ಕಡುಬಿಸಿಲಿಗೆ ತಂಪಾದ ಮಾವಿನ ಕಾಯಿ ತಂಬುಳಿ
– ಕಲ್ಪನಾ ಹೆಗಡೆ.
ಕಡುಬಿಸಿಲಿಗೆ ತಂಪಾದ ಮಾವಿನ ಕಾಯಿ ತಂಬುಳಿ. ತುಂಬಾ ಸುಲಬ… ಮಾಡಿ ರುಚಿ ನೋಡಿ!
ಬೇಕಾಗುವ ಪದಾರ‍್ತಗಳು:
1 ಮಾವಿನ ಕಾಯಿ, ತೆಂಗಿನಕಾಯಿ ತುರಿ, 2 ಹಸಿಮೆಣಸಿನ ಕಾಯಿ, ಕಾಲು ಚಮಚ ಜೀರಿಗೆ, ಕಾಲು ಚಮಚ ಸಾಸಿವೆ, ಎಣ್ಣೆ, , ನೀರು, 2 ಒಣಮೆಣಸಿನಕಾಯಿ, ರುಚಿಗೆ ತಕ್ಕಶ್ಟು ಉಪ್ಪು.
ಮಾಡುವ ಬಗೆ:
ಮೊದಲು ಮಾವಿನಕಾಯಿಯನ್ನು ಸಿಪ್ಪೆ ತೆಗೆದು ಹೋಳುಗಳನ್ನಾಗಿ ಮಾಡಿಕೊಳ್ಳಿ. ಒಗ್ಗರಣೆ ಸೌಟಿಗೆ ಎಣ್ಣೆ ಹಾಕಿ ಹಸಿಮೆಣಸಿನಕಾಯಿ, ಜೀರಿಗೆ ಹಾಕಿ ಪ್ರೈ ಮಾಡಿ ಜೊತೆಗೆ ತೆಂಗಿನಕಾಯಿ ತುರಿ ಮತ್ತು ಹೆಚ್ಚಿದ ಮಾವಿನಕಾಯಿ ಹೋಳುಗಳನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಆನಂತರ ಅದಕ್ಕೆ ಹಿಡಿಯುವಶ್ಟು ನೀರು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬೆರೆಸಿಕೊಳ್ಳಿ. ಆಮೇಲೆ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಜೀರಿಗೆ ಒಗ್ಗರಣೆ ಹಾಕಿ ಅನ್ನದೊಂದಿಗೆ ಸವಿಯಲು ನೀಡಿ.
(ಚಿಕ್ಕ ಟಿಪ್ಪಣಿ ನಿಮ್ಮ ಗಮನಕ್ಕೆ: ನೀವು ನೀರನ್ನು ಹಾಕಿ ಹದ ಮಾಡಿಕೊಳ್ಳುವಾಗ ಅನ್ನದೊಂದಿಗೆ ಸವಿಯಲು ಗಸಿಯಾಗುವಂತೆ ಬೆರೆಸಿಕೊಳ್ಳಿ. ಕುಡಿಯಲು ಬೇಕಾದರೆ ತೆಳ್ಳಗೆ ಹದಮಾಡಿಕೊಳ್ಳಿ)
ಮೊನ್ನೆ ಶನಿವಾರ ನಮ್ಮ ಮನೆಯಲ್ಲಿ ಇದನ್ನು ಮಾಡಿದ್ದೆವು, ಕುಡಿಯಲು ತುಂಬಾ ಚೆನ್ನಾಗಿತ್ತು.