ಪತ್ತೇದಾರಿ ಕತೆ – ಪವಾಡ !

– ಬಸವರಾಜ್ ಕಂಟಿ.

gudi1

“ಏ ಸಾವಿತ್ರಿ. ಎದ್ದೇಳೆ. ಗಂಟೆ ಏಳಾಯ್ತು. ಇತ್ತೀಚಿಗೆ ಯಾಕೋ ತುಂಬಾ ಸೋಮಾರಿಯಾಗಿದೀಯಾ. ನಯ್ವೇದ್ಯೆ ಮಾಡಿ ಕೊಡು ಏಳು, ಪೂಜೆಗೆ ಹೊತ್ತಾಗುತ್ತೆ”, ವೆಂಕಣ್ಣನವರು ಮಗಳನ್ನು ಜೋರು ಮಾಡಿ ಎಬ್ಬಿಸಲು ಪ್ರಯತ್ನಿಸುತ್ತಿದ್ದರು. ಅಶ್ಟರಲ್ಲಿ ಹೊರಗಿನಿಂದ ಒಬ್ಬ ಓಡಿ ಬಂದು, ಅವರ ಬಾಗಿಲಲ್ಲಿ ನಿಂತು, ಏದುಸಿರು ಬಿಡುತ್ತ,

“ಸ್ವಾಮ್ಯಾರೆ, ದೇವಸ್ತಾನದಲ್ಲಿ ನೆನ್ನೆ ರಾತ್ರಿ ಕೂಡ ದೀಪ ತನ್ನಿಂತಾನೇ ಹತ್ಕೊಳ್ತು” ಅಂದ, ವೆಂಕಣ್ಣನವರ ಮುಕದಲ್ಲಾಗುವ ಬದಲಾವಣೆ ಗಮನಿಸುತ್ತ.

“ಆಂ!” ಎಂದು ಬಾಯಿ ತೆರೆದು ನಿಂತರು ವೆಂಕಣ್ಣನವರು. ಅವರು ಒಂದೆರಡು ಕ್ಶಣ ಹಾಗೇ ನಿಂತದ್ದು ನೋಡಿ, ಮಡಿಯಲ್ಲಿದ್ದ ಅವರನ್ನು ಮುಟ್ಟಲು ಆಗದೆ, “ಸ್ವಾಮ್ಯಾರೆ” ಎಂದು ಕೂಗಿ ಎಚ್ಚರಿಸಿದ.

ತಕ್ಶಣ ವೆಂಕಣ್ಣನವರು ತಾವು ನಿತ್ಯವೂ ಪೂಜೆಮಾಡುತ್ತಿದ್ದ ರಾಮನ ಗುಡಿಗೆ ಗಡಿಬಿಡಿಯಲ್ಲಿ ಬಂದರು. ಅವರು ಬರುವ ವೇಳೆಗಾಗಲೇ ಅಲ್ಲಿ ಜನರ ಗುಂಪು ಸೇರಿತ್ತು. ಎಲ್ಲರೂ ಗರ‍್ಬಗುಡಿಯ ಮುಚ್ಚಿದ್ದ ಬಾಗಿಲಿಗೆ ಜೋಡಿಸಿದ್ದ ಕಂಬಿಗಳ ಸಂದಿನಿಂದ ಉರಿಯುತ್ತಿದ್ದ ದೀಪವನ್ನು ನೋಡಲು ನಾ ಮುಂದು ತಾ ಮುಂದು ನಡೆಸಿದ್ದರು.

“ಸ್ವಲ್ಪ ಸರಿರಿ, ಸರಿರಿ” ಎನ್ನುತ್ತ ಆ ಆಳು ವೆಂಕಣ್ಣನವರಿಗೆ ದಾರಿ ಮಾಡಿಕೊಡುತ್ತಿದ್ದನು. ವೆಂಕಣ್ಣನವರನ್ನು ನೋಡಿ ಅಲ್ಲಿದ್ದ ಎಲ್ಲರೂ ದಾರಿ ಮಾಡಿಕೊಡಲು ಹಿಂದೆ ಸರಿದರು. ವೆಂಕಣ್ಣನವರು ಬಾಗಿಲಿಗೆ ಹಾಕಿದ್ದ ಬೀಗ ತೆಗೆದು ಒಳಗಡೆ ಕಾಲಿಟ್ಟರು. ಅವರ ಕಾಲಡಿಗೆ ಸಿಕ್ಕಿದ್ದು ಜನರು ಅಶ್ಟೊತ್ತು ಹೊರಗಿನಿಂದ ಎಸೆದಿದ್ದ ಹತ್ತಾರು ನೋಟುಗಳು ಮತ್ತು ಚಿಲ್ಲರೆ. “ರಾಮ ರಾಮ” ಎನ್ನುತ್ತ ಅವನ್ನೆಲ್ಲ ಕಯ್ಯಿಂದ ಗುಡಿಸಿ ಆರತಿ ತಟ್ಟೆಗೆ ಹಾಕಿದರು. ರಾಮನ ಪಾದದಡಿಗೆ ಉರಿಯುತ್ತಿದ್ದ ದೀಪವನ್ನು ನೋಡಿ ಅವರಿಗೆ ಬೆರಗಾಯಿತು. ಬೀಗದ ಕಯ್ ಇನ್ನೂ ತಮ್ಮ ಹತ್ತಿರವೇ ಇರುವುದನ್ನು ಸೊಂಟ ಮುಟ್ಟಿಕೊಂಡು ನೋಡಿದರು. ರಾತ್ರಿ ಮಲಗುವ ಮುಂಚೆಯೂ ನೋಡಿಕೊಂಡಿದ್ದರು. “ರಾಮಾ, ಏನಪ್ಪಾ ನಿನ್ ಲೀಲೆ” ಎಂದು ಮನಸ್ಸಿನಲ್ಲೇ ಅಂದುಕೊಂಡರು. ಒಂದೆರಡು ಕ್ಶಣ ಏನು ಮಾಡಬೇಕೆಂದು ಗೊತ್ತಾಗದೆ ಹಾಗೇ ನಿಂತಿದ್ದರು. ಮತ್ತೆ ಅರಿವಿಗೆ ಬಂದು ಹೊರಗಡೆ ನಿಂತಿದ್ದ ಜನಕ್ಕೆ, “ಪೂಜೆ ಮಾಡಿ ಮಂಗಳಾರತಿ ಕೊಡ್ತೀನಿ, ತಗೊಂಡ್ ಹೋಗಿ” ಎಂದರು.

ಆ ಆಳಿನ ಕಡೆ ತಿರುಗಿ , “ನನ್ ಮಗ ಸುಬ್ಬುಗೆ ಮಡೀಲಿ ನಯ್ವೇದ್ಯೆ ಮಾಡಿ ತರೋಕ್ ಹೇಳು” ಎಂದು ಪೂಜೆಗೆ ಅಣಿಯಾದರು.

ಹೊರಗಿದ್ದ ಜನರ ಗುಂಪಿನಲ್ಲಿ ಗುಸು ಗುಸು ಶುರುವಾಯಿತು. ಗುಡಿಯ ಹೊರಗಡೆ ಕಲಿಸುಗರ (teachers) ಗುಂಪೊಂದು ನೆರೆದು ಗುಡಿಯ ಒಳಗೆ ನಡೆದ ಪವಾಡದ ಬಗ್ಗೆ ಮಾತಾಡುತ್ತಿತ್ತು. “ಏನ್ ಶಂಕರ್ ಸಾರ್, ಈ ಪವಾಡ ಬಯಲು ಮಾಡಿ ನೋಡೋಣ” ಎಂದು ಒಬ್ಬರು ಅರಿವಿನ ಕಲಿಸುಗರಾದ ಶಂಕರ್ ಅವರನ್ನು ಚೇಡಿಸಿದರು. ಶಂಕರ್ ಅವರು ಆ ರಾತ್ರಿ ನಡೆದಿದ್ದನ್ನು ನೋಡಿ ಗಲಿಬಿಲಿಗೊಂಡಂತೆ ಕಾಣುತ್ತಿದ್ದರು. ಯಾವ ಉತ್ತರವೂ ಅವರಿಗೆ ಹೊಳೆಯಲಿಲ್ಲ. ರಹಸ್ಯ ತಿಳಿಯುವ ಎಲ್ಲ ರೀತಿಗಳನ್ನೂ ಯೋಚಿಸಿ ಸೋತಿದ್ದರು. ಕೊನೆಗೆ ಶಂಕರ್ ಅವರೇ ಮಾತಾಡಿದರು. “ಏನಾದ್ರೂ ಆಗ್ಲಿ, ಇದನ್ನ ಬಯಲು ಮಾಡೇ ಮಾಡ್ತೀನಿ” ಎಂದು ಶಪತ ತೊಟ್ಟವರಂತೆ ಮಾತನಾಡಿ ಅಲ್ಲಿಂದ ತಮ್ಮ ಮನೆಕಡೆಗೆ ಹೊರಟರು. ಮಿಕ್ಕವರೂ ಚದುರಿದರು. ಮುಂದಿನ ಅಮವಾಸ್ಯೆಯೂ ದೀಪ ತನ್ನಿಂತಾನೇ ಹೊತ್ತಿ ಉರಿಯಿತು.

**************************************************************************************

ಅದೊಂದು ರವಿವಾರದ ಸಂಜೆ. ಗಿರಾಕಿಗಳಿಲ್ಲದೆ ಪುಲಕೇಶಿಯ ಅಂಗಡಿ ಹೆಚ್ಚಾಗಿ ಕಾಲಿ ಹೊಡೆಯುತ್ತಿತ್ತು. ಆಗಾಗ ಒಂದಿಬ್ಬರು ಬಂದರೂ ಹೊತ್ತಗೆಗಳನ್ನು ತಡಕಾಡಿ ಒಂದೆರಡು ಪುಟ ಓದಿ, ಕೊಳ್ಳದೆ ಹಾಗೇ ಹೋಗುತ್ತಿದ್ದರು. ತನ್ನ ಅಂಗಡಿಯ ಲಾಬದ ಬಗ್ಗೆ ಅವನೆಂದೂ ತಲೆಕೆಡಿಸಿಕೊಂಡಿರಲಿಲ್ಲ. ಹೊತ್ತಗೆಗಳು ಮಾರಾಟವಾಗದಿದ್ದರೂ ತಿಂಗಳು ತಿಂಗಳು ಅವನ ಅಂಗಡಿಗೆ ಹೊಸ ಹೊಸ ಹೊತ್ತಗೆಗಳು ಬರುತ್ತಲೇ ಇರುತ್ತಿದ್ದವು. ಅವನ ಓದುವ ಗೀಳಿನಿಂದಾಗಿ ಅಂಗಡಿ ಅಶ್ಟೇ ಅಲ್ಲದೆ, ಅಂಗಡಿಯ ಮಾಳಿಗೆ ಮೇಲಿದ್ದ ಮನೆಯ ತುಂಬಾ ಹೊತ್ತಗೆಗಳು ತುಂಬಿದ್ದವು. ಪುಲಕೇಶಿ ತನ್ನ ಹೊತ್ತಗೆ ಅಂಗಡಿಯಲ್ಲಿ ಕುಳಿತು, ಯಾವುದೋ ಮನವರಿಮೆಯ (psychology) ಗಡುಕಡತ (magazine) ಹಿಡಿದು, ‘ಎಂದಿನ ಅರಿವು’ (common sense) ಮತ್ತು ‘ಸಂತೆ ಅರಿವು’ (street smart) ಗಳ ನಡುವಿನ ಬೇರ‍್ಮೆಯನ್ನು ಓದುತ್ತಿದ್ದನು. ಅಶ್ಟರಲ್ಲಿ, ಅವನ ಗೆಳೆಯ ಮಂಜು ಬಂದರು.

“ಏನ್ ಪುಲಕೇಶಿ, ಹೇಗಿದೀಯಾ?”

“ಓ ಮಂಜು, ಬಾರಪ್ಪಾ. ನಾನ್ ಚೆನ್ನಾಗಿದೀನಿ”

“ಇವರು ಶಂಕರ್ ಅಂತಾ. ನನ್ ಗೆಳೆಯ”, ಎಂದು ತಮ್ಮ ಜೊತೆ ಬಂದಿದ್ದ ಒಬ್ಬನನ್ನು ಪರಿಚಯಿಸಿದರು ಮಂಜು.

“ನಮಸ್ಕಾರ. ಕೂತ್ಕೊಳ್ಳಿ”, ಎಂದು ತನ್ನ ಮೇಜಿನ ಎದುರಿಗಿದ್ದ ಕುರ‍್ಚಿ ಎಡೆಗೆ ಕಯ್ ಮಾಡಿದನು ಪುಲಕೇಶಿ. ಪುಲಕೇಶಿಯನ್ನು ದಿಟ್ಟಿಸಿ ನೋಡಿದರು ಶಂಕರ್. ತೀರ ತೆಳ್ಳವಲ್ಲದ, ದಿನವೂ ಕಸರತ್ತು ಮಾಡುವಂತೆ ತೋರುವ ಮಯ್ಕಟ್ಟು. ಸುಮಾರು ಆರೂವರೆ ಅಡಿ ಇರಬಹುದು. ಪುಲಕೇಶಿ ಕುಳಿತಿದ್ದರಿಂದ ಸರಿಯಾದ ಎತ್ತರ ಗೊತ್ತಾಗಲಿಲ್ಲ. ಉದ್ದನೆಯ ಮುಕದ ಮೇಲೆ ತೆಳ್ಳಗೆ ಉದ್ದನೆಯ ಮೂಗು. ಮೆದುವಾದ, ಉದ್ದನೆಯ ಹಾರಾಡುವ ಕೂದಲು. ಬೋಳಿಸಿದ ಮೀಸೆ. ತನ್ನಂಬುಗೆ ತುಂಬಿದ ದಿಟ್ಟ ಕಣ್ಣುಗಳು. ನೋಡುಗರನ್ನು ಕಣ್ಣುಗಳಲ್ಲೇ ಅಳೆಯುವ ನೋಟ. ನಲವತ್ತರ ಒಳಗಿನ ವಯ್ಯಸ್ಸು. ಈತನಿಂದ ಅಸಾದ್ಯವಾದದ್ದು ಯಾವುದೂ ಇಲ್ಲ ಎನಿಸಿತು ಶಂಕರ್ ಅವರಿಗೆ.  ಇಬ್ಬರೂ ಕುಳಿತರು. ವಾಡಿಕೆಯ ಮಾತುಗಳು ಮುಗಿದ ಮೇಲೆ, ಮಂಜು ತಾವು ಬಂದ ಕಾರಣ ಹೇಳಿದರು,

“ನಿನಗೊಂದು ಕೇಸ್ ತಂದಿದೀನಿ ಕಣಪ್ಪಾ”, ಮೆದುವಾಗಿ ನಕ್ಕರು.

“ಕೇಸಾ?”

“ಹೂಂ. ಇವರಿದಾರಲ್ಲಾ, ಶಂಕರ್. ಇವರದೇ ಕೇಸು. ನಿನಗೆ ಇಶ್ಟಾ ಆಗೋ ಕ್ರಿಮಿನಲ್ ಕೇಸ್ ಅಲ್ಲಪ್ಪಾ. ಸ್ವಲ್ಪ ಡಿಪರೆಂಟು”

“ಬುದ್ದಿ ಉಪಯೋಗಿಸೋ ಯಾವ್ ಕೇಸಾದ್ರೂ ನಾನ್ ರೆಡಿ. ಸತ್ಯ ತಿಳ್ಕೊಳ್ಳೋದೇ ನನ್ ಕಸಬು”

“ಹಾಗಿದ್ರೆ ಪರವಾಗಿಲ್ಲ”

“ಸರಿ ಹಾಗಿದ್ರೆ ಇಲ್ ಬೇಡಾ. ಮೇಲೆ ಮನೆಯಲ್ಲಿ ಕುಂತು ಮಾತಾಡೋಣ ಬನ್ನಿ” ಎಂದು ಅವರನ್ನು ಕರೆದುಕೊಂಡು ಮನೆಗೆ ಹೋದರು.

ನಡುಮನೆಯಲ್ಲಿ, ಪುಲಕೇಶಿ ಮಾಡಿದ ಕಾಪಿ ಹೀರುತ್ತಾ, ಶಂಕರ್ ನಡೆದ ಕತೆ ಹೇಳಲು ಶುರುಮಾಡಿದರು.

“ಸರ್ ನಾನು ಹುಲಿದುರ‍್ಗದಿಂದ ಬಂದಿದೀನಿ. ಚಿತ್ರದುರ‍್ಗದ ಹತ್ತಿರ ಒಂದು ಸಣ್ಣ ಹಳ್ಳಿ ಸಾರ್. ಅಲ್ಲಿ ಸಾಯನ್ಸ್ ಮೇಶ್ಟ್ರಾಗಿ ಕೆಲಸ ಮಾಡ್ತಾಯಿದೀನಿ. ಆಗಾಗ ಸುತ್ತ ಮುತ್ತ ಹಳ್ಳಿನಲ್ಲಿ ಪವಾಡ ಬಯಲು ಕಾರ‍್ಯಕ್ರಮ ನಡಸಿ ಕೊಡ್ತೀನಿ. ಪೇಪರ್ ನಲ್ಲೂ ನನ್ ಹೆಸರು ಬಂದಿತ್ತು ಸಾರ್. ಆದ್ರೆ ನಮ್ ಊರಲ್ಲೇ ನಡೀತಾ ಇರೋ ಪವಾಡ ಬಯಲು ಮಾಡೊಕ್ಕೆ ಆಗ್ತಿಲ್ಲಾ”

“ಓಹ್! ಅಂತಾ ಪವಾಡ ಏನು?” ಬೆರಗಾಗಿ ಕೇಳಿದನು ಪುಲಕೇಶಿ.

“ಹೌದು ಸಾರ್. ಹೇಳ್ತೀನಿ ಕೇಳಿ. ನಮ್ ಊರಲ್ಲಿ ತುಂಬಾ ಹಳೆಯ, ಚಿಕ್ಕ ರಾಮನ ಗುಡಿ ಇದೆ. ದುರ‍್ಗದ ಬರಮಣ್ಣ ನಾಯಕ್ರು ಆಳೋವಾಗ ಕಟ್ಸಿದ್ದು ಅಂತಾರೆ. ಈಗ ನಾಲ್ಕು ತಿಂಗಳಿಂದ ಪ್ರತೀ ಅಮವಾಸ್ಯೆ ರಾತ್ರಿ ಗುಡಿ ಒಳಗಿರೋ ದೀಪಾ ತನ್ನಿಂತಾನೇ ಹೊತ್ತಕೊಳ್ಳುತ್ತೆ ಸಾರ್. ಹೇಗೆ ಅಂತಾನೇ ಗೊತ್ತಾಗ್ತಿಲ್ಲಾ”

ಪುಲಕೇಶಿ ತುಸು ಹೊತ್ತು ಸುಮ್ಮನಿದ್ದ. ನಂತರ ಶಂಕರ್ ಕಡೆ ಕಣ್ಣು ಹೊರಳಿಸಿ, “ಏನ್ರೀ ಶಂಕರ್. ಸಾಯನ್ಸ್ ಮೇಶ್ಟ್ರು ಅಂತೀರಾ. ಬೆಂಕಿ ತನ್ನಿಂತಾನೇ ಹೇಗೆ ಹತ್ಕೊಳ್ಳುತ್ತೆ ಗೊತ್ತಿಲ್ವಾ?”

“ಅಶ್ಟ್ ಗೊತ್ತು ಸಾರ‍್” ಮೆದುವಾಗಿ ನಕ್ಕರು ಶಂಕರ್. “ಸರಳ ದಾರಿ ಅಂದ್ರೆ ಪೊಟಾಶಿಯಮ್ ಪರಮ್ಯಾಂಗ್ನೇಟ್ ಜೊತೆ ಗ್ಲಿಸಿರೀನ್ ಸೇರಿಸಿದ್ರೆ ಆಯ್ತು”

“ಮತ್ತೇ? ಅಶ್ಟೇ ಕಣ್ರಿ” ಎಲ್ಲ ಮುಗಿದಂತೆ ಮಾತಾಡಿದನು ಪುಲಕೇಶಿ, “ದೀಪದ ಬತ್ತಿಗೆ ಪೊಟಾಶಿಯಮ್ ಪರಮ್ಯಾಂಗ್ನೇಟ್ ಪುಡಿ ಹಚ್ಚಿ, ಎಣ್ಣೆ ಜೊತೆ ಸ್ವಲ್ಪ ಗ್ಲಿಸರೀನ್ ಸೇರಿಸಿದ್ರೆ ಆಯ್ತು”

“ಅಶ್ಟು ಸುಲಬ ಆಗಿದ್ರೆ ನನಗ್ ಗೊತ್ತಾಗ್ತಿತ್ತು ಸಾರ್. ಆದ್ರೆ ನಾವು ಗುಡಿ ಬೀಗ ಹಾಕೋವಾಗ ಪಣತೆನಲ್ಲಿ ಎಣ್ಣೆನೇ ಇರೋದಿಲ್ಲಾ”

“ಓಹ್! ಇಂಟರಿಸ್ಟಿಂಗ್”, ಬೆರಗಾಗಿ ಪುಲಕೇಶಿಯ ಕಣ್ಣು ಅರಳಿದವು. ಸೋಪಾದ ಮೇಲಿಂದ ಎದ್ದು ನಿಂತು, ಕಿಟಕಿಯ ಕಡೆಗೆ ನಡೆದು, ಸಿಗರೇಟು ಹೊತ್ತಿಸಿದನು. ಒಂದು ಬಾರಿ ಹೊಗೆ ಎಳೆದು, ಹೊರ ಬಿಟ್ಟು, “ಗುಡಿ ಒಳಗಡೆ ಎಲ್ಲಾ ಚೆಕ್ ಮಾಡಿದಿರಾ ಅನ್ಕೋತೀನಿ” ಅಂದನು.

“ಮಾಡಿದೀವಿ ಸರ್. ಗುಡಿ ಪೂಜೆ ಮಾಡೊ ವೆಂಕಣ್ಣನವ್ರು ತುಂಬಾ ಒಳ್ಳೆಯವರು. ಹಾಗಾಗಿ ಗುಡಿ ಒಳಗಡೆ ಹೋಗಿ ಬರೋದಕ್ಕೆ ಏನೂ ತೊಂದ್ರೆ ಇಲ್ಲ”

ಗೋಡೆ ಗೆ ತೂಗು ಹಾಕಿದ್ದ ಕ್ಯಾಲೆಂಡರ್ ನತ್ತ ಹೋಗಿಬಂದನು ಪುಲಕೇಶಿ.

“ಅಂದ್ರೆ ನಿನ್ನೆ ರಾತ್ರಿ ದೀಪ ಹೊತ್ತಿತ್ತು ಅನ್ನಿ”

“ಹೌದು ಸಾರ್, ಇದು ಅಯ್ದನೇ ಅಮವಾಸ್ಯೆ”

“ದೀಪ ಹತ್ತೋದು ನೀವೇ ಕಣ್ಣಾರೆ ನೋಡಿದಿರಾ?”

“ಹೌದು ಸರ‍್”

“ಅಂದ್ರೆ, ಕಾಲಿ ಪಣತೆನಲ್ಲಿ ಎಣ್ಣೆ ಹುಟ್ಟೋದು ನೋಡಿದಿರಾ?”

“ಇಲ್ಲಾ ಸರ್. ಕತ್ಲಲ್ಲಿ ಅದು ಕಾಣೋದಿಲ್ಲಾ. ನಾವೆಲ್ಲಾ ಗರ‍್ಬಗುಡಿಯ ಹೊರಗಡೆ ಇದ್ವಿ ಸರ್. ದೀಪ ಹೊತ್ಕೊಂಡ ಮೇಲೆನೇ ಒಳಗಡೆ ಬೆಳಕು ಕಾಣ್ಸೋದು”

ಸ್ವಲ್ಪ ಹೊತ್ತು ಸುಮ್ಮನಿದ್ದು, ಪುಲಕೇಶಿ, “ಯಾರು ಮೊದಲು ಈ ಪವಾಡ ನೋಡಿದ್ದು?” ಎಂದನು.

“ನಮ್ ಅರ‍್ಚಕರ ಮಗ ಸರ್. ಗೋಪಿ ಅಂತ. ಅವ್ನು ಮತ್ತೆ ಅವನ ಗೆಳೆಯರು ಈ ಪವಾಡ ನೋಡಿ, ಊರಲ್ಲಿರೋ ಎಲ್ರಿಗೂ ತಿಳ್ಸಿದ್ದು”

ಮಾತೆಲ್ಲ ಮುಗಿದಂತೆ ಇಬ್ಬರೂ ಸುಮ್ಮನೆ ಕೂತರು. ಪುಲಕೇಶಿಯವರ ಗೆಳೆಯ ಮಂಜು, ಮೂಗನಂತೆ ಇಬ್ಬರ ಮಾತೂ ಕೇಳುತ್ತ ಕುಂತಿದ್ದರು. ಕೇಳಿದ್ದೆಲ್ಲವನ್ನೂ ಅರಗಿಸಿಕೊಳ್ಳುವಂತೆ ಪುಲಕೇಶಿ ಕಣ್ಣು ಮುಚ್ಚಿ ಏನೋ ಯೋಚಿಸುತ್ತ, ಕಿಟಕಿಯ ಬದಿಗೆ ನಿಂತು ಹೊಗೆ ಎಳೆಯುತ್ತಿದ್ದನು. ಒಂದೆರಡು ನಿಮಿಶವಾದ ಮೇಲೆ ಇವರು ಕೂತಿದ್ದ ಕಡೆ ಬಂದು, “ಸಿಂಪಲ್ ಅನ್ಸುತ್ತೆ. ನಾಳೆ ನಿಮ್ ಊರಿಗೆ ಬರ‍್ತೀನಿ, ನೀವಿನ್ ಹೊರಡಿ” ಎಂದನು.

(ಮುಂದುವರೆಯುವುದು : ಎರಡನೆ  ಕಂತು ನಾಳೆ ಮೂಡಿ ಬರುತ್ತದೆ) 

( ಚಿತ್ರ ಸೆಲೆ: fineartamerica.com )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. 12/08/2015

    […] ಕಂತು-1 ಕಂತು 2 […]

  2. 13/08/2015

    […] ಕಂತು-1 ಕಂತು 2 ಕಂತು 3 […]

  3. 14/08/2015

    […] ಕಂತು-1 ಕಂತು 2 ಕಂತು 3 ಕಂತು 4 […]

ಅನಿಸಿಕೆ ಬರೆಯಿರಿ: