ಮೋಸದ ಪ್ರೀತಿ !

 ಹರ‍್ಶಿತ್ ಮಂಜುನಾತ್.

broken_heart1

ಕಾಣದ ಕವಲಿನ ದಾರಿಯಲಿ
ತನ್ನ ಕಾಲ್ಗಳೆ ತನ್ನನು ಸೆಳೆಯಿತ್ತಲ್ಲಾ,
ಕಲ್ಲಿನ ದಾರಿಗೆ ಮುಳ್ಳಿನ ಬೇಲಿಗೆ
ಬಿಗಿಯಾಗಿ ದೇಹವ ಬಿರಿಯಿತ್ತಲ್ಲಾ.

ಗಾಳಿಯ ಇಂಪಲ್ಲಿ ಹಕ್ಕಿಯ ದನಿಯಲಿ
ಸುದ್ದಿಯು ಏನೋ ಸಿಕ್ಕಿತ್ತಲ್ಲ,
ಡಣಡಣಗುಟ್ಟುವ ರಿಂಗಣಕ್ಕೇ
ಕಿವಿಯೆನ್ನ ಸೆಟೆದೂ ನಿಂತಿತ್ತಲ್ಲಾ.

ಮುದ ನೀಡೋ ಮುಂಚೇನೇ ಕಿವಿಯಾಳದಲ್ಲಿ
ವಿಶ ಗಾಳಿಯನ್ನು ಉಗುಳಿತ್ತಲ್ಲಾ, ಕರಗಿಸಲಾಗದೇ ಅರಗಿಸಲಾಗದೇ
ದೇಹವೆಲ್ಲಾ ಹರಡಿತ್ತಲ್ಲಾ .

ಕಾಂತಿಯ ಕಣ್ಣಿನ ಸೆಳೆಯುವ ನೋಟಕೆ
ಮನವಂದು ಕೇಳದೆ ಸೆರೆಯಾಯ್ತಲ್ಲಾ ಮೋಹದ ಬಲೆಯೊಳಗೆ ದಾಹದ ತೆರೆಯೊಳಗೆ
ಪ್ರೇಮವ ಇರಿದಿಂದು ಕೊಂದಿತ್ತಲ್ಲ,

ನಿನ್ನೆಯ ನೆನಪಿನಲಿ ನಾಳೆಯ ಕನಸಿನಲಿ
ಕ್ರೂರತೆಯೊಂದು ಕಂಡಿತ್ತಲ್ಲಾ,
ಉಸಿರಾಗೋ ಮುಂಚೇನೇ ಮುನಿಸಿಕೊಂಡು
ಹುರಿದೆನ್ನ ಹೀಗೇ ಮುಕ್ಕಿತ್ತಲ್ಲಾ.
ಸಂಚಿನ ವ್ಯೂಹಕ್ಕೆ ಬಿಂಕದಿ ಕಯ್ ಹಿಡಿದು
ಕಂಪಿಸದಂತೆ ಎಳೆಯಿತ್ತಲ್ಲಾ, ಕಾಣದ ಲೋಕಕ್ಕೆ ಬೆಂಕಿಯ ಕೂಪಕ್ಕೆ
ಹೇಳದೆ ಎನ್ನನೇ ದೂಡಿತ್ತಲ್ಲಾ.

ಅವರವರ ನೇರಕ್ಕೆ ಅವರವರ ನೋಟಗಳು
ಎನ್ನ ಚಯ್ತನ್ಯವನ್ನೇ ಕಸಿಯಿತ್ತಲ್ಲಾ,
ಬೂಮಿಯು ಕೊನೆಯಾಗಿ ನರಕದ ಬಾಗಿಲಲೂ
ಆ ದೇವ ಎನಗೇ ಸಿಗಲೇ ಇಲ್ಲಾ.

(ಚಿತ್ರ: mentalhealthnews.org )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: