ಏನಿದು Stagflation!?

– ಚೇತನ್ ಜೀರಾಳ್.

ಬಾರತದಲ್ಲಿ ಇತ್ತೀಚಿಗೆ ಹಣಕಾಸಿನ ಸ್ತಿತಿಗತಿಯಲ್ಲಿ ಆಗುತ್ತಿರುವ ಬದಲಾವಣೆಯನ್ನು ನೋಡುತ್ತಿರುವ ಅರಿಗರು ಎಚ್ಚರಿಕೆಯಿಂದ ಆರ‍್ತಿಕತೆಯ ನಡಾವಳಿಗಳನ್ನು ಗಮನಿಸುತ್ತಿದ್ದಾರೆ, ಕಾರಣ ಬಾರತದ ಹಣಕಾಸಿನ ಮಟ್ಟ ಸ್ಟ್ಯಾಗ್ಪ್ಲೇಶನ್ (Stagflation) ಹಂತ ತಲುಪುವ ಸಂಬವವಿದೆ ಎನ್ನುವುದು ಅವರ ಎಣಿಕೆ.

ನಾವು ಇಲ್ಲಿಯವರೆಗೂ ಹೆಚ್ಚಾಗಿ ಇನ್ಪ್ಲೇಶನ್ (Inflation) ಮತ್ತು ರಿಸೆಶನ್ (Recession) ಮತ್ತು ಡಿಪ್ರೆಶನ್ (Depression) ಬಗ್ಗೆ ಕೇಳಿದ್ದೇವೆ ಮತ್ತು ತಿಳಿದುಕೊಂಡಿದ್ದೇವೆ. ಹಾಗಿದ್ರೆ ಈ ಸ್ಟ್ಯಾಗ್ಪ್ಲೇಶನ್ ಅಂದರೇನು? ಇದು ಮೇಲೆ ಹೇಳಿದವುಕ್ಕಿಂತ ಹೇಗೆ ಬೇರೆ? ಇದರಿಂದ ನಮಗೆ ಲಾಬವೇ ಅತವಾ ನಶ್ಟವೇ? ಇದು ಬಾರತದಲ್ಲಿ ಮಾತ್ರವೇ ಆಗುತ್ತಿದೆಯೇ? ಮುಂದೆ ನೋಡೋಣ.

ಸ್ಟ್ಯಾಗ್ಪ್ಲೇಶನ್ ಅಂದರೇನು?

ಇಂಗ್ಲಿಶನಲ್ಲಿ Stagflation ಪದವನ್ನು Stagnant (ನಿಂತ) ಮತ್ತು Inflation (ಹಣದುಬ್ಬರ) ಪದಗಳನ್ನು ಕೂಡಿಸಿ ಹುಟ್ಟುಹಾಕಲಾಗಿದೆ. ಇದೇ ಬಗೆ ಬಳಸಿ ’Stagflation’ ಪದಕ್ಕೆ ಕನ್ನಡದಲ್ಲಿ ನಿಂತುಬ್ಬರ ಅನ್ನಬಹುದು.

stagflation-representation

 (ನಿಂತುಬ್ಬರ/Stagflation ಕುರಿತು ತಿಳಿಸುತ್ತಿರುವ ತಿಟ್ಟ)

ಹಣಕಾಸು ಅರಿಮೆ ಗೊತ್ತಿರುವವರಿಗೆ ನಿಂತುಬ್ಬರ (Stagflation) ಅನ್ನುವುದನ್ನು ಕೇಳಿದರೆ ಕೆಟ್ಟ ಶಕುನ ಕೇಳಿದಂತೆ ಯಾಕಂದರೆ ಅದು ಆ ದೇಶದ ಅತವಾ ನಾಡಿನ ಹಣಕಾಸಿನ ಕೆಟ್ಟ ಸ್ತಿತಿಯ ಬಗ್ಗೆ ಹೇಳುತ್ತಿದೆ ಎಂದು ಅರ‍್ತ. ನಿಂತುಬ್ಬರದ ಮುಕ್ಯ ಲಕ್ಶಣಗಳೆಂದರೆ ಹೆಚ್ಚಿನ ಕೆಲಸಗಳಿಲ್ಲದಿರುವುದು, ನಿದಾನಗತಿಯ ಆರ‍್ತಿಕತೆಯ ಬೆಳವಣಿಗೆ ಮತ್ತು ಸಿಕ್ಕಾಪಟ್ಟೆ ಬೆಲೆಯೇರಿಕೆ. ಈ ಪದವನ್ನು 1970 ರಲ್ಲಿ ಅಮೇರಿಕ ದೇಶದಲ್ಲಿ ಆಗಿದ್ದ ನಿದಾನಗತಿಯ ಬೆಳವಣಿಗೆಯ ಸಮಯದಲ್ಲಿ ಹುಟ್ಟುಹಾಕಲಾಗಿತ್ತು.

ಯಾವಾಗ ಒಂದು ದೇಶದ ಆರ‍್ತಿಕತೆಯ ಬೆಳವಣಿಗೆ ನಿಂತಿರುತ್ತದೋ ಅಂದರೆ ಆ ದೇಶದ ಜಿಡಿಪಿಯ ಬೆಳವಣಿಗೆ ತುಂಬಾ ಕಡಿಮೆ ಮಟ್ಟದಲ್ಲಿ ಬೆಳಯುತ್ತಿರುತ್ತದೆ ಅತವಾ ಕುಸಿಯುತ್ತಿರುತ್ತದೆ. ಈ ನಿಂತ ಬೆಳವಣಿಗೆಯ ಪರಿಣಾಮ ಜನರಿಗೆ ಕೆಲಸಗಳು ಸಿಗದೇ ಹೋಗುತ್ತವೆ. ದುಡ್ಡು ಉಳಿಸಲು ಉದ್ದಿಮೆಗಳು ಜನರನ್ನು ಕೆಲಸದಿಂದ ತೆಗೆದು ಹಾಕುತ್ತವೆ. ಇದರಿಂದಾಗಿ ಜನರಿಗೆ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ ಮತ್ತು ಹಣಕಾಸಿನ ಬೆಳವಣಿಗೆಯ ಗತಿ ನಿದಾನವಾಗುತ್ತದೆ.

ಒಂದು ದೇಶದ ಹಣಕಾಸಿನ ಬೆಳವಣಿಗೆಯ ಗತಿ ನಿದಾನವಾಗುವುದು ಸಾಮಾನ್ಯವಾದ ವಿಶಯ. ಹಣಕಾಸಿನ ಸ್ತಿತಿಗತಿಯ ಬಗ್ಗೆ ಮಾಡಿರುವ ಎಣಿಕೆಗಳು ತಪ್ಪಾದಾಗ, ಮಾರುಕಟ್ಟೆ ತನ್ನ ಎಂದಿನ ಲಯ ಕಂಡುಕೊಳ್ಳುವುದಕ್ಕೆ ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಈ ಮರುಹೊಂದಾಣಿಕೆಯ ಸಮಯದಲ್ಲಿ ಮಾರುಕಟ್ಟೆ ತಳಮಳವನ್ನು ಅನುಬವಿಸುತ್ತದೆ ಮತ್ತು ಜನರ ಮೇಲೂ ಇದರ ಪರಿಣಾಮ ಬೀರುತ್ತದೆ. ಇದನ್ನು ’ಆರ‍್ತಿಕ ಹಿಂಜರಿಕೆ’ (Recession) ಎಂದು ಕರೆಯುತ್ತಾರೆ.

ಈ ಮೇಲೆ ಹೇಳಿದ ಆರ‍್ತಿಕ ಹಿಂಜರಿಕೆ ಮತ್ತು ನಿಂತುಬ್ಬರ ಎರಡೂ ಒಂದೇನಾ ಅನ್ನುವ ಪ್ರಶ್ನೆ ನಮಗೆ ಎದುರಾಗಬಹುದು? ಆದರೆ ಇವೆರಡರ ನಡುವೆ ವ್ಯತ್ಯಾಸವಿದೆ. ನಿಂತುಬ್ಬರದಲ್ಲಿ ನಿದಾನಗತಿಯ ಬೆಳವಣಿಗೆಯ ಜೊತೆ ಜೊತೆಗೆ ಹೆಚ್ಚಿನ ಬೆಲೆಯೇರಿಕೆಯು ಸೇರಿರುತ್ತದೆ. ಬೆಲೇಯೇರಿಕೆ ಎಂದರೆ ಮಾರುಕಟ್ಟೆಯಲ್ಲಿರುವ ಸಾಮಾನು ಮತ್ತು ಸೇವೆಗಳ ಬೆಲೆ ಹೆಚ್ಚಾಗುವುದು ಇದಲ್ಲದೆ ಜನರ ಕೊಳ್ಳುವ ಶಕ್ತಿಯು ಕಡಿಮೆಯಾಗುತ್ತಿದೆ ಎನ್ನುವ ಅರ‍್ತವನ್ನು ಸಹ ನೀಡುತ್ತದೆ. ಸಾಮಾನ್ಯದ ವರ್‍ಶಗಳಲ್ಲಿ ಶೇ ಎರಡರಿಂದ ಮೂರರಶ್ಟು ಬೆಲೆಯೇರಿಕೆಯಾಗುತ್ತದೆ. ಇದು 5 ಕ್ಕಿಂತ ಹೆಚ್ಚು ಅತವಾ 10 ಕ್ಕೆ ಮುಟ್ಟಿದರೆ ಪರಿಸ್ತಿತಿ ಕಯ್ ಮೀರಿದೆ ಎಂದೇ ಹೇಳಬೇಕು.

ಹಾಗಾಗಿಯೇ, ನಿಂತುಬ್ಬರ ಎಂದರೆ ಅಪಾಯಕಾರಿ. ನೀವೇ ಊಹಿಸಿಕೊಳ್ಳಿ, ಬಾರತದ ಹಣಕಾಸಿನ ಮಟ್ಟ ನಿದಾನವಾಗಿ ಕುಸಿಯುತ್ತಾ ಸಾಗುತ್ತಿದೆ ಮತ್ತು ಅದೇ ಸಮಯದಲ್ಲಿ ಮಿತಿಮೀರಿದ ಬೆಲೆಯೇರಿಕೆ ಆಗುತ್ತಿದೆ. ಜನರಿಗೆ ಕೆಲಸಗಳಿಲ್ಲದೇ ಕಂಗಾಲಾಗಿದ್ದಾರೆ, ಜನರ ಹತ್ತಿರ ಇರುವ ದುಡ್ಡ ಸಹ ಕಡಿಮೆ. ಇದಕ್ಕೆ ಬೆಲೆಯೇರಿಕೆಯ ಬಿಸಿ ಮುಟ್ಟಿದರೆ ಜನರ ಹತ್ತಿರವಿರುವ ದುಡ್ಡಿನ ಬೆಲೆಯು ಸಹ ದಿನೇ ದಿನೇ ಕಡಿಮೆಯಾಗುತ್ತ ಸಾಗುತ್ತದೆ. ನೀವು ತಿಂಗಳ ಸಂಬಳ ನೆಚ್ಚಿರುವವರಾದರೆ ಬೆಲೆಯೇರಿಕೆ ನಿಮ್ಮ ಹತ್ತಿರುವಿರುವ ಹಣದ ಬೆಲೆಯನ್ನೇ ಕಡಿಮೆ ಮಾಡುತ್ತದೆ. ನೀವು ಸ್ವಲ್ಪ ದುಡ್ಡು ಉಳಿಸಿದ್ದರೂ ಸಹ ಬೆಲೆಯೇರಿಕೆ ಅದನ್ನು ತಿಂದುಹಾಕುತ್ತದೆ. ಬೆಲೆಯೇರಿಕೆ ಮಾನಸಿಕವಾಗಿ ನಿಮ್ಮನ್ನು ಕುಗ್ಗಿಸಿ ಬಿಡುತ್ತದೆ.

ನಿಂತುಬ್ಬರವನ್ನು ಅರ‍್ತ ಮಾಡಿಕೊಳ್ಳುವುದು ಹೇಗೆ?
ನಿಂತುಬ್ಬರವನ್ನು ಮೊದಲಿಗೆ ಅರ‍್ತ ಮಾಡಿಕೊಂಡಿದ್ದು ಹೆಸರಾಂತ ಅರಿಗ ಮಿಲ್ಟನ್ ಪ್ರಿಡ್ಮನ್ (Milton Friedman). 1970 ರಲ್ಲಿ ಅಮೇರಿಕಾದಲ್ಲಿ ಎದುರಾಗಿದ್ದ ಆರ‍್ತಿಕ ಹಿಂಜರಿತದ ಪರಿಣಾಮ ದೊಡ್ಡದಾಗಿತ್ತು. ಪ್ರಿಡ್ಮನ್ ಅವರು ಇದರ ಮೂಲ ಕಾರಣವನ್ನು ಹುಡುಕಿದ್ದರು. ಅಮೇರಿಕಾದ ಪೆಡರಲ್ ರಿಸರ‍್ವ್ ಅಲ್ಲಿನ ಬೆಲೆಯೇರಿಕೆಯನ್ನು ಹೆಚ್ಚಿಸುವ ಅತವಾ ಇಳಿಸುವ ಶಕ್ತಿ ಹೊಂದಿದೆ ಎಂದು ಹೇಳಿದ್ದರು. ಬೆಲೆಯೇರಿಕೆಗೆ ಮುಕ್ಯ ಕಾರಣ ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದುಡ್ಡು ಓಡಾಡುವುದು.

ಪೆಡರಲ್ ರಿಸರ್‍ವಿನ ಮುಕ್ಯ ಉದ್ದೇಶವೆಂದರೆ ಅಮೇರಿಕಾ ದೇಶದ ಮಾರುಕಟ್ಟೆಯ ಬೆಲೆಯನ್ನು ನಿಯಂತ್ರಿಸುವುದು ಮತ್ತು ಜನರಿಗೆ ಕೆಲಸಗಳನ್ನು ಹುಟ್ಟುಹಾಕುವುದು. ಯಾವಾಗ ಹಣಕಾಸಿನ ಸ್ತಿತಿಯ ಬೆಳವಣಿಗೆ ಚೆನ್ನಾಗಿರುವುದೋ ಆಗ ಪೆಡ್ ನ ಮುಕ್ಯ ಕೆಲಸ ಸಾಲದ ಮೇಲಿನ ಬಡ್ಡಿಯನ್ನು ಹೆಚ್ಚಿಸಿ ಮಾರುಕಟ್ಟೆಯಲ್ಲಿ ಓಡಾಡುತ್ತಿರುವ ದುಡ್ಡಿನ ಚಲಾವಣೆಯನ್ನು ನಿಯಂತ್ರಿಸುವುದು.

ಯಾವಾಗ ಹಣಕಾಸಿನ ಸ್ತಿತಿಯ ಬೆಳವಣಿಗೆ ಕುಸಿಯುವುದೋ ಆಗ ಪೆಡ್ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆಗೊಳಿಸಿ ಸಾಲವನ್ನು ಪಡೆಯಲು ಸಹಾಯ ಮಾಡಿ ದುಡ್ಡಿನ ಚಲಾವಣೆಯನ್ನು ಹೆಚ್ಚಿಸುತ್ತದೆ. ಇಲ್ಲಿ ಪೆಡ್ ನ ಮುಕ್ಯ ಕೆಲಸವೆಂದರೆ ಹಣಕಾಸಿನ ಸ್ತಿತಿಯ ಬೆಳವಣಿಗೆಯನ್ನು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ಮತ್ತು ಬೆಲೆಯೇರಿಕೆ ಕಯ್ ಮೀರಿ ಹೋಗದಂತೆ ತಡೆಯುವುದು.

1960 ರಲ್ಲಿ ಅಮೇರಿಕ ದೇಶದಲ್ಲಿ ಕೆಲಸಗಳನ್ನು ಹೆಚ್ಚಿಸಲು ಪೆಡ್ ಅಲ್ಲಿನ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆಗೊಳಿಸಿ ಮಾರುಕಟ್ಟೆಯಲ್ಲಿ ದುಡ್ಡಿನ ಹೊಳೆಯನ್ನೇ ಹರಿಸಿತು. ಇದರಿಂದಾಗಿ ಮಾರುಕಟ್ಟೆಯಲ್ಲಿರುವ ಸಾಮಾನು ಮತ್ತು ಸೇವೆಗಳಿಗೆ ಹೆಚ್ಚಿನ ಬೇಡಿಕೆ ಬಂದಿತು ಮತ್ತು ಬೆಲೆ ಹೆಚ್ಚಾಯಿತು. ಇದರ ಪರಿಣಾಮ 1970 ರಲ್ಲಿ ಬೆಲೆಯೇರಿಕೆ ಕಯ್ ಮೀರಿ ಹೋಗಿತ್ತು. ಆಗ ಇದನ್ನು ಸರಿದಾರಿಗೆ ತರಲು ಪೆಡ್ ಮತ್ತೂ ಹೆಚ್ಚಿನ ಹಣವನ್ನು ಮಾರುಕಟ್ಟೆಗೆ ಸುರಿಯಿತು, ಇದು ಪೆಡ್ ಮಾಡಿದ ದೊಡ್ಡ ತಪ್ಪಾಗಿತ್ತು. ಇದರ ಪರಿಣಾಮ ಅಮೇರಿಕಾದ ಆರ್‍ತಿಕತೆಯಲ್ಲಿ ಕಾಣತೊಡಗಿತು.

1979ರಲ್ಲಿ ಪೆಡ್ ನ ಹಿರಿಯಾಳುವಾಗಿ ಬಂದ ಪವ್ಲ್ ವೋಕರ್‍ (Paul Volcker) ಪ್ರಿಡ್ಮನ್ ನ ನೀತಿಯನ್ನು ಜಾರಿಗೆ ತಂದರು. ವೋಕರ್‍ ಸಾಲದ ಬಡ್ಡಿಯನ್ನು ಹೆಚ್ಚಿಸುವ ಮೂಲಕ ಮಾರುಕಟ್ಟೆಯಲ್ಲಿ ಹರಿದಾಡುತ್ತಿದ್ದ ಹಣಕ್ಕೆ ಮಿತಿ ಹಾಕಿದರು. ಇದರಿಂದಾಗಿ ಹೆಚ್ಚಿನ ಜನರು ಕೆಲಸಗಳನ್ನು ಕಳೆದುಕೊಂಡರು ಮತ್ತು ಜನರಿಗೆ ಕೆಲಸಗಳು ಇಲ್ಲದಂತಾಯಿತು ಮತ್ತು ಆರ‍್ತಿಕ ಹಿಂಜರಿಕೆ ಉಂಟಾಯಿತು. ಆದರೆ ಇದು ಬೆಲೆಯೇರಿಕೆಯನ್ನು ಸಾಮಾನ್ಯ ಸ್ತಿತಿಗೆ ತಂದಿತು ಮತ್ತು ಅಮೇರಿಕಾದ ಹಣಕಾಸಿನ ಸ್ತಿತಿಗತಿ ಸಾಮಾನ್ಯ ಮಟ್ಟಕ್ಕೆ ಬಂದಿತು.

ಆರ‍್ತಿಕ ಹಿಂಜರಿಕೆಯ ಸಮಯದಲ್ಲಿ ಯಾವಾಗ ಜಿಡಿಪಿ ಯ ಗತಿ ನಿದಾನವಾಗಿರುತ್ತದೋ ಮತ್ತು ಜನರಿಗೆ ಕೆಲಸಗಳು ಇಲ್ಲದಂತಾಗುತ್ತದೋ ಆಗ ನಿಂತುಬ್ಬರ ಆಗುವ ಸಂಬವ ಹೆಚ್ಚಾಗುತ್ತದೆ. ಸ್ಟ್ಯಾಂಡರ‍್ಡ್ ಮಾನೇಟರಿ ಪಾಲಿಸಿಯ ಪ್ರಕಾರ ಪೆಡ್ ಆರ‍್ತಿಕ ಹಿಂಜರಿಕೆಯ ಸಮಯದಲ್ಲಿ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆಗೊಳಿಸಿ ದುಡ್ಡನ್ನು ಜನರು ಬಳಸುವಂತೆ ಮಾಡುತ್ತದೆ. ನಿಂತುಬ್ಬರ ಹಂತವನ್ನು ಮುಟ್ಟದಿರಲು ಮುಕ್ಯವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಹಣವನ್ನು ಒಂದೇ ಸಮಯದಲ್ಲಿ ಹರಿಯದಂತೆ ನೋಡಿಕೊಳ್ಳಬೇಕು.

ಆರ‍್ತಿಕ ಹಿಂಜರಿಕೆ, ನಿಂತುಬ್ಬರ ಹಂತವನ್ನು ಮುಟ್ಟದಿರಲು ಅರಿಗರು ಮಾರುಕಟ್ಟೆಯಲ್ಲಿ ಸಣ್ಣ ಅವದಿಯ ಮತ್ತು ಹೆಚ್ಚಿನ ಅವದಿಯ ಪರಿಣಾಮಗಳನ್ನು ಊಹಿಸಿ ನಿರ‍್ದಾರಗಳನ್ನು ಕಯ್ಗೊಳ್ಳಬೇಕು. ಅರಿಗರ ಮುಂದಿರುವ ಸವಾಲುಗಳೆಂದರೆ ಯಾವಾಗ ಮಾರುಕಟ್ಟೆ ಆರ‍್ತಿಕ ಹಿಂಜರಿಕೆಯಿಂದ ಹೊರಬರುತ್ತಿದೆ ಎಂಬುದನ್ನು ಗುರುತಿಸುವುದು ಮತ್ತು ಮಾರುಕಟ್ಟೆಯಲ್ಲಿರುವ ಹೆಚ್ಚಿನ ಹಣವನ್ನು ಸಣ್ಣ ಪ್ರಮಾಣದಲ್ಲಿ ಹಿಂದೆಗೆಯುತ್ತಾ ಹೋಗುವುದು.

ಈ ಕೆಲಸವನ್ನು ಕಾರುವಕ್ಕಾದ ಸಮಯದಲ್ಲೇ ಮಾಡಬೇಕು. ಒಂದು ವೇಳೆ ಬಡ್ಡಿದರವನ್ನು ಬೇಗನೆ ಏರಿಸಿದ್ದೇ ಆದಲ್ಲಿ ಚೇತರಿಸಿಕೊಳ್ಳುತ್ತಿರುವ ಮಾರುಕಟ್ಟೆಗೆ ದೊಡ್ಡ ಹೊಡೆತ ಬೀಳುತ್ತದೆ. ಅದೇ ರೀತಿ ಬಡ್ಡಿದರವನ್ನು ಏರಿಸುವುದು ತಡವಾದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಹಣದಿಂದಾಗಿ ಹಣದುಬ್ಬರ ಮತ್ತು ಬೆಲೆಯೇರಿಕೆಗೆ ಕಾರಣವಾಗುತ್ತದೆ.

ಈಗ ನಮ್ಮ ಸ್ತಿತಿ ಏನು?
2008 ರ ಆರ‍್ತಿಕ ಹಿಂಜರಿಕೆ ಪರಿಣಾಮದಿಂದಾಗಿ ಹಲವಾರು ಬೆಳೆಯುತ್ತಿರುವ ದೇಶಗಳು ನರಳಿವೆ. ನಿಂತುಬ್ಬರ ನಿಂದ ಸಮಸ್ಯೆ ಎದುರಿಸುತ್ತಿರುವ ದೇಶ ಬಾರತವೊಂದೇ ಅಲ್ಲ. ಈ ಕೆಳಗಿನ ತಿಟ್ಟ ನೋಡಿದರೆ ನಿಮಗೆ ಬ್ರಾಜಿಲ್ ಮತ್ತು ಇಂಡೋನೇಶಿಯಾ ದೇಶದಲ್ಲಿರುವ ಬೆಲೆಯೇರಿಕೆಯ ಸಮಸ್ಯೆಗಳು ಗೊತ್ತಾಗುತ್ತವೆ.

stagflation-table-world

ಬೆಲೆಯೇರಿಕೆಗೆ ಸ್ತಳೀಯವಾದ ಬೇಡಿಕೆ ಮತ್ತು ಪೂರಯ್ಕೆಗಳು ಹೆಚ್ಚಿನ ಮಟ್ಟದಲ್ಲಿ ಕಾರಣವಾಗುತ್ತದೆ. ಸದ್ಯಕ್ಕೆ ಬಾರತ ಇದರ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳಬೇಕಾಗಿಲ್ಲವೆಂದು ಹಾರ‍್ವರ‍್ಡ್ ನ ಹಣಕಾಸಿನ ಅರಿಗರು ಹೇಳುತ್ತಾರೆ.

(ತಿಟ್ಟ ಮೂಲಗಳು: mint, darkgovernment.com), (ಮಾಹಿತಿ ಮೂಲ: money.howstuffworks.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: