’ನೆಲದ ಗಂಟೆ’ಯ ಈ ದಿನ ಮಿಂಚು ಉಳಿತಾಯದ ಅರಿವು

– ಹರ‍್ಶಿತ್ ಮಂಜುನಾತ್.

ಇಂದು, ಮಾರ‍್ಚ್-29, 2014 ರಾತ್ರಿ 8.30 ಇಂದ 9.30 ವರೆಗೆ ಸುತ್ತಣದ, ನೆಲದ ಉಳಿವಿಗಾಗಿ ಜಗತ್ತಿನ ಹಲವು ಊರುಗಳಲ್ಲಿ ಮಿಂಚಿನ (ಕರೆಂಟ್) ದೀಪಗಳನ್ನು ಆರಿಸಲಾಗುವುದು. ಇದನ್ನು ನೆಲದ ಗಂಟೆ (Earth hour) ಅಂತಾ ಕರೆಯಲಾಗುತ್ತದೆ.

earth hour
ನೆಲದ ಗಾಳಿಪಾಡಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮಂದಿಯ ಅರಿವಿಗೆ ತರಲು ದೀಪ ಆರಿಸುವ ಈ ಚಳುವಳಿ ಹುಟ್ಟಿಕೊಂಡಿದ್ದರೂ ಇದರಿಂದಾಗಿ ಬರೀ ಒಂದು ಗಂಟೆಯಲ್ಲಿ ಮಿಲಿಯಗಟ್ಟಲೆ ಮಿಂಚಿನ ಉಳಿತಾಯವಾಗುತ್ತದೆ. ’ನೆಲದ ಗಂಟೆ’ ಮೂಡಿಸುವ ಅರಿವನ್ನು ನಾವು ನಮ್ಮ ದಿನದ ಬದುಕಿನಲ್ಲಿ ಅಳವಡಿಸಿಕೊಂಡರೆ ಎಶ್ಟು ಚನ್ನ ಅಲ್ಲವೇ? ಬನ್ನಿ, ಮಿಂಚು (ಕರೆಂಟ್) ಮತ್ತು ಅದರ ಉಳಿತಾಯದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಜನರ ಎಂದಿನ ಅನಿವಾರ್‍ಯತೆಗಳಲ್ಲಿ ಮಿಂಚು ಕೂಡ ಒಂದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆದುನಿಕ ಜಗತ್ತಿನ ಅತೀ ಹೆಚ್ಚಿನ ಬೇಡಿಕೆಗಳಲ್ಲಿ ಮಿಂಚಿಗೆ ಮೊದಲ ಜಾಗ. ಮೊದ ಮೊದಲು ಜೀವಜಗತ್ತಿನ ಹುಟ್ಟು ಆದಾಗ ಕತ್ತಲೆಯಿತ್ತು. ಮುಂದೆ ಮಾನವನ ವಿಕಾಸದ ನಂತರ ಬೆಂಕಿಯ ಬಳಕೆ ಶುರುವಾಯಿತು. ಸುಮಾರು 19 ನೇ ನೂರೇಡಿನವರೆಗೆ ಕ್ರುತಕ ಬೆಳಕಿನ ಅರಿವೇ ಇಲ್ಲದೆ ಮನುಶ್ಯ ಬದುಕಿದ್ದ. 1880 ರ ವೇಳೆ ತಾಮಸ್ ಆಳ್ವ ಎಡಿಸನ್ ಅವರು ಲೋಹದ ನೆರವಿನಿಂದ ಮಿಂಚನ್ನು ಬಳಸಿಕೊಂಡು ಉರಿಯಬಲ್ಲ ದೀಪವನ್ನು ಕಂಡು ಹಿಡಿದ ಬಳಿಕ ’ಉಂಟುಮಾಡಿದ ಬೆಳಕು’ ಬಳಕೆಗೆ ಬಂತು. ಇಲ್ಲಿಂದ ಮುಂದೆ ನಾವು ಮಿಂಚಿನಿಂದ ಉರಿಯಬಲ್ಲ ದೀಪಗಳು ಮಾತ್ರವಲ್ಲದೆ ಮಿಂಚಿನಿಂದ ನಡೆಯುವ ಸಾಕಶ್ಟು ಉಪಕರಣಗಳಲ್ಲಿಯೂ ಹಲವು ಹೊಸ ಬೆಳವಣಿಗೆಗಳನ್ನು ಕಾಣುತ್ತಾ ಬಂದಿದ್ದೇವೆ.

ಆದರೆ ಇದರ ಜೊತೆಗೆ ಮಿಂಚಿನ ಕೊರತೆ ಶುರುವಾಗಿದ್ದಲ್ಲದೆ, ಮಿಂಚಿನ ಉಳಿತಾಯದ ಕೂಗು ಎದ್ದಿದೆ. ಮಿಂಚಿನ ಮೇಲೆ ಮಂದಿ ಅವಲಂಬಿತವಾದ ಹಾಗೆ ಜಗತ್ತಿನಲ್ಲಿ ಮಿಂಚಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಆದರೆ ಈ ಬೇಡಿಕೆಗೆ ತಕ್ಕಂತೆ ಮಿಂಚಿನ ಉತ್ಪಾದನೆ ಮತ್ತು ಪೂರಯ್ಕೆ ಎರಡೂ ಆಗುತ್ತಿಲ್ಲ. ಅಲ್ಲದೇ ಈ ಮಿಂಚಿನ ಉತ್ಪಾದನಾ ಬಗೆ ಸಾವಿರಾರು ಕೋಟಿ ರೂಪಾಯಿ ಬಂಡವಾಳವನ್ನು ಬಯಸುತ್ತದೆ. ಜೊತೆಗೆ ಮಿಂಚಿನ ಉತ್ಪಾದನೆ ಜಗತ್ತಿನ ಪರಿಸರ ಏರುಪೇರಿಗೂ ಸಾಕಶ್ಟು ಕಾರಣವಾಗಿದೆ. ಇದರ ನಡುವೆ ಉತ್ಪಾದನೆಯಾದ ಮಿಂಚಿನ ಅನಾವಶ್ಯಕ ಬಳಕೆಯಿಂದ ಸಾಕಶ್ಟು ಮಿಂಚು ಉಪಯೋಗಕ್ಕೆ ಬಾರದಂತೆ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಕಡಿಮೆ ಮಿಂಚಿನ ಬಳಕೆ ಕುರಿತು ಸಾಕಶ್ಟು ಪ್ರಯತ್ನಗಳು ಮತ್ತು ಚರ್‍ಚೆಗಳು ನಡೆಯುತ್ತಲೇ ಇದೆ. ಹಾಗಾಗಿ ಮಿಂಚಿನ ಬಳಕೆ, ಉಳಿಕೆ ಕುರಿತು ಪರಿಣಾಮಕಾರಿಯಾದ ಉಪಾಯವನ್ನು ಹುಡುಕುವತ್ತ ಅರಕೆಗಳನ್ನು ಮಾಡಲಾಗುತ್ತಿದೆ.

ಈ ನಡುವೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಿಂಚಿನ ಮಿತ ಬಳಕೆಗೆ ಹೊಸ ಅರಕೆಯೊಂದನ್ನು ಮಾಡಲಾಗಿದೆ. ಈ ಹೊಸ ಅರಕೆಯ ಪ್ರಕಾರ ವರುಶವೊಂದಕ್ಕೆ ಕಡಿಮೆ ಎಂದರೂ ನೂರಕ್ಕೆ 20ರಶ್ಟು ಹಾಗೂ ಹೆಚ್ಚೆಂದರೂ ನೂರಕ್ಕೆ 50ರಶ್ಟು ಮಿಂಚನ್ನು ಉಳಿತಾಯ ಮಾಡಬಹುದೆಂದು ಅರಕೆಗಾರರು ತಿಳಿಸಿದ್ದಾರೆ. ಅಮೇರಿಕಾದ ಒಕ್ಲಹಾಮ ಕಲಿಕೆವೀಡಿನ ಅರಕೆಗಾರ ಲಿ ಸಾಂಗ್, ಹಾಗು ಮಿಯಾಮಿ ಕಲಿಕೆವೀಡಿನ ಅರಕೆಗಾರ ಗಾಂಗ್ ವಾಂಗ್ ಮತ್ತು ಅವರ ಜತೆಕೆಲಸಗಾರರು ಈ ಕ್ರಾಂತಿಕಾರಿ ಅರಕೆಯನ್ನು ಮಾಡಿದ್ದಾರೆ.

ಈ ಅರಕೆಗಾರರು ಕಂಡುಹಿಡಿರುವ ಅರಕೆಯ ವಿದಾನವನ್ನು ಬಳಸಿಕೊಂಡರೆ, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಮಿಂಚಿನ ಬಳಕೆಯನ್ನು ಕಡಿಮೆಗೊಳಿಸುವುದಲ್ಲದೆ ಮಿಂಚಿನ ವೆಚ್ಚವನ್ನೂ ಗಣನೀಯವಾಗಿ ತಗ್ಗಿಸುತ್ತದೆ. ಇವರು ಕಂಡುಹಿಡಿದಿರುವ ಹೊಸ ಸಾದನದಿಂದ ಮಿಂಚಿನ ಸಲಕರಣೆಗಳು ಮತ್ತು ಉಪಕರಣಗಳ ಅಳವು, ಕದಲಿಕೆ ಮಾಡುವ ವೇಗ, ಹುರುಪು, ಬಿಸಿಯೇರುವಿಕೆ, ತಣ್ಣಗಾಗಿಸುವಿಕೆ ಸೇರಿದಂತೆ ಹಲವು ಪ್ರಕ್ರೀಯೆಗಳನ್ನು ಹೊಸ ಸಾದನ ಕರಾರುವಕ್ಕಾಗಿ ಅಳೆಯುತ್ತದೆ. ಜೊತೆಗೆ ಯಾವ ಯಾವ ಸಲಕರಣೆಗಳು ಮತ್ತು ಬಿಣಿಗೆಗಳ ಅಳವು ಕಡಿಮೆಯಾಗಿದೆ ಎಂಬುದನ್ನು ಲೆಕ್ಕಾಚಾರ ಮಾಡಬಹುದು.

ಇದರ ಆದಾರದ ಮೇಲೆ ಸರಿಯಾಗಿ ಕೆಲಸ ಮಾಡಲು ಕಸುವಿಲ್ಲದ ಬಿಣಿಗೆಗಳನ್ನು ಪತ್ತೆಹಚ್ಚಿ ಅವುಗಳ ಬದಲಾವಣೆಯಿಂದ ಮಿಂಚು ಉಳಿತಾಯ ಮಾಡಬಹುದು ಎಂಬುದು ಈ ಅರಕೆಗಾರರ ವಾದ. ಅದರಲ್ಲೂ ದೊಡ್ಡ ಕಟ್ಟಡಗಳಲ್ಲಿ ಇರುವ ಗಾಳಿ ಹೊಂದುಕಗಳು (air conditioner), ಗಾಳಿ ಕಿಂಡಿಗಳಿಗೆ ಹೆಚ್ಚಿನ ಮಿಂಚನ್ನು ಬಳಸಿಕೊಳ್ಳುತ್ತದೆ. ಆದರೆ ಬಳಸುವ ಕೆಲವು ದೊಡ್ಡ ಉಪಕರಣಗಳ ಗುಣಮಟ್ಟ ಕಳಪೆಯಾಗಿರುವುದೇ ಮಿಂಚಿನ ಬಳಕೆ ಹೆಚ್ಚಾಗಲು ಕಾರಣ.

ಇದುವರೆಗೂ ಈ ಬಿಣಿಗೆಗಳ ದೋಶಗಳನ್ನು ಕಂಡುಹಿಡಿಯಲು ಮಾನವನು ತಾನೇ ಪರೀಕ್ಶೆ ಮಾಡಬೇಕಿತ್ತು. ಆದರೆ ಅರಕೆಗಾರರ ಹೊಸ ಸಾದನ ಕಟ್ಟಡಗಳಲ್ಲಿರುವ ಮಿಂಚಿನ ಬಿಣಿಗೆಗಳ ದೋಶಗಳನ್ನು ತಾನಾಗಿಯೇ ಪತ್ತೆಹಚ್ಚಲಿದೆ. ಇದರಿಂದ ಸುಲಬವಾಗಿ ಕಳಪೆ ಗುಣಮಟ್ಟದ ಬಿಣಿಗೆಗಳ ಬದಲಾಯಿಸಲು ನೆರವಾಗಲಿದೆ. ಈಗಾಗಲೇ ಸುಮಾರು 100 ಕಟ್ಟಡಗಳಲ್ಲಿ ಈ ಸಾದನಗಳನ್ನು ಅಳವಡಿಸಿ ಓಳ್ಳೆಯ ಪಲಿತಾಂಶ ಪಡೆಯುವುದರ ಜೊತೆಗೆ 70 ಮಿಲಿಯನ್ ಡಾಲರ್‍ ನಶ್ಟು ಹಣ ಉಳಿತಾಯ ಮಾಡಿದ್ದಾರೆ. ಇವರು ಕಂಡುಹಿಡಿದಿರುವ ಈ ಸಾದನದ ಮೊತ್ತ 5000ಡಾಲರ್‍ ಗಳು. ಈ ಹೊಸ ಹುಡುಕಾಟವನ್ನು ಎಲ್ಲರ ಬಳಕೆಗೆ ತಂದು ಮಿಂಚಿನ ಉಳಿತಾಯ ಸಾದಿಸುವುದು ಇವರ ಕನಸು.

ಇದು ಪರನಾಡಿನಲ್ಲಿ ಮಿಂಚಿನ ಉಳಿತಾಯ ಮಾಡುವ ನಿಟ್ಟಿನಲ್ಲಿ ಮಾಡಿದ ಒಂದು ಅರಕೆಗೆ ಉದಾಹರಣೆಯಾದರೆ, ನಮ್ಮ ದಿನನಿತ್ಯದ ಮಿಂಚಿನ ಬಳಕೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ಹೇಗೆ ಮಿಂಚಿನ ಉಳಿತಾಯವನ್ನು ಮಾಡಬಹುದು ಎಂಬುದರ ಬಗ್ಗೆ ತಿಳಿಯೋಣ.

  • ಬೆಳಗಿನಿಂದ ಸಂಜೆಯವರೆಗೆ ಕ್ರುತಕ ಬೆಳಕಿನ ಏರ‍್ಪಾಡಿನ ಬದಲು ಪ್ರಾಕ್ರುತಿಕ ದತ್ತವಾದ ನೇಸರನ ಬೆಳಕನ್ನು ಸಾದ್ಯವಾದಶ್ಟೂ ಉಪಯೋಗಿಸಿಕೊಳ್ಳಿ.
  • ಮಿಂಚಿನ ಉಳಿತಾಯದ ಮೂಲ ಸಲಕರಣೆ ತಲೆ ಒತ್ತುಗುಂಡಿ. ದೀಪ, ಬೀಸಣಿಕೆ ಹಾಗೂ ಇತರ ಮಿಂಚಿನ ಉಪಕರಣಗಳನ್ನು ಬಳಸದ ಹೊತ್ತಿನಲ್ಲಿ ತಲೆ ಒತ್ತುಗುಂಡಿಯಿಂದ ಸಂಪರ್‍ಕ ತಪ್ಪಿಸಿ.
  • ಗಾಳಿ ಹೊಂದುಕದ ಏರ‍್ಪಾಡನ್ನು 26 ಡಿಗ್ರಿಯಲ್ಲಿ ಇರುವಂತೆ ನೋಡಿಕೊಳ್ಳಿ. 22 ಡಿಗ್ರಿಗಿಂತ ಹೆಚ್ಚಿನ ಪ್ರತಿಯೊಂದು ಡಿಗ್ರಿ ಬಳಕೆಗೆ ನೀವು ನೂರಕ್ಕೆ 3ರಿಂದ 5ರಶ್ಟು ಕಡಿಮೆ ಮಿಂಚನ್ನು ಉಳಿಸಿದಂತಾಗುತ್ತದೆ.
  • ಕಿಟಕಿಗೆ ಅಳವಡಿಸಿರುವ ಗಾಳಿ ಹೊಂದುಕವನ್ನು ಬಳಸುವಾಗ ಕಡು ತಂಪುವಿನ ಬದಲು ಕಡಿಮೆ ತಂಪು, ನಡು ತಂಪು ಮಟ್ಟದಲ್ಲಿ ಉಪಯೋಗಿಸಿ.
  • ಕಚೇರಿಯಲ್ಲಿ, ಕಚೇರಿ ಪ್ರಾರಂಬಗೊಂಡ ಒಂದು ಗಂಟೆಯ ನಂತರ ಗಾಳಿ ಹೊಂದುಕವನ್ನು ಬಳಸಿ. ಹಾಗೆಯೇ ಕಚೇರಿ ವೇಳೆ ಮುಗಿಯುವ ಒಂದು ಗಂಟೆ ಮುಂಚೆ ಗಾಳಿ ಹೊಂದುಕದ ಉಪಯೋಗವನ್ನು ನಿಲ್ಲಿಸಿ.
  •  ಗಾಳಿ ಹೊಂದುಕದ ಗಾಳಿ ಸೋಸುಕವನ್ನು ಆಗಾಗ್ಗೆ ಶುದ್ದವಾಗಿರಿಸಿ. ಇದರಿಂದ ಮಿಂಚಿನ ಉಳಿತಾಯವಾಗಿ, ಗಾಳಿ ಹೊಂದುಕ ಉಪಯೋಗಿಸುವ ಜಾಗದಲ್ಲಿ ಗಾಳಿಪಾಡು ಸಹ ತಂಪಾಗಿರುತ್ತದೆ.
  • ಟಂಗಸ್ಟನ್ ದೀಪಗಳ ಬದಲು ಬೆಳ್ಗೊಳವೆಯ ದೀಪ ಹಾಗೂ ಸಿ ಎಪ್ ಎಲ್ ದೀಪಗಳನ್ನು ಉಪಯೋಗಿಸಿ. ಇವು ನೂರಕ್ಕೆ 70ರಶ್ಟು ಮಿಂಚಿನ ಉಳಿತಾಯ ಮಾಡುತ್ತವೆ.

bulbs

  • ಕಿಟಕಿಗಳಿಗೆ ಸೋಲಾರ್‍ ಸವ್ರ ಚಿತ್ರ ಅತವಾ ತಿಳಿ ಬಿಳಿ ಬಣ್ಣ ಮಿಶ್ರಿತ ಗಾಜನ್ನು ಅಳವಡಿಸಿ. ಇವು ನೂರಕ್ಕೆ 40ರಶ್ಟು ಮಿಂಚಿನ ಉಳಿತಾಯಕ್ಕೆ ಪರೋಕ್ಶವಾಗಿ ನೆರವಾಗುತ್ತವೆ.
  • ತಂಪೆಟ್ಟಿಗೆಯ ಸುತ್ತ ಸಾಕಶ್ಟು ಗಾಳಿ ಓಡಾಟಕ್ಕೆ ಅವಕಾಶ ಕೊಡಿ. ತಂಪೆಟ್ಟಿಗೆ ಒತ್ತುಕ ಹಾಗೂ ಬಿಣಿಗೆಯಿಂದ ಉಂಟಾಗುವ ಬಿಸಿಯು ಹೊರಹೋಗಲು ಗೋಡೆಯಿಂದ ಕಡಿಮೆ ಎಂದರೂ 6 ಇಂಚಿನಶ್ಟು ದೂರದಲ್ಲಿ ತಂಪೆಟ್ಟಿಗೆ ಇಡಿ.
  • ತಂಪೆಟ್ಟಿಗೆಯಲ್ಲಿ ಅಗತ್ಯಕ್ಕಿಂತ ಪದಾರ್‍ತಗಳನ್ನು ತುಂಬಬೇಡಿ. ಒಳಗೆ ಗಾಳಿ ಸರಾಗವಾಗಿ ಓಡಾಡಿದಶ್ಟೂ ತಂಪೆಟ್ಟಿಗೆಯ ತಂಪುಗೊಳಿಸುವ ಏರ್‍ಪಾಡು ಚೆನ್ನಾಗಿರುತ್ತದೆ.
  • ಕಡು ತಂಪಿನ ಏರ್‍ಪಾಡಿಗಾಗಿ ತಂಪೆಟ್ಟಿಗೆಯ ಬಿಸಿಯನ್ನು ನಡು ಮಟ್ಟದಲ್ಲಿ ಇರಿಸಿ.
  • ತಂಪೆಟ್ಟಿಗೆಯ ಬಾಗಿಲನ್ನು ಅನವಶ್ಯವಾಗಿ ತೆರೆದಿರಬೇಡಿ. ಬಾಗಿಲನ್ನು ತೆಗೆಯುವ ಮುನ್ನ ನಿಮಗೆ ಏನು ಬೇಕು, ಏನು ಇಡಬೇಕು ಎಂದು ನಿರ್‍ದರಿಸಿ ಬೇಗನೇ ಉಪಯೊಗಿಸಿ.
  • ತಿನಿಸು ಪದಾರ್‍ತಗಳನ್ನು ಕೋಣೆಯ ಬಿಸಿಗೆ ಇರುವಂತೆ ತಂಪುಗೊಳಿಸುವ ಏರ್‍ಪಾಡನ್ನು ಮಾಡಿಕೊಳ್ಳಿ. ಅವನ್ನು ತಂಪೆಟ್ಟಿಗೆಯಲ್ಲಿ ಇರಿಸುವ ಮುನ್ನ ಮುಚ್ಚಿರುವುದನ್ನು ಕಚಿತಪಡಿಸಿಕೊಳ್ಳಿ.
  • ಒಗಿಬಿಣಿಗೆ (washing machine)ಯಲ್ಲಿ ಮಿಂಚಿನ ಬಳಕೆ ಒಂದೇ ಸಮನಾಗಿರುವುದರಿಂದ ಕಾಲು ಬಾಗ ಅತವಾ ಅರ್‍ದ ಬಾಗದಶ್ಟು ಬಟ್ಟೆಗಳನ್ನು ಒಗೆಯುವ ಬದಲು ಪೂರ್‍ಣಮಟ್ಟದವರೆಗೆ ಬಟ್ಟೆಗಳನ್ನು ಹಾಕಿ ಒಗೆಯಿರಿ. ಇದು ಪದೇ ಪದೇ ಒಗಿಬಿಣಿಗೆಯ ಬಳಕೆಯನ್ನು ತಪ್ಪಿಸುತ್ತದೆ.
  • ಒಗಿಬಿಣಿಗೆ ಅತವಾ ಇತರ ಯಾವುದೇ ಮಿಂಚಿನ ಉಪಕರಣವನ್ನು ಕರೀದಿಸುವಾಗ ಮಿಂಚನ್ನು ಕಡಿಮೆ ಬಳಸಿ ಮಿಂಚನ್ನು ಉಳಿತಾಯ ಮಾಡುವ ಉಪಕರಣಗಳನ್ನೇ ಕರೀದಿಸಿ.
  • ಒಗಿಬಿಣಿಗೆಯನ್ನು ಉಪಯೋಗಿಸದಿದ್ದಾಗ ಒತ್ತು ಗುಂಡಿಯ ಸಂಪರ್‍ಕದಿಂದ ತೆಗೆದಿಡಿ. ಏಕೆಂದರೆ, ಕಾಯು ಬಗೆ (stand by mode) ಹಂತದಲ್ಲಿ ಇರಿಸಿದ್ದರೂ ಸಹ ಮಿಂಚಿನ ಬಳಕೆ ಆಗುತ್ತದೆ.
  • ಎಣ್ಣುಕದ ಬದಲು ಕಡಿಮೆ ಮಿಂಚನ್ನು ಬಳಸುವ ಮಡಿಲೆಣ್ಣುಕ (laptop) ವನ್ನು ಉಪಯೋಗಿಸಿ. ಒಂದುವೇಳೆ ಎಣ್ಣುಕವನ್ನು ಉಪಯೋಗಿಸಿದರೆ ನೀರ್‍ವರಳು ತೆರೆ ತೋರುಕವನ್ನು (LCD) ಉಪಯೋಗಿಸಿ.
  • ಎಣ್ಣುಕದಲ್ಲಿ 65 ರಿಂದ 250 ವಾಟ್ ಮಿಂಚಿನ ಬಳಕೆಯಾದರೆ, ಮಡಿಲೆಣ್ಣುಕದಲ್ಲಿ 15 ರಿಂದ 45 ವಾಟ್ ಮಿಂಚಿನ ಬಳಕೆ ಆಗುತ್ತದೆ.
  • ಎಣ್ಣುಕದ ಬಳಕೆಯಿಂದ ಹೆಚ್ಚಿನ ಸಮಯ ಹೊರಗಿರಬೇಕಾದರೆ ಆರಿಸುವ ಹಾಗೆ ಎಣ್ಣುಕವನ್ನು ಕುಗುರು ಬಗೆಯಲ್ಲಿರಿಸಿ (sleep mode). ನಿಮ್ಮ ಎಣ್ಣುಕವು ಕುಗುರು ಬಗೆ, ಕಾಯು ಬಗೆ (stand by mode) ಅತವಾ ನೆನೆಮುಚ್ಚು ಬಗೆಯಲ್ಲಿದ್ದರೆ (hibernate) ಕೇವಲ 0-6 ವಾಟ್ ಮಿಂಚಿನ ಬಳಕೆ ಆಗುತ್ತದೆ.
  • ತೆರೆಕಾಪು (Screensaver) ಬಳಕೆ ಮಿಂಚಿನ ಉಳಿತಾಯಕ್ಕೆ ಹಾದಿಯಲ್ಲ. ತೋರುಕ (monitor) ಏನನ್ನೂ ತೋರಿಸದ ಹಂತದಲ್ಲಿ ಇದ್ದರೆ ಮಾತ್ರ ಮಿಂಚಿನ ಉಳಿತಾಯವಾಗುತ್ತದೆ. ತೋರುಕವನ್ನು ಆರಿಸಿದರೆ, 0-10 ವಾಟ್ ಮಿಂಚಿನ ಬಳಕೆ ಆಗುತ್ತದೆ.

green-laptop

  • ನಾವು ಉಪಯೋಗಿಸುತ್ತಿದ್ದ ಮಿಂಚಿನ ಉಪಕರಣವನ್ನು ಆರಿಸಿದರೂ, ಅದನ್ನು ಸಂಪರ್‍ಕಗೊಳಿಸಿರುವ ತಲೆ ಒತ್ತುಗುಂಡಿಯ ಸಂಪರ್‍ಕ ಕಡಿತ ಮಾಡುವುದನ್ನು ನಾವು ಸಾಮಾನ್ಯವಾಗಿ ಮರೆಯುತ್ತೇವೆ. ಇದು ಕಾಯು ಬಗೆ ಹಂತದಲ್ಲಿದ್ದು, ಮಿಂಚಿನ ಬಳಕೆ ಆಗುತ್ತಿರುತ್ತದೆ. ಮಿಂಚಿನ ಬಿರಡೆಯಿಂದ ನಿಮ್ಮ ಮಿಂಚಿನ ಉಪಕರಣವು ಆರಿರುವುದನ್ನು ಕಚಿತಪಡಿಸಿಕೊಳ್ಳಿ. ಈ ಅಬ್ಯಾಸ ನಿಮಗೇ ತಿಳಿಯದಂತೆ ಶೇಕಡಾ 5ರಶ್ಟು ಮಿಂಚನ್ನು ಉಳಿಸುತ್ತದೆ.
  • ಇತರ ಮಿಂಚಿನ ಉಪಕರಣಗಳ ಜೊತೆ ದೂರದರ್‍ಶನ, ಇನಿತ ಪೆಟ್ಟಿಗೆ (music system), ಕಲಸುಗ (mixer) ಇಂತಹ ಉಪಕರಣಗಳ ಆರಿಸುವುದರ ಜೊತೆಗೆ ಇವುಗಳ ಸಂಪರ್‍ಕವನ್ನು ತಲೆ ಒತ್ತುಗುಂಡಿಯಲ್ಲಿ ಸಹ ಆರಿಸಿ. ಇಲ್ಲದಿದ್ದರೆ ಇವು ಕಾಯು ಬಗೆಯಲ್ಲಿದ್ದು ಅನವಶ್ಯ ಮಿಂಚಿನ ಬಳಕೆ ಆಗುತ್ತದೆ.
  • ಅಲ್ಪಾವದಿಯನ್ನು ಹೊರತುಪಡಿಸಿ, ಎಣ್ಣುಕದ ತೋರುಕವನ್ನು ಕುಗುರು ಬಗೆ ಅತವಾ ತೆರೆಕಾಪುವಿನಲ್ಲಿ ಇರಿಸಬೇಡಿ. ಇದು ಮಿಂಚಿನ ಬಳಕೆಗೆ ಅವಕಾಶವಾಗುತ್ತದೆ.
  • ಬೆಳಗ್ಗೆ ಹಾಗೂ ಸಂಜೆ 6 ರಿಂದ 9 ಗಂಟೆಗಳ ನಡುವಿನ ಸಮಯ ಅತ್ಯದಿಕ ಮಿಂಚಿನ ಬೇಡಿಕೆಯ ಸಮಯವಾಗಿರುತ್ತದೆ. ಈ ಸಮಯಯಲ್ಲಿ ಹಲವು ಪ್ರವರ್‍ಗದ ಗ್ರಾಹಕರು ಮಿಂಚನ್ನು ಉಪಯೋಗಿಸುತ್ತಿರುತ್ತಾರೆ.
  • ಸಾದ್ಯವಾದಶ್ಟೂ ಮಟ್ಟಿಗೆ ಅವಶ್ಯವಿರದ ಹೊರತು, ಮಿಂಚಿನ ಉಪಯೋಗವನ್ನು ಮಿತಿಗೊಳಿಸಿ.
  • ಅತ್ಯದಿಕ ಮಿಂಚಿನ ಬೇಡಿಕೆಯ ಸಮಯಯಲ್ಲಿ ಇಸ್ತ್ರೀ ಪೆಟ್ಟಿಗೆ, ನೀರಿನ ಚಿಲುಮೆ, ಒಗಿಬಿಣಿಗೆ, ನೀರೊತ್ತುಕ (water pump) ಇಂತಹ ಉಪಕರಣಗಳನ್ನು ಬಳಸುವುದನ್ನು ತಪ್ಪಿಸಿ.
  • ಅಲೆಯುಲಿ ಹಾಗೂ ಮಿಂಕಟ್ಟು ತುಂಬಿಕೆಯು (rechargeable battery) , ಪೂರ್‍ತಿ ತುಂಬಿದ ಕೂಡಲೇ ಆರಿಸಿ ಮಿಂಚಿನ ಬಿರಡೆಯಿಂದ ತೆಗೆಯಿರಿ. ಹಾಗೆ ಬಿಟ್ಟರೆ ಆರಿಸಿದ್ದರೂ ಸಹ ಕೆಲವು ತುಂಬಿಕೆಗಳು ಮಿಂಚನ್ನು ಎಳೆದುಕೊಳ್ಳುತ್ತವೆ.
  • ಎತ್ತುಕಗಳು (elevator/Lift) ಹೆಚ್ಚಿನ ಮಿಂಚಿನ ಬಳಸುವುದರಿಂದ ಸಾದ್ಯವಾದಶ್ಟೂ ಮಟ್ಟಿಗೆ ಇವುಗಳ ಬಳಕೆ ಕಡಿಮೆಗೊಳಿಸಿ. ಈ ಮಿಂಚಿನ ಉಳಿತಾಯ ಸುಮಾರು 150 ದೀಪಗಳ ಮಿಂಚಿನ ಬಳಕೆಗೆ ಬಳಕೆಯಾಗುತ್ತದೆ.
  • ಮಿಂಕಟ್ಟು ತುಂಬಿಕೆಯ ಬದಲು ಸೋಲಾರ್‍ ತುಂಬಿಕೆಗಳನ್ನು ಉಪಯೋಗಿಸಿ. ಏಕೆಂದರೆ ಸವ್ರ ಹುರುಪು ಉಚಿತ ಹಾಗೂ ಮರಳಿ ಪಡೆಯುವ ಸಂಪನ್ಮೂಲವಾಗಿದೆ.

ಈ ಮೇಲಿನ ಸೂಚನೆಗಳನ್ನು ಪಾಲಿಸುವ ಮೂಲಕ ನಾವು ಸಾಕಶ್ಟು ಮಿಂಚನ್ನು ಉಳಿಸಬಹುದಾಗಿದೆ. ಅಲ್ಲದೇ ಸುತ್ತಣದ/ಪರಿಸರದ ಸಮತೋಲನೆಗೂ ಕೊಡುಗೆ ನೀಡಿದಂತಾಗುತ್ತದೆ.
ಇಂದು ರಾತ್ರಿ 8.30 ಇಂದ 9.30 ವರೆಗೆ ಮಿಂಚಿನ ದೀಪಗಳನ್ನು ಆರಿಸುವ ಮೂಲಕ ಸುತ್ತಣದ ಉಳಿವಿಗಾಗಿ ನಾವೂ ’ನೆಲದ ಗಂಟೆಯಲ್ಲಿ’ ಪಾಲ್ಗೊಳ್ಳೋಣ ಬನ್ನಿ.

(ತಿಟ್ಟಸೆಲೆಗಳು: earthhour.orgwikihowwww.slate.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks