ಸ್ನೂಕರ್: ಹೀಗೊಂದು ಆಗುಹ
– ಬಾಬು ಅಜಯ್.
ಹಿಂದಿನ ಬರಹದಲ್ಲಿ ಬಹಳ ಹೆಸರುವಾಸಿಯಾದ ನಿಡುಗೊಲಾಟ(snooker)ದ ಆಟಗಾರರ ಬಗ್ಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಬಹಳ ಹೆಸರುವಾಸಿಯಾದ ‘ರಾಕೆಟ್‘ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ರೊನ್ನಿ ಓ ಸುಲ್ಲಿವಾನ್ (Ronnie ‘O Sullivan) ಅವರ ಜೊತೆ 1996ರಲ್ಲಿ ನಡೆದ ಬಹಳ ಕುತೂಹಲ ಕೆರಳಿಸುವ ಒಂದು ಗಟನೆ ಬಗ್ಗೆ ತಿಳಿಯೋಣ.
ಅಂದು 1996ರ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಮೊದಲನೇ ಸುತ್ತಿನ ಆಟ, ಅಲನ್ ರೋಬಿಡಾಕ್ಸ್ (Alain Robidoux) ಎದುರು ರೊನ್ನಿ ಓ ಸುಲ್ಲಿವಾನ್. ಸ್ನೂಕರ್ ಆಟದಲ್ಲಿ ಬಹಳ ಮೇಲ್ಮಟ್ಟದಾಟಕ್ಕೆ ಹೆಸರುವಾಸಿಯಾದ ರೊನ್ನಿ ಅವರು, ಎಂದಿನಂತೆ ಬಲಗಯ್ಯಲ್ಲಿ ಆಡುತ್ತಿದ್ದವರು, ಎಡಗಯ್ಯಲ್ಲಿ ಕೂಡ ಆಡಲು ಶುರು ಮಾಡಿ ಪ್ರೇಮ್ ಗೆದ್ದರು, ಮತ್ತು ಕೊನೆಗೆ ಪಂದ್ಯವನ್ನು ಕೂಡ 10-3 ಪ್ರೇಮ್‌ಗಳಿಂದ ಗೆದ್ದರು. ಇದರಿಂದ ಬೇಸರಗೊಂಡ ಅಲನ್ ಅವರು ಬರ‍್ದುಗ ಆಟದ ನಡುವಿನಲ್ಲಿ ಎದುರಾಳಿ ತಾವು ಸಹಜವಾಗಿ ಆಡುವ ಕಯ್ಯಲ್ಲೇ ಆಡಬೇಕು, ಎಡಗಯ್ಯಲ್ಲಿ ಕೂಡ ತಮ್ಮ ಆಟದ ಚಳಕ ತೋರಿಸಬೇಕಿದ್ದರೆ ಅಂತದನ್ನು ತೋರ‍್ಪಡಿಕೆಯ (exhibition) ಆಟಗಳಲ್ಲಿ ಆಡಬೇಕು, ಬರ‍್ದುಗ ಆಟಗಳಲ್ಲಲ್ಲ ಎಂದು ಹೇಳಿಕೆ ನೀಡಿದರು.
ಸಹಜವಾಗಿ ಪಂದ್ಯ ಮುಗಿದ ಮೇಲೆ ಇಬ್ಬರು ಆಟಗಾರರು ಕಯ್ ಕುಲುಕುವುದು ವಾಡಿಕೆಯಾಗಿತ್ತು, ಆದರೆ ಅಲನ್ ಅವರು ಪಂದ್ಯ ಸೋತ ನಂತರ ಕಯ್ ಕುಲುಕದೇ ನಡೆದರು. ಇದಕ್ಕೆ ಕಾರಣ, ರೊನ್ನಿ ಅವರು ಸಹಜವಾಗಿ ಬಲಗಯ್ ಆಟಗಾರನಾಗಿದ್ದರು, ಬಹಳಶ್ಟು ಹೊಡೆತಗಳನ್ನು ಎಡಗಯ್ಯಲ್ಲಿ ಆಡುವ ಮೂಲಕ ಆಟದ ನಡುವಿನಲ್ಲಿ ನನಗೆ ಅಗೌರವಿಸಿದರು ಎಂದು ಅಲನ್ ಅವರು ಆರೋಪಿಸಿದರು. ಇದಕ್ಕೆ ರೊನ್ನಿ ಅವರು “ಅಲನ್ ಅವರು ಆಡುವ ಬಲಗಯ್ ಆಟಕ್ಕಿಂತ ನನ್ನ ಎಡಗಯ್ ಆಟ ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸಿದರು. (ಎತ್ತುಗೆಗೆ ಕ್ರಿಕೆಟ್ ನಲ್ಲಿ ಒಬ್ಬ ಬಲಗಯ್ ಆಟಗಾರ ಆಟದ ನಡುವಿನಲ್ಲಿ ಇದ್ದಕಿದ್ದಹಾಗೆ ಎಡಗಯ್ಯಲ್ಲಿ ಆಡಲು ಶುರುಮಾಡಿ ಪಂದ್ಯ ಗೆಲ್ಲಿಸಿದ ಹಾಗೆ).
ಅಲನ್ ಅವರ ಆರೋಪ ಮತ್ತು ರೊನ್ನಿ ಅವರ ಪ್ರತಿಕ್ರಿಯೆಯನ್ನು ಗಂಬೀರವಾಗಿ ಪರಿಗಣಿಸಿದ ಆಟದ ಕಟ್ಟುಪಾಡುಗಳ ಮೇಲ್ವಿಚಾರಕರು (Disciplinary committee) ರೊನ್ನಿ ಅವರಿಗೆ ಉತ್ತರಿಸಲು ಹೇಳಿ, ಅವರು ಬಲಗಯ್ಯಲ್ಲಿ ಆಡುವ ಹಾಗೆ ಎಡಗಯ್ಯಲ್ಲೂ ಅಶ್ಟೇ ಮೇಲ್ಮಟ್ಟದ ಆಟವನ್ನು ಆಡಿ ತೋರಿಸಬೇಕು ಎಂದು ಆದೇಶಿಸಿದರು. ಇದಕ್ಕಾಗಿ ರೊನ್ನಿ ಅವರು ಮಾಜಿ ವಿಶ್ವ ಬಿಲಿಯರ‍್ಡ್ಸ್ ಚಾಂಪಿಯನ್ ರೆಕ್ಸ್ ವಿಲಿಯಮ್ಸ್ (Rex Williams) ಅವರ ಜೊತೆ 3 ಪ್ರೇಮ್ ಸ್ನೂಕರ್ ಆಡಬೇಕಿತ್ತು. ತಮ್ಮ ಎಡಗಯ್ಯಲ್ಲೆ ಆಡಿ 3 ಪ್ರೇಮ್‌ಗಳನ್ನೂ ಗೆಲ್ಲುವ ಮೂಲಕ ರೊನ್ನಿ ಅವರು ತಮ್ಮ ಸ್ನೂಕರ್ ಆಡುವ ಚಳಕ ಕೇವಲ ಬಲಗಯ್ಯಲ್ಲಿ ಮಾತ್ರವಲ್ಲ, ಎಡಗಯ್ಯಲ್ಲೂ ಅಶ್ಟೇ ಮೇಲ್ಮಟ್ಟದಲ್ಲಿ ಆಡಬಲ್ಲೆ ಎಂದು ತೋರಿಸಿದರು. ಇದರಿಂದ ಬೆರಗಾದ ಆಟದ ಕಟ್ಟುಪಾಡುಗಳ ಮೇಲ್ವಿಚಾರಕರು ರೊನ್ನಿ ಅವರ ಮೇಲಿದ್ದ ಆರೋಪವನ್ನು ಕಯ್ ಬಿಟ್ಟರು.
ಈಗ ತಮ್ಮ 39ನೇ ವಯಸ್ಸಿನಲ್ಲಿ ಆಡುತ್ತಿರುವ ರೊನ್ನಿ ಅವರು ಬಲಗಯ್ ಜೊತೆ ಎಡಗಯ್ಯಲ್ಲೂ ಆಡುವ ಮೂಲಕ ಮೊದಲಿನಿಂದಲೂ ನೋಡುಗರನ್ನ ರಂಜಿಸುತ್ತ ಬಂದಿದ್ದಾರೆ. ಇದಕ್ಕಾಗಿ ಕೂಡ ಜನರು ರೊನ್ನಿ ಅವರನ್ನ ತುಂಬಾ ಇಶ್ಟ ಪಡುತ್ತಾರೆ. ಬಲಗಯ್ಯಲ್ಲಿ ಆಡುವಶ್ಟೇ ಮೇಲ್ಮಟ್ಟದಲ್ಲಿ ಎಡಗಯ್ಯಲ್ಲೂ ಆಡುವ ಆಟಗಾರರು ಜಗತ್ತಿನಲ್ಲೇ ಬಹಳ ವಿರಳ ಎಂದು ಹೇಳಬಹುದು.
(ಮಾಹಿತಿ ಸೆಲೆ: ವಿಕಿಪೀಡಿಯ
ಚಿತ್ರ ಸೆಲೆ: ಬಿ. ಬಿ. ಸಿ)
ಇತ್ತೀಚಿನ ಅನಿಸಿಕೆಗಳು