ಸರ‍್ವಜ್ನನ ವಚನಗಳ ಹುರುಳು – 2ನೆಯ ಕಂತು
– ಸಿ.ಪಿ.ನಾಗರಾಜ.
11) ಲಿಂಗಕ್ಕೆ ತೋರಿಸುತ ನುಂಗುವಾತನೆ ಕೇಳು
ಲಿಂಗ ಉಂಬುವುದೆ ಪೊಡಮಡುತ-ಎಲೊ ಪಾಪಿ
ಜಂಗಮಕೆ ನೀಡು ಸರ್ವಜ್ಞ
ಜಡರೂಪಿ ಲಿಂಗದ ಮುಂದೆ ಹಲವು ಬಗೆಯ ಉಣಿಸುಗಳನ್ನು ಕೆಲವು ಗಳಿಗೆ ಇಟ್ಟು , ಅನಂತರ ತಾನೇ ಕಬಳಿಸುವುದರ ಬದಲು , ಹಸಿದು ಬರುವ ಜೀವರೂಪಿ ಜಂಗಮನಿಗೆ ಉಣಿಸನ್ನು ನೀಡಬೇಕೆಂಬುದನ್ನು ಹೇಳಲಾಗಿದೆ .
( ಉಂಬುವುದೆ=ಉಣ್ಣುತ್ತದೆಯೇ/ತಿನ್ನುತ್ತದೆಯೇ ; ಪೊಡಮಡು=ಅಡ್ಡಬೀಳು/ನಮಸ್ಕರಿಸು ; ಜಂಗಮ=ಶಿವನನ್ನು ನಂಬಿರುವ ಮತ್ತು ಕಾಯಕದ ಬೆಲೆಯನ್ನು ಅರಿತಿರುವ ವ್ಯಕ್ತಿ )
12) ಕಲ್ಲು ಕಾಷ್ಟವು ಬೆತ್ತದಲ್ಲಿ ಇಹನೇ ಶಿವನು
ಎಲ್ಲಿಯ ಮಾತು ಹುಸಿ ಬೇಡ-ನಿಷ್ಟೆ
ಇದ್ದಲ್ಲಿಹನಬವ ಸರ್ವಜ್ಞ
ಶಿವನ ಪ್ರತಿರೂಪವು ಜಡವಸ್ತುಗಳಲ್ಲಿ ಇರುವುದಿಲ್ಲ . ಮಾನವರ ಒಳ್ಳೆಯ ನಡೆನುಡಿಗಳು ಇರುವ ಕಡೆಯಲ್ಲಿ ಶಿವನು ನೆಲೆಸಿರುತ್ತಾನೆ ಎಂಬುದನ್ನು ಹೇಳಲಾಗಿದೆ.
( ಕಾಷ್ಟ=ಮರದ ತುಂಡು/ಕಟ್ಟಿಗೆ ; ಬೆತ್ತ=ಬಿದಿರಿನ ಕೋಲು ; ಇಹನೇ=ಇರುವನೇ ; ಹುಸಿ=ಸುಳ್ಳು ; ನಿಷ್ಟೆ=ಸಮಾಜಕ್ಕೆ ಒಳಿತನ್ನು ಉಂಟುಮಾಡುವ ನಡೆನುಡಿಗಳಲ್ಲಿ ನಂಬಿಕೆ ; ಇದ್ದಲ್ಲಿ+ಇಹನು+ಅಬವ ; ಇದ್ದಲ್ಲಿ=ಇರುವಲ್ಲಿ ; ಇಹನು=ಇರುವನು ; ಬವ=ಹುಟ್ಟು ; ಅಬವ=ಶಿವ ; ಅಬವ= ಹುಟ್ಟುಸಾವುಗಳ ಸುಳಿಗೆ ಸಿಲುಕದವನು )
13) ರಸಿಕರಾಡುವ ಮಾತು ಶಶಿ ಉದಯವಾದಂತೆ
ರಸಿಕರಲ್ಲದವರ ಬಿರುನುಡಿಯು-ಕಿವಿಯೊಳು
ಕೂರ್ದಸಿಯ ಬಲಿದಂತೆ ಸರ್ವಜ್ಞ
ಕೇಳುಗರ ಮನದಲ್ಲಿ ಅರಿವು ಹಾಗೂ ಆನಂದವನ್ನು ಮೂಡುವಂತೆ ಇಲ್ಲವೇ ಆತಂಕ ಹಾಗೂ ಕಳವಳವನ್ನು ಉಂಟುಮಾಡಿ ನೋಯಿಸುವಂತೆ ನುಡಿಯುವದರಿಂದ ಉಂಟಾಗುವ ಪರಿಣಾಮಗಳನ್ನು ಹೇಳಲಾಗಿದೆ .
(ರಸಿಕರು+ಆಡುವ ; ರಸಿಕ=ಒಳಿತು ಕೆಡುಕುಗಳನ್ನು ಅರಿತವನು / ಯಾವುದೇ ಸಂಗತಿಗಳಲ್ಲಿ ಒಳ್ಳೆಯದನ್ನು ಮತ್ತು ಚೆಲುವನ್ನು ಗುರುತಿಸಿ ತಾನೂ ಸವಿದು ಇತರರಿಗೂ ಹೇಳುವವನು ; ಶಶಿ=ಚಂದ್ರ; ಉದಯವು+ಆದಂತೆ=ಬೆಳುದಿಂಗಳನ್ನು ಚೆಲ್ಲುತ್ತಾ ಮೂಡಿಬರುವಂತೆ ; ಬಿರು=ಒರಟು/ಗಡುಸು ; ಬಿರುನುಡಿ=ಕೇಳುಗರ ಮನವನ್ನು ನೋಯಿಸುವಂತಹ ಮಾತುಗಳು ; ಕೂರ್ದಸಿ=ಕೂರ್+ದಸಿ ; ಕೂರ್=ಹರಿತವಾದ/ಮೊನಚಾದ/ಚೂಪಾದ ; ದಸಿ=ಶೂಲ/ಚೂಪಾದ ತುದಿಯುಳ್ಳ ಹತಾರ ; ಬಲಿ=ಚುಚ್ಚು/ನಾಟು ; ಬಲಿದ+ಅಂತೆ=ನಾಟಿಕೊಂಡ ಹಾಗೆ )
14) ಮಾತು ಬಂದಲ್ಲಿ ತಾ ಸೋತು ಬರುವುದು ಲೇಸು
ಮಾತಿಂಗೆ ಮಾತ ಮತನಿಸೆ-ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ
ಇತರರೊಡನೆ ಹೊಂದಾಣಿಕೆಯುಂಟಾಗದೆ ಮಾತಿಗೆ ಮಾತು ಬೆಳೆದಾಗ , ಕೋಪತಾಪಗಳಿಂದ ಕುದಿಯುತ್ತಾ ಮತ್ತೆ ಮತ್ತೆ ಮಾತನ್ನು ಮುಂದುವರಿಸಿಕೊಂಡು ಹೋದರೆ , ಅದು ಹಾನಿಗೆ ಎಡೆಮಾಡಿಕೊಡುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ .
( ಮಾತು ಬಂದಲ್ಲಿ=ಇಬ್ಬರು/ಅನೇಕರ ನಡುವೆ ಒಂದು ಸಂಗತಿಯ ಬಗ್ಗೆ ಬೇರೆ ಬೇರೆ ನಿಲುವುಗಳು ಹೊರಹೊಮ್ಮಿ ವಾದವಿವಾದ ಶುರುವಾದಾಗ ; ತಾ=ಮಾತಿನಿಂದ ಉಂಟಾಗುವ ಒಳಿತು/ಕೆಡುಕಿನ ಪರಿಣಾಮಗಳನ್ನು ಅರಿತ ವ್ಯಕ್ತಿಯು ; ತಾ=ತಾನು ; ಸೋತು ಬರುವುದು=ವಾದವನ್ನು ಮುಂದುವರಿಸದೆ ಹಿಂದಕ್ಕೆ ಸರಿಯುವುದು ; ಲೇಸು=ಒಳ್ಳೆಯದು ; ಮತನಿಸೆ=ಒಂದು ಮಾತಿಗೆ ಎದುರಾಗಿ ಮತ್ತೊಂದು ಮಾತನ್ನು ಆಡತೊಡಗಿದರೆ ; ವಿಧಿ ಬಂದು=ಯಾವುದಾದರೊಂದು ಬಗೆಯ ಹಾನಿ/ನೋವು/ತೊಂದರೆಯು ಉಂಟಾಗಿ ; ಆತುಕೊಂಡು+ಇಹುದು ; ಆತುಕೊಂಡು=ಸುತ್ತಿಕೊಂಡು/ಆವರಿಸಿಕೊಂಡು ; ಇಹುದು=ಇರುವುದು )
15) ಮಾತಿಂದ ನಗೆನುಡಿಯು ಮಾತಿಂದ ಕೊಲೆ ಹಗೆಯು
ಮಾತಿಂದೆ ಸರ್ವರಿಗೆಯುಪಚಾರ – ಲೋಕಕ್ಕೆ
ಮಾತೆ ಮಾಣಿಕವು ಸರ್ವಜ್ಞ
ನಾವು ಆಡುವ ಮಾತುಗಳ ಬಗ್ಗೆ ಹೆಚ್ಚಿನ ಹೊಣೆಗಾರಿಕೆಯಿಂದ ಇರಬೇಕೆಂಬುದನ್ನು ಹೇಳಲಾಗಿದೆ .
( ನಗೆನುಡಿ=ನಾವಾಡುವ ಮಾತುಗಳು ಒಳ್ಳೆಯ ಉದ್ದೇಶದಿಂದ ಕೂಡಿದ್ದರೆ ನಮಗೆ ಮತ್ತು ಕೇಳುಗರಿಗೆ ಆನಂದ ಮತ್ತು ಉಲ್ಲಾಸವನ್ನು ನೀಡುತ್ತವೆ ; ಕೊಲೆ ಹಗೆ= ಆಡಿದ ಮಾತುಗಳ ಹಿಂದೆ ಕೆಟ್ಟ ಉದ್ದೇಶವಿದ್ದರೆ , ಅವು ನಮ್ಮ ಮತ್ತು ಇತರರ ನಡುವೆ ಮನಸ್ತಾಪ , ಅಸೂಯೆ ಇಲ್ಲವೇ ಹಗೆತನವನ್ನು ಬೆಳೆಸಿ ಸಾವುನೋವುಗಳಿಗೆ ಕಾರಣವಾಗುತ್ತವೆ ; ಸರ್ವರಿಗೆ+ಉಪಚಾರ ; ಸರ‍್ವರಿಗೆ =ಎಲ್ಲರಿಗೂ ಅಂದರೆ ಮಾತನ್ನಾಡುವವರಿಗೆ/ಕೇಳುವವರಿಗೆ/ಸುತ್ತಮುತ್ತಲಿನವರಿಗೆ ; ಉಪಚಾರ=ಒಳಿತು ; ಲೋಕಕ್ಕೆ=ಮಾನವರ ಬಾಳಿನ ಎಲ್ಲಾ ಬಗೆಯ ವ್ಯವಹಾರಗಳಲ್ಲಿ ; ಮಾಣಿಕ=ರತ್ನ/ಬೆಲೆಬಾಳುವ ಹರಳು )
16) ಮಾತ ಬಲ್ಲಾಂತಗೆ ಮಾತೊಂದು ಮಾಣಿಕವು
ಮಾತುಗಳನರಿಯದದಮಂಗೆ-ಮಾಣಿಕವು
ತೂತಾದ ಪರಿಯು ಸರ್ವಜ್ಞ
ಮಾತನಾಡುವುದು ಒಂದು ಬಗೆಯ ಕಲೆ ಹಾಗೂ ಯಾರೊಬ್ಬರ ಮನಸ್ಸಿಗೂ ನೋವುಂಟುಮಾಡಬಾರದೆಂಬ ಎಚ್ಚರಿಕೆಯಿಂದ ಕೂಡಿರುವ ಸಾಮಾಜಿಕ ವರ‍್ತನೆ ಎಂಬುದನ್ನು ಹೇಳಲಾಗಿದೆ .
( ಮಾತ ಬಲ್ಲಾತ=ಯಾವ ಎಡೆಯಲ್ಲಿ , ಯಾವ ಸಮಯದಲ್ಲಿ , ಯಾರೊಡನೆ , ಹೇಗೆ ಮಾತನಾಡಬೇಕು ಇಲ್ಲವೇ ಮಾತನಾಡಬಾರದು ಎಂಬ ಅರಿವು ಮತ್ತು ಎಚ್ಚರವನ್ನು ಹೊಂದಿರುವವನು ; ಬಲ್ಲ+ಆತಂಗೆ=ತಿಳಿದವನಿಗೆ/ಅರಿತವನಿಗೆ ; ಬಲ್ಲ=ತಿಳಿದ/ಅರಿತ ; ಮಾಣಿಕ= ರತ್ನ/ಬೆಲೆಬಾಳುವ ಹರಳು ; ಮಾತುಗಳನು+ಅರಿಯದ+ಅದಮಂಗೆ ; ಅರಿಯದ=ತಿಳಿಯದ ; ಅದಮ=ಕೆಟ್ಟ/ನೀಚ ವ್ಯಕ್ತಿ ; ತೂತು+ಆದ=ಗುಳಿಬಿದ್ದ/ಬಿರುಕುಬಿಟ್ಟ ; ಪರಿ=ರೀತಿ )
17) ಹುಸಿವನ ದೇಹಾರ ಕಸ ಹತ್ತಿದಾರಂಬ
ವಿಷಯ ಉಳ್ಳವನ ಗುರುತನ-ಇವು ಮೂರು
ಮಸಿವಣ್ಣ ಕಂಡ ಸರ್ವಜ್ಞ
ದೇವರ ಪೂಜೆ , ಬೇಸಾಯ ಮತ್ತು ಅರಿವನ್ನು ಮೂಡಿಸುವ ಕಸುಬುಗಳನ್ನು ಮಾಡುವವರು ಯಾವ ಬಗೆಯ ವ್ಯಕ್ತಿತ್ವವನ್ನು ಹೊಂದಿರಬಾರದು ಎಂಬುದನ್ನು ಹೇಳಲಾಗಿದೆ .
( ಹುಸಿ=ಸುಳ್ಳು ; ಹುಸಿವನ=ಸುಳ್ಳನ್ನು ಹೇಳುವವನ ; ದೇಹಾರ=ಪೂಜೆ ; ಕಸ ಹತ್ತಿದ+ಆರಂಬ=ಕಳೆಯೇ ಹೆಚ್ಚಾಗಿರುವ ಬೆಳೆ ; ಆರಂಬ=ಬೇಸಾಯ/ಬೆಳೆಯನ್ನು ಒಡ್ಡುವಿಕೆ ; ವಿಷಯ=ಕೆಟ್ಟ ನಡೆನುಡಿಗಳು/ಕಾಮನೆಗಳು ; ಉಳ್ಳವನ=ಇರುವವನ ; ಗುರುತನ=ಮಕ್ಕಳಲ್ಲಿ ಹಾಗೂ ಇತರರಲ್ಲಿ ಅರಿವನ್ನು ಮೂಡಿಸುವ ಹೊಣೆಗಾರಿಕೆಯ ಕಸುಬು ; ಮಸಿ+ಬಣ್ಣ=ಕಪ್ಪು ಬಣ್ಣ ಅಂದರೆ ಪ್ರಯೋಜನವಿಲ್ಲದ್ದು/ಹಾನಿಯನ್ನು ಉಂಟುಮಾಡುವಂತಹುದು ; ಕಂಡ=ಎಂಬುದನ್ನು ತಿಳಿ )
18) ತನ್ನ ಮುಖ ಬೆನ್ನುಗಳು ತನ್ನ ಕಣ್ಣಿಗೆ ಮರೆಯು
ತನ್ನ ಗುಣದೋಷಗಳನರಿಯೆ-ಇದನರಿದ
ಇನ್ನೊಬ್ಬ ಬೇಕು ಸರ್ವಜ್ಞ
ನಮ್ಮ ಒಪ್ಪು-ತಪ್ಪುಗಳು ನಮಗೆ ತಿಳಿಯುವುದಿಲ್ಲ ; ಇತರರು ನಮ್ಮ ನಡೆನುಡಿಯನ್ನು ಒರೆಹಚ್ಚಿ ನೋಡಿ ಹೇಳುವಂತಾದಾಗ ನಮ್ಮ ವ್ಯಕ್ತಿತ್ವದಲ್ಲಿನ ಒಳಿತು-ಕೆಡುಕಿನ ಸಂಗತಿಗಳು ನಮಗೆ ಮನವರಿಕೆಯಾಗುತ್ತವೆ ಎಂಬುದನ್ನು ಹೇಳಲಾಗಿದೆ .
( ಗುಣದೋಷಗಳನು+ಅರಿಯೆ ; ದೋಶ=ಕುಂದು/ಕೊರತೆ/ತಪ್ಪು/ಕೆಟ್ಟತನ ; ಅರಿಯೆ=ತಿಳಿಯಲು ; ಇದನು+ಅರಿದ ; ಅರಿ=ತಿಳಿ/ಕಾಣು )
19) ತನ್ನ ದೋಷವ ನೂರ ಬೆನ್ನ ಹಿಂದಕೆ ಇರಿಸಿ
ಅನ್ಯನೊಂದಕ್ಕೆ ಹುಲಿಯಪ್ಪ-ಮಾನವನು
ಕುನ್ನಿಯಲ್ಲೇನು ಸರ್ವಜ್ಞ
ತನ್ನ ನಡೆನುಡಿಯಲ್ಲಿನ ನೂರಾರು ತಪ್ಪುಗಳನ್ನು ಮರೆಮಾಚಿಕೊಂಡು , ಮತ್ತೊಬ್ಬರು ಮಾಡುವ ಒಂದು ತಪ್ಪನ್ನೇ ದೊಡ್ಡದಾಗಿ ಎತ್ತಿಹಿಡಿದು ಅಬ್ಬರಿಸುವಂತಹ ವ್ಯಕ್ತಿಗಳ ನೀಚತನದ ವರ‍್ತನೆಯನ್ನು ಹೇಳಲಾಗಿದೆ .
( ಬೆನ್ನ ಹಿಂದಕೆ ಇರಿಸಿ=ಕಡೆಗಣಿಸಿ/ಮರೆಮಾಚಿ ; ಅನ್ಯನ+ಒಂದಕ್ಕೆ ; ಅನ್ಯ=ಬೇರೆ/ಇತರ ; ಅನ್ಯನ=ಮತ್ತೊಬ್ಬನ ; ಹುಲಿಯು+ಅಪ್ಪ=ಹುಲಿಯಂತೆ ಅಬ್ಬರಿಸುವ ; ಅಪ್ಪ=ಆಗುವ ; ಕುನ್ನಿಯು+ಅಲ್ಲೇನು=ನಾಯಿಯಲ್ಲವೇ ; ಕುನ್ನಿ=ನಾಯಿ/ನಾಯಿಮರಿ )
20) ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು
ಮೇಟಿಯಿಂ ರಾಟೆ ನಡೆದುದಲ್ಲದೆ-ದೇಶ
ದಾಟವೆ ಕೆಡುಗು ಸರ್ವಜ್ಞ
ಜೀವಿಗಳ ಹಸಿವನ್ನು ತಣಿಸುವುದಕ್ಕಾಗಿ ದವಸದಾನ್ಯಗಳನ್ನು ಬೆಳೆಯುವ ಬೇಸಾಯದ ವಿದ್ಯೆಯೇ ಮಾನವನ ಎಲ್ಲಾ ಬಗೆಯ ಕಸುಬುಗಳಿಗಿಂತಲೂ ಮೇಲು/ದೊಡ್ಡದೆಂಬುದನ್ನು ಹೇಳಲಾಗಿದೆ .
( ಮೇಟಿ ವಿದ್ಯೆ=ಬೇಸಾಯವನ್ನು ಮಾಡುವ ಕುಶಲತೆ ಮತ್ತು ಕಸುಬು ; ಮೇಟಿ=ರಾಗಿ/ಬತ್ತ/ಜೋಳ ಮುಂತಾದ ಬೆಳೆಗಳನ್ನು ಒಕ್ಕಣೆ ಮಾಡುವಾಗ ಕಣದ ನಟ್ಟನಡುವೆ ನೆಡುವ ಮರದ ದಪ್ಪನೆಯ ಕಂಬ ; ರಾಟೆ ನಡೆದುದು+ಅಲ್ಲದೆ ; ರಾಟೆ=ನೂಲು ತೆಗೆಯುವ ಚರಕ/ಗಾಲಿ/ಚಕ್ರ ; ರಾಟೆ ನಡೆಯುವುದು=ಇದು ಒಂದು ನುಡಿಗಟ್ಟು . ಕೆಲಸಗಳು ಚೆನ್ನಾಗಿ ನಡೆಯುವುದು ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ ; ಮೇಟಿಯಿಂ ರಾಟಿ ನಡೆದುದು=ಬೇಸಾಯದಿಂದಲೇ ದೇಶದ ಸಾಮಾಜಿಕ ಬದುಕು , ಸಂಸ್ಕ್ರುತಿ ಮತ್ತು ನಾಗರೀಕತೆಗಳು ಉಳಿದು ಬೆಳೆದು ಬಾಳುತ್ತಿವೆ ; ಅಲ್ಲದೆ=ಬೇಸಾಯ ನಡೆಯದಿದ್ದರೆ ; ದೇಶದ+ಆಟವೇ=ದೇಶದ ಎಲ್ಲಾ ಬಗೆಯ ಚಟುವಟಿಕೆಗಳು ; ಕೆಡುಗು=ನಾಶವಾಗುತ್ತವೆ/ಹಾಳಾಗುತ್ತವೆ )
( ಚಿತ್ರಸೆಲೆ: wikipedia.org )
ಇತ್ತೀಚಿನ ಅನಿಸಿಕೆಗಳು