ವಡಾ ಪಾವ್ ಮಾಡುವ ಬಗೆ

– ಕಲ್ಪನಾ ಹೆಗಡೆ.

IMG_0218

ಬೇಕಾಗುವ ಪದಾರ‍್ತಗಳು:

3 ಬ್ರೆಡ್ (ವಡಾ ಪಾವ್ ಬ್ರೆಡ್)
5 ಆಲೂಗಡ್ಡೆ
10 ಚಮಚ ಜೋಳದ ಪುಡಿ (Corn flour)
5 ಚಮಚ ಕಡ್ಲೆಹಿಟ್ಟು
1 ಚಮಚ ಮೆಣಸಿನ ಪುಡಿ
10 ಹಸಿಮೆಣಸಿನಕಾಯಿ
2 ಬ್ರೆಡ್ ಪುಡಿ
5 ಓಣಮೆಣಸಿನಕಾಯಿ
5 ಬೆಳ್ಳುಳ್ಳಿ
ಉಪ್ಪು, ಸಾಸಿವೆ ಕಾಳು ಮತ್ತು ಎಣ್ಣೆ

ಮೊದಲು ಸಿದ್ದಮಾಡಿಕೊಳ್ಳಬೇಕಾದ ಪದಾರ‍್ತಗಳು:

1. ಆಲೂಗಡ್ಡೆ ಪಲ್ಯ: ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಸಣ್ಣಗೆ ಹೆಚ್ಚಿದ 1 ಹಸಿಮೆಣಸಿನಕಾಯಿ, ಸಾಸಿವೆ ಕಾಳು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಆಲೂಗಡ್ಡೆ ಪಲ್ಯವನ್ನು ಮಾಡಿಕೊಳ್ಳಿ. ಸ್ವಲ್ಪ ಆರಿದ ನಂತರ ನಡುಗಾತ್ರದ ಉಂಡೆಗಳನ್ನಾಗಿ ಮಾಡಿಕೊಂಡು ಅಂಗೈಯಲ್ಲಿ ಸ್ವಲ್ಪ ತಟ್ಟಿಕೊಳ್ಳಿ.
2. ಎರೆಡು ಬ್ರೆಡ್‍ನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.
3. ಜೋಳದಪುಡಿ, ಕಡ್ಲೆಹಿಟ್ಟು, ಮೆಣಸಿನ ಪುಡಿ, ನೀರು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕಲಸಿಕೊಳ್ಳಿ.
4. ಬೆಳ್ಳುಳ್ಳಿ ಚಟ್ನಿ: 5 ಓಣಮೆಣಸಿನಕಾಯಿ, 5 ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
5. ಹಸಿಮೆಣಸಿನ ಕಾಯಿ: 1 ಬ್ರೆಡ್ಡಗೆ 1 ಅತವಾ 2 ರಂತೆ 10 ಹಸಿಮೆಣಸಿನಕಾಯಿಯನ್ನು ಚೆನ್ನಾಗಿ ನೀರಿನಿಂದ ತೊಳೆದು ಒರೆಸಿ ಒಂದು ಕಡೆ ಚಿಕ್ಕ ಕಿಂಡಿಗಳನ್ನು ಮಾಡಿಕೊಳ್ಳಿ. (ಒಂದೊಮ್ಮೆ ಮೆಣಸಿನಕಾಯಿಗೆ ಚಿಕ್ಕ ಕಿಂಡಿಯನ್ನು ಮಾಡದೆ ಎಣ್ಣೆಯಲ್ಲಿ ಹಾಕಿದರೆ ಎಣ್ಣೆ ಸಿಡಿದು ಅನಾಹುತಕ್ಕೆ ಕಾರಣವಾಗಬಹುದು, ಇದು ಗಮನದಲ್ಲಿ ಇರಲಿ) ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ ಮೆಣಸಿನಕಾಯಿಯನ್ನು ಹಾಕಿ ಎಣ್ಣೆ ಸಿಡಿಯದಂತೆ ಏನಾದರೂ ತಟ್ಟೆಯನ್ನು ಮುಚ್ಚಿ, ಹಾಗೆಯೇ ಜಾಲಿ ಸೌಟಿನಿಂದ ತೆಗೆಯಿರಿ. ಆನಂತರ ಬೆಂದ ಹಸಿಮೆಣಸಿನಕಾಯಿಗೆ ಸ್ವಲ್ಪ ಉಪ್ಪು ಹಾಕಿ ತೆಗೆದಿಟ್ಟುಕೊಳ್ಳಿ.

ಮಾಡುವ ಬಗೆ:

ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿಕೊಳ್ಳಿ. ಬಳಿಕ ಅಂಗೈಯಿಂದ ತಟ್ಟಿದ ಆಲೂ ಟಿಕ್ಕಿಯನ್ನು ಬ್ರೆಡ್ಡಿನ ಪುಡಿಯಿಂದ ಎಲ್ಲಾ ಕಡೆ ಸವರಿಕೊಂಡು, ಮೊದಲೇ ತಯಾರಿಸಿದ ಹಿಟ್ಟಿನಲ್ಲಿ (ಜೋಳ, ಮೆಣಸಿನ ಪುಡಿ ಹಾಗು ಕಡ್ಲೆಹಿಟ್ಟು) ಅದ್ದಿ ಎಣ್ಣೆಯಲ್ಲಿ ಕರಿದುಕೊಳ್ಳಿ. ಬಳಿಕ ಬ್ರೆಡ್ಡನ್ನು ನಡುವಿಗೆ ಕತ್ತರಿಸಿ ತುಪ್ಪ ಸವರಿ ಕಾವಲಿ ಮೇಲಿಟ್ಟು ಬಿಸಿಮಾಡಿಕೊಳ್ಳಿ. ಆಮೇಲೆ ಬ್ರೆಡ್ಡಿನ ನಡುಬಾಗದಲ್ಲಿ ಬೆಳ್ಳುಳ್ಳಿ ಚಟ್ನಿಯನ್ನು ಸವರಿ ಅದರ ಮೇಲೆ ಕರಿದ ಆಲೂವಡಾವನ್ನು ಇಟ್ಟು, ಜೊತೆಗೆ ತಯಾರಿಸಿದ 1 ಅತವಾ 2 ಹಸಿಮೆಣಸಿನಕಾಯಿ ಹಾಕಿ, ಮತ್ತು ಟೊಮೇಟೊ ಸಾಸನ್ನು ಹಾಕಿ ತಿನ್ನಲು ನೀಡಿ. ಬೆಂದ ಹಸಿಮೆಣಸಿನಕಾಯಿ ಜೊತೆಗೆ ತಿನ್ನಲು ತುಂಬಾ ಹಿತವಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Vinayak g hegde says:

    ಚೆನ್ನಾಗಿದೆ, ನೋಡಿದ್ರೇನೆ ತಿನ್ನಬೇಕು ಅನ್ನಿಸುತ್ತದೆ…

ಅನಿಸಿಕೆ ಬರೆಯಿರಿ: