ರಾಶ್ಟ್ರೀಯತೆ ಲೌಕಿಕತೆಯೇ
– ಕಿರಣ್ ಬಾಟ್ನಿ.
ಮನುಶ್ಯರ ನಡುವಿನ ವ್ಯತ್ಯಾಸಗಳನ್ನು ಕಂಡೂ ಕೂಡ ರುಶಿಮುನಿಗಳು ಎಲ್ಲರೂ ಹೇಗೆ ಒಂದೆಂಬುದನ್ನು ಕಂಡು ಸಾರಿದ್ದಾರೆ. ಆದರೆ ಅವರು ಕಂಡು ಸಾರಿದ ಒಂತನ ಆದ್ಯಾತ್ಮಿಕವೇ ಹೊರತು ಲೌಕಿಕವಲ್ಲ. ರಾಶ್ಟ್ರೀಯತೆಯ ಮತ್ತೇರಿಸಿಕೊಂಡಿರುವ ಈ ಜಗತ್ತಿನಲ್ಲಿ ಈ ಒಳಗುಟ್ಟನ್ನು ಮರೆತು ಮುಂದೆ ಸಾಗಿದರೆ ಬೇರ್ಮೆಗೆ ಸಿಗಬೇಕಾದ ಬೆಲೆ ಸಿಗದಂತಾಗಿ ಆಗಬಾರದ್ದು ಆಗುತ್ತದೆ.
ಇಡೀ ಜಗತ್ತೇ ನಮ್ಮ ಕುಟುಂಬವೆಂಬ ಅನಿಸಿಕೆಯೊಂದು ನಮ್ಮ ನಡೆನುಡಿಯಲ್ಲಿ ಹಾಸುಹೊಕ್ಕಿದೆ. ಅದನ್ನು ಸಂಸ್ಕ್ರುತದಲ್ಲಿ “ವಸುಧೈವ ಕುಟುಂಬಕಂ” ಎಂದು ಶ್ಲೋಕವೊಂದರಲ್ಲಿ ಹೇಳಲಾಗಿದೆ (ಇದು ರಾಮಾಯಣದ್ದೋ ಅಲ್ಲವೋ ಎಂಬುದರ ಬಗ್ಗೆ ತಿಳಿವಿಗರಲ್ಲಿ ಇರ್ಬಗೆಯಿದೆ). ನಾವಿದನ್ನು ಲೌಕಿಕ ಹುರುಳಿನಲ್ಲೂ ಒಪ್ಪುವುದಾದರೆ ಜಗತ್ತಿನಲ್ಲಿ ಬಾರತವನ್ನು ಸೇರಿದಂತೆ ಯಾವ ರಾಶ್ಟ್ರದ ಬಗ್ಗೆಯೂ ನಾವು ಮಾತನಾಡುವಂತಿಲ್ಲ; ಅವುಗಳು ಇರಲೇ ಆರವು. ಆದರೆ ರಾಶ್ಟ್ರೀಯತೆ ಮತ್ತು ಈ ಒಕ್ಕುಟುಂಬತನ ಎರಡನ್ನೂ ಎತ್ತಿಹಿಡಿಯುವವರಿಗೆ ನಮ್ಮಲ್ಲಿ ಕಡಿಮೆಯೇನಿಲ್ಲ.
ರಾಶ್ಟ್ರೀಯತೆಯೆಂಬುದು ಹುಟ್ಟಿದ್ದು ಯೂರೋಪಿನಲ್ಲಿ. ಅಲ್ಲಿ ಹೇಳಿಕೊಳ್ಳುವಂತಹ ಯಾವ ಅದ್ಯಾತ್ಮಿಕ ಚಿಂತನೆಯೂ ಇಲ್ಲದ ಕಾಲವದು; ನಮ್ಮಲ್ಲಿದ್ದಂತೆ, ಇರುವಂತೆ, ಮನುಶ್ಯರೆಲ್ಲರೂ ಒಂದೇ ಎಂಬ ಚಿಂತನೆ ಅಲ್ಲಿ ಅಶ್ಟಾಗಿ ಬೇರೂರಿರಲಿಲ್ಲ (ಈಗಲೂ ಇಲ್ಲವೆಂದರೆ ತಪ್ಪಾಗದು). ಆಗ ಬೇರೆಬೇರೆ ಮಂದಿಗುಂಪುಗಳು ಲೌಕಿಕ ಕೊಡುಕೊಳ್ಳುವಿಕೆಯಲ್ಲಿ ತೊಡಗಿದಾಗ ಪೈಪೋಟಿಗಳು ಏರ್ಪಟ್ಟು ಕಡೆಗೆ ದೊಡ್ಡ ಜಗಳ-ಕಾಳಗಗಳಾಗಿ ಮಾರ್ಪಡುತ್ತಿದ್ದವು. ಇಂತಲ್ಲಿ ಒಬ್ಬರಿಂದ ಇನ್ನೊಬ್ಬರನ್ನು ಒಂದು ರೀತಿಯಲ್ಲಿ ’ಕಾಪಾಡಲು’ ಮತ್ತು ಕೊಡುಕೊಳ್ಳುವಿಕೆಗಳ ಮೇಲೆ ಒಂದು ಕಣ್ಣಿಡಲು ಹುಟ್ಟಿಕೊಂಡ ಏರ್ಪಾಡನ್ನೇ ನಾವಿಂದು ರಾಶ್ಟ್ರೀಯತೆಯೆನ್ನುವುದು.
ಮುಂದೆ, ಜಗತ್ತಿನ ಸಂಪತ್ತನ್ನೆಲ್ಲ ತನ್ನದಾಗಿಸಿಕೊಳ್ಳುವ ದುರಾಸೆಯಿಂದ ಎಲ್ಲೆಲ್ಲೂ ಹರಡಿದ ಯೂರೋಪಿಗರ ಈ ಲೌಕಿಕ ನಡೆನುಡಿ ಅವರನ್ನು ಹಿಂಬಾಲಿಸಿ ತಾನೂ ಹರಡಿತು. ಅದು ಮುಟ್ಟಿದಲ್ಲೆಲ್ಲ ಅಡಿಮೆ ಮತ್ತು ಅಡಿನಾಡುತನಗಳು ತಲೆದೋರಿದವು. ಕಡೆಗೆ ಆ ಅಡಿಮೆಯಿಂದ ಬಿಡಿಸಿಕೊಳ್ಳಲು ಹೋರಾಟಕ್ಕಿಳಿದ ಅಡಿನಾಡಿಗರು ಯೂರೋಪಿಗರ ಬಗೆತವಾಗಿದ್ದ ರಾಶ್ಟ್ರೀಯತೆಯನ್ನು ತಮ್ಮದಾಗಿಸಿಳ್ಳಬೇಕಾಯಿತು; ಬೇರೆ ದಾರಿಯಿರಲಿಲ್ಲ. ಬಾರತವು ಎಂದೆಂದಿನಿಂದಲೂ ಒಂದು ರಾಶ್ಟ್ರವಾಗಿತ್ತು ಎಂದು ಇಂದು ಕೆಲವರು ಏನೇನೆಲ್ಲ ಕತೆ ಹೇಳಿದರೂ ದಿಟ ಇದೇನೇ. ಜಗತ್ತನ್ನೇ ನಮ್ಮ ಕುಟುಂಬವೆನ್ನುತ್ತಿದ್ದವರು ಬ್ರಿಟಿಶರು ನಮ್ಮ ಕುಟುಂಬದವರಲ್ಲ ಎಂಬ ಕಾರಣದಿಂದಲೇ ಬಿಡುಗಡೆಯ ಮಾತೆತ್ತಿದ್ದು.
ಹೀಗೆ ರಾಶ್ಟ್ರೀಯತೆಯ ಮತ್ತೇರಿಸಿಕೊಂಡಶ್ಟಕ್ಕೆ ಬಾರತವು ತನ್ನ ಒಕ್ಕುಟುಂಬತನದ ನಡೆನುಡಿಯನ್ನೇನು ಕೈಬಿಡಲಿಲ್ಲ; ಹಾಗೆ ಬಿಡಲು ಆಗುವುದೂ ಇಲ್ಲ. ಆದರೆ ಇವೆರಡನ್ನೂ ಒಂದಕ್ಕೊಂದು ಎದುರಾಗದಂತೆ, ಒಂದನ್ನೊಂದು ಅಲ್ಲಗಳೆಯದಂತೆ, ಸರಿಯಾಗಿ ನಡೆಸಿಕೊಂಡು ಹೋಗಬೇಕು ಎಂಬುದನ್ನು ಮಾತ್ರ ನಾವು ಬಾರತದವರು ಇಲ್ಲಿಯವರೆಗೆ ಕಲಿತಿಲ್ಲ. ಹೀಗಾಗಿ ರಾಶ್ಟ್ರೀಯತೆಯೆಂಬುದು ನೂರಕ್ಕೆ ನೂರು ಲೌಕಿಕ ಬಗೆತವೆಂಬ ದಿಟವು ನಮ್ಮಲ್ಲಿ ಇನ್ನೂ ಬೇರೂರಿಲ್ಲ. ಎಲ್ಲದಕ್ಕೂ ಒಂದು ಆದ್ಯಾತ್ಮಿಕ ತಿರುವನ್ನು ಕೊಡುವುದರಲ್ಲಿ ನುರಿತಿರುವ ನಮ್ಮ ಚಿಂತಕರು ರಾಶ್ಟ್ರೀಯತೆಗೂ ಆದ್ಯಾತ್ಮಿಕತೆಯನ್ನು ಹಚ್ಚುವುದನ್ನು ಕಾಣಬಹುದು. ಬಾರತ ಎಂದೆಂದಿಗೂ ಒಂದು ರಾಶ್ಟ್ರವಾಗಿತ್ತೆನ್ನುವವರು ಇಂದಿಗೂ ಆದಿ ಶಂಕರಾಚಾರ್ಯರ ಹೆಸರನ್ನು ತೆಗೆದುಕೊಳ್ಳುವುದು ಇದಕ್ಕೊಂದು ಎತ್ತುಗೆಯಶ್ಟೆ. ಆದರೆ ರಾಶ್ಟ್ರೀಯತೆಯಿಂದ ಲೌಕಿಕತೆಯನ್ನು – ಎಂದರೆ ಕಳಿಕೆ-ಗಳಿಕೆಗಳನ್ನೊಳಗೊಂಡ ಒಣ ಕೊಡುಕೊಳ್ಳುವಿಕೆಯನ್ನು – ಅರೆಗಳಿಗೆ ತೆಗೆದುಹಾಕಿದರೂ ಅದರಿಂದ ಎಲ್ಲವನ್ನೂ ತೆಗೆದುಹಾಕಿದಂತಾಗುತ್ತದೆ. ಆದ್ಯಾತ್ಮಿಕತೆಯನ್ನು ಸೇರಿಸಲು ಹೊರಟರಂತೂ ದೊಡ್ಡ ಗಂಡಾಂತರವೇ ಬಂದೊದಗುತ್ತದೆ.
ಹೀಗೇಕೆಂದರೆ, ಬೇರೆ ಬೇರೆ ಮಂದಿಗುಂಪುಗಳನ್ನು ತಮ್ಮತಮ್ಮಿಂದಲೇ ಕಾಪಾಡುವ ಏರ್ಪಾಡೊಂದರ ಬಗ್ಗೆ ಮಾತನಾಡಲು ಹೊರಡುವವರು ಮೊಟ್ಟಮೊದಲಿಗೆ ಲೌಕಿಕ ಜಗತ್ತಿಗಿಳಿದು ಆ ಬೇರೆ ಬೇರೆ ಮಂದಿಗುಂಪುಗಳು ಇವೆಯೆಂದು ಕಾಣಬೇಕಶ್ಟೆ? ಅವುಗಳನ್ನು ಬೇರೆ ಬೇರೆ ರಾಶ್ಟ್ರಗಳೆಂದು ಒಪ್ಪಿಕೊಳ್ಳಬೇಕಶ್ಟೆ? ಇದನ್ನೇ ಮಾಡದೆ ಆದ್ಯಾತ್ಮಿಕತೆಯನ್ನು ಇಲ್ಲಿಗೂ ಮೆತ್ತಲು ಹೊರಟರೆ ಆ ರಾಶ್ಟ್ರಗಳೂ ಇಲ್ಲವಾಗುತ್ತವೆ, ಮಂದಿಗುಂಪುಗಳೂ ಇಲ್ಲವಾಗುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಒಂದು ಗುಂಪನ್ನು ಇನ್ನೊಂದರಿಂದ ಕಾಪಾಡಬೇಕೆಂಬ ಇಂಗಿತವೂ ಈಡೇರದೆ ಹೋಗುತ್ತದೆ.
ಬಾರತದ ಸಂವಿದಾನವು ನುಡಿಬೇರ್ಮೆಯನ್ನು ಕಡೆಗಣಿಸುವಂತೆ ಎಲ್ಲ ರೀತಿಯ ಬೇರ್ಮೆಯನ್ನೂ ಬಾರತೀಯರು ಕಡೆಗಣಿಸಬೇಕು, ಅದೊಂದೇ ಬಾರತದ ರಾಶ್ಟ್ರೀಯತೆಯನ್ನು ಉಳಿಸಿಕೊಳ್ಳುವ ಬಗೆಯೆಂದು ನಮ್ಮಲ್ಲಿ ತಿಳುವಳಿಕಸ್ತರು ತಿಳಿದಿದ್ದಾರೆ. ಇದಕ್ಕೆ ಕಾರಣ ಮತ್ತದೇ: ಎಲ್ಲರೂ ಒಂದೇ ಕುಟುಂಬದವರು ಎನ್ನುವುದು. ಆ ಒಕ್ಕುಟುಂಬತನದ ವಾದ ಅದ್ಯಾತ್ಮಿಕವೇ ಹೊರತು ಲೌಕಿಕವಲ್ಲ ಎಂಬ ದಿಟವೂ ಹಾಳಾಗಿ ಹೋಗಲಿ, ಅದ್ಯಾತ್ಮಿಕ ನೆಲೆಯಲ್ಲೂ ಅದು ಇಡೀ ಜಗತ್ತನ್ನು ಕುರಿತು ಹೇಳಿರುವುದೇ ಹೊರತು ಬರೇ ಬಾರತವನ್ನು ಕುರಿತಲ್ಲ ಎಂಬ ದಿಟವೂ ಹಾಳಾಗಿ ಹೋಗಲಿ!
ಬಾರತವೆಂಬ ರಾಶ್ಟ್ರದ ತೆಕ್ಕೆಯಲ್ಲಿ ಮನುಶ್ಯಕುಲದ ಆರನೇ ಒಂದು ಪಾಲು ಬದುಕುತ್ತಿದೆ. ಆದರೂ ಎಲ್ಲಾ ರೀತಿಯ ಬೇರ್ಮೆಯನ್ನು ಬಾರತೀಯರು ಕೈಬಿಡಬೇಕೆಂಬ ಇಂಗಿತ ನಮ್ಮನ್ನು ಆಳುವವರದಾಗಿದೆ. ಹೀಗಿರುವಾಗ ಯೂರೋಪಿನಲ್ಲಿ ಡಜನುಗಟ್ಟಲೆ ರಾಶ್ಟ್ರಗಳು ಹುಟ್ಟಿಕೊಳ್ಳಲು ಯಾವ ಕಾರಣಗಳಿದ್ದವೋ ಅವು ಬಾರತದಲ್ಲೂ ಹರಿದಾಡುತ್ತಿವೆ, ಆದರೆ ಅವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸುವುದು ಮಾತ್ರ ಕಾಣುತ್ತಿಲ್ಲ. ಇದರ ಬದಲಾಗಿ ಬಾರತೀಯರೆಲ್ಲರೂ ಒಂದೇ ಎಂಬ ಮತ್ತದೇ ಒಕ್ಕುಟುಂಬತನದ ಆದ್ಯಾತ್ಮಿಕ ವಾದವೊಂದೇ ನಮ್ಮಲ್ಲಿ ಇರುವುದು. ಜಾತಿ ಮತ್ತು ನುಡಿಯ ತಾರತಮ್ಯಗಳು (ಕೊನೆಗವು ನುಡಿನಾಡುಗಳ ನಡುವಿನ ತಾರತಮ್ಯಗಳೇ) ಲೌಕಿಕ ನೆಲೆಯಲ್ಲಿ ಬಾರತವನ್ನು ಕೊರೆದು ತಿನ್ನುತ್ತಿದ್ದರೆ ಅದನ್ನು ತಪ್ಪಿಸಲು ನಾವು ಮಾಡುತ್ತಿರುವುದೆಲ್ಲವೂ ಅದ್ಯಾತ್ಮಿಕ ನೆಲೆಯಲ್ಲಿರುವುದು ಒಂದು ದೊಡ್ಡ ತಪ್ಪು.
ಹೀಗೆ, ರಾಶ್ಟ್ರೀಯತೆಯನ್ನು ಲೌಕಿಕತೆಯೆಂದೆಣಿಸದೆ ಅದಕ್ಕೂ ಅದ್ಯಾತ್ಮಿಕತೆಯನ್ನು ಮೆತ್ತಲು ಹೊರಡುವುದು, ಮಂದಿಗುಂಪುಗಳ ನಡುವಿನ ಲೌಕಿಕ ಜಗಳ-ತೋಟಿಗಳಿಗೆ ಅದ್ಯಾತ್ಮಿಕ ಬಗೆಹರಿಕೆಗಳನ್ನು ಹುಡುಕುವುದು, ಬಾರತದ ತೊಂದರೆಗಳ ಬೇರಾಗಿದೆ. ಬಾರತಮಾತೆಯನ್ನು ಹಾಡಿ ಕೊಂಡಾಡುವ ನಾವು ಯಾವುದೇ ಕೇಡನ್ನು ಬಯಸದೆ ಇರಬಹುದು. ಆದರೆ ರಾಶ್ಟ್ರೀಯತೆಯನ್ನು ಇರುವುದಿದ್ದಂತೆ ಅರಿತುಕೊಳ್ಳದಿರುವುದು, ಮತ್ತು ಅದ್ಯಾತ್ಮಿಕ ಮಟ್ಟಕ್ಕೆ ಏರಸಲಾಗದಂತದ್ದನ್ನು ಏರಿಸಲು ಹೊರಡುವುದು, ಇವೆಲ್ಲವೂ ಕೊನೆಗೆ ಕೇಡೇ.
(ಚಿತ್ರ ಸೆಲೆ: thehindu.com)
ಇತ್ತೀಚಿನ ಅನಿಸಿಕೆಗಳು