ಕುದುರೆಮುಕದ ಸುತ್ತ ಒಂದು ನೋಟ
ಕೆಲಸದ ಒತ್ತಡಗಳ ನಡುವೆ ಬಿಡುವಿನ ಸಮಯದಲ್ಲಿ ಪ್ರವಾಸಕ್ಕೆ ತೆರಳುವುದು ಮನಸ್ಸಿಗೆ ಉಲ್ಲಾಸ, ಸಂತಸವನ್ನು ನೀಡುತ್ತದೆ. ಇನ್ನು ಕೆಲವರಿಗೆ ಕಾಲ್ನಡಿಗೆಯ ತಿರುಗಾಟಕ್ಕೆ ಹೋಗುವುದೆಂದರೆ ಅದೇನೋ ಒಂದು ಕುತೂಹಲ, ಅಲ್ಲದೇ ಒಂದು ವಿಶೇಶ ಅನುಬವವನ್ನೂ ಕೊಡುತ್ತದೆ. ಹೀಗಿರುವಾಗ ಇವೆರಡಕ್ಕೂ ಹೇಳಿಮಾಡಿಸಿದ ಜಾಗವೆಂದರೆ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಕ. ಕುದುರೆಮುಕ ಪಡುವಣ ಬೆಟ್ಟಗಳಲ್ಲಿನ ಸುಂದರ ಪ್ರಾಕ್ರುತಿಕ ತಾಣ. ಒಂದು ಕಾಲದಲ್ಲಿ ಕಬ್ಬಿಣದ ಅದಿರನ್ನು ವಿಶ್ವದೆಲ್ಲೆಡೆ ಸರಬರಾಜು ಮಾಡುತ್ತಾ ಬರಿದಾಗಿಹೋಗುತ್ತಿದ್ದ ಈ ಹಸಿರ ಸ್ವರ‍್ಗ, ಪರಿಸರಪ್ರಿಯರ ನಿರಂತರ ಹೋರಾಟದಿಂದಾಗಿ ಇಂದು ಸುಂದರ ಹಸಿರು ತಾಣವಾಗಿ ಕಾಡು ಉಳಿಸುವ ರಾಶ್ಟ್ರೀಯ ಉದ್ಯಾನವಾಗಿ ಮೆರೆಯುತ್ತಿದೆ. ಕಾಲ್ನಡಿಗೆಯ ತಿರುಗಾಟಕ್ಕೆ ಬರುವವರಿಗೆ ಅವರವರ ಶಕ್ತಿಗನುಸಾರವಾಗಿ ಸಣ್ಣ ಗಡಿಕಲ್ ಗಟ್ಟದಿಂದ ಎತ್ತರದ ಕುದುರೆಮುಕ ಬೆಟ್ಟದವರೆಗೆ ಬಗೆ ಬಗೆಯ ಕಾಲ್ನಡಿಗೆಯ ದಾರಿಗಳನ್ನೂ, ಜೊತೆ ಜೊತೆಗೆ ಕೆಲವೊಂದು ಸಣ್ಣ ಪುಟ್ಟ ಜಲಪಾತಗಳನ್ನೂ, ನಯ್ಸರ‍್ಗಿಕ ರಮಣೀಯ ನೋಟಗಳನ್ನೂ, ಸುಂದರ ಹೂಬನಗಳನ್ನೂ ಹೊಂದಿರುವ ಉತ್ತಮಸ್ತಳ ಕುದುರೆಮುಕ.
ವಿಶಾಲ ಹಾಗೂ ಅಗಲವಾಗಿ ಹಬ್ಬಿದ ಸುಂದರವಾದ ಬೆಟ್ಟದ ಸಾಲುಗಳು, ಗುಹೆಗಳು, ಕಂದಕ, ಹಳ್ಳಕೊಳ್ಳ ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿವೆ. ಚಿಕ್ಕದಾದ ಬೆಟ್ಟಗಳ ಕಾಡಿನ ಕವಲು ದಾರಿಯಲ್ಲಿ ನಡೆದೇ ಸಾಗಿದರೆ, ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ದ ತಿಳಿನೀರಿನ ಜರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು, ಚಿಲಿಪಿಲಿ ಕೂಗುವ ಹಕ್ಕಿಯ ಬಳಗ. ಇನ್ನೂ ಕೆಲವು ಜಾಗಗಳು ‘ಪರ‍್ಯಟಕರ ಪುಸ್ತಕ’ಗಳಲ್ಲಿ ದಾಕಲಾಗದೆ ಇರುವ ಪರಿಸರಗಳೂ ಇವೆ. ಹೆಸರು ಗೊತ್ತಿಲ್ಲದ್ದ ಅದೆಶ್ಟೋ ಗಿಡಮರ ಬಳ್ಳಿಗಳು,ಹೂ-ಕಾಯಿಗಳು. ಬಣ್ಣ ಬಣ್ಣದ ನೆಲದ ಮಣ್ಣುಗಳು ಇಲ್ಲಿನ ವಿಶೇಶಗಳಲ್ಲೊಂದು. ಪಡುವಣ ಬೆಟ್ಟದ ಒಟ್ಟೂ ಜಾಗದ ಶೇಕಡಾ 60 ಬಾಗ ಪೂರ‍್ತಿ ಕರ‍್ನಾಟಕದಲ್ಲಿದೆ ಎಂಬುದೇ ಕರ‍್ನಾಟಕದ ಚೆಲುವಿಗೆ ಮತ್ತೊಂದು ಕಾರಣ. ಕುದುರೆಮುಕ ರಾಶ್ಟ್ರೀಯ ಉದ್ಯಾನ, ಜೋಗ, ಆಗುಂಬೆ, ಸೋಮೇಶ್ವರ ಮುಂತಾದ ಪ್ರದೇಶಗಳು ಕರ‍್ನಾಟಕಕ್ಕೆ ವಿಶ್ವಮಾನ್ಯ ಸ್ತಾನವನ್ನು ನೀಡಿರುವುದು ಅವು ಸಹ್ಯಾದ್ರಿ ಬೆಟ್ಟದ ಸಾಲುಗಳಿಗೆ ಸೇರಿದ ಪ್ರದೇಶಗಳಾದುದರಿಂದ.
ನಮ್ಮ ಕರ‍್ನಾಟಕದ ಹೆಮ್ಮೆಯಾದ ಇದು ಹಲವಾರು ವಿಶೇಶ ಬಗೆಗಳಿಗೆ ಸೇರಿದ ಮರ, ಗಿಡ ಹಾಗೂ ಆಯುರ‍್ವೇದೀಯ ಗಿಡಗಳಿಗೂ, ವಿಶೇಶ ಬಗೆಗಳಿಗೆ ಸೇರಿದ ಕಾಡು ಪ್ರಾಣಿಗಳ ಆಶ್ರಯತಾಣ. ಬಾರತದ ಒಟ್ಟೂ ಜಾಗದ ಕೇವಲ 5% ಬಾಗವನ್ನು ಮಾತ್ರವೇ ಈ ಬೆಟ್ಟಗಳ ಸಾಲುಗಳು ಬರಿಸಿದರೂ ಬಾರತದಲ್ಲಿ ಮಾತ್ರವೇ ಕಾಣಸಿಗುವ ವಿಶೇಶ ಜಾತಿಯ ಸಸ್ಯ ಗುಂಪುಗಳ ಹಾಗೂ ಗಿಡಮೂಲಿಕೆಗಳ ಒಟ್ಟೂ ಶೇಕಡಾವಾರು ಪ್ರಮಾಣದಲ್ಲಿ 92 ರಶ್ಟನ್ನು ಇದೊಂದೇ ಬರಿಸುತ್ತದೆ. ಅಂದರೆ ಸುಮಾರು 4000 ವಿಶೇಶ ಜಾತಿಯ ಸಸ್ಯ ಗುಂಪುಗಳಿಗೆ ಮೂಲಸ್ತಾನ ಇದು. ಒಟ್ಟಿನಲ್ಲಿ ಕುದುರೆಮುಕದ ಪ್ರಾಕ್ರುತಿಕ ಸೌಂದರ‍್ಯವನ್ನು ಎಶ್ಟು ನೋಡಿದರೂ ಕಣ್ಣಿನ ಹಸಿವು ಮಾತ್ರ ತೀರುವುದಿಲ್ಲ.
ಕುದುರೆಮುಕದಲ್ಲಿ ಕಣ್ಮನಗಳನ್ನು ಸೆಳೆಯುವ ತಾಣಗಳು
1) ಕುದುರೆಮುಕ ಶ್ರುಂಗ :
ಕುದುರೆಮುಕಕ್ಕೆ ಪ್ರವಾಸ ಕಯ್ಗೊಳ್ಳುವ ಪ್ರವಾಸಿಗರನ್ನು ಸೆಳೆಯುವ ಇನ್ನೊಂದು ಮನಮೋಹಕ ಜಾಗವೆಂದರೆ, ಕುದುರೆಮುಕ ಶ್ರುಂಗ. ಹಸಿರ ಹಾಸಿಗೆಯಲ್ಲಿ ಮಲಗಿ ಹೊರಳಾಡಿ ಸಂಬ್ರಮಿಸ ಬೇಕೆಂದಿರುವವರು ಬೇಟಿ ಕೊಡಲೇಬೇಕಾದ ಜಾಗ ಕೂಡ. ಇದು ಸಮುದ್ರ ಮಟ್ಟದಿಂದ ಹೆಚ್ಚುಕಮ್ಮಿ 1894 ಮೀಟರುಗಳಶ್ಟು ಎತ್ತರದ ಪ್ರದೇಶದಲ್ಲಿದೆ. ಕಾಡಿನ ಒಳಗೆ ಕಾಲ್ನಡಿಗೆಯಲ್ಲಿ ತಿರುಗಾಟಕ್ಕೆ ಹೋಗುವವರಿಗೆ ಇದು ಉತ್ತಮವಾದ ತಾಣ. ಈ ಪ್ರದೇಶವನ್ನು ಬೇಟಿ ಮಾಡಿದಾಗ, ವಿಶಾಲವಾದ ಗುಡ್ಡಗಳು ಮತ್ತು ಅವು ಒಂದಕ್ಕೊಂದು ಕೊಂಡಿಯನ್ನು ಹೊಂದಿರುವುದು ಅರಿವಾಗುತ್ತದೆ.
ಇಲ್ಲಿನ ಇನ್ನೊಂದು ವಿಶೇಶವೆಂದರೆ, ಕುದುರೆಮುಕ ಶ್ರುಂಗವು ಸುಂದರವಾದ ಮತ್ತು ನೆನಪಿಡುವಂತಹ ಅರೇಬಿಯನ್ ಸಮುದ್ರದ ನೋಟವನ್ನು ಕಟ್ಟಿಕೊಡುತ್ತದೆ. ಸುಮಾರು 70 ಕಿ.ಮೀ ದೂರದಲ್ಲಿರುವ ಅರಬ್ಬೀ ಸಮುದ್ರವನ್ನು ಇಲ್ಲಿನ ಬೆಟ್ಟದ ತುದಿಯಿಂದ ನೋಡಬಹುದು. ಅಲ್ಲದೇ ಇದು ಬಗೆ ಬಗೆಯ ಜಾತಿಯ ಮರಗಿಡಗಳು ಮತ್ತು ಹೂವುಗಳು, ಹಕ್ಕಿಯ ಗುಂಪುಗಳು, ಹಲವು ರೀತಿಯ ಹಾವುಗಳು, ಬೇರೆ ಬೇರೆ ರೀತಿಯ ಜೀವ ಸಂಪತ್ತುಗಳ ವಾಸಸ್ತಾನವಾಗಿದೆ. ಕುದುರೆಮುಕ ಶ್ರುಂಗದಲ್ಲಿ ಪ್ರವಾಸಿಗರು ಹುಲಿ ಬಾಲದ ಅಳಿಲನ್ನು ಎಲ್ಲಿಬೇಕೆಂದರಲ್ಲಿ ನೋಡಬಹುದು. ಹುಲಿ ಬಾಲದ ಅಳಿಲು ಎಂಬುವುದು ಅಳಿಲಿನ ಬೇರೆ ಬೇರೆ ಜಾತಿಯಲ್ಲಿ ಇದೂ ಒಂದು. ಇದರ ಜೊತೆಗೆ ಹಾರುವ ಅಳಿಲು ಎಂಬ ಅಪರೂಪದ ಅಳಿಲಿನ ಜಾತಿಯು ಕಾಣಸಿಗುತ್ತದೆ.
2) ಗಂಗಾಮೂಲ :-
ಪಡುವಣ ಬೆಟ್ಟಗಳಿಗೆ ಹೊಂದಿಕೊಂಡಂತೆ ಇರುವ ಈ ಗಂಗಮೂಲ ಅತವಾ ವರಹಾ ಬೆಟ್ಟದ ಸಾಲುಗಳು ಕುದುರೆ ಮುಕಕ್ಕೆ ತೀರ ಹತ್ತಿರದಲ್ಲಿದೆ. ಗಂಗಾಮೂಲವು ಗಿರಿದಾಮದಲ್ಲಿ ಹಟ್ಟುವ ತುಂಗಾ, ಬದ್ರಾ, ಮತ್ತು ನೇತ್ರಾವತಿ ಎಂಬ ಮೂರು ನದಿಗಳ ಹುಟ್ಟುವ ಜಾಗವಾಗಿದೆ. ಅಲ್ಲದೇ ಗಂಗಾಮೂಲವು ಸುತ್ತಮುತ್ತ ದಟ್ಟವಾದ ಕಾಡಿನಿಂದ ಸುತ್ತುವರಿಯಲ್ಪಟ್ಟಿದೆ.
3) ಹನುಮನ ಗುಂಡಿ (ಸೂತನಬ್ಬಿ) :-
ಪಡುವಣ ಬೆಟ್ಟದ ಕುದುರೆ ಮುಕದ ಕಾಡಿನ ನಡುವೆ ಕಂಗೊಳಿಸುವ, ಕಣ್ಮನ ಮುದಗೊಳಿಸುವ ನೂರಾರು ರಮಣೀಯ ಜಲದಾರೆಗಳಲ್ಲಿ ಸೂತನಬ್ಬಿಯು ಒಂದು. ತುಂಗಾ ನದಿಯಿಂದ ಮೂಡಿಬರುವ ಈ ಜಲಪಾತ “ಬದ್ರಾ ಅಬಯಾರಣ್ಯ ” ವ್ಯಾಪ್ತಿಯಲ್ಲಿ ಬರುತ್ತದೆ. ಇದು ಕುದುರೆಮುಕದಿಂದ ಸುಮಾರು 8 ಕಿ.ಮೀ ದೂರದಲ್ಲಿದ್ದು, ಕುದುರೆಮುಕದಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಹನುಮಾನ ಗುಂಡಿ ಎನ್ನುವುದು ಜಲಪಾತ ಇರುವ ಜಾಗದ ಹೆಸರು. ಈ ಜಲಪಾತವನ್ನು “ಸೂತನಬ್ಬಿ’ ಎಂದು ಕರೆಯುತ್ತಾರೆ. ಜಲಪಾತ ನೋಡಲು ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಅವಕಾಶಕೊಡಲಾಗಿದೆ. ಈ ಜಲಪಾತವು ಸುಮಾರು 22 ಮೀ ಎತ್ತರದಿಂದ ಹಾಲಿನ ಹೊಳೆಯಂತೆ ದುಮುಕುವುದನ್ನು ನೋಡುವುದೇ ಒಂದು ನಯನ ಮನೋಹರ ಅನುಬವ.
4) ಲಕ್ಯಾ ಅಣೆಕಟ್ಟು :-
ಬದ್ರಾ ನದಿಯ ಸೇರುವ ಉಪನದಿ ಲಕ್ಯಗೆ ಅಡ್ಡವಾಗಿ ಕಟ್ಟಿರುವ ಅಣೆಕಟ್ಟು. ಈ ಅಣೆಕಟ್ಟನ್ನು ಕುದುರೆಮುಕದ ಅದಿರು ಸಂಸ್ತೆಯವರು ಕಟ್ಟಿಸಿದ್ದಾರೆ. ಇದರ ಸುತ್ತಮುತ್ತ ಕಾಣಸಿಗುವ ಬೆಟ್ಟಗುಡ್ಡ ಕಣಿವೆಗಳು, ಗಟ್ಟಪ್ರದೇಶ ತಗ್ಗು, ನೋಡಲು ಬಂದವರ ಕಣ್ಣಿಗೆ ಮುದನೀಡುತ್ತವೆ.
5) ಕುದುರೆಮುಕ ರಾಶ್ಟ್ರೀಯ ಉದ್ಯಾನವನ :-
ಸುಮಾರು 600 ಚ.ಮೀ ಜಾಗದಲ್ಲಿ ಹಬ್ಬಿರುವ ಈ ರಾಶ್ಟ್ರೀಯ ಉದ್ಯಾನ ನಿತ್ಯ ಹಸಿರು ಕಾಡಿಗೆ ಹೆಸರುವಾಸಿಯಾದ ಜಾಗವಾಗಿದೆ. ಈ ತಾಣದಲ್ಲಿ ಹುಲಿಗಳನ್ನು ಕಾಪಾಡುವ ಅಬಿಯಾನವನ್ನು ನೋಡಬಹುದು. ಈ ಕಾಡಿನಲ್ಲಿ ಅನೇಕ ಹಾಲುಣಿಗಳು, ಕಾಡು ನಾಯಿಗಳು, ಕ್ರೂರ ಕಾಡುಪ್ರಾಣಿಗಳಾದ ಚಿರತೆ, ಸಿಂಹ ಮತ್ತು ಹುಲಿಗಳ ಕಾಪಾಡಲಾಗುತ್ತಿದೆ. ಇದಲ್ಲದೆ, ಈ ಕಾಡಿನಲ್ಲಿ ಸಹಜವಾಗಿಯೇ ಬದುಕುತ್ತಿರುವ ಮಂಗಗಳು, ಕಾಡುಹಂದಿಗಳು, ಕಾಡುಕೋಳಿಗಳು, ನವಿಲುಗಳು, ಅಪರೂಪಕ್ಕೆ ಜಿಂಕೆ, ಸಾರಂಗಗಳು ಮತ್ತು ಕಾಡುಕೋಣಗಳು ಕಾಣಸಿಗುತ್ತವೆ.
ಕಾಲ್ನಡಿಗೆಯ ತಿರುಗಾಟ ಮಾಡುವವರ ನೆಚ್ಚಿನ ಆಯ್ಕೆ
ಪಡುವಣ ಬೆಟ್ಟಗಳ ಸಾಲಿನಲ್ಲಿರುವ ಅತ್ಯಂತ ಎತ್ತರದ ಶಿಕರಗಳಲ್ಲಿ ಕುದುರೆಮುಕವೂ ಒಂದು. ಹಾಗಾಗಿ ಇದು ಕಾಲ್ನಡಿಗೆಯಲ್ಲಿ ತಿರುಗಾಟ ಮಾಡುವವರಿಗೆ ಹೇಳಿ ಮಾಡಿಸಿದ ಜಾಗವಾಗಿದ್ದು, ಇದು ಚಿಕ್ಕಮಗಳೂರು ಜಿಲ್ಲೆ ಮತ್ತು ದಕ್ಶಿಣ ಕನ್ನಡ ಜಿಲ್ಲೆಯ ಗಡಿ ಬಾಗದಲ್ಲಿದೆ. ಹೆಚ್ಚಾಗಿ ಕಾಲ್ನಡಿಗೆಯ ತಿರುಗಾಟ ಮಾಡುವವರು ಕಳಸ ಎಂಬ ಊರಿನ ಬಳಿಯ ಸಂಸೆ ಎಂಬ ಹಳ್ಳಿಯಿಂದ ಕಾಲ್ನಡಿಗೆ ಮಾಡುತ್ತಾರೆ. ಇದಲ್ಲದೇ ಬೆಳ್ತಂಗಡಿ ತಾಲೂಕಿನ ಕಿಲ್ಲೂರಿನ ಬಳಿಯಿಂದಲೂ ಕಾಲ್ನಡಿಗೆ ಮಾಡಬಹುದು. ಆದರೆ ಮೊದಲು ಕಾಲ್ನಡಿಗೆಯ ತಿರುಗಾಟ ಮಾಡುವವರು ಅರಣ್ಯ ಇಲಾಕೆಯ ಅನುಮತಿ ಪಡೆಯಬೇಕಾಗುತ್ತದೆ. ಕುದುರೆಮುಕದಲ್ಲಿ 13 ಕಾಲ್ನಡಿಗೆಯ ಜಾಗಗಳನ್ನು ಗುರುತಿಸಲಾಗಿದೆ. ಕಾಲ್ನಡಿಗೆಯ ತಿರುಗಾಟ ಮಾಡುವವರಿಗೆ ಅನುಕೂಲವಾಗುವಂತೆ ಹತ್ತಿರದಲ್ಲೇ ತಂಗುತಾಣಗಳನ್ನು ಕಟ್ಟಲಾಗಿದೆ. ಒಟ್ಟಿನಲ್ಲಿ ಕುದುರೆಮುಕ ಕಾಲ್ನಡಿಗೆಯ ತಿರುಗಾಟ ಮಾಡುವವರಿಗೆ ಹೆಚ್ಚಿನ ಮುದಕೊಡುವುದರಿಂದ ಕಾಲ್ನಡಿಗೆಯ ನೆಚ್ಚಿನ ಆಯ್ಕೆಯಾಗಿದೆ.
‘ಕುದುರೆ ಮುಕ’ವಾದ ಬಗ್ಗೆ
ಕುದುರೆಮುಕ ಊರಿಗೆ ಕುದುರೆಮುಕ ಎಂದು ಹೆಸರು ಬಂದ ಬಗ್ಗೆ ಹಲವರಲ್ಲಿ ಹಲವು ಬಗೆಯ ಅಬಿಪ್ರಾಯಗಳು, ಕತೆಗಳು, ನಂಬಿಕೆಗಳಿವೆ.
1) ಈ ಊರಿಗೆ ಮೊದಲು ‘ಮಲ್ಲೇಶ್ವರ’ ಎಂಬ ಹೆಸರಿತ್ತಂತೆ. ಕಾರಣ ಅಲ್ಲಿ ಮಲ್ಲೇಶ್ವರ ಎಂಬ ದೇವರನ್ನು ನಂಬಲಾಗುತ್ತಿತ್ತಂತೆ. ಹೀಗಿರುವಾಗ ಒಂದು ದಿನ ಮಲ್ಲೇಶ್ವರ ದೇವಸ್ತಾನ ತನ್ನಶ್ಟಕ್ಕೆ ಮಾಯವಾದಾಗ ಹೆದರಿದ ಜನ ಮಲ್ಲೇಶ್ವರ ದೇವರಿಗೆ ಮೊರೆಯಿಟ್ಟರಂತೆ. ಆಗ ದೇವರು ಕುದುರೆ ಮುಕದ ಹಾಗೆ ಕಾಣಿಸಿಕೊಂಡು ಮತ್ತೆ ಮಾಯವಾದರಂತೆ. ಅಲ್ಲಿಂದ ಮಲ್ಲೇಶ್ವರ ಹೆಸರುಹೋಗಿ ಕುದುರೆಮುಕವೆಂಬ ಹೆಸರು ಬಂತಂತೆ.
2) ಇಲ್ಲಿನ ಬೆಟ್ಟವೊಂದು ಚೂಪಾಗಿ ಕುದುರೆಮುಕದಂತೆ ಕಾಣುವುದರಿಂದ ಕುದುರೆಮುಕವೆಂಬ ಹೆಸರು ಬಂತಂತೆ.
3) ಇಲ್ಲಿನ ಬೆಟ್ಟವು ’ಕುದುರೆಯ ಮುಕ’ದ ಹಾಗೆ ಕಾಣಿಸುತ್ತದೆ. ಹೀಗಿರುವಾಗ ಕರಾವಳಿ ಕಡೆಯಿಂದ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿಗೆ ಕುದುರೆಮುಕ ಎಂಬ ಹೆಸರಿಟ್ಟಿದ್ದ ಎಂದು ಅಬಿಪ್ರಾಯಗಳಿವೆ.
ತಂಗಲು ಬೇಕಾದ ಏರ‍್ಪಾಡುಗಳು
ಕುದುರೆಮುಕ ಶ್ರುಂಗದಲ್ಲಿ ಕಾಲ್ನಡಿಗೆಯ ತಿರುಗಾಟ ಮಾಡುವವರಿಗೆ ಮತ್ತು ಪ್ರವಾಸಿಗರಿಗೆ ಉಳಿದುಕೊಳ್ಳಲು ಸೂಕ್ತವಾದ ಏರ‍್ಪಾಡುಗಳಿವೆ. ಹಾಗಾಗಿ ಉಳಿದುಕೊಳ್ಳುವ ಏರ‍್ಪಾಡಿನ ಬಗ್ಗೆ ಪ್ರವಾಸಿಗರು ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಕುದುರೆಮುಕ ಶ್ರುಂಗದ ಹತ್ತಿರದಲ್ಲಿ ಅರಣ್ಯ ಇಲಾಕೆ ಮನೆಗಳು ಮತ್ತು ಅತಿತಿ ಮನೆಗಳು ಲಬ್ಯವಿದೆ. ಕುದುರೆಮುಕ ಸಂಸ್ತೆಗೆ ಸೇರಿದ ಅತಿತ ಮನೆಗೆ ಮುಂಚಿತವಾಗಿ ಮಾತನಾಡಿ ಉಳಿದುಕೊಳ್ಳಲು ಮನೆಯನ್ನು ಗೊತ್ತುಮಾಡಿಕೊಳ್ಳಬಹುದು, ಜೊತೆಗೆ ಅರಣ್ಯ ಇಲಾಕೆಗೆ ಸಂಬಂದಿಸಿದ ಮನೆಗೂ ಕೂಡ ಪ್ರಯತ್ನಿಸಬಹುದು. ಅಲ್ಲದೇ ಹೊರನಾಡು, ದರ‍್ಮಸ್ತಳ ಮತ್ತು ಕುದುರೆಮುಕಗಳ ನಡುವೆ ಕೊಂಡಿಯಾಗಿರುವ ಕಳಸ ಪಟ್ಟಣದಲ್ಲಿ ಹೆಚ್ಚಿನ ಸವ್ಲಬ್ಯಗಳಿದ್ದು, ಕಳಸ ತಲುಪಲು ಸರಕಾರಿ ಮತ್ತು ಕಾಸಗಿ ಬಸ್‌ಗಳು ಸಿಗುತ್ತದೆ.
ಕುದುರೆಮುಕ ತಲುಪಲು ದಾರಿಗಳು
ಮಂಗಳೂರು ಮತ್ತು ಉಡುಪಿ ಕಡೆಯಿಂದ ಬರುವವರು ಕಾರ‍್ಕಳ ದಾರಿಯಾಗಿ ಕುದುರೆಮುಕ ತಲುಪಬಹುದು ಮತ್ತು ಕುದುರೆಮುಕಕ್ಕೆ ಮಂಗಳೂರಿನಿಂದ 97 ಕಿ.ಮೀ ಮತ್ತು ಉಡುಪಿಯಿಂದ 89 ಕಿ.ಮೀ ದೂರವಿದೆ.
ಶಿವಮೊಗ್ಗದಿಂದ ಕುದುರೆಮುಕ 165 ಕಿ.ಮೀ ದೂರದಲ್ಲಿದ್ದು ಶ್ರಿಂಗೇರಿ ಮೂಲಕ ಕುದುರೆಮುಕ ತಲುಪಬಹುದಾಗಿದೆ.
ಬೆಂಗಳೂರು ಮತ್ತು ಮಯ್ಸೂರು ಕಡೆಯಿಂದ ಬರುವವರು ಸಕಲೇಶಪುರಕ್ಕೆ ಬಂದು ಅಲ್ಲಿಂದ ಮೂಡಿಗೆರೆ ಮೂಲಕ ಕುದುರೆಮುಕಕ್ಕೆ ಬರಬಹುದು. ಅಲ್ಲದೆ ದರ‍್ಮಸ್ತಳ ದಾರಿಯಾಗಿಯೂ ಬರಬಹುದಾಗಿದೆ. ಕುದುರೆಮುಕವು ಬೆಂಗಳೂರಿನಿಂದ 340 ಕಿ.ಮೀ ಮತ್ತು ಮಯ್ಸೂರಿನಿಂದ 274 ಕಿ.ಮೀ ದೂರದಲ್ಲಿದೆ.
ಕುದುರೆಮುಕಕ್ಕೆ ಹತ್ತಿರವಿರುವ ಪ್ರವಾಸಿ ತಾಣಗಳು
ಕುದುರೆಮುಕಕ್ಕೆ ಹತ್ತಿರದಲ್ಲಿರುವ ಕಳಸದ ಕಳಸೇಶ್ವರ ದೇವಾಲಯ, ಹೊರನಾಡು ಶ್ರೀ ಅನ್ನಪೂರ‍್ಣೇಶ್ವರಿ ದೇವಾಲಯ, ಶ್ರಿಂಗೇರಿಯ ಶಾರದಾ ಪೀಟ, ಮೂಡಬಿದ್ರೆಯ ಸಾವಿರ ಕಂಬಗಳ ಬಸದಿ, ಕಾರ‍್ಕಳದ ಗೋಳ ಗೊಮ್ಮಟೇಶ್ವರ, ದರ‍್ಮಸ್ತಳ ಶ್ರೀ ಮಂಜುನಾತ ದೇವಾಲಯ, ಸಂಸೆಯ ಚಹಾ ತೋಟ, ಮಂಗಳೂರು ಮತ್ತು ಉಡುಪಿಯ ಕಡಲ ತೀರಗಳು, ಉಡುಪಿಯ ಶ್ರೀ ಕ್ರಿಶ್ಣ ಮಟ ಮುಂತಾದ ಹಲವು ವಯ್ಶಿಶ್ಟ ಪೂರ‍್ಣ ತಾಣಗಳು ಇಲ್ಲಿಗೆ ಬೇಟಿ ನೀಡುವವರನ್ನು ಮತ್ತಶ್ಟು ಸೆಳೆಯುವಂತೆ ಮಾಡುತ್ತದೆ. ಒಟ್ಟಿನಲ್ಲಿ ನೆಲಕ್ಕಿಳಿದ ಸ್ವರ‍್ಗವಾಗಿರುವಾಗಿರುವ ಕುದುರೆಮುಕ ಪರಿಸರ ಪ್ರೇಮಿಗಳ ಸತತ ಹೋರಾಟದಿಂದಾಗಿ ಇಂದು ನಮಗೆ ಹಸಿರು ಶ್ರೀಮಂತಿಗೆಯ ವರವಾಗಿಯೇ ಉಳಿದಿದೆ. ಹಾಗಾಗಿ ಇದನ್ನು ಮುಂದೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: Wikipedia)
ಇತ್ತೀಚಿನ ಅನಿಸಿಕೆಗಳು