ಈ ದಿನ – ಪೈ ದಿನ

– ವಿಜಯಮಹಾಂತೇಶ ಮುಜಗೊಂಡ.

ಇಂದು ಮಾರ್‍ಚ್ 14, ಇವತ್ತಿನ ದಿನವನ್ನು ಪೈ ದಿನ (Pi Day) ಎಂದು ಆಚರಿಸಲಾಗುತ್ತದೆ. ಮಾರ್‍ಚ್ 14 (3/14) ಈ ಅಂಕಿಯು ಗಣಿತದ ಸ್ತಿರ ಸಂಕ್ಯೆ ಪೈನ((π) ಮೊದಲ ಮೂರು ಅಂಕಿ 3.14 ಆಗಿರುವುದರಿಂದ ಈ ದಿನವನ್ನು ಪೈ ದಿನ ಎಂದು ಗುರುತಿಸಲಾಗುತ್ತದೆ. ಈ ದಿನದ ಇನ್ನೊಂದು ವಿಶೇಶವೆಂದರೆ ಇದು ಹೆಸರಾಂತ ಅರಿಗ ಆಲ್ಬರ್‍ಟ್ ಐನ್‌ಸ್ಟೀನ್ ಅವರ ಹುಟ್ಟಿದ ದಿನವೂ ಆಗಿದೆ. ಈ ಕುರಿತ ಕೆಲ ವಿಶೇಶ ಸಂಗತಿಗಳನ್ನು ನೋಡೋಣ ಬನ್ನಿ.

ದುಂಡುಕದ(circle) ಸುತ್ತಳತೆಯನ್ನು ಅದರ ಅಡ್ಡಳತೆಯಿಂದ(diameter) ಬಾಗಿಸಿದರೆ ಸಿಗುವ ಸಂಕ್ಯೆಯೇ ಪೈ(π). ಇದೊಂದು ಸ್ತಿರ ಸಂಕ್ಯೆಯಾಗಿದ್ದು, 3.14 ಇಲ್ಲವೇ, 22/7 ಎಂದು ಅಂದಾಜಿಸಲಾಗುತ್ತದೆ. ಆದರೆ ಇದರ ಬೆಲೆ 3.14ಕ್ಕೆ ಮುಗಿಯುವುದಿಲ್ಲ. 3.141592… ಹೀಗೆ ಮುಂದುವರೆಯುತ್ತದೆ.

ಪೈ ದಿನವನ್ನು1988ರಲ್ಲಿ ಅಮೆರಿಕಾದ ಅರಿಮೆಗಾರ ಲ್ಯಾರಿ ಶಾ ಮೊದಲ ಬಾರಿಗೆ ಆಚರಿಸಿದರು. ನಂತರದ ವರುಶಗಳಲ್ಲಿ ಈ ಆಚರಣೆಯು ಹೆಚ್ಚು ಹೆಸರುವಾಸಿಯಾಗಿ, 2009 ರಲ್ಲಿ ಅಮರಿಕಾದ ಕಾಂಗ್ರೆಸ್ ಇದನ್ನು ಸಾಂಪ್ರದಾಯಿಕವಾಗಿ ಆಚರಿಸುವ ನಿರ‍್ಣಯವನ್ನು ಅಂಗೀಕರಿಸಿತು. 2010ರಲ್ಲಿ ಮೂಡಿಬಂದ ಗೂಗಲ್ ಡೂಡಲ್‌ನಿಂದಾಗಿ ಪೈ ದಿನ ಇನ್ನಶ್ಟು ಚಿರಪರಿಚಿತವಾಯಿತು. ಜಗತ್ತಿನ ಹಲವು ಕಡೆ ಇಂದು ಬಗೆಬಗೆಯ ಪೈ (ಕೇಕ್) ಬೇಕ್ ಮಾಡಿ ಸವಿಯುವ ಮೂಲಕ ಪೈ ದಿನವನ್ನು ಆಚರಿಸಲಾಗುತ್ತದೆ.

ಪೈ ಒಂದು ಬಗೆಯ ವಿಚಿತ್ರ ಸಂಕ್ಯೆ

ಇದನ್ನು ಬಿನ್ನರಾಶಿಯಾಗಿ ವ್ಯಕ್ತಪಡಿಸಲು ಸಾದ್ಯವಿಲ್ಲ, ಮತ್ತು ಇದು ಕೊನೆಯಲ್ಲಿ ಮರುಕಳಿಸುವ ಮಾದರಿಯನ್ನು ಹೊಂದಿಲ್ಲ (ಉದಾಹರಣೆಗೆ, 1/3=0.33333…, ಇಲ್ಲಿ 3 ಮತ್ತೆ ಮರುಕಳಿಸುತ್ತದೆ) ಇಲ್ಲವೇ ನಿರ‍್ದಿಶ್ಟ ಅಂಕಿಯೊಂದಿಗೆ ಕೊನೆಗೊಳ್ಳುವುದೂ ಇಲ್ಲ (ಉದಾ, 3/4=0.75). ಪೈ ಒಂದು ಕೊನೆಯಿಲ್ಲದ ಸಂಕ್ಯೆ, ಈ ಸಂಕ್ಯೆ 3.14 ರಿಂದ ಶುರುವಾಗಿ 3.14159265359… ಹೀಗೆ ಕೊನೆಯಿಲ್ಲದಂತೆ ಮುಂದುವರೆಯುತ್ತದೆ.

ಪೈ ಅದೆಶ್ಟು ದೊಡ್ಡದು?

ಸೂಪರ್ ಕಂಪ್ಯೂಟರುಗಳನ್ನು ಬಳಸಿ ಪೈ ಎಶ್ಟು ದೊಡ್ಡದು ಎಂದು ಗುರುತಿಸುವ ಹಲವು ಪ್ರಯತ್ನಗಳು ನಡೆದಿವೆ, 2.7 ಟ್ರಿಲಿಯನ್ ಅಂಕಿಗಳನ್ನು ದಾಟಿದರೂ ಇದು ಕೊನೆಯಾಗಿಲ್ಲ. ರಾಜ್‌ವೀರ್ ಮೀನಾ ಅವರು ಗಿನ್ನೆಸ್ ಬುಕ್ ಆಪ್ ವರ‍್ಲ್ಡ್ ರೆಕಾರ‍್ಡ್ಸ್ ಪ್ರಕಾರ ಪೈ ಚಾಂಪಿಯನ್ ಆಗಿದ್ದಾರೆ. ಮಾರ‍್ಚ್ 21, 2015 ರಂದು ತಮಿಳುನಾಡಿನ ವೆಲ್ಲೂರಿನಲ್ಲಿರುವ VIT ವಿಶ್ವವಿದ್ಯಾಲಯದಲ್ಲಿ ಅವರು 70,000 ಅಂಕಿಗಳನ್ನು ತಲುಪುವವರೆಗೆ ಪೈ ಅನ್ನು ಹೇಳಿದ್ದಾರೆ.

ಪೈ ಅದೆಶ್ಟು ಹಳೆಯದು?

ಪುರಾತನ ಕಾಲದಿಂದಲೂ ಪೈ ಬಳಕೆಯಲ್ಲಿರುವುದು ತಿಳಿದುಬಂದಿದೆ, ಇದರ ಮೊದಲ ದಾಕಲೆ ಪ್ರಾಚೀನ ಈಜಿಪ್ಯನ್ನರು ಸುಮಾರು ಕ್ರಿ. ಪೂ. 1650 ರಲ್ಲಿ ಮಾಡಿದರು. ಪೈ ಬೆಲೆ ಸುಮಾರು 3.16 ಎಂದು ಅವರು ಅಂದಾಜಿಸಿದ್ದಾರೆ. ಪುರಾತನ ಬ್ಯಾಬಿಲೋನಿಯನ್ನರು ಮತ್ತು ಗ್ರೀಕರು ಇದೇ ಅಂದಾಜು ಹೊಂದಿದ್ದರು. ಕ್ರಿ. ಪೂ. 250 ರ ಸುಮಾರಿಗೆ ಗೆರೆಯರಿಮೆ(geometry) ಬಳಸಿಕೊಂಡು ಪೈ ಅನ್ನು ನಿಕ್ಕಿಯಾಗಿ ಲೆಕ್ಕಾಚಾರ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಗ್ರೀಕ್ ಗಣಿತದರಿಗ ಆರ‍್ಕಿಮಿಡೀಸ್ ಸಲ್ಲುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: indiatimes.com, dreambox.com, mathnasium.com, tryengineering.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks