“ಜೂನ್ 4” ಅಂದರೆ ಚೀನಿಯರಿಗೇಕೆ ದಿಗಿಲು ?

– ಅನ್ನದಾನೇಶ ಶಿ. ಸಂಕದಾಳ.

tiananmen_square

ಜೂನ್ 4 1989 – ಚೀನಾದ ಹಿನ್ನಡವಳಿಯಲ್ಲಿ (history) ಒಂದು ಮುಕ್ಯವಾದ ದಿನ. ಚೀನಾದಲ್ಲಿ ಮಂದಿಯಾಳ್ವಿಕೆ (democracy) ಬೇಕೆಂದು ಒತ್ತಾಯ ಪಡಿಸುತ್ತಿದ್ದ ಮಂದಿಯ ಮೇಲೆ ಗುಂಡಿನ ಮಳೆಗರೆದ ದಿನ. ಮಂದಿಗೆ ಸಹಜವಾಗಿ ದಕ್ಕಬೇಕ್ಕಿದ ಹಕ್ಕುಗಳನ್ನು ನೀಡದೇ, ಮಂದಿಯ ದನಿಯನ್ನೇ ಇಲ್ಲವಾಗಿಸುವಂತ ಕೆಲಸಕ್ಕೆ ಅಂದಿನ ಚೀನಾ ಸರಕಾರ ಮುಂದಾದ ದಿನ. ಬಹಳಶ್ಟು ಸಾವು-ನೋವುಗಳಿಗೆ ಕಾರಣವಾದ ಚೀನಾ ಸರಕಾರದ ನಡೆಗೆ, ಹಲವಾರು ನಾಡುಗಳು ಚೀನಾವನ್ನು ಹೀಗಳೆದಿದ್ದವು. ಅಂದು ಮಂದಿ ನಡೆಸುತ್ತಿದ್ದ ಹೋರಾಟವನ್ನು ‘ಜೂನ್ 4ರ ಹೋರಾಟ’ ಅತವಾ ‘ಮಂದಿಯಾಳ್ವಿಕೆಯ ಹೋರಾಟ’ ಎಂದೇ ಕರೆಯಲಾಗುತ್ತದೆ. ಅಂದು ನಡೆಸಿದ ಕಗ್ಗೊಲೆಗಳ ಬಗ್ಗೆ ಮಾತಾಡುವುದು ಅತವಾ ಅದರ ಬಗ್ಗೆ ಚರ‍್ಚಿಸುವುದು – ಇದ್ಯಾವುದನ್ನೂ ಮಾಡುವ ಹಾಗಿಲ್ಲ ಎಂದು ಚೀನಾ ಸರಕಾರ ಅಲ್ಲಿನ ಮಂದಿಗೆ ತಡೆ ಹಾಕಿದೆ.

ಚೀನಾದ ಹಿನ್ನಡವಳಿಯಲ್ಲಿ ‘ಮಾವೋ ಜೆಡಾಂಗ್’ (Mao Zedong)ಎಂಬುದು ಮುಕ್ಯವಾದ ಹೆಸರುಗಳಲ್ಲಿ ಒಂದು. ಕಮ್ಯುನಿಸಂ ಸಿದ್ದಾಂತದ ಮೇಲೆ ಬಲವಾದ ನಂಬಿಕೆ ಹೊಂದಿದ್ದ ಮಾವೋ ಜೆಡಾಂಗ್, ಚೀನಾ ನಾಡನ್ನು ಕಟ್ಟಿದವರಲ್ಲಿ ಒಬ್ಬರು. ಸಿರಿವಂತ ರೈತ ಕುಟುಂಬದಲ್ಲಿ ಹುಟ್ಟಿದ್ದರೂ, ಚಿಕ್ಕಂದಿನಿಂದಲೇ ಆಡಂಬರವನ್ನು ಮತ್ತು ಸಿರಿವಂತಿಕೆಯನ್ನು ಮಾವೋ ಜೆಡಾಂಗ್ ಅಶ್ಟಾಗಿ ಮೆಚ್ಚಿರುವುದಿಲ್ಲ. ಮಾರ‍್ಕ್ಸಿಸಂ-ಲೆನಿನಿಸಂ ಸಿದ್ದಾಂತಗಳು ಅವರನ್ನು ಬಹಳವಾಗಿ ನಾಟಿರುತ್ತವೆ. ಆ ಸಿದ್ದಾಂತಗಳ ಅಡಿಯಲ್ಲೇ ‘ಕಮ್ಯುನಿಸ್ಟ್ ಪಾರ‍್ಟಿ ಆಪ್ ಚೀನಾ’ ಎಂಬ ರಾಜಕೀಯ ಪಂಗಡದ ಹುಟ್ಟಿಗೂ ಕಾರಣರಾಗುವರು. ಮುಂದೆ, ಈ ರಾಜಕೀಯ ಪಂಗಡದ ಮೇಲಾಳಾಗಿ ಮೂವತ್ಮೂರು ವರ‍್ಶಗಳ ಕಾಲ ಚೀನಾವನ್ನೂ ಆಳುವರು. ಮಾವೋ ಜೆಡಾಂಗ್ ನಿಲುವುಗಳ ಮೇಲೆ ಚೀನಾದಲ್ಲಿ ಹುಟ್ಟಿದ ಸಿದ್ದಾಂತ ‘ಮಾವೋಯಿಸಂ’ ಎಂದೇ ಹೆಸರುಗಳಿಸುತ್ತದೆ.

ಕೂಡಣ ಅಂತಿದ್ದ ಮೇಲೆ ಹಲವಾರು ನೆಲೆಗಳ ಮೇಲೆ ಕೂಡಣದ ಮಂದಿಯನ್ನು ಬೇರೆ ಬೇರೆ ಗುಂಪುಗಳಿಗೆ ಸೇರಿಸಬಹುದು. ದರ‍್ಮದ ನೆಲೆ ಮೇಲೆ, ಸಿರಿವಂತಿಕೆ ಅತವಾ ಗಳಿಕೆಯ ನೆಲೆ ಮೇಲೆ, ಮಾಡುವ ಕೆಲಸದ ಮೇಲೆ – ಹೀಗೆ. ಹೆಚ್ಚು ಹಣವನ್ನು ಹೊಂದಿದವರು, ಅದನ್ನೇ ಬಂಡವಾಳವನ್ನಾಗಿ ಹೂಡಿ, ಬಡತನದಲ್ಲಿರುವ ಮಂದಿಯನ್ನು ಹೆಚ್ಚೆಚ್ಚು ದುಡಿಸಿಕೊಂಡು ಇನ್ನೂ ಹೆಚ್ಚು ಹಣಗಳಿಸುತ್ತಾರೆ – ಅದರಿಂದ ಸಿರಿವಂತರು ಸಿರಿವಂತರಾಗಿ ಮತ್ತು ಬಡವರು ಬಡವರಾಗಿಯೇ ಉಳಿಯುವರು ಎನ್ನುವುದು ಮಾವೋ ಅವರ ನಂಬಿಕೆಯಾಗಿತ್ತು. ಇದನ್ನು ಸರಿಪಡಿಸಬೇಕೆಂದು ಚೀನಾದಲ್ಲಿ ಮಾವೋ ಜೆಡಾಂಗ್ ಹುಟ್ಟುಹಾಕಿದ ಚಳುವಳಿ, ‘ಸಾಂಸ್ಕ್ರುತಿಕ ಕ್ರಾಂತಿ’ ಯ ಚಳುವಳಿ ಎಂದು ಹೆಸರು ಪಡೆಯುತ್ತದೆ. ಕೂಡಣದ ಬೇರೆ ಬೇರೆ ಗುಂಪಿನ ಮಂದಿಯ ನಡುವೆ ತಿಕ್ಕಾಟಕ್ಕೆ ಈ ಚಳುವಳಿ ಕಾರಣವಾಗಿ ಬಹಳ ಮಂದಿ ಪ್ರಾಣ ಕಳೆದುಕೊಳ್ಳುವಂತೆ ಮಾಡುತ್ತದೆ. ಮಂದಿಯ ಕಾಸಗಿ ಸ್ವತ್ತನ್ನು, ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುವ, ನಗರದಲ್ಲಿನ ಮಂದಿಯನ್ನು ಹಳ್ಳಿಗೆ ಕಳಿಸುವ, ದಾರ‍್ಮಿಕ ಸ್ತಳಗಳಿಗೆ ದಕ್ಕೆ ಮಾಡುವ, ಕಾರಣವಿಲ್ಲದೆ ಮಂದಿಯನ್ನು ಹಿಂಸಿಸುವ ಮತ್ತು ಸೆರೆಮನೆಗೆ ಅಟ್ಟುವ ಕೆಲಸವೂ ಕೂಡ ನಡೆಯುತ್ತದೆ. ಇವೆಲ್ಲವೂ, ಬಂಡವಾಳದೊಲವು/ಹೂಡಿಕೆಯೊಲವು (capitalism) ಏರ‍್ಪಾಡನ್ನು ಚೀನಾದಿಂದ ಹೊರದಬ್ಬಿ ಸಮಾಜವಾದವನ್ನು ಚೀನಾದಲ್ಲಿ ನೆಲೆಗೊಳಿಸಬೇಕು ಎಂಬ ಉದ್ದೇಶದಿಂದಾಗಿರುತ್ತದೆ. 1966 ರಿಂದ 1976 ರ ವರೆಗೂ ಈ ತಿಕ್ಕಾಟಗಳು ಚೀನಾದಲ್ಲಿ ನಡೆಯುತ್ತವೆ.

deng-xiaopingಚೀನಾದಲ್ಲಾದ ಸಾಂಸ್ಕ್ರುತಿಕ ಕ್ರಾಂತಿಯಿಂದ ಚೀನಾ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮಂದಿಯ ನಡುವೆ ಒಗ್ಗಟ್ಟು ಇಲ್ಲದಾಗುತ್ತದೆ, ಚೀನಾವು – ಹಣಕಾಸು, ಏಳಿಗೆ, ಗಳಿಕೆ, ಮಂದಿಯ ಜೀವನ ಮಟ್ಟ – ಹೀಗೆ ಎಲ್ಲದರಲ್ಲೂ ಹಿಂದುಳಿಯುತ್ತದೆ. ಮಾವೋ ಸಿದ್ದಾಂತವೇ ಎಲ್ಲರನ್ನು ಆವರಿಸಿಕೊಂಡು ಕೆಲಸಗಳು ಹೆಚ್ಚಾಗಿ ಹುಟ್ಟದೇ, ಚೀನಾದೆಲ್ಲೆಡೆ ಬಡತನವು ರಾರಾಜಿಸುತ್ತದೆ. ಚೀನಾವನ್ನು ಸರಿದಾರಿಗೆ ತರಲು, ಮಾವೋ ಜೆಡಾಂಗ್ ನಂತರ 1976 ರಲ್ಲಿ ಆಳ್ವಿಕೆಯ ಚುಕ್ಕಾಣಿ ಹಿಡಿಯುವ ‘ಡೆಂಗ್ ಶಿಯಾವೋಪಿಂಗ್’ (Deng Xiaoping) ದೊಡ್ಡ ಹಮ್ಮುಗೆಗಳನ್ನು ಹಾಕಿಕೊಳ್ಳುವರು. ಬಂಡವಾಳ ಹೂಡಿಕೆಯತ್ತ ಚೀನಾವನ್ನು ಹೊರಳಿಸುವಂತ ಈ ಹಮ್ಮುಗೆಗಳು ಕೆಲವೇ ವರುಶಗಳಲ್ಲಿ ಚೀನಾವನ್ನು ಸರಿ ದಾರಿಗೆ ತರುವತ್ತ ಕೆಲಸ ಮಾಡುತ್ತವೆ. ಸಿದ್ದಾಂತಗಳನ್ನು ಬದಿಗಿಟ್ಟು ಮಂದಿಯ ಬಳಿ ದುಡ್ಡು/ಸಂಪತ್ತು ಸೇರುವ ಹಾಗೆ ಮಾಡಿದ ಈ ಹಮ್ಮುಗೆಗಳು ಗೆಲುವು ಕಾಣುತ್ತವೆ.

ಕಾಸಗಿ ಹೂಡಿಕೆಯನ್ನು ಹೆಚ್ಚಾಗಿ ಬೆಂಬಲಿಸುತ್ತಾ ಹಣಕಾಸಿನ ವಿಚಾರದಲ್ಲಿ ಸರಕಾರದ ಪಾತ್ರವನ್ನು ಕಡಿಮೆ ಮಾಡುವ ಡೆಂಗ್ ಶಿಯಾವೋಪಿಂಗ್ ಅವರ ಎಣಿಕೆ ಮೊದಲಿಗೆ ಸರಿ ಇರುತ್ತದೆ. ಆದರೆ ಬರಬರುತ್ತಾ ದುಡ್ಡಿರುವ ಮಂದಿ ಆಳ್ವಿಕೆಯವರಿಗೆ ಹತ್ತಿರವಾಗಲು ಶುರುವಾಗುತ್ತಾರೆ. ತಮಗೆ ಬೇಕಾದ ರೀತಿ-ನೀತಿಗಳನ್ನು ಜಾರಿಗೊಳಿಸತೊಡಗುತ್ತಾರೆ. ಸರಕಾರದಲ್ಲಿ ನಡೆಗೇಡಿತನ (corruption) ಹೆಚ್ಚಾಗತೊಡಗುತ್ತದೆ. ಎಲ್ಲದನ್ನು ಮಾರುಕಟ್ಟೆಯೇ ತೀರ‍್ಮಾನಿಸುವಂತ ಏರ‍್ಪಾಡನ್ನು ಬಂಡವಾಳಶಾಹಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸುವರು. ಕಲಿತವರಿಗೆ ಕೆಲಸವಿಲ್ಲದಿಕೆ (unemployment) ಹೆಚ್ಚಾಗುತ್ತಾ, ಮಂದಿಯು ಎಲ್ಲದಕ್ಕೂ ಹೆಚ್ಚು ಹಣವನ್ನು ತೆರುವಂತ ಸನ್ನಿವೇಶ ಮೆಲ್ಲನೆ ಕಾಣಿಸಿಕೊಳ್ಳುತ್ತದೆ. ಇದು ಕೂಡಣದಲ್ಲಿ ಮತ್ತೆ ಬಡವ-ಸಿರಿವಂತರ ನಡುವಿನ ದೂರ ಹೆಚ್ಚಾಗುವಂತೆ ಮಾಡುತ್ತದೆ. ಇದನ್ನು ಸರಿಪಡಿಸಬೇಕೆಂದರೆ ಸರಕಾರವೇ ಎಲ್ಲದರ ಮೇಲೆ ಹಿಡಿತವನ್ನು ಹೊಂದಬೇಕು ಎಂದು ಆಳುವವರಿಗೆ ಅನಿಸುತ್ತದೆ. ಆದ್ದರಿಂದ ಎಲ್ಲದರಲ್ಲೂ ಸರಕಾರದ ಪಾತ್ರವನ್ನು ಹಿಗ್ಗಿಸುವ ತೀರ‍್ಮಾನವನ್ನು ಅವರು ಕೈಗೊಳ್ಳುತ್ತಾರೆ. ಸರಕಾರವೇ ಕಟ್ಟಾಳ್ವಿಕೆ (dictatorship) ತೋರುವಂತ ಈ ತೀರ‍್ಮಾನ, ಚೀನಾವನ್ನು ಮರಳಿ ಸಮಾಜವಾದಕ್ಕೆ ಕೊಂಡೊಯ್ಯುವ ನಡೆಯಾಗಿರುತ್ತದೆ.

ಮಾವೋಯಿಸಂ ಮತ್ತು ಹೂಡಿಕೆಯೊಲವಿನ ಏರ‍್ಪಾಡನ್ನು ಸರಿಯಾಗಿ ಕಟ್ಟದ್ದರಿಂದ ಆದ ಆಗುಹಗಳು – ಎರಡನ್ನೂ ಕಂಡಿದ್ದ ಚೀನಾದಲ್ಲಿನ ತಿಳಿವಿಗರು, ಹೊಸ ಹೊಸ ಯೋಚನೆಗಳಿಗೆ ಚೀನಾವು ತೆರೆದುಕೊಳ್ಳಬೇಕೆಂದು ಹೇಳಲು ಶುರುವಿಟ್ಟುಕೊಳ್ಳುತ್ತಾರೆ. ‘ಹು ಯಾವೋಬಾಂಗ್’ (Hu Yaobang) ಮತ್ತು ‘ಪಾಂಗ್ ಲಿಜಿ’ (Fang Lizhi) ಆ ಗುಂಪಿನಲ್ಲಿ ಕಾಣಿಸಿಕೊಳ್ಳುವ ಮುಕ್ಯವಾದ ಹೆಸರುಗಳು. ಇವರಿಬ್ಬರೂ ಆಳುವ ಪಂಗಡದ ಸದಸ್ಯರೇ ಆಗಿರುತ್ತಾರೆ ಎನ್ನುವುದು ಗಮನಿಸಬೇಕಾದ ಸಂಗತಿ. ರಾಜಕೀಯ ಮತ್ತು ಆಳ್ವಿಕೆಯ ಚಿಂತನೆಗಳಲ್ಲಿ ಒಂದೇ ಸಿದ್ದಾಂತಕ್ಕೆ ಕಟ್ಟು ಬೀಳಬಾರದು ಎಂಬ ನಿಲುವು ಈ ತಿಳಿವಿಗರದಾಗಿರುತ್ತದೆ. ಮಂದಿಯ ಬೇಕು ಬೇಡಗಳನ್ನು ಕೇಳುವ ಏರ‍್ಪಾಡಿನ ಮಂದಿಯಾಳ್ವಿಕೆ ಚೀನಾ ಹೊಂದಬೇಕು ಎಂಬುದು ಇವರ ನಂಬಿಕೆಯಾಗಿರುತ್ತದೆ. ಅಮೇರಿಕಾದಲ್ಲಿ ಕೆಲದಿನಗಳ ಕಾಲ ಪ್ರೊಪೆಸರ್ ಆಗಿ ಚೀನಾಗೆ ಮರಳಿದ ಪಾಂಗ್ ಲಿಜಿ, ಚೀನಾದಲ್ಲಿನ ಯೂನಿವರ‍್ಸಿಟಿಗಳಿಗೆ ಬೇಟಿ ನೀಡುತ್ತಾ – ಮಾನವ ಹಕ್ಕುಗಳ ಬಗ್ಗೆ, ಚೀನಾದಲ್ಲಿನ ಕಟ್ಟಾಳ್ವಿಕೆಯಿಂದಾಗುತ್ತಿರುವ ತೊಂದರೆಗಳ ಬಗ್ಗೆ, ಮಂದಿಯಾಳ್ವಿಕೆ ಬಗ್ಗೆ ವಿದ್ಯಾರ‍್ತಿಗಳಲ್ಲಿ ಜಾಗ್ರುತಿ ಮೂಡಿಸತೊಡಗುತ್ತಾರೆ. ಚೀನಾದ ಮುಂದಿನ ಪೀಳಿಗೆಯಾದ ವಿದ್ಯಾರ‍್ತಿಗಳನ್ನು ತಿಳಿವಿಗರು ಹೇಳುತ್ತಿರುವ ಬದಲಾವಣೆಗಳು ಹೆಚ್ಚು ಸೆಳೆಯುತ್ತವೆ. ಅವರು ಮಾತಾಡುವ ಮಾತುಗಳನ್ನೆಲ್ಲಾ ಅಚ್ಚು ಮಾಡಿ ಎಲ್ಲರಿಗೆ ತಲುಪಿಸುವ ಕೆಲಸ ಶುರುವಾಗುತ್ತದೆ. ಆದರೆ ಮಾವೋಯಿಸಂನಲ್ಲೇ ನಂಬಿಕೆ ಹೊಂದಿದ್ದ ಆಳುವ ಪಂಗಡದವರಿಂದ ಮಂದಿಯಾಳ್ವಿಕೆಗೆ ಬಲವಾದ ವಿರೋದವಿರುತ್ತದೆ. ಪಡುವಣ ನಾಡುಗಳನ್ನು ಕುರುಡಾಗಿ ಹಿಂಬಾಲಿಸುತ್ತಿದ್ದಾರೆ ಎಂಬ ಆರೋಪವನ್ನು ಪಾಂಗ್ ಲಿಜಿ ಮೇಲೆ ಹೊರಿಸಲಾಗುತ್ತದೆ. ಪಾಂಗ್ ಲಿಜಿಯನ್ನು ಪಂಗಡದಿಂದ ಹೊರ ಹಾಕಿ ಎಂದು ಹು ಯಾವೋಬಾಂಗ್ ಅವರಿಗೆ ಹೇಳಿದರೂ ಅವರು ಆ ಕೆಲಸವನ್ನು ಮಾಡಿರುವುದಿಲ್ಲ. ಆ ಹೊತ್ತಿನಲ್ಲೇ ಮಂದಿಯಾಳ್ವಿಕೆ ಬೇಕೆಂಬ ಹೋರಾಟ ಚೀನಾದಲ್ಲೆಡೆ ಕಾವು ಪಡೆದುಕೊಂಡು ಅಲ್ಲಲ್ಲಿ ಪ್ರತಿಬಟನೆಗಳು ನಡೆಯತೊಡಗುತ್ತವೆ. ಇವೆಲ್ಲದರಿಂದ ಹು ಯಾವೋಬಾಂಗ್ ಬಗ್ಗೆ ‘ಕಮ್ಯುನಿಸ್ಟ್ ಪಾರ‍್ಟಿ ಆಪ್ ಚೀನಾ’ ಸಿಟ್ಟಾಗಿದ್ದರಿಂದ, ಹು ಯಾವೋಬಾಂಗ್ ಅವರು ರಾಜೀನಾಮೆ ಕೊಡುವರು. ತಾನು ನಂಬಿದ್ದ ನಂಬಿಕೆಗಳಿಗೋಸ್ಕರ ಅದಿಕಾರವನ್ನು ಬಿಟ್ಟುಕೊಟ್ಟ ಹು ಯಾವೋಬಾಂಗ್ ಅವರ ಬಗ್ಗೆ ಗೌರವ, ಚೀನಾದ ಮಂದಿಯಲ್ಲಿ ಇನ್ನೂ ಹೆಚ್ಚಾಗುತ್ತದೆ.

ಏಪ್ರಿಲ್ 15, 1989 ರಂದು ಹು ಯಾವೋಬಾಂಗ್ ಅವರು ಗುಂಡಿಗೆ ಬೇನೆಯಿಂದ ಸಾಯುವರು. ಮೊದಲಿಗೆ ಇದರಿಂದ ಕೊಂಚ ಮಬ್ಬಾದ tiananmenವಿದ್ಯಾರ‍್ತಿಗಳು, ಬಳಿಕ ಯುನಿವರ‍್ಸಿಟಿಗಳಲ್ಲಿ ಹು ಯಾವೋಬಾಂಗ್ ಅವರ ನಿಲುವಿನ ಬಗ್ಗೆ, ಅವರು ಇದ್ದಾಗ ಮಂದಿಯಾಳ್ವಿಕೆ ಬಗ್ಗೆ ಆಡುತ್ತಿದ್ದ ಮಾತುಗಳ ಬಗ್ಗೆ ಹೆಚ್ಚೆಚ್ಚು ಮಾತಾಡಲು ಶುರು ಮಾಡುತ್ತಾರೆ. ಇದರಿಂದ ಹೆಚ್ಚು ಮಂದಿ ಒಟ್ಟುಗೊಳ್ಳುತ್ತಾ ಪ್ರತಿಬಟನೆಗಳು ಹೆಚ್ಚು ಬಿರುಸುಗೊಳ್ಳುತ್ತವೆ. 1989 ರ ಏಪ್ರಿಲ್ ಇಂದ ಜೂನ್ ವರೆಗೆ ಚೀನಾದ ರಾಜದಾನಿಯಾದ ಬೀಜಿಂಗ್ ನ ನಡು ಬಾಗದಲ್ಲಿರುವ ‘ಟಿಯನನ್ಮೆನ್ ಚೌಕ’ ಎಂಬ ಜಾಗದಲ್ಲಿ ಹೆಚ್ಚಿನ ಎಣಿಕೆಯಲ್ಲಿ ವಿದ್ಯಾರ‍್ತಿಗಳು ಸೇರತೊಡಗುತ್ತಾರೆ. ಹಸಿವಿನ ಮುಶ್ಕರಗಳು ಜೋರಾಗತೊಡಗುತ್ತವೆ. ಆಳುವವರು, ಮಂದಿಯಾಳ್ವಿಕೆ ಬಗ್ಗೆ ನಿಲುವನ್ನು ತಿಳಿಯಪಡಿಸಬೇಕೆಂಬ ಕೂಗುಗಳು ಹೆಚ್ಚಾಗುತ್ತವೆ. ಈ ಹೋರಾಟ ಬೀಜಿಂಗ್ ನಲ್ಲಶ್ಟೇ ಅಲ್ಲದೆ ಬೇರೆಡೆಯೆಲ್ಲಾ ಹಬ್ಬುತ್ತದೆ. ಮೊದಲಿಗೆ ಈ ಹೋರಾಟಗಳಿಂದ ಮೆತ್ತಗಾದಂತೆ ಕಂಡು ಬರುವ ಸರಕಾರದವರು, ಬಳಿಕ ಪ್ರತಿಬಟನೆ ನಡೆಸುವವರಿಗೆ ‘ದಿಗಿಲುಕೋರರು'(terrorists) ಎಂಬ ಹಣೆಪಟ್ಟಿಯನ್ನು ಅಂಟಿಸಿ ನಾಡಿನ ನೆಮ್ಮದಿಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆಪಾದನೆ ಮಾಡುವರು. ಸಮಾಜವಾದವನ್ನು ನೆಲೆಗೊಳಿಸಬೇಕೆಂದರೆ ಮತ್ತು ಬಂಡವಾಳಶಾಹಿ ಏರ‍್ಪಾಡಿಗೆ ಚೀನಾವನ್ನು ಒಯ್ಯದಿರಬೇಕೆಂದರೆ ಮಿಲಿಟರಿಯನ್ನು ಬಳಸಲೇಬೇಕೆಂಬ ತೀರ‍್ಮಾನ ಕೈಗೊಳ್ಳುತ್ತಾರೆ. ಅಸಲಿಗೆ, ಮಂದಿಯಾಳ್ವಿಕೆಯನ್ನು ಒಪ್ಪದಿರುವ ಮನಸ್ತಿತಿ ಆಳುವವರದಾಗಿರುತ್ತದೆ. ಹೋರಾಟದ ಕಾವು ದಿನೇ ದಿನೇ ಏರುತ್ತಾ ಹೋಗುತ್ತದೆ. ಜೂನ್ 4 1989 ರಂದು ‘ಟಿಯನನ್ಮೆನ್ ಚೌಕ’ವನ್ನು ತೆರವುಗೊಳಿಸುವ ಸಲುವಾಗಿ ಮಿಲಿಟರಿ ಟ್ಯಾಂಕರ್ ಗಳನ್ನು ನುಗ್ಗಿಸಲಾಗುತ್ತದೆ. ಇದಕ್ಕೆ ಅಡ್ಡಿಪಡಿಸಿದ ಮಂದಿಯ ಮೇಲೆ ಗುಂಡಿನ ದಾಳಿ ಮಾಡಲಾಗುತ್ತದೆ. ಸಹಜವಾಗಿ ದಕ್ಕಬೇಕಿದ್ದ ಹಕ್ಕುಗಳನ್ನು ಮಂದಿಗೆ ಕೊಡುವ ಮನಸ್ಸನ್ನು ಮಾಡದೇ, ಚೀನಾ ಸರಕಾರ ಮಿಲಿಟರಿಯನ್ನು ಬಳಸಿ ಬಹಳಶ್ಟು ಮಂದಿಯ ಕಗ್ಗೊಲೆ ಮಾಡಿಸುತ್ತದೆ. ಇದಾದ ಬಳಿಕ ಬಹಳಶ್ಟು ಮಂದಿಯನ್ನು ಸೆರೆಮನೆಗೆ ದೂಡಿ ದಂಡಿಸುವ ಕೆಲಸವೂ ಆಗುತ್ತದೆ.

ಹೀಗೆ ಮಂದಿಯ ಬೇಡಿಕೆಗಳನ್ನು ಬಲವಾಗಿ ಹತ್ತಿಕ್ಕಿದ ಚೀನಾ ಸರಕಾರ ಮಾದ್ಯಮಗಳ ಮೇಲೆ ತಡೆ ಹೇರುತ್ತದೆ. ನಡೆಗೇಡಿತನ, ಮಾವೋಯಿಸಂ, ಮಂದಿಯಾಳ್ವಿಕೆ ಮುಂತಾದವುಗಳ ಬಗ್ಗೆ ಅಲ್ಲಿ ಮಾದ್ಯಮಗಳಲ್ಲಿ ಮಾತಾನಾಡದಿರುವ ಹಾಗೇ ಮಾಡಿದೆ. ಇಂದಿಗೂ ಈ ‘ಟಿಯನನ್ಮೆನ್ ಚೌಕ’ ದ ಕಗ್ಗೊಲೆಯ ಬಗ್ಗೆ ಅಲ್ಲಿ ಹೆಚ್ಚಿನ ಚರ‍್ಚೆಗಳು ನಡೆಯದಂತೆ ಚೀನಾ ನೋಡಿಕೊಂಡಿದೆ – ಮತ್ತೆ ಮಂದಿಯಾಳ್ವಿಕೆ ಪರವಾದ ಪ್ರತಿಬಟನೆಗಳು ಆಗದಿರಲಿ ಎಂಬ ಉದ್ದೇಶದಿಂದ. ಅಂದು ಚೀನಾ ಸರಕಾರ ಮಾಡಿದ ಮರುಕವಿಲ್ಲದ ಕೆಲಸಗಳಿಗೆ ತಪ್ಪೊಪ್ಪಿಗೆ (apology) ನೀಡಿದೆಯೇ ಇಲ್ಲವೇ ಎಂಬುದನ್ನು ಚೀನಿಯರೇ ತಿಳಿಸಬೇಕು!

(ಚಿತ್ರ ಸೆಲೆ : gracechinatours.com, chinadaily.com.cnbusinessinsider.in )

(ಮಾಹಿತಿ ಸೆಲೆ : wiki-TiananmenSquareProtests, wiki-CulturalRevolution )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 21/08/2015

    […] ಚೀನಾದಲ್ಲಿ ನೆಲೆಗೊಳಿಸುವುದು ಆ ಕ್ರಾಂತಿಯ ಗುರಿಯಾಗಿರುತ್ತದೆ. ಹಣಕಾಸಿನ ಸನ್ನಿವೇಶ ಸರಿದಾರಿಗೆ ಬರಲು […]

ಅನಿಸಿಕೆ ಬರೆಯಿರಿ:

Enable Notifications