ಜಾತೀಯತೆಯ ಬೇಗೆಯಲ್ಲಿ ಬಾಡಿದ ಹೂವು – ಚೋಮ
– ಬರತ್ ಕುಮಾರ್.
[ಇದು ’ಚೋಮನ ದುಡಿ’ ಓಡುತಿಟ್ಟದ ಸೀಳುನೋಟ]
ಮೊದಲ ನೋಟ – ಕಗ್ಗತ್ತಲನ್ನು ಸೀಳುತ್ತಾ ಮಂದಿ ಕೂಗು ಹಾಕುತ್ತಾ ಪಂಜನ್ನು ಬೀಸುತ್ತಾ ನಡೆದುಬರುತ್ತಾರೆ.
ಕೊನೆಯ ನೋಟ – ಬಾಗಿಲು ತೆಗೆದೊಡನೆ ಚೋಮನ ದುಡಿ(ಡಮರುಗ) ಉರುಳಿ ಬರುತ್ತದೆ.
ಹೀಗೆ, ಮೊದಲ ನೋಟದಿಂದ ಹಿಡಿದು ಕೊನೆಯ ನೋಟದವರೆಗೆ ನೋಡುಗರನ್ನು ಈ ಓಡುತಿಟ್ಟ ಹಿಡಿದಿಟ್ಟುಕೊಳ್ಳುತ್ತದೆ. ಕೀಳುಜಾತಿಯಲ್ಲಿ ಹುಟ್ಟಿದ ಚೋಮನಿಗೆ(ದಲಿತ) ಒಂದೇ ಆಸೆ – ತನ್ನದೇ ಆದ ನೆಲದಲ್ಲಿ ಉತ್ತು ಬಿತ್ತು ಬೆಳೆ ತೆಗೆದು ಆರಂಬಕಾರ ಎಂದೆನಿಸಿಕೊಳ್ಳುವುದು. ಅವನ ಆಸೆ ಕಯ್ಗೂಡುವುದೇ ಎಂಬುದು ಓಡುತಿಟ್ಟದ ಹುರುಳು. ಚೋಮನ ಹತ್ತಿರ ಗಟ್ಟಿಮುಟ್ಟಾಗಿರುವ ಎತ್ತುಗಳಿದ್ದರೂ ತನ್ನದೇ ಆರಂಬ ಮಾಡಲಾಗದ ಪಾಡು. ಇದರ ಮೇಲೆ ಗಟ್ಟದ ಸಾಲಕ್ಕಾಗಿ ಮಕ್ಕಳನ್ನು ದೂರಕ್ಕೆ ಕಳಿಸಿಕೊಡಬೇಕಾಗುತ್ತದೆ. ಒಂದು ಕಡೆ ದಬ್ಬಾಳಿಕೆ ಮಾಡುವ ಅವನ ಒಡೆಯ(ಬ್ರಾಮಣ ಜಮೀನ್ದಾರ), ಇನ್ನೊಂದು ಕಡೆ ನೆಲದ ಆಸೆ ತೋರಿಸಿ ತಮ್ಮತ್ತ ಸೆಳೆದುಕೊಳ್ಳುವ ಚರ‍್ಚಿನವರ ಹೊಂಚು, ಇವರಿಬ್ಬರ ನಡುವೆ ನಲುಗಿ ಹೋಗುವ ಚೋಮನ ಸಂಸಾರ – ಹೀಗೆ ಕತೆ ಸಾಗುತ್ತದೆ.
ಬಿ.ವಿ.ಕಾರಂತರ ದಿಕ್ತೋರಿಕೆಯಲ್ಲಿ ತನ್ನದೇ ಆದ ಚಾಪಿದೆ. ಅಲ್ಲಲ್ಲಿ ಸತ್ಯಜಿತ್ ರೇ ಮತ್ತು ಅಕಿರ ಕುರೋಸವರವರ ಒತ್ತುಗಳನ್ನು ಕಾಣಬಹುದು. ’ಪತೇರ್ ಪಾಂಚಾಲಿ’ ಮತ್ತು ’ಸೆವೆನ್ ಸಮುರಾಯ್’ ಗಳಲ್ಲಿ ಇರುವಂತೆ ಇದರಲ್ಲೂ ಹಳ್ಳಿಬದುಕು, ಬಡತನ ಮತ್ತು ಬಡತನದಿಂದ ಉಂಟಾಗುವ ಸಾವುಗಳ ಚಿತ್ರಣವಿದೆ. ಆದರೆ ಇದರಲ್ಲಿ ಜಾತೀಯತೆಯ ಕರಾಳ ಮುಕಗಳು ನೋಡುಗನ ಮನಸನ್ನು ಕದಡುತ್ತವೆ. ಇಲ್ಲಿ ಬರುವ ಹಲವು ಪಾತ್ರಗಳು ಅಚ್ಚಗನ್ನಡದ ಹೆಸರುಗಳೇ – ಬಿರುಮ ಪೂಜಾರ್, ಬೊಮ್ಮ, ಕೊರಗಪ್ಪ, ಚಿಂಕ್ರ, ಬೆಳ್ಳಿ, ಗುರುವ, ಚೆನಿಯ, ಕಾಳ, ನೀಲ. ಕತೆಯಲ್ಲಿ ಬರುವ ಊರುಗಳ ಹೆಸರುಗಳು ಕೊಕ್ಕಡ, ಉಪ್ಪಿನಂಗಡಿ ಬರುವುದರಿಂದ ಇದು ದಕ್ಶಿಣ ಕನ್ನಡದ ಹಳ್ಳಿಯೊಂದರಲ್ಲಿ ನಡೆದ ಕತೆ ಎಂದು ಎಣಿಸಬಹುದಾಗಿದೆ. ಆದರೆ ಚೋಮನ ಮಕ್ಕಳು (ಗುರುವ, ಚನಿಯ) ಗಟ್ಟದಲ್ಲಿ ಕೆಲಸ ಮಾಡಲು ಹೋಗುವುದರಿಂದ ಕತೆಯ ಹರವು ಚಿಕ್ಕಮಗಳೂರಿನ ಗಟ್ಟದವರೆಗೂ ಚಾಚುತ್ತದೆ. ಹಲವು ಪಾತ್ರಗಳು ಗಟ್ಟಕ್ಕೆ ಹೊಂದಿಕೊಳ್ಳಲಾರದೆ ಗಟ್ಟದ ಜ್ವರದಿಂದ (ಮಲೇರಿಯ) ಸಾಯುವುದನ್ನು ಕಾಣಬಹುದು. ಇದು ಗಟ್ಟದ ಮೇಲಿನ ಮತ್ತು ಗಟ್ಟದ ಕೆಳಗಿನವರ ನಡುವೆ ಇರುವ ಅಂತರವನ್ನು ಎತ್ತಿ ತೋರುತ್ತದೆ.
ಈ ಜಾತೀಯತೆ ಮತ್ತು ಮುಟ್ಟದಿರುವಿಕೆ( ಅಸ್ಪ್ರುಶ್ಯತೆ), ಎಶ್ಟು ಗೊಂದಲಗಳಿಂದ ಕೂಡಿದೆಯೆಂದರೆ ಚೋಮನ ಮಗ ನೀಲ ನೀರಿನಲ್ಲಿ ಮುಳುಗಿ ಸಾಯಬೇಕಾದರೆ ಅವನು ಅಸ್ಪ್ರುಶ್ಯನಾಗಿರುವುದರಿಂದ ಅವನನ್ನು ಬದುಕಿಸಲು ಯಾರೂ ಬರುವುದಿಲ್ಲ, ಆದರೆ ಚೋಮನ ಮಗಳಾದ ಬೆಳ್ಳಿಯನ್ನು ಗಟ್ಟದ(estate) ಗುಮಾಸ್ತ ಮತ್ತು ಅವನ ಒಡೆಯ(ಬ್ರಿಟಿಶ್) ಇಬ್ಬರೂ ತಮ್ಮಿಚ್ಚೆಯ್ಂತೆ ಬಳಸಿಕೊಳ್ಳುತ್ತಾರೆ. ಮೇಲ್ಜಾತಿಯವರು ತಮ್ಮ ಬಳಕೆಗೆ ತಕ್ಕಂತೆ ಅಸ್ಪ್ರುಶ್ಯತೆ ಎಂಬುದನ್ನು ಹೇಗೆ ತಿರುಚುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ.
ಡಾ| ಶಿವರಾಮ ಕಾರಂತರ ನೀಳ್ಗತೆಯನ್ನು ಬಳಸಿಕೊಂಡು ಮಾಡಿರುವ ಈ ಓಡುತಿಟ್ಟಕ್ಕೆ ಅವರೇ ಸೂಳ್ನುಡಿಗಳನ್ನು ಬರೆದಿದ್ದಾರೆ. ಸೂಳ್ನುಡಿಗಳಲ್ಲಿ(Dialogue) ಹಲವು ಅಚ್ಚಗನ್ನಡದ ಪದಗಳನ್ನು ಗಮನಿಸಬಹುದು. ಎತ್ತುಗೆಗೆ ಜಂಬರ (Ka. jambā̆ra affair, business.), ಕೊರಳು (Ka. koral, koraḷ – voice),ಕಳ್ಳು (Ka. kaḷḷu toddy); ಹೆಚ್ಚಿನ ಸೂಳ್ನುಡಿಯಲ್ಲಿ ಆ ಊರಿನ ಆಡುನುಡಿಯ ಸೊಗಡಿದ್ದರೂ ಕೆಲವು ಕಡೆ ಮಾತುಗಳು ಬರಹನುಡಿಯಾಗಿ ಮಾರ‍್ಪಾಟಾಗಿ ಸಪ್ಪೆಯಾಗುತ್ತದೆ.
ಓಡುತಿಟ್ಟದ ಮಾಡುವಿಕೆಯ ಕಣ್ಣಿನಿಂದ ನೋಡಿದರೆ ಮಾಡುವಿಕೆಯಲ್ಲಿರುವ ಕೆಲವು ಅಂಶಗಳು ಗಮನ ಸೆಳೆಯುತ್ತವೆ. ಚೋಮನ ತನ್ನ ಬಗೆಯಲ್ಲಿರುವ ಸಿಟ್ಟನ್ನು ಹೊರಹಾಕುವ ಬಗೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಅದು ದುಡಿಯನ್ನು ಬಡಿಯುವುದಿರಬಹುದು, ಕಳ್ಳನ್ನು ಕುಡಿದು ಬಡಬಡಿಸುವುದಿರಬಹುದು ಇಲ್ಲವೇ ಕೆಸರುಗದ್ದೆಯಲ್ಲಿ ಎತ್ತುಗಳೊಂದಿಗೆ ಮತ್ತೆ ಮತ್ತೆ ಸುತ್ತು ಹಾಕುವುದಿರಬಹುದು. “ಲೇ ಲೇ …” ಎಂಬ ಜನಪದ ಹಾಡಿನ ಸೊಗಡು ಮನಸ್ಸಿಗೆ ರಾಚುತ್ತದೆ. ಬಿ.ವಿ.ಕಾರಂತರೇ ಇನಿತವನ್ನು ನೀಡಿದ್ದರೂ ಅದಕ್ಕೆ ವಾದ್ಯನೆರವು ನೀಡಿರುವುದು ಎಲ್. ವಯ್-ದ್ಯನಾತನ್(ಮಾಲ್ಗುಡಿ ಡೇಸ್) ಆಗಿರುವುದರಿಂದ ’ದುಡಿ’ಯ ಸದ್ದು ಕಿವಿಗಳನ್ನು ತುಂಬುತ್ತದೆ. ಗಟ್ಟಗಳ ಚಿತ್ರಣ ಮತ್ತು ಉಡುಗೆ-ತೊಡುಗೆಗಳು ಕತೆಯ ಒತ್ತನ್ನು ಹೆಚ್ಚಿಸಲು ನೆರವಾಗಿವೆ. ಚೋಮನ ಬದುಕಿನಲ್ಲಿ ಮತ್ತೆ ಮತ್ತೆ ನಿರಾಸೆಯಾದಾಗ ಬರುವ ಹಿನ್ನೆಲೆ ಇನಿತವು ನೋಡುಗನ ಒಳಗಿನಲ್ಲಿ ಉಂಟಾಗುವ ಅನಿಸಿಕೆಗಳಿಗೆ ತಾಳೆ ಆಗುತ್ತದೆ. ಓಡುತಿಟ್ಟದ ಉದ್ದಕ್ಕೂ ಇದನ್ನು ಚೆನ್ನಾಗಿ ಬಳಸಿಕೊಳ್ಳಲಾಗಿದೆ.
ಹೊಸಗಾಲಕ್ಕೆ ಮುಂಚೆ ದಕ್ಶಿಣ ಕನ್ನಡದಲ್ಲಿದ್ದ ಕೂಡಣದೇರ‍್ಪಾಟನ್ನು ಬಿಡಿಬಿಡಿಯಾಗಿ ತೋರಿಸಲಾಗಿದೆ. ಜಮೀನ್ದಾರ(ಬ್ರಾಮಣ), ಕಳ್ಳು ಮಾರುವವ( ಬಿರುಮ ಪೂಜಾರ್), ಚೋಮ, ಚಿಂಕ್ರ, ಕೊರಗಪ್ಪ(ದಲಿತ). ಇದಲ್ಲದೆ ಮುಂಚೆ ದಲಿತರಾಗಿದ್ದು, ಏಸುದರ‍್ಮಕ್ಕೆ ಸೇರಿದವರಾದ ಜಾರ್ಜ್, ಮೇರಿ ಎಂಬ ಪಾತ್ರಗಳು ಇಲ್ಲಿವೆ. ಕೊನೆಗೆ ಚೋಮನ ಮಗನಾದ ಗುರುವ ಕೂಡ ಮೇರಿ ಎಂಬ ಹುಡುಗಿಯನ್ನು ಮದುವೆಯಾಗಿ ಕಿರಿಸ್ತಾನನಾಗುತ್ತಾನೆ. ಆ ಕಾಲದಲ್ಲಿದ್ದ ಅಸ್ಪ್ರುಶ್ಯತೆ ಮತ್ತು ಜಾತೀಯತೆ ಮತ್ತು ಅದರಿಂದ ಕೊಡಣದಲ್ಲಿ ಉಂಟಾದ ದರ‍್ಮ ಬದಲಾವಣೆಗಳು – ಇವೆಲ್ಲದರ ಚಿತ್ರಣವನ್ನು ಇಲ್ಲಿ ಕಾಣಬಹುದು.
ಕೊನೆಯಲ್ಲಿ, ಚೋಮ ತನ್ನ ಮಗನಾದ ಗುರುವನೊಟ್ಟಿಗೆ(ಏಸುದರ‍್ಮಕ್ಕೆ ಸೇರಿದ ಮೇಲೆ) ಬಾಳಬೇಕೆಂದು ತೀರ‍್ಮಾನಿಸಿದಾಗ ಪಂಜುರ‍್ಲಿ ದಯ್ವವು ಅವನ ಆತ್ಮಸಾಕ್ಶಿಯನ್ನು ಕದಕುತ್ತದೆ. ಹುಟ್ಟು, ಬೆಳೆದ ನೆಲವನ್ನು ಮತ್ತು ಆ ನೆಲದ ದಯ್ವವನ್ನು ತೊರೆದು ಹೋಗುವುದು ಸರಿಯಲ್ಲವೆಂದು ಹೇಳುತ್ತದೆ. ಈ ಮೂಲಕ ಬುಡಕಟ್ಟುತನವನ್ನು(tribalism) ಎತ್ತಿ ಹಿಡಿದಿದ್ದರೂ ಜಾತೀಯತೆಯ ಕಟ್ಟುಪಾಡಿನಲ್ಲೇ ಚೋಮನನ್ನು ನರಳುವಂತೆ ಮಾಡುತ್ತದೆ. ಚೋಮನ ನೆಲದ ಬೇಡಿಕೆಗೆ ಅವನ ಒಡೆಯನ ತಾಯಿಯ ತೀರ‍್ಮಾನ(ದಲಿತರು ನೆಲವನ್ನು ಹೊಂದುವಂತಿಲ್ಲ) ಮತ್ತೆ ಮತ್ತೆ ಅಡ್ಡಬರುತ್ತದೆ. ಅಂದರೆ ಮೇಲ್ಜಾತಿಯವರ ತಲೆಬುಡವಿಲ್ಲದ ತೀರ‍್ಮಾನದಿಂದ ಕೆಳಜಾತಿಯವನು ಬದುಕಿನುದ್ದಕ್ಕೂ ಜೀತದಾಳಾಗಿಯೇ ಇರಬೇಕಾಗುತ್ತದೆ.
ಕೂಡಣದಲ್ಲಿ ಮೇಲು-ಕೀಳನ್ನು ಉಂಟು ಮಾಡಿ ಅದರ ಹದುಳವನ್ನು ಹಾಳುಗೆಡವಿ ಕೂಡಣದ ಏಳಿಗೆಗೆ ದೊಡ್ಡ ಬರೆ ಹಾಕಿದಂತೆ ಈ ಜಾತಿಯೇರ‍್ಪಾಡು ಕಾಣುತ್ತದೆ. ಈ ಓಡುತಿಟ್ಟ ನೋಡಿದ ಮೇಲೆ ಜಾತಿಯೇರ‍್ಪಾಡಿನ ವಿರುದ್ದ ಸಿಡಿದೇಳುವ ಒಂದು ಬಗೆಪಾಡು ಉಂಟಾದರೆ ಅಚ್ಚರಿಯೇನಿಲ್ಲ.
ನಿಮ್ಮ ಪದಪ್ರಯೋಗ ತುಂಬಾ ಚೆನ್ನಾಗಿವೆ… ನಿಮ್ಮ ಕನ್ನಡ ನುಡಿ ಕಟ್ಟುವ ಪ್ರಯತ್ನಕ್ಕೆ ನಮ್ಮ ವಂದನೆಗಳು ಹಾಗು ಶುಭಾಶಯಗಳು….
ತುಂಬಾ ಚೆನ್ನಾಗಿದೆ