ಕ್ರಿಕೆಟ್ ಚೆಂಡನ್ನು ತಯಾರಿಸುವ ಬಗೆ
ದಾಂಡಾಟ(Cricket)ದ ಬೇಕುಗಳಲ್ಲಿ ಚೆಂಡು(Ball) ಮುಕ್ಯವಾದದ್ದು. ಏಕೆಂದರೆ ಚೆಂಡು ಮತ್ತು ದಾಂಡು(Bat)ವಿನ ಹೊರತಾಗಿ ದಾಂಡಾಟವು ಪೂರ್ತಿಯಾಗುವುದಿಲ್ಲ. ಸಾಮಾನ್ಯವಾಗಿ ಬಹಳಶ್ಟು ಬಗೆಯ ಚೆಂಡುಗಳನ್ನು ದಾಂಡಾಟದಲ್ಲಿ ಬಳಸಲಾಗುತ್ತದೆ. ನೀರ್ಕರಿಯಚ್ಚು(Plastic), ಹಿಗ್ಗುಕ(rubber) ಮತ್ತು ಬೆಂಡಿನ(Cork) ಚೆಂಡುಗಳು ಸೇರಿದಂತೆ ಬೇರೆ ಬೇರೆ ಬಗೆಯ ದಾಂಡಾಟದಲ್ಲಿ ಬೇರೆ ಬೇರೆ ಬಗೆಯ ಚೆಂಡುಗಳನ್ನು ಬಳಸುವುದುಂಟು. ಆದರೆ ಅಯ್.ಸಿ.ಸಿ ಮುಂದಾಳ್ತನದಲ್ಲಿ ನಾಡುನಡುವಿನ ದಾಂಡಾಟದ ಕೂಟಗಳು, ಬಿ.ಸಿ.ಸಿ.ಅಯ್ ಮುಂದಾಳ್ತನದಲ್ಲಿ ನಾಡೊಳಗಣ ದಾಂಡಾಟದ ಕೂಟಗಳು ನಡೆಯುವಾಗ ಮಾತ್ರ ಒಂದೇ ಬಗೆಯ ಚೆಂಡುಗಳನ್ನು ಬಳಸುತ್ತಾರೆ. ಹಾಗಾಗಿ ಬೆಂಡಿನ ಚೆಂಡುಗಳನ್ನು ಬಳಸುವುದು ಸಾಮಾನ್ಯ. ಇಂತಹ ಬೆಂಡಿನ ಚೆಂಡುಗಳ ಬಗ್ಗೆ ತಿಳಿದುಕೊಳ್ಳುವ ಚಿಕ್ಕ ಪ್ರಯತ್ನವನ್ನು ಈ ಬರಹದಲ್ಲಿ ಮಾಡಲಾಗಿದೆ.
ನಮಗೆಲ್ಲರಿಗೂ ತಿಳಿದಿರುವಂತೆ ನಾಡುನಡುವಿನ ದಾಂಡಾಟದ ಚೆಂಡುಗಳ ತಯಾರಿಕೆಯಲ್ಲಿ ಬೆಂಡು ಮತ್ತು ಚರ್ಮದ ಬಳಕೆಯನ್ನು ಮಾಡಲಾಗುತ್ತದೆ. ಬೆಂಡು ಒಂದು ಹಿಗ್ಗುವ ವಸ್ತುವಾದದ್ದರಿಂದ ಚೆಂಡು ಪುಟಿ(Bounce)ಯಲು ಇದು ನೆರವಾಗುತ್ತದೆ. ಚೆಂಡನ್ನು ತಯಾರಿಸುವ ಹೊತ್ತಿನಲ್ಲಿ ಬೆಂಡಿನ ತಿರುಳುಗಳಿಗೆ, ಗಾಯಕ್ಕೆ ಕಟ್ಟುವ ಪಟ್ಟಿಯ ದಾರದಿಂದ ಬಿಗಿಯಾಗಿ ಬಿಗಿದು, ಚರ್ಮದ ಹೊದಿಕೆಯಿಂದ ಸುತ್ತಿ ಹೊಲಿಯುತ್ತಾರೆ. ಈ ಹೊತ್ತಿನಲ್ಲಿ ಚೆಂಡು ದುಂಡಾಗಿ ಕಿತ್ತಳೆ ಹಣ್ಣಿನ ರೀತಿ ಆಕಾರ ಪಡೆದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ.ಎಸೆತಗಾರನು ಚೆಂಡಿನ ಮೇಲೆ ಹಿಡಿತ ಪಡೆಯುವಲ್ಲಿ ಮತ್ತು ಚೆಂಡು ಗಾಳಿಯಲ್ಲಿ ತೇಲು(Swing)ವಂತೆ ಮಾಡಲು ಚೆಂಡಿನ ನಡುಗೆರೆಯು ಹೆಚ್ಚಿನ ಕೆಲಸ ಮಾಡುತ್ತದೆ. ಹಾಗಾಗಿ ಚೆಂಡಿನ ನಡುಗೆರೆಯನ್ನು ಮಾಡಲು, ಚೆಂಡಿನ ನಡುಬಾಗವನ್ನು ಆರು ಸಾಲುಗಳ ಹೊಲಿಗೆಯಾಗಿ ದಾರದಿಂದ ಹೊಲಿಯಲಾಗುತ್ತದೆ. ಅಂದರೆ ಚೆಂಡಿನ ನಡುಬಾಗದಿಂದ ಬಲಕ್ಕೆ ಮೂರುಗೆರೆ ಮತ್ತು ಎಡಕ್ಕೆ ಮೂರುಗೆರೆಯ ಹೊಲಿಗೆ ಮಾಡುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಚರ್ಮದಿಂದ ತೇಪೆಹಾಕುವ ಚೆಂಡಿನ ನಡುಬಾಗದ ಉಳಿದ ಎರಡು ಕೂಡುಗೆರೆಗಳನ್ನು ಚೆಂಡಿನ ಒಳಬಾಗದಿಂದಲೇ ಹೊಲಿಯಲಾಗುತ್ತದೆ.
ಸಾಮಾನ್ಯವಾಗಿ ಯುವಕರ ದಾಂಡಾಟಕ್ಕೆ ಬಳಸುವ ಚೆಂಡು 155.9 ಗ್ರಾಂ ನಿಂದ 163.00 ಗ್ರಾಂ ನಶ್ಟು ತೂಕವಿರುತ್ತದೆ. ಅಲ್ಲದೇ ಸುತ್ತಳತೆಯಲ್ಲಿ 224 ಮಿ.ಮೀ. ರಿಂದ 229 ಮಿ.ಮೀ ನಶ್ಟಿರುತ್ತದೆ. ಆದರೆ ಹೆಂಗಸರ ದಾಂಡಾಟದಲ್ಲಿ ಬಳಸುವ ಚೆಂಡುಗಳ ಗಾತ್ರ ಮತ್ತು ತೂಕ ಯುವಕರ ದಾಂಡಾಟದ ಚೆಂಡಿಗಿಂತ ತುಸು ಕಡಿಮೆಯಿರುತ್ತದೆ.
ದಾಂಡಾಟದ ಶುರುವಿನಿಂದಲೂ ಕೆಂಪು ಬಣ್ಣದ ಚೆಂಡುಗಳನ್ನೇ ಬಳಸುತ್ತಾ ಬರಲಾಗಿತ್ತು. ಇದರ ಹಿಂದೆಯೊಂದು ಅರಿಮೆ ಇದೆ. ಹಿಂದೆ ಆಟಗಾರರು ಬಿಳಿ ಬಣ್ಣದ ಬಟ್ಟೆಯನ್ನು ಹಾಕಿಕೊಂಡು ಆಟವಾಡುತ್ತಿದ್ದರು. ಇದರಿಂದ ಎಸೆತಗಾರನು ಎಸೆತಗಾರಿಕೆ ನಡೆಸುವಾಗ ದಾಂಡುಗಾರನಿಗೆ ಬಿಳಿ ಬಣ್ಣದ ಹಿನ್ನಲೆ(Background)ಯಿಂದ ಕೆಂಪು ಬಣ್ಣದ ಚೆಂಡನ್ನು ಗುರುತಿಸಿ ಆಡಲು ನೆರವು ನೀಡುತ್ತಿತ್ತು. ಆದರೆ ಇಂದಿನ ದಾಂಡಾಟದಲ್ಲಿ ಸಾಕಶ್ಟು ಬದಲಾವಣೆಗಳಾಗಿ ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಆಡುವ ಪದ್ದತಿ ಬಂದಿತು. ಆ ಮೂಲಕ ಒಂದು ನಾಳಾಟದಲ್ಲಿ ಪಾಲ್ಗೊಳ್ಳುತ್ತಿದ್ದ ಎಲ್ಲಾ ನಾಡುಗಳು ತಮ್ಮ ತಂಡಕ್ಕೆ ಬಣ್ಣದ ಬಟ್ಟೆಯನ್ನು ಬಳಸಲು ಶುರುವಿಟ್ಟರು. ಇದು ದಾಂಡುಗಾರನಿಗೆ ಕೆಂಪು ಬಣ್ಣದ ಚೆಂಡನ್ನು ಗುರುತಿಸಲು ಸವಾಲೆನಿಸಿತು.
ಮುಂದೆ ದಾಂಡಾಟದ ಕಾನೂನುಗಳಲ್ಲಿ ತುಸು ಬದಲಾವಣೆಗಳನ್ನು ತರಲು ಅಯ್.ಸಿ.ಸಿ ತೀರ್ಮಾನಿಸಿತು. ಹಾಗಾಗಿ ಯಾವುದೇ ಬಣ್ಣದ ಹಿನ್ನಲೆಯಲ್ಲೂ ಕಾಣಬಲ್ಲ ಬಿಳಿ ಬಣ್ಣದ ಚೆಂಡನ್ನು ಅಯ್.ಸಿ.ಸಿ ದಾಂಡಾಟದ ಪಯ್ಪೋಟಿಯಲ್ಲಿ ಅಳವಡಿಸಿತು. ಆ ಮೂಲಕ ಒಂದು ನಾಳಾಟದಲ್ಲಿ ಬಿಳಿ ಬಣ್ಣದ ಚೆಂಡುಗಳು ಬಳಕೆಗೆ ಬಂದವು. 1979 ನವೆಂಬರ್ 27ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ(SCG) ಅಂಗಣದಲ್ಲಿ ನಡೆದ ವರ್ಲ್ಡ್ ಸೀರಿಸ್ ಕಪ್ ನಲ್ಲಿ ಮೊದಲ ಬಾರಿಗೆ ಬಿಳಿ ಬಣ್ಣದ ಚೆಂಡನ್ನು ಒಂದು ನಾಳಾಟದಲ್ಲಿ ಬಳಸಲಾಯಿತು.
ಆದರೆ ಮುಂದೆ ಬಿಳಿ ಬಣ್ಣದ ಚೆಂಡುಗಳು ಕೂಡ ಸವಾಲಾಗಿ ಕಂಡು ಬಂದವು. ಕಾರಣ ಹೊನಲು ಬೆಳಕಿನ (Day Night) ಪಯ್ಪೋಟಿಯಲ್ಲಿ ಬಿಳಿ ಬಣ್ಣದ ಚೆಂಡುಗಳು ಪೋಟಿ ಸಾಗಿದಂತೆ ಕಂದು ಬಣ್ಣಕ್ಕೆ ತಿರುಗುತ್ತಿದ್ದವು. ಇದು ನಡುಹಾಸಿ(Pitch)ನ ಬಣ್ಣಕ್ಕೆ ಹೆಚ್ಚು ಹೊಂದುವುದರಿಂದ ದಾಂಡುಗಾರನಿಗೆ ಎಸೆತ ಗುರುತಿಸಲು ಮತ್ತೆ ಸವಾಲಾಗುವಂತೆ ಮಾಡಿತು. ಇದು ದಾಂಡಾಟದ ಸರದಿಯೊಂದರಲ್ಲಿ ಎರಡು ಹೊಸ ಚೆಂಡುಗಳ ಬಳಕೆಗೆ ಕಾರಣವಾಯಿತು. ಅಲ್ಲದೇ ಇತ್ತೀಚಿನ ದಾಂಡಾಟದಲ್ಲಿ ಚೆಂಡುಗಳನ್ನು ಬೆಳಕಿನಿಂದ ತುಸು ಹೊಳೆಯುವಂತೆ ತಯಾರಿಸಿ, ಹೊನಲು ಬೆಳಕಿನ ಪಯ್ಪೋಟಿಯಲ್ಲಿ ಬಳಸಲಾಗುತ್ತದೆ.
ಬಿಳಿ ಮತ್ತು ಕೆಂಪು ಬಣ್ಣದ ಚೆಂಡಿನ ಬಳಕೆ ಹೊರತುಪಡಿಸಿ ಅಯ್.ಸಿ.ಸಿ ಒಮ್ಮೆ ಗುಲಾಬಿ ಬಣ್ಣದ ಚೆಂಡನ್ನು ಬಳಸಿ ಅರಕೆ(experiment) ಮಾಡಲಾಯಿತು. 2009ರ ಜುಲಯ್ ನಲ್ಲಿ ಇಂಗ್ಲೆಂಡ್ ಹೆಂಗಳೆಯರ ತಂಡ ಮತ್ತು ಆಸ್ಟ್ರೇಲಿಯಾದ ಹೆಂಗಳೆಯರ ತಂಡಗಳ ನಡುವೆ ನಡೆದ ದಾಂಡಾಟದ ಪಯ್ಪೋಟಿಯಲ್ಲಿ ಮೊದಲ ಬಾರಿಗೆ ಗುಲಾಬಿ ಬಣ್ಣದ ಚೆಂಡುಗಳನ್ನು ಬಳಸಲಾಯಿತು. ಪಯ್ಪೋಟಿಯ ಮೊದಲಲ್ಲಿ ಚೆಂಡು ಕೆಂಪು ಚೆಂಡಿಗಿಂತ ಹೆಚ್ಚು ತಿರುವು(Spin) ಪಡೆಯಿತು. ಅಲ್ಲದೇ ಪೋಟಿ ಸಾಗಿದಂತೆ ಬೇಗನೆ ತನ್ನ ಗುಣಮಟ್ಟವನ್ನು ಕಳೆದುಕೊಂಡಿತು. ಇದು ಗುಲಾಬಿ ಚೆಂಡಿನ ಬಳಕೆಯ ಕುರಿತು ಗೊಂದಲ ಮೂಡಿಸಿತು. ಈ ಕಾರಣಕ್ಕೆ ಗುಲಾಬಿ ಬಣ್ಣದ ಚೆಂಡನ್ನು ಅಯ್.ಸಿ.ಸಿ ಬಳಕೆಯಿಂದ ತೆಗೆದು ಹಾಕಿತು.
ಇವೆಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಅಯ್.ಸಿ.ಸಿ ದಾಂಡಾಟದ ಕಾನೂನುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತು. ಅದರಂತೆ ಟೆಸ್ಟ್ ಪಯ್ಪೋಟಿಯಲ್ಲಿ ಬಳಸುವ ಚೆಂಡುಗಳು ಕೆಂಪು ಬಣ್ಣದಲ್ಲಿರುತ್ತದೆ. ಮತ್ತು ಒಂದು ನಾಳಿನಾಟದಲ್ಲಿ ಹೊಳೆಯುವ ಬಿಳಿ ಚೆಂಡುಗಳನ್ನು ಬಳಸಲಾಗುತ್ತದೆ. ಈ ನಿಯಮವನ್ನು ನಾಡೊಳಗಣ ದಾಂಡಾಟದಲ್ಲೂ ಮುಂದುವರೆಸಲಾಗಿದೆ. ಆದರೆ ನಾಡೊಳಗಣ ದಾಂಡಾಟದ ತರಬೇತಿಯ ಹೊತ್ತಿನಲ್ಲಿ ಬಿಳಿ, ಕೆಂಪು ಬಣ್ಣದ ಚೆಂಡಿನ ಜೊತೆಗೆ ಗುಲಾಬಿ, ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡನ್ನು ಬಳಸುವುದೂ ಉಂಟು.
(ಮಾಹಿತಿ ಮತ್ತು ಚಿತ್ರ ಸೆಲೆ: itsonlycricket.com, bajubekasbranded.com, lordscricketballs.co.uk )
2 Responses
[…] ಈ ಹಿಂದೆ ಹೆಂಗಸರ ದಾಂಡಾಟದ ಪಯ್ಪೋಟಿಯಲ್ಲಿ ಗುಲಾಬಿ ಚೆಂಡನ್ನು ಬಳಸಿದ್ದರು. ಆದರೆ ಚೆಂಡುಗಳು ಬೇಗನೆ ತನ್ನ ಗುಣವನ್ನು […]
[…] ಈ ಹಿಂದೆ ಹೆಂಗಸರ ದಾಂಡಾಟದ ಪಯ್ಪೋಟಿಯಲ್ಲಿ ಗುಲಾಬಿ ಚೆಂಡನ್ನು ಬಳಸಿದ್ದರು. ಆದರೆ ಚೆಂಡುಗಳು ಬೇಗನೆ ತನ್ನ ಗುಣವನ್ನು […]