ಬೇಲದ ಹಣ್ಣು

– ಸಿ.ಪಿ.ನಾಗರಾಜ.

 

ಒಂದು ಶನಿವಾರ ಸಂಜೆ ನನ್ನನ್ನು ನೋಡಲೆಂದು ಮನೆಗೆ ಬಂದ ತರುಣನೊಬ್ಬನನ್ನು ಮುಂದಿನ ಕೊಟಡಿಯಲ್ಲಿ ಕುಳ್ಳಿರಿಸಿ , ಬಂದ ಉದ್ದೇಶವೇನೆಂದು ಕೇಳಿದೆ . ಕೂಡಲೇ ಆತ ತನ್ನ ಕಯ್ಚೀಲದಿಂದ ಒಂದು ನೋಟ್‍ಬುಕ್ಕನ್ನು ಹೊರತೆಗೆದು ತೋರಿಸುತ್ತಾ-

“ನಾನೊಂದು ನಾಟಕವನ್ನು ಬರೆದಿದ್ದೇನೆ ಸಾರ್ . ಅದನ್ನ ನೀವು ಓದಿನೋಡಿ , ನಿಮ್ಮ ಅನಿಸಿಕೆಯನ್ನು ತಿಳಿಸಬೇಕು ಸಾರ್” ಎಂದ .

“ನಾಟಕದ ಹೆಸರೇನು?”

“ಪ್ರೇಮಜ್ಯೋತಿ ಅಂತ ಸಾರ್”

“ಓಹೋ…ಹರೆಯದ ಹುಡುಗ ಹುಡುಗಿಯರ ಒಲವನ್ನು ನಾಟಕದ ವಸ್ತುವನ್ನಾಗಿ ಮಾಡಿಕೊಂಡು ಬರೆದಿದ್ದೀರಾ?” ಎಂದೆ .

“ಅಹುದು ಸಾರ್” ಎಂದು ಹೇಳಿ, ಆ ನೋಟ್‍ಬುಕ್ಕನ್ನು ನನಗೆ ನೀಡಿದನು . ಅದರ ಒಳಪುಟಗಳನ್ನು ನಾನು ಒಮ್ಮೆ ತಿರುವಿ ನೋಡಿದಾಗ, ಕಯ್ ಬರಹದ ಹಾಳೆಗಳು ಸುಮಾರು ಒಂದು ನೂರು ಪುಟಗಳಿಗಿಂತಲೂ ಹೆಚ್ಚಾಗಿದ್ದವು .

“ತುಂಬಾ ದೊಡ್ಡ ನಾಟಕವನ್ನೆ ಬರೆದಿದ್ದೀರಿ. ಇನ್ನೊಂದು ಇಪ್ಪತ್ತು ದಿನ ಬಿಟ್ಕೊಂಡು ಬನ್ನಿ. ಅಶ್ಟರಲ್ಲಿ ಓದಿ ಮುಗಿಸಿರ‍್ತೀನಿ”

“ಹಾಗೇ ಆಗ್ಲಿ ಸಾರ್. ಕಾಗುಣಿತದ ತಪ್ಪುಗಳು ಇದ್ದರೆ, ತಿದ್ದುಕೊಡಿ ಸಾರ್” ಎಂದು ವಿನಂತಿಸಿಕೊಂಡ ನಂತರ ಆತ ಎದ್ದುಹೊರಡಲು ಅಣಿಯಾಗುತ್ತಿದ್ದಂತೆಯೇ, ಒಳಗಿನಿಂದ ನನ್ನ ಹೆಂಡತಿಯು ಇಬ್ಬರಿಗೂ ಟೀ ತಂದು ಕೊಟ್ಟಳು. ಟೀ ಅನ್ನು ಕುಡಿಯುತ್ತಾ ಒಂದೆರಡು ಗಳಿಗೆಯ ಕಾಲ ಅವನ ಉಡುಗೆತೊಡುಗೆಗಳನ್ನು ಗಮನಿಸಿದೆ. ಸುಮಾರು ಹದಿನೆಂಟು-ಹತ್ತೊಂಬತ್ತರ ಹರೆಯದ ಆತ ತೊಟ್ಟಿದ್ದ ಅಂಗಿ ಹಳೆಯದಾಗಿ, ಹೆಗಲಿನ ಕಡೆ ತುಸು ಹರಿದು, ಮತ್ತೆ ಹೊಲಿದಿರುವ ಗುರುತು ಎದ್ದು ಕಾಣುತ್ತಿತ್ತು. ಪ್ಯಾಂಟ್ ಕೂಡ ಕಳಪೆಯದಾಗಿತ್ತು.

“ಯಾವ ಕ್ಲಾಸಿನಲ್ಲಿದ್ದೀರಿ ನೀವು?” ಎಂದು ಕೇಳಿದೆ.

“ಈಗ ನಾನು ಕಾಲೇಜಿನಲ್ಲಿ ಓದುತ್ತಿಲ್ಲ ಸಾರ್. ಪಿ.ಯು.ಸಿ., ಪೆಯ್ಲಾಗಿ ಊರಲ್ಲೆ ಇದ್ದೀನಿ ಸಾರ್”

“ಮತ್ತೆ ಎಕ್ಸಾಮ್ ಕಟ್ಟಲಿಲ್ವ?”

“ಇಂಗ್ಲಿಶ್ ಒಂದನ್ನು ಬಿಟ್ಟು…ಉಳಿದವೆಲ್ಲಾ ಪಾಸ್ ಆಗಿವೆ ಸಾರ್. ನಾಲ್ಕು ದಪ ಕಟ್ಟಿದರೂ ಇಂಗ್ಲಿಶ್ ಪಾಸ್ ಮಾಡೂಕೆ ಆಗಲಿಲ್ಲ ಸಾರ್”

ಅವನು ಇಂಗ್ಲಿಶಿನಲ್ಲಿ ಮತ್ತೆ ಮತ್ತೆ ಪೆಯ್ಲಾದುದನ್ನು ಕೇಳಿ, ಅನುಕಂಪವನ್ನು ಸೂಚಿಸುವಂತೆ ನಾನು ಲೊಚಗುಟ್ಟಿದೆ. ಅಶ್ಟರಲ್ಲಿ ಟೀ ಅನ್ನು ಕುಡಿದು ಮುಗಿಸಿದ್ದ ಆತ ಮೇಲೆದ್ದು-

“ಇನ್ನು ಇಪ್ಪತ್ತು ದಿನ ಬುಟ್ಕೊಂಡು ಬತ್ತಿನಿ ಸಾರ್” ಎಂದು ಹೇಳಿ ಹೊರಟ.

ಈಗ ನನ್ನ ಕಯ್ಯಲ್ಲಿನ ನಾಟಕದ ಹಸ್ತಪ್ರತಿಗಿಂತ ಹೆಚ್ಚಾಗಿ, ಅದನ್ನು ಬರೆದಿರುವ ವ್ಯಕ್ತಿಯ ಕಾಲೇಜಿನ ಓದು ಮುರಿದುಬಿದ್ದಿರುವ ಕಡೆಗೆ ನನ್ನ ಮನಸ್ಸು ಚಿಂತಿಸತೊಡಗಿತು. ಇವನ ಹಾಗೆಯೇ ಇಂಗ್ಲಿಶ್ ನುಡಿಯಲ್ಲಿ ತೇರ‍್ಗಡೆಯಾಗದೆ, ಶಾಲಾ ಕಾಲೇಜುಗಳಲ್ಲಿ ಓದನ್ನು ಮುಂದುವರಿಸಲಾಗದೆ, ನಡುವಿನಲ್ಲೇ ಹೊರಬಿದ್ದಿರುವ ವಿದ್ಯಾರ‍್ತಿಗಳ ಸಂಕ್ಯೆ ನಮ್ಮ ಹಳ್ಳಿಗಾಡಿನಲ್ಲಿ ಲೆಕ್ಕವಿಲ್ಲದಶ್ಟಿದೆ. ತಾಯ್ನುಡಿಯಾದ ಕನ್ನಡದಲ್ಲಿ ನೂರಕ್ಕೆ ತೊಂಬತ್ತು ಅಂಕಗಳನ್ನು ಗಳಿಸುವ ಎಶ್ಟೋ ಮಂದಿ ಗ್ರಾಮೀಣ ವಿದ್ಯಾರ‍್ತಿಗಳು ಇಂಗ್ಲಿಶಿನಲ್ಲಿ ಕೇವಲ ಒಂಬತ್ತು ಅಂಕಗಳನ್ನು ಗಳಿಸಲಾಗದೆ ಒದ್ದಾಡುತ್ತಿದ್ದಾರೆ. ಕನ್ನಡ ನುಡಿಯಲ್ಲಿ ಕೇಳಿ, ಓದಿ, ಬರೆಯುವ ಅವಕಾಶವಿರುವ ಚರಿತ್ರೆ, ಬೂಗೋಳ, ಅರ‍್ತಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರಗಳ ಎಕ್ಸಾಮ್‍ಗಳಲ್ಲಿ ಮೊದಲ ಅಟೆಮ್ಟ್‍ನಲ್ಲಿಯೇ ಎಪ್ಪತ್ತು ಎಂಬತ್ತು ಅಂಕಗಳನ್ನು ಪಡೆಯುವಶ್ಟು ಬುದ್ದಿಶಕ್ತಿಯುಳ್ಳ ನಮ್ಮ ಹಳ್ಳಿಗಾಡಿನ ವಿದ್ಯಾರ‍್ತಿಗಳು ಇಂಗ್ಲಿಶ್ ಪರೀಕ್ಶೆಯನ್ನು ಎಶ್ಟು ಸಾರಿ ಕಟ್ಟಿದರೂ ಪಾಸು ಮಾಡಲಾಗದೆ ಕುಸಿದು ಹೋಗುತ್ತಿದ್ದಾರೆ.

ಯಾವುದೇ ವ್ಯಕ್ತಿಗಾದರೂ ತನ್ನ ಸುತ್ತಮುತ್ತಣ ಸಾಮಾಜಿಕ ಪರಿಸರದ ಮಾತುಕತೆಗಳಲ್ಲಿ ಕೇಳಿಸಿಕೊಳ್ಳದ ಯಾವುದೇ ಒಂದು ನುಡಿಯನ್ನಾಗಲಿ ಕಲಿಯುವುದು ತುಂಬಾ ತೊಡಕಿನ ಕೆಲಸ. ಶಾಲೆಯಲ್ಲಿ ಮಗುವಿಗೆ ಪರನುಡಿಯೊಂದನ್ನು ಕಲಿಸುವಾಗ ಮೊದಲ ಹಂತದಲ್ಲಿ ಪರನುಡಿಯ ಚಿಕ್ಕ ಚಿಕ್ಕ ವಾಕ್ಯಗಳನ್ನು ಮಾತುಕತೆಯ ರೂಪದಲ್ಲಿ ಅದರ ಮುಂದೆ ಉಚ್ಚರಿಸುತ್ತಾ, ಮಗು ಅದನ್ನು ಕೇಳಿ, ಅದರ ತಿರುಳನ್ನು ತಿಳಿದುಕೊಳ್ಳುವಂತೆ ಮಾಡಬೇಕು. ಅನಂತರ ಪರನುಡಿಯ ಸಣ್ಣಪುಟ್ಟ ವಾಕ್ಯಗಳನ್ನು ಆಡುವಂತೆ ತರಬೇತಿಯನ್ನು ನೀಡಬೇಕು. ಈ ಎರಡು ಹಂತಗಳನ್ನು ದಾಟಿದ ನಂತರದಲ್ಲಿ ಪರನುಡಿಯ ಅಕ್ಕರಗಳನ್ನು ಪರಿಚಯಿಸಿ, ಅದರ ಪದರಚನೆ ಮತ್ತು ವಾಕ್ಯರಚನೆಗಳನ್ನು ಗುರುತಿಸಿ ಓದುವ ಚಳಕವನ್ನು ಕಲಿಸಬೇಕು. ಕೊನೆಯ ಹಂತವಾಗಿ ಪರನುಡಿಯಲ್ಲಿ ಬರೆಯುವುದನ್ನು ಹೇಳಿಕೊಡಬೇಕು. ಈ ರೀತಿ ಮಾನವ ಮಗುವೊಂದು ಯಾವುದೇ ಒಂದು ನುಡಿಯನ್ನು ಅದು ತನ್ನ ತಾಯ್ನುಡಿಯಾಗಿರಲಿ ಇಲ್ಲವೇ ಪರನುಡಿಯಾಗಿರಲಿ ಅದನ್ನು ತನ್ನದಾಗಿಸಿಕೊಳ್ಳಬೇಕಾದರೆ “ಕೇಳುವ-ಆಡುವ-ಓದುವ-ಬರೆಯುವ” ಚಳಕಗಳನ್ನು ಹಂತಹಂತವಾಗಿ ಕಲಿಯಬೇಕು. ಆದರೆ ನಮ್ಮ ಶಿಕ್ಶಣ ಪದ್ದತಿಯಲ್ಲಿ ಇದು ತಲೆಕೆಳಕಾಗಿದೆ. ಆದುದರಿಂದಲೇ ಹಳ್ಳಿಗಾಡಿನ ಶಾಲಾಕಾಲೇಜುಗಳಲ್ಲಿ ನಾಲ್ಕು ಗೋಡೆಗಳ ನಡುವೆ ಹೇಳಿಕೊಡುವ ಪರನುಡಿಯಾದ ಇಂಗ್ಲಿಶ್ ಕಲಿಕೆಯಲ್ಲಿ ಯಶಸ್ಸನ್ನು ಪಡೆದು ಮುಂದೆ ಹೋಗುವವರಿಗಿಂತಲೂ, ಹಿಂದೆ ಬೀಳುವವರೇ ಹೆಚ್ಚು ಮಂದಿ. ಹೀಗೆ ಹಲವಾರು ನಿಮಿಶಗಳ ಕಾಲ ನಮ್ಮ ಗ್ರಾಮೀಣ ವಿದ್ಯಾರ‍್ತಿಗಳ ಶಿಕ್ಶಣದ ಹಾದಿಯಲ್ಲಿ ದೊಡ್ಡ ತೊಡಕಾಗಿರುವ ಇಂಗ್ಲಿಶಿನ ಬಗ್ಗೆ ಚಿಂತಿಸುತ್ತಿದ್ದು, ಮತ್ತೆ ನೋಟ್‍ಬುಕ್ಕನ್ನು ತೆರೆದು, ಅಂದೇ ಆ ನಾಟಕವನ್ನು ಓದಿ ಮುಗಿಸಿದೆ .

ಇಪ್ಪತ್ತು ದಿನಗಳ ನಂತರ ಆತ ಮತ್ತೆ ಮನೆಗೆ ಬಂದಾಗ, ನಾಟಕದ ಹಸ್ತಪ್ರತಿಯನ್ನು ಹಿಂತಿರುಗಿಸುತ್ತಾ-

“ನೀವು ಬರೆದಿರುವ ನಾಟಕದಲ್ಲಿ ಕನ್ನಡ ಸಿನಿಮಾಗಳಲ್ಲಿ ಬಂದಿರುವ ಮಾತುಕತೆಗಳೇ ತುಂಬಿವೆ. ನೀವು ಚಿತ್ರಿಸಿರುವ ಒಲವು-ನಲಿವಿನ ಪ್ರಸಂಗಗಳು ಕೂಡ ಚಲನಚಿತ್ರಗಳ ಸನ್ನಿವೇಶಗಳನ್ನೇ ಅನುಕರಣೆ ಮಾಡಿವೆ” ಎಂದು ಹೇಳುತ್ತಿದ್ದಂತೆಯೇ, ಆತನ ಮೊಗದಲ್ಲಿ ನಿರಾಶೆಯ ಒಳಮಿಡಿತಗಳು ಎದ್ದು ಕಾಣತೊಡಗಿದವು. ಆತನಲ್ಲಿ ಬರವಣಿಗೆಯ ಬಗೆಗಿರುವ ಆಸಕ್ತಿಯನ್ನು ಉತ್ತೇಜಿಸಲೆಂದು-

“ನೀವು ಇಂತಹ ವಸ್ತುವನ್ನುಳ್ಳ ನಾಟಕವನ್ನು ಬರೆಯುವ ಬದಲು, ಹಳ್ಳಿಯಲ್ಲಿ ನೀವು ಕಂಡ ನೋಟಗಳ, ಪಡೆದ ನೋವುನಲಿವುಗಳ ಹಿನ್ನೆಲೆಯಲ್ಲಿ, ನಿಮ್ಮ ಮನಸ್ಸನ್ನು ಹೆಚ್ಚಾಗಿ ಕಲಕಿ ಕಾಡಿದ ಸಂಗತಿಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮದೇ ಆದ ನುಡಿಗಟ್ಟಿನಲ್ಲಿ ನಾಟಕವನ್ನು ಬರೆಯಲು ಪ್ರಯತ್ನಿಸಿ” ಎಂದು ಇಪ್ಪತ್ತು-ಮೂವತ್ತು ನಿಮಿಶಗಳ ಕಾಲ ನಾನು ಓದಿ ತಿಳಿದಿದ್ದ ಒಳ್ಳೆಯ ನಾಟಕಗಳ ವಸ್ತು ಮತ್ತು ಮಾತುಕತೆಯ ಬಗೆಗಳನ್ನು ಸಾಕಶ್ಟು ವಿವರವಾಗಿ ತಿಳಿಸಿದೆ. ಒಂದೆರಡು ಗಳಿಗೆಗಳ ಕಾಲ ಆತ ತನ್ನ ಹಸ್ತಪ್ರತಿಯನ್ನೇ ನೋಡುತ್ತ, ಸುಮ್ಮನೆ ಕುಳಿತಿದ್ದ. ಮತ್ತೆ ನಾನೇ ಮಾತನಾಡತೊಡಗಿದೆ.

“ಊರಿನಲ್ಲಿ ಈಗ ಏನ್ ಮಾಡ್ಕೊಂಡ್ ಇದ್ದೀರಿ?”

“ನಮ್ಮ ತಂದೆಯವರದು ಮುಕ್ಕಾಲು ಎಕರೆ ಗದ್ದೆ ಇದೆ ಸಾರ್. ಅದರಲ್ಲೆ ಇಪ್ಪತ್ತು ಗುಂಟೆಗೆ ಬತ್ತ ಹಾಕೊಂಡು, ಇನ್ನು ಹತ್ತು ಗುಂಟೇಲಿ ಉಪ್ಪನೇರಳೆ ಕಡ್ಡಿ ಹಾಕಿದ್ದೀನಿ ಸಾರ್” ಎಂದು ಹೇಳುತ್ತ, ಹಸ್ತಪ್ರತಿಯನ್ನು ತನ್ನ ಕಯ್ಚೀಲದೊಳಕ್ಕೆ ಇಟ್ಟುಕೊಂಡು , ಮತ್ತೆ ಅದೇ ಚೀಲದೊಳಗಿಂದ ಹಣ್ಣುಗಳನ್ನು ಹೊರತೆಗೆದು-

“ನಮ್ಮೂರಿನ ಹೊಲಮಾಳದಲ್ಲಿ ಒಂದು ಬ್ಯಾಲದಹಣ್ಣಿನ ಮರ ಇದೆ ಸಾರ್. ಆ ಮರದ ಹಣ್ಣು ತುಂಬಾ ರುಚಿ. ನಿಮಗೆ ಕೊಡಬೇಕು ಅಂತ ಆಸೆಯಾಯ್ತು. ಅದಕ್ಕೆ ಚೆನ್ನಾಗಿ ಬಲಿತೀರು ಕಾಯಿಗಳನ್ನ ಹೋದ ವಾರನೇ ಕಿತ್ತು, ಅಡೆ ಹಾಕಿದ್ದೆ. ಈಗ ಇವು ಚೆನ್ನಾಗಿ ಹಣ್ಣಾಗಿವೆ ಸಾರ್. ತಕೊಳಿ ಸಾರ್ ” ಎಂದು ಹೇಳುತ್ತಾ , ಎರಡು ಹಣ್ಣುಗಳನ್ನು ನನ್ನ ಕಯ್ಯಲ್ಲಿ ಇಟ್ಟು, ಇನ್ನು ಅಯ್ದಾರು ಹಣ್ಣುಗಳನ್ನು ಚೀಲದಿಂದ ಹೊರತೆಗೆದು, ಅಲ್ಲಿದ್ದ ಸ್ಟೂಲಿನ ಮೇಲೆ ಇಟ್ಟು, ಕಯ್ ಮುಗಿದು ಹೊರಟ. ಬರಿಗಾಲಲ್ಲಿ ಊರಿಗೆ ಹಿಂತಿರುಗುತ್ತಿದ್ದ ಶಿಶ್ಯನನ್ನೇ ಕೆಲವು ಗಳಿಗೆ ಗಮನಿಸುತ್ತಿದ್ದು, ಅನಂತರ ನನ್ನ ಕಯ್ಗಳಲ್ಲಿ ಗಮಗಮಿಸುತ್ತಿದ್ದ ಹಣ್ಣುಗಳನ್ನು ನೋಡುತ್ತಿದ್ದಂತೆಯೇ, ಬಹುಬಗೆಯ ಒಳಮಿಡಿತಗಳ ಒತ್ತಡಕ್ಕೆ ಒಳಗಾಗಿ, ನನ್ನ ಕಣ್ಣುಗಳು ತುಂಬಿ ಬಂದವು.

(ಚಿತ್ರ ಸೆಲೆ: kn.wiktionary.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: