ಸತ್ತವರ ನಗರ: ದರ‍್ಗಾವ್ಸ್ ಗ್ರಾಮ

ಕೆ.ವಿ. ಶಶಿದರ.

ancient village, ಹಳ್ಳಿಸತ್ತವರ ನಗರ ಎಂದು ಕರೆಯಲ್ಪಡುವ ದರ‍್ಗಾವ್ಸ್ ಗ್ರಾಮ, ರಶ್ಯಾ ದೇಶದಲ್ಲಿ ಅತಿ ಹೆಚ್ಚು ನಿಗೂಡವಾದ ತಾಣಗಳಲ್ಲಿ ಪ್ರಮುಕವಾದುದು. ಕಾಕಸಸ್ ಪರ‍್ವತ ಶ್ರೇಣಿಯಲ್ಲಿನ ಐದು ಕಣಿವೆಗಳ ಒಂದರಲ್ಲಿ ಹುದುಗಿರುವ ಈ ನಗರ, ವಾಸ್ತವವಾಗಿ ಸಮಾದಿಗಳನ್ನು ಮತ್ತು ರಹಸ್ಯಗಳನ್ನು ತುಂಬಿಕೊಂಡ ಪ್ರಾಚೀನ ಸ್ಮಶಾನಗಳ ನಗರ ಎನ್ನಲಾಗಿದೆ. ಈ ಕಣಿವೆ 17 ಕಿಲೋಮೀಟರ್ ವಿಸ್ತಾರವಾಗಿದೆ. ಇಲ್ಲಿರುವ ಸ್ಮಶಾನದಲ್ಲಿ ಸರಿ ಸುಮಾರು 100 ಪ್ರಾಚೀನ ಕಲ್ಲಿನ ರಸಹ್ಯ ಕೆತ್ತನೆಗಳಿವೆ.

ದರ‍್ಗಾವ್ಸ್ ಗ್ರಾಮದ ಸ್ಮಶಾನದಲ್ಲಿ ಅವರವರ ಬಟ್ಟೆ ಮತ್ತು ಸಾಮಗ್ರಿಗಳೊಡನೆ ಸತ್ತವರನ್ನು ಸಮಾದಿ ಮಾಡಲಾಗಿದೆ. ಇಲ್ಲಿನ ಸ್ತಳೀಯರು, ಒಸೇಟಿಯನ್ಸ್, 400 ವರ‍್ಶಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದವರ ಜೀವನ ಹೇಗಿತ್ತು ಎಂಬುದನ್ನು ಅರ‍್ತ ಮಾಡಿಕೊಳ್ಳಲು ಈ ಸ್ಮಶಾನ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ. ಇಲ್ಲಿನ ಮನೆಗಳನ್ನು ಅಮೂಲಾಗ್ರವಾಗಿ ಪರಿಶೀಲಿಸುತ್ತಿರುವ ಪುರಾತತ್ವಜ್ನರಿಗೆ ಕೆಲವು ವಸ್ತುಗಳು ವೈಜ್ನಾನಿಕ ಗಮನವನ್ನು ಸೆಳೆದಿರುವುದು ಆಸಕ್ತಿದಾಯಕವಾಗಿ ಕಂಡು ಬಂದಿದೆ ಎನ್ನುತ್ತಾರೆ.

ಈ ಸ್ತಳ, ಬಹಳಶ್ಟು ಪುರಾಣ ಮತ್ತು ದಂತ ಕತೆಗಳನ್ನು ಹೊಂದಿರುವ ಅತ್ಯಂತ ನಿಗೂಡ ಸ್ತಳವಾಗಿದೆ. ದಂತಕತೆಯ ಪ್ರಕಾರ, 18ನೇ ಶತಮಾನದಲ್ಲಿ ಪ್ಲೇಗು ಮಾರಿ ಒಸೆಟ್ಟಿಯವನ್ನು ಆವರಿಸಿತ್ತು. ಇದು ಅಂಟುಜಾಡ್ಯವೆಂದು, ಬೇರೆಯವರಿಗೆ ಈ ರೋಗ ಹರಡದಂತೆ ರೋಗಗ್ರಸ್ತರನ್ನು ಪ್ರತ್ಯೇಕವಾಗಿಡಲು, ಗ್ರಾಮದ ಹೊರವಲಯದಲ್ಲಿ ಅವರಿಗಾಗಿಯೇ ಬೇರೆ ಮನೆಗಳನ್ನು ನಿರ‍್ಮಿಸಿದರು. ಅವರನ್ನು ಅಲ್ಲಿಟ್ಟು, ಅವಶ್ಯವಿರುವ ಆಹಾರವನ್ನು ಅಲ್ಲಿಗೇ ಒದಗಿಸಲಾಗುತ್ತಿತ್ತು. ಅಲ್ಲಿರುವ ರೋಗಿಗಳು ಆ ಮನೆಯನ್ನು ಬಿಟ್ಟು ಹೊರಬರಲು ನಿರ‍್ಬಂದವನ್ನು ವಿದಿಸಲಾಗಿತ್ತು. ಸ್ವೇಚ್ಚೆಯಿಂದ ಓಡಾಡುವ ಸ್ವಾತಂತ್ರ್ಯವನ್ನು ಮೊಟುಕುಗೊಳಿಸಲಾಗಿತ್ತು. ಅವರು ಸಾಯುವವರೆಗೂ ಅಲ್ಲೇ ಕೊಳೆಯಬೇಕಿತ್ತು. ವಾರಸುದಾರರು ಯಾರೂ ಇಲ್ಲದವರು ಇಂತಲ್ಲಿ ಸಾವನ್ನು ಎದುರು ನೋಡುತ್ತಾ ಕಾಯಬೇಕಿದ್ದುದು ಅನಿವಾರ‍್ಯವಾಗಿತ್ತು. ಸಾಯುವವರಿಗೂ, ಸಾವಿನ ನಗರದಲ್ಲಿ ಉಳಿಯುವುದು, ರೋಗಿಗಳಿಗೆ ಬಹಳ ನೋವಿನ ಹಾಗೂ ಮನಸ್ಸಿಗೊಪ್ಪದ ಪ್ರಕ್ರಿಯೆಯಾಗಿತ್ತು.

ಈ ಗ್ರಾಮವನ್ನು ಪ್ರವೇಶಿಸಲು ಪ್ರಯತ್ನಿಸಿದವರು ಮತ್ತೆ ಎಂದಿಗೂ ಜೀವಂತವಾಗಿ ಹಿಂದಿರುಗಿ ಬರುವುದಿಲ್ಲವಂತೆ. ಇದು ಅಲ್ಲಿನ ಸ್ತಳೀಯರ ನಂಬುಗೆಯಾಗಿತ್ತು. ಇಂತಹ ಒಂದು ವಿಲಕ್ಶಣ ಗ್ರಾಮವು ಅನೇಕ ಪ್ರವಾಸಿಗರನ್ನು ತನ್ನೆಡೆ ಆಕರ‍್ಶಿಸಿದ್ದರೂ, ಇದಿರುವ ಸ್ತಳವನ್ನು ಹುಡುಕಿ ಅಲ್ಲಿಗೆ ತಲುಪುವುದು ಬಹಳ ತ್ರಾಸಾದ ಹಿನ್ನೆಲೆಯಲ್ಲಿ ನೋಡುಗರ ಸಂಕ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಪ್ರತಿ ಹಳ್ಳಿಗಾಡಿನ ಪ್ರದೇಶದ ಯುವ ಪೀಳಿಗೆಯನ್ನು ತಳುಕಿನ ನಗರ ಪ್ರದೇಶಗಳು ಆಕರ‍್ಶಿಸುವಂತೆ, ಇಲ್ಲಿನ ಸ್ತಳೀಯ ಯುವಕರು ಸಹ ಆ ಒಂದು ಆಕರ‍್ಶಣೆಗೆ ಬಲಿಯಾಗಿ ಗ್ರಾಮವನ್ನು ತೊರೆದು ಪಟ್ಟಣ ಸೇರಿದ್ದಾರೆ. ರಶ್ಯಾ ದೇಶದಲ್ಲಿ ಇಂತಹ ವಿಶಿಶ್ಟ ಸ್ತಳಗಳು ಹಲವು ಇವೆ. ಅದರೆ ಅವುಗಳು ಹೆಚ್ಚು ಪ್ರಸಿದ್ದಿ ಹೊಂದಿಲ್ಲ. ಉತ್ತರ ಒಸೆಟ್ಟಿಯಲ್ಲಿ ಹಲವು ದಿನ ಉಳಿದರೆ, ನಗರ ಮತ್ತು ಅದರ ಸುತ್ತಮುತ್ತಲಿನ ಪ್ರಾಚೀನತೆಯ ಕಂಪನ್ನು ಅನುಬವಿಸಲು ಸಾದ್ಯ ಎನ್ನುತ್ತಾರೆ ಅನುಬವಿಗಳು.

ಈ ನಗರದಲ್ಲಿ ಕಾಲಿಟ್ಟರೆ ಕಾಣ ಸಿಗುವುದು ಸಾಕಶ್ಟು ಬಿಳಿ ಮನೆಗಳು. ಅವು ನೈಜ್ಯವಾದ ಬಿಳಿ ಮನೆಗಳಲ್ಲ, ಬದಲಿಗೆ ಕಲ್ಲಿನಲ್ಲಿ ಕೆತ್ತಿದ ಮನೆಗಳು. ಲಿಪಿಗಳ ಪ್ರಕಾರ ಅತ್ಯಂತ ಹಳೆಯದು 16ನೇ ಶತಮಾನಕ್ಕೆ ಸೇರಿದ್ದು. ಪ್ರತಿ ಮನೆಯಲ್ಲಿನ ಕೆತ್ತನೆಯ ಲಿಪಿಯನ್ನು ಪರಾಮರ‍್ಶಿಸಿದರೆ, ಅದು ಆ ವ್ಯಕ್ತಿ ಸ್ವರ‍್ಗಕ್ಕೆ ಸೇರಿದ ಪೂರ‍್ಣ ವಿವರ ಹೊಂದಿದೆ. ಇಲ್ಲಿ ಒಂದು ಸಣ್ಣ ಬಾವಿಯಿದೆ. ಪ್ರವಾಸಿಗರು ಆ ಬಾವಿಯಲ್ಲಿ ನಾಣ್ಯವನ್ನು ಹಾಕುತ್ತಾರೆ. ಹಾಕಿದ ನಾಣ್ಯ ಬಾವಿಯ ತಳದಲ್ಲಿರುವ ಕಲ್ಲಿಗೆ ಬಡಿದರೆ, ಅದು ಶುಬ ಸೂಚಕ ಸಂಕೇತವೆಂದು ತಿಳಿಯುತ್ತಾರೆ. ಈ ನಿಗೂಡ ಜಾಗವನ್ನು ತಲುಪಲು ಮೂರು ಗಂಟೆಗಳ ಪ್ರಯಾಣದ ಅಗತ್ಯವಿರುತ್ತದೆ. ಅಪಾಯಕಾರಿ ಕಣಿವೆಯ ಗುಪ್ತ ರಸ್ತೆಯನ್ನು ಕ್ರಮಿಸಬೇಕಿದೆ. ಸತ್ತವರ ನಗರಕ್ಕೆ ಹೋಗಲು ಇದಕ್ಕಿಂತಾ ಬೇರೆ ರಸ್ತೆ ಬೇಕೇ?

(ಮಾಹಿತಿ ಸೆಲೆ: atlasobscura.com amusingplanet.com)

(ಚಿತ್ರ ಸೆಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: