ಸೋವಿಯತ್ ಒಕ್ಕೂಟ – ಒಂದು ನೋಟ

– ಅನ್ನದಾನೇಶ ಶಿ. ಸಂಕದಾಳ.

russian-empire

ಡಿಸೆಂಬರ್ 30 – ಸೋವಿಯತ್ ಒಕ್ಕೂಟದ ಉದಯಕ್ಕೆ ಮುನ್ನುಡಿ ಬರೆದ ದಿನವೆಂದು ಹೇಳಲಾಗುತ್ತದೆ. 1922 ರ ಆ ದಿನದಂದು ರಶ್ಯನ್, ಯುಕ್ರೇನಿಯನ್, ಬಿಯಲೋರಶ್ಯನ್, ಟ್ರಾನ್ಸ್ ಕಾಕೆಶಿಯನ್ ರಿಪಬ್ಲಿಕ್ ಗಳೆಲ್ಲಾ ಒಂದುಗೂಡಿಸಿ ಒಕ್ಕೂಟವೊಂದನ್ನು ಹುಟ್ಟುಹಾಕುವ ತೀರ‍್ಮಾನಕ್ಕೆ ಬಂದರು ಎಂದು ಹಿನ್ನಡವಳಿ (history) ಹೇಳುತ್ತದೆ. ಹೀಗೆ ಹುಟ್ಟು ಪಡೆದ ಸೋವಿಯತ್ ಒಕ್ಕೂಟ, ಇಪ್ಪತ್ತನೇ ಶತಮಾನದಲ್ಲಿ ಜಾಗತಿಕವಾಗಿ ಪ್ರಬಲವಾದ ಶಕ್ತಿಯಾಗಿ ಬೆಳೆಯಿತು ಮತ್ತು ಜಾಗತಿಕ ಆಗುಹೋಗುಗಳಲ್ಲಿ ಹಲವಾರು ಕಾರಣಗಳಿಂದ ಸುದ್ದಿ ಮಾಡಿತ್ತು.

ಹಿನ್ನಡವಳಿಯಲ್ಲಿ ರಶ್ಯನ್ ಸಾಮ್ರಾಜ್ಯವು ಒಂದು ಅತಿ ದೊಡ್ಡ ಸಾಮ್ರಾಜ್ಯವೆಂದು ಹೆಸರು ಮಾಡಿತ್ತು. 1721 ರಿಂದ 1917 ರವರೆಗಿದ್ದ ಈ ಸಾಮ್ರಾಜ್ಯ, ಹಲವಾರು ನಾಡುಗಳನ್ನು ತನ್ನ ಆಡಳಿತದ ತೆಕ್ಕೆಯಲ್ಲಿಟ್ಟುಕೊಂಡಿತ್ತು. ಈ ಸಾಮ್ರಾಜ್ಯದ ಹರವು 3 ಪೆರ‍್ನೆಲಗಳಲ್ಲಿ (continent) ಹಬ್ಬಿತ್ತು ಎಂದು ಹೇಳಲಾಗುತ್ತದೆ. ಆರ‍್ಕಟಿಕ್ ಸಾಗರದಿಂದ ಕಪ್ಪು ಕಡಲಿನವರೆಗೂ (black sea) ಮತ್ತು ಬಾಲ್ಟಿಕ್ ಕಡಲಿನಿಂದ ಪೆಸಿಪಿಕ್ ಸಾಗರದವರೆಗೂ ಈ ಸಾಮ್ರಾಜ್ಯ ಹಬ್ಬಿತ್ತು. ಹರವಿನಲ್ಲಿ ಬ್ರಿಟಿಶ್ ಮತ್ತು ಮಂಗೋಲರ ಸಾಮ್ರಾಜ್ಯದ ನಂತರದ ಸ್ತಾನ ರಶ್ಯನ್ ಸಾಮ್ರಾಜ್ಯವು ಪಡೆದುಕೊಂಡಿತ್ತು. ಆ ಕಾಲದಲ್ಲಿ, ಮಂದಿಯೆಣಿಕೆಯಲ್ಲಿ ಮೂರನೇ ಸ್ತಾನವನ್ನು ಹೊಂದಿದ್ದ ಈ ಸಾಮ್ರಾಜ್ಯವನ್ನು ಆಳುತ್ತಿದ್ದ ದೊರೆಗಳನ್ನು ಜಾರ್ (tsar) ಎಂದು ಕರೆಯಲಾಗುತ್ತಿತ್ತು. ಆಡಳಿತದ ಹರವು ಹೆಚ್ಚಿದಾಗ ಆಳ್ವಿಕೆಯ ರೀತಿ-ನೀತಿಗಳು ಸರಿಯಿಲ್ಲದಿದ್ದರೆ, ಆ ನಾಡಿನ ಮಂದಿಗಳ ನಡುವೆ ನುಡಿಯ ನೆಲೆಯಲ್ಲಿ, ದರ‍್ಮದ ನೆಲೆಯಲ್ಲಿ, ದುಡಿಮೆಯ ನೆಲೆಯಲ್ಲಿ ಅತವಾ ಬುಡಕಟ್ಟಿನ (ethnicity) ನೆಲೆಯಲ್ಲಿ ಅಸಮಾನತೆ ಕಂಡುಬರುವುದು ಸಹಜ. ಇಂತಾ ಅಸಮಾನತೆಗಳು ಆ ನೆಲೆಗಳ ಮೇಲೆಯೇ ಮಂದಿಯನ್ನು ಒಂದುಗೂಡಿಸಿ ದಂಗೆಯೇಳುವಂತೆ ಮಾಡುವುದು ಸಹಜವೇ. ರಶ್ಯನ್ ಸಾಮ್ರಾಜ್ಯವು ಇದಕ್ಕೆ ಹೊರತಾಗಿರಲಿಲ್ಲ. ಆಡಳಿತವನ್ನು ಒಪ್ಪದಿರುವವರು, ಆಡಳಿತದಿಂದ ಬೇಸತ್ತವರು ಬಂಡಾಯ ಗುಂಪುಗಳನ್ನು ಮಾಡಿಕೊಂಡು ದಂಗೆಯೇಳುತ್ತಿದ್ದರು. ಅಂತವರನ್ನು ‘ನೆಮ್ಮದಿಗೆ ಅಡ್ಡಿಪಡಿಸಿದರು’ ಎಂಬ ಕಾರಣದಡಿ ಸೈಬೀರಿಯಾ ನಾಡಿಗೆ ಗಡಿಪಾರು ಮಾಡುವ ಕೆಲಸವನ್ನು ಗುಟ್ಟು ಕಾವಲುಪಡೆ (secret police) ಮಾಡುತಿತ್ತು.

ಮೂರು ಗುಂಪಾಗಿ ರಶ್ಯಾ ಸಾಮ್ರಾಜ್ಯದ ಮಂದಿ:

ರಶ್ಯಾ ಸಾಮ್ರಾಜ್ಯವನ್ನು ಆಳುತ್ತಿದ್ದ ದೊರೆಗಳು ಪಾಳೆಗಾರಿಕೆಯ ಬಗ್ಗೆ ಹೆಚ್ಚು ಒಲವು ಹೊಂದಿದ್ದರು. ಮಂದಿಯಾಳ್ವಿಕೆಯನ್ನು ಅವರು ಒಪ್ಪುತ್ತಿರಲಿಲ್ಲ. ಮಂದಿಯ ಬೇಕು ಬೇಡಗಳನ್ನು ಸರಿಯಾಗಿ ಗಮನಿಸುತ್ತಿರಲಿಲ್ಲ. ದೊರೆಗಳನ್ನು ಬಿಟ್ಟರೆ, ಕೆಲವೇ ಕೆಲವು ಮಂದಿಯ ಹತ್ತಿರ ದುಡ್ಡು ಕೂಡುತ್ತಿತ್ತು ಮತ್ತು ತಳವರ‍್ಗದ ಮಂದಿಯನ್ನು ಹೆಚ್ಚಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಇಂತಹ ಮಂದಿಯ ಎಣಿಕೆ ತುಂಬಾ ಹೆಚ್ಚಿದ್ದು, ಯಾವಾಗಲೂ ದುಡಿಯುತ್ತಿದ್ದ ಆ ಮಂದಿಯನ್ನು ಸಹಜವಾಗಿ ಕೆರಳಿಸಿತ್ತು. ಹೆಚ್ಚಾಗಿ ಬೇಸಾಯ ಮತ್ತು ಉಳುಮೆಗೆ ಒತ್ತು ಕೊಡುತ್ತಿದ್ದ ಆ ಕಾಲದಲ್ಲಿ, ಪಡುವಣದ ಚಳಕದರಿಮೆಯತ್ತ ರಶ್ಯಾ ದೊರೆಗಳು ವಾಲತೊಡಗಿದರು. ಪಡುವಣದವರು ಮಾತಾಡುತ್ತಿದ್ದ ಮಾನವೀಯ ಮೌಲ್ಯಗಳು ಮತ್ತು ಮಂದಿಯಾಳ್ವಿಕೆ ಎಂಬ ಆಡಳಿತದ ಬಗೆ ರಶ್ಯಾ ಸಾಮ್ರಾಜ್ಯದ ಕಲಿತವರನ್ನು ಸೆಳೆಯಿತು. ಸಮಾಜವಾದ ಚಿಂತನೆಗಳು ಮುನ್ನೆಲೆಗೆ ಬರತೊಡಗಿದವು. ಈ ಎಲ್ಲಾ ಬೆಳವಣಿಗೆಗಳು, 1903 ರ ಹೊತ್ತಿಗೆ ಆ ಸಾಮ್ರಾಜ್ಯದ ಮಂದಿಯನ್ನು 3 ಗುಂಪುಗಳಾಗಿ ಮಾಡಿತ್ತು.

  • ಆಳ್ವಿಕೆಯನ್ನು ಮಂದಿಗೆ ಬಿಟ್ಟು ಕೊಡದೇ ದೊರೆಗಳೇ ಮುಂದುವರೆಸಲಿ ಎನ್ನುವ ಗುಂಪೊಂದು – ಸಿರಿವಂತರು, ದೊರೆಗಳ ಸರಕಾರದಲ್ಲಿ ಕೆಲಸ ಮಾಡುವವರು ಮತ್ತು ದೊರೆಗಳಿಗೆ ತುಸು ಹತ್ತಿರವಿದ್ದ ಈ ಗುಂಪಿನ ಮಂದಿಯ ಎಣಿಕೆ ಬಹಳವೇನಿರಲಿಲ್ಲ.
  • ಸಮಾಜವಾದ ಸರಿಯಾಗಿ ಗೆಲುವು ಕಾಣಬೇಕೆಂದರೆ ದುಡಿಯುವ ಗುಂಪಿನ ಮಂದಿಗೆ ತಿಳುವಳಿಕೆ ಬರಬೇಕು, ಆದರೆ ಅವರು ಇನ್ನೂ ಹಿಂದುಳಿದಿರುವುದರಿಂದ ಅವರ ಏಳಿಗೆಗೆ ಒತ್ತು ಕೊಡಬೇಕು. ಬಂಡವಾಳ ಹೂಡಿಕೆಯನ್ನು ಮತ್ತು ಉತ್ಪಾದನೆ ಹೆಚ್ಚಳ ಮಾಡುವಂತ ಕಟ್ಟಲೆಗಳಿರುವ ಮಂದಿಯಾಳ್ವಿಕೆ ಇರಲೆಂದು ಬಯಸುವ ಗುಂಪು ಎರಡನೆಯದು. ಹೆಚ್ಚಿನ ಎಣಿಕೆಯಲ್ಲಿದ್ದ ಕೂಡಣದ ನಡುವರ‍್ಗದ ಮಂದಿಯಾಗಿದ್ದ ಇವರು ‘ಏಳಿಗೆ ಪರ’ ಗುಂಪು ಎಂದು ತಮ್ಮನ್ನು ಕರೆದುಕೊಳ್ಳುತ್ತಿದ್ದರು ಮತ್ತು ಮುಂದೆ ಕಾನ್ಸ್ಟಿಟ್ಯೂಶನಲ್ ಡೆಮಾಕ್ರಟಿಕ್ ಪಾರ‍್ಟಿ ಎಂಬ ಪಂಗಡವನ್ನು ಕಟ್ಟಿಕೊಳ್ಳುವರು.
  • ಮೇಲೆ ತಿಳಿಸಿದ ಎರಡೂ ಗುಂಪಿನವರ ವಾದವನ್ನು ಒಪ್ಪದ, ಮಾರ‍್ಕ್ಸಿಸಮ್ ಸಿದ್ದಾಂತವನ್ನು ಒಪ್ಪುವ, ಕೂಡಣದ ದುಡಿತಗಾರರ ಗುಂಪು ಮೂರನೆಯದು. ಈ ಗುಂಪಿನವರೂ ಕೂಡ ಹೆಚ್ಚಿನ ಎಣಿಕೆಯಲ್ಲೇ ಇದ್ದರು. ಇವರು ಸೋಶಿಯಲ್ ಡೆಮಾಕ್ರಟಿಕ್ ಪಾರ‍್ಟಿಯನ್ನು ಕಟ್ಟಿಕೊಳ್ಳುವರು. ಮುಂದೊಮ್ಮೆ ಆಳ್ವಿಕೆ ಬಗ್ಗೆ ಈ ಗುಂಪಿನವರಲ್ಲೇ ಬೇರೆ ಬೇರೆ ಅನಿಸಿಕೆ ಮೂಡಿ ಎರಡು ಬಣದವರಾಗುತ್ತಾರೆ.

ಮೊದಲನೇ ಬಣ ಮೇಲೆ ತಿಳಿಸಿದ ಡೆಮಾಕ್ರಟಿಕ್ ಪಾರ‍್ಟಿಯವರ ನಿಲುವನ್ನು ಬೆಂಬಲಿಸುವರಾಗುತ್ತಾರೆ ಮತ್ತು ಅವರನ್ನು ಮೆನ್ಶೆವಿಕ್ಸ್ ಎಂದು ಕರೆಯಲಾಗುತ್ತದೆ. ಮತ್ತೊಂದು ಬಣ ಚಿಂತಕರನ್ನು ಹೊಂದಿದ್ದು, ಅದಿಕಾರವನ್ನು ಬಲಪ್ರಯೋಗ ಮಾಡಿಯಾದರೂ ಪಡೆಯಬೇಕು ಎಂಬ ನಿಲುವಿನವರಾಗಿರುತ್ತಾರೆ. ವ್ಲಾಡಿಮಿರ್ ಲೆನಿನ್ ಈ ಪಂಗಡದಲ್ಲಿ ಕೇಳಿ ಬರುವ ಮುಕ್ಯವಾದ ಹೆಸರಿನಲ್ಲೊಂದು. ಈ ಪಂಗಡದವರನ್ನು ಬೊಲ್ಶೆವಿಕ್ಸ್ ಅತವಾ ಕೆಂಪುಪಡೆ (red army) ಎಂದೂ ಕೂಡ ಕರೆಯಲಾಗುತ್ತಿತ್ತು.

ಸೋವಿಯತ್ ಒಕ್ಕೂಟದ ಹುಟ್ಟು:

ಮಂಚೂರಿಯ ಮತ್ತು ಕೊರಿಯಾ ನಾಡಿನ ಮೇಲೆ ಹಕ್ಕನ್ನು ಚಲಾಯಿಸುವ ಸಲುವಾಗಿ ಜಪಾನ್ ಮತ್ತು ರಶ್ಯನ್ ಜಾರ್ ಗಳ ನಡುವೆ 1904-1905 ರಲ್ಲಿ ನಡೆಯುವ ಕಾಳಗದಲ್ಲಿ ರಶ್ಯನ್ ಸಾಮ್ರಾಜ್ಯ ಸೋಲುತ್ತದೆ. ಅದು ಅರಸಾಳ್ವಿಕೆಯ ಬೇರುಗಳನ್ನು ಮೆಲ್ಲನೆ ಅಲ್ಲಾಡಿಸತೊಡಗುತ್ತದೆ. ಬೇಡಿಕೆ ಓಲೆಯೊಂದನ್ನು ರಶ್ಯನ್ ಸಾಮ್ರಾಜ್ಯದ ಅರಸನಿಗೆ ನೀಡಬೇಕೆಂದು ಪಾದ್ರಿಯೊಬ್ಬರ ಮುಂದಾಳತ್ವದಲ್ಲಿ ಹೊರಟಿದ್ದ ಮಂದಿಯ ಮೇಲೆ ಅರಮನೆಯ ಕಾವಲಿಗಿದ್ದ ಸೇನೆಯವರು ಗುಂಡಿನದಾಳಿ ನಡೆಸುತ್ತಾರೆ.ಮೊದಲೇ ಬಹುಪಾಲು ಮಂದಿ ಅರಸಾಳ್ವಿಕೆಯನ್ನು ಒಪ್ಪದ್ದಿದ್ದರಿಂದ, ಈ ಗಟನೆಯನ್ನು ಮಂದಿಯಾಳ್ವಿಕೆ ಬೇಕೆಂಬ ಒತ್ತಾಯಪಡಿಸುವ ದಂಗೆಯಾಗುವಂತೆ ಮಾಡುತ್ತಾರೆ. ಕೊನೆಗೆ ಮಂದಿಯ ಒತ್ತಾಯಕ್ಕೆ ಮಣಿದ ಆಳುವವರು, ಅರಸಾಳ್ವಿಕೆಯನ್ನೇ ಇರಿಸಿಕೊಂಡು ಮಂದಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲು ಒಪ್ಪುತ್ತಾರೆ. ಈ ನಡೆ ಕೆಲವರಿಗೆ ಒಪ್ಪಿಗೆಯಾದರೆ ಬಹುಪಾಲು ಮಂದಿಗೆ ಹಿಡಿಸುವುದಿಲ್ಲ. ಮೊದಲನೇ ಜಗತ್ತಿನ ಕಾಳಗ 1914ರಲ್ಲಿ ಶುರುವಾದಾಗ ಆಗ ಆಳುತ್ತಿದ್ದ ಎರಡನೇ ನಿಕೊಲಾಸ್ ಎಂಬ ದೊರೆ ರಶ್ಯಾ ಸಾಮ್ರಾಜ್ಯದ ಪರವಾಗಿ ಆ ಕಾಳಗದಲ್ಲಿ ಬಾಗವಹಿಸುತ್ತಾನೆ.

ಆದರೆ ರಶ್ಯಾ ಸಾಮ್ರಾಜ್ಯವು ಆ ಕಾಳಗ ಮುಗಿದ ನಂತರ ಕೆಟ್ಟ ಪರಿಣಾಮವನ್ನು ಎದುರಿಸುತ್ತದೆ. ಹಣದುಬ್ಬರ, ತಿನ್ನುವ ವಸ್ತುಗಳ ಮತ್ತು ಉರುವಲುಗಳ ಬೇಡಿಕೆಯಲ್ಲಿ ಹೆಚ್ಚಳವಿದ್ದು ಪೂರೈಕೆ ಕಡಿಮೆ ಇರುವ ಸನ್ನಿವೇಶ, ದುಡಿತಕ್ಕೆ ತಕ್ಕ ಹಾಗೆ ಸಿಗದಿರುವ ಸಂಬಳ – ಇವೆಲ್ಲವೂ ಆಳುವವರ ಇದಿರಾಗಿ ಮಂದಿಯನ್ನು ಎತ್ತಿಕಟ್ಟುತ್ತದೆ. ಅರಸಾಳ್ವಿಕೆ ಕೊನೆಗೊಂಡು ತಾತ್ಕಾಲಿಕವಾಗಿ ಸರ‍್ಕಾರವೊಂದು ಬರುತ್ತದೆ. ಆದರೆ ಲೆನಿನ್ ಬಳಗದ ಕೆಂಪುಪಡೆಯ ಮಂದಿ ಆ ತಾತ್ಕಾಲಿಕ ಸರಕಾರವನ್ನು ಕೆಳಗಿಳಿಸಿ ತಾವು ನಂಬಿದ್ದ ಸಿದ್ದಾಂತದಡಿ ಆಳಲು, ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಇದು ರಶ್ಯಾದಲ್ಲಿ ಮತ್ತೊಂದು ಒಳಜಗಳಕ್ಕೆ ಎಡೆ ಮಾಡಿಕೊಡುತ್ತದೆ. ರಶ್ಯಾ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿದ್ದ ಯುಕ್ರೇನಿಯನ್, ಬಿಯಲೋರಶ್ಯನ್, ಟ್ರಾನ್ಸ್ ಕಾಕೆಶಿಯನ್ ಒಕ್ಕೂಟಗಳಲ್ಲಿನ ಕಮ್ಯುನಿಸ್ಟರು ಗೆಲ್ಲಲು ಕೆಂಪುಪಡೆ ಸಹಾಯ ಮಾಡುತ್ತದೆ. 1922 ರಲ್ಲಿ ರಶ್ಯಾ ಮತ್ತು ಈ ಮೂರು ಒಕ್ಕೂಟಗಳು ಒಂದಾಗಿ ಸೋವಿಯತ್ ಒಕ್ಕೂಟ ಹುಟ್ಟು ಪಡೆಯುತ್ತದೆ.

1924 ರಲ್ಲಿ ಲೆನಿನ್ ಸಾವಿನ ಬಳಿಕ ಮಾರ‍್ಕ್ಸಿಸಮ್-ಲೆನಿನಿಸಂ ಸಿದ್ದಾಂತವನ್ನು ಹುಟ್ಟುಹಾಕಿದ ಜೋಸೆಪ್ ಸ್ಟಾಲಿನ್ ಅದಿಕಾರ ಹೊಂದುತ್ತಾರೆ ಮತ್ತು ಇಡೀ ಒಕ್ಕೂಟವನ್ನು ಕೇಂದ್ರೀಕ್ರುತ ಆಡಳಿತದಡಿ ತರುತ್ತಾರೆ. ಮೊದಲ ಬಾರಿಗೆ ಕಮ್ಯುನಿಸ್ಟರ ಮುಂದಾಳತ್ವದಲ್ಲಿ ಹಲವಾರು ನಾಡುಗಳು ದೊಡ್ಡ ಒಕ್ಕೂಟವೊಂದ ಆಳ್ವಿಕೆಗೆ ಒಳಪಡುತ್ತವೆ. ಈ ಒಕ್ಕೂಟವು ಜರ‍್ಮನ್ನಿನ ನಾಜಿಯರನ್ನು ಸೋಲಿಸುವುದಲ್ಲದೇ, ಮುಂದುವರೆದ ನಾಡೆನಿಸಿಕೊಂಡಿದ್ದ ಅಮೆರಿಕಾದ ಎದುರು ಪೈಪೋಟಿಗೂ ನಿಲ್ಲುತ್ತದೆ (cold war). ಆದರೆ 1991ರಲ್ಲಿ ಹಣಕಾಸಿನ ಮುಗ್ಗಟ್ಟಿಂದ, ನುಡಿ ಅಸಮಾನತೆಯಿಂದ ಮತ್ತು ಒಕ್ಕೂಟದ ಬೇರೆ ಬೇರೆ ನಾಡುಗಳು ತಮ್ಮಾಳ್ವಿಕೆ(autonomy) ಬಯಸಿದ್ದರಿಂದ ಸೋವಿಯತ್ ಒಕ್ಕೂಟವು ಒಡೆಯುತ್ತದೆ.

( ಮಾಹಿತಿ ಸೆಲೆ: infoplease.comwiki-RussianEmpirewiki-SovietUnionwiki-RussianRevolution, moneyweek.com )

(ಚಿತ್ರ ಸೆಲೆ:  commons.wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 22/01/2015

    […] ಬರಹದಲ್ಲಿ ಸೋವಿಯತ್ ಒಕ್ಕೂಟದ ಹುಟ್ಟಿನ ಬಗ್ಗೆ […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *