ಮಂದಿಯಾಳ್ವಿಕೆಯ ‘ಹನಿ’ಗಳು
(1)
ಬೇರ್‍ಮೆಯ ಬೆಂಕಿಯ ಹೊತ್ತಿಸಿ ಒಳಗೊಳಗೆ
ಒಂದಾದ ನಾಡನ್ನು ಒಡೆಯುವ ಹಮ್ಮುಗೆ|
ಹುನ್ನಾರ ಹೊಸೆದಿದೆ ಮಂದಿಯಾಳ್ವಿಕೆಯ ಕೊಲೆಗೆ
‘ಹೂ’ ಕೂಡ ‘ಕಯ್’ ಜೋಡಿಸಿತು ಕೊನೆಗೆ!
(2)
ಬಡಗದಿಂದ್ಯಾರೋ ಬಂದಿಳಿದ ಇಲ್ಲಿಗೆ
ಬಾಯಿಬಡಿದು ಕೊಂಡು ಹೋದನು ಕೊನೆಗೆ
ಅದು ಅವನ ನುಡಿಯೇ ಅಲ್ಲ
ಇಲ್ಲಿಯವನ ನುಡಿಯಂತು ಮೊದಲೇ ಅಲ್ಲ|
“ಉಗೇ… ಉಗೇ… ” ಎಂದರೋ ಮಂಕು ಬಡಿದವರೆಲ್ಲ!
(3)
ಕರುನಾಡ ಏಳಿಗೆಗೆ ಏನಯ್ಯ ಮಾಡುವೆ?
ಕನ್ನಡದ ಬೆಳವಣಿಗೆ ಹೇಗಯ್ಯ ಗುರುವೆ?
ಕನ್ನಡಿಗನ್ ಉದ್ದಾರಕೆನೆಲ್ಲ ಕೊಡುವೆ?
ಕೇಳದಿರು ಎಂದೆಂದು ಮೇಲಿನ ಗೊಡವೆ
ಕೇಳಿದರೆ ನೀ ದೇಶದ್ರೋಹಿಯೇ ಆಗುವೆ!
(4)
ಕಲ್ಲಿಗೆ ಗುಡಿಯ ಕಟ್ಟಲೊಬ್ಬ
ಹೆರನುಡಿಯ ಹೇರಲೊಬ್ಬ
ಜಾತಿಯ ಜೊತೆಗೊಬ್ಬ, ದರ್‍ಮದ ಕಾವಲಿಗೊಬ್ಬ
ಇವರೊಳು, ನಾಡು-ನುಡಿ ಕಟ್ಟಲು ಬಂದವನ ನಾಕಾಣೆ, ನನ್ನಾಣೆ!
(5)
ಮುದ್ದೆಯಿಡಿ ಇದ್ದೊಡೆ ನುಂಗಲು ಬಲು ಕಶ್ಟ
ತುತ್ತು ಮಾಡುತಿಹರು ಕಿತ್ತು ಹೆರಗಿನ ಆಳ್ಕೆಗಳು
ನಮ್ಮತನ ಮುಳುಗಿಸಿ ನಾಡನ್ನೆ ನುಂಗಲು!
(6)
ಅಂದೆಂದೋ ಅವನು ಅವಳ ಸೀರೆಯೆಳೆದ
ಅದು ತುಂಬಿದ ಸಬೆಯಲ್ಲಿ|
ಇಂದೂ ಮಂದಿಯಾಳ್ವಿಕೆಯ ಮಾನ ಕಳೆದ
ಅಗುಳಿ ಹಾಕಿದ ಲೋಕಸಬೆಯಲ್ಲಿ!
(7)
ಮಂದಿಯಾಳ್ವಿಕೆಗೆಂದು ಬರೆದ
ಸಂವಿದಾನದ ಹೊತ್ತಗೆಯಲ್ಲಿ ಅಲ್ಲಲ್ಲಿ ಗೆದ್ದಲು
ಹಕ್ಕುಗಳ ಹಾಳೆಗಳ ಹರಿದರಿದು ತಿನ್ನಲು!
ಇತ್ತೀಚಿನ ಅನಿಸಿಕೆಗಳು