ಸಾಗುವಳಿಯಲ್ಲಿ ಎಲೆಬಣ್ಣದ ನೆರವು
ಮನುಶ್ಯ ತನ್ನ ಹೊಟ್ಟೆ ತುಂಬಿಸಲು ಕಾಳಿನ ಬೆಳೆಗಳನ್ನು ಹಲವಾರು ನೂರೇಡುಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾನೆ. ಗಿಡದರಿಮೆಯ ನಿಟ್ಟಿನಿಂದ ಹುಲ್ಲಿನ ಜಾತಿ ಪೊಯೇಸೀ (poaceae)ಗೆ ಸೇರಿದ ಒಬ್ಬೇಳೆ ಗಿಡ(monocotyledons)ಗಳಾದ ನೆಲ್ಲು (ಬತ್ತ), ಜೋಳ, ರಾಗಿ ಮುಂತಾದ ಬೆಳೆಗಳು ನಮ್ಮ ತಿನಿಸುಗಳಲ್ಲಿ ಹೆಚ್ಚಾಗಿ ಬಳಸಲ್ಪಡುತ್ತವೆ. ಏಶಿಯಾ ಪೆರ್ನೆಲವನ್ನು ತೆಗೆದುಕೊಂಡರೆ ನೆಲ್ಲು ಅತವಾ ಬತ್ತದ ಬೇಸಾಯ ಹಿಂದಿನಿಂದಲೂ ಇಲ್ಲಿ ಪ್ರಾಮುಕ್ಯತೆ ಪಡೆದಿದೆ. ಇಡೀ ನೆಲದ ಒಟ್ಟು ಬತ್ತದ ಮಾಳ್ಕೆ(production)ಯಲ್ಲಿ 90% ರಶ್ಟು ಮಾಳ್ಕೆ ಏಶಿಯಾದಲ್ಲೇ ನಡೆಯುತ್ತದೆ ಮತ್ತು ಜಗತ್ತಿನ ಒಟ್ಟು ಬತ್ತದ ಪೂರಯ್ಕೆಯ 75% ರಶ್ಟನ್ನು ಏಶಿಯಾದ ಮಂದಿಯೇ ತಿಂದುಮುಗಿಸುತ್ತಾರೆ ಎಂಬುದನ್ನು ನೋಡಿದರೆ ಏಶಿಯಾದ ಕೂಳುಕಾಪುವಿಕೆಯಲ್ಲಿ (food security) ನೆಲ್ಲಿನ (ಬತ್ತದ) ಪಾತ್ರ ನಮ್ಮ ಅರಿವಿಗೆ ನಿಲುಕುತ್ತದೆ.
ಬೆಳೆಯ ಬೆಳವಣಿಗೆಯಲ್ಲಿ ಪೊರೆಕಗಳಿಗೆ (nutrients) ಅರಿದಾದ ಪಾತ್ರವಿದೆ ಎಂಬುದನ್ನು ನಾವು ಬಲ್ಲೆವು. ಅದರಲ್ಲೂ ನಯ್ಟ್ರೋಜನ್ ಬೇರಡಕವು ಬೆಳೆಗಳಿಗೆ ಬೇಕಾದ ಮುನ್ನಿನ (protein) ಮಾಡುವಿಕೆಯಲ್ಲಿ ಬಳಸಲ್ಪಟ್ಟು ಗಿಡದ ಮಯ್ಯಿಟ್ಟಳ (body structure)ದ ಕಟ್ಟಣೆಗೆ ನೆರವಾಗುತ್ತದೆ. ಬೆಳೆಯ ಇಳುವರಿ ಹೆಚ್ಚಲು ನಯ್ಟ್ರೋಜನ್ ಇರುವ ಯೂರಿಯಾ, ಡಿ.ಎ.ಪಿ, ಅಮ್ಮೋನಿಯಂ ಪಾಸ್ಪೇಟ್ ನಂತಹ ರಸಗೊಬ್ಬರಗಳನ್ನು ಉಪಯೋಗಿಸುವುದನ್ನು ಒಕ್ಕಲಿಗರು ಕಲಿತಿದ್ದಾರೆ.
ಬೇಸಾಯದಲ್ಲಿ ರಾಸಾಯನಿಕಗಳ ಬಳಕೆ ಸರಿಯೋ ತಪ್ಪೋ ಎಂಬ ವಾದವನ್ನು ಪಕ್ಕಕ್ಕಿಟ್ಟು ನೋಡಿದಲ್ಲಿ ಹಿಂದಿನಂತೆ ಬರೇ ತಮ್ಮ ಉಣಿಸು, ದನಕರುಗಳಿಗೆ ಮೇವಿಗೆ ಸಾಕಾಗುವಶ್ಟು ಬೆಳೆಯುತ್ತಿದ್ದ ಒಕ್ಕಲಿಗರು ಈಗ ತಮ್ಮ ಇನ್ನಿತರ ಬೇಡಿಕೆಗಳ ಪೂರಯ್ಕೆಗಾಗಿ ಸಾಕಶ್ಟು ಹಣ ಸಂಪಾದಿಸಬೇಕಾಗಿದೆ. ಹಾಗಾಗಿ ತಮ್ಮ ತೋಟ, ಗದ್ದೆಗಳಲ್ಲಿನ ಬೆಳೆಗಳ ಇಳುವರಿ ಹೆಚ್ಚಿಸಲು ಎಲ್ಲ ಬಗೆಯ ಮೊಗಸುಗಳನ್ನು ಮಾಡುತ್ತಿದ್ದಾರೆ. ನಯ್ಟ್ರೋಜನ್, ರಂಜಕ, ಪೊಟ್ಯಾಶಿಯಮ್, ಗಂದಕ, ಕ್ಯಾಲ್ಶಿಯಂ ಹೊಂದಿರುವ ರಸಗೊಬ್ಬರಗಳ ಬಳಕೆ ಈಗ ಎಲ್ಲೆಡೆ ಮಾಮೂಲು.
ನೆಲ್ಲು ಬೆಳೆಯನ್ನು ತೆಗೆದುಕೊಂಡರೆ ಎಳೆಯ ಗಿಡಗಳನ್ನು ಒಟ್ಲು ಮಡಿ(nursery bed)ಯಿಂದ ಕಿತ್ತು ತೆಗೆದು ಗದ್ದೆಯಲ್ಲಿ ನಾಟಿ ಮಾಡಲಾಗುತ್ತದೆ. ನಾಟಿಯ ಹೊತ್ತಿನಲ್ಲಿ ಬೆಳೆಯ ಆರಯ್ಕೆಗೆ ರಸಗೊಬ್ಬರಗಳನ್ನು ಬೂಮಿಗೆ ಹಾಕುತ್ತಾರೆ. ರಂಜಕ, ಪೊಟ್ಯಾಶಿಯಮ್ ಬೇರಡಕಗಳಿರುವ ರಸಗೊಬ್ಬರಗಳನ್ನು ನಾಟಿಯ ಹೊತ್ತಿನಲ್ಲಿ ಒಂದು ಸಲ ಕೊಟ್ಟರೆ ಸಾಕು. ಆದರೆ ನಯ್ಟ್ರೋಜನ್ ಹಾಗಲ್ಲ. ಬೆಳೆಯ ಇಡೀ ಬಾಳ್ಮೆಸುತ್ತಿಗೆ ಬೇಕಾದಶ್ಟು ನಯ್ಟ್ರೋಜನ್ ಅನ್ನು ಯೂರಿಯಾ ಅತವಾ ಬೇರೆ ಗೊಬ್ಬರಗಳ ಮೂಲಕ ನಾಟಿಯ ಹೊತ್ತಿನಲ್ಲೇ ಕೊಡುವುದು ಸರಿಯಲ್ಲ. ಹಾಗೇನಾದರೂ ಕೊಟ್ಟಲ್ಲಿ ನಯ್ಟ್ರೋಜನ್ ಅಂಶವು ಬೆಳೆಗೆ ಸರಿಯಾಗಿ ದಕ್ಕುವುದಿಲ್ಲ. ಒಂದಶ್ಟು ನಯ್ಟ್ರೋಜನ್ ನೀರಿನೊಡನೆ ಮಣ್ಣಿನಲ್ಲಿ ಇಂಗಿ ಹೋಗುವುದು ಇಲ್ಲವೇ ಮಣ್ಣಿನಲ್ಲಿರುವ ಸೀರುಗಗಳಿಂದಾಗಿ ಗೊಬ್ಬರದ ನಯ್ಟ್ರೋಜನ್ ಕೂಡಿಕೆಗಳು ಇಟ್ಟಳದೊಡೆತ(decomposition)ಕ್ಕೀಡಾಗಿ ನಯ್ಟ್ರೋಜನ್ ಅಣುಕೂಟವು (molecule) ಬಿಡುಗಡೆಯಾಗಿ ಗಾಳಿಯಲ್ಲಿ ಬೆರೆತು ಹೋಗಬಹುದು.
ಜೊತೆಗೆ ನಾಟಿಯ ಹೊತ್ತಿನಲ್ಲಿ ಗಿಡದ ಬೇರುಗಳು ಅಶ್ಟಾಗಿ ಬೆಳವಣಿಗೆ ಹೊಂದಿರುವುದಿಲ್ಲವಾದ್ದರಿಂದ ನಯ್ಟ್ರೋಜನ್ ಅನ್ನು ಹೀರಿಕೊಳ್ಳುವ ಅಳವು ಗಿಡಕ್ಕೆ ಕಡಿಮೆಯಿದ್ದು, ನಯ್ಟ್ರೋಜನ್ ಪರಿಸರದಲ್ಲಿ ಕಳೆದುಹೋಗುವ ಸಂಬವ ಹೆಚ್ಚು. ಹಾಗಾಗಿ ನಯ್ಟ್ರೋಜನ್ ಗೊಬ್ಬರಗಳಾದ ಯೂರಿಯಾ ಮುಂತಾದವನ್ನು ಮೂರು ಅತವಾ ಹೆಚ್ಚು ಕಂತುಗಳಲ್ಲಿ ಮೇಲುಗೊಬ್ಬರ(top dressing)ವಾಗಿ ಬೆಳೆಗೆ ಕೊಡಬೇಕಾಗುತ್ತದೆ. ನಯ್ಟ್ರೋಜನ್ ಗೊಬ್ಬರವನ್ನು ಹಾಕಬೇಕಾದ ಕಂತುಗಳು, ಪ್ರತಿ ಕಂತಿನಲ್ಲಿ ಬಳಸಬೇಕಾದ ಪ್ರಮಾಣ ಮತ್ತು ಯಾವ ಸಮಯದಲ್ಲಿ ಗೊಬ್ಬರವನ್ನು ಬೆಳೆಗೆ ಕೊಡಬೇಕು ಎಂಬುದು ಗದ್ದೆಯಿಂದ ಗದ್ದೆಗೆ ಬದಲಾಗುತ್ತದೆ.
ಮಣ್ಣಿನ ಗುಣ, ಮಣ್ಣಿನ ಪಲವತ್ತತೆ, ನೆಲ್ಲಿನ ತಳಿ, ಬೆಳೆಯ ಬೆಳವಣಿಗೆ ಹಂತ, ಅನುಸರಿಸಿದ ಬೇಸಾಯದ ಪದ್ದತಿಗಳು ಮುಂತಾದವುಗಳ ಮೇಲೆ ಗೊಬ್ಬರ ಕೊಡುವಿಕೆಯನ್ನು ತೀರ್ಮಾನಿಸಲಾಗುವುದು. ಗದ್ದೆ ಇಲ್ಲವೇ ತೋಟದಂತಹ ಚಿಕ್ಕ ಹರವಿನಲ್ಲಿ ಹಚ್ಚಲ್ಪಟ್ಟ ಒಂದು ಬೆಳೆಯ ಬೇರೆ ಬೇರೆ ಹಂತಗಳಲ್ಲಿ ಅದಕ್ಕೆ ಬೇಕಾದಶ್ಟು ರಸಗೊಬ್ಬರ, ಆರಯ್ಕೆಯನ್ನು ಬೇಡಿಕೆಗೆ ತಕ್ಕಂತೆ ನಿರ್ದಿಶ್ಟವಾದ ಹೊತ್ತಿನಲ್ಲಿ ಕೊಡುವ ಹೊಲಬನ್ನು ಎಡೆ ತಕ್ಕನಾದ ಪೊರೆಯುವಿಕೆ (site-specific nutrient management) ಎನ್ನಲಾಗುವುದು. ಈ ಹೊಲಬನ್ನು ಪಿಲಿಪಯ್ನ್ಸ್ ನಾಡಿನಲ್ಲಿರುವ “ ಇಂಟರ್ ನ್ಯಾಶನಲ್ ರಯ್ಸ್ ರಿಸರ್ಚ್ ಇನ್ ಸ್ಟಿಟ್ಯೂಟ್ (IRRI)” ಬೇಸಾಯದರಿಗರು ಒರೆಹಚ್ಚಿ ನೋಡಿ ಬೆಳೆಸಿದ್ದಾರೆ.
ರಯ್ತರು ತಮಗರಿವಿಲ್ಲದಂತೆ ಬೆಳೆಯ ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರಗಳನ್ನು ಹಾಕಿಬಿಡುತ್ತಾರೆ. ನಯ್ಟ್ರೋಜನ್ ಹೆಚ್ಚಾಗಿ ಉಣಿಸಲ್ಪಟ್ಟ ಗಿಡದ ಎಲೆ ಮತ್ತು ತಾಳುಗಳು ಎಲ್ಲೆಮೀರಿ ಹುಲುಸಾಗಿ ಬೆಳೆಯುತ್ತವೆ. ಎಸರು ತುಂಬಿಕೊಂಡ(succulent) ಮೆತ್ತನೆಯ ಎಲೆ ಮತ್ತು ತಾಳಿನ ಮೇಲೆ ಹುಳ ಹಾಗೂ ಬೂಜು ಸುಲಬವಾಗಿ ದಾಳಿಯಿಡುತ್ತವೆ. ಹುಳ ಮತ್ತು ರೋಗದ ಕಾಟ ಇಮ್ಮಡಿಸುತ್ತದೆ. ಇದನ್ನು ತಡೆಯಬೇಕಾದರೆ ಬೆಳೆಯ ಬೇರೆ ಬೇರೆ ಹಂತಗಳಲ್ಲಿ ನಯ್ಟ್ರೋಜನ್ ನ ಬೇಡಿಕೆ ಎಶ್ಟು ಎಂಬುದರ ಅಂದಾಜು ರಯ್ತರಿಗೆ ತಿಳಿದಿರಬೇಕಾಗುತ್ತದೆ.
ಬೆಳೆಯರಿಗರು ಬೆಳೆಯ ನಯ್ಟ್ರೋಜನ್ ಬೇಡಿಕೆಯನ್ನು ನಿಕರವಾಗಿ ಅಳೆಯಬಲ್ಲ ಹೊಲಬುಗಳನ್ನು ಕಂಡುಹಿಡಿದಿದ್ದಾರೆ. ಎತ್ತುಗೆಗೆ ಗಿಡ ಗೂಡುಕಟ್ಟು ಬಗೆಯರಿಕೆ (plant tissue analysis) ಯನ್ನು ತೆಗೆದುಕೊಳ್ಳೋಣ. ಜೊಹಾನ್ ಜೆಲ್ದಾಹ್ಲ್ (Johan Kjeldahl) ಕಂಡುಹಿಡಿದ ಜೆಲ್ದಾಹ್ಲ್ ಅರಗುಹ(Kjeldahl digestion) ಹೊಲಬಿನಲ್ಲಿ ಗಿಡದ ಎಲೆ, ಟೊಂಗೆ, ತೆನೆ ಇಲ್ಲವೇ ಇಡೀ ಗಿಡವನ್ನು ಸಲ್ ಪ್ಯೂರಿಕ್ ಹುಳಿ(sulfuric acid)ಯಲ್ಲಿ ಕರಗಿಸಿ ಕುದಿಸಲಾಗುವುದು. ಕೊನೆಯಲ್ಲಿ ಸಿಗುವ ಉಳಿಕೆ ಹೆಚ್ಚಾಗಿ ಅಮ್ಮೋನಿಯಂ ಸಲ್ಪೇಟ್ ಆಗಿರುತ್ತದೆ. ಈ ಉಳಿಕೆಗೆ ಸೋಡಿಯಂ ಹೈಡ್ರಾಕ್ಸಯ್ಡ್ (NaOH) ಅನ್ನು ಬೆರೆಸಿ ಕಾಯಿಸಿದಾಗ ಅಮ್ಮೋನಿಯಾ (NH3) ಗಾಳಿ ಹೊಮ್ಮುತ್ತದೆ. ಹೊಮ್ಮಿದ ಅಮ್ಮೋನಿಯಾವನ್ನು ಯಾವುದಾದರೂ ಹುಳಿಯಲ್ಲಿ ಬೆರೆಸಿ ಅದರ ಪ್ರಮಾಣವನ್ನು ಅಳೆಯಲಾಗುವುದು.
ಅಮ್ಮೋನಿಯಾದಲ್ಲಿ ನಯ್ಟ್ರೋಜನ್ ಸೇರಿಕೊಂಡಿರುವುದರಿಂದ ಗಿಡದ ಬಾಗದಿಂದ ಪಡೆದ ಅಮ್ಮೋನಿಯಾವನ್ನು ಅಳೆದಾಗ ನಯ್ಟ್ರೋಜನ್ ನ ಪ್ರಮಾಣ ಗಿಡದ ಬಾಗದಲ್ಲಿ ಎಶ್ಟಿದೆ ಎನ್ನುವುದನ್ನು ಲೆಕ್ಕ ಹಾಕಬಹುದು. ಈ ರೀತಿಯ ಬಗೆಯರಿಕೆಗಳನ್ನು ಮಾಡಲು ಎಲ್ಲಾ ತರದ ಸವಲತ್ತುಗಳನ್ನು ಹೊಂದಿದ ಅರಕೆಮನೆ(laboratory)ಗಳು, ನುರಿತ ಅರಿಗರು ಬೇಕಾಗುವುದಲ್ಲದೆ ತುಂಬಾ ಹೊತ್ತು ಹಿಡಿಯುತ್ತದೆ. ಸರಳವಾದ ವಿದಾನಗಳನ್ನು ಬಳಸಿಕೊಂಡು ಬೆಳೆಯ ನಯ್ಟ್ರೋಜನ್ ಬೇಡಿಕೆಯನ್ನು ಪತ್ತೆ ಹಚ್ಚುವುದು ಹೇಗೆ?
ಗಿಡಗಳಲ್ಲಿ ಬೆಳಕಿನ ಒಂದುಗೆಯಲ್ಲಿ (photosynthesis) ನೆರವಾಗಬಲ್ಲ ಎಲೆಹಸಿರು(cholorphyll) ಅಣುಕೂಟದ ಕಟ್ಟಣೆಗೆ ನಯ್ಟ್ರೋಜನ್ ಬೇಕಾಗುತ್ತದೆ. ಒಂದು ಎಲೆಹಸಿರಿನ ಅಣುಕೂಟದಲ್ಲಿ ನಾಲ್ಕು ನಯ್ಟ್ರೋಜನ್ ಅಣುಗಳು ಜೋಡಿಸಲ್ಪಟ್ಟಿರುತ್ತವೆ. ಎಲೆಗಳಲ್ಲಿ ಈ ಎಲೆಹಸಿರು ದಟ್ಟಯಿಸಿದಾಗ ಎಲೆಗಳು ಕಡುಹಸಿರು ಬಣ್ಣಕ್ಕೆ ತಿರುಗುತ್ತವೆ. ಎಲೆಹಸಿರಿನ ಮಟ್ಟ ಕುಗ್ಗಿದಾಗ ಎಲೆಗಳ ಹಸಿರುಬಣ್ಣ ಮಾಸುತ್ತದೆ. ನಯ್ಟ್ರೋಜನ್ ಮತ್ತು ಎಲೆಹಸಿರಿನ ನಡುವೆ ನೇರ ನಂಟಿರುವುದು ನಮಗೆ ತಿಳಿದಿದೆ. ಹಾಗೆಯೇ ಎಲೆಹಸಿರು ಮತ್ತು ಎಲೆಗಳ ಬಣ್ಣಕ್ಕೂ ನೇರ ನಂಟಿದೆ. ಇವೆರಡು ನಂಟಸ್ತಿಕೆಗಳನ್ನು ಒಟ್ಟಿಗೆ ಬೆಸೆದಾಗ ಎಲೆಗಳ ಹಸಿರುಬಣ್ಣದ ಕಡುಪಿಗೂ ಎಲೆಗಳ ನಯ್ಟ್ರೋಜನ್ ಮಟ್ಟಕ್ಕೂ ನಂಟಿದೆ ಎನ್ನುವುದು ನಿಕ್ಕಿಯಾಗುತ್ತದೆ.
ನಯ್ಟ್ರೋಜನ್ ಪ್ರಮಾಣ ತಕ್ಕ ಮಟ್ಟದಲ್ಲಿದ್ದಾಗ ಎಲೆಹಸಿರು ಅಣುಕೂಟಗಳು ಕೂಡಾ ಹೆಚ್ಚಿದ್ದು, ಅವು ಬೆಳಕಿನ ಒಂದುಗೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಗಿಡವು ತನಗೆ ಬೇಕಿರುವ ಸಕ್ಕರೆ, ಗಂಜಿ ಮತ್ತಿತರ ಉಣಿಸನ್ನು ಒದಗಿಸಿಕೊಂಡು ಚೆನ್ನಾಗಿ ಬೆಳೆಯಬಲ್ಲದು. ನಯ್ಟ್ರೋಜನ್ ಮಟ್ಟ ಕುಸಿದಾಗ ಗಿಡದ ಬೆಳವಣಿಗೆಯೂ ಕುಗ್ಗುವುದು. ಎಲೆಗಳಲ್ಲಿರುವ ಎಲೆಹಸಿರನ್ನು ಎಲೆಹಸಿರು ಅಳತೆಗೂಡು(chlorophyll meter) ಬಳಸಿ ಅಳೆಯಬಹುದು. ಈ ಅಳತೆಗೂಡಿಗಿಂತ ಬೆಲೆಯಲ್ಲಿ ಅಗ್ಗವಾದ ಮತ್ತು ಬಳಕೆಯಲ್ಲಿ ರಯ್ತಸ್ನೇಹಿಯಾದ ಚಳಕವೇ ಎಲೆಬಣ್ಣ ತಿಳಿತಿಟ್ಟ ಅತವಾ ಎಲೆಬಣ್ಣ ನಕಾಶೆ.
ಎಲೆಬಣ್ಣ ತಿಳಿತಿಟ್ಟದ ಕುರಿತು:
ಪಿಲಿಪೈನ್ಸ್ ನಲ್ಲಿರುವ “ ಇಂಟರ್ ನ್ಯಾಶನಲ್ ರಯ್ಸ್ ರಿಸರ್ಚ್ ಇನ್ ಸ್ಟಿಟ್ಯೂಟ್ (IRRI) ” ನಲ್ಲಿ ನೆಲ್ಲಿನ ಬೇಸಾಯಕ್ಕೆ ನೆರವಾಗುವಂತಹ ಅರಕೆಗಳನ್ನು ಕಯ್ಗೊಳ್ಳಲಾಗುತ್ತದೆ. ಎಲೆಬಣ್ಣ ತಿಳಿತಿಟ್ಟವನ್ನು ಜಪಾನ್ ಅರಕೆಗಾರರು 1989ರಲ್ಲಿ ಕಂಡುಹಿಡಿದರು. ಇಂಟರ್ ನ್ಯಾಶನಲ್ ರಯ್ಸ್ ರಿಸರ್ಚ್ ಇನ್ ಸ್ಟಿಟ್ಯೂಟ್ ನ ಬೆಳೆಯರಿಗರು ಜಪಾನ್ ಮೂಲದ ಎಲೆಬಣ್ಣ ತಿಳಿತಿಟ್ಟದ ಚಳಕವನ್ನು ಇನ್ನಶ್ಟು ಬೆಳೆಸಿ ಬತ್ತದ ಬೇಸಾಯಕ್ಕೆ ಬಳಸಲು ಅಣಿಗೊಳಿಸಿದ್ದಾರೆ. ಒಳ್ಳೆಯ ಗುಣಮಟ್ಟದ ಪ್ಲಾಸ್ಟಿಕ್ಕನ್ನು ಉಪಯೋಗಿಸಿ ಮಾಡಿದ ಎಲೆಬಣ್ಣ ತಿಳಿತಿಟ್ಟದ ಮೇಲೆ ನಾಲ್ಕು ಇಲ್ಲವೇ ಆರು ಹಸಿರು ಬಣ್ಣದ ಪಟ್ಟಿಗಳಿದ್ದು, ಮೊದಲಿನ ತಿಳಿಹಸಿರು ಬಣ್ಣದಿಂದ ಹಿಡಿದು ಕೊನೆಯ ಕಡುಹಸಿರು ಬಣ್ಣದ ಪಟ್ಟಿಯವರೆಗೂ ಪಟ್ಟಿಗಳನ್ನು ಓರಣವಾಗಿ ಕೂಡಿಸಲಾಗಿರುತ್ತದೆ.
ಬಳಸುವ ಬಗೆ:
1) ನಾಟಿಯಾದ 14 ದಿನಗಳ ಬಳಿಕ ಗದ್ದೆಯಲ್ಲಿ 10 ಆರೋಗ್ಯವಂತ ಬತ್ತದ ಗಿಡಗಳನ್ನು ಆಯ್ದುಕೊಳ್ಳಿ.
2) ಗಿಡದಲ್ಲಿ ಮೇಲು ತುದಿಯಲ್ಲಿರುವ ಅಗಲವಾದ ಆರೋಗ್ಯವಾದ ಎಲೆಯನ್ನು ಆರಿಸಿ. ಆ ಎಲೆಯ ನಡುಬಾಗದ ಪಕ್ಕದಲ್ಲಿ ಪಟ್ಟಿಯನ್ನಿಡಿ. ನಕಾಶೆಯ ಪಟ್ಟಿಗಳ ಬಣ್ಣಕ್ಕೂ ಎಲೆಯ ಬಣ್ಣಕ್ಕೂ ಹೋಲಿಸಿ ನೋಡಿ, ಎಲೆಯ ಬಣ್ಣ ಯಾವ ಪಟ್ಟಿಗೆ ಹೋಲಿಕೆಯಾಗುವುದು ಎಂಬುದನ್ನು ತೀರ್ಮಾನಿಸಿ. ಎಲೆಯನ್ನು ನೇಸರ ಬೆಳಕಿಗೆ ಒಡ್ಡದೆ ನಿಮ್ಮ ನೆರಳಿನಲ್ಲಿ ಹಿಡಿದು ನೋಡಬೇಕು. ಬೆಳಿಗ್ಗೆ 8 ರಿಂದ 10 ಗಂಟೆಯವರೆಗಿನ ಹೊತ್ತು ಈ ಕೆಲಸಕ್ಕೆ ಸರಿಯಾದುದು.
3) ಬಣ್ಣದ ಪಟ್ಟಿಗಳಿಗೆ ಬೇರೆ ಬೇರೆ ಸಂಕೆಗಳನ್ನು ನೀಡಲಾಗಿರುತ್ತದೆ. ಯಾವ ಬಣ್ಣದ ಪಟ್ಟಿಗಿಂತ ಎಲೆಯ ಬಣ್ಣ ತಿಳಿಯಾಗಿದಲ್ಲಿ ಗಿಡಕ್ಕೆ ನಯ್ಟ್ರೋಜನ್ ಕೊರತೆ ಇದೆ ಎಂದು ನಿರ್ದರಿಸಬೇಕೋ, ಆ ಬಣ್ಣದ ಪಟ್ಟಿಯನ್ನು ಗುರುತಿಸುವ ಸಂಕೆಯನ್ನು ಎಲ್ಲೆಸಂಕೆ (critical value) ಎಂದು ಇಟ್ಟುಕೊಳ್ಳಬಹುದು. ಎತ್ತುಗೆಗೆ ಮುಂಗಾರಿನ ಬತ್ತದ ಗಿಡಕ್ಕೆ “4” ಎಲ್ಲೆಸಂಕೆಯಾಗಿರುತ್ತದೆ.
4) ಹತ್ತು ಎಲೆಗಳಲ್ಲಿ ಆರು ಇಲ್ಲವೇ ಅದಕ್ಕಿಂತ ಹೆಚ್ಚಿನ ಎಲೆಗಳು ಎಲ್ಲೆಸಂಕೆಯ ಪಟ್ಟಿಗಿಂತ ಮಾಸಲು ಬಣ್ಣದಲ್ಲಿದ್ದರೆ ಬೆಳೆಯರಿಗರು ಶಿಪಾರಸು ಮಾಡಿದ ಪ್ರಮಾಣದಲ್ಲಿ ಬೆಳೆಗೆ ನಯ್ಟ್ರೋಜನ್ ಅನ್ನು ಯೂರಿಯಾ ಇಲ್ಲವೇ ಬೇರೆ ರಸಗೊಬ್ಬರಗಳ ಮೂಲಕ ಕೊಡಿರಿ.
ಎತ್ತುಗೆ : ಮುಂಗಾರು ಬೆಳೆಯ ಬತ್ತಕ್ಕೆ ಎಲ್ಲೆಸಂಕೆ 4 ಕ್ಕಿಂತ ಹೆಚ್ಚಿನ(ಪ್ರತಿ ಹತ್ತು ಎಲೆಗಳಲ್ಲಿ ಆರು ಅತವಾ ಹೆಚ್ಚು) ಎಲೆಗಳು ತಿಳಿಹಸಿರು ಬಣ್ಣದಲ್ಲಿದ್ದರೆ ಎಕರೆಗೆ 11.2 ಕೆ.ಜಿ ನಯ್ಟ್ರೋಜನ್, ಅಂದರೆ ಸುಮಾರು ಇಪ್ಪತ್ತಯ್ದು ಕೆ.ಜಿ. ಯೂರಿಯಾ ರಸಗೊಬ್ಬರವನ್ನು ಬೂಮಿಗೆ ಕೊಡಬೇಕಾಗುವುದು.
5) ಸುಮಾರು 110 ರಿಂದ 130 ದಿನಗಳ ಬತ್ತದ ಬೆಳೆಗೆ ಪ್ರತಿ ವಾರವೂ ಎಲೆಗಳ ಹಸಿರಿನ ಕಡುಪನ್ನು ಅಳೆದು ನೋಡುತ್ತಿರಬೇಕು. ಗುರುತಿಸಿದ ಮಟ್ಟಕ್ಕಿಂತ ಬಣ್ಣ ಮಾಸಿದಲ್ಲಿ ಬೆಳೆಗೆ ಗೊಬ್ಬರ ನೀಡುವುದನ್ನು ಹೊಡೆ ಬಿಚ್ಚುವಿಕೆ (panicle exsertion)ಯ ವರೆಗೂ ಮುಂದುವರಿಸಬೇಕು. ಪ್ರತಿ ಸಲವೂ ಎಲೆಹಸಿರನ್ನು ಅಳೆಯಲು ಬೇರೆ ಬೇರೆ ಎಡೆಗಳಲ್ಲಿ ಗಿಡಗಳನ್ನು ಆಯ್ದುಕೊಳ್ಳುವುದು ಒಳಿತು.
ಸುಮಾರು ಎಕರೆಗೆ 105 ಕೆ.ಜಿ ಯೂರಿಯಾವನ್ನು ನಾಲ್ಕು ಕಂತುಗಳಲ್ಲಿ ಕೊಟ್ಟು ಪಡೆಯಬಹುದಾದಶ್ಟು ಇಳುವರಿಯನ್ನು ಒಟ್ಟು 53 ಕೆ.ಜಿ ಯೂರಿಯಾ ಗೊಬ್ಬರವನ್ನು ಬೆಳೆಗೆ ಎಲೆಹೊಗರು ತಿಳಿತಿಟ್ಟವನ್ನು ಬಳಸಿಕೊಂಡು ಬೆಳೆಗೆ “ ಹಸಿವಾದಾಗ “ ನೀಡಿದಲ್ಲಿ ಪಡೆಯಬಹುದು ಎಂದು ಅರಿಗರು ತಮ್ಮ ಅರಕೆಗಳಲ್ಲಿ ಸಾದಿಸಿದ್ದಾರೆ.
ಬತ್ತದ ಬೆಳೆಗೆಂದು ಎಲೆಹೊಗರು ತಿಳಿತಿಟ್ಟವನ್ನು ಅಬಿವ್ರುದ್ದಿಗೊಳಿಸಲಾಯಿತಾದರೂ ಈಗ ಈ ಚಳಕ ಮುಸುಕಿನ ಜೋಳ ಮತ್ತು ಗೋದಿ ಬೆಳೆಗಳಿಗೆ ಒಪ್ಪುವಂತಹದ್ದಾಗಿದೆ. ಕಬ್ಬು, ಆಲೂಗಡ್ಡೆ, ಮರಗೆಣಸು, ಹತ್ತಿ ಮುಂತಾದ ಬೆಳೆಗಳಲ್ಲಿಯೂ ಬಳಸುವಂತೆ ತಿಳಿತಿಟ್ಟವನ್ನು ಸಜ್ಜುಗೊಳಿಸಲಾಗುತ್ತಿದೆ.
ಎಲೆಬಣ್ಣದ ತಿಳಿತಿಟ್ಟವು ಬೆಳೆಯ ನಯ್ಟ್ರೋಜನ್ ಕೊರತೆಯನ್ನು ತಿಳಿಯಪಡಿಸುವ ಒಂದು ಚಳಕ ಅಶ್ಟೆ. ರಾಸಾಯನಿಕ ಹಾಗೂ ಸಾವಯವ ಮೂಲದ ಗೊಬ್ಬರಗಳನ್ನು ಹದವಾಗಿ ಬಳಸಿಕೊಂಡು ಬೆಳೆಯ ನಯ್ಟ್ರೋಜನ್ ಕೊರತೆಯನ್ನು ನೀಗಿಸುವ ಹೊಣೆ ಒಕ್ಕಲಿಗನದ್ದು. ಅದು ಒಕ್ಕಲಿಗನ ಗೇಯ್ಮೆ, ಅನುಬವ ಹಾಗೂ ಜಾಣ್ಮೆಯ ಮೇಲೆ ನಿಂತಿರುತ್ತದೆ.
(ಮಾಹಿತಿ ಸೆಲೆ: pscipub.com/Journals, http://www.nitrogenparameters.com/ home.html, www.ncbi.nlm.nih.gov, Agronomy of field crops – S.R. Reddy)
(ತಿಟ್ಟ ಸೆಲೆ: irri.org/news)
ಇತ್ತೀಚಿನ ಅನಿಸಿಕೆಗಳು