ನೀನ್ಯಾರೆ?

 ಹರ‍್ಶಿತ್ ಮಂಜುನಾತ್.

shutterstock_105671330

ಮುಂಜಾನೆಯ ಆ ತುಸು ಮಂಜಿನ ನಡುವೆ
ರವಿಯ ತಿಳಿ ಕಿರಣಗಳಂತೆ ನೀ ಬಂದೆ,
ಮವ್ನದಲೇ ಬಳಿ ನಿಂತು ಬರ ಸೆಳೆದು
ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ?

ಅಂಚಿನ ದಾರಿಯಲಿ ಮಿಂಚಿನ ಓಟ ನನದು
ಸಂಚರಿಸಲೂ ಆಗದೇ ಮರುಕಳಿಸಿ ಬಂದೆ, ಅಂತರಾಳವನೇ ಕದಡಿ ಗಾಸಿ ಮಾಡಿ
ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ?

ಪದ ಪದಗಳಿಂದ ಹೊಸ ಬಾವ ಹೊಮ್ಮುತ್ತಿತ್ತು
ಅದಕ್ಕೆಲ್ಲ ಸ್ಪೂರುತಿ ಯಾರೆಂಬ ಕೊರಗೂ ಒಂದಿತ್ತು,
ಸ್ಪೂರ್‍ತಿಯ ಸೆಲೆಯಾಗಿ ನೀನೇ ನಿಂತು
ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ?

ಇರುಳ ಚಂದ್ರನ ತಿಂಗಳ ಬೆಳಕು ನೀನೆಂದೆ
ಹಗಲ ಸೂರಿಯನ ಹೊಳೆವ ಕಾಂತಿ ನೀನೆಂದೆ,
ಹಗಲು ಹರಿದು ಇರುಳು ಕವಿಯುವಾಗ ಮರೆಯಾಗಿ
ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ?

ಗೊತ್ತುಗುರಿ ಇಲ್ಲದೆ ನಿನಗಾಗಿ ಅಲೆದಾಡಿದೆ
ಎಲ್ಲರ ಮೊಗದಲೂ ನಿನ್ನನೇ ಹುಡುಕಾಡಿದೆ,
ದಾರಿ ಹೊಸೆದು ಹೆಜ್ಜೆ ಮರೆಯಾದರೂ ನೀನಿಲ್ಲ
ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ?

ಮರುಳು ಪ್ರೇಮಿ ನಾನು ಯಾತನೆ ಜೋರಾಗಿದೆ
ಕಯ್ ಚಾಚಿ ಸಂತಯ್ಸಲು ನಿನ್ನ ತೋಳಿಲ್ಲದಾಗಿದೆ,
ಒಮ್ಮೆ ನಿನ್ನ ನೆರಳು ಕಂಡರು ಚಿರ ರುಣಿ ನಾನು
ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ?

ಬಿರಿದ ತಾವರೆಯ ನಿನ್ನ ಮುಡಿಗಿಡಬೇಕೆನ್ನೋ ಕನಸು
ಕನಸುಗಳ ಕೊನರಿಂದ ತುಸು ಬಾರವೇ ನನ್ನ ಮನಸು,
ಕನಸು ಮನಸುಗಳ ಗರ್‍ಶಣೆಗೆ ಕೊನೆಯೆಂದು ತಿಳಿಸು
ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ?

ಪ್ರತಿದಿನ ಪ್ರತಿಕ್ಶಣ ನಿನ್ನ ಬರುವಿಕೆಗೆ ಪರಿತಪಿಸಿದೆ
ನೆನೆ ನೆನೆದು ತನು ಮನವೆಲ್ಲ ಗೊಂದಲದ ಗೂಡಾಗಿದೆ,
ನಿನ್ನಿಂದ ನನ್ನ ಶೋಕಗೀತೆಯೂ ಪ್ರೇಮಗೀತೆಯಾಗಿದೆ
ಹೆಸರೂ ಹೇಳದೆಯೇ ಹೋದವಳೇ ನಿನಗಾಗಿಯೇ, ಹೇಳೇ ನೀನ್ಯಾರೇ ?

(ಚಿತ್ರ: www.blisstree.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: