ಡಿ-ರಸ್ಸಿಪಿಕೇಶನ್: ಬೆಲಾರಸ್ ನಾಡಿನ ದಿಟ್ಟ ನಡೆ

– ಅನ್ನದಾನೇಶ ಶಿ. ಸಂಕದಾಳ.

michael zhur

ಬೆಲಾರಸ್ ನಾಡು, ತನ್ನ ಎಲ್ಲಾ ಕಲಿಕೆಮನೆಗಳನ್ನು (schools) ರಶ್ಶಿಸಿಕೆಯಿಂದ (russification) ಬಿಡುಗಡೆಗೊಳಿಸಲು ಮುಂದಾಗಿದೆ ಎನ್ನುವ ಸುದ್ದಿಯೊಂದು ಬಂದಿದೆ. ಬೆಲಾರಸ್ ನಾಡು ಇಪ್ಪತ್ತನೆ ಶತಮಾನದವರೆಗೂ ತನ್ನದೇ ಆದ ಇರುವನ್ನು ಹೊಂದಿರದೇ, ತನ್ನ ಸುತ್ತಮುತ್ತಲಿನ ನಾಡುಗಳ ನಡುವೆ ಹಂಚಿಹೋಗಿತ್ತು. ರಶ್ಯನ್ ಸಾಮ್ರಾಜ್ಯದ ಆಳ್ವಿಕೆಗೂ ಒಳಪಟ್ಟಿದ್ದ ಈ ನಾಡು, ಆ ಸಾಮ್ರಾಜ್ಯವು ಬೀಳುತ್ತಿದ್ದಂತೆಯೇ ‘ಬೆಲಾರಸ್ ರಿಪಬ್ಲಿಕ್’ ಎಂದು ತನ್ನನ್ನು ಗುರುತಿಸಿಕೊಂಡಿತ್ತು. ಸೋವಿಯತ್ ಒಕ್ಕೂಟ ಹುಟ್ಟಿಗೆ ಕಾರಣವಾದ ನಾಲ್ಕು ರಿಪಬ್ಲಿಕ್ ನಾಡುಗಳಲ್ಲಿ ‘ಬೆಲಾರಸ್ ರಿಪಬ್ಲಿಕ್’ ಕೂಡ ಒಂದು. ಸೋವಿಯತ್ ಒಕ್ಕೂಟ ಮುರಿದು ಬಿದ್ದ ನಂತರ 1991 ರ ಆಗಸ್ಟ್ 25 ರಂದು ಬೇರೆಯವರ ಆಳ್ವಿಕೆಗೆ ಒಳಪಡದ ತಮ್ಮಾಳ್ವಿಕೆಯನ್ನು ಹೊಂದಿತು. ರಶ್ಯನ್ ಮತ್ತು ಬೆಲಾರಸಿಯನ್ ನುಡಿಗಳು ಈ ನಾಡಿನ ಅದಿಕ್ರುತ ನುಡಿಗಳೆಂದು ಹೇಳಲಾಗುತ್ತದೆ.

ರಶ್ಯನ್ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಎಲ್ಲದನ್ನು ರಶ್ಯನ್-ಮಯವಾಗಿ ಮಾಡುವ ಹಮ್ಮುಗೆಯನ್ನು ರಶ್ಶಿಸಿಕೆ ಎಂದು ಕರೆಯಲಾಗುತ್ತಿತ್ತು. ರಶ್ಯನ್ ಸಾಮ್ರಾಜ್ಯ ಬಿದ್ದು ಸೋವಿಯತ್ ಒಕ್ಕೂಟವಾದ ಮೇಲೆ ರಶ್ಶಿಸಿಕೆಯ ಮುಂದುವರೆದ ಬಾಗದಂತೆ ರಶ್ಯನೈಜೇಶನ್ ಇತ್ತು. ರಶ್ಶಿಸಿಕೆ-ರಶ್ಯನೈಜೇಶನ್ – ಎರಡನ್ನೂ ಕಂಡಿದ್ದ ಮತ್ತು ಅದರ ಪಾಡನ್ನು ಪಟ್ಟಿದ್ದ ಬೆಲಾರಸ್, ಅದರಿಂದ ಹೊರಬರುವ ತೀರ‍್ಮಾನ ಕೈಗೊಂಡಿರುವುದು ಅಲ್ಲಿರುವ ರಶ್ಯನ್ನರ ಹುಬ್ಬೇರಿಸಿದೆ. ರಶ್ಶಿಸಿಕೆಯಿಂದ ಹೊರಬರುವ ಹಮ್ಮುಗೆ ಅತವಾ ಬಗೆಯನ್ನು ಡಿ-ರಸ್ಸಿಪಿಕೇಶನ್ ಎಂದು ಹೇಳಲಾಗುತ್ತದೆ. ಬೆಲಾರಸ್, ರಾಜಕೀಯವಾಗಿ ರಶ್ಯಾದಿಂದ ದೂರವಿರಲು ಡಿ-ರಸ್ಸಿಪಿಕೇಶನನ್ನು ಆಯ್ದುಕೊಂಡಿದೆ ಎಂದು ಬಗೆಯಲಾಗಿದೆ.

ಬೆಲಾರಸ್ ನಲ್ಲಿ ರಶ್ಯನ್ ನುಡಿಯಾಡುಗರು ಹೆಚ್ಚಿನ ಎಣಿಕೆಯಲ್ಲಿದ್ದರೂ ಸುಮಾರು 41% ಮಂದಿ ಬೆಲಾರಸಿಯನ್ ನುಡಿಯಾಡುವವರಿದ್ದಾರೆ ಎಂದು ಹೇಳಲಾಗುತ್ತದೆ. ಆದರಿಂದ ಡಿ-ರಸ್ಸಿಪಿಕೇಶನನ್ನು ಒಂದೇ ಹಂತದಲ್ಲಿ ಮಾಡದೇ ಹಂತ ಹಂತವಾಗಿ ಮಾಡಲಾಗುವುದು ಎಂದು ಆ ನಾಡಿನ ಕಲಿಕೆ ಮಂತ್ರಿಯಾಗಿರುವ ಮಿಕಾಯಿಲ್ ಜುರಾವ್ಕೋವ್ ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ, ಕಲಿಕೆಮನೆಗಳಲ್ಲಿ ಮುಕ್ಯವಾಗಿ ಕಲಿಸುವ ಎರಡು ವಿಶಯಗಳಾದ ಹಿನ್ನಡವಳಿ (history) ಮತ್ತು ನೆಲದರಿಮೆ (geography) ಯನ್ನು, ಬೆಲಾರಸಿಯನ್ ನುಡಿಯೊಂದರಲ್ಲೇ ಕಲಿಸುವಂತ ತೀರ‍್ಮಾನವನ್ನು ಕೈಗೊಳ್ಳಲಾಗಿದೆ. ಕಲಿಕೆಯ ಸುತ್ತ ಹಾಕಿಕೊಂಡಿರುವ ಈ ಹಮ್ಮುಗೆಯ ಮೂಲಕ, ತನ್ನ ನಾಡಿನ ಮಕ್ಕಳಲ್ಲಿ ತಾಯ್ನುಡಿಯ ಬಗ್ಗೆ ಪ್ರೀತಿ-ಆಸಕ್ತಿಯನ್ನು ಮೂಡಿಸಬಹುದಾಗಿದೆ ಎಂದು ಅವರು ಹೇಳುತ್ತಾರೆ. ಅಲ್ಲದೇ, ಈ ಹಮ್ಮುಗೆಯನ್ನು ಹೀಗೆ ಮುಂದುವರೆಸಿ, ಎಲ್ಲವನ್ನು ತಾಯ್ನುಡಿಯಲ್ಲೇ ಕಲಿಯುವಂತ-ಕಲಿಸುವಂತ ಏರ‍್ಪಾಡನ್ನು ಬೆಲಾರಸ್ ನಲ್ಲಿ ತರುವ ಇರಾದೆಯೂ ಕೂಡ ಅವರದಾಗಿದೆ.

ಒಟ್ಟಿನಲ್ಲಿ ಬೆಲಾರಸ್ ನ ಈ ನಡೆ, ಒಂದು ಕಡೆ ತಮ್ಮ ಗುರುತನ್ನು ಕಾಯ್ದುಕೊಳ್ಳುವ ಬಗೆಯಾಗಿ ಕಂಡರೆ, ಮತ್ತೊಂದು ಕಡೆ ತಾಯ್ನುಡಿಯಲ್ಲಿನ ಕಲಿಕೆ ಬಗ್ಗೆ ಅವರಿಗೆ ‘ತಪ್ಪುನಂಬಿಕೆ’ ಇಲ್ಲ ಎಂಬುದನ್ನೂ ತೋರಿಸಿಕೊಡುತ್ತದೆ. ಆ ನಿಟ್ಟಿನಲ್ಲಿ ಈ ನಾಡಿನ ಮುಂದಿನ ಹೆಜ್ಜೆಗಳನ್ನು ಎಲ್ಲರೂ ಕುತೂಹಲದಿಂದ ನೋಡುವುದಂತೂ ನಿಜ!

(ಮಾಹಿತಿ ಸೆಲೆ :kyivpost.com, BelarusLanguages-of-Belarus, De-Russificationfacebook.com)

( ಚಿತ್ರ ಸೆಲೆ : bsu.by )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: