ನಡೆದೇವು ಹೊಸ ದಿಗಂತದೆಡೆಗೆ
– ಬಸವರಾಜ್ ಕಂಟಿ.
ಎಳೆದೇವು ನಾವು ಕನ್ನಡ ತೇರನ್ನು
ಎಲ್ಲರಕನ್ನಡದ ಹಾದಿಯಲ್ಲಿ,
ನಡೆದೇವು ಹೊಸ ದಿಗಂತದೆಡೆಗೆ
ನಾಡ ಬದಲಿಸುವ ಹಿಗ್ಗಿನಲ್ಲಿ.
ದಾಟಿ ಎಲ್ಲ ಎಲ್ಲೆಗಳನು, ಮೀರಿ ಎಲ್ಲ ರೀತಿಗಳನು
ಪದಗಳೇ ಅಡಿಮಾಡಿ ಕಟ್ಟುತ ಹೊಸ ಹಾದಿಗಳನು,
ಕುಗ್ಗದೆ, ಬಗ್ಗದೆ, ಕಸಿವಿಸಿಗೆ ನೆಲೆಗೊಡದೆ,
ಹೊರಟಿಹೆವು ಅಂದದ ಬೀಡಿನೆಡೆಗೆ
ತುಂಬಿದೆ ಎದೆಯಲ್ಲಿ ಮುನ್ನುಗ್ಗುವ ಕಿಚ್ಚು,
ಇಟ್ಟ ಹೆಜ್ಜೆ ಹಿಂತೆಗೆಯದ ಹುಚ್ಚು,
ಕಡುವಾಗಿ ಕಾಣುತಿರೆ ಗುರಿಯ ಬೆಳಕು,
ಇಲ್ಲ ಇನ್ನು ಮನದಲ್ಲಿ ಯಾವ ಅಳುಕು.
ಕನ್ನಡಾಂಬೆಯ ಈ ಹೊನಲಿನ ಹರಿವು,
ಸಾಗಿದೆ ಹಿರಿದಾಗುತ್ತಾ ದಿನದಿನವೂ,
ಕಾದಿದ್ದ ಜೀವಗಳನ್ನು ತಣಿಸಿ,
ನುಗ್ಗಿದೆ ಹಳೆಯ ನೀರನ್ನು ತೊಳೆಸಿ.
(ಚಿತ್ರ ಸೆಲೆ: millimanjamestown.com )
ಇತ್ತೀಚಿನ ಅನಿಸಿಕೆಗಳು