ನಾಡಪರ ಆಡಳಿತಗಾರ ಮಿರ‍್ಜಾ ಇಸ್ಮಾಯಿಲ್

– ರತೀಶ ರತ್ನಾಕರ.

mirza_ismail

20ನೇ ನೂರೇಡಿನ ಆರಂಬವು ಕರ‍್ನಾಟಕದ ಪಾಲಿಗೆ ಬಂಗಾರದ ಕಾಲ. ಒಡೆಯರ ಆಳ್ವಿಕೆಯಡಿ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ಕಯ್ಗಾರಿಕಾ ಕ್ರಾಂತಿಯನ್ನು ಹರಿಸಿ, ದೊಡ್ಡ ದೊಡ್ಡ ಕಾರ‍್ಕಾನೆಗಳು, ಅಣೆಕಟ್ಟುಗಳು, ಹಣಮನೆಗಳು ಮತ್ತು ಕನ್ನಡ ಸಾಹಿತ್ಯ ಪರಿಶತ್ತನ್ನು ಕಟ್ಟಿ ಕನ್ನಡ ನಾಡಿನ ಏಳಿಗೆಗೆ ಬದ್ರ ಬುನಾದಿಯನ್ನು ಹಾಕಿಕೊಟ್ಟರು. ವಿಶ್ವೇಶ್ವರಯ್ಯನವರು ಹಾಕಿಕೊಟ್ಟ ಕಯ್ಗಾರಿಕಾ ಕ್ರಾಂತಿಯ ಹಾದಿಯಲ್ಲಿ ಅಶ್ಟೇ ಹುರುಪಿನಿಂದ ಕೆಲಸವನ್ನು ಮುಂದುವರಿಸಿಕೊಂಡು ಹೋದವರು ಸರ್ ಮಿರ‍್ಜಾ ಇಸ್ಮಾಯಿಲ್. ಇವರು ವಿಶ್ವಶ್ವೇರಯ್ಯನವರ ಬಳಿಕ ಒಡೆಯರ ಆಳ್ವಿಕೆಯ ದಿವಾನರಾಗಿದ್ದರು ಮತ್ತು ಕನ್ನಡಿಗರು ಇಂದಿಗೂ ನೆನೆಯಬೇಕಾದ ಕೆಲಸಗಳನ್ನು ಮಾಡಿ ಹೋದವರು.

ಸರ್ ಮಿರ‍್ಜಾ ಇಸ್ಮಾಯಿಲ್ ಅವರು ಹುಟ್ಟಿದ್ದು 24, ಅಕ್ಟೋಬರ್ 1883ರಂದು ಬೆಂಗಳೂರಿನಲ್ಲಿ. ಇವರು ಮತ್ತು ನಾಲ್ವಡಿ ಕ್ರಿಶ್ಣರಾಜ ಒಡೆಯರು ಕಾಲೇಜಿನಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದರು ಎಂಬುದು ವಿಶೇಶ. 1904ರಲ್ಲಿ ಪದವಿಯನ್ನು ಮುಗಿಸಿದ ಇವರು ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ಆಗಿ ಸರಕಾರಿ ಕೆಲಸಕ್ಕೆ ಸೇರಿದರು.

ತನ್ನ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದ ಮಿರ‍್ಜಾ ಅವರಿಗೆ, ನಾಲ್ವಡಿ ಕ್ರಿಶ್ಣರಾಜ ಒಡೆಯರು ಮಯ್ಸೂರು ಸಂಸ್ತಾನದ ಅದಿಕಾರ ವಹಿಸಿಕೊಂಡ ಬಳಿಕ, ಒಡೆಯರ ಕಾಸಗಿ ನೆರವಿಗರಾಗಿರಲು ಕರೆ ಬಂತು. ಸಿಕ್ಕ ಅವಕಾಶವನ್ನು ಒಲ್ಲೆ ಎನ್ನದ ಮಿರ‍್ಜಾ ಅವರು ಮಯ್ಸೂರಿಗೆ ತೆರಳಿ ತಮ್ಮ ಕೆಲಸಕ್ಕೆ ಸೇರಿದರು. ಆ ಹೊತ್ತಿನಲ್ಲಿ, ಒಡೆಯರು ಇವರನ್ನು ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಜೊತೆ ಕೆಲಸಮಾಡಲು ಬಿಟ್ಟರು. ಬುದ್ದಿವಂತರಾದ ಮಿರ‍್ಜಾ ಅವರು ವಿಶ್ವೇಶ್ವರಯ್ಯನವರಿಂದ ಕಯ್ಗಾರಿಕಾ ಕ್ರಾಂತಿಯ ಹಾಗೂ ಆಳ್ಕೆಯ ಕೆಲಸಗಳನ್ನು ಆದಶ್ಟು ಬೇಗ ಕರಗತ ಮಾಡಿಕೊಂಡರು. 1926ರಲ್ಲಿ ಮಯ್ಸೂರು ದಿವಾನಗಿರಿಯಿಂದ ವಿಶ್ವೇಶ್ವರಯ್ಯನವರು ಬಿಡುವು ಪಡೆದರು. ಆಗ ಮಿರ‍್ಜಾ ಅವರನ್ನು ದಿವಾನರನ್ನಾಗಿ ಮಾಡಬೇಕೆಂದು ಒಡೆಯರಿಗೆ ಅವರೇ ಸಲಹೆ ನೀಡಿದರು. ಆ ಸಲಹೆಯಂತೆ ನಾಲ್ವಡಿ ಕ್ರಿಶ್ಣರಾಜ ಒಡೆಯರು ಮಿರ‍್ಜಾ ಅವರನ್ನು ದಿವಾನರನ್ನಾಗಿ ನೇಮಿಸಿದರು. ಅದು ಕರುನಾಡು ಕಂಡ ಮತ್ತೊಂದು ಬಂಗಾರದ ಕಾಲಕ್ಕೆ ಮುನ್ನುಡಿಯಾಗಿತ್ತು.

ಮಿರ‍್ಜಾ ಅವರ ಆಡಳಿತದಲ್ಲಿ ಕೂಡಣದ ಶಾಂತಿ, ಮಂದಿಯ ಒಳಿತು, ನಾಡಿನ ಬೆಳವಣಿಗೆ ಮತ್ತು ಹಣಕಾಸಿನ ಏಳಿಗೆಗೆ ಬಹಳಶ್ಟು ಒತ್ತು ನೀಡಿದರು. ಕನ್ನಡವನ್ನು ಆಡಳಿತ ನುಡಿಯಾಗಿ ಮೊದಲೇ ಬಳಸುತ್ತಿದ್ದರು ಹಾಗಾಗಿ ಕನ್ನಡವು ಮಯ್ಸೂರು ಸಂಸ್ತಾನದ ಪ್ರತಿಯೊಬ್ಬರಿಗೂ ತಿಳಿದಿರಬೇಕೆಂದು ಅದಕ್ಕೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು. ಇನ್ನು ಕಯ್ಗಾರಿಕೆಯ ಸುದ್ದಿಯಲ್ಲಿ ಇವರದು ವಿಶ್ವೇಶ್ವರಯ್ಯನವರಶ್ಟೆ ಆಸಕ್ತಿ. ಬದ್ರಾವತಿ ಕಬ್ಬಿಣದ ಕಾರ‍್ಕಾನೆಯನ್ನು ವಿಸ್ತರಿಸಿ ಉಕ್ಕು ಮತ್ತು ಕಾಗದದ ಕಾರ್‍ಕಾನೆಗಳನ್ನಾಗಿ ಮಾಡಿದರು. ಶಿವಮೊಗ್ಗದಲ್ಲೊಂದು ಸಕ್ಕರೆ ಕಾರ್‍ಕಾನೆ, ಬದನವಾಳದಲ್ಲೊಂದು ಕಾದಿ ನೆಯ್ಗೆಯ ಕೇಂದ್ರ ಹೀಗೆ ಹಲವಾರು ದೊಡ್ಡ ಮಟ್ಟದ ಕಯ್ಗಾರಿಕೆಗಳನ್ನು ಸ್ತಾಪಿಸಿದರು.

ಬೆಂಗಳೂರಿನ ಬೆಳವಣಿಗೆಗೆ ಒತ್ತು ನೀಡಿದ ಇವರು ‘ಬೆಂಗಳೂರು ಟವ್ನ್ ಹಾಲ್’ ಅನ್ನು ಸ್ತಾಪಿಸಿದರು, ಬೆಂಗಳೂರಿನ ಎಲ್ಲಾ ಬಾಗಕ್ಕೂ ಮಿಂಚು ಒದಗಿಸುವ ಏರ‍್ಪಾಡನ್ನು ಮಾಡಿದರು. ಇಂದು ಬೆಂಗಳೂರಿನಲ್ಲಿ ನೋಡುತ್ತಿರುವ ಅತಿ ದೊಡ್ಡ ಕಯ್ಗಾರಿಕೆಗಳಲ್ಲಿ ಒಂದಾದ ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'(ಎಚ್‍ ಎ ಎಲ್)ನ ಸ್ತಾಪನೆಯಾಗಿದ್ದು ಮಿರ‍್ಜಾ ಅವರ ದೆಸೆಯಿಂದಲೇ. ಬೆಂಗಳೂರಿನ ಕಲಾಸಿಪಾಳ್ಯ ಬಸ್ ನಿಲ್ದಾಣ, ಬೆಂಗಳೂರು ಮಾನಸಿಕ ರೋಗಿಗಳ ಆಸ್ಪತ್ರೆ, ಇಂಡಿಯನ್ ಸಯ್ನ್ಸ್ ಅಕಾಡೆಮಿ, ಹತ್ತಿರದ ಚಾಮರಾಜ ಅಣೆಕಟ್ಟಿನಿಂದ ಬೆಂಗಳೂರಿಗೆ ಕುಡಿಯುವ ನೀರಿನ ಏರ‍್ಪಾಡು, ನಗರವನ್ನು ಸುಂದರವಾಗಿಸಲು ಉದ್ಯಾನವನಗಳು ಹೀಗೆ ಹಲವಾರು ಮಂದಿಯೊಳಿತಿನ ಕೆಲಸಗಳನ್ನು ಇವರು ಕಯ್ಗೊಂಡರು.

ಕಾರ‍್ಕಾನೆಗಳನ್ನು ಒಂದೇ ಕಡೆ ಮಾಡಿದರೆ ಪರಿಸರಕ್ಕೂ ಪೆಟ್ಟು ಮತ್ತು ನಾಡಿನ ಎಲ್ಲಾ ಮಂದಿಗೆ ಅವಕಾಶವು ಕಡಿಮೆಯಾಗುವುದೆಂದು ಅರಿತ ಇವರು ಬೆಂಗಳೂರು ಸೇರಿದಂತೆ ನಾಡಿನ ಬೇರೆ ಬೇರೆ ಬಾಗಗಳಲ್ಲಿ ಸಿಮೆಂಟ್, ರಾಸಾಯನಿಕ ಗೊಬ್ಬರ, ಗಾಜು, ಪಿಂಗಾಣಿ, ರೇಶ್ಮೆ, ಮಿಂಚಿನ ಬಲ್ಬುಗಳ ಉದ್ದಿಮೆಗಳನ್ನು ಕಟ್ಟಿದರು. ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚು ಕಾಪಿ ಬೆಳೆ ಬೆಳೆಯುತ್ತಿದ್ದರೂ ಅದನ್ನು ಸರಿಪಡಿಸಿ, ಪುಡಿಮಾಡಿ ಮಾರಲು ಹೊರ ರಾಜ್ಯಕ್ಕೆ ಕಳುಹಿಸಬೇಕಿತ್ತು. ಇದನ್ನು ತಪ್ಪಿಸಲು ಮಿರ‍್ಜಾ ಅವರು ‘ದ ಮಯ್ಸೂರು ಕಾಪಿ ಕ್ಯೂರಿಂಗ್ ವರ‍್ಕ್ಸ್’ ಅನ್ನು ಹುಟ್ಟುಹಾಕಿದರು. ಇದರಿಂದ ನೆಲಸಿಗರಿಗೆ ಕೆಲಸ ಸಿಕ್ಕಿತಲ್ಲದೇ ನಮ್ಮ ನಾಡಿನ ಕಾಪಿಯನ್ನು ಇಲ್ಲಿಯೇ ಸರಿಪಡಿಸುವ ಏರ‍್ಪಾಡು ಸಿಕ್ಕಿತು.

ಕೇವಲ ನಗರ ಬೆಳವಣಿಗೆಗೆ ಗಮನ ಹರಿಸದೆ ಹಳ್ಳಿಗಳ ಉದ್ದಾರಕ್ಕೂ ಇವರು ಒತ್ತುಕೊಟ್ಟರು. ಕನ್ನಂಬಾಡಿ ಅಣಿಕಟ್ಟಿಗೆ ಹೆಚ್ಚಿನ ನಾಲೆಗಳನ್ನು ಕಟ್ಟಿ ಮಂಡ್ಯ ಮತ್ತು ಮಯ್ಸೂರಿನ ಮತ್ತಶ್ಟು ಜಾಗಗಳಲ್ಲಿ ವ್ಯವಸಾಯಕ್ಕೆ ಅನುಕೂಲ ಮಾಡಿಕೊಟ್ಟರು. ಮಯ್ಸೂರು ಸಂಸ್ತಾನದ ಸುಮಾರು 180 ಹಳ್ಳಿಗಳಿಗೆ ಮಿಂಚಿನ ಏರ‍್ಪಾಡನ್ನು ಮಾಡಿಸಿದರು. ಶಿವಮೊಗ್ಗ-ತಾಳಗುಪ್ಪ ಮೀಟರ್ ಗೇಜ್ ಹಾದಿಗೂ ಇವರ ಪರಿಶ್ರಮವಿದೆ.

ಇಂದಿಗೂ ನಾಡಿನ ಮಂದಿಮೆಚ್ಚಿದ ಹೂದೋಟಗಳಲ್ಲಿ ಒಂದಾದ ಕನ್ನಂಬಾಡಿಯ ‘ಬ್ರುಂದಾವನ’ ಹೂದೋಟ ಇವರ ಕನಸಿನ ಕೂಸಾಗಿತ್ತು. ಹೂದೋಟ ಮತ್ತು ಪರಿಸರದ ಚೆಲುವಿನ ಮೇಲೆ ತುಂಬಾ ಒಲವಿಟ್ಟುಕೊಂಡಿದ್ದ ಇವರು ತಮ್ಮ ದಿವಾನಗಿರಿಯ ಹೊತ್ತಿನಲ್ಲಿ ‘ಬ್ರುಂದಾವನ’ದ ಕೆಲಸ ಕಯ್ಗೆತ್ತಿಕೊಂಡು ಮುಗಿಸಿದರು. ‘ಮಯ್ಸೂರು ಮೆಡಿಕಲ್ ಕಾಲೇಜು’ ಇವರ ಮತ್ತೊಂದು ದೊಡ್ಡ ಕೊಡುಗೆ. ಇದಲ್ಲದೇ ಸುಮಾರು 100ಕ್ಕೂ ಹೆಚ್ಚು ಕಲಿಕೆಮನೆಗಳನ್ನು ಬೇರೆ ಬೇರೆ ಜಾಗಗಳಲ್ಲಿ ಕಟ್ಟಿಸಿದರು. ಮಯ್ಸೂರು ಸಂಸ್ತಾನವನ್ನು ಒಡೆಯರ ಕಯ್ಗೆ ಬಿಟ್ಟುಕೊಡಲು ಬ್ರಿಟಿಶ್ ಸರಕಾರವು ಆಗಲೇ 25 ಲಕ್ಶಗಳನ್ನು ಕೇಳಿತ್ತು, ಆಗ ಅವರೊಡನೆ ಪತ್ರ ವ್ಯವಹಾರ ನಡೆಸಿ 10.5 ಲಕ್ಶಕ್ಕೆ ರಾಜಿಮಾಡಿಸಿದರು. ಇದರಿಂದ ಒಡೆಯರು ಬ್ರಿಟಿಶರಿಂದ ಯಾವ ತೊಂದರೆ ಇಲ್ಲದೇ ಆಳ್ವಿಕೆ ನಡೆಸುವಂತಾಯಿತು.

ನಾಡು ಆದುನಿಕತೆಯನ್ನು ಕಾಣಲೆಂದು ಕಯ್ಗಾರಿಕೆಗಳನ್ನು, ನಾಡಿನ ಮಂದಿಯಲ್ಲಿ ಕಲಿಕೆಯನ್ನು ಹೆಚ್ಚಿಸಲು ಕಲಿಕೆಮನೆ ಮತ್ತು ಮೆಡಿಕಲ್ ಕಾಲೇಜನ್ನು, ನಗರವನ್ನು ಬೆಳೆಸಲೆಂದು ಉದ್ದಿಮೆಗಳನ್ನು, ಹಳ್ಳಿಯ ಉತ್ಪನ್ನಗಳಿಗೆ ಒಳ್ಳೆ ಬೆಲೆ ಸಿಗಲೆಂದು ಮತ್ತು ನೆಲಸಿಗರಿಗೇ ಕೆಲಸ ಸಿಗಬೇಕೆಂದು ‘ಮಯ್ಸೂರು ಕಾಪಿ ಕ್ಯೂರಿಂಗ್’ನಂತಹ ಉದ್ದಿಮೆಗಳನ್ನು, ಹಳ್ಳಿಗಳ ಉದ್ದಾರಕ್ಕೆಂದು ಮಿಂಚು ಮತ್ತು ನೀರಾವರಿ ಏರ‍್ಪಾಡನ್ನು ಹೀಗೆ ಹಳ್ಳಿಯಿಂದ ಹಿಡಿದು ನಗರದವರೆಗೆ ಮಂದಿಯ ಏಳಿಗೆಗೆ ಬೇಕಾದ ಎಲ್ಲಾ ಬಗೆಯ ಏರ‍್ಪಾಡನ್ನು ಕಟ್ಟಿದವರು ಮಿರ‍್ಜಾ ಇಸ್ಮಾಯಿಲ್ ಅವರು.

ಮಿರ‍್ಜಾ ಇಸ್ಮಾಯಿಲ್ ಹಾಗೂ ನಾಲ್ವಡಿ ಕ್ರಿಶ್ಣರಾಜ ಒಡೆಯರ್ ಅವರ ಕಾಲವನ್ನು ‘ಮಯ್ಸೂರಿನ ಬಂಗಾರದ ಯುಗ’ ಎಂದು ಕರೆಯಲಾಗುತ್ತದೆ. ಮಿರ‍್ಜಾ ಅವರು ಆಳ್ಕೆಯಲ್ಲಿ ಎಶ್ಟು ನಿಪುಣತೆ ಹೊಂದಿದ್ದರೆಂದರೆ, ಹೆರನಾಡಿನಿಂದ ಬೇರೆ ದೊರೆಮನೆತನದ ದೊರೆಮಕ್ಕಳು ಇವರ ಕಯ್ ಕೆಳಗೆ ಆಳ್ಕೆಯ ವಿಶಯಗಳನ್ನು ಕಲಿಯಲು ಬರುತ್ತಿದ್ದರು. ಇವರ ಆಡಳಿತ ಬಗೆಯನ್ನು ಅಕ್ಕ-ಪಕ್ಕದ ನಾಡುಗಳಲ್ಲದೇ ಆಗಿನ ಬ್ರಿಟಿಶ್ ಅದಿಕಾರಿಗಳೂ ಅವಾಕ್ಕಾಗಿ ನೋಡುತ್ತಿದ್ದರು. ಬ್ರಿಟಿಶ್ ಸರಕಾರದ ದುಂಡು ಮೇಜಿನ ಸಮ್ಮೇಳನ ಒಂದರಲ್ಲಿ ಲಾರ‍್ಡ್ ಸ್ಯಾಂಕಿಯು ‘ಮಯ್ಸೂರು ಸಂಸ್ತಾನವು ಜಗತ್ತಿನಲ್ಲೇ ಒಳ್ಳೆಯ ಆಡಳಿತ ನಡೆಸುತ್ತಿರುವ ನಾಡು’ ಎಂದು ಹೇಳಿದ್ದರು.

1940 ರಲ್ಲಿ ನಾಲ್ವಡಿ ಕ್ರಿಶ್ಣರಾಜ ಒಡೆಯರು ತೀರಿಹೋದರು. ಬಳಿಕ 1941ರಲ್ಲಿ ಮಿರ‍್ಜಾ ಅವರು ತಮ್ಮ ಪದವಿಗೆ ರಾಜೀನಾಮೆ ನೀಡಿದರು. ಮಿರ‍್ಜಾ ಅವರ ರಾಜಕೀಯ ಚಿಂತನೆಗಳು, ಆಳ್ಕೆಯ ನಿಪುಣತೆ, ಶ್ರಮ, ಬುದ್ದಿವಂತಿಕೆ ಮತ್ತು ಮಯ್ಸೂರು ದಿವಾನರೆಂಬ ಅದಿಕಾರ ಹಲವಾರು ನಾಡಪರ ಕೆಲಸಗಳನ್ನು ಮಾಡಿಸಿತು. ವಿಶ್ವೇಶ್ವರಯ್ಯನವರು ಆರಂಬಿಸಿದ ಆದುನಿಕತೆಯ ಯೋಜನೆಯನ್ನು ಅಶ್ಟೇ ಅಳವಿನಿಂದ ಮುಂದುವರಿಸಿಕೊಂಡು ಹೋಗಿ ಮತ್ತಶ್ಟು ಮಂದಿಯೊಳಿತಿನ ಕೆಲಸವನ್ನು ಇವರು ಮಾಡಿದರು. ಕನ್ನಡಿಗರು ಇಂದು ನೋಡುತ್ತಿರುವ ಆದುನಿಕತೆಗೆ ಆಗಲೇ ಅಡಿಗಲ್ಲು ಹಾಕಿಕೊಟ್ಟವರು ಇವರು. ಕನ್ನಡ ಹಾಗೂ ಕನ್ನಡ ನಾಡನ್ನು ತುಂಬಾ ಪ್ರೀತಿಸುತ್ತಿದ್ದ ಇವರು ತಮ್ಮ ಕೊನೆಯ ದಿನಗಳನ್ನು ಕಳೆಯಲು ಅವರ ಒಲವಿನ ನಗರವಾದ ಬೆಂಗಳೂರನ್ನು ಆಯ್ದುಕೊಂಡು ಇಲ್ಲಿಯೇ ತಂಗಿದ್ದರು. 8 ಜನವರಿ 1959ರಲ್ಲಿ ತಮ್ಮ ಕೊನೆಯುಸಿರೆಳೆದರು. ಇವರ ಮಂದಿಯೊಳಿತಿನ ಕೆಲಸಗಳು ಕನ್ನಡಿಗರ ಮನಸ್ಸಿನಲ್ಲಿ ಕೊನೆಯಾಗದಂತೆ ಉಳಿಯಲಿವೆ.

(ಚಿತ್ರ ಸೆಲೆ: ngprints.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. udupavinay says:

    ಬಂಗರಾದ => ಬಂಗಾರದ

ಅನಿಸಿಕೆ ಬರೆಯಿರಿ:

%d bloggers like this: