ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

[ ಬರಹಗಾರರ ಮಾತು:  ಶಿವಶರಣರ ವಚನಗಳಿಂದ ಕೆಲ ಸಾಲುಗಳನ್ನು ಆಯ್ಕೆ ಮಾಡಿ ಅವುಗಳ ಹುರುಳು ತಿಳಿಸುವ ಪ್ರಯತ್ನವಿದು. ಸಾಲುಗಳ ಕೊನೆಯಲ್ಲಿ ಕೊಟ್ಟಿರುವ ಅಂಕಿಗಳು ಎಂ.ಎಂ.ಕಲಬುರ‍್ಗಿ ಅವರು ಸಂಪಾದಿಸಿರುವ ಬಸವಣ್ಣನವರ ವಚನ ಸಂಪುಟದ ವಚನದ ಅಂಕಿ ಮತ್ತು ಪುಟದ ಅಂಕಿಯನ್ನು ತಿಳಿಸುತ್ತವೆ.

ಬಸವಯುಗದ ವಚನ ಮಹಾ ಸಂಪುಟ: ಒಂದು

ಕರ‍್ನಾಟಕ ಸರ‍್ಕಾರ, ಕನ್ನಡ ಪುಸ್ತಕ ಪ್ರಾದಿಕಾರ, ಬೆಂಗಳೂರು. ತ್ರುತೀಯ ಆವ್ರುತ್ತಿ ( ಬೈಬಲ್ ಮುದ್ರಣ ಮಾದರಿ ) 2016 ]

ಅಡಿಗಡಿಗೆ ದೇವರಾಣೆ
ಅಡಿಗಡಿಗೆ ಭಕ್ತರಾಣೆ
ಅಡಿಗಡಿಗೆ ಗುರುವಿನಾಣೆ
ಎಂಬ ವಚನವೇ ಹೊಲ್ಲ. (660-61)

ಅಡಿಗಡಿಗೆ=ಮತ್ತೆ ಮತ್ತೆ/ಪದೇ ಪದೇ/ಮೇಲಿಂದ ಮೇಲೆ; ದೇವರ್+ಆಣೆ; ದೇವರು=ಜೀವನದಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿ, ತಮಗೆ ಒಳಿತನ್ನು ಮಾಡಿ ಕಾಪಾಡುವ ಅಗೋಚರ ವ್ಯಕ್ತಿಯನ್ನು/ಶಕ್ತಿಯನ್ನು ದೇವರು ಎಂದು ಮಾನವ ಸಮುದಾಯ ನಂಬಿದೆ;

ಆಣೆ=ವ್ಯಕ್ತಿಯು ತಾನು ಆಡುತ್ತಿರುವ ಮಾತು ನಿಜವೆಂದು ಎತ್ತಿಹಿಡಿಯಲು/ಪ್ರತಿಪಾದಿಸಲು/ನಂಬಿಸಲು ತನ್ನ ಮೆಚ್ಚಿನ ದೇವರು/ವ್ಯಕ್ತಿ/ವಸ್ತು/ತನ್ನ ಅಂಗಾಂಗವನ್ನು ಹೆಸರಿಸಿ ಹೇಳುವ ನುಡಿ;

ದೇವರಾಣೆ=ದೇವರ ಹೆಸರನ್ನು ಉಚ್ಚರಿಸುತ್ತ ಇಕ್ಕುವ ಆಣೆ; ಭಕ್ತರ್+ಆಣೆ; ಭಕ್ತ=ಒಳ್ಳೆಯ ನಡೆನುಡಿಗಳಿಂದ ದೇವರನ್ನು ಒಲಿದವನು/ಒಳ್ಳೆಯ ನಡೆನುಡಿಗಳೇ ದೇವರೆಂದು ನಂಬಿದವನು; ಭಕ್ತರಾಣೆ=ದೇವರಲ್ಲಿ ಒಲವುಳ್ಳ ವ್ಯಕ್ತಿಗಳ ಹೆಸರಿನ ಮೇಲೆ ಇಕ್ಕುವ ಆಣೆ; ಗುರು+ಇನ್+ಆಣೆ; ಗುರು=ವ್ಯಕ್ತಿಗೆ/ಗುಡ್ಡನಿಗೆ ಅರಿವನ್ನು/ತಿಳುವಳಿಕೆಯನ್ನು ನೀಡಿ, ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವ ವ್ಯಕ್ತಿ;

ಗುರುವಿನಾಣೆ=ಗುರುವಿನ ಹೆಸರಿನ ಮೇಲೆ ಇಕ್ಕುವ/ಇಡುವ ಆಣೆ; ಎಂಬ=ಎನ್ನುವ/ಹೇಳುವ; ವಚನ=ಮಾತು/ನುಡಿ; ಹೊಲ್ಲ=ಕೆಟ್ಟದ್ದು/ಹೀನವಾದುದು/ಒಳ್ಳೆಯದಲ್ಲ;

ವಚನವೆ ಹೊಲ್ಲ=ಆಣೆಯಿಂದ ಕೂಡಿದ ಮಾತು ಒಳ್ಳೆಯದಲ್ಲ. ಆಣೆಯಿಡುತ್ತ ಆಡುವ ಮಾತುಗಳನ್ನು ಎಂದಿಗೂ ನಂಬಬಾರದು. ಏಕೆಂದರೆ ಆಣೆಯಿಂದ ಕೂಡಿದ ಮಾತಿನ ಹಿನ್ನೆಲೆಯಲ್ಲಿ ಕಪಟತನ/ವಂಚಕತನ/ಮೋಸಗಾರಿಕೆಯ ಹುನ್ನಾರವಿರುತ್ತದೆ;

ವ್ಯಕ್ತಿಯು ಇತರರೊಡನೆ ಮಾತನಾಡುವಾಗ ತಾನು ದಿಟದ/ಸತ್ಯದ/ವಾಸ್ತವದ ಸಂಗತಿಯನ್ನು ಹೇಳಿದರೆ, ಅದಕ್ಕೆ ಯಾವುದೇ ಬಗೆಯ ಆಣೆಯನ್ನು ಇಡಬೇಕಾದ ಅಗತ್ಯವಿಲ್ಲ.

ಯಾವ ವ್ಯಕ್ತಿಯು ತಾನಾಡುವ ಮಾತುಗಳಿಗೆ ಪೂರಕವಾಗಿ ಮತ್ತೆ ಮತ್ತೆ ಆಣೆಯನ್ನು ಇಡುವುದರ ಮೂಲಕವೇ ಜನರ ನಂಬಿಕೆಗೆ ಪಾತ್ರನಾಗಲು ಪ್ರಯತ್ನಿಸುತ್ತಾನೆಯೋ , ಅಂತಹ ವ್ಯಕ್ತಿಯು ತನ್ನ ವ್ಯಕ್ತಿತ್ವದಲ್ಲಿ ತನಗೆ ನಂಬಿಕೆಯಿಲ್ಲದ/ತನ್ನ ವ್ಯಕ್ತಿತ್ವವನ್ನು ತಾನೇ ಕುಗ್ಗಿಸಿಕೊಂಡ/ಇತರರನ್ನು ನಂಬಿಸಿ ಮೋಸಮಾಡುವ ನಯವಂಚಕನಾಗಿರುತ್ತಾನೆ.

ಆದರೆ ಬಡತನ ಮತ್ತು ಜಾತಿ ಮೆಟ್ಟಿಲಿನಲ್ಲಿ ಕೆಳಹಂತದಲ್ಲಿರುವ ವ್ಯಕ್ತಿಯು ಉಳ್ಳವರ ಮುಂದೆ ತನ್ನ ಪ್ರಾಮಾಣಿಕತನದ ನಡೆನುಡಿಗಳನ್ನು ಸಾಬೀತು ಪಡಿಸಲು ಬೇರೆ ದಾರಿಯಿಲ್ಲದೆ ಆಣೆಯಿಡುವುದು ಕೆಲವೊಮ್ಮೆ ಕಂಡುಬರುತ್ತದೆ.

ಅಯ್ಯಾ ಎಂದಡೆ ಸ್ವರ್ಗ
ಎಲವೊ ಎಂದಡೆ ನರಕ. (240-28)

ಅಯ್ಯಾ=ಮತ್ತೊಬ್ಬ ವ್ಯಕ್ತಿಯನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಎಂದಡೆ=ಎಂದರೆ/ಎಂದು ನುಡಿದರೆ/ಮಾತನಾಡಿದರೆ; ಎಲವೊ=ಮತ್ತೊಬ್ಬ ವ್ಯಕ್ತಿಯನ್ನು ತನಗಿಂತ ಕೀಳೆಂದು ಪರಿಗಣಿಸಿ, ತಿರಸ್ಕಾರದಿಂದ ಕಾಣುತ್ತ ಅಹಂಕಾರದಿಂದ ಮೆರೆಯುತ್ತ ಮಾತನಾಡುವಾಗ ಬಳಸುವ ಪದ;

ಸ್ವರ‍್ಗ ಮತ್ತು ನರಕ=ಮಾನವನ ಕಲ್ಪನೆಯಲ್ಲಿ ರೂಪುಗೊಂಡಿರುವ ಎರಡು ನೆಲೆಗಳು. ಸ್ವರ‍್ಗವು ಚೆಲುವು ಒಲವು ನಲಿವನ್ನುಂಟುಮಾಡುವ ತಾಣ/ನೆಲೆ/ಜಾಗ ಮತ್ತು ನರಕವು ಸಂಕಟ ವೇದನೆ ನೋವನ್ನುಂಟುಮಾಡುವ ತಾಣ ಎಂಬ ಕಲ್ಪನೆಯು ಜನಮನದಲ್ಲಿದೆ.

‘ಅಯ್ಯಾ ಎಂದಡೆ ಸ್ವರ್ಗ’ ಎಂಬ ನುಡಿಗಳು ವ್ಯಕ್ತಿಯು ಕುಟುಂಬದ ನೆಲೆ/ದುಡಿಮೆಯ ನೆಲೆ/ಸಾರ‍್ವಜನಿಕ ನೆಲೆಯಲ್ಲಿ ಇತರ ವ್ಯಕ್ತಿಗಳೊಡನೆ ವ್ಯವಹರಿಸುವಾಗ , ಅವರನ್ನು ಪ್ರೀತಿ/ಕರುಣೆ/ನಲಿವಿನಿಂದ “ ಅಯ್ಯಾ “ ಎಂದು ಮಾತನಾಡಿಸಿದರೆ, ಆಗ ಅವರು ಕೂಡ ಅದೇ ಬಗೆಯಲ್ಲಿ ಪ್ರೀತಿಯಿಂದ ಮಾತನಾಡತೊಡಗುತ್ತಾರೆ. ಒಬ್ಬರು ಮತ್ತೊಬ್ಬರ ಬಗ್ಗೆ ಹೊಂದಿರುವ ಒಳಿತಿನ ಒಳಮಿಡಿತಗಳಿಂದಾಗಿ ಇಂತಹ ಸನ್ನಿವೇಶದಲ್ಲಿ ನಡೆಯುವ ಮಾತುಕತೆಯು ವ್ಯಕ್ತಿಗಳ ಪಾಲಿಗೆ ಆನಂದ/ನೆಮ್ಮದಿ/ಒಳಿತನ್ನು ನೀಡುತ್ತದೆ; ಒಳ್ಳೆಯ ಮಾತಿನಿಂದ ಉಂಟಾಗುವ ಒಳ್ಳೆಯ ಪರಿಣಾಮಕ್ಕೆ ಒಂದು ರೂಪಕವಾಗಿ ಸ್ವರ‍್ಗ ಎಂಬ ಪದವನ್ನು ಬಳಸಲಾಗಿದೆ.

‘ಎಲವೊ ಎಂದಡೆ ನರಕ’ ಎಂಬ ನುಡಿಗಳು ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯೊಡನೆ ವ್ಯವಹರಿಸುವಾಗ, ಜಾತಿ/ಮತ/ಗದ್ದುಗೆ/ಸಂಪತ್ತಿನ ಅಹಂಕಾರದಿಂದ ಅವನ ವ್ಯಕ್ತಿತ್ವವನ್ನೇ ಕಡೆಗಣಿಸಿ/ಅವನನ್ನು ತನಗಿಂತಲೂ ಕೀಳೆಂದು ಪರಿಗಣಿಸಿ , ‘ಎಲವೊ’ ಎಂದು ಮಾತನಾಡಿಸಿದರೆ, ಅಂತಹ ಮಾತನ್ನು ಕೇಳಿದ ವ್ಯಕ್ತಿಯು ಮನದಲ್ಲಿ ನೊಂದುಕೊಳ್ಳುತ್ತಾನೆ. ಕೆಲವೊಮ್ಮೆ ಆ ವ್ಯಕ್ತಿಯು ಕೋಪಗೊಂಡು ಇಲ್ಲವೇ ಅಪಮಾನವನ್ನು ತಡೆಯಲಾರದೆ , ತನ್ನನ್ನು ಕಡೆಗಣಿಸಿ ಮಾತನಾಡಿದವನಿಗೆ ಹಿಂತಿರುಗಿಕೊಂಡು ನಿಂದಿಸಿ ಮಾತನಾಡತೊಡಗಿದರೆ, ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಬಯ್ಗುಳ/ಹೊಡೆದಾಟಕ್ಕೆ ತಿರುಗಿ, ಆ ಸನ್ನಿವೇಶವು ವ್ಯಕ್ತಿಗಳ ಪಾಲಿಗೆ ಸಾವು/ನೋವು/ಒತ್ತಡ/ಅಪಮಾನವನ್ನು ಉಂಟುಮಾಡುತ್ತದೆ. ಕೆಟ್ಟ ಮಾತಿನಿಂದ ಉಂಟಾಗುವ ಪರಿಣಾಮವನ್ನು ಸೂಚಿಸಲು ‘ ನರಕ ‘ ಎಂಬ ಪದವನ್ನು ಒಂದು ರೂಪಕವಾಗಿ ಬಳಸಲಾಗಿದೆ.

ಸಾಮಾಜಿಕ ವ್ಯವಹಾರದಲ್ಲಿ ವ್ಯಕ್ತಿಯು ಮಾತನಾಡುವಾಗ ಇತರರ ಬಗ್ಗೆ ಹೊಂದಿರಬೇಕಾದ ಒಳ್ಳೆಯ ನಿಲುವನ್ನು ಮತ್ತು ಬಳಸುವ ಪದಗಳ ಬಗ್ಗೆ ತಳೆಯಬೇಕಾದ ಎಚ್ಚರವನ್ನು ಈ ನುಡಿಗಳು ಸೂಚಿಸುತ್ತವೆ.

ಅರತವಡಗದು ಕ್ರೋಧ ತೊಲಗದು
ಕ್ರೂರ ಕುಭಾಷೆ ಕುಹಕ ಬಿಡದನ್ನಕ್ಕ
ನೀನೆತ್ತಲು ಶಿವನೆತ್ತಲು ಹೋಗತ್ತ ಮರುಳೆ. (131-21)

ಅರತ+ಅಡಗದು; ಅರತ=ಸೊಕ್ಕು/ಮದ/ಗರ‍್ವ; ಅಡಗು=ಕೊನೆಗೊಳ್ಳು/ಮುಗಿ/ಹಿಂದಕ್ಕೆ ಸರಿ; ಅರತವಡಗದು=ಸೊಕ್ಕಿನ ನಡೆನುಡಿಯು ಬಿಟ್ಟುಹೋಗುವುದಿಲ್ಲ; ಕ್ರೋಧ=ಸಿಟ್ಟು/ಕೋಪ/ಆಕ್ರೋಶ; ತೊಲಗು=ಅಳಿ/ನಾಶವಾಗು/ಇಲ್ಲವಾಗು; ಕ್ರೋಧ ತೊಲಗದು=ಕೋಪತಾಪದ ನಡೆನುಡಿಯು ಇಲ್ಲವಾಗುವುದಿಲ್ಲ;

ಕ್ರೂರ=ಕರುಣೆಯಿಲ್ಲದ/ದಯೆಯಿಲ್ಲದ ನಡತೆ/ವರ‍್ತನೆ; ಕುಭಾಷೆ=ಕೆಟ್ಟ ನುಡಿ/ಬಯ್ಗುಳ/ಇತರರ ಮನವನ್ನು ಗಾಸಿಗೊಳಿಸುವಂತಹ ಮಾತು; ಕುಹಕ=ಮೋಸ/ವಂಚನೆ/ಕಪಟತನ/ಅಣಕ/ವ್ಯಂಗ್ಯದ ನಡೆನುಡಿ; ಬಿಡದ+ಅನ್ನಕ್ಕ; ಬಿಡು=ತೊರೆ/ತ್ಯಜಿಸು; ಅನ್ನಕ್ಕ=ವರೆಗೆ/ತನಕ; ಬಿಡದನ್ನಕ್ಕ=ಬಿಡುವ ವರೆಗೆ/ಬಿಡುವ ತನಕ; ನೀನ್+ಎತ್ತಲು; ಎತ್ತಲು=ಯಾವ ಕಡೆ/ಯಾವ ದಿಕ್ಕು; ಶಿವನ್+ಎತ್ತಲು; ಶಿವ=ಈಶ್ವರ/ದೇವರು/ಲಿಂಗ; ಹೋಗು+ಅತ್ತ; ಹೋಗು=ತೆರಳು/ಗಮಿಸು; ಅತ್ತ=ಆ ಕಡೆ/ಆ ದಿಕ್ಕು; ಮರುಳ=ತಿಳಿಗೇಡಿ/ದಡ್ಡ/ಹುಚ್ಚ;

ಶಿವಶರಣಶರಣೆಯರ ಪಾಲಿಗೆ ‘ಶಿವ’ ಎಂದರೆ ಮಣ್ಣು/ಮರ/ಕಲ್ಲು/ಲೋಹದಿಂದ ಮಾಡಿದ ವಿಗ್ರಹರೂಪಿ ಲಿಂಗವಲ್ಲ. ವ್ಯಕ್ತಿಯು ಒಳ್ಳೆಯ ನಡೆನುಡಿಗಳಿಂದ ಬಾಳುವುದರ ಮೂಲಕ ಶಿವನನ್ನು ಒಲಿಸಿಕೊಳ್ಳಬೇಕೆಂಬ/ಪೂಜಿಸಬೇಕೆಂಬ ನಿಲುವನ್ನು ಹೊಂದಿದ್ದರು. ಸೊಕ್ಕಿನ ನಡೆನುಡಿ/ಕೋಪ/ಕ್ರೂರತನ/ಕೆಟ್ಟ ನುಡಿ/ಕಪಟತನವನ್ನು ಬಿಡದಿದ್ದರೆ, ಅಂತಹ ವ್ಯಕ್ತಿಯು ಶಿವನನ್ನು ಪೂಜಿಸಲು/ಒಲಿಸಿಕೊಳ್ಳಲು ಯೋಗ್ಯನಲ್ಲವೆಂಬುದನ್ನು ಈ ನುಡಿಗಳು ಸೂಚಿಸುತ್ತಿವೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: