ಪತ್ತೇದಾರಿ ಕತೆ: ಮಾಯವಾದ ಹೆಣ

– ಬಸವರಾಜ್ ಕಂಟಿ.

fight

ಕಂತು – 1

ನಿವ್ರುತ್ತ ಪೊಲೀಸ್ ಕಮೀಶನರ್, ಶಂಕರ್ ಪಾಟೀಲ್ ಅವರ ಬಂಗಲೆಯಲ್ಲಿ ಇಳಿಸಂಜೆಯ ಸಣ್ಣ ಪಾರ‍್ಟಿ ನಡೆದಿತ್ತು. ದಕ್ಶ ಅದಿಕಾರಿ ಎನಿಸಿಕೊಂಡಿದ್ದ ಶಂಕರ್ ಅವರ ಹತ್ತಿರದ ಗೆಳೆಯರಾಗಿದ್ದ ನಾಲ್ಕು ಮಂದಿ ಅಲ್ಲಿದ್ದರು. ನೆನಪುಗಳನ್ನು ಕೆದಕಿಕೊಂಡು ಅವರಾಡುತ್ತಿದ್ದ ಮಾತು-ನಗು ಇಡೀ ಮನೆಯನ್ನೇ ತುಂಬಿತ್ತು. ಮೇಜರ್ ಅಶೋಕ್, ಮೇಜರ್ ಸಂದೀಪ್, ಕಾಂಟ್ರಾಕ್ಟರ್ ಶ್ರೀನಿವಾಸ್, ಮತ್ತು ಪಾಲಿಕೆ ಕೆಲಸಗಾರರಾಗಿದ್ದ ರಾಗವೇಂದ್ರ (ನಿವ್ರುತ್ತಿಯಾಗಿದ್ದರು)- ಇವರು ಶಂಕರ್ ಅವರ ಶಾಲೆಯ ದಿನಗಳ ಗೆಳೆಯರು. ಬೆಂಗಳೂರಿನಲ್ಲೇ ಇದ್ದರೂ, ಎಲ್ಲರು ಕೂಡುವುದು ತುಂಬಾ ಅಪರೂಪವಾಗಿತ್ತು. ಹೆಂಡತಿ ಊರಿನಲ್ಲಿಲ್ಲದ ಹೊತ್ತು ನೋಡಿಕೊಂಡು ಗೆಳೆಯರನ್ನು ಮನೆಗೆ ಕರೆಸಿಕೊಂಡಿದ್ದರು ಶಂಕರ್. ಗಂಟೆ ಒಂಬತ್ತು ದಾಟಿದಮೇಲೆ, ಅಡುಗೆ ಕೆಲಸದವ ಬಂದು, “ಸಾರ್, ಅಡುಗೆ ಎಲ್ಲಾ ರೆಡಿ ಮಾಡಿ ಟೇಬಲ್ ಮೇಲಿಟ್ಟಿದಿನಿ. ನಾನ್ ಹೋಗ್ಲಾ ಸಾರ‍್?” ಎಂದು ಕೇಳಿದ.

“ಆಯ್ತು”, ಎಂದರು ಶಂಕರ್. ಈಗ ಮನೆಯಲ್ಲಿ ಆ ಅಯ್ದು ಜನರನ್ನು ಬಿಟ್ಟು ಬೇರಾರೂ ಇರಲಿಲ್ಲ. ಗೆಳೆಯರ ಕುಡಿತ, ಮಾತು, ನಗು ಹಾಗೇ ಮುಂದುವರೆದಿತ್ತು.

“ಈ ರಮ್ಮು ಕಿಕ್ಕೇ ಕೊಡ್ತಿಲ್ಲಾ. ಏನೇ ಅಂದ್ರು ನಮ್ ದೇಸೀ ಬ್ರಾಂಡ್ ಮುಂದೆ ಈ ವಿದೇಸೀ ಮಾಲು ಸಪ್ಪೆ”, ಅಂದರು ಪಾಲಿಕೆಯ ರಾಗವೇಂದ್ರ.

“ನಿನ್ ಲೆವೆಲ್ ಬಿಟ್ಟು ನೀನು ಮೇಲೆ ಬರೊಲ್ಲಾ ಬಿಡು”, ಹೀಯಾಳಿಸಿದರು ಮೇಜರ್ ಅಶೋಕ್.

“ಹೌದಪ್ಪಾ… ನಿನ್ ಲೆವೆಲ್ಲೂ ಗೊತ್ತು ನಂಗೆ”, ಎಂದು ನಗುತ್ತಾ ಮಾರುತ್ತರ ನೀಡಿದರು ರಾಗವೇಂದ್ರ, “ಮಿಲಿಟರಿಯಲ್ಲಿ ಹುಡುಗೀರು ಸಿಕ್ಕಿಲ್ಲಾಂತ ಹುಡುಗರನ್ನೇ ಇಟ್ಕೊಂಡವ್ನು ನೀನು, ಅಲ್ವಾ?”

ಅಶೋಕ್ ಅವರಿಗೆ ತಟ್ಟನೆ ಸಿಟ್ಟು ನೆತ್ತಿಗೇರಿ, ಕುಳಿತಲ್ಲಿಂದ ಎದ್ದು, ಎದೆಗೆ ಒದ್ದ ಏಟಿಗೆ, ಕುರ‍್ಚಿ ಸಮೇತ ಉರುಳಿಬಿದ್ದರು ರಾಗವೇಂದ್ರ. ಮಿಲಿಟರಿಯ ಅನುಬವದಲ್ಲಿ ಬೆಂದು, ಕಲ್ಲಂತಾಗಿದ್ದ ಅಶೋಕ್ ಅವರ ಮಯ್ಕಟ್ಟುಗಳನ್ನು ನೋಡಿ, ಸಿಟ್ಟು ಉಕ್ಕುತ್ತಿದ್ದರೂ ಮರಳಿ ಹೊಡೆಯುವ ಅತವಾ ಬೈಯುವ ದರ‍್ಯವಾಗದೆ, ಎದ್ದು ನಿಂತು ಜೋರು ಜೋರಾಗಿ ಉಸಿರಾಡತೊಡಗಿದರು. ಅಶ್ಟೊತ್ತು ನಗುವಿನಿಂದ ತುಂಬಿದ್ದ ಮನೆ, ಒಮ್ಮೆಲೆ ಶಾಂತವಾಗಿ, ರಾಗವೇಂದ್ರ ಅವರ ಉಸಿರಾಟ ಮಾತ್ರ ಕೇಳುತ್ತಿತ್ತು.

ಪರಿಸ್ತಿತಿಯನ್ನು ತಕ್ಶಣ ಅರಿತ ಶಂಕರ್, ಅಶೋಕ್ ಅವರನ್ನು ಗದರಿಸುತ್ತಾ, “ಎಯ್, ಸುಮ್ನೆ ಕೂತ್ಕೊಳ್ಳೊ”, ಎಂದು ರಾಗವೇಂದ್ರ ಅವರತ್ತ ನಡೆದು, ಅವರ ಕಯ್ ಹಿಡಿದು, ಬೆನ್ನನ್ನು ನಿದಾನವಾಗಿ ಉಜ್ಜುತ್ತಾ, “ಸಾರಿ ಕಣೋ. ಬಾ ಕೂತ್ಕೊ”, ಎಂದು ಕುರ‍್ಚಿ ಸರಿಮಾಡಿ ಕೂರಿಸಿದರು. ಕುಂತರೂ ಅವರ ಉಸಿರಾಟದ ವೇಗ ಇಳಿದಿರಲಿಲ್ಲ.

ಎಲ್ಲರಿಗೂ ಕಟ್ಟಳೆ ಹಾಕಿದರು ಶಂಕರ್, “ಯಾರೂ ತೀರ ಪರ‍್ಸನಲ್ ವಿಶ್ಯಾ ಮಾತಾಡ್ಬೇಡಿ ಪ್ಲೀಸ್”, ಎನ್ನುತ್ತಾ ಅಶೋಕ್ ಅವರ ಕಡೆ ಹೊರಳಿ, “ಎಯ್, ಸಾರಿ ಕೇಳೋ”. ಎಂದರು.

ಒಲ್ಲದ ಮನಸ್ಸಿನಲ್ಲೇ, “ಸಾರಿ” ಎಂದರು ಅಶೋಕ್. ರಾಗವೇಂದ್ರ ಅವರು ಟೇಬಲ್ ಮೇಲಿದ್ದ ತಮ್ಮ ಗ್ಲಾಸು ಎತ್ತಿ, ಅದರಲ್ಲಿದ್ದ ಎಲ್ಲವನ್ನೂ ಹೊಟ್ಟೆಗೆ ಇಳಿಸಿ, ಸುದಾರಿಸಿಕೊಂಡರು. ಪರಿಸ್ತಿತಿ ತಿಳಿಗೊಳಿಸಲು ಮಾತನ್ನು ಬೇರೆಡೆ ಹೊರಳಿಸಿದರು ಶಂಕರ್. ನಿದಾನವಾಗಿ ಎಲ್ಲರು ಮತ್ತೆ ಮೊದಲಿನ ಲಯಕ್ಕೆ ಬಂದರೂ ರಾಗವೇಂದ್ರ ಮಾತ್ರ ಮಾತನ್ನು ಕಮ್ಮಿ ಮಾಡಿದ್ದರು. ಸ್ವಲ್ಪ ಹೊತ್ತಾದ ಮೇಲೆ, ಎಲ್ಲರೂ ಎದ್ದು ಊಟ ಮುಗಿಸಿದರು. ರಾತ್ರಿ ಹನ್ನೊಂದಾಗಿತ್ತು.

“ನಾನ್ ಮಲ್ಕೊತೀನಪ್ಪಾ”, ಎಂದರು ರಾಗವೇಂದ್ರ. ಅವರಿಗೆ ಮಲಗುವ ಕೋಣೆ ತೋರಿಸಿ, ಮನೆಯ ಜಗುಲಿಯಲ್ಲಿ ಸಿಗರೇಟು ಸೇದುತ್ತಿದ್ದ ಎಲ್ಲರನ್ನು ಸೇರಿಕೊಂಡರು ಶಂಕರ್. ಕತ್ತಲಾಗಿದ್ದ ಮನೆಯ ಅಂಗಳದಲ್ಲಿ ಕಪ್ಪೆಗಳ ಗುಟುರು ಕೇಳುತ್ತಿತ್ತು.

“ಅವ್ನು ಇನ್ನೊಂದ್ಸಾರಿ ಮಿಲಿಟರಿ ಬಗ್ಗೆ ಏನಾದ್ರು ಮಾತಾಡಿದ್ರೆ ಕೊಂದ್ ಹಾಕ್ತೀನಿ”, ಎಂದರು ಅಶೋಕ್.

“ಹೋಗಲಿ ಬಿಡೋ… ನೀನ್ ಕೊಟ್ಟ ಏಟಿಗೆ ಮಿಲಿಟರಿ ಬಗ್ಗೆ ಯಾಕೆ, ಯಾವುದರ ಬಗ್ಗೆನೂ ಅವ್ನು ಮಾತಾಡೊಲ್ಲಾ”, ಎಂದು ಕಿರುನಗೆ ಬೀರಿದರು ಮೇಜರ್ ಸಂದೀಪ್.

“ಹೋಗಲಿ ಬಿಡ್ರಪ್ಪಾ”, ಎಂದು ಸಮಾದಾನ ಮಾಡಲು ಮುಂದಾದರು ಶಂಕರ್.

“ಅವ್ನು ತುಂಬಾ ಹೆಚ್ಕೊಂಡಿದಾನೆ… ನಿಂಗೆ ಗೊತ್ತಿಲ್ಲ”, ಎಂದರು ಅಶೋಕ್.

ಶ್ರೀನಿವಾಸ್ ತಮ್ಮಲ್ಲಿದ್ದ ಅಸಮಾದಾನವನ್ನೂ ಹೊರಹಾಕಿದರು, “ಹೌದು… ನಿನ್ ಹತ್ರ ಟೋಟಲ್ ಬ್ಲಾಕ್ ಮನಿ ಎಶ್ಟಿದೆ ಅಂತ ನನಗೊತ್ತು, ಇನ್ಕಮ್ ಟಾಕ್ಸ್ ನವರಿಗೆ ಹೇಳ್ಳಾ, ಅಂತಾನೆ ಬಡ್ಡಿ ಮಗ” ಎಂದರು. ಅವರೆಲ್ಲರ ಮಾತುಗಳನ್ನು ಕೇಳಿ, ತಪ್ಪು ರಾಗವೇಂದ್ರನದ್ದೇ ಎಂದು ಶಂಕರ್ ಅವರಿಗೂ ಮನವರಿಕೆಯಾಯಿತು.

“ನಾವೆಲ್ಲಾ ಒಳ್ಳೊಳ್ಳೆ ಪ್ರೊಪೆಶನ್ ನಲ್ಲಿ ಬೆಳೆದು, ಅವ್ನು ಮಾತ್ರ ಇನ್ನೂ ಬಸ್ ಹಿಡ್ಕೊಂಡೇ ಎಲ್ಲಾ ಕಡೆ ಓಡಾಡೋ ಸ್ತಿತಿಯಿಂದಲೇ ಅವ್ನ ಮನಸ್ಸು ನಮ್ಮನ್ನಾ ಹೇಟ್ ಮಾಡೋ ಹಾಗೆ ಮಾಡುತ್ತೆ”, ವಿಶ್ಲೇಶಿಸಿದರು ಅಶೋಕ್. ತುಸು ಹೊತ್ತಿನ ನಂತರ ಎಲ್ಲರೂ ಒಳಗೋಗಿ ಬೇರೆ ಬೇರೆ ಕೋಣೆಗಳಲ್ಲಿ ಮಲಗಿದರು.

******************************************************************

ಒಂದು ವಾರದ ನಂತರ…
ತನ್ನ ಹೊತ್ತಗೆ ಅಂಗಡಿಗೆ ಬಂದಿದ್ದ ಅಶ್ಟೊಂದು ಜನರನ್ನು ಕಂಡು ಪುಲಕೇಶಿಗೆ ಇನ್ನಿಲ್ಲದ ಕುಶಿಯಾಗಿತ್ತು. ಅಂದು, ಅವನ ಬಂಟ ಹನುಮನಿಗೆ ಊಟಕ್ಕೂ ಪುರುಸೊತ್ತಿರಲಿಲ್ಲ. ಇತ್ತೀಚಿಗೆ, ಪುಲಕೇಶಿಯ ಸಹಾಯದಿಂದ ಪೊಲೀಸರು ಸರಣಿ ಕೊಲೆಗಾರನೊಬ್ಬನನ್ನು ಹಿಡಿದು, ಅದು ಸುದ್ದಿಯಾಗಿ, ಅವನನ್ನು ಕಾಣಲು ಹಲವು ಮಂದಿ ಅವನ ಅಂಗಡಿಗೆ ಬಂದು ಹೋಗುತ್ತಿದ್ದರು. ಬಂದವರು ಅಂಗಡಿಯನ್ನು ಒಂದು ಸುತ್ತು ಹಾಕಿ, ತಮಗಿಶ್ಟ ಬಂದ ಹೊತ್ತಗೆಗಳನ್ನು ಕೊಳ್ಳುತ್ತಿದ್ದರು. ಸಂಜೆಯ ಹೊತ್ತಾಗಿ, ಹತ್ತಿರದ ತೋಟದಲ್ಲಿ ಒಂದು ಸುತ್ತು ಹಾಕಿ ಬರಬೇಕೆಂದು ಪುಲಕೇಶಿ ಇನ್ನೇನು ಏಳುವಶ್ಟರಲ್ಲಿ, ಸುಮಾರು ಇಪ್ಪತ್ತು ವರ‍್ಶದ ಹುಡುಗಿಯೊಬ್ಬಳು ಕಯ್ಯಲ್ಲಿ ಕಡತವೊಂದನ್ನು ಹಿಡಿದು ಬಂದು, ಪುಲಕೇಶಿಗೆ ತನ್ನ ಹೆಸರು ರಶ್ಮಿ ಎಂದು ಪರಿಚಯ ಹೇಳಿಕೊಂಡಳು. ಅವಳನ್ನು ಮಾಡಿಯ ಮೇಲಿರುವ ತನ್ನ ಮನೆಗೆ ಕರೆದುಕೊಂಡು ಹೋದ ಪುಲಕೇಶಿ. ಅಲ್ಲಿ ಅವಳು ಮಾತಿಗೆ ಶುರುವಿಟ್ಟುಕೊಂಡಳು.

“ನನ್ ಸೋದರಮಾವ ಸರ್ ಅವರು… ಒಂದು ವಾರದಿಂದ ಕಾಣ್ತಾಯಿಲ್ಲ”, ಎಂದು ಪುಲಕೇಶಿಯ ಕಯ್ಗೆ ಒಂದು ತಿಟ್ಟ ಕೊಟ್ಟಳು.

“ಇವರ ಹೆಸರು ಇನ್ನೊಮ್ಮೆ ಹೇಳಿ?”, ಕೇಳಿದನು ಪುಲಕೇಶಿ.

“ರಾಗವೇಂದ್ರ ವಿ”

“ವಿ ಅಂದ್ರೆ?”

“ರಾಗವೇಂದ್ರ ವೆಂಕಟೇಶ್”

“ಪೊಲೀಸ್ ಕಂಪ್ಲೇಂಟ್ ಕೊಟ್ಟಿದಿರಾ?”

“ಹೂಂ ಸರ‍್”, ಎಂದು ದೂರಿನ ಪ್ರತಿಯನ್ನು ಕೊಟ್ಟಳು.

“ಒಹ್! ವಿಜಯನಗರ ಸ್ಟೇಶನ್…” ಎನ್ನುತ್ತಾ ದೂರನ್ನು ವಿವರವಾಗಿ ಓದಿದ ಪುಲಕೇಶಿ. ಅದರಲ್ಲಿ, ರಾಗವೇಂದ್ರ ಅವರು ಕಮೀಶನರ್ ಶಂಕರ್ ಅವರ ಗೆಳೆಯ, ಅವರ ಮನೆಯಿಂದಲೇ ಕಾಣೆಯಾಗಿದ್ದಾರೆ ಎಂದು ಬರೆಯಲಾಗಿತ್ತು.

“ನೀವು ಅವರನ್ನಾ ಕೊನೆ ಸಾರಿ ನೋಡಿದ್ದು ಯಾವಾಗ?”

“ಅವತ್ತು ಸಂಜೆ ‘ಶಂಕರ್ ಅವರ ಮನೇಲಿ ಪಾರ‍್ಟಿ ಇದೆ, ಹೋಗಿ ಬರ‍್ತೀನಿ’ ಅಂತ ಹೇಳಿ ಮನೆಯಿಂದ ಹೋದವರು ಮತ್ತೆ ಬರಲೇ ಇಲ್ಲ”

“ಆಮೇಲೆ ನಿಮಗೆ ಕಾಲ್ ಕೂಡ ಮಾಡಿಲ್ವಾ?”

“ಇಲ್ಲಾ ಸರ್… ಮಾರನೇ ದಿನಾ ಮದ್ಯಾನ ನಾನೇ ಕಾಲ್ ಮಾಡ್ದೆ, ಆದ್ರೆ ಸ್ವಿಚ್ ಆಪ್ ಅಂತಾ ಬಂತು. ಒಂದು ದಿನಾ ಕಾದ್ರೂ ಮನೆಗೆ ಬರಲಿಲ್ಲಾ”

“ಸರಿ… ವಿಜಯನಗರ ಸ್ಟೇಶನ್ ನಲ್ಲಿ ನನಗೆ ಗೊತ್ತಿರೋ ಎಸ್. ಆಯ್ ಒಬ್ರು ಇದಾರೆ. ಅವರ ಜೊತೆ ಮಾತಾಡಿ, ನಿಮಗೆ ಕಾಲ್ ಮಾಡ್ತೀನಿ”, ಎಂದು ಮಾತು ಮುಗಿಸಿದ ಪುಲಕೇಶಿ.

******************************************************************

(ಮುಂದುವರೆಯುವುದು : ಎರಡನೆ  ಕಂತು ನಾಳೆಗೆ) 

( ಚಿತ್ರ ಸೆಲೆ: avocare.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

ಅನಿಸಿಕೆ ಬರೆಯಿರಿ:

Enable Notifications OK No thanks