ಸಿನೆಮಾ: ‘ಕನ್ನಡಕ್ಕಾಗಿ ಒಂದನ್ನು ಒತ್ತಿ’

ಕನ್ನಡಕ್ಕಾಗಿ ಒಂದನ್ನು ಒತ್ತಿ , Kannadakkaagi Ondannu Otti

ನಾವು ನೀವೆಲ್ಲ ಸಾಮಾನ್ಯವಾಗಿ ಯಾವುದೇ ದೂರವಾಣಿಯ ಸಹಾಯ ಕೇಂದ್ರಗಳಿಗೆ ಕರೆ ಮಾಡಿದಾಗ ಕೇಳುವ ಸಾಮಾನ್ಯ ಸಾಲು – ‘ಕನ್ನಡಕ್ಕಾಗಿ ಒಂದನ್ನು ಒತ್ತಿ’. ನಮ್ಮವರೇ ಅದೆಶ್ಟೋ ಜನ ಕನ್ನಡಕ್ಕಾಗಿ ಒಂದನ್ನ ಒತ್ತುವುದೇ ಇಲ್ಲ ಯಾಕಂದ್ರೆ ಅವರಿಗೆ ಇಂಗ್ಲೀಶ್ ಬರತ್ತಲ್ಲ ಅದಕ್ಕೆ. ಇಲ್ಲಿ ಇನ್ನೊಂದು ಸೂಕ್ಶ್ಮ ವಿಶಯ ಅಂದ್ರೆ ಕನ್ನಡಕ್ಕಾಗಿ ಒಂದು ಒತ್ತಿ ಅಂದ್ರೆ ಕನ್ನಡಕ್ಕೆ ಮೊದಲ ಆದ್ಯತೆ ಕೊಡಿ ಅಂತಾನೂ ಅರ‍್ತೈಸಬಹುದು. ಇಶ್ಟು ಅರ‍್ತಪೂರ‍್ಣ ಟೈಟಲ್ ಇಟ್ಟಿರೋ ಕುಶಾಲ್ ಗೌಡ ಅವರಿಗೆ ಮೊದಲ ವಂದನೆಗಳು.

ಸಿನಿಮಾ ಬಗ್ಗೆ ಹೇಳೋದಾದ್ರೆ – ಹಳೇ ಪಾರ‍್ಮುಲಾನೇ, ಆದ್ರೆ ಬಂದಿರೋ ಪ್ರಾಡಕ್ಟು ಮಾರ‍್ಕೆಟ್ಟಿಗೆ ಹೊಸದು. ಬುದ್ದಿಜೀವಿಯ ಗೆಟಪ್ಪಲ್ಲಿರೋ ಗಡ್ಡದಾರಿಯೊಬ್ಬ ಸಿಟಿಯ ಎಲ್ಲ ಜಂಜಾಟದಿಂದ ದೂರ ಹೋಗುವಾಗ, ದಾರಿಯಲ್ಲಿ ಆತನಿಗೆ ಅವನ ಬಾಲ್ಯ ಸ್ನೇಹಿತ  ಸಿಗುತ್ತಾನೆ. ಆತನೇ ಕನ್ನಡ ಪರ ಹೋರಾಟಗಾರನಾಗಿ, ಕನ್ನಡ ಚಳುವಳಿಯಲ್ಲಿ ನಿರತನಾಗಿದ್ದ ಗರ‍್ಜನೆ ಚಂದ್ರ( ಚಿಕ್ಕಣ್ಣ). ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ನಡೆದ ಗಟನೆಗಳನ್ನ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ದಾರಿಯಲ್ಲಿ ಸಾಗುತ್ತಾರೆ.

ಕತೆಯ ನಾಯಕ(ಅವಿನಾಶ್) ತನ್ನ ಕತೆಯನ್ನು ಹೇಳಲು ತೊಡಗುತ್ತಾನೆ. ಕನ್ನಡ ಎಂ ಎ ಮಾಡಿ ಹಳ್ಳಿ ಬಿಟ್ಟು ಕೆಲಸ ಅರಸಿ ಪಟ್ಟಣಕ್ಕೆ ಬಂದು, ಹೊಟ್ಟೆಪಾಡಿಗೆ ಹೋಟೆಲ್ ಒಂದರಲ್ಲಿ ಮಾಣಿಯಾಗಿ ಸೇರಿ, ಅಲ್ಲಿಗೆ ಬರುವ ಜರ‍್ನಲಿಸ್ಟ್ ಒಬ್ಬರು (ದತ್ತಣ್ಣ) ಇವನ ಅಚ್ಚ ಕನ್ನಡದ ಮಾತುಗಳಿಂದ ಕುಶಿಯಾಗಿ, ತಮ್ಮ ಪತ್ರಿಕೆಯಲ್ಲಿ ಕೆಲಸ ನೀಡಿ, ಅವನದ್ದೇ ಆದ ಕಾಲಂ ಒಂದು ಪ್ರಕಟಗೊಳ್ಳುವಂತಾಗಿ, ಆ ಕಾಲಂಗೆ ಒಬ್ಬ ಬೆಳದಿಂಗಳ ಬಾಲೆ ಅಬಿಮಾನಿಯಾಗುತ್ತಾಳೆ. ಅವರಿಬ್ಬರು ಪ್ರೀತಿಯಲ್ಲಿ ಕೆಲವು ದಿನ ತೇಲುತ್ತಾರೆ. ನಂತರ ಒಮ್ಮೆ ಅವಳು ಇದ್ದಕ್ಕಿದ್ದ ಹಾಗೆ ಸಂಪರ‍್ಕಕ್ಕೆ ಸಿಗದಾಗುತ್ತಾಳೆ. ಅಲ್ಲಿಗೆ ಅವಿನಾಶ್ ಊರು ಬಿಡೋಕೆ ಸಜ್ಜಾಗಿ ಹೊರಡುತ್ತಾನೆ.

ನಾಯಕ ತನ್ನ ಕತೆ ಹೇಳುತ್ತಿರುವಾಗ, ಗೆಳೆಯರಿಬ್ಬರ ಈ ಪಯಣದ ಹಾದಿ ಒಂದು ಕಾಡಿನೊಳಗೆ ಸಾಗಿರುತ್ತದೆ. ಕಾಡಿನ ನಡುವೆ ಕಾರು ಪಂಕ್ಚರ್ ಆಗುವುದು. ಆಗ ನಾಯಕನ ಗೆಳೆಯ (ಚಿಕ್ಕಣ್ಣ) ತನ್ನ ಎಂಟನೇ ಕ್ಲಾಸಿನ ಲವ್ ಸ್ಟೋರಿ ಹೇಳತೊಡಗುತ್ತಾನೆ. ಈ ಲವ್ ಸ್ಟೋರಿಯ ಹಾಸ್ಯ ಸನ್ನಿವೇಶಗಳನ್ನು ಮತ್ತು ಹಳ್ಳಿಯ ಸ್ಕೂಲುಗಳಲ್ಲಿ ನಡೆಯುವ ಎಲ್ಲಾ ಗಟನೆಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ ಕುಶಾಲ್.

ಗರ‍್ಜನೆ ಚಂದ್ರ ಪ್ರೀತಿಸಿದ ಶೆಟ್ರು ಮಗಳು, ಅವನು ಪ್ರೀತಿಯನ್ನ ನಿವೇದಿಸುವ ಮುನ್ನವೇ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಾಳೆ. ಹೆಸರೇ ತಿಳಿಯದೆ ಪ್ರೀತಿಸಿದ ಶೆಟ್ರ ಮಗಳ ನೆನಪನ್ನ, ಅವಳು ಇಟ್ಟ ಹೆಜ್ಜೆಯ ಮಣ್ಣನ್ನ ಸಾಯುವವರೆಗೂ ಜೊತೆಯಲ್ಲೇ ಇಟ್ಟುಕೊಂಡಿರ‍್ತೀನಿ ಅಂತ ಬದುಕುವ ಚಂದ್ರನ ಅಮರ ಪ್ರೇಮಿಯ ಕತೆ ಮುಗಿದು, ರಾತ್ರಿ ಕಳೆದು ಬೆಳಕಾಗಿ, ನೋಡಿದ್ರೆ ಅಲ್ಲಿನ ಕಾಡು ಜನ, ಊರ ಗೌಡನನ್ನ ಕರೆದುಕೊಂಡು ಬಂದು ಇವರನ್ನು ತೋರಿಸ್ತಾರೆ.

ಆ ಗೌಡ(ಸುಚೇಂದ್ರ ಪ್ರಸಾದ್), ‘ನಮ್ಮ ಮನೆಗೆ ಬನ್ನಿ.. ಕಾರು ಪಂಕ್ಚರ್ ಹಾಕೋಕೆ ವ್ಯವಸ್ತೆ ಮಾಡಿಸ್ತೀನಿ.. ಅಲ್ಲಿಯವರೆಗೂ ವಿಶ್ರಾಂತಿ ಪಡೆಯುವಿರಂತೆ’ ಅಂತ ತನ್ನ ಮನೆಗೆ ಕರ‍್ಕೊಂಡು ಹೋಗ್ತಾನೆ. ಇವರು ಕೈ ಕಾಲು ಮುಕ ತೊಳೆದು ಊಟ ಮಾಡ್ತಾರೆ. ಗೌಡ ಎಲ್ಲದಕ್ಕೂ, ‘ಇವಳೇ ಅದು ಮಾಡು, ಇದು ಮಾಡು’ ಅನ್ನುತ್ತಿರುತ್ತಾನೆ, ಆದ್ರೆ ಎಲ್ಲಕ್ಕೂ ತಾನೇ ಓಡಾಡ್ತಿರ‍್ತಾನೆ. ಅವನ ಹೆಂಡತಿಯನ್ನ ಇವರಿಗೆ ಪರಿಚಯಿಸೋದು ಇಲ್ಲ, ಅವಳೂ ಹೊರಕ್ಕೂ ಬರುತ್ತಿರಲ್ಲ. ಆ ಗೌಡನ ಹೆಂಡತಿ ಯಾರು? ಮತ್ತು ಮುಂದಕ್ಕೆ ಏನಾಗುವುದು? ಅನ್ನೋದನ್ನು ನೀವು ತೇಟರ್ ಗೆ ಹೋಗಿ ನೋಡಿ.

  • ಚಾಯಾಗ್ರಹಣ ಮಾಡಿರುವ ರಿಶಿಕೇಶ್, ತಮ್ಮ ಪ್ರತಿಬೆಯನ್ನು ಒರೆಗೆ ಹಚ್ಚಿದ್ದಾರೆ. ಹೆಚ್ಚು ಶ್ರಮವಹಿಸಿ ಚಿತ್ರೀಕರಿಸಿರುವುದರಿಂದ ಪ್ರತಿ ಸನ್ನಿವೇಶಗಳೂ ಅದ್ಬುತವಾಗಿ ಮೂಡಿ ಬಂದಿವೆ.
  • ಸಂಗೀತ ನೀಡಿರುವ ಅರ‍್ಜುನ್ ಜನ್ಯ ಅವರು ತಮ್ಮ ಎಂದಿನ ಶೈಲಿಗಿಂತ ಇದರಲ್ಲಿ ವಿಬಿನ್ನ ಸಂಗೀತ ನೀಡಿ ಮ್ಯಾಜಿಕಲ್ ಕಂಪೋಸರ್ ಎಂಬ ಹೆಸರನ್ನು ಉಳಿಸಿಕೊಳ್ಳುತ್ತಾರೆ.
  • ವಿ ನಾಗೇಂದ್ರ ಪ್ರಸಾದ್, ಯೋಗರಾಜ್ ಬಟ್ ಮತ್ತು ನಿರ‍್ದೇಶಕ ಕುಶಾಲ್ ಮೂವರ ಸಾಹಿತ್ಯ ಆಹ್ಲಾದಕಾರವಾಗಿದೆ. ”ನನ್ನ ಮೇಲೆ ನನಗೀಗ ಅನುಮಾನ”,  “ಒಮ್ಮೊಮ್ಮೆ ನನ್ನನ್ನೇ” ಹಾಗೂ “ರಸ್ತೆ ಪಕ್ಕ” ಹಾಡುಗಳು ಸೂಪರ್.
  • ಇನ್ನೂ ಕಲಾವಿದರ ವಿಶಯಕ್ಕೆ ಬಂದರೆ, ಎಸ್ ಅವಿನಾಶ್, ಚಿಕ್ಕಣ್ಣ, ಕ್ರುಶಿ ತಾಪಂಡ, ದತ್ತಣ್ಣ, ರಂಗಾಯಣ ರಗು, ಸುಚೇಂದ್ರ ಪ್ರಸಾದ್ ಮತ್ತು ಚಿಕ್ಕಣ್ಣನ ಸ್ನೇಹಿತನ ಪಾತ್ರದಾರಿ – ಇವರಿಶ್ಟು ಜನ ಮನಸ್ಸಿನಲ್ಲಿ ಉಳಿಯುತ್ತಾರೆ.
  • ಕತೆ-ಚಿತ್ರಕತೆ ಹೆಣೆದು, ಸಂಬಾಶಣೆ ಬರೆದಿರುವ ಕುಶಾಲ್ ಒಬ್ಬ ಗಟ್ಟಿ ಕತೆಗಾರರು. ಮುಂದಿನ ದಿನಗಳಲ್ಲಿ ಅವರಿಂದ ಮತ್ತಶ್ಟು ಒಳ್ಳೆಯ ಕತೆಗಳನ್ನು ನಿರೀಕ್ಶಿಸಬಹುದು.

ಕನ್ನಡಕ್ಕೆ, ಕನ್ನಡ ಸಿನೆಮಾಗಳಿಗೆ ಆದ್ಯತೆ ಕೊಡುತ್ತಾ, ಈ ಸಿನಿಮಾ ನೋಡ್ಕೊಂಡ್ ಬನ್ನಿ 🙂

( ಚಿತ್ರ ಸೆಲೆ: metrosaga.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: