ಹಂದಿ ಜ್ವರ

ಯಶವನ್ತ ಬಾಣಸವಾಡಿ.

Symptoms-swine-flu_1
ಹಂದಿಗಳಲ್ಲಿ ಉಸಿರಾಟದ  ಸೋಂಕಿಗೆ ಕಾರಣವಾದ ಇನ್ ಪ್ಲುಯನ್ಜ ನಂಜುಳಗಳು (influenza virus) ಮನುಶ್ಯರಲ್ಲಿ ‘ಹಂದಿ ಜ್ವರ’ವನ್ನು (Swine flu) ಉಂಟುಮಾಡುತ್ತವೆ.  ಸಾಮಾನ್ಯವಾಗಿ ಇವು ಮನುಶ್ಯರನ್ನು ಕಾಡುವುದಿಲ್ಲ. ಆದರೆ, ಮಾರ‍್ಪಾಟುಗೊಂಡ  (mutation) ನಂಜುಳಗಳು ಮನುಶ್ಯರನ್ನು ಬಾದಿಸುವ ಕಸುವನ್ನು ಹೊಂದಿರುತ್ತವೆ. ಈ ನಂಜುಳ ಹಲವು ಬಗೆಗಳಲ್ಲಿ ಮಾರ‍್ಪಾಟುಗೊಂಡಿದ್ದು, H1N1  ಹಾಗು H3N2v  ಇತ್ತೀಚೆಗೆ ಹುಟ್ಟಿಕೊಂಡ ತಳಿಗಳು.

H1N1 ತಳಿ 2009ರಲ್ಲಿ ಹಾಗು H3N2v ತಳಿ 2011ರಲ್ಲಿ ಮನುಶ್ಯರನ್ನು ಕಾಡಿದ್ದವು. 2009ರಲ್ಲಿ H1N1 ನಂಜುಳಗಳು ಎಲ್ಲೆಯಿಲ್ಲದರಡುವಿಕೆಯ (pandemic) ಮೂಲಕ ಇಡೀ ಜಗತ್ತನ್ನೇ ಕಾಡಿದ್ದರಿಂದ, ಆಗಸ್ಟ್ 2010ರಲ್ಲಿ ಈ ಬೇನೆಯನ್ನು ಇಡೀ ನೆಲದ ಹದುಳ ಕೂಟವು (World Health Organization) ಜಗತ್ತಿನ ಎಲ್ಲೇಮೀರಿದ ಬೇನೆಗಳ (pandemic disease) ಪಟ್ಟಿಗೆ ಸೇರಿಸಿತ್ತು. ಡಿಸೆಂಬರ್ 2014ರಿಂದ ಬಾರತದಲ್ಲಿ H1N1ನ ಹಂದಿ ಜ್ವರ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ  ಕಾಣಿಸಿಕೊಂಡು ಎಲ್ಲರಲ್ಲೂ ನಡುಕವನ್ನು ಹುಟ್ಟಿಸಿದೆ.

ಬೇನೆ ತಗಲುವ ಬಗೆ

ಇದೊಂದು ಅಂಟು ಬೇನೆ (contagious disease). ಚಳಿಗಾಲದಲ್ಲಿ ಬಂದು ಹೋಗುವ  ಎಂದಿನ-ನೆಗಡಿಯನ್ನು (common flu/ cold) ಉಂಟುಮಾಡುವ ನಂಜುಳಗಳಂತೆ ಇವೂ ಕೂಡ ಹಬ್ಬುತ್ತದೆ. ಈ ಬೇನೆಯಿಂದ ನರಳುತ್ತಿರುವವರು ಕೆಮ್ಮಿದಾಗ ಇಲ್ಲವೇ ಸೀನಿದಾಗ, ನಂಜುಳಗಳನ್ನು ಹೊಂದಿರುವ ಸಣ್ಣ ಹನಿಗಳು ಗಾಳಿಯನ್ನು ಸೇರುತ್ತವೆ. ಬೇನೆ ಬಿದ್ದ ಮನುಶ್ಯನ ಸುತ್ತ-ಮುತ್ತ ಬದುಕುವ ಮಂದಿ, ಗಾಳಿಯಲ್ಲಿ ಇರುವ ಸೋಂಕು ತುಂಬಿದ  ಈ  ಹನಿಗಳನ್ನು ಉಸಿರಿನೊಡನೆ ಎಳೆದುಕೊಂಡಾಗ  ಇಲ್ಲವೆ ನುಂಗಿದಾಗ ಈ ಬೇನೆಗೆ ತೆರೆದುಕೊಳ್ಳುತ್ತಾರೆ. ಸೋಂಕು ತಗುಲಿದ ಮನುಶ್ಯನನ್ನು ಮುಟ್ಟಿದಾಗ, ಇಲ್ಲವೇ ಅವನು ಮುಟ್ಟಿದ ಅಡಕಗಳನ್ನು (materials) ಹದುಳದ (healthy) ಮಂದಿ ಮುಟ್ಟಿದರೂ ಈ ಬೇನೆ ಅಂಟಿಕೊಳ್ಳುತ್ತದೆ. ಹಂದಿ ಜ್ವರ ಎನ್ನುವ ಹೆಸರಿದ್ದರೂ, ಬೇಯಿಸಿದ ಹಂದಿಯ ತಿನಿಸುಗಳನ್ನು ತಿನ್ನುವುದರಿಂದ ಈ ಬೇನೆ ಬರುವುದಿಲ್ಲ.

ಕಾಡುವ ಬಗೆ (signs & symptoms)

ಹಂದಿ ಜ್ವರದಿಂದ ಬಳಲುತ್ತಿರುವ ಮಂದಿ ಬೇನೆಯ ಕುರುಹುಗಳನ್ನು (symptoms) ತೋರುವ ಮೊದಲೇ ಅವರಿಂದ ಸೋಂಕಿನ ನಂಜುಳಗಳು ಹರಡಲು ತೊಡಗುತ್ತವೆ. ಬೇನೆಯಿಂದ ಬಳಲುವ ಮೊದಲ 7-10 ದಿನಗಳವರೆಗೂ ಬೇನೆ ಬಿದ್ದವರಿಂದ ಸೋಂಕಿನ ನಂಜುಳಗಳು ಹರಡುತ್ತಿರುತ್ತವೆ. ಈ ಬೇನೆಯಲ್ಲಿ ಕಂಡುಬರುವ ಕುರುಹುಗಳೆಂದರೆ ಜ್ವರ, ಗಂಟಲು ನೋವು, ಮಯ್ ಕಂಡಗಳ ನೋವು, ತಲೆ ನೋವು, ಕಟ್ಟಿದ ಮೂಗು, ಚಳಿ ಹಾಗು ದಣಿವು. ಒಮ್ಮೊಮ್ಮೆ ವಾಂತಿ, ಹೊಟ್ಟೆ ನೋವು, ತಲೆ ಸುತ್ತುವಿಕೆ ಕೂಡ ಕಾಣಿಸಿಕೊಳ್ಳಬಹುದು.

ಈ ಬೇನೆಯು ಹದ್ದುಮೀರಿದರೆ ನಿಮೋನಿಯದಂತಹ  (pneumonia) ಹೆಚ್ಚಿನ ಮಟ್ಟದ ತೊಡಕುಗಳನ್ನು ಒಡ್ಡುತ್ತದೆ. ರೋಗಿಯು ಸಕ್ಕರೆ ಬೇನೆ (diabetes) ಇಲ್ಲವೇ ಗೂರಲು (asthma) ಬೇನೆಗಳನ್ನು ಹೊಂದಿದ್ದರೆ, ಅವು ಮತ್ತಶ್ಟು ಗೋಜಲಾಗುತ್ತವೆ (complicate).

ಕುತ್ತುದೊರೆತ (diagnosis) – ಬೇನೆಯನ್ನು ಕಂಡುಹಿಡಿಯುವ ಬಗೆ

ತಗುಲಿರುವ ಬೇನೆ  ಹಂದಿ ಜ್ವರವೋ, ಎಂದಿನ-ನೆಗಡಿಯೋ ಎಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಇವೆರಡರ ಕಾಡುವ ಬಗೆಗಳು ಒಂದೇ ತೆರನಾಗಿರುತ್ತವೆ. ಆದರೆ ಎಂದಿನ-ನೆಗಡಿಯಿಂದ ಬಳಲಿತ್ತಿರುವವರಿಗೆ ಹೋಲಿಸಿದರೆ, ಹಂದಿ ಜ್ವರದಿಂದ ಬಳಲುತ್ತಿರುವವರಿಗೆ ಹೆಚ್ಚು ವಾಕರಿಕೆ ಹಾಗು ವಾಂತಿ ಇರುತ್ತದೆ. ಆದರೆ, ಕಾಡುತ್ತಿರುವ ಬೇನೆಯು ಹಂದಿ ಜ್ವರವೇ ಎಂದು ಗಟ್ಟಿ ಮಾಡಿಕೊಳ್ಳಲು, ಕುತ್ತು ಕಂಡುಹಿಡಿಯುವ ಅರಕೆಮನೆಯ (diagnostic laboratory) ಒರೆತಗಳು (tests) ನೆರವಾಗುತ್ತವೆ.

1)    ಬೇನೆ ಬಿದ್ದವರ ಮೂಗು ಹಾಗು ಗಂಟಲನ್ನು ಒರೆಸಿದ ಹೀರೊತ್ತುಗಳನ್ನು (swab) ಹಂದಿ ಜ್ವರವನ್ನು ಉಂಟುಮಾಡುವ ನಂಜುಳಗಳ ಇರುವಿಕೆಗೆ ಒರೆ ಹಚ್ಚುವುದರಿಂದ, ಬೇನೆಯ ಬಗ್ಗೆ ತಕ್ಕ-ಮಟ್ಟಿಗೆ ತಿಳಿದುಕೊಳ್ಳುವುದು.
2)    ನಂಜುಳಗಳಲ್ಲಿ ಇರುವು ಗೊತ್ತುಮಾಡಿದ (specific) ಪೀಳಿಗಳನ್ನು (genes) PCR (polymerase chain reaction) ಚಳಕದ ನೆರವಿನಿಂದ ಗುರುತಿಸುವುದು.
3)    ಬೇನೆ ಕಡಾಕಂಡಿತವಾಗಿ ಹಂದಿ ಜ್ವರ ಎಂದು ಹೇಳಲು, ನಂಜುಳಗಳ ಮೇಲೆ ಇರುವ ಗೊತ್ತುಮಾಡಿದ ಹೊರಮಯ್ ಒಗ್ಗದಿಕಗಳನ್ನು (surface antigens) ಗುರಿತಿಸಬೇಕಾಗುತ್ತದೆ. ಆದರೆ ಸದ್ಯದ ಮಟ್ಟಿಗೆ ಈ ಒರೆತ ಎಲ್ಲೆಡೆ ದೊರೆಯುತ್ತಿಲ್ಲ.

ಮಾಂಜುಗೆ (treatment)

1)    ಒಸೆಲ್ಟಮಿವಿರ‍್/ಟೆಮಿಪ್ಲು (Oseltamivir/Tamiflu) ಹಾಗು ಜನಮಿವಿರ್ (Zanamivir) ಎನ್ನುವ ಮದ್ದುಗಳನ್ನು ಬಳಸುವ ಇರ‍್ಪುಮಾಂಜುಗೆ (chemotherapy) ಬಳಕೆಯಲ್ಲಿದೆ. ಈ ಮದ್ದುಗಳನ್ನು  ಬೇನೆಯ ಕುರುಹುಗಳು ಕಾಣಿಸಿಕೊಂಡ 48 ಗಂಟೆಗಳೊಳಗೆ ತೆಗೆದುಕೊಂಡರೆ, ಬೇನೆಯ ಬಿರುಸನ್ನು ಇಳಿಯುವುದರ ಜೊತೆಗೆ, ಬೇನೆಯು ಕಾಡುವ ಹೊತ್ತೂ ಕೂಡ ಕಡಿಮೆಯಾಗುತ್ತದೆ. ಡಿಸೆಂಬರ್ 2014ರಲ್ಲಿ ಎಪ್. ಡಿ. ಎ. (FDA), H1N1 ನಂಜುಳವನ್ನು ಕೊಲ್ಲುವ ಕಸುವನ್ನು ಹೊಂದಿರುವ ಪರ‍್ಮಿವಿರ್ (permivir)  ಎಂಬ ಮದ್ದನ್ನು ಬಳಕೆಗೆ ತಂದಿದೆ.
2)    ನೋವು ಹಾಗು ಜ್ವರವನ್ನು ಕಡಿಮೆ ಮಾಡಲು ಎಂದಿನ ನೆಗಡಿಗಳಲ್ಲಿ ಬಳಸುವ ನೆರವಿನ-ಮದ್ದುಗಳನ್ನು (supportive treatment) ಬಳಸಬಹುದಾಗಿದೆ.

ಬೇನೆ ತಡೆಯುವ ಬಗೆ (preventive measures)

1)    ಮುನ್ಮದ್ದಿಕೆ (vaccination):  H1N1 ಅನ್ನು ತಡೆಯಲು 2009 ರಲ್ಲಿ ಮುನ್ಮದ್ದನ್ನು ಮಾಡಲಾಗಿದೆ. ಸಾಮ್ಯವಾಗಿ ಎಂದಿನ-ನೆಗಡಿಯನ್ನು ತಡೆಯಲು ಬಳಸುವ ಮೂರ‍್ಬಗೆ ಮುನ್ಮದ್ದಿನಲ್ಲಿ (trivalent vaccine) H1N1 ಮುನ್ಮದ್ದೂ ಒಳಗೊಂಡಿರುತ್ತದೆ.
2)    ನೊರೆತವನ್ನು (soap)  ಬಳಸಿ ಕಯ್ಗಳನ್ನು ಚನ್ನಾಗಿ ತೊಳೆದುಕೊಳ್ಳುವುದು.
3)    ಬೇನೆ ಬಿದ್ದವರಿಂದ ಆದಶ್ಟು ದೂರ ಇರುವುದು.

ಬಾರತದಲ್ಲಿ ಹಂದಿ ಜ್ವರದ ಸ್ತಿತಿ-ಗತಿ

ಬಾರತದಲ್ಲಿ ಮರುಕಳಿಸಿರುವ ಹಂದಿ ಜ್ವರ ಡಿಸೆಂಬರ್ 2014ರಲ್ಲಿ ಪತ್ತೆಯಾಗಿದೆ. ಅಲ್ಲಿಂದೀಚೆಗೆ ಇದುವರೆಗೆ  ಬಾರತದಲ್ಲಿ H1N1ನ ಹಂದಿ ಜ್ವರದಿಂದ 75 ಮಂದಿ ಸತ್ತಿದ್ದಾರೆ. 2012 ಹಾಗು 2013ರಲ್ಲಿ ಕಾಣಿಸಿಕೊಂಡಿದ್ದ ಹಂದಿ ಜ್ವರ ತಲಾ 405 ಹಾಗು 692 ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಬಾರತದಲ್ಲಿ ಮಂದಿ-ದಟ್ಟಣೆ (population density) ಹೆಚ್ಚಿರುವುದರಿಂದ ಈ ಸೋಂಕು ತುಸು ಬೇಗ ಹರಡುತ್ತದೆ. ಡಿಸೆಂಬರ್ 2014ರಿಂದ ಇದುವರೆಗೆ ಕರ‍್ನಾಟಕದಲ್ಲಿ 95 ಮಂದಿಯಲ್ಲಿ ಹಂದಿ ಜ್ವರವನ್ನು ಪತ್ತೆಹಚ್ಚಲಾಗಿದೆ. ಇವರಲ್ಲಿ ಆರು ಮಂದಿ ಈ ಬೇನೆಗೆ ಬಲಿಯಾಗಿರುವುದಾಗಿ ವರದಿಯಾಗಿದೆ.

(ಮಾಹಿತಿಯ ಸೆಲೆ: medicinenet.com, manoramaonline.com)
(ಚಿತ್ರ ಸೆಲೆ: h1n1.net)Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s