಿನ ಕತೆಗಳು ಚರ‍್ಚಿನ ಸುತ್ತಾಲೆ(compound)ಯಲ್ಲಿ ಅಡ್ಡಾಡಿದರೂ ಮಕ್ಕಳಿಂದ ಮುದುಕರವರೆಗೆ ಓದಿನ ಹುಚ್ಚು ಹಚ್ಚಿದ್ದು ಮಾತ್ರ ಸುಳ್ಳಲ್ಲ.

ನಾ. ಡಿಸೋಜ ಎಂದೇ ಹೆಸರುವಾಸಿಯಾಗಿರುವ ನಾರ‍್ಬರ‍್ಟ್ ಡಿಸೋಜರು ಶೀಮೊಗ್ಗೆ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಹುಟ್ಟಿದರು. ಇವರ ತಂದೆ ಪಿಲಿಪ್ ಡಿಸೋಜರು ಶಾಲಾ ಮಾಸ್ತರರಾಗಿದ್ದರಿಂದ ಅವರು ಶಾಲಾಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಓದುತ್ತಿದ್ದ ನಾ ಡಿಸೋಜ ಅವರಲ್ಲಿ ತನ್ನಿಂತಾನೇ ಸಾಹಿತ್ಯದೊಲವು ಮೊಳೆಯಿತು. ಜೊತೆಗೆ ತಾಯಿ ರೊಪೀನಾ ಅವರು ಹೇಳುತ್ತಿದ್ದ ಜನಪದ ಹಾಡುಗಳು, ಕತೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಮಲೆನಾಡಿನ ಸೊಬಗಿನೊಂದಿಗೆ ಎಲ್ಲಜನರ(public) ಪುಸ್ತಕಬಂಡಾರಗಳ ಅಪಾರ ಬರಹದ ಹೆದ್ದೊರೆಗಳ ನೀರು ಕುಡಿದ ನಾ ಡಿಸೋಜರಿಗೆ ಬರವಣಿಗೆ ತಾನಾಗಿ ಒದಗಿಬಂತು. ಇಂದಿಗೆ ಸುಮಾರು ಅಯ್ವತ್ತು ವರುಶಗಳಿಂದಲೂ ಲೆಕ್ಕಣಿ(pen)ವಿಡಿದು ಕನ್ನಡ ಸಾಹಿತ್ಯದ ಎಲ್ಲ ನಮೂನೆಗಳಲ್ಲಿಯೂ ಗೀಚುತ್ತ ಬಂದಿರುವ ನಾರ‍್ಬರ‍್ಟ್ ಡಿಸೋಜರು ಇದೇ ಜನವರಿಯಲ್ಲಿ ನಡೆಯಲಿರುವ 80ನೇ ಇಂಡಿಯಾ ದೇಶದ ಕನ್ನಡ ಸಾಹಿತ್ಯ ಕೂಟದ ತಲೆಯಾಳಾಗಿ(president) ಆಯ್ಕೆಯಾಗಿದ್ದಾರೆ.

ಬದುಕಿಗೆ ಮೊದಲಿಟ್ಟಿದ್ದು– ’ದ್ವೀಪ’ ನೀಳ್ಗತೆಯು ಓಡುಚಿತ್ತಾರವಾಗಿ ಹೊಂದಾವರೆಯನ್ನು ಮುಡಿಗೇರಿಸಿತು. ಹಸಿರೇ ಉಸಿರೆನ್ನುವ ಕತೆಗಾರ ನಾ ಡಿಸೋಜರು ತಮ್ಮೆಲ್ಲ ಬರಹಗಳಲ್ಲಿ ಹಸಿರುಳಿಸುವ ಬಗ್ಗೆ ಎಚ್ಚರಿಸುತ್ತ ಬಂದಿದ್ದು ಹಸಿರಿನ ಅಳಿವೇ ಮಂದಿಯ ಅಳಿವು ಎಂಬುದನ್ನು ಮತ್ತೆ ಮತ್ತೆ ತೋರಿದ್ದಾರೆ. ಕನ್ನಡ ನುಡಿಸಿರಿಯಲ್ಲಿ ಮಕ್ಕಳಿಗಾಗಿಯೇ ಬಹಳಶ್ಟು ಬರಹಗಳನ್ನು ಬರೆದಿರುವ ಡಿಸೋಜರು ಮಕ್ಕಳ ಮೆಚ್ಚಿನ ಕತೆಗಾರನಾಗಿದ್ದಾರೆ.

ಕತೆ ಕಾದಂಬರಿ –  ನಾ ಡಿಸೋಜ ಅವರ ಕತೆಗಳ ಬೇಸಾಯವು ಪ್ರಪಂಚ ಪತ್ರಿಕೆಯಲ್ಲಿ ಮೊದಲ ಪಸಲು ಬಿಟ್ಟಿತು. ಇಂದು ನಾಡಿನ ಎಲ್ಲ ಸುದ್ದಿಹಾಳೆಗಳು ಡಿಸೋಜರಿಗೆ ಕತೆ ಬರೆದುಕೊಡಿ ಎಂದು ಕೇಳುವಶ್ಟು ಜನಮೆಚ್ಚುಗೆ ಅವರ ಹಿರಿಮೆ. ಹಿಂದೊಮ್ಮೆ ಅವರ ಇಪ್ಪತ್ತಯ್ದು ಸಣ್ಣ ಕತೆಗಳ ಗೊಂಚಲು ಬೆಳಕುಕಂಡಿತ್ತು. ಇದೀಗ ಸಾಗರ ಪ್ರಕಾಶನದವರು ನಾ ಡಿಸೋಜರ ಎಲ್ಲ ಸಣ್ಣಕತೆಗಳನ್ನು ಕೂಡಿಸಿ ಎರಡು ಹಿರಿಹೊತ್ತಿಗೆಗಳನ್ನು ಹೊರತಂದಿದ್ದಾರೆ. ಡಿಸೋಜ ಅವರ ಹಲವಾರು ಸಣ್ಣಕತೆಗಳು ಕೊಂಕಣಿ, ಮಲಯಾಳಂ, ತೆಲುಗು, ಹಿಂದಿ, ಇಂಗ್ಲಿಶ್ ನುಡಿಗಳಿಗೂ ಮಾರ‍್ಪಾಟಾಗಿವೆ. ನಾ ಡಿಸೋಜರ ಕತೆಗಳ ಎಣಿಕೆಯೇ 400 ಮುಟ್ಟುತ್ತದೆಂದರೆ ಅವರ ಲೆಕ್ಕಣಿಯ ಹರಿವು ಎಶ್ಟು ಸರಾಗ ಎಂದು ಊಹಿಸಬಹುದು.

ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ 1964ರಲ್ಲಿ ಬೆಳಕಿಗೆ ಬಂತು. ಹಸಿರಿನಳಿವು, ಕ್ರಿಸ್ತುವ ಮಂದಿಯ ನಡೆನುಡಿ, ಕಳ್ಳ ಸಂಪಾದನೆ, ಹಿಂದುಳಿದ ಬುಡಕಟ್ಟು ಜನರ ಬದುಕು ಹೀಗೆ ಹಲವು ಹತ್ತು ಚಿತ್ತಾರಗಳನ್ನೊಳಗೊಂಡ ಅವರ 80ಕ್ಕೂ ಮಿಗಿಲಾದ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ. ಸುರೇಶ್ ಹೆಬ್ಳೀಕರ್ ಅವರ ತೋರುದಾರಿ(direction)ಯಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ತೋರುದಾರಿಯಲ್ಲಿ ‘ದ್ವೀಪ’, ಸಿರಿಗಂದ ಶ್ರೀನಿವಾಸಮೂರ‍್ತಿಯವರ ತೋರುದಾರಿಯಲ್ಲಿ ‘ಬಳುವಳಿ’, ಕೋಡ್ಲು ರಾಮಕ್ರುಶ್ಣರವರ ತೋರುದಾರಿಯಲ್ಲಿ ‘ಬೆಟ್ಟದಪುರದ ದಿಟ್ಟಮಕ್ಕಳು’ ಮತ್ತು ಮನುರವರ ತೋರುದಾರಿಯಲ್ಲಿ ‘ಆಂತರ‍್ಯ’ ಕಾದಂಬರಿಗಳು ಓಡುಚಿತ್ತಾರಗಳಾಗಿಯೂ ಜನಮೆಚ್ಚುಗೆಯನ್ನು ಪಡೆದಿವೆ. ದ್ವೀಪ ಕಾದಂಬರಿಯು ಅಯ್ಲ್ಯಾಂಡ್ ಎಂಬ ಹೆಸರಿನಲ್ಲಿ ಇಂಗ್ಲಿಶಿಗೆ ಹೋಗಿ ಆಕ್ಸಪರ‍್ಡ್ ಓದುಮನೆಯ ಅಚ್ಚುಗೂಡಿನ ಮೂಲಕ ಬೆಳಕು ಕಂಡಿದೆ.

ಕುವೆಂಪು ಓದುಮನೆ, ಬೆಂಗಳೂರು ಓದುಮನೆ, ಮಂಗಳೂರು ಓದುಮನೆ ಮತ್ತು ಕರ‍್ನಾಟಕ ಓದುಮನೆಗಳಲ್ಲಿ ‘ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳು’ ಮುಂತಾದ ಕಾದಂಬರಿಗಳು ಕಲಿಕಾಪುಸ್ತಕಗಳಾಗಿ ಅವರ ಬರಹಗಳ ಎತ್ತರಕ್ಕೆ ತೋರುಗನ್ನಡಿಯಾಗಿವೆ. ಹೀಗೆ ಎಲ್ಲರಿಗೂ ಓದನ್ನೇ ಉಣಬಡಿಸಿದ ಡಿಸೋಜರವರ ಎಲ್ಲ ಬರಹಗಳು ಓದುಮನೆಗಳಲ್ಲಿ ಅರಿವಿನ ಹುಡುಕಾಟಕ್ಕೆ ಪಿರಿದಾದ ಸರಕಾಗಿಯೂ ಹೊರಹೊಮ್ಮಿದೆ. ಎಂಪಿಲ್ ಪದವಿಗಾಗಿ ಮದರಾಸು ಓದುಮನೆಯ ಶ್ರೀ ಪ್ರಕಾಶ್ ಸಯ್ಮನ್ರವರು ‘ನಾ. ಡಿಸೋಜರವರ 25 ಕತೆಗಳು ಒಂದು ಅದ್ಯಯನ’ (1995), ಮದುರೆ ಕಾಮರಾಜ ಓದುಮನೆಯ ಎಂ.ಎಂ. ಮಂಜುನಾತರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಮುಳುಗಡೆ ಸಮಸ್ಯೆ – ಒಂದು ಅದ್ಯಯನ’ (1998), ಕುವೆಂಪು ಓದುಮನೆಯ ಟಿ.ಎಸ್. ಶಯ್ಲಾರವರು ‘ನಾ. ಡಿಸೋಜರವರ ಕಾದಂಬರಿಗಳಲ್ಲಿ ಸಾಂಸ್ಕ್ರುತಿಕ ಸ್ತಿತ್ಯಂತರಗಳು’ (2001) ಮುಂತಾದ ಪೆರ‍್ಬರಹ(thesis)ಗಳನ್ನು ಬರೆದಿದ್ದಾರೆ. ಕರ‍್ನಾಟಕ ಓದುಮನೆಯ ಗಂಗಾ ಮೂಲಿಮನಿಯವರು ‘ನಾ. ಡಿಸೋಜ ಒಂದು ಸಾಂಸ್ಕ್ರುತಿಕ ಅದ್ಯಯನ’ ಪೆರ‍್ಬರಹಕ್ಕೆ ಡಾಕ್ಟರೇಟ್ (2001) ಪಡೆದಿದ್ದಾರೆ.

ಚುರುಕಾದ ಆಳ್ತನ-  ನಾ. ಡಿಸೋಜ ಅವರು ಬರವಣಿಗೆ ಮಾತ್ರವಲ್ಲದೆ ಹಸಿರುಳಿಕೆಯ ಜಗ್ಗಾಟಕ್ಕೂ ಟೊಂಕಕಟ್ಟಿ ನಿಂತಿದ್ದಾರೆ. ಇಕ್ಕೇರಿ ಗಣಿಬೇಡ ಹೋರಾಟ, ಅಂಬುತೀರ‍್ತದಿಂದ ಅರಬ್ಬೀಸಮುದ್ರದವರೆಗಿನ ಶರಾವತಿ ನಡೆ, ತಾಳಗುಪ್ಪ ಶಿವಮೊಗ್ಗ ಬ್ರಾಡ್ ಗೇಜ್ ಹೋರಾಟ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕರ‍್ನಾಟಕ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ (1995), ಕನ್ನಡ ಪುಸ್ತಕ ಪ್ರಾದಿಕಾರ (1995), ಕುವೆಂಪು ಓದುಮನೆಯ ಸೆನೆಟ್ (1996-98), ಹಂಪಿ ಕನ್ನಡ ಓದುಮನೆಯ ಸೆನೆಟ್ (1993-95; 1996-98), ಶಿವಮೊಗ್ಗ ಜಿಲ್ಲಾ ಶಿಕ್ಶಣ ಮತ್ತು ತರಬೇತಿ ಸಂಸ್ತೆಯ ಆಡಳಿತ ಪರಿಶತ್ತು (1996-99), ಕುವೆಂಪು ರಂಗಮಂದಿರ, ಕನ್ನಡ ಅಬಿವ್ರುದ್ದಿ ಪ್ರಾದಿಕಾರ ಮುಂತಾದೆಡೆಗಳಲ್ಲಿ ತಾವು ಪಡೆದಿದ್ದಾರೆ.

ಹಲವಾರು ಹಿರಿತನದ ಮರ‍್ಯಾದೆಗಳು ನಾ ಡಿಸೋಜರನ್ನು ಹುಡುಕಿಕೊಂಡು ಬಂದಿವೆ. ಕರ‍್ನಾಟಕ ಸಾಹಿತ್ಯ ಅಕಾಡೆಮಿ ಮರ‍್ಯಾದೆಯು ಎರಡು ಸಲ (1988, 1993) ಇವರ ಮುಡಿಗೇರಿದೆ. ಅಲ್ಲದೆ ಗುಲ್ವಾಡಿ ವೆಂಕಟಾವ್ ಬಾಳ್ಗಳ್ಚು(award)(1988), ಸಂದೇಶ್ ಸಾಹಿತ್ಯ ಬಾಳ್ಗಳ್ಚು(1998), ನಿರಂಜನ ಸಾಹಿತ್ಯ ಬಾಳ್ಗಳ್ಚು(2003), ಆಳ್ವಾಸ್ ನುಡಿಸಿರಿ ಬಾಳ್ಗಳ್ಚು(2006), ವರ‍್ದಮಾನ ಬಾಳ್ಗಳ್ಚು(2006), ಚಿತ್ರದುರ‍್ಗದ ಬ್ರುಹನ್ಮಟದಿಂದ ಶಿವಮೂರ‍್ತಿ ಮುರುಗಾ ಶರಣ ಬಾಳ್ಗಳ್ಚು(2011), ಕೇಂದ್ರಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಬಾಳ್ಗಳ್ಚು(2011), ಮಾಸ್ತಿ ಬಾಳ್ಗಳ್ಚು(2012), ಬಟ್ಕಳ ತಾಲ್ಲೂಕು ಎರಡನೇ ಸಾಹಿತ್ಯ ಸಮ್ಮೇಳನದ ಹಿರಿಪದ (2006), ಬೊಂಬಾಯಿಯ ಇಡೀ ಇಂಡಿಯಾ ಸಂಸ್ಕ್ರುತಿ ಸಮ್ಮೇಳನದ ಹಿರಿಪದ (2006), ಕನ್ನಡ ದೇಶೋತ್ಸವ ಬಾಳ್ಗಳ್ಚು(1997), ಮತ್ತು ಕುವೆಂಪು ಓದುಮನೆ ಗವುರವ ಡಾಕ್ಟರೇಟ್ (2007) ಮುಂತಾದ ಹೊನ್ನಿನ ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ನಾ. ಡಿಸೋಜರವರಿಗೆ ಒಳಿತಾಗಲಿ.

ನಾ ಡಿಸೋಜರ ಬಗೆಗೆ ಮತ್ತಶ್ಟು ತಿಳಿಯಬೇಕೆನ್ನುವವರು ಈ ಹೊತ್ತಿಗೆಗಳನ್ನು ನೋಡಬಹುದು. ಸಾಗರದ ವಿಲಿಯಂ ಅವರು ಬರೆದಿರುವ “ನಾ. ಡಿಸೋಜ ಬದುಕು ಬರಹ”, ಸರ‍್ಪರಾಜ ಚಂದ್ರಗುತ್ತಿಯವರು ಬರೆದಿರುವ “ನಾ. ಡಿಸೋಜ ಎಂಬ ಶರಾವತಿಯ ನಾಲ್ಕು ಜಲದಾರೆಗಳು”, “ಮಲೆನಾಡಿಗ” ಡಾ. ನಾ. ಡಿಸೋಜ ಸಾಹಿತ್ಯ ಕುರಿತ ಚಿಂತನ ಮಂತನ ಹಾಗೂ “ಬುತ್ತಿ” ನಾ. ಡಿಸೋಜರ ಬದುಕಿನ ಒಳ ನೋಟಗಳು.

(ಚಿತ್ರ: kodagunews.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.