ಮಂದಿಯಾಳ್ವಿಕೆಗೆ ಹೊಂದಿಕೆಯಾಗದ “ರಾಜ್ಯಪಾಲ” ಎನ್ನುವ ಹುದ್ದೆ

ಮಲ್ಲೇಶ್ ಬೆಳವಾಡಿ ಗವಿಯಪ್ಪ.

130123kpn85_0_0_0_0

ಈ ಹಿಂದೆ ಸತತವಾಗಿ 5 ಬಾರಿ ದೆಹಲಿಯ ಮುಕ್ಯಮಂತ್ರಿಯಾಗಿ 15 ವರ‍್ಶಗಳ ಕಾಲ ಆಳ್ವಿಕೆ ನಡೆಸಿದ್ದ ದೆಹಲಿಯ ಮಾಜಿ ಮುಕ್ಯಮಂತ್ರಿ ಶೀಲ ದೀಕ್ಶಿತ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಿರುವ ಸುದ್ದಿ ವರದಿಯಾಗಿದೆ. ಈ ರೀತಿ ಕೇಂದ್ರವು ಆ ನಾಡು-ನುಡಿ-ನಾಡಿಗರ ವಿಶಯವಾಗಿ ಸಂಬಂದವೇ ಇಲ್ಲದ ದೂರದ ಊರಿನವರೊಬ್ಬರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಪರಿ, ಮಂದಿಯಾಳ್ವಿಕೆಯಲ್ಲಿ ನಂಬುಗೆ ಇರುವವರಿಗೆ ಸೋಜಿಗವೆನಿಸುತ್ತದೆ. ಕುತೂಹಲಕರ ವಿಶಯವೆಂದರೆ, ಬಾರತದ ಸಂವಿದಾನದ ಪ್ರಕಾರ ಒಂದು ಅತವಾ ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಬ್ಬರನ್ನೇ ರಾಜ್ಯಪಾಲರನ್ನಾಗಿ ನೇಮಿಸಬಹುದು. ಹೀಗೆ ಜನರಿಂದ ಆಯ್ಕೆಯಾಗದ, ರಾಶ್ಟ್ರಪತಿಯಿಂದ ಆರಿಸಲ್ಪಡುವ, ಒಂದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಬ್ಬರೇ “ರಾಜ್ಯಪಾಲ”ರಾಗಬಹುದಾದ ಈ ಹುದ್ದೆಯ ಬಗ್ಗೆ ಒಂದಿಶ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊದಲಿಗೆ, ರಾಜ್ಯಪಾಲರಾಗಲು ಬೇಕಿರುವ ಅರ‍್ಹತೆಗಳೇನು ಎಂಬುದನ್ನು ನೋಡೋಣ. ಬಾರತದ ಸಂವಿದಾನ 1949 ರ 157 ರ ವಿದಿಯ ಪ್ರಕಾರ ರಾಜ್ಯಪಾಲರಾಗಲು ಇರಬೇಕಿರುವ ಅರ‍್ಹತೆ:
“ಬಾರತೀಯ ನಾಗರೀಕನಾಗಿರಬೇಕು ಮತ್ತು 35 ವರ‍್ಶ ತುಂಬಿರಬೇಕು”.

ಹೀಗೆ ಆಯ್ಕೆಯಾಗುವ ರಾಜ್ಯಪಾಲರ ಅದಿಕಾರ ವ್ಯಾಪ್ತಿಯ ಬಗ್ಗೆ ಕಣ್ಣಾಡಿಸಿದರೆ ಆಶ್ಚರ‍್ಯವಾಗುತ್ತದೆ. ಬಾರತ ಸಂವಿದಾನ 1949ರ 163(2) ರ ವಿದಿಯ ಪ್ರಕಾರ ರಾಜ್ಯಪಾಲರಿಗಿರುವ ಅದಿಕಾರ ವ್ಯಾಪ್ತಿ ಹೀಗಿದೆ:
“ರಾಜ್ಯಪಾಲರು ಉತ್ತರಿಸಬೇಕಾದ ಅತವಾ ಅವರ ಮಿತಿಗೆ ಒಳಪಡುವ ಯಾವುದೇ ವಿಶಯದ ಕುರಿತು ರಾಜ್ಯಪಾಲರು ತಮ್ಮ ವಿವೇಚನೆಗೆ ತಕ್ಕಂತೆ ತೆಗೆದುಕೊಳ್ಳುವ ತೀರ‍್ಮಾನವೇ ಅಂತಿಮವಾದದ್ದು. ರಾಜ್ಯಪಾಲರು ತೆಗೆದುಕೊಳ್ಳುವ ತೀ‍ರ‍್ಮಾನವನ್ನು ಅದು ಅವರ ವಿವೇಚನೆಯಂತೆ ತೆಗೆದುಕೊಂಡಿದ್ದಾರೆಯೇ ಇಲ್ಲವೇ ಎಂದು ಪರೀಕ್ಶಿಸುವಂತಿಲ್ಲ”.

ರಾಜ್ಯಪಾಲ ಎನ್ನುವವರಿಗೆ ನಾಡಿನ ಎಲ್ಲಾ ಯೋಜನೆಗಳ, ಕೆಲಸಗಳ ಮೇಲೆ ಹತೋಟಿಯಿದ್ದು ಎಲ್ಲವನ್ನೂ ಮುನ್ನಡೆಸುವ, ತೀರ್ಮಾನಿಸುವ ಅದಿಕಾರವಿದೆ. ಇನ್ನೊಂದೆಡೆ ಜನರಿಂದ ಆಯ್ಕೆಗೊಳ್ಳುವ ಮುಕ್ಯಮಂತ್ರಿಯು ನಾಡಿನ ಎಲ್ಲಾ ಆಗು-ಹೋಗುಗಳ ಬಗ್ಗೆ ರಾಜ್ಯಪಾಲರಿಗೆ ವರದಿ ಒಪ್ಪಿಸುವ ಮಂತ್ರಿಮಂಡಲದ(ಬೇರೆ-ಬೇರೆ ಕಾತೆಯ ಮಂತ್ರಿಗಳನ್ನೊಳಗೊಂಡ ತಂಡ) ಮುಂದಾಳು. ಮುಕ್ಯಮಂತ್ರಿಗಳ ಮತ್ತವರ ಮಂತ್ರಿಮಂಡಲದಲ್ಲಿರುವ ಮಂತ್ರಿಗಳ ಕೆಲಸವೆಂದರೆ ರಾಜ್ಯಪಾಲರು ಮಾಡುವ ಕೆಲಸಗಳಿಗೆ ಪೂರಕವಾದ ನೆರವು ನೀಡುವುದಾಗಿದೆ. ಹೀಗೆ ಮಂದಿಯಿಂದ ಆಯ್ಕೆಗೊಳ್ಳದ “ರಾಜ್ಯಪಾಲ” ಎನ್ನುವ ಹುದ್ದೆಗೆ, ಜನರಿಂದ ಆರಿಸಲ್ಪಡುವ “ಮುಕ್ಯಮಂತ್ರಿ” ಹುದ್ದೆಗಿಂತಲೂ ಹೆಚ್ಚಿನ ಅದಿಕಾರವಿರುವುದನ್ನು ಕಂಡಾಗ ನಿಜಕ್ಕೂ ಸೋಜಿಗವೆನಿಸುತ್ತದೆಯಲ್ಲವೇ ?

ರಾಜ್ಯಪಾಲ ಎನ್ನುವುದು ಬ್ರಿಟಿಶರು ತಾವು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಹುಟ್ಟುಹಾಕಿದ್ದ “ರೆಸಿಡೆಂಟ್” ಎನ್ನುವ ಹುದ್ದೆಯ ಮುಂದುವರೆದ ಬಾಗ. ರೆಸಿಡೆಂಟ್ ಎನ್ನುವ ಆಳ್ವಿಕೆಯ ಮೂಲಕ ಆ ನಾಡಿನ ಆಳ್ವಿಕೆಯನ್ನು ಪೂರ‍್ತಿಯಾಗಿ ಆ ನಾಡಿಗೆ ಬಿಟ್ಟುಕೊಡದೆ ಹೆಚ್ಚಿನ ಅದಿಕಾರವನ್ನು ತಮ್ಮಲ್ಲೇ ಇರಿಸಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ಈಗ ನಮಗೆ ನಮ್ಮೂರಿನಲ್ಲಿ ಕಾಣಸಿಗುವ ರೆಸಿಡೆನ್ಸಿ ದಾರಿ, ರೆಸಿಡೆನ್ಸಿ ಬಂಗಲೆಗಳ ಕುರುಹು ಬ್ರಿಟಿಶರ ಸರ‍್ಕಾರದ ಆಳ್ವಿಕೆಯ ಕಾಲದಲ್ಲಿದ್ದ ಇದೇ “ರೆಸಿಡೆಂಟ್ ” ಎನ್ನುವ ಹುದ್ದೆಯದ್ದು. ಇದನ್ನೇ ದೆಹಲಿ ಕೇಂದ್ರಿತ ಕೇಂದ್ರ ಸರ‍್ಕಾರಗಳು ಮುಂದುವರೆಸಿಕೊಂಡು ಬಂದಿದೆ. ಬ್ರಿಟಿಶರ ಕಾಲದಲ್ಲಿ ಬ್ರಿಟಿಶರು ತಮಗೆ ಬೇಕಾದಂತೆ ಆಳ್ವಿಕೆ ಮಾಡಲು ಮತ್ತದನ್ನು ಯಾರೂ ಪ್ರಶ್ನಿಸದಿರಲು(ನಾಡಿನ ಹೊಣೆ ಹೊತ್ತ ಮುಂದಾಳುಗಳೂ ಸಹ) ಹುಟ್ಟಿಸಿಕೊಂಡಿದ್ದ “ರೆಸಿಡೆಂಟ್ ” ಹುದ್ದೆಯ ಪಳಯುಳಿಕೆಯೇ ಈಗಿನ “ರಾಜ್ಯಪಾಲ” ಎನ್ನುವ ಹುದ್ದೆ. “ರೆಸಿಡೆಂಟ್ ” ಹುದ್ದೆಯ ಮೂಲಕ ಬ್ರಿಟಿಶರು ತಮಗೆ ಬೇಕಿದ್ದ ಹಾಗೆ ಎಲ್ಲವನ್ನೂ, ಎಲ್ಲರನ್ನೂ ಹತೋಟಿಯಲ್ಲಿಟ್ಟುಕೊಂಡು ಆಳ್ವಿಕೆ ನಡೆಸುತ್ತಿದ್ದ ಹಾಗೆಯೇ ಈಗ ದೆಹಲಿ ಕೇಂದ್ರಿತ ಕೇಂದ್ರ ಸರ‍್ಕಾರಗಳು ರಾಜ್ಯಪಾಲ ಎನ್ನುವ ಹುದ್ದೆಯ ಮೂಲಕ ತಮಗೆ ಬೇಕಿರುವ ಹಾಗೆ ರಾಜ್ಯಗಳಿಗೆ ತಮ್ಮಾಳ್ವಿಕೆಯನ್ನು ಬಿಟ್ಟುಕೊಡದೆ ಆಳ್ವಿಕೆ ನಡೆಸುತ್ತಿವೆ.

ಒಂದು ನಾಡಿನ ಬಗ್ಗೆ ಹೆಚ್ಚು ಅರಿವಿಲ್ಲದ, ಆ ನಾಡಿಗರ ಜೊತೆ ಹೆಚ್ಚು ಒಡನಾಟವಿಲ್ಲದ, ಆ ನಾಡು-ನಾಡಿಗರ ನುಡಿಯನ್ನು ಅರಿಯದ, ಒಟ್ಟಾರೆಯಾಗಿ ಆ ನಾಡು-ನುಡಿ-ನಾಡಿಗರ ವಿಶಯದಲ್ಲಿ ಯಾವುದೇ ನಂಟಿಲ್ಲದ ದೂರದ ಊರಿನವರನ್ನು(ಅದರಲ್ಲೂ ತಮ್ಮ ಪಕ್ಶದ ನಿಶ್ಟಾವಂತರನ್ನು) ರಾಶ್ಟ್ರಪತಿಯೊಬ್ಬರು ರಾಜ್ಯಪಾಲರನ್ನಾಗಿ ಆರಿಸಿ, ಆ ನಾಡಿನ ಮಂದಿಯಿಂದ ಆರಿಸಲ್ಪಟ್ಟ ಮುಕ್ಯಮಂತ್ರಿ ಹುದ್ದೆಗಿಂತಲೂ ಹೆಚ್ಚಿನ ಅದಿಕಾರವನ್ನು ಕೊಡುವುದು ಮಂದಿಯಾಳ್ವಿಕೆ ವ್ಯವಸ್ತೆಗೇ ವಿರುದ್ದವಾದುದಲ್ಲವೇ ? ಈಗಿನ ಕೇಂದ್ರೀಕ್ರುತ ವ್ಯವಸ್ತೆಯಲ್ಲಿ ರಾಜ್ಯಪಾಲ ಎನ್ನುವ ಹುದ್ದೆಯು ದೆಹಲಿಯಲ್ಲಿ ಕೂತು ಎಲ್ಲವನ್ನೂ ಹತೋಟಿಯಲ್ಲಿಟ್ಟುಕೊಂಡು ಆಳ್ವಿಕೆ ನಡೆಸುವವರಿಗೆ ತಮಗೆ ಬೇಕಾದ ಹಾಗೆ ನಡೆಸಿಕೊಳ್ಳಬಹುದಾದ ಆಟದ ಕಾಯಿ ಇದ್ದಂತೆ. ಹೀಗೆ ರಾಜ್ಯಪಾಲರನ್ನು ಆಯ್ಕೆ ಮಾಡುವ ರೀತಿ, ಅರ‍್ಹತೆ ಮತ್ತವರ ಅದಿಕಾರ ವ್ಯಾಪ್ತಿಯನ್ನು ನೋಡಿದರೆ ಇದು ಮಂದಿಯಾಳ್ವಿಕೆಗೆ ತಕ್ಕುದಲ್ಲ ಎಂದೆನುಸುವುದಿಲ್ಲವೇ ? ಮಂದಿಯಾಳ್ವಿಕೆ ವ್ಯವಸ್ತೆಗೆ ವಿರುದ್ದವಾಗಿರುವ ಈ ವ್ಯವಸ್ತೆ ಇನ್ನಾದರೂ ಬದಲಾಗಬೇಕಿದೆ.

 

(ಚಿತ್ರ ಸೆಲೆ:deccanchronicle)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: