ಹಣ್ಣುಗಳ ರಾಜ ಮಾವಿನಹಣ್ಣು

– ಶ್ಯಾಮಲಶ್ರೀ.ಕೆ.ಎಸ್.

ಬೇಸಿಗೆ ಕಾಲ ಅಂದರೆ ಅದೊಂದು ರೀತಿ ಮಾವಿನ ಹಣ್ಣು ಸವಿಯುವ ಕಾಲ. ಬೇಸಿಗೆಯ ಸೀಸನಲ್ ಪ್ರೂಟ್ ಮಾವು. ಮಾವಿನ ಹಣ್ಣನ್ನು ಇಶ್ಟ ಪಡದವರೇ ಇಲ್ಲ. ಅದರ ಸಿಹಿಯ ಸವಿಗೆ ಸಾಟಿ ನೀಡುವ ಹಣ್ಣು ಮತ್ತೊಂದಿಲ್ಲ. ಆದ್ದರಿಂದಲೇ ಅಲ್ಲವೇ ಮಾವಿನ ಹಣ್ಣಿಗೆ ಹಣ್ಣುಗಳ ರಾಜ ಎಂಬ ಬಿರುದು ಪಟ್ಟ. ಈಗಾಗಲೇ ಅಲ್ಲಲ್ಲಿ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ, ಹಾದಿಬೀದಿಗಳಲ್ಲಿ ಲಗ್ಗೆ ಹಾಕಿವೆ. ಈ ಹಣ್ಣನ್ನು ನೋಡಿದಾಗಲೆಲ್ಲ ಎಳವೆಯಲ್ಲಿ ಬೇಸಿಗೆಯ ರಜೆಗೆ ಊರಿಗೆ ಹೋದಾಗ ಮಾವಿನ ಮರಕ್ಕೆ ದಾಳಿ ಮಾಡಿ ಕಲ್ಲು ಬೀಸಿ ದೊರೆಗಾಯಿಗಳನ್ನು ಕೆಡವಿ ಜಜ್ಜಿ ಉಪ್ಪು ಕಾರ ಹಚ್ಚಿ ತಿಂದು ಸಂಬ್ರಮಿಸುತ್ತಿದ್ದ ನೆನಪು ಮರುಕಳಿಸಿ ಆನಂದವಾಗುತ್ತದೆ. ಮಾಗಿದ ಕಾಯಿಗಳನ್ನು ಕಿತ್ತು ತಂದು ಹಣ್ಣು ಮಾಡಿ ಅಜ್ಜಿ ನಮಗಾಗಿಯೇ ಕಾಯ್ದಿರಿಸುತ್ತಿದ್ದರು. ಕಚ್ಚಾ ಮಾವಿನ ಹಣ್ಣುಗಳನ್ನು ಹಾಗೇ ಸವಿದು ಅದರ ಓಟೆ (ಗೊರಟೆ) ಯನ್ನು ಎರೆದು ತಿರುಳನ್ನು ತಿಂದು ಎಸೆಯುತ್ತಿದ್ದುದ್ದೇ ಮಜ. ಆ ಸಡಗರಕ್ಕೆ ಎಣೆಯಿರಲಿಲ್ಲ. ತೋತಾಪುರಿ ಉಪ್ಪು ಕಾರದ ಜೊತೆ ತಿನ್ನಲು ಸೊಗಸಾಗಿದ್ದರೆ, ರಸಪುರಿಯ ಸಿಹಿ, ಮತ್ತೆ ಮತ್ತೆ ತಿನ್ನಲು ಪ್ರೇರೇಪಿಸುತ್ತಿತ್ತು. ಊಟಕ್ಕೆ ಮಾವಿನಕಾಯಿ ಉಪ್ಪಿನಕಾಯಿಯೂ ಜೊತೆಯಾಗುತ್ತಿತ್ತು.

ಪ್ರತಿ ವರ‍್ಶ ಚೈತ್ರದಲ್ಲಿ ಚಿಗುರಿ ಹೂಬಿಟ್ಟು ಪಲ ನೀಡಿ ವಸಂತ ರುತುವಿನ ಕಾಲವನ್ನು ಸಾರುವುದು ಈ ಮಾವು. ಮಾವಿಗೆ ಸುಮಾರು 4000ವರ‍್ಶಗಳ ಇತಿಹಾಸವಿದೆ ಎಂದು ಊಹಿಸಲಾಗಿದೆ. ನಾಲ್ಕು ಸಾವಿರ ವರ‍್ಶಗಳ ಹಿಂದೆ ಪೂರ‍್ವ, ದಕ್ಶಿಣ ಏಶ್ಯಾದಲ್ಲಿ ಇದರ ಇರುವಿಕೆ ಗುರುತಿಸಲ್ಪಟ್ಟಿದೆ. ಮಾವಿಗೆ ರಾಮಾಯಣದ ಪೌರಾಣಿಕ ಹಿನ್ನೆಲೆ ಇದೆ ಎಂದು ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ರಾಮನ ಬಂಟ ಹನುಮ ತನ್ನ ದೊರೆ ಶ್ರೀ ರಾಮನ ಆಜ್ನೆಯ ಮೇರೆಗೆ ರಾಮನ ಸತಿ ಸೀತೆಯ ಬಗ್ಗೆ ವಿಚಾರ ತಿಳಿಯಲು ದಶಮುಕ ರಾವಣನು ಅಡಗಿಸಿಟ್ಟಿದ್ದ ಲಂಕೆಯ ಅಶೋಕವನಕ್ಕೆ ಬಂದಾಗ ಆ ವನದಲ್ಲಿ ಮಾವಿನ ಹಣ್ಣುಗಳು ಹನುಮಂತನ ಕಣ್ಣಿಗೆ ಬಿದ್ದವಂತೆ. ಅದರ ಪರಿಮಳ ಮತ್ತು ರುಚಿಗೆ ಮನಸೋತ ವಾನರ ಹನುಮಂತ ಸೀತೆಯ ಆಜ್ನೆಯ ಮೇರೆಗೆ ಹಣ್ಣುಗಳನ್ನು ರಾಮನಿಗಾಗಿ ಒಯ್ದನಂತೆ. ಹೀಗೆ ಲಂಕೆಯಿಂದ ಬಾರತಕ್ಕೆ ಹಾರಿಬಂದ ಮಾವು ಮೊದಲ ಬಾರಿಗೆ ಪರಿಚಯವಾದದ್ದು ಹನುಮಂತನಿಂದ ಎಂದು ಪುರಾಣ ಹೇಳುತ್ತದೆ. ವೇದ ಪುರಾಣಗಳಲ್ಲಿ ಅನೇಕ ವಿದ್ವಾಂಸರಿಂದ ಮಾವಿನ ಬಗ್ಗೆ ವರ‍್ಣಿಸಲಾಗಿದೆ ಎಂಬ ವರದಿಯಿದೆ. 1498 ರಲ್ಲಿ ಪೋರ‍್ಚುಗೀಸರು ಕೇರಳದಿಂದ ಮಾವನ್ನು ತಂದು ಅಮೇರಿಕಾ ಆಪ್ರಿಕಾ ಯೂರೋಪ್ಗಳಲ್ಲಿ ಪರಿಚಯಿಸಿದ್ದರಂತೆ. ಮಾವಿನ ವೈಜ್ನಾನಿಕ ಹೆಸರು ಮ್ಯಾಂಗಿಪೆರ ಇಂಡಿಕಾ(Mangifera indica).

ಮಾವಿನ ಹಿನ್ನೆಲೆ ಮತ್ತು ಬಗೆ ಬಗೆಯ ತಳಿಗಳು

ಬಾರತೀಯರ ಪ್ರಿಯವಾದ ಅಚ್ಚುಮೆಚ್ಚಿನ ಹಣ್ಣು ಮಾವು. ಜಗತ್ತಿನಾದ್ಯಂತ ಶೇಕಡಾ 60 ರಶ್ಟು ಮಾವು ಬೆಳೆಯುವ ದೇಶ ನಮ್ಮ ಬಾರತ. ಆದ್ದರಿಂದಲೇ ಬಾರತದ ರಾಶ್ಟ್ರೀಯ ಹಣ್ಣು ಮಾವಿನಹಣ್ಣು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾರತದಲ್ಲಿ ಸುಮಾರು 500 ಸಂಕ್ಯೆಯಲ್ಲಿ ಮಾವಿನ ತಳಿಗಳಿವೆ. ಬಣ್ಣ, ಆಕಾರ ಗಾತ್ರ ಪರಿಮಳಗಳಿಂದ ಅವುಗಳನ್ನು ವಿಂಗಡಿಸಲಾಗಿದೆ. ಅವುಗಳಲ್ಲಿ ಕೆಲವು ಪ್ರಮುಕ ವಾಣಿಜ್ಯ ಬೆಳೆಗಳ ತಳಿಗಳಾಗಿವೆ. ಮಾವಿನ ಹಣ್ಣನ್ನು ಹೊರಗಡೆಯಿಂದ ಕೊಂಡು ತಂದಾಗ ಕೆಲಹೊತ್ತು ನೀರಿನಲ್ಲಿ ನೆನೆಸಿಡಬೇಕು. ಕಾರಣ ಇಶ್ಟೇ, ಹಣ್ಣಿನ ಹೊರಬಾಗದಲ್ಲಿರವ ಕೆಲವು ರಾಸಾಯನಿಕಗಳು, ದೂಳು ಕಣಗಳು ನಾಶವಾಗಲು ಇದು ಸಹಕಾರಿಯಾಗಲಿದೆ. ನಾವೇ ನಮ್ಮದೇ ತೋಟಗಳಲ್ಲಿ ನೈಸರ‍್ಗಿಕವಾಗಿ ಬೆಳೆದು ಹಣ್ಣಾಗಿಸಿದ ಹಣ್ಣುಗಳಿಂದ ಯಾವುದೇ ತೊಂದರೆಯಾಗುವುದಿಲ್ಲ. ಹೊರಗಡೆಯಿಂದ ತರುವ ಹಣ್ಣುಗಳನ್ನು ಕ್ರುತಕವಾಗಿ ಹಣ್ಣಾಗಿಸಲು ಆಕರ‍್ಶಕವಾದ ಬಣ್ಣ ನೀಡಲು ರಾಸಾಯನಿಕಗಳನ್ನು ಸಿಂಪಡಿಸಿರುತ್ತಾರೆ. ರಸಪುರಿ, ಬಾದಾಮಿ, ತೋತಾಪುರಿ, ಲಂಗ್ರಾ, ಕೇಸರ್ ಮತ್ತು ಆಲ್ಪನ್ಸೋ ಹೀಗೆ ಹಲವು ತಳಿಗಳು ಸಾಮಾನ್ಯವಾಗಿ ಸಿಗುವಂತಹವು. ಪ್ರತಿ ವರ‍್ಶ ಜುಲೈ ತಿಂಗಳ 22ರಂದು ರಾಶ್ಟ್ರೀಯ ಮಾವಿನ ದಿನವನ್ನಾಗಿ ಆಚರಿಸಲಾಗುತ್ತದೆ. ಇದರ ಉದ್ದೇಶ ಇಶ್ಟೇ, ಬಾರತದ ತಳಿಗಳನ್ನು ಪ್ರಪಂಚಾದ್ಯಂತ ಪರಿಚಯಿಸುವುದು ಹಾಗೂ ಅವುಗಳನ್ನು ಪರದೇಶದವರು ಗುರುತಿಸುವಂತೆ ಮಾಡುವುದು.

ಮಾವು ನಾಟಿ ಮಾಡಿ ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದರೆ ಮೂರ‍್ನಾಲ್ಕು ವರ‍್ಶಕ್ಕೆ ಪಲ ನೀಡಲಾರಂಬಿಸುತ್ತದೆ. ಗಮನಿಸಿ ನೋಡಿದರೆ ಮಾವು ಒಂದು ವರ‍್ಶ ಹೆಚ್ಚು ಪಸಲು ನೀಡಿದರೆ, ಮತ್ತೊಂದು ವರ‍್ಶ ಪಸಲಿನಲ್ಲಿ ಇಳಿಮುಕವಾಗಿರುತ್ತದೆ, ಮತ್ತೆ ಮುಂದಿನ ವರುಶದಲ್ಲಿ ಅದರ ಸಂಕ್ಯೆ ದುಪ್ಪಟ್ಟಾಗಿರುತ್ತದೆ. ಬೇಸಿಗೆಯಲ್ಲಿ ಮಾವು ರೈತನ ಕೈಹಿಡಿಯುವ ಒಂದು ಪ್ರಮುಕ ವಾಣಿಜ್ಯ ಬೆಳೆ. ಹಸಿರೆಲೆಗಳಿಂದ ಸದಾ ಹಸಿರಾಗಿರುವ ಮಾವು ಸಮಾರು 15ಮೀಟರ್ ಎತ್ತರದಶ್ಟು ಬೆಳೆಯುತ್ತದೆ. ಹಿರಿಯರು ಹೇಳುವಂತೆ ಮಾವಿನ ಮರಕ್ಕೆ ಆಯಸ್ಸು ಜಾಸ್ತಿ. ಒಳ್ಳೆ ತಳಿ ಹಾಗೂ ಆರೈಕೆ ದೊರೆತ ಮರಗಳು ಹೆಚ್ಚು ಕಡಿಮೆ 100 ವರುಶಗಳಶ್ಟು ಕಾಲ ಪಲ ನೀಡುತ್ತಾ ಉಳಿದಿರುವ ನಿದರ‍್ಶನಗಳು ಕೇಳಿ ಬಂದಿವೆ.

ಮಾವಿನ ಬಳಕೆಗಳು ಮತ್ತು ದಾರ್‍ಮಿಕ ಹಿನ್ನೆಲೆ

ನಮ್ಮ ಬಾರತೀಯ ಪರಂಪರೆಯಲ್ಲಿ ಮಾವನ್ನು ಮಂಗಳಕರ ಸಸ್ಯಗಳ ಪೈಕಿಗೆ ಸೇರಿಸಲಾಗುತ್ತದೆ. ಇದರ ಎಲೆಗಳನ್ನು ಬಳಸಿ ಹಬ್ಬಗಳಲ್ಲಿ, ಅದರಲ್ಲೂ ಯುಗಾದಿ ಹಬ್ಬಕ್ಕೆ ತಪ್ಪದೇ ಮನೆಬಾಗಿಲಿಗೆ ತೋರಣ ಕಟ್ಟಲಾಗುತ್ತದೆ. ಹಬ್ಬ ಹರಿದಿನ ಜಾತ್ರೆ ಹೀಗೆ ದೇವಸ್ತಾನ, ಮನೆಗಳಲ್ಲಿ ಯಾವುದೇ ಮಂಗಳ ಕಾರ‍್ಯಕ್ಕೆ ತೋರಣಕ್ಕೆ ಮಾವಿನ ಎಲೆಗಳನ್ನು ಬಳಸುವ ವಾಡಿಕೆ ಇರುವುದು ಎಲ್ಲರಿಗೂ ತಿಳಿದ ವಿಚಾರ. ನಮ್ಮಲ್ಲಿ ಮಾವಿನ ಎಲೆಗಳಿಗೆ ಒಂದು ರೀತಿಯ ದಾರ‍್ಮಿಕ ಸ್ತಾನವಿದೆ. ಮಾವಿನೆಲೆಯ ಚಿಗುರಿನ ರಸಕ್ಕೆ ಕೋಗಿಲೆಯಂತ ಹಕ್ಕಿಗಳು ಸೋತು ಹಾಡುವುದನ್ನು ಕವಿಗಳು ತಮ್ಮ ಬರಹಗಳಲ್ಲಿ ಬಣ್ಣಿಸಿದ್ದಾರೆ. ಮಾವಿನಹಣ್ಣಿನ ಸೀಕರಣೆ ಕರಾವಳಿಯಲ್ಲಿ ಮನೆಮಾತು. ಉಪ್ಪಿನಕಾಯಿ ಅಂದರೆ ಮೊದಲು ನೆನಪಾಗುವುದು ಮಾವಿನಕಾಯಿ. ದಕ್ಶಿಣ ಬಾರತದಲ್ಲಿ ಮಾವಿನಕಾಯಿ ಉಪ್ಪಿನಕಾಯಿ,ತೊಕ್ಕು ಎಲ್ಲೆಡೆ ಕಾಯಂ. ಮನೆಗಳಲ್ಲಿ ಮಾಡುವ ಮಾವಿನ ಕಾಯಿ ಚಿತ್ರಾನ್ನ, ಮಾವಿನಕಾಯಿ ತೊವ್ವೆ ಬೇಸಿಗೆಗೆ ಹೇಳಿ ಮಾಡಿಸಿದ ಆಹಾರಗಳು. ಒಣಗಿದ ಮಾವಿನಕಾಯಿಗಳನ್ನು ಬಳಸಿ ಆಮ್ ಚೂರನ್ನು ತಯಾರಿಸಲಾಗುತ್ತದೆ. ವಿಶೇಶ ತಿನಿಸುಗಳಿಗೆ ಆಮ್ ಚೂರನ್ನು ಸೇರಿಸಲಾಗುತ್ತದೆ. ಪಾನೀಯ, ಜಾಮ್ ಜೆಲ್ಲಿ ಗಳಿಗೂ ಮಾವಿನಹಣ್ಣು ಬೇಕು.

‘ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎಂಬ ನಾಣ್ನುಡಿಯಂತೆ ಊಟದ ಬಳಿಕ ಮಾವಿನ ಹಣ್ಣು ತಿನ್ನುವುದರಿಂದ ಸುಲಬವಾಗಿ ಜೀರ‍್ಣವಾಗುವುದೆಂಬ ನಂಬಿಕೆ ಇದೆ. ಅಂದರೆ ಮಾವು ಪಚನಕ್ರಿಯೆಗೆ ಬಲು ಉಪಯೋಗಕಾರಿ ಎಂಬುದನ್ನು ಹೇಳಲಾಗುತ್ತದೆ. ಅಮೈಲೇಸ್ ಎಂಬ ಕಿಣ್ವಗಳು ಈ ಜೀರ‍್ಣ ಕ್ರಿಯೆಗೆ ಕಾರಣ. ಮಾವಿನಲ್ಲಿ ಕಿತ್ತಳೆಯ ಅರ‍್ದದಶ್ಟು ವಿಟಮಿನ್ ಸಿ ಇದೆಯಂತೆ. ಮಾವನ್ನು ನಿಯಮಿತವಾಗಿ ತಿನ್ನುವುದರಿಂದ ಕಣ್ಣುಗಳಿಗೆ ಹಿತ ಎನ್ನುವ ಮಾಹಿತಿಯಿದೆ. ಹೊಟ್ಟೆ ಹುಣ್ಣು, ಕೂದಲ ಆರೈಕೆ, ಚರ‍್ಮ ಹೀಗೆ ಹತ್ತು ಹಲವು ಆರೋಗ್ಯ ವರ‍್ದನೆಗೆ ಮಾವಿನಹಣ್ಣು ರಾಮಬಾಣ. ಮಾವಿನ ಹಣ್ಣಿನ ಅತಿಯಾದ ಸೇವನೆ ಅತಿಸಾರಕ್ಕೆ ಕಾರಣವಾಗಬಹುದು. ಮಿತವಾಗಿ ತಿಂದರೆ ಒಳಿತು. ಬಣ್ಣ, ರುಚಿ, ಪರಿಮಳ, ಆರೋಗ್ಯ ಇವೆಲ್ಲದರ ಕಾರಣಗಳಿಗೆ ಮಾವು ನಮ್ಮ ಬಾರತದ ರಾಶ್ಟ್ರೀಯ ಹಣ್ಣಾಗಿ ಬೆರಗು ಮೂಡಿಸಿದೆ.

( ಚಿತ್ರಸೆಲೆ: pexels.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks