ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ – ಬಾಗ 1

– ಹರ‍್ಶಿತ್ ಮಂಜುನಾತ್.

ballot voting vote box politics choice election

ಹದಿನೆಂಟನೇ ನೂರೇಡು ಹಾಗೂ ಅದಕ್ಕಿಂತ ಹಿಂದೆ ಅರೆಸೊತ್ತಿಗೆ ಹಾಗೂ ಸರ‍್ವಾದಿಕಾರತ್ವ ಅತವಾ ನಿರಂಕುಶಾದಿಕಾರ ನಡೆಯುತ್ತಿತ್ತು. ಆ ಕಾಲದಲ್ಲಿ ರಾಜಕೀಯ ಅದಿಕಾರ ಹೊಂದಿದ ಒಬ್ಬನೇ ವ್ಯಕ್ತಿ, ಇಂದಿನ ಸರಕಾರ ಮಾಡುವ ಕೆಲಸಗಳನ್ನು ಪೂರಯ್ಸುತ್ತಿದ್ದರು. ಆಗ ವ್ಯಕ್ತಿಯ ಆಳ್ವಿಕೆ ಇತ್ತು. ರಾಜ ಅತವಾ ಸರ‍್ವಾದಿಕಾರಿ ಹೇಳಿದ್ದೇ ಕಾನೂನು, ಅವನು ನಡೆಸಿದ್ದೇ ಆಡಳಿತ ಹಾಗೂ ಅವನು ನೀಡಿದ್ದೇ ಶಿಕ್ಶೆ ಆಗುತಿತ್ತು. ಆಗ ಚುನಾವಣೆಗಳು ಹೆಚ್ಚುಗಾರಿಕೆ ಹೊಂದಿರಲಿಲ್ಲ. ಕಾಲಕಳೆದಂತೆ ಸ್ವಾತಂತ್ರ್ಯದ ಹೆಚ್ಚುಗಾರಿಕೆ ಮೇಲಾಗಿ 18ನೇ ನೂರೇಡಿನಿಂದೀಚೆ ಎಲ್ಲಾ ನಾಡುಗಳು ಮಂದಿಯಾಳ್ವಿಕೆ ಸರಕಾರದ ಕಡೆಗೆ ವಾಲುತ್ತಿವೆ. ನೇರ ಮಂದಿಯಾಳ್ವಿಕೆಯಲ್ಲಿ ಚುನಾವಣೆಯ ಅಗತ್ಯವಿರಲಿಲ್ಲ. ಎಕೆಂದರೆ ಮಂದಿಯೇ ನೇರವಾಗಿ ನಾಡಿನ ರಾಜಕೀಯ ಅತವಾ ಆಡಳಿತದಲ್ಲಿ ಬಾಗವಹಿಸುತ್ತಿದ್ದರು. ಕಾಲ ಕಳೆದಂತೆ ನಾಡುಗಳು ದೊಡ್ಡದಾಗಿ, ಮಂದಿಯೆಣಿಕೆ ಹೆಚ್ಚಾಗಿ, ಎಲ್ಲರೂ ರಾಜ್ಯದ ರಾಜಕೀಯದಲ್ಲಿ ನೇರವಾಗಿ ಬಾಗವಹಿಸುವುದು ಸಾದ್ಯವಾಗಲಿಲ್ಲ. ಆದ್ದರಿಂದ ಪರೋಕ್ಶ ಚುನಾವಣೆಯ ಅಗತ್ಯತೆ ಹೆಚ್ಚಾಗಿ, ದಿನಕಳೆದಂತೆ ಚುನಾವಣೆಗಳು ಹೆಚ್ಚುಗಾರಿಕೆಯನ್ನು ಪಡೆದುಕೊಂಡಿತು. ನಮ್ಮ ನಾಡಲ್ಲಿ ಚುನಾವಣೆಗಳು ಮಂದಿಯಾಳ್ವಿಕೆಯ ಆದಾರ ಕಂಬ. ಏಕೆಂದರೆ ಮಂದಿಯಾಳ್ವಿಕೆ ಸರಕಾರ ರಚನೆಯಾಗಲು ಚುನಾವಣೆಗಳೇ ಕಾರಣ. ಅಲ್ಲದೆ ಚುನಾವಣೆಗಳು ಮಂದಿಯ ಮೇಲದಿಕಾರವನ್ನು ಸಾಕಾರಗೊಳಿಸಲು ಅನಿವಾರ‍್ಯವಾಗಿದೆ. ಹೀಗಾಗಿ ಮತದಾರರ ವರ‍್ಗವು ಚುನಾವಣೆಗಳ ಮೂಲಕ ತಮಗೆ ಬೇಕಾದ ಸರಕಾರವನ್ನು ಆಯ್ಕೆ ಮಾಡಿಕೊಳ್ಳುತ್ತವೆ.

ಚುನಾವಣೆಯ ಅರ‍್ತ :- ತಮಗೆ ಬೇಕಾದ ಪ್ರತಿನಿದಿಯನ್ನು ಮತಗಳ ಮೂಲಕ ಆರಿಸಿಕೊಳ್ಳುವ ಕ್ರಮಕ್ಕೆ ‘ಚುನಾವಣೆ’ ಎನ್ನುವರು.
ಪ್ರತಿಯೊಂದು ಮಂದಿಯಾಳ್ವಿಕೆಯ ಸರಕಾರದಲ್ಲಿ ಪ್ರತಿನಿದಿಗಳನ್ನು ಆಯ್ಕೆ ಮಾಡಲು ಕಾಲಕಾಲಕ್ಕೆ ಚುನಾವಣೆಗಳು ನಡೆಯುತ್ತವೆ. ಇಂಡಿಯಾದಲ್ಲಿ ಅಯ್ದು ವರುಶಗಳಿಗೊಮ್ಮೆ ಚುನಾವಣೆಗಳನ್ನು ನಡೆಸಲಾಗುತ್ತದೆ. ಮಂದಿಯು ಪ್ರತಿನಿದಿಗಳ ಮೇಲೆ ಹಿಡಿತ ಸಾದಿಸಲು ಚುನಾವಣೆ ಒಂದು ಸಾದನವಾಗಿದೆ. ಇಂಡಿಯಾ ಸಂವಿದಾನದ ಹದಿನಯ್ದನೇ ಬಾಗದಲ್ಲಿ ಮುನ್ನೂರಿಪ್ಪತ್ತಾಲ್ಕರಿಂದ ಮುನ್ನೂರಿಪ್ನತ್ತೆಂಟನೇ ವಿದಿಗಳ ವರೆಗೆ ಚುನಾವಣೆ ಕುರಿತು ವಿವರಿಸುತ್ತದೆ. ಇಂಡಿಯಾದಲ್ಲಿ 1952ರಲ್ಲಿ ಮೊದಲ ಬಾರಿಗೆ ನ್ಯಾಯಬದ್ದ ಚುನಾವಣೆಗಳು ಪ್ರಾರಂಬಗೊಳ್ಳುವುದರ ಜೊತೆಗೆ ಇಂಡಯಾದ ಮಂದಿಗೆ ಮೊದಲ ಬಾರಿಗೆ ಸಾರ‍್ವತ್ರಿಕ ಮತದಾನದ ಮೂಲಕ ಚುನಾವಣೆಯಲ್ಲಿ ಬಾಗವಹಿಸಲು ಅವಕಾಶ ಮಾಡಿಕೊಟ್ಟವು. ಮತದಾನದ ಹಕ್ಕು ಪವಿತ್ರವಾದ ಹಕ್ಕೆಂದು ನಂಬಿರುವ ಇಂಡಿಯಾದಲ್ಲಿ, ಗುಟ್ಟಿನ ಮತದಾನ ಪದ್ದತಿ ಆದಾರದ ಮೇಲೆ ಚುನಾವಣೆಗಳು ನಡೆಯುತ್ತವೆ.

ಚುನಾವಣೆಯ ಬಗೆಗಳು :
ನೇರ ಚುನಾವಣೆ :- ಮತದಾನದ ದಿನ ಮತದಾರರು ನೇರವಾಗಿ ಮತಕಟ್ಟೆಗೆ ಹೋಗಿ ತಮಗೆ ಬೇಕಾದ ಅಬ್ಯರ‍್ತಿಗೆ ಮತ ನೀಡುವುದನ್ನು ನೇರ ಚುನಾವಣೆ ಎನ್ನುವರು. ಈ ಚುನಾವಣೆ ತುಂಬಾ ಸರಳವಾದ ವಿದಾನವಾಗಿದ್ದು, ಇಲ್ಲಿ ಯಾವುದೇ ಮದ್ಯಸ್ತಗಾರರಿಲ್ಲದೆ ತಮಗೆ ಸರಿ ಎನಿಸಿದ ಪ್ರತಿನಿದಿಗಳನ್ನು ಆಯ್ಕೆ ಮಾಡಿಕೊಳ್ಳಲು ಮಂದಿಗೆ ಅವಕಾಶ ನೀಡಲಾಗಿದೆ.
ಉದಾಹರಣೆ :- ಸಂಸತ್ತಿನ ಕೆಳಮನೆಯಾದ ಲೋಕಸಬಾ ಚುನಾವಣೆಯಲ್ಲಿ, ರಾಜ್ಯ ಶಾಸಕಾಂಗದ ಕೆಳಮನೆಯಾದ ವಿದಾನಸಬೆ ಚುನಾವಣೆಯಲ್ಲಿ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ, ಮಹಾನಗರ ಪಾಲಿಕೆ, ನಗರಸಬೆ ಮತ್ತು ಪುರಸಬೆ ಚುನಾವಣೆಗಳಿಗೆ ನೇರ ಚುನಾವಣೆ ನಡೆಸಲಾಗುತ್ತಿದೆ.
ನೇರವಲ್ಲದ ಚುನಾವಣೆ :- ಯಾವುದೇ ನಾಡಲ್ಲಿ ಸರಕಾರವನ್ನು ರಚಿಸುವ ಕೊನೆಯ ಅದಿಕಾರ ಮಂದಿಯ ಕಯ್ಯಲ್ಲಿರದೆ ಮಂದಿಯಿಂದ ಆಯ್ಕೆಯಾದ ಪ್ರತಿನಿದಿಗಳಲ್ಲಿ ಇರುತ್ತದೆಯೋ ಅಂತಹ ಚುನಾವಣೆಯನ್ನು ನೇರವಲ್ಲದ ಚುನಾವಣೆ ಎನ್ನುವರು. ಈ ಚುನಾವಣಾ ವಿದಾನದಲ್ಲಿ ಮತದಾರರ ವರ‍್ಗ ಮತ್ತು ಉಮೇದುವಾರ ವರ‍್ಗದ ನಡುವೆ ಒಂದು ಪ್ರತಿನಿದಿ ವರ‍್ಗವಿರುತ್ತದೆ. ಈ ವರ‍್ಗವನ್ನು ಎಲೆಕ್ಟ್ರೋರಲ್ ಕಾಲೇಜ್ (Electroral College) ಎಂದು ಕರೆಯುವರು.
ಉದಾಹರಣೆ :- ಇಂಡಿಯಾ ನಾಡದ್ಯಕ್ಶರನ್ನು, ಲೋಕಸಬೆಯ ಹಾಗೂ ರಾಜ್ಯಸಬೆಯ ಸದಸ್ಯರು ಮತ್ತು ರಾಜ್ಯಗಳ ವಿದಾನಸಬೆಗಳ ಸದಸ್ಯರೆಲ್ಲರೂ ಮತಚಲಾಯಿಸಿ ಆಯ್ಕೆ ಮಾಡುತ್ತಾರೆ. ಆದರೆ ಇಂಡಿಯಾದದ ಉಪರಾಶ್ಟ್ರಪತಿಯವರು ಸಂಸತ್ತಿನ ಲೋಕಸಬೆ ಹಾಗೂ ರಾಜ್ಯಸಬೆ ಸದಸ್ಯರುಗಳಿಂದ ಆಯ್ಕೆಗೊಳ್ಳುತ್ತಾರೆ.

ಚುನಾವಣೆಗಳ ಹೆಚ್ಚುಗಾರಿಕೆ :-
* ಮಂದಿಯನಿಸಿಕೆಯನ್ನು ಲೆಕ್ಕಹಾಕಲು ಚುನಾವಣೆಗಳು ಅಗತ್ಯವಾಗಿ ಬೇಕು.
* ಚುನಾವಣೆಗಳು ಸರಕಾರವನ್ನು ಶಾಂತಿಯುತವಾಗಿ ಬದಲಾಯಿಸುತ್ತವೆ.
* ಸಾಮಾಜಿಕ, ಹಣಕಾಸಿನ, ರಾಜಕೀಯ ಅಸಮಾನತೆಗಳನ್ನು ಸರಿಪಡಿಸಲು ಚುನಾವಣೆಗಳು ಪ್ರಮುಕ ಸಾದನವಾಗಿದೆ.
* ಚುನಾವಣೆಗಳ ಮೂಲಕವೇ ಮತದಾರ ವರ‍್ಗ ಅದಿಕಾರ ನೀಡುತ್ತದೆ. ಬೇಡವೆನಿಸಿದರೆ ಇದರ ಮೂಲಕವೇ ಅದಿಕಾರ ಕಿತ್ತುಕೊಳ್ಳುತ್ತದೆ.
* ಚುನಾವಣೆಗಳು ಸರ‍್ಕಾರಕ್ಕೆ ಕಾಯ್ದೆ ಬದ್ದ ಸ್ತಾನವನ್ನು ಕಲ್ಪಿಸುತ್ತವೆ.
* ನಿಶ್ಪಕ್ಶಪಾತ ಚುನಾವಣೆಗಳು ಉತ್ತಮ ಸರಕಾರದ ಸ್ತಾಪನೆ ಮಾಡುತ್ತವೆ.
* ಮಂದಿಯಾಳ್ವಿಕೆ ಹಾಗೂ ಚುನಾವಣೆಗಳು ಒಂದಕ್ಕೊಂದು ಕೂಡಿಯೇ ನಡೆಯುತ್ತವೆ. ಚುನಾವಣೆಗಳಿಲ್ಲದೆ, ಪ್ರತಿನಿದಿಗಳು ಆಯ್ಕೆಯಾಗುವುದಿಲ್ಲ. ಪ್ರತಿನಿದಿಗಳಲ್ಲದೆ ಮಂದಿಯಾಳ್ವಿಕೆಯ ಸಾರ ಸಾರ‍್ತಕವಾಗುವುದಿಲ್ಲ.
* ಚುನಾವಣೆಗಳು ಸರಕಾರದ ಮೇಲೆ ಮಂದಿಗೆ ನಿಯಂತ್ರಣಾದಿಕಾರವನ್ನು ಸ್ಪಶ್ಟಪಡಿಸುತ್ತವೆ.

ಸಾರ‍್ವತ್ರಿಕ ವಯಸ್ಕ ಮತದಾನ ಪದ್ದತಿ :-
ಸಾರ‍್ವತ್ರಿಕ ವಯಸ್ಕ ಮತದಾನ ಪದ್ದತಿಯು ಒಂದು ನಿರ‍್ದಿಶ್ಟ ಚುನಾವಣಾ ಪದ್ದತಿಯಾಗಿದ್ದು, ಇದರಲ್ಲಿ ದೇಶದ ಎಲ್ಲಾ ವಯಸ್ಕರು ಮತದಾನ ಮಾಡುವ ಮೂಲಕ ಸಂಸತ್ತಿಗೆ ಅತವಾ ರಾಜ್ಯ ಶಾಸಕಾಂಗಕ್ಕೆ ತಮ್ಮ ಪ್ರತಿನಿದಿಗಳನ್ನು ಆಯ್ಕೆ ಮಾಡುತ್ತಾರೆ. ಹಿಂದಿನ ಕೆಲವು ಕಾಲದಲ್ಲಿ ಸೀಮಿತ ಮತಾದಿಕಾರವನ್ನು ಹಲವಾರು ನಾಡಲ್ಲಿ ಜಾರಿಗೊಳಿಸಲಾಗಿತ್ತು. ‘ಕೆಲವೊಂದು ಅರ‍್ಹತೆಗಳ ಆದಾರದ ಮೇಲೆ ಕೆಲವೇ ಮಂದಿಗೆ ಮತದಾನದ ಹಕ್ಕನ್ನು ಕೊಡುವುದೇ’ ಸೀಮಿತ ಮತಾದಿಕಾರ ಎಂದು ಕರೆಯಲಾಗುತ್ತದೆ. ಸೀಮಿತ ಮತಾದಿಕಾರದ ಸಮಯದಲ್ಲಿ ಮತಾದಿಕಾರ ಹೊಂದಿರದ ಮಂದಿಯ ವರ‍್ಗಗಳಿಗೆ ಕೆಲವು ಉದಾಹರಣೆಗಳು ಇಂತಿದೆ,
* ಕೆಲವು ನಾಡಲ್ಲಿ ಮಹಿಳೆಯರನ್ನು ಮತಾದಿಕಾರದಿಂದ ಹೊರಗಿಡಲಾಗಿತ್ತು.
* ಕೆಲವು ನಾಡಲ್ಲಿ ಆಸ್ತಿಯನ್ನು ಹೊಂದಿದವರು ಮಾತ್ರ ಮತಾದಿಕಾರ ಹೊಂದಿದ್ದರು.
* ಕೆಲವು ನಾಡಲ್ಲಿ ತೆರಿಗೆ ತುಂಬದವರಿಗೆ ಮತಾದಿಕಾರದಿಂದ ಹೊರಗಿಡಲಾಗಿತ್ತು.
* ಕೆಲವು ನಾಡಲ್ಲಿ ಓದು ಬರಹ ಬಲ್ಲವರಿಗೆ ಮಾತ್ರ ಮತಾದಿಕಾರ ಕೊಡಲಾಗಿತ್ತು.
* ಕೆಲವು ನಾಡಲ್ಲಿ ದರ‍್ಮದ ಆದಾರದ ಮೇಲೆ ಮತಾದಿಕಾರ ಕೊಡಲಾಗಿತ್ತು.

ಅಮೇರಿಕಾ ನಾಡಿನಲ್ಲಿ 1865ರಲ್ಲಿ ‘ಗುಲಾಮಗಿರಿ ಪದ್ದತಿ’ಯನ್ನು ತೆಗೆದುಹಾಕುವುದರ ಮೂಲಕ 1870ರಲ್ಲಿ ಗುಲಾಮರಿಗೆ ಮತ್ತು 1920ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟರೆ, ಸ್ವಿಜರ್ ಲ್ಯಾಂಡ್ ನಲ್ಲಿ 1970ರಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಡಲಾಗಿತ್ತು.  ಆದರೆ ಉಳಿದ ದೇಶಗಳಂತೆ ಇಂಡಿಯಾ ಹಂತಹಂತವಾಗಿ ಮತದಾನದ ಹಕ್ಕನ್ನು ವರ‍್ಗ ವರ‍್ಗದ ಮಂದಿಗೆ ಹಂಚದೇ, ನಾಡಿನ ಪ್ರತಿಯೊಬ್ಬ ವಯಸ್ಕನಿಗೂ ಮತದಾನದ ಹಕ್ಕನ್ನು ನೀಡುವ ಮೂಲಕ ಮಂದಿಯಾಳ್ವಿಕೆಯ ಸಮಾನತೆಯ ತತ್ವವನ್ನು ಎತ್ತಿ ಹಿಡಿದಿದೆ. ಜಾತಿ, ದರ‍್ಮ, ಲಿಂಗ, ಸಮುದಾಯ, ಸಾಮಾಜಿಕ ಸ್ತಾನಮಾನ ಮುಂತಾದವುಗಳ ಮೇಲೆ ಯಾವುದೇ ತಾರತಮ್ಯವನ್ನು ಮಾಡದೆ ಇಂಡಿಯಾ ನಾಡಿನ ಎಲ್ಲಾ ಮಂದಿಗೂ ಮತದಾನದ ಹಕ್ಕನ್ನು ಕೊಡಲಾಯಿತು. ಇದರಿಂದ ಎಲ್ಲಾ ಚುನಾವಣೆಗಳಲ್ಲಿ ಬಾಗವಹಿಸಲು ಅವಕಾಶ ಮಾಡಿಕೊಡಲಾಯಿತು. ಆಗ 21 ವರುಶ ಪ್ರಾಯ ಮೇಲ್ಪಟ್ಟವರಿಗೆಲ್ಲಾ ಮತದಾನದ ಹಕ್ಕನ್ನು ಕೊಡಲಾಯಿತು. ಆದರೆ ಸಂವಿದಾನಕ್ಕೆ 61ನೇ ತಿದ್ದುಪಡಿಯನ್ನು 1989ರಲ್ಲಿ ಮಾಡುವುದರ ಮೂಲಕ ಮತದಾನದ ಪ್ರಾಯವನ್ನು 21ರಿಂದ 18ಕ್ಕೆ ಇಳಿಸಲಾಯಿತು. ಸಂವಿದಾನದ 326ನೇ ವಿದಿಯ ಪ್ರಕಾರ ಲೋಕಸಬೆ ಹಾಗೂ ರಾಜ್ಯದ ವಿದಾನ ಸಬೆಗಳಿಗೆ ನಡೆಯುವ ಎಲ್ಲಾ ಚುನಾವಣೆಗಳು ‘ಸಾರ‍್ವತ್ರಿಕ ವಯಸ್ಕ ಮತದಾನ ಪದ್ದತಿ’ಯ ಆದಾರದ ಮೇಲೆ ನಡೆಯುವಂತೆ ಮಾಡಲಾಯಿತು. ಇದರ ಮೂಲಕ ಇಂಡಿಯಾದ ಮಂದಿಯು 18 ವರುಶ ಮೇಲ್ಪಟ್ಟವರು ಮತ್ತು ಇನ್ನಾವುದೇ ಅನರ‍್ಹತೆಗಳನ್ನು ಹೊಂದದೇ ಇರುವವರೆಲ್ಲರೂ ಮತದಾರರೆಂದು ನೊಂದಾಯಿಸಲಾಯಿತು. ಇಂಡಿಯಾದ ಸಂವಿದಾನದ ಪ್ರಕಾರ ಕೆಲವು ವರ‍್ಗದ ಮಂದಿಯನ್ನು ಮತದಾನದಿಂದ ಹೊರಗಿಡಲಾಯಿತು. ‘1950ರ ಜನತಾ ಪ್ರತಿನಿದಿ ಕಾಯ್ದೆ’ಯ ಪ್ರಕಾರ ಕೆಲವು ವರ‍್ಗದ ಮಂದಿಯು ಮತಾದಿಕಾರವನ್ನು ಹೊಂದಿಲ್ಲ.
ಉದಾಹರಣೆಗೆ :-
* ಮತಿಬ್ರಮಣೀಯರು
* ದಿವಾಳಿಕೋರರು
* ವಿದೇಶಿಗರು
* ಬಾರತ ದೇಶದ ನಾಗರಿಕ ಹಕ್ಕು ಹೊಂದದವರು
* ನ್ಯಾಯಾಲಯದಿಂದ ಅಪರಾದಿ ಎಂದು ತೀರ‍್ಮಾನಿಸಿ ಶಿಕ್ಶೆಗೊಳಗಾದವರು.

1951-52ರಿಂದ ಆರಂಬಗೊಂಡ ಸಾರ‍್ವತ್ರಿಕ ಚುನಾವಣೆಗಳು ಇಲ್ಲಿಯವರೆಗೆ ಸಾಕಶ್ಟು ಏರುಪೇರುಗಳನ್ನು ಕಂಡಿವೆ. 1951ರ ಲೋಕಸಬಾ ಚುನಾವಣೆಯಲ್ಲಿ ನೂರಕ್ಕೆ 50ರಶ್ಟು ಮತದಾನವಾದರೆ 14ನೇ ಲೋಕಸಬಾ ಚುನಾವಣೆ (2004)ಯ ಲ್ಲಿ ನೂರಕ್ಕೆ 58ರಶ್ಟು ಮತದಾನವಾಗಿತ್ತು. ಇದರಿಂದ ತಿಳಿದು ಬರುವುದೇನೆಂದರೆ ಚುನಾವಣೆಗಳಲ್ಲಿ ಮತದಾನ ಮಾಡಲು ಅರ‍್ಹತೆ ಹೊಂದಿದ ಮತದಾರರ ಸಂಕ್ಯೆ ವರುಶದಿಂದ ವರುಶಕ್ಕೆ ಏರುತ್ತಿದೆ. ಆದರೆ ಮತದಾನ ಪ್ರಮಾಣದಲ್ಲಿ ಅಶ್ಟೊಂದು ಏರಿಕೆಯಾಗಿಲ್ಲ. ಚುನಾವಣೆಗಳನ್ನು ಯಶಸ್ವಿಗೊಳಿಸಲು ಮತ್ತು ನಿಶ್ಪಕ್ಶಪಾತದಿಂದ ನಿರ್ವಹಿಸಲು ಸಂವಿದಾನವು ಚುನಾವಣೆ ಆಯೋಗದ ರಚನೆಗೆ ಅವಕಾಶ ಕಲ್ಪಿಸಿದೆ. ಇದು ರಾಶ್ಟ್ರಪತಿ, ಕೇಂದ್ರ ಸಂಪತ್ತು, ರಾಜ್ಯ ಶಾಸಕಾಂಗ ಇತ್ಯಾದಿಗಳಿಗೆ ಸ್ವತಂತ್ರ ಚುನಾವಣೆ ನಡೆಸುವ ಜವಾಬ್ದಾರಿ ಹೊತ್ತಿದೆ. ಇದಕ್ಕೆ ಸಂಬಂದಿಸಿದಂತೆ ಚುನಾವಣಾ ಆಯೋಗ ಮತ್ತು ಅದು ಮಾಡುವ ಕೆಲಸಗಳು ಹಾಗೂ ಅದರ ಅದಿಕಾರ ವ್ಯಾಪ್ತಿ ಬಗೆಗೆ ಹೆಚ್ಚಿನ ಕಲಿಕೆಯನ್ನು ಮುಂದಿನ ಬಾಗದಲ್ಲಿ ಮಾಡೋಣ.

(ಚಿತ್ರ ಸೆಲೆ: alabamas)

(ಮಾಹಿತಿ ಸೆಲೆ: wikipedia)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 09/04/2014

    […] ಹಿಂದೆ ಮೂಡಿಬಂದ ಚುನಾವಣೆಗೆ ಮುನ್ನ ಚುನಾವಣೆಯ ಬಗ್ಗೆ- ಬಾಗ ೧ ರಲ್ಲಿ ಚುನಾವಣೆಯ ಅರ‍್ತ, ಚುನಾವಣೆಯ […]

ಅನಿಸಿಕೆ ಬರೆಯಿರಿ:

Enable Notifications