ಮಿರಜಕರ್ ಕಂಪೌಂಡು ಮತ್ತು ಕಮಲಮ್ಮಜ್ಜಿ
ಕಮಲಮ್ಮ ಕಂಪೌಂಡ್ ಅಂದ್ರೆ ಮಿರಜಕರ್ ಕಂಪೌಂಡ್, ಎಂಬುದು ಸುಮಾರು 5 ರಿಂದ 6 ಎಕರೆ ವಿಸ್ತಾರದಲ್ಲಿ ಒಂದು ದೊಡ್ಡ ಮನೆ ಮತ್ತದರ ಸುತ್ತಲೂ ಇರೋ ಸಣ್ಣ ಸಣ್ಣ ಸುಮಾರು 15 ಮನೆಗಳು ಒಂದೇ ಕಂಪೌಂಡಿನಲ್ಲಿರುವಂತೆ ಕಟ್ಟಲ್ಪಟ್ಟಿದ್ದ ದೊಡ್ಡದಾದ ಜಾಗ. ಮನೆಯ ಒಡೆಯರು ತಮ್ಮ ಮಕ್ಕಳೊಂದಿಗೆ ದೊಡ್ಡ ಮನೆಯಲ್ಲಿ ವಾಸವಾಗಿ ಕಂಪೌಂಡಿನ ಸುತ್ತಲೂ ಇರೋ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಕಂಪೌಂಡಿನಲ್ಲಿ ಒಂದು ದೊಡ್ಡ ಸೇದುಗುಣಿ ಇರೋ, ಎಂದೂ ಬತ್ತದ ಸಿಹಿ ನೀರ ಬಾವಿ. ಎಲ್ಲ ಮನೆಗಳಿಗೂ ಬಾವಿ ನೀರೇ ಮೂಲ. ಕಂಪೌಂಡಿನಲ್ಲಿ ಸುಮಾರು 25 ದೊಡ್ಡ ತೆಂಗಿನ ಮರಗಳಿದ್ದವು ಮತ್ತು ಒಂದೆರಡು ಬಂಗಾಳಿ ಮರಗಳು ಇದ್ದು ಕಂಪೌಂಡ್ ಆವರಣವನ್ನು ಬಿರುಬೇಸಿಗೆಯಲ್ಲೂ ತಣ್ಣಗೆ ಇಡುತ್ತಿದ್ದವು. ಸುತ್ತಲಿನ ಮನೆಗಳಿಗೆ ಬಾಡಿಗೆಗೆ ಬಂದವರು ತುಂಬಾನೇ ಹಾಸುಹೊಕ್ಕಾಗಿದ್ದುಕೊಂಡು ಸ್ವಲ್ಪ ವರ‍್ಶಗಳಶ್ಟು ದಿನ ಇದ್ದು, ವರ‍್ಗಾವಣೆಯಾಗಿಯೋ, ಸ್ವಂತ ಮನೆ ಕಟ್ಟಿಸಿಕೊಂಡೋ ಹೋಗುತ್ತಿದ್ದರು. ಮತ್ತೆ ಹೊಸದಾಗಿ ಯಾವುದಾದರೂ ಹೊಸ ಸಂಸಾರ ಅಲ್ಲಿ ಬಾಡಿಗೆಗೆ ಬರುತ್ತಿತ್ತು.
ಮನೆಯ ಒಡೆಯರು ಕ್ರಿಶ್ಚಿಯನ್ನರು. ಯೇಸುವಿನ ಪರಮ ಆರಾದಕರು. ದಿನವೂ ಮನೆಯಲ್ಲಿ ಪ್ರಾರ‍್ತನೆ, ಸಂಗೀತ, ಕೀರ‍್ತನೆಗಳು ಜರುಗುತ್ತಲೇ ಇರುತ್ತಿದ್ದವು. ಪ್ರತಿ ರವಿವಾರ ಮನೆಯವರೆಲ್ಲ ತಪ್ಪದೇ ಚರ‍್ಚ್ ಗೆ ಹೋಗಿ ಪ್ರಾರ‍್ತಿಸಿ ಬರುತ್ತಿದ್ದರು. ಬಾಡಿಗೆ ಮನೆಗಳನ್ನು ಯಾವ ಜಾತಿಯವರನ್ನೂ ಲೆಕ್ಕಿಸದೇ ಎಲ್ಲ ದರ‍್ಮದವರಿಗೂ ಕೊಟ್ಟಿದ್ದರಿಂದ ಅಲ್ಲಿ ಒಂದು ರೀತಿಯ ಜಾತಿಯ ಸಮನ್ವಯತೆ ಎದ್ದು ಕಾಣುತ್ತಿತ್ತು. ಪ್ರತಿ ಮನೆಯಲ್ಲೂ ವಿಶೇಶ ಟಿಪನ್ ಇದ್ದಾಗ ಕೆಲವೊಮ್ಮೆ ಎಲ್ಲ ಮನೆಗಳಿಗೂ ಪ್ಲೇಟ್ ಹಂಚಲ್ಪಡುತ್ತಿದ್ದವು. ಎಲ್ಲ ದರ‍್ಮ ಸಹಿಶ್ಣುತೆಯ ಬಾವ ಅಲ್ಲಿ ಕಾಣುತ್ತಿತ್ತು. ಎಲ್ಲ ಮನೆಯ ಸಣ್ಣ ಹುಡುಗರು ಸೇರಿ ಒಂದು ಸಣ್ಣ ತಂಡವೇ ಆಗುತ್ತಿತ್ತು. ಶನಿವಾರ ಮದ್ಯಾಹ್ನದಿಂದ ರವಿವಾರ ಸಂಜೆಯವರೆಗೂ ಕಂಪೌಂಡ್ ತುಂಬ ಈ ಚಿಕ್ಕ ಮಕ್ಕಳ ಆಟ, ಗೌಜು ಗದ್ದಲ. ಹುಡುಗರೆಲ್ಲ ಸೇರಿ ಆಟವಾಡುವಾಗ ಮಾಲೀಕರಾರೂ ಚಕಾರವೆತ್ತುತ್ತಿರಲಿಲ್ಲ. ಮಕ್ಕಳು ಹಾಗೇ ಗದ್ದಲ ಮಾಡಿ ಆಟವಾಡುತ್ತಿದ್ದರೇನೇ ಚೆನ್ನ ಎಂದು ಕುಶಿಪಡುತ್ತಿದ್ದರು. ಅತೀ ಕೀಟಲೆ, ಜಗಳವಾಗುತ್ತಿದ್ದಲ್ಲಿ ಮಾತ್ರ ಕರೆದು ಪ್ರೀತಿಯಿಂದ ಗದರುತ್ತಿದ್ದರು, ತಿಳಿ ಹೇಳುತ್ತಿದ್ದರು. ಬಡಿಯುವದಂತೂ ಸುಳ್ಳು. ತಮ್ಮ ಮೊಮ್ಮಕ್ಕಳೂ ಆ ಗುಂಪಿನಲ್ಲಿರುತ್ತಿದ್ದರು. ಸೋಮವಾರದಿಂದ ಮತ್ತೆ ಅದೇ ಪ್ರಕಾರ ತಮ್ಮ ತಮ್ಮ ಶಾಲೆಗೆ ಹೊರಟುಬಿಡುತ್ತಿದ್ದರು.
ಇದೇ ಗುಂಪಿನಲ್ಲಿ ನಾನೂ ಇದ್ದದ್ದು. ಮತ್ತೆಲ್ಲರಿಗಿಂತ ತುಸು ದೊಡ್ಡವ. ಚಿಕ್ಕ ಮಕ್ಕಳಲ್ಲೇ ದೊಡ್ಡವ. ಎಲ್ಲರನ್ನೂ ಕರೆದುಕೊಂಡು ಸೈಕಲ್ ಆಟ, ಲಗೋರಿ, ಪುಟ್ಬಾಲ್, ಕ್ರಿಕೆಟ್ ಆಟಗಳನ್ನು ಆಡುತ್ತಿದ್ದೆವು. ಕಂಪೌಂಡ್ ಗೆ ಹತ್ತಿಕೊಂಡು ಹೊರಮಗ್ಗುಲಲ್ಲಿ ರಸ್ತೆಗೆ ಮುಕಮಾಡಿ ಅಂಗಡಿಗಳಿದ್ದವು. ಸಾದಾ ಅಂಗಡಿಗಳಾಗಿದ್ದು ಕೆಲ ಅಂಗಡಿಗಳ ಹಿಂದಿನ ಬಾಗಿಲು ಕಂಪೌಂಡಿನೊಳಗೆ ತೆರೆದುಕೊಳ್ಳುವಂತಿತ್ತು. ಅದೊಮ್ಮೆ ಸೋಡಾ ಅಂಗಡಿಯಲ್ಲಿನ ಎಶ್ಟೋ ಸೋಡಾ ಬಾಟಲಿಗಳನ್ನು ಒಡೆದು ಅದರಲ್ಲಿನ ಗೋಲಿಯನ್ನು ಕಳವುಮಾಡಿದ್ದೆವು. ಮರುದಿನ ಅಂಗಡಿಯವನಿಗೆ ಮಾಲೀಕರೇ ನಶ್ಟ ತುಂಬಿಕೊಟ್ಟ ನೆನಪು. ನಮ್ಮನ್ನೆಲ್ಲ ಕರೆದು ಕುಳ್ಳಿರಿಸಿ ಅವನಿಗಾದ ಹಾನಿಯ ಬಗ್ಗೆ ತಿಳಿಹೇಳಿ ಹಾಗೆಲ್ಲ ಮಾಡಬಾರದೆಂದು ತಿಳುವಳಿಕೆ ನೀಡಿದ್ದರು ಕಮಲಮ್ಮಜ್ಜಿ. ಒಂದೊಮ್ಮೆ ಸೈಕಲ್ ಡಿಕ್ಕಿ ಹೊಡಿಸಿ ಆರಾಮ ಕುರ‍್ಚಿಯಲ್ಲಿ ಏನನ್ನೋ ಒದುತ್ತ ಕುಳಿತಿದ್ದ ಅಜ್ಜಿಯನ್ನು ಬೀಳಿಸಿಬಿಟ್ಟಿದ್ದೆ. ಆಕೆಯನ್ನು ಎತ್ತಲು ಐದಾರು ಜನ ಬರಬೇಕಾಯಿತು. ನನ್ನ ಅಮ್ಮ ನನ್ನ ಕೆನ್ನೆ ಬಾಯುವಂತೆ ರಪ್ ರಪ್ ಅಂತ ಹೊಡೆತ ಕೊಟ್ಟಿದ್ದರು. ಅಜ್ಜಿ ನಾ ಅಳುವುದನ್ನು ನೋಡಿ ನನ್ನವ್ವನನ್ನು ಕರೆಯಿಸಿ ನನ್ನನ್ನು ಹೊಡೆದಿದ್ದಕ್ಕೆ ಚೆನ್ನಾಗಿ ಗದರಿದ್ದರು. ಮಕ್ಕಳು ತಾನೇ ತಪ್ಪು ಮಾಡೋದು ಎನ್ನುವುದು ಅವರ ವಾದ. ಅವು ಬೇಕಂತಲೇ ಮಾಡಿರುವುದಿಲ್ಲ ಎನ್ನುವುದು ಅಜ್ಜಿಯ ಸಮಜಾಯಿಶಿ.
ಕಮಲಮ್ಮಜ್ಜಿ, ಕಂಪೌಂಡಿನ ಮಾಲೀಕರ ಹೆಂಡತಿ. ಮಾಲೀಕರ ಹೆಸರನ್ನು ಮರೆತಿರುವೆ. ಅವರು ತೀರಿ ಹೋಗಿ ತುಂಬಾ ವರ‍್ಶಗಳಾಗಿದ್ದವು. ಆ ನಂತರದಲ್ಲಿ ಕಮಲಮ್ಮಜ್ಜಿಯೇ ಎಲ್ಲ ಮಕ್ಕಳ ಜವಾಬ್ದಾರಿ ವಹಿಸಿಕೊಂಡಿದ್ದರು. ಮಕ್ಕಳು ಎಲ್ಲರೂ ಕೆಲ ಸರ‍್ಕಾರಿ ಕಲಿಮನೆ ಮತ್ತು ಕಾಲೇಜುಗಳಲ್ಲಿ ಶಿಕ್ಶಕರಾಗಿ ಸುತ್ತಮುತ್ತಲ ಊರುಗಳಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ತಾಯಿಯನ್ನು ತುಂಬಾ ಚೆನ್ನಾಗೇ ನೋಡಿಕೊಳ್ಳುತ್ತಿದ್ದರು. ಸೊಸೆಯಂದಿರೂ ಓದಿಕೊಂಡವರಾಗಿದ್ದು ಅವರೂ ಸಹ ಅಜ್ಜಿಗೆ ಬಹಳ ಗೌರವ ಕೊಡುತ್ತಿದ್ದರು. ದಿನವೂ ಏನಾದರೊಂದು ಕಾರ‍್ಯಕ್ರಮ ಜರುಗೇ ಇರುತ್ತಿತ್ತು. ಹಾಡಿಗೆ, ಸಂಗೀತಕ್ಕೆ ಬರವೇ ಇರುತ್ತಿರಲಿಲ್ಲ. ನನಗೆ, ನನ್ನ ವಾರಿಗೆಯ ಹುಡುಗರಿಗೆಲ್ಲ ಆಗೆಲ್ಲ ಕುಶಿಯೋ ಕುಶಿ. ಕಮಲಮ್ಮಜ್ಜಿ ನಡೆಸಿಕೊಡುತ್ತಿದ್ದ ಸಂಗೀತಕ್ಕೆ ನಾವೆಲ್ಲ ಕೂತು ಚಪ್ಪಾಳೆ ತಟ್ಟುತ್ತ, ಅಜ್ಜಿ ಹೇಳಿದ ಹಾಡಿನಂತೆ ಹಾಡುತ್ತಿದ್ದೆವು. ಅವೆಲ್ಲ ಹಾಡುಗಳು ಸಂಜೆ ಅವರೆಲ್ಲ ಕೂಡಿ ಹಾಡುವ ಯೇಸುಸ್ವಾಮಿಯ ಕೀರ‍್ತನೆಗಳಾಗಿರುತ್ತಿದ್ದವು. ಕನ್ನಡಕ್ಕೆ ಯಾರೋ ಅನುವಾದಿಸಿದ ಹಾಡುಗಳಾಗಿದ್ದು ಸುಮದುರ ಸ್ವರಗಳನ್ನು ಅವುಗಳಿಗೆ ಹೊಂದಿಕೆಯಾಗುವಂತೆ ಜೋಡಣೆಯಾಗಿರುತ್ತಿತ್ತು. ಮನೆಯಲ್ಲಿ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಊರಿಂದ ಬಂದ ನೆಂಟರಿಶ್ಟರು ಜೊತೆಗೆ ಕಂಪೌಂಡಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಅವರ ಮನೆಯಾಳುಗಳು ಜೊತೆಗೆ ನಾವು ಕಂಪೌಂಡ್ ನಲ್ಲಿಯ ಉಳಿದ ಬಾಡಿಗೆಗೆ ಇದ್ದ ಮನೆಯವರ ಮಕ್ಕಳು ಎಲ್ಲರೂ ಅಲ್ಲಿ ನೆರೆದಿರುತ್ತಿದ್ದೆವು. ಅದೊಂತರಾ ಸಂಗೀತ ಸಂಜೆ. ನಮಗೆಲ್ಲ ಆವಾಗ ಅದರ ಅರ‍್ತವೇನೋ ಏನೊಂದು ಗೊತ್ತಿರುತ್ತಿರಲಿಲ್ಲ. ಕೇವಲ ನಮ್ಮ ಲಕ್ಶ್ಯ ಅಜ್ಜಿಯ ಮಕ್ಕಳು ನುಡಿಸುತ್ತಿದ್ದ ಸಂಗೀತ ಪರಿಕರಗಳ ಮೇಲೆ ಇರುತ್ತಿತ್ತು. ಈಗಲೂ ಅವೆಲ್ಲ ಹಾಡುಗಳು ನೆನಪಾಗಿ ರಾಗವಾಗಿ ಒಬ್ಬನೇ ಹಾಡಿಕೊಂಡು ಅದರ ಅರ‍್ತವನ್ನು ಈಗ ವಿಶ್ಲೇಶಣೆ ಮಾಡಿಕೊಳ್ಳಬೇಕಿದೆ. ಅವರ ಮಕ್ಕಳಿಗೆ ಸೊಸೆಯಂದರಿಗೆ, ನೆಂಟರಿಸ್ಟರಿಗೆ ಎಲ್ಲರಿಗೂ ಎಲ್ಲ ಹಾಡುಗಳೂ ಬರುತ್ತಿದ್ದವು! ಅದೇ ನಮಗೆ ಬೆರಗನ್ನುಂಟುಮಾಡುತ್ತಿತ್ತು. ಈ ಸಂಜೆಯ ಕಾರ‍್ಯಕ್ರಮ ಸುಮಾರು ಅರೆ ತಾಸು ಅತವಾ ಮುಕ್ಕಾಲು ತಾಸು ನಡೆಯುತ್ತಿತ್ತು. ನೆಂಟರಿಸ್ಟರು ತುಂಬಾ ಜನವಿದ್ದಾಗ ಇನ್ನೂ ಸ್ವಲ್ಪ ಹೊತ್ತು ನಡೆಯುತ್ತಿತ್ತು.
ಅವರವರ ಹಾಡಿನ ಕುಶಿಗೆ, ತಮ್ಮ ತಮ್ಮಲ್ಲೇ ಕಾಲೆಳೆದು ಮೋಜು ಮಾಡುವಿಕೆಗೆ, ಸಲುಗೆಗೆ, ಪ್ರೀತಿಗೆ, ಅಜ್ಜಿಯ ವಾತ್ಸಲ್ಯಕ್ಕೆ, ಅಲ್ಲೇ ನೆಂಟರ ನಡುವೆಯೇ ಸಣ್ಣಗೆ ಮೊಳಕೆಯೊಡೆಯುತ್ತಿರುವ ಪ್ರೀತಿಗೆ, ವಾದ್ಯಗಳ ನಿನಾದಕ್ಕೆ, ಅವರ ನಗುವಿಗೆ ನಾವೆಲ್ಲ ಸಾಕ್ಶಿಗಳಾಗುತ್ತಿದ್ದೆವು. ವಿಚಿತ್ರವೆಂದರೆ ನಮ್ಮ ಪಾಲಕರ‍್ಯಾರೂ ಅತವಾ ಕಂಪೌಂಡ್ ನಲ್ಲಿಯ ಉಳಿದ ಬಾಡಿಗೆ ಮನೆಯವರ‍್ಯಾರೂ ಅಲ್ಲಿ ಸಂಗೀತಕ್ಕೆ ಸೇರಿದ್ದು ನೆನಪಿಲ್ಲ. ಅಜ್ಜಿ ಕರೆದು ಕರೆದು ಸುಮ್ಮನಾಗಿರಬೇಕು. ಉಳಿದವರು ಅಲ್ಲಲ್ಲಿ ತೆಂಗಿನ ಮರಗಳ ಅಡಿಯಲ್ಲಿರೋ ಕುರ‍್ಚಿಗಳಲ್ಲಿ ಕುಳಿತು ಮಾತನಾಡುತ್ತ ತಮ್ಮ ತಮ್ಮ ಮಕ್ಕಳು ಸಂಗೀತ ಮುಗಿಸಿ ಹೊರಬರುವುದನ್ನು ಕಾಯುತ್ತಿದ್ದುದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಯಾರೊಬ್ಬ ಪಾಲಕರು ಮಕ್ಕಳನ್ನು ಕೀರ‍್ತನೆ ಸಂಗೀತಕ್ಕೆ ಬೇಡವೆಂದಿದ್ದ ಉದಾಹರಣೆಗಳಿಲ್ಲ. ತಮ್ಮ ಮಕ್ಕಳನ್ನು ಎಲ್ಲಿ ಕ್ರಿಶ್ಚಿಯನ್ ನನ್ನಾಗಿಸಿಬಿಡುವರೋ ಎಂಬ ಬಯವೇನೂ ಅಲ್ಲಿ ಇದ್ದಿಲ್ಲ. ಅಜ್ಜಿಯಾದರೂ ಎಂದು ಉಳಿದವರ ಆಚರಣೆಗಳಿಗೆ ಅಡ್ಡಿಪಡಿಸಿದ್ದಿಲ್ಲ. ಬಾವಿಕಟ್ಟೆ ಮೇಲೆ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು. ನಾಗರಕಟ್ಟೆಯೊಂದನ್ನು ಅಜ್ಜಿಯೇ ಕಟ್ಟಿಸಿಕೊಟ್ಟಿದ್ದರು. ಎಲ್ಲರ ಮನೆಯ ಬಗೆಬಗೆಯ ಸಿಹಿ ತಿನಿಸುಗಳನ್ನು ಕೊಂಡಾಡಿ ತಿನ್ನುತ್ತಿದ್ದರು. ಅಜ್ಜಿ ಕೊಂಡಾಡುತ್ತಾರೆಂದು ಎಲ್ಲ ಬಾಡಿಗೆ ಮನೆಯವರೂ ಬೇಕೆಂತಲೇ ತರೇವಾರಿ ಅಡುಗೆಗಳನ್ನು ಮಾಡಿ ಅಜ್ಜಿಗೆ ತಿನ್ನಿಸಿ, ಅಜ್ಜಿ ಉಳಿದ ಹೆಣ್ಣುಮಕ್ಕಳ ಎದುರಿಗೆ ತಮ್ಮ ಅಡುಗೆಯ ಬಗ್ಗೆ ಕೊಂಡಾಡಲೆಂದು ಬಯಸುತ್ತಿದ್ದರು. ಅಜ್ಜಿಯದೊಂದು ಸುಕೀ ಸಂಸಾರ. ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು. ಮಕ್ಕಳು ಕೆಲಬಾರಿ ಸಣ್ಣ ಪುಟ್ಟವಕ್ಕೆಲ್ಲ ಜಗಳ ಕಾಯ್ದರೂ ಅಜ್ಜಿಯು ಅವರನ್ನೆಲ್ಲ ಸಮಾದಾನಿಸಿ ಕಳಿಸುತ್ತಿದ್ದರು.
ನಾವೆಲ್ಲ ನೆಂಟರಿಶ್ಟರೆಲ್ಲ ಮನೆಗೆ ಬಂದಾಗ ನಾವೇಕೆ ಸಂಗೀತ ಕಾರ‍್ಯಕ್ರಮ ನಡೆಸುವುದಿಲ್ಲ? ಕೂತು ವಾದ್ಯಗಳನ್ನೇಕೆ ನುಡಿಸುವುದಿಲ್ಲ? ಯಾಕೆ ಎಲ್ಲರೂ ಕೂಡಿ ಪ್ರಾರ‍್ತನೆ ಮಾಡುವುದಿಲ್ಲ? ಎಂಬೆಲ್ಲ ಪ್ರಶ್ನೆಗಳು ಮೂಡುತ್ತಿದ್ದವು. ಇವನ್ನೆಲ್ಲ ಮನೆಯಲ್ಲಿ ಕೇಳಿದರೆ ಬರೀ ಹಾರಿಕೆಯ ಉತ್ತರಗಳಶ್ಟೆ ಸಿಗುತ್ತಿದ್ದವು.
ಕಮಲಮ್ಮಜ್ಜಿ ಅತೀ ದಪ್ಪನೆಯ ಆಳು. ಯಾವುದೋ ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಿರಬೇಕು ಎಂದು ಈಗ ಎನ್ನಿಸುತ್ತದೆ. ತಮ್ಮಶ್ಟಕ್ಕೆ ತಾವು ಎದ್ದು ತಿರುಗಾಡಿ ಆದಶ್ಟು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರೂ ಬಹಳಶ್ಟು ಬಾರಿ ಅವರು ತಮ್ಮ ಮನೆಯವರನ್ನೇ ಅವಲಂಬಿಸಬೇಕಾಗಿತ್ತು. ಬಹಳಶ್ಟು ಬಾರಿ ಕಂಪೌಂಡಿನಲ್ಲಿ ಆರಾಮ ಕುರ‍್ಚಿಯಲ್ಲಿ ಕುಳಿತಾಗ, ಏಳಲು ಬಾರದೇ ಸಿಕ್ಕಿಹಾಕಿಕೊಂಡು ನಾವೆಲ್ಲ ಹುಡುಗರು ಕೂಡಿ ಹಿಡಿದೆಳೆದರೂ ಎಬ್ಬಿಸಲೂ ಆಗದೇ ಕೊನೆಗೆ ಅವರ ಮಕ್ಕಳೂ, ಕಂಪೌಂಡಿನ ಇತರರೂ ಬಂದು ಎಬ್ಬಿಸಬೇಕಾಗಿತ್ತು. ಪ್ರತೀ ಬಾರಿಯೂ ಅವರ ಮಕ್ಕಳು ಆ ಸಿಕ್ಕಿ ಹಾಕಿಕೊಳ್ಳುವ ಆರಾಮ ಕುರ‍್ಚಿಯಲ್ಲಿ ಕುಳಿತುಕೊಳ್ಳಬಾರದೆಂದು ತಾಕೀತು ಮಾಡಿದರೂ ಅಜ್ಜಿಗೆ ಅದೇನೋ ಅದರಲ್ಲಿ ಕುಳಿತು ಕೊಂಡರೇನೇ ಆರಾಮವೆನಿಸುತ್ತಿತ್ತು. ಕೆಲವೊಮ್ಮೆ ಪ್ರಯಾಸ ಪಟ್ಟು ತಾನೇ ಎದ್ದುಬಿಡುತ್ತಿದ್ದಳು ಆದರೆ ಬರುಬರುತ್ತಾ ಏಳೋದೇ ದುಸ್ತರವಾಯಿತು. ಮುಂದೆ ಆ ಕುರ‍್ಚಿಯನ್ನು ಅಜ್ಜಿಗೆ ನಿಲುಕದಂತೆ ಟೆರೇಸ್ ಮೇಲೆ ಇಟ್ಟುಬಿಟ್ಟರು. ನಾವೆಲ್ಲ ತೆಂಗಿನಕಾಯಿ ಕೀಳಲು ಕೆಲವೊಮ್ಮೆ ಟೆರೇಸ್ ಮೇಲೆ ಹೋದಾಗ ನೆರಳಲ್ಲಿ ಇರೋ ಕಾಲಿ ಕುರ‍್ಚಿಯಲ್ಲಿ ಆರಾಮವಾಗಿ ಕುಳಿತುಕೊಳ್ಳುವವರೇ ಇಲ್ಲವಾಗಿದೆಯಲ್ಲ ಎಂದು ಮಾತಾಡಿ ಬೇಸರಪಟ್ಟುಕೊಳ್ಳುತ್ತಿದ್ದೆವು.
ಒಂದೊಮ್ಮೆ ನಾವೆಲ್ಲ ಕಂಪೌಂಡ್ ಹುಡುಗರು ಕಶ್ಟಪಟ್ಟು ಹತ್ತಿರದ ನೀಲಕಂಟೇಶ್ವರ ಗುಡಿಯಲ್ಲಿ ಮುದ್ದಾದ ನಾಯಿಮರಿಯೊಂದನ್ನು ಅದರ ಅಮ್ಮನ ಕಣ್ಣು ತಪ್ಪಿಸಿ ಕದ್ದು ತಂದು ಬಿಟ್ಟೆವು. ಕಂಪೌಂಡಿಗೆ ತಂದು ಬಿಟ್ಟಾಗ ಅವರಮ್ಮನ ಕಳಕೊಂಡು ತುಂಬಾ ಗೋಳಾಡಿದ ಆ ನಾಯಿಮರಿ ನಂತರ ನಮ್ಮೆಲ್ಲರ ಲಾಲನೆ ಪಾಲನೆಯಿಂದ ಬರುಬರುತ್ತ ಗುಂಡುಗುಂಡಾಗಿ ಬೆಳೆದು ಅವರಮ್ಮನನ್ನು ಪೂರ‍್ತಿ ಮರೆತುಹೋಯಿತು. ಎಲ್ಲರ ಮನೆಯ ತಿಂಡಿ ತಿನಿಸುಗಳಲ್ಲಿ ಅದರ ಪಾಲು ಇದ್ದೇ ಇರುತ್ತಿತ್ತು. ಅದರ ಹೆಸರು ಅತೀ ಸರಳವಾದ ಟಾಮಿ ಎಂದಾಯಿತು. ಇಡೀ ಕಂಪೌಂಡಿಗೆ ಟಾಮಿ ಯೊಂದೇ ಸಾಕುಪ್ರಾಣಿ ಯಾದ್ದರಿಂದ ಸೊಕ್ಕಿನಿಂದ ಮೆರೆಯುತ್ತಿತ್ತು. ಬೇರೆ ಯಾವುದೇ ನಾಯಿ ಕಂಡರೂ ಕಂಪೌಂಡಿನ ಒಳಗೆ ಬಂದರೆ ಮುಗೀತು, ಬಿಡದೇ ಜಗಳ ಕಾಯುತ್ತಿತ್ತು. ತೆಂಗಿನ ಮರಗಳಿಗೆ ದಾಳಿಯಿಡುತ್ತಿದ್ದ ಕೋತಿಗಳ ಕಾಟವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಟಾಮಿಯು ಸೀದಾ ಟೆರೇಸ್ ಮೇಲೆರಿ ಕೋತಿಗಳನ್ನು ಓಡಿಸುವ ಕಾಯಕದಲ್ಲಿ ನಿರತವಾಗಿಬಿಡುತ್ತಿತ್ತು. ಕಮಲಮ್ಮಜ್ಜಿಯ ಮಕ್ಕಳು ಡಮ್ಮಿ ಬುಲೆಟ್ ಗಳ ಪಿಸ್ತೂಲಿನಿಂದ ಕೋತಿಗಳಿಗೆ ಶೂಟ್ ಮಾಡುತ್ತಿದ್ದರು. ಅದನ್ನು ನೋಡಿ ನಾವೆಲ್ಲ ಒಂದು ವಿಶೇಶ ತ್ರಿಲ್ ಅನುಬವಿಸುತ್ತಿದ್ದೆವು.
ಸ್ವಲ್ಪ ತಿಂಗಳುಗಳ ನಂತರ ಒಮ್ಮೆ ಒಂದು ಗಿಳಿಮರಿಯೊಂದು ಕಂಪೌಂಡಿನಲ್ಲಿ ತೆಂಗಿನ ಮರದ ಅಡಿಯಲ್ಲಿ ಕಾಲಿಗೆ ಏನೋ ಗಾಯವಾಗಿ ಹಾರಲೂ ತೊಂದರೆ ಪಡುತ್ತ ನರಳುತ್ತಿತ್ತು. ನಮ್ಮಲ್ಲಿ ಅದನ್ನು ಮುಟ್ಟಲು ಎಲ್ಲರೂ ಹೆದರುತ್ತಿದ್ದಾಗ ನವೀನ, ಅಜ್ಜಿಯ ಮೊಮ್ಮಗ ಅದನ್ನು ತನ್ನ ಪುಟಾಣಿ ಕೈಗಳಲ್ಲಿ ಹಿಡಿದುಬಿಟ್ಟ. ಎಲ್ಲಿತ್ತೋ ಏನೋ ಟಾಮಿ ಅವನ ಕೈಯಲ್ಲಿದ್ದ ಗಿಳಿಮರಿಯನ್ನು ನೋಡಿ ಸಿಟ್ಟಾಗಿ ಬೊಗಳಲು ಶುರುವಿಟ್ಟಿತು. ಅದನ್ನು ಕಚ್ಚಲು ನವೀನನ ಮೇಲೇ ಎಗುರಾಡತೊಡಗಿತು. ಅವನನ್ನು ಓಡುವಂತೆ ಹೇಳಿ ಎಲ್ಲರೂ ಸೇರಿ ಟಾಮಿಯನ್ನು ಕಟ್ಟಿಹಾಕಿದೆವು.
ನಮಗೆಲ್ಲ ಆ ಗಿಳಿಯನ್ನು ಜೋಪಾನ ಮಾಡಿ ಸಾಕಬೇಕೆಂಬ ಮಹದಾಸೆ. ಆದರೆ ಟಾಮಿಯೊಂದು ಅಡ್ಡಗಾಲು. ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಕಂಪೌಂಡಿನ ತುಂಬಾ ಓಡಿ ಸುಸ್ತಾಗಿದ್ದ ನವೀನ ಅಜ್ಜಿಯ ಹತ್ತಿರ ಹೋಗಿ ಗಿಳಿಮರಿಯನ್ನು ತೋರಿಸಿದ. ನಾವೆಲ್ಲ ಅಜ್ಜಿಯ ಹತ್ತಿರ ಓಡಿಹೋದೆವು. ಇದನ್ನೇ ಕಾಯುತ್ತಿದ್ದ ಬಲಿಶ್ಟ ಟಾಮಿ ಹಗುರಾದ ಸಣಬಿನ ಹಗ್ಗವನ್ನು ಬಿಚ್ಚಿಕೊಂಡು ನಮ್ಮ ಹತ್ತಿರ ಓಡಿ ಬಂದು ದಾಳಿ ಇಟ್ಟುಬಿಟ್ಟಿತು. ಗಿಳಿಮರಿಯನ್ನು ಕಾಪಾಡಲು ನವೀನ ಅಂಜಿಕೊಂಡು ಅಜ್ಜಿಗೆ ಇದನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕೆಂದು ಹೇಳಿದ. ಎಲ್ಲರೂ ಟಾಮಿಯನ್ನು ಓಡಿಸಲು ಅಣಿಯಾದೆವು. ಅದರ ಅಬ್ಬರಕ್ಕೆ ಅಜ್ಜಿಯೂ ಹೆದರಿಬಿಟ್ಟಳು. ಗಟ್ಟಿಯಾಗಿ ಕೈಗಳಲ್ಲಿ ಗಿಳಿಮರಿಯನ್ನು ಹಿಡಿದಿದ್ದಳು. ಟಾಮಿಯನ್ನು ಬ್ಯಾಟ್ ನಿಂದ ಹೊಡೆದು ಓಡಿಸಿದೆವು.
ಮತ್ತೆ ಅಜ್ಜಿಯ ಹತ್ತಿರ ಓಡಿ ಬಂದು ಕೈಯಲ್ಲಿದ್ದ ಗಿಳಿಯನ್ನು ನವೀನನಿಗೆ ಕೊಡುವಂತೆ ಕೇಳಿದೆವು. ಅಜ್ಜಿಯು ಇದನ್ನು ಟೆರೇಸ್ ಮೇಲೆ ಬಿಟ್ಟುಬಿಡಬೇಕೆಂದು, ಅದು ತನ್ನಶ್ಟಕ್ಕೇ ತಾನೇ ಹಾರಿಹೋಗುತ್ತದೆಂದೂ, ಇಲ್ಲವಾದರೆ ಟಾಮಿ ಅದನ್ನು ತಿಂದುಬಿಡುತ್ತದೆಂದೂ ಹೇಳಿ ಹೆದರಿಸಿದರು. ನಾವೆಲ್ಲ ಆಯಿತೆಂದೆವು. ನವೀನ ಗಿಳಿಮರಿಯನ್ನು ಕೈಯಲ್ಲಿ ಕೊಡು ಎಂದು ತನ್ನ ಪುಟಾಣಿ ಅಂಗೈಯನ್ನು ಚಾಚಿದ. ಅಜ್ಜಿ ತನ್ನೆರಡು ಅಂಗೈಗಳ ಗಟ್ಟಿಯಾದ ಮುಶ್ಟಿಯಲ್ಲಿ ಇಟ್ಟುಕೊಂಡಿದ್ದ ಗಿಳಿಮರಿಯನ್ನು ಸಡಿಸಿಲಿ ಅಂಗೈ ಅಗಲ ಮಾಡಿದಳು. ಅಜ್ಜಿ ಗಟ್ಟಿಯಾಗಿ ಹಿಡಿದುಕೊಂಡಿದ್ದಕ್ಕೆ ಉಸಿರುಗಟ್ಟಿ ಗಿಳಿಮರಿ ಅಲ್ಲೇ ಸತ್ತು ಹೋಗಿಬಿಟ್ಟಿತ್ತು!. ನಾವೆಲ್ಲ ಜೋರಾಗಿ ಅಳಲು ಶುರುವಿಟ್ಟೆವು. ನವೀನ ಮತ್ತು ಆಕೆಯ ಇನ್ನೂ ಇಬ್ಬರು ಮೊಮ್ಮಕ್ಕಳು ಅಜ್ಜಿಯನ್ನು ಸಿಟ್ಟಿನಲ್ಲಿ ಅಳುತ್ತಾ ಆಕೆಯನ್ನು ಮೈಯೆಲ್ಲ ಹಣ್ಣಾಗುವಂತೆ ಗುದ್ದಿ ಗುದ್ದಿ ಸಾಕು ಮಾಡಿದರು. ಟಾಮಿ ಮತ್ತೆ ಬಂದು ಸತ್ತ ಗಿಳಿಮರಿಯನ್ನು ಮೂಸಿ ಹೊರಟುಹೋಯಿತು. ನಾವೆಲ್ಲ ವಿದ್ಯುಕ್ತವಾಗಿ ಕಂಪೌಂಡಿನ ಮೂಲೆಯಲ್ಲಿ ಸಣ್ಣ ಕುಣಿ ತೆಗೆದು ಅದರಲ್ಲಿ ಗಿಳಿಮರಿಯನ್ನು ಮಣ್ಣು ಮಾಡಿದೆವು. ಒಂದು ಸಣ್ಣ ಸಸಿಯನ್ನು ನೆಟ್ಟೆವು. ಕೆಲ ದಿನ ಅದಕ್ಕೆ ನೀರು ಹಾಕುವುದು, ಸುಮ್ಮನೆ ಪೂಜೆ ಮಾಡುವುದು ಎಲ್ಲ ಮಾಡಿದೆವು. ಆದರೆ ಸಸಿಯೂ ಏಕೋ ಬರ‍್ತಾ ಬರ‍್ತಾ ಬಾಡಿ ಒಣಗಿಹೋಯಿತು, ನಮ್ಮ ನೆನಪಿನ ಬುಟ್ಟಿಯಲ್ಲಿನ ಗಿಳಿಯೊಂದರ ನೆನಪಿನಂತೆ.
ಮುಂದೆ ನಮ್ಮ ಗುಂಪಿನ ಕೆಲ ಹುಡುಗರ ಪಾಲಕರಿಗೆ ಟ್ರಾನ್ಸ್ಪರ್ ಇತ್ಯಾದಿಯಾಗಿ ಗುಂಪಿನ ಸದಸ್ಯರು ಬದಲಾಗುತ್ತಾ ಹೋದರು. ಹೊಸ ಸಣ್ಣ ಹುಡುಗರ ಗುಂಪೊಂದು ಹುಟ್ಟಿಕೊಂಡಿತು ನಾವು ನಮಗರಿವಿಲ್ಲದೇ ದೊಡ್ಡವರಾಗಿಬಿಟ್ಟಿದ್ದೆವು. ಸ್ವಂತ ಮನೆ ಕಟ್ಟಿಸಿಕೊಂಡು ಮನೆ ಕಾಲಿ ಮಾಡಿ ಬಿಡುವ ದಿನ ಅಜ್ಜಿ ಪ್ರಾರ‍್ತನೆ ಸಲ್ಲಿಸಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಆ ಹಾಲಿನಲ್ಲಿ ಅಜ್ಜಿ, ಆಕೆಯ ಸೊಸೆಯಂದಿರು, ಮೊಮ್ಮಕ್ಕಳು, ನನ್ನಪ್ಪ ಅವ್ವ, ನಾನು ಮತ್ತಿತರ ಹುಡುಗರೆಲ್ಲ ಇದ್ದೆವು. ಅಜ್ಜಿ ಆ ದಿನ ಬೇಡಿಕೊಂಡಳು ಕರ‍್ತನಾದ ಯೇಸುಸ್ವಾಮಿಯೇ, ನಮ್ಮೊಡನಿದ್ದ ನಿನ್ನ ಮಕ್ಕಳು ನಿನ್ನ ಆಶೀರ‍್ವಾದದಿಂದ ಸ್ವಗ್ರುಹಕ್ಕೆ ವಾಸ ಮಾಡಲು ನಿರ‍್ದರಿಸಿದ್ದಾರೆ. ಅವರ ಈ ನಿರ‍್ದಾರವು ನಿನ್ನ ಪ್ರೇರಣೆಯಿಂದಲೇ ಆಗಿರುವುದಾಗಿದೆ. ಅದು ಯಾವಾಗಲೂ ಒಳ್ಳೆಯದ್ದೇ ಆಗಿರುತ್ತದೆ. ಅವರ ಸಣ್ಣ ಸಂಸಾರವು ನಿನ್ನ ಕ್ರುಪೆಯಿಂದ ಅನುದಿನವೂ ಸುಕಕರವಾಗಿಡುವಂತೆ ಮಾಡು. ಈ ನಿನ್ನ ಮಕ್ಕಳು ಸದಾ ನಿನ್ನ ಇತರ ಮಕ್ಕಳೊಡನೆಯೇ ಸಂಸಾರದ ಏಳುಬೀಳುಗಳನ್ನು ದಾಟಿ ಮುನ್ನಡೆಯುವಂತೆ ಮಾಡು ಎಂದು ಬೇಡಿಕೊಳ್ಳುತ್ತೇವೆ ಪ್ರೀತಿಪಾತ್ರನೇ, ನಮ್ಮನ್ನೆಲ್ಲ ಅನವರತ ಕಾಪಾಡು. ಆಮೇನ್. ಅವ್ವನನ್ನು ಅಪ್ಪಿಕೊಂಡು ಅಜ್ಜಿ ಬಿಕ್ಕಿ ಬಿಕ್ಕಿ ಅತ್ತಿತ್ತು. ಅವ್ವನೂ ಅತ್ತು ಅತ್ತು ಕಣ್ಣು ಬಾಯಿಸಿಕೊಂಡಿದ್ದಳು. ಟಾಮಿ ನನ್ನ ಸೈಕಲ್ ಹಿಂದೆ ಸ್ವಲ್ಪ ದೂರ ಬಂದು ವಾಪಸ್ ಹೊರಟುಹೋಯಿತು. ಅದಕ್ಕೆ ನನಗಿಂತ ಕಂಪೌಂಡ್ ತುಂಬಾ ಇಶ್ಟ ಅಂತ ಆವತ್ತೇ ತಿಳಿಯಿತು. ಅಪ್ಪ ಇವಾವ್ಯುದನ್ನೂ ಲೆಕ್ಕಿಸದೇ ಗಾಡಿಯಲ್ಲಿ ಸಾಮಾನು ಸರಂಜಾಮುಗಳನ್ನು ಹಾಕಿಸುವುದರಲ್ಲಿ ಮಗ್ನರಾಗಿದ್ದರು. ಅಂದು ಯೇಸುಸ್ವಾಮಿಯೂ ಅಜ್ಜಿಯ ಬೇಡಿಕೆಯನ್ನು ಚಾಚೂ ತಪ್ಪದೇ ಪಾಲಿಸಿದನೆನೋ, ಇಲ್ಲಿಯವರೆಗೂ ಅಜ್ಜಿ ಬೇಡಿದಂತೆಯೇ ಆಯಿತೆನಿಸುತ್ತದೆ.
ಸ್ವಂತ ಮನೆಯು ಮಿರಜಕರ್ ಕಂಪೌಂಡಿನಿಂದ ತುಂಬಾ ದೂರವಿದ್ದಿತ್ತು. ರೂಡಿಯ ಬಲದಿಂದ ಅಪ್ಪನ ಸೈಕಲ್ ಕೆಲವೊಮ್ಮೆ ಶಾಲೆಯಿಂದ ಹಳೆಮನೆಯಿದ್ದ ಕಂಪೌಂಡ್ ಗೆ ಹೋಗಿಬಿಟ್ಟಿತ್ತಂತೆ. ಅತೀ ಪ್ರೀತಿಯಿಂದ ನೋಡಿಕೊಂಡಿದ್ದ ಆ ಎರಡೇ ವಿಶಾಲವಾಗಿದ್ದ ರೂಮುಗಳುಳ್ಳ ಆ ಚಿಕ್ಕ ಮನೆ ಈಗ ಹಳೆಮನೀ’ ಅನಿಸಿಕೊಳ್ಳುತ್ತಿರುವುದಕ್ಕೆ ಬೇಜಾರೆನಿಸುತ್ತಿತ್ತು. ಹೊಸಮನೆಗೆ ಬಂದ ಸಂತಸ ಒಂದೆಡೆಯುತ್ತು. ಆದರೆ, ಕಂಪೌಂಡ್ ನ ತೆಂಗಿನ ಮರಗಳ ನೆರಳು, ಟಾಮಿ, ಅಜ್ಜಿ, ಆಕೆಯ ಸಂಗೀತ ಕಚೇರಿ, ರವಿವಾರದ ಚರ‍್ಚು, ಅಜ್ಜಿಯ ಮನೆಯಲ್ಲಿ ಪ್ರತೀ ರವಿವಾರ ತದೇಕಚಿತ್ತದಿಂದ ನೋಡಿದ ರಾಮಾಯಣ, ಮಹಾಬಾರತ ಸಿರೀಯಲ್ಲು, ರವಿವಾರದ ರಂಗೋಲಿ, ರವಿವಾರದ ಸಂಜೆಯ ಕನ್ನಡ ಸಿನಿಮಾ, ಕಂಪೌಂಡ್ ನ ಕಿರಿಯ ಗೆಳೆಯರ ಬಳಗ, ಅಜ್ಜಿಯ ಪ್ರಾರ‍್ತನೆ ಎಲ್ಲವೂ ಮಿಸ್ಸಾಗತೊಡಗಿದವು. ನಾನು ಒಂದೆರಡು ಬಾರಿ ಶಾಲೆಯಿಂದ ಮನೆಗೆ ಹೋಗುವಾಗ ಕಂಪೌಂಡ್ ರಸ್ತೆಯ ಅರೆದಾರಿಯಶ್ಟು ದಾರಿಗೆ ಬಂದು ಸಟಕ್ಕನೆ ಹೊಸಮನೆ ನೆನಪಾಗಿ ವಾಪಸ್ ಹೋಗಿದ್ದಿದೆ.
ಮುಂದೆ ಟಿವಿಯೇನೋ ಮನೆಗೆ ಬಂತು. ಸೀರೀಯಲ್ಲುಗಳು ಮುಗಿದುಹೋಗಿದ್ದವು. ಮುಂದೊಂದು ದಿನ ಅಜ್ಜಿಗೆ ಆರಾಮ ಇಲ್ಲದಂತಾಗಿ ನೆಲಹಿಡಿದಾಗ ಅವ್ವ ಮಾತಾಡಿಸಲು ಕಂಪೌಂಡ್ ಗೆ ಹೊರಟು ನಿಂತಾಗ ನಾನೂ ಜೊತೆಯಾದೆ. ಕಂಪೌಂಡ್ ಗೆ ಬಂದಾಗ ಯಾವ ಟಾಮಿಯೂ ಇರಲಿಲ್ಲ. ಅದು ತೀರಿ 2 ತಿಂಗಳಾಗಿತ್ತಂತೆ. ಅಜ್ಜಿಗೆ ಪಾರ‍್ಸಿ ರೋಗವಾಗಿ ಕೈ ಕಾಲುಗಳು ಸಂಪೂರ‍್ಣ ಸ್ವಾದೀನ ಕಳೆದುಕೊಂಡಿದ್ದವು. ಮಾತೂ ಹೋಗಿದ್ದವು. ಸೊಸೆಯಂದಿರಂತೂ ದಡೂತಿ ದೇಹದ ಅಜ್ಜಿಯನ್ನು ಜೋಪಾನ ಮಾಡಿ ಮಾಡಿ ಸಣ್ಣವಾಗಿಬಿಟ್ಟಿದ್ದರು. ಅವ್ವನ ಮುಂದೆ ಗೋಳನ್ನು ಹೇಳಿ ಅತ್ತು ಅತ್ತೂ ಸುಸ್ತಾದರು. ಅಜ್ಜಿಯೂ ಪೂರ‍್ತಿ ನಿತ್ರಾಣವಾದಂತೆ ಕಂಡುಬಂದರು. ಹಲ್ಲಿನ ಸೆಟ್ ತಗೆದು ಇಟ್ಟಿದ್ದರಿಂದ ಅವರೂ ಇನ್ನೂ 10 ವರ‍್ಶ ಹೆಚ್ಚು ವಯಸ್ಸಾದಂತೆ ಕಂಡರು. ಅವ್ವನನ್ನು ಹತ್ತಿರ ಕರೆದು ಕೂಡಿಸಿಕೊಂಡರು. ಏನೇನೋ ಸನ್ನೆ ಮಾಡಿ ಮಾತನಾಡಿಸಿದರು. ಅವ್ವ ಅಜ್ಜಿಗೆ ತಾನು ಮಾಡಿ ಅಜ್ಜಿಗಂತ ತಂದಿದ್ದ ಚಕ್ಕುಲಿ, ಜಾಮೂನುಗಳನ್ನು ಬ್ಯಾಗಿನಿಂದ ಹೊರತೆಗೆಯ ಹೋದಳು. ಅಜ್ಜಿ ಅವಳನ್ನು ತಡೆದು ಹಲ್ಲಿನ ಸೆಟ್ ಕಡೆ ಕೈ ತೋರಿಸಿ ಯಾಕೋ ಬೇಡ ಅನ್ನುವಂತೆ ಸನ್ನೆ ಮಾಡಿದಳು. ನನ್ನ ಹತ್ತಿರ ಕರೆದರು. ಅತೀ ಕೊಳಕಾಗಿದ್ದ ಹಸಿಹಸಿಯಾಗಿದ್ದ ಅವರ ವಸ್ತ್ರ, ಮಂಚದ ಮೇಲೇಯೇ ಉಚ್ಚೆ ಮಾಡಿಕೊಂಡಿದ್ದರಿಂದ ಆ ರೂಮಿನ ತುಂಬಾ ಅಡರಿಕೊಂಡಿದ್ದ ವಾಸನೆ, ಬಾಯಿಯಿಂದ ಸಿಡಿಸುತ್ತಿದ್ದ ಉಗುಳು, ಸೋರುತ್ತಿದ್ದ ಜೊಲ್ಲು ಎಲ್ಲವೂ ಮನಸ್ಸಿಗೆ ಹೇಸಿಗೆಯನ್ನುಂಟುಮಾಡಿ ನಾನು ಅಜ್ಜಿಯ ಕಡೆ ಹೋಗದಂತೆ ಮಾಡಿಬಿಟ್ಟವು. ದೂರದಿಂದಲೇ ಒಲ್ಲೆ ಎಂದು ತಲೆ ಅಲ್ಲಾಡಿಸಿಬಿಟ್ಟೆ. ಅಜ್ಜಿಯು ತನ್ನ ಕೋಲನ್ನು ತೋರಿಸಿ ನನ್ನ ಹೊಡೆಯುತ್ತೇನೆಂದು ಸನ್ನೆ ಮಾಡಿ ನಗುತ್ತಾ ತಮಾಶಿ ಮಾಡಿತು. ಅವ್ವನಂತೂ ಅಜ್ಜಿ ಕರೆದರೆ ಹೋಗಲಿಲ್ಲದಕ್ಕೆ ದಾರಿಯೀಡಿ ನನಗೆ ನನ್ನ ಸೊಕ್ಕಿನ ನಡೆಯ ಬಗ್ಗೆ ಹಿಡಿಶಾಪಹಾಕುತ್ತಾ ಬಂದಳು.
ಅವಳ ಸೀರೆಯೂ ಅಜ್ಜಿಯ ಮಂಚದ ಮೇಲಿನ ಉಚ್ಚೆಯ ವಾಸನೆಯನ್ನು ಬಡಿಸುತ್ತಿತ್ತು. ಅತ್ಯಂತ ದಿವಿನಾಗಿ ಬಟ್ಟೆ ಹಾಕಿಕೊಂಡು, ಶಿಸ್ತಾಗಿ ಕನ್ನಡಕ ಹಾಕಿಕೊಂಡು. ಆರಾಮು ಕುರ‍್ಚಿಯಲ್ಲಿ (ಕುಳಿತುಕೊಂಡು) ಸಿಕ್ಕುಹಾಕಿಹೊಂಡು ಯಾವಾಗಲೂ ಏನನ್ನೋ ಓದುತ್ತಿದ್ದ, ಪ್ರಾರ‍್ತನೆ ಮಾಡುತ್ತಿದ್ದ, ಸಂಗೀತ ಏರ‍್ಪಾಡು ಮಾಡಿ ಹಾಡು ಹಾಡುತ್ತಿದ್ದ ಕಮಲಮ್ಮಜ್ಜಿ ಆ ದಡೂತಿ ದೇಹ ಬಿಟ್ಟು ಹೋಗಿ ತುಂಬಾ ದಿನಗಳಾಗಿರಬೇಕೆನಿಸುತ್ತದೆ. ಕೇವಲ ಶರೀರ ಮಾತ್ರ ಅಲ್ಲಿತ್ತು. ಮುಂದೆ ಕೆಲವೇ ದಿನಗಳಲ್ಲಿ ಅಜ್ಜಿ ತೀರಿಹೋದರೆಂಬ ಸುದ್ದಿ ಬಂತು. ಅಜ್ಜಿಗಾಗಿ ಎಲ್ಲರೂ ಸೇರಿ ಪ್ರಾರ‍್ತನೆ ಸಲ್ಲಿಸಬೇಕೆನಿಸಿತ್ತು. ಆದರೆ ಅವ್ವ ಬರೀ ಅಳುವುದನ್ನೇ ಮಾಡಿದ್ದಳು. ಆ ಯೇಸುಸ್ವಾಮಿಯು ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಬೇಕು.
(ಚಿತ್ರಸೆಲೆ: tonferns.blogspot.in )
ಇತ್ತೀಚಿನ ಅನಿಸಿಕೆಗಳು