ಚಿಕೂನ್ ಗುನ್ಯಾ

ಯಶವನ್ತ ಬಾಣಸವಾಡಿ.

ಚಿಕೂನ್ ಗುನ್ಯಾ (chikungunya) ಎಂಬ ನಂಜುಳಗಳು (viruses) ಮನುಶ್ಯರಲ್ಲಿ ಚಿಕೂನ್ ಗುನ್ಯಾ ಬೇನೆಯನ್ನು ಉಂಟುಮಾಡುತ್ತವೆ. ಸೊಳ್ಳೆಗಳಿಂದ ಹರಡುವ ಈ ಬೇನೆಯನ್ನು ಮೊದಲ ಬಾರಿಗೆ ಬಡಗಣ ಟಾಂಜಾನಿಯಾದಲ್ಲಿ (North Tanzania) 1952 ರ ಹೊತ್ತಿಗೆ ಗುರುತಿಸಲಾಯಿತು.

chikungunya titta 1“ಚಿಕೂನ್ ಗುನ್ಯಾ” ಹೆಸರು, ಕಿಮಕೊಂಡೆ (Kimakonde) ನುಡಿಯಿಂದ ಬಂದಿದೆ. ಕಿಮಕೊಂಡೆ ನುಡಿಯಲ್ಲಿ ಚಿಕೂನ್ ಗುನ್ಯಾ ಪದವು ‘ತಿರುಚಿದಂತಾಗು’ (to become contorted) ಎಂಬ ಹುರುಳನ್ನು ಕೊಡುತ್ತದೆ. ಈ ಬೇನೆಗೆ ತುತ್ತಾದ ಮಂದಿಯಲ್ಲಿ ಕೀಲುಗಳ ನೋವಿನಿಂದಾಗಿ ತಲೆ ಹಾಗು ತೋಳುಗಳು ಮುಂದಕ್ಕೆ ಬಾಗಿರುತ್ತವೆ ಎಂದು ತಿಳಿಸಲು ಈ ಪದದ ಬಳಕೆಯಾಗಿದೆ.

ಹರಡುವ ಬಗೆ:

chikungunya titta 2

ಬೇನೆಯು ಹರಡಲು ಏಡಿಸ್ ಇಜಿಪ್ಟಯ್ ( Aedes aegypti) ಹಾಗು ಏಡಿಸ್ ಅಲ್ಬಾಪಿಕ್ಟಸ್ (Aedes albopictus) ಜಾತಿಗೆ ಸೇರಿದ ಹೆಣ್ಣು ಸೊಳ್ಳೆಗಳು ಮುಕ್ಯ ಕಾರಣ. ಇವು ಡೆಂಗ್ಯೂ (Dengue) ಜ್ವರವನ್ನೂ ಹರಡುವ ಅಳವನ್ನು ಹೊಂದಿರುತ್ತವೆ. ಈ ಸೊಳ್ಳೆಗಳು, ಹಗಲಿನ ಹೊತ್ತಿನಲ್ಲಿ ಅದರಲ್ಲೂ ಹೊತ್ತಾರೆ (early morning) ಹಾಗು ಹೊತ್ತು ಮೀರಿದ (after noon) ಗಳಿಗೆಗಳಲ್ಲಿ ಚೂರುಕಾಗಿರುತ್ತವೆ. ಅಂದರೆ, ಈ ಹೊತ್ತುಗಳಲ್ಲಿ ಅವು ಮನುಶ್ಯರನ್ನು ಕಚ್ಚುವ ಸಾದ್ಯತೆ ಹೆಚ್ಚು. ಬೇನೆಬಿದ್ದ ಮನುಶ್ಯನನ್ನು ಕಚ್ಚಿದ ಸೊಳ್ಳೆ, ಹದುಳದ (healthy) ಮನುಶ್ಯನನ್ನು ಕಚ್ಚಿದಾಗ, ಈ ಬೇನೆಯು ಹರಡುತ್ತದೆ. ಎರಡೂ ಬಗೆಯ ಸೊಳ್ಳೆಗಳು ಬಯಲಿನಲ್ಲಿ ಬದುಕುತ್ತವೆ. ಆದರೆ ಏಡಿಸ್ ಇಜಿಪ್ಟಯ್‍ಗಳನ್ನು ಕಟ್ಟಡಗಳ ಒಳಗೂ ಕಾಣಬಹುದು. ಸೋಂಕನ್ನು ಹೊಂದಿರುವ ಸೊಳ್ಳೆ ಕಚ್ಚಿದ 4-8 ದಿನಗಳಲ್ಲಿ ಬೇನೆಯು ಹದುಳದ ಮನುಶ್ಯನಲ್ಲಿ ನೆಲೆಯೂರುತ್ತದೆ.

ಕಾಡುವ ಬಗೆ (signs & symptoms):

ಈ ಬೇನೆಯಲ್ಲಿ ಕಾಣಿಸಿಕೊಳ್ಳುವ ಅರಿದಾದ (important) ಕುರುಹುಗಳೆಂದರೆ (symptoms), ಇದ್ದಕ್ಕಿದ್ದಂತೆ ಜ್ವರ ಹಾಗು ಕೀಲುಗಳ ನೋವು ಕಾಣಿಸಿಕೊಳ್ಳುವುದು. ಇವುಗಳಲ್ಲದೆ, ಕಂಡಗಳ ನೋವು, ತಲೆನೋವು, ವಾಕರಿಕೆ, ದಣಿವು ಹಾಗು ಗಂದೆಗಳೂ (rash) ಕಾಣಿಸಿಕೊಳ್ಳುತ್ತವೆ. ಮೇಲಿನ ಕುರಹುಗಳಲ್ಲಿ, ಕೀಲುಗಳ ನೋವು ಬೇನೆ ಬಿದ್ದವರನ್ನು ತುಂಬಾ ಪೀಡಿಸುತ್ತದೆ. ಈ ನೋವು ಎರಡು-ಮೂರು ದಿನಗಳಿಂದ ಹಿಡಿದು ಕೆಲವು ವಾರಗಳವರೆಗೆ ಇರುತ್ತದೆ. ಅಂದರೆ, ಈ ನಂಜುಳವು ಮೊನಚು (acute), ಅರೆಮೊನಚು (subacute) ಇಲ್ಲವೇ ಬೇರೂರಿದ (chronic) ವರಸೆಗಳಲ್ಲಿ ಮಂದಿಯನ್ನು ಕಾಡಬಲ್ಲದು.

ಸಾಮಾನ್ಯವಾಗಿ ಚಿಕೂನ್ ಗುನ್ಯಾದ ಕುತ್ತಿಗರಲ್ಲಿ (patients), ಕೆಲವು ದಿನಗಳ ಬಳಿಕ ಬೇನೆಯು ವಾಸಿಯಾಗುತ್ತದೆ. ಆದರೆ ಕೆಲವರಲ್ಲಿ ಕೀಲು ನೋವು ಹಲವು ತಿಂಗಳುಗಳಿಂದ ಹಿಡಿದು ವರುಶಗಳವರೆಗೆ ಕಾಡುತ್ತದೆ. ಒಮ್ಮೊಮ್ಮೆ ಕಣ್ಣು, ಗುಂಡಿಗೆ, ನರಗಳು ಹಾಗು ಅರಗೇರ‍್ಪಾಟುಗಳ ತೊಡಕುಗಳೂ ಕಾಣಿಸಬಹುದು. ವಯಸ್ಸಾದವರಲ್ಲಿ ಈ ಬೇನೆಯು ಕೆಲವೊಮ್ಮೆ ಸಾವನ್ನೂ ಉಂಟುಮಾಡುತ್ತದೆ.

ಕುತ್ತುದೊರೆತ (diagnosis)

ಚಿಕೂನ್ ಗುನ್ಯಾ ಬೇನೆಯನ್ನು ಕಂಡು ಹಿಡಿಯಲು ಇರುವು ತೊಡಕುಗಳೆಂದರೆ,

1)   ಹೆಚ್ಚಿನ ಮಂದಿಯಲ್ಲಿ, ಬೇನೆಯ ಕಡುಹು (intensity) ನಯವಾಗಿರುತ್ತವೆ (mild). ಇದು ಬೇನೆಯ ಕುರುಹುಗಳನ್ನು ಅಶ್ಟಾಗಿ ತೋರ‍್ಪಡಿಸದ ಕಾರಣ, ಬೇನೆಯನ್ನು ಗುರುತಿಸಲು ಆಗುವುದಿಲ್ಲ.

2)   ಚಿಕೂನ್ ಗುನ್ಯಾದ ಬೇನೆಯ ಕುರುಹುಗಳು ತಕ್ಕಮಟ್ಟಿಗೆ ಡೆಂಗ್ಯೂ ಜ್ವರವನ್ನು ಹೋಲುವುದರಿಂದ, ಕೆಲವೆಡೆ ಈ ಬೇನೆಯನ್ನು ತಪ್ಪಾಗಿ ಗುರುತಿಸಲಾಗುತ್ತಿದೆ.

ಬೇನೆಯನ್ನು ಕಂಡುಹಿಡಿಯಲು ಬಳಸಲಾಗುತ್ತಿರುವ ಕುತ್ತುದೊರೆತದ (diagnostic) ಹೊಲಬುಗಳು (methods):

1)   ಎಲಯ್ಸ (ELISA= enzyme linked immunosorbent assay): ಬೇನೆಬಿದ್ದವರ ನೆತ್ತರಿನಲ್ಲಿ ಚಿಕೂನ್ ಗುನ್ಯಾದ ನಂಜುಳಗಳ ಎದುರಾಗಿ ಮಾಡಲ್ಪಡುವು IgM ಮತ್ತು IgG ಎದುಕಗಳನ್ನು (antibodies) ಗುರುತಿಸಲು ಈ ಹೊಲಬು ನೆರವಾಗುತ್ತದೆ. IgM ಎದುರುಕದ ಮಟ್ಟ, ಬೇನೆ ತಗುಲಿದ 3-5 ವಾರಗಳಲ್ಲಿ ಹೆಚ್ಚಿದ್ದು, ಅದರ ಮುಂದಿನ ಎರಡು ತಿಂಗಳುಗಳವರೆಗೆ ಕುತ್ತಿಗರಲ್ಲಿ ಗುರುತಿಸಬಹುದಾಗಿದೆ.

2)   ಕುರುಹುಗಳು ಕಾಣಿಸಿಕೊಂಡ ಮೊದಲ ವಾರದಲ್ಲಿ, ನಂಜುಳಗಳ ಎದುರುಕಗಳ ಮೊತ್ತ ಕಡಿಮೆಯಿರುವುದರಿಂದ, ಎಲಯ್ಸ ಹೊಲಬು ಬೇನೆಯನ್ನು ಗುರುತಿಸಲು ಎಡವಬಹುದು. ಈ ತೊಡಕನ್ನು ಸರಿಪಡಿಸಲು, ಕುರುಹುಗಳು ಕಾಣಿಸಿಕೊಂಡ ಮೊದಲ ವಾರದಲ್ಲಿ, ಬೇನೆಯನ್ನು ಕಂಡುಹಿಡಿಯಲು, ಎಲಯ್ಸ ಜೊತೆಗೆ ಆರ್.ಟಿ-ಪಿ.ಸಿ.ಆರ್ (RT-PCR) ಹೊಲಬನ್ನೂ ಬಳಸಿಕೊಳ್ಳಬೇಕಾಗುತ್ತದೆ. ಆರ್.ಟಿ-ಪಿ.ಸಿ.ಆರ್ (RT-PCR), ಬೇನೆಬಿದ್ದವರ ನೆತ್ತರಿನಲ್ಲಿ ಇರುವ ಚಿಕೂನ್ ಗುನ್ಯಾ ನಂಜುಳಗಳ ಆ.ಎನ್.ಎ ಯನ್ನು ಗುರುತಿಸಲು ನೆರವಾಗುತ್ತದೆ.

ಮಾಂಜುಗೆ (treatment):

ಚಿಕೂನ್ ಗುನ್ಯಾ ನಂಜುಳಗಳನ್ನು ಕೊಲ್ಲುವ ಇಲ್ಲವೇ ತಡೆಯುವ ಯಾವುದೇ ಬಗೆಯ ಮದ್ದುಗಳನ್ನು ಇಲ್ಲಿಯವರೆಗೆ ಮಾಡಲಾಗಿಲ್ಲ. ಕಾಣಿಸುವ ಕುರುಹುಗಳಿಗೆ ತಕ್ಕಂತೆ, ನೆರವಿನ ಮಾಂಜುಗೆಯನ್ನು (supportive treatment) ಕೊಡಲಾಗುತ್ತಿದೆ. ಅವುಗಳೆಂದರೆ, ನೋವನ್ನು ತಡೆಯಲು ನೋವಳಿಕ (analgesic), ಜ್ವರವನ್ನು ತಗ್ಗಿಸಲು ಬಿಸುಪಳಿಕ (anti-pyretic) ಹಾಗು, ಮಯ್ ಹರಿಕದಲ್ಲಿ ಉಂಟಾಗುವ ಏರು-ಪೇರುಗಳನ್ನು ಸರಿಪಡಿಸಲು ಬೇನೆಬಿದ್ದವರ ಹರಿಸುವೆರ‍್ಪಾಟಿಗೆ (circulatory system) ಮಿಂತುಣುಕುಗಳನ್ನು (electrolytes) ಹೊಂದಿರುವ ಹರಿಕವನ್ನು ಉಣಿಸುವುದು.

ಬೇನೆ ತಡೆಯುವ ಬಗೆ:

ಚಿಕೂನ್ ಗುನ್ಯಾ ನಂಜುಳವನ್ನು ತಡೆಯುವ ಮುನ್ಮದ್ದು (vaccine) ಸದ್ಯದ ಮಟ್ಟಿಗೆ ಇಲ್ಲ. ಈ ಬೇನೆಯನ್ನು ತಡೆಯಲು, ಕೆಳಗಿನ ಹೊಳಹುಗಳನ್ನು ಬಳಸಿಕೊಳ್ಳಬಹುದಾಗಿದೆ.

1)   ಸೊಳ್ಳೆಗಳು ನೆಲೆಸಲು ಹಾಗು ತಮ್ಮ ಸಂಕ್ಯೆಯನ್ನು ಹೆಚ್ಚಿಸಿಕೊಳ್ಳಲು ನಿಂತ ನೀರು ಹೇಳಿಮಾಡಿಸಿದ ತಾಣ. ಮನೆಯ ನೀರಿನ ತೊಟ್ಟಿ, ಬಚ್ಚಲು, ಮಳೆ ನೀರು ನಿಲ್ಲುವ ತಾಣಗಳನ್ನೂ ಒಳಗೊಂಡಂತೆ ಎಲ್ಲಾ ಬಗೆಯ ನಿಂತ ನೀರಿನ ತಾಣಗಳನ್ನು ಬರಿದುಗೊಳಿಸುವುದು ಇಲ್ಲವೇ ಸೊಳ್ಳೆಗಳು ನೆಲೆಸದಂತೆ ನೋಡಿಕೊಳ್ಳುವುದು.

2)   ಬೇನೆಯ ಸಿಡಿಯುವಿಕೆಯಾದಾಗ (outbreak), ಸೊಳ್ಳೆಗಳು ನೆಲೆಸುವ ತಾಣಗಳ ಮೇಲೆ ಪೂಚಿಯಳಿಕಗಳನ್ನು (insecticides) ಉದುರಿಸಿವುದು.

3)   ಸಿಡಿಯುವಿಕೆಯ ಹೊತ್ತಿನಲ್ಲಿ ಸೊಳ್ಳೆಗಳು ಕಚ್ಚುವುದನ್ನು ತಡೆಯಲು, ಆದಶ್ಟು ಮಯ್ ಮುಚ್ಚುವಂತೆ ಬಟ್ಟೆಯನ್ನು ತೊಡುವುದು, ಪೂಚಿಸರಿಸುಕಗಳನ್ನು (insect repellent) ಮಯ್ ಹಾಗು ಬಟ್ಟೆಯ ಮೇಲೆ ಸವರಿಕೊಳ್ಳುವುದು.

4)  ಹಗಲು ಹೊತ್ತಿನಲ್ಲಿ ಮಲಗುವವರು (ಎತ್ತುಗೆಗೆ: ಮಕ್ಕಳು, ಕುತ್ತಿಗರು, ಮುದುಕರು), ಪೂಚಿಯಳಿಕಗಳಿಂದ ಮದ್ದು ಮಾಡಿದ ಸೊಳ್ಳೆ ಪರದೆಗಳನ್ನು ಬಳಸುವುದು. ಕೋಣೆಗಳಲ್ಲಿ ಮಲಗುವವರು ಸೊಳ್ಳೆ-ಸುರುಳಿಗಳನ್ನು (mosquito coils) ಹಾಗು ಪೂಚಿಯಳಿಕದ ಆವಿಕಗಳನ್ನೂ (insecticide vaporizer) ಬಳಸಬಹುದಾಗಿದೆ.

 ಸಿಡಿಯುವಿಕೆ (outbreak):

chikungunya titta 3

ಇದುವರೆಗೂ ಚಿಕೂನ್ ಗುನ್ಯಾ ಬೇನೆಯನ್ನು ಏಶ್ಯ, ಆಪ್ರಿಕಾ, ಯುರೋಪ್ ಮತ್ತು ಅಮೇರಿಕಾ ಪೆರ‍್ನೆಲಗಳ (continent) 60 ಕ್ಕೂ ಹೆಚ್ಚಿನ ನಾಡುಗಳಲ್ಲಿ ಗುರುತಿಸಲಾಗಿದೆ.

1)   1999-2000 ರಲ್ಲಿ ಕಾಂಗೋ ನಾಡಿನಲ್ಲಿ (Democratic Republic of the Congo) ಹಾಗು 2007 ರಲ್ಲಿ ಗೆಬೊನ್ (Gabon) ನಾಡುಗಳಲ್ಲಿ ಕಾಣಿಸಿಕೊಂಡಿತ್ತು.

2)   2005 ರಿಂದ ಬಾರತ, ಇಂಡೋನೇಶಿಯ, ಮಾಲ್ಡಿವ್ಸ್, ಮ್ಯಾನ್ಮಾರ್ ಹಾಗು ತಯ್ ಲ್ಯಾಂಡ್ ಗಳಲ್ಲಿ ಒಟ್ಟಾರೆ 1.9 ಮಿಲ್ಲಿಯನ್ ಮಂದಿ ಚಿಕೂನ್ ಗುನ್ಯಾ ಬೇನೆಗೆ ತುತ್ತಾಗಿದ್ದಾರೆ.

3)   2007 ರಲ್ಲಿ ಯುರೋಪಿನ ಬಡಗ-ಮೂಡಣದ (north east) ಇಟಲಿಯಲ್ಲಿ ಕಾಣಿಸಿಕೊಂಡಿತ್ತು. ಯುರೋಪಿನಲ್ಲಿ ಗುರುತಿಸಿದ ಮೊದಲ ಚಿಕೂನ್ ಗುನ್ಯಾ ಬೇನೆಯ ಸಿಡಿಯುವಿಕೆ ಇದಾಗಿತ್ತು. ಈ ಸಿಡಿಯುವಿಕೆಗೆ 197 ಮಂದಿ ತುತ್ತಾಗಿದ್ದರು. ಇದಕ್ಕೆ ಕಾರಣ ಏಡಿಸ್ ಅಲ್ಬಾಪಿಕ್ಟಸ್ (Aedes albopictus) ಇದ್ದಿರಬಹುದು ಎಂದೂ ಹೇಳಲಾಗಿದೆ.

4)   2013 ರಲ್ಲಿ ಪ್ರೆಂಚರ ಪಾಳ್ಯವಾದ (colony) ಸಂತ ಮಾರ‍್ಟಿನರ ಕೆರೆಬಿಯನ್ ನಡುಗಡ್ಡೆಯಲ್ಲಿ (Caribbean Island of St. Martin), ಇಬ್ಬರು ಚಿಕೂನ್ ಗುನ್ಯಾ ಬೇನೆಯಿಂದ ಬಳಲಿರುವುದರ ಬಗ್ಗೆ ವರದಿಯಾಗಿದೆ. ಅಂದಿನಿಂದ ಇದುವರೆಗೆ ಸುತ್ತಮುತ್ತಲಿನ 43 ನಾಡುಗಳಲ್ಲಿ, ಈ ಬೇನೆಯನ್ನು ಗುರುತಿಸಲಾಗಿದೆ. ಏಪ್ರಿಲ್ 2015 ರ ವರದಿಯಂತೆ, ಕೆರೆಬಿಯನ್ ನಡುಗಡ್ಡೆ, ಲ್ಯಾಟಿನ್ ಅಮೇರಿಕಾದ ನಾಡುಗಳು ಹಾಗು ಬಡಗಣ ಅಮೆರಿಕಾಗಳಲ್ಲಿ 13,79,788 ಮಂದಿ ಚಿಕೂನ್ ಗುನ್ಯಾ ಬೇನೆಗೆ ತುತ್ತಾಗಿರಬಹುದೆಂದು ಹೇಳಲಾಗಿದೆ. ಇದೇ ಹೊತ್ತಿನಲ್ಲಿ 191 ಸಾವುಗಳು ಚಿಕೂನ್ ಗುನ್ಯಾ ಬೇನೆಯಿಂದ ಆಗಿದೆ ಎಂದು ವರದಿ ತಿಳಿಸುತ್ತದೆ. ಕೆನಡ, ಮೆಕ್ಸಿಕೊ ಹಾಗು ಒಗ್ಗೂಡಿದ ಅಮೆರಿಕಾದ ನಾಡುಗಳಲ್ಲಿಯೂ ಕೆಲವು ಮಂದಿ ಈ ಬೇನೆಗೆ ತುತ್ತಾಗಿದ್ದಾರೆ.

5)   2014 ರ ಅಕ್ಟೋಬರ್ 21 ರಂದು, ಪ್ರಾನ್ಸ್ ನಾಡಿನ ಮೊಂಟ್ಪೆಲ್ಲಿಯಿಯರ‍್‍ನಲ್ಲಿ (Montpellier) ಬೇನೆಗೆ ತುತ್ತಾದವರನ್ನು ಗುರುತಿಸಲಾಗಿದೆ.

6)   2014 ರ ಕೊನೆಯಿಂದ ಪೆಸಿಪಿಕ್ ನಡುಗಡ್ಡೆಗಳಲ್ಲಿ ಬೇನೆಯನ್ನು ಗುರುತಿಸಲಾಗಿದೆ. ಸದ್ಯದ ಮಟ್ಟಿಗೆ, ಕುಕ್ ನಡುಗಡ್ಡೆ ಮತ್ತು ಮಾರ‍್ಶಲ್ ನಡುಗಡ್ಡೆಗಳಲ್ಲಿ ಚಿಕೂನ್ ಗುನ್ಯಾದ ಸಿಡಿಯುವಿಕೆಯಾಗುತ್ತಿದೆ.

ಕರ‍್ನಾಟಕದಲ್ಲಿ ಚಿಕೂನ್ ಗುನ್ಯಾ:

2005-2006 ರಲ್ಲಿ ಬಾರತದಲ್ಲಿ ಚಿಕೂನ್ ಗುನ್ಯಾ ಬೇನೆಯ ಸಿಡಿಯುವಿಕೆಯಾಗಿತ್ತು. ಈ ಸಿಡಿಯುವಿಕೆ ಕರ‍್ನಾಟಕ, ಅಂದಿನ ಆಂದ್ರ ಪ್ರದೇಶ, ಅಂಡಮಾನ್ & ನಿಕೊಬಾರ ನಡುಗಡ್ಡೆಗಳು, ಮಹಾರಾಶ್ಟ್ರ, ಗುಜರಾತ್, ಮದ್ಯ ಪ್ರದೇಶ, ಕೇರಳ ಹಾಗು ದಿಲ್ಲಿ ರಾಜ್ಯಗಳ ಮಂದಿಯನ್ನು ಕಾಡಿತ್ತು.

2005 ರ ಸಿಡಿಯುವಿಕೆಯಲ್ಲಿ ಕರ‍್ನಾಟಕದ ಕಲಬುರಗಿ, ತುಮಕೂರು, ಬೀದರ್, ರಾಯಚೂರು, ಬಳ್ಳಾರಿ, ಚಿತ್ರದುರ‍್ಗ, ದಾವಣೆಗೆರೆ, ಕೋಲಾರ ಹಾಗು ವಿಜಯಪುರ ಜಿಲ್ಲೆಗಳಲ್ಲಿ 80, 000 ಮಂದಿ ಚಿಕೂನ್ ಗುನ್ಯಾ ಬೇನೆಗೆ ತುತ್ತಾಗಿದ್ದರು. 2006 ರ ಮೇ ತಿಂಗಳಿನಲ್ಲಿ ಬೆಂಗಳೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ, ಗದಗ ಹಾಗು ದಾರವಾಡ ಜಿಲ್ಲೆಗಳಲ್ಲಿ ಈ ಬೇನೆಯ ಸಿಡಿಯುವಿಕೆಯಾಗಿತ್ತು. ಜುಲಯ್ 2006 ರ ಹೊತ್ತಿಗೆ ಕರ‍್ನಾಟಕದಲ್ಲಿ 3,00,000 ಮಂದಿ ಈ ಬೇನೆಯಿಂದ ಬಳಲುತ್ತಿದ್ದರು.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: who.int, cdc.gov, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications