ಸರ‍್ವಜ್ನನ ವಚನಗಳ ಹುರುಳು – 6ನೆಯ ಕಂತು

ಸಿ.ಪಿ.ನಾಗರಾಜ.

 

51)   ನುಡಿಸುವುದಸತ್ಯವನು ಕೆಡಿಸುವುದು ಧರ್ಮವನು
ಒಡಲನೆ ಕಟ್ಟಿ ಹಿಡಿಸುವುದು-ಲೋಭದ
ಗಡಣ ಕಾಣಯ್ಯ ಸರ್ವಜ್ಞ

ವ್ಯಕ್ತಿಯ ಮನದಲ್ಲಿ ತುಡಿಯುವ ಅತಿಯಾಸೆ/ಜಿಪುಣತನವು ಎಲ್ಲಾ ಬಗೆಯ ಕೆಟ್ಟಕೆಲಸಗಳನ್ನು ಮಾಡಲು ಕಾರಣವಾಗುತ್ತದೆ ಎಂಬುದನ್ನು ಹೇಳಲಾಗಿದೆ.

(ನುಡಿಸುವುದು+ಅಸತ್ಯವನು ; ಅಸತ್ಯ=ನಿಜವಲ್ಲದ್ದು/ದಿಟವಲ್ಲದ್ದು/ಸುಳ್ಳು ; ಕೆಡಿಸುವುದು=ನಾಶಪಡಿಸುವುದು/ಹಾಳುಮಾಡುವುದು ; ಧರ್ಮ=ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ನಡೆನುಡಿಗಳು ; ಒಡಲು=ಹೊಟ್ಟೆ/ದೇಹ/ಮೆಯ್ ; ಒಡಲನೆ ಕಟ್ಟಿ ಹಿಡಿಸುವುದು=ಗಳಿಸಿದ ಹಣದಿಂದ/ಸಂಪತ್ತಿನಿಂದ ಜೀವನದಲ್ಲಿ ಯಾವುದೇ ಬಗೆಯ ಒಲವುನಲಿವನ್ನು ಹೊಂದದಿರುವುದು ಅಂದರೆ ಹೊಟ್ಟೆಬಟ್ಟೆಕಟ್ಟಿ ಹಣವನ್ನು ಕೂಡಿಡುವುದರಲ್ಲಿಯೇ ತೊಡಗುವುದು ; ಲೋಭ=ಅತಿಯಾಸೆ/ಕೆಟ್ಟಆಸೆ/ಜಿಪುಣತನ ; ಗಡಣ=ಸಮೂಹ/ಗುಂಪು/ರಾಶಿ ; ಲೋಭ ಗಡಣ=ಅತಿಯಾದ ಆಸೆಯ/ಜಿಪುಣತನದ ನಡೆನುಡಿಗಳು ; ಕಾಣು+ಅಯ್ಯ=ತಿಳಿದು ನೋಡು)

52)   ಹೊಲಬನರಿಯದ ಮಾತು ತಲೆ ಬೇನೆ ಹಿಡಿದಂತೆ
ಹೊಲಬರಿದೊಂದ ನುಡಿದರೆ-ಅದು ದಿವ್ಯ
ಫಲ ಪಕ್ವದಂತೆ ಸರ್ವಜ್ಞ

ಸರಿತಪ್ಪುಗಳ ಅರಿವಿಲ್ಲದೆ / ಅರಿವಿನಿಂದ ಆಡುವ ಮಾತಿನಿಂದ ಉಂಟಾಗುವ ಒಳಿತುಕೆಡುಕಿನ ಪರಿಣಾಮಗಳನ್ನು ಹೇಳಲಾಗಿದೆ.

(ಹೊಲಬನು+ಅರಿಯದ ; ಹೊಲಬು=ದಾರಿ/ಮಾರ‍್ಗ/ಸರಿತಪ್ಪುಗಳ ಅರಿವು/ಒಳಿತುಕೆಡುಕುಗಳನ್ನು ವಿಂಗಡಿಸಿ ನೋಡುವುದು ; ಅರಿ=ತಿಳಿ ; ಅರಿಯದ=ತಿಳಿಯದ ; ಬೇನೆ=ನೋವು/ಯಾತನೆ ; ಹೊಲಬು+ಅರಿದು+ಒಂದ ; ಒಂದ ನುಡಿದರೆ=ಒಂದು ಮಾತನ್ನಾಡಿದರೆ ; ಹೊಲಬರಿದೊಂದ ನುಡಿದರೆ=ಇತರರ ಮನಸ್ಸಿಗೆ ನೋವಾಗದಂತೆ/ಸತ್ಯವನ್ನು ಮರೆಮಾಚದಂತೆ ಒಳಿತನ್ನುಂಟು ಮಾಡುವ ಮಾತುಗಳನ್ನಾಡಿದರೆ; ದಿವ್ಯ =ಒಳ್ಳೆಯದು/ಉತ್ತಮವಾದುದು  ; ಫಲ=ಹಣ್ಣು  ; ಪಕ್ವದ+ಅಂತೆ ; ಪಕ್ವ=ಮಾಗುವುದು/ರಸದಿಂದ ಕೂಡಿ ರುಚಿಕರವಾದುದು ; ಅಂತೆ=ಹಾಗೆ ; ದಿವ್ಯಫಲಪಕ್ವದಂತೆ=ಇದೊಂದು ಉಪಮೆ. ರಸದಿಂದ ತುಂಬಿ ರುಚಿಕರವಾದ ಮಾಗಿದ ಹಣ್ಣನ್ನು ತಿಂದಾಗ ಯಾವ ಬಗೆಯ ನಲಿವುನೆಮ್ಮದಿ ದೊರೆಯುವುದೋ ಅಂತೆಯೇ ತಿಳುವಳಿಕೆಯ ಮಾತುಗಳನ್ನು ಆಡಿದಾಗ/ಕೇಳಿದಾಗ ಉಂಟಾಗುತ್ತದೆ)

53)   ಕೇಡನೊಬ್ಬಗೆ ಬಯಸೆ ಕೇಡು ತಪ್ಪದು ತನಗೆ
ಕೂಡಿ ಕೆಂಡವನು ತೆಗೆದೊಡೆ-ತನ್ನ ಕೈ
ಕೂಡೆ ಬೇವಂತೆ ಸರ್ವಜ್ಞ

“ಬೇರೆಯವರಿಗೆ ಬರಬಾರದ ನೋವುಸಂಕಟಗಳು ಬಂದು, ಅವರ ಜೀವನದಲ್ಲಿ ಹಾನಿಯುಂಟಾಗಲಿ” ಎಂದು ನಾವು ಮನದಲ್ಲಿ ಬಯಸುವುದಾಗಲಿ/ಕೆಟ್ಟ ಕೆಲಸಗಳನ್ನು ಮಾಡುವುದಾಗಲಿ ಒಳ್ಳೆಯದಲ್ಲವೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ಕೇಡನು+ಒಬ್ಬಗೆ ; ಕೇಡು=ಹಾನಿ/ನಾಶ/ಅಪಾಯ ; ಒಬ್ಬಗೆ=ಬೇರೆಯವನಿಗೆ ; ಬಯಸೆ=ಆಗಲೆಂದು ಇಚ್ಚಿಸಿದರೆ ; ತನಗೆ=ಬಯಸಿದ ವ್ಯಕ್ತಿಗೆ ; ಕೇಡು ತಪ್ಪದು ತನಗೆ=ಮತ್ತೊಬ್ಬನಿಗೆ ಸಾವುನೋವುಗಳು ಉಂಟಾಗಲೆಂದು ಬಯಸಿದವನಿಗೂ ಒಂದಲ್ಲ ಒಂದು ಬಗೆಯ ಹಾನಿಯುಂಟಾಗುತ್ತದೆ ; ತೆಗೆದೊಡೆ=ತೆಗೆದರೆ ; ಕೂಡಿ ಕೆಂಡವನು ತೆಗೆದೊಡೆ=ಉರಿಯುತ್ತಿರುವ ಬೆಂಕಿಯ ಉಂಡೆಯನ್ನು ಮತ್ತೊಬ್ಬನ ಮೇಲೆ ಎಸೆಯಲೆಂದು ಒಬ್ಬ ವ್ಯಕ್ತಿಯು ತನ್ನ ಕಯ್ಯಲ್ಲಿ ತೆಗೆದುಕೊಂಡಾಗ ; ಕೂಡೆ=ಜತೆಜತೆಯಲ್ಲೇ/ ಆ ಗಳಿಗೆಯಲ್ಲೇ ; ಬೇವ+ಅಂತೆ=ಸುಡುವ+ಹಾಗೆ ; ತನ್ನ ಕೈ ಕೂಡೆ ಬೇವಂತೆ=ಈ ರೂಪಕದ ಮೂಲಕ ಮತ್ತೊಬ್ಬನಿಗೆ ಕೆಟ್ಟದ್ದನ್ನು ಮಾಡಲು ಹಾತೊರೆಯುವ ವ್ಯಕ್ತಿಗೂ ನೋವು/ಸಂಕಟ/ಹಾನಿ ತಟ್ಟುತ್ತದೆ ಎಂಬುದನ್ನು ಹೇಳಲಾಗಿದೆ)

54)   ಹುಟ್ಟುವಾಗಲೆ ಧನವ ಮೊಟ್ಟೆಗಟ್ಟಿಳಿದನೇ
ಕಟ್ಟೊಯ್ಯಲರಿಯ ಕಡೆಯಲ್ಲಿ-ಅದನರಿದು
ಕೊಟ್ಟುಂಬ ದಾನಿ ಸರ್ವಜ್ಞ

ಉಳ್ಳವರು ದಾನ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕೆಂಬುದನ್ನು ಹೇಳಲಾಗಿದೆ.

(ಹುಟ್ಟುವ+ಆಗಲೆ ; ಹುಟ್ಟುವಾಗಲೆ=ತಾಯಿಯ ಹೊಟ್ಟೆಯಿಂದ ಹೊರಬಂದ ಗಳಿಗೆಯಲ್ಲೇ ; ಧನ=ಹಣ/ಚಿನ್ನಬೆಳ್ಳಿ ಒಡವೆ/ಆಸ್ತಿಪಾಸ್ತಿ ; ಮೊಟ್ಟೆ+ಕಟ್ಟಿ+ಇಳಿದನೇ ; ಮೊಟ್ಟೆ=ಗಂಟು/ಹೊರೆ/ಮೂಟೆ ; ಇಳಿದನೇ=ಈ ಜಗತ್ತಿಗೆ ಬಂದನೇ ; ಕಟ್ಟಿ+ಒಯ್ಯಲು+ಅರಿಯ ; ಒಯ್ಯಲು=ತೆಗೆದುಕೊಂಡು ಹೋಗಲು ; ಅರಿಯ=ತಿಳಿಯನು ; ಕಡೆಯಲ್ಲಿ=ಸಾವನ್ನಪ್ಪಿದಾಗ ; ಅದನು+ಅರಿದು ; ಅದನು=ಅದನ್ನು ; ಅರಿದು=ತಿಳಿದು ; ಅದನರಿದು=ಹುಟ್ಟುವಾಗ ಸಂಪತ್ತನ್ನು ಹೊತ್ತು ತರಲಿಲ್ಲ / ಸಾಯುವಾಗ ಜತೆಯಲ್ಲಿ ಹೊತ್ತು ಕೊಂಡೊಯ್ಯುವುದಿಲ್ಲವೆಂಬ ವಾಸ್ತವವನ್ನು  ಅರಿತುಕೊಂಡು ; ಕೊಟ್ಟು+ಉಂಬ ; ಕೊಟ್ಟು= ತನ್ನ ಆದಾಯದ ಮಿತಿಗೆ ಒಳಪಟ್ಟಂತೆ ಇತರರಿಗೂ ನೆರವನ್ನು ನೀಡಿ ; ಉಂಬ=ಉಣ್ಣುವನು/ತನ್ನ ಬಳಿ ಇರುವ ಸಂಪತ್ತಿನಿಂದ ನಲಿವುನೆಮ್ಮದಿಯ ಬಾಳ್ವೆಯನ್ನು ನಡೆಸುವನು)

55)   ಕೊಟ್ಟುದು ತನಗೆ ಬಯಿಚಿಟ್ಟುದು ಪರರಿಗೆ
ಕೊಟ್ಟುದು ಕೆಟ್ಟಿತೆನೆಬೇಡ-ಅದು ಮುಂದೆ
ಕಟ್ಟಿದ ಬುತ್ತಿ ಸರ್ವಜ್ಞ

ಇತರರ ಸಂಕಟಕ್ಕೆ ಮರುಗಿ ಮಾಡುವ ದಾನವು ಜೀವನದಲ್ಲಿ ನಮಗೆ ಒಳಿತನ್ನು ಉಂಟುಮಾಡುತ್ತದೆಯೆಂಬ ಜನಸಮುದಾಯದ ನಂಬಿಕೆಯನ್ನು ಈ ವಚನದಲ್ಲಿ ಹೇಳಲಾಗಿದೆ.

(ಕೊಟ್ಟುದು=ಇತರರಿಗೆ ನೆರವಾಗಲೆಂದು ನೀಡಿದ ಉಣಿಸು/ವಸ್ತು/ಹಣ ; ತನಗೆ=ದಾನಿಗೆ/ದಾನ ಮಾಡಿದವನಿಗೆ ; ಕೊಟ್ಟುದು ತನಗೆ=ದಾನ ಮಾಡುವುದರಿಂದ ದಾನಿಗೆ ಒಳಿತಾಗುವುದೆಂಬ ನಂಬಿಕೆ ನಮ್ಮ ಸಮಾಜದಲ್ಲಿದೆ ; ಬಯಿಚಿಟ್ಟುದು=ಯಾರಿಗೂ ನೀಡದೆ ಅಡಗಿಸಿ ಇಟ್ಟಿದ್ದು/ಹಿಂದಿನ ಕಾಲದಲ್ಲಿ ಬೆಲೆಬಾಳುವ ಒಡವೆಗಳನ್ನು ಮತ್ತು ಚಿನ್ನಬೆಳ್ಳಿಯ ನಾಣ್ಯಗಳನ್ನು ನೆಲದೊಳಗೆ/ಮರದ ಪೊಟರೆ/ಇನ್ನಿತರ ಕಡೆಗಳಲ್ಲಿ ಬಚ್ಚಿಡುತ್ತಿದ್ದರು ;  ಪರರಿಗೆ=ಇತರರ ಪಾಲಾಗುತ್ತದೆ/ವಶವಾಗುತ್ತದೆ ; ಕೆಟ್ಟಿತು+ಎನಬೇಡ ; ಕೆಟ್ಟಿತು=ಹಾಳಾಯಿತು/ನಾಶವಾಯಿತು/ಉಪಯೋಗವಿಲ್ಲದಂತಾಯಿತು ; ಎನಬೇಡ=ಅಂದುಕೊಳ್ಳಬೇಡ ; ಮುಂದೆ=ಮುಂದಿನ ಜೀವನದ ಆಗುಹೋಗುಗಳಲ್ಲಿ ; ಕಟ್ಟಿದ ಬುತ್ತಿ=ದೂರದ ಊರಿಗೆ ಹೋಗುವವರು ಹಾದಿಯ ನಡುವೆ ತಂಗಿದಾಗ ಉಣಲೆಂದು ಜತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ತಿನಿಸು/ಉಣಿಸಿನ ಗಂಟು ; ಕಟ್ಟಿದ ಬುತ್ತಿ-ಈ ಪದಕಂತೆಯು ಇಲ್ಲಿ ಒಂದು ನುಡಿಗಟ್ಟಾಗಿ ಬಳಕೆಯಾಗಿದೆ. ಇತರರ ಹಸಿವು/ಸಂಕಟ/ನೋವಿಗೆ ಮಿಡಿದು ನಾವು ಮಾಡಿದ ದಾನವು ಮುಂದೊಂದು ದಿನ ನಮಗೆ ಸಂಕಟ ಬಂದಾಗ ನಮ್ಮನ್ನು ಕಾಪಾಡುತ್ತದೆ . ಅಂದರೆ  ಮತ್ತೊಬ್ಬರು ನಮಗೆ ನೆರವನ್ನು ನೀಡುತ್ತಾರೆ ಎಂಬ ನಂಬಿಕೆಯು ಜನಮನದಲ್ಲಿ ನೆಲೆಯೂರಿದೆ)

56)   ಉಳ್ಳಲ್ಲಿ ಉಣಲೊಲ್ಲ ಉಳ್ಳಲ್ಲಿ ಉಡಲೊಲ್ಲ
ಉಳ್ಳಲ್ಲಿ ದಾನಗೊಡಲೊಲ್ಲ-ಅವನೊಡವೆ
ಕಳ್ಳಗೆ ದೊರೆಗೆ ಸರ್ವಜ್ಞ

ಸಿರಿಸಂಪದಗಳು ಇರುವಾಗ ನಲಿವುನೆಮ್ಮದಿಯ ಬದುಕನ್ನು ನಡೆಸದೆ, ಇತರರಿಗೂ ನೆರವಾಗದೆ ಎಲ್ಲವನ್ನೂ ಕೂಡಿಟ್ಟಿಕೊಂಡಿರುವವನ ಸಂಪತ್ತು ಇಂದಲ್ಲ ನಾಳೆ ಅನ್ಯರ ಪಾಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ಉಳ್ಳ+ಅಲ್ಲಿ ; ಉಳ್=ಇರು  ; ಉಳ್ಳಲ್ಲಿ=ಇರುವಾಗ/ಜೀವನಕ್ಕೆ ಅಗತ್ಯವಾದ ಎಲ್ಲಾ ಬಗೆಯ ಅನುಕೂಲಗಳು ಇರುವಾಗ ;  ಉಣಲು=ತಿನ್ನಲು ; ಒಲ್+ಅ=ಒಲ್ಲ ;  ಒಲ್=ಬಯಸು/ಇಚ್ಚಿಸು/ಆಸೆಪಡು ; ಒಲ್ಲ=ಬಯಸುವುದಿಲ್ಲ ; ಉಣಲೊಲ್ಲ=ತನ್ನ ಬಳಿ ಇರುವ ಸಂಪತ್ತಿನಿಂದ  ಯಾವುದೇ ಬಗೆಯ ಒಲವುನಲಿವಿನ ಜೀವನವನ್ನು ನಡೆಸದೆ ಗಳಿಸಿದ ಸಂಪತ್ತೆಲ್ಲವನ್ನೂ ಕೂಡಿಡುವುದರಲ್ಲೇ ಮಗ್ನನಾಗಿರುತ್ತಾನೆ ;  ಉಡಲು+ಒಲ್ಲ ; ಉಡು=ಒಳ್ಳೆಯ ಬಟ್ಟೆಬರೆಗಳನ್ನು ಹಾಕಿಕೊಳ್ಳುವುದು  ; ದಾನ+ಕೊಡಲು+ಒಲ್ಲ ; ಅವನ+ಒಡವೆ ; ಅವನ=ಈ ರೀತಿ ಕೂಡಿಟ್ಟವನ/ಜಿಪುಣನ ;  ಒಡವೆ=ಆಸ್ತಿಪಾಸ್ತಿ/ಹಣ/ಚಿನ್ನಬೆಳ್ಳಿತೊಡುಗೆ ;  ಕಳ್ಳಗೆ=ಕಳ್ಳನಿಗೆ/ಕಳ್ಳನ ಪಾಲು ; ದೊರೆಗೆ=ದೊರೆಯ ಪಾಲು/ದೊರೆಯು ಮುಟ್ಟುಗೋಲು ಹಾಕಿಕೊಳ್ಳುತ್ತಾನೆ)

57)   ಕೊಟ್ಟುಂಬ ಕಾಲದಲಿ ಕೊಟ್ಟುಣ್ಣಲೊಲ್ಲದವ
ಹುಟ್ಟಿಯ ಮೇಲೆ ಜೇನಿಟ್ಟು-ಪರರಿಗೆ
ಕೊಟ್ಟು ಹೋಹಂತೆ ಸರ್ವಜ್ಞ

ಸಿರಿಸಂಪದಗಳು ಇರುವಾಗ ನಲಿವುನೆಮ್ಮದಿಯನ್ನು ಪಡೆಯದೆ, ಇತರರಿಗೂ ನೆರವಾಗದೆ ಎಲ್ಲವನ್ನೂ ಕೂಡಿಟ್ಟಿಕೊಂಡಿರುವವನ ಸಂಪತ್ತು ಹೇಗೆ ಬೇರೆಯವರ ಪಾಲಾಗುತ್ತದೆ ಎಂಬುದನ್ನು ರೂಪಕವೊಂದರ ಹೇಳಲಾಗಿದೆ.

(ಕೊಟ್ಟು+ಉಂಬ ; ಕೊಟ್ಟು=ದಾನ ಮಾಡಿ/ಇತರರಿಗೂ ನೆರವು ನೀಡಿ ; ಉಂಬ=ಉಣ್ಣುವ/ಜೀವನದಲ್ಲಿ ನಲಿವುನೆಮ್ಮದಿಗಳನ್ನು ಪಡೆಯುವ ; ಕಾಲದಲಿ=ಸಮಯದಲ್ಲಿ ; ಕೊಟ್ಟು+ಉಣ್ಣಲು+ಒಲ್ಲದವ ; ಒಲ್ಲದವ=ಬಯಸದವನು ;  ಹುಟ್ಟಿ=ಜೇನುಗೂಡು ; ಜೇನು+ಇಟ್ಟು ; ಹುಟ್ಟಿಯ ಮೇಲೆ ಜೇನಿಟ್ಟು=ಜೇನು ಹುಳುಗಳು ಮರದ ರೆಂಬೆಕೊಂಬೆಗಳಲ್ಲಿ/ಕಲ್ಲಿನ ಪೊಟರೆಗಳಲ್ಲಿ ಗೂಡನ್ನು ಕಟ್ಟಿ ಹೂಗಳ ಮಕರಂದವನ್ನು ಹೀರಿತಂದು ಸಿಹಿಜೇನನ್ನು ತಯಾರಿಸುತ್ತವೆ ; ಪರರಿಗೆ=ಇತರರಿಗೆ ;  ಹೋಹ+ಅಂತೆ=ಹೋಗುವಂತೆ ; ಪರರಿಗೆ ಕೊಟ್ಟು ಹೋಹಂತೆ=ಜೇನಿನ ಹುಳುಗಳು ಜೇನನ್ನು ಸವಿಯುವುದಕ್ಕೆ ಮುನ್ನವೇ ಅದು ಇತರರ ಪಾಲಾಗುವಂತೆ)

58)   ಸಿರಿಬಂದ ಕಾಲದಲಿ ಕರೆದು ಧರ್ಮವ ಮಾಡು
ಪರಿಣಾಮವಕ್ಕು ಪದಪಕ್ಕು-ಕೈಲಾಸ
ನೆರೆಮನೆಯಕ್ಕು ಸರ್ವಜ್ಞ

ಸಿರಿಸಂಪದಗಳು ದೊರೆತಾಗ ಅದನ್ನು ತಾನೊಬ್ಬನೇ ಹೊಂದದೆ, ಇತರರಿಗೆ ನೆರವನ್ನು ನೀಡುವುದರ ಮೂಲಕ ಬದುಕನ್ನು ಹಸನುಗೊಳಿಸಿಕೊಳ್ಳಬೇಕೆಂಬುದನ್ನು ಹೇಳಲಾಗಿದೆ.

(ಸಿರಿ=ಆಸ್ತಿಪಾಸ್ತಿ/ಹಣಕಾಸು/ವಸ್ತುಒಡವೆ ;  ಸಿರಿಬಂದ ಕಾಲದಲಿ= ಸಿರಿವಂತನಾದಾಗ ; ಕರೆದು ಧರ್ಮವ ಮಾಡು=ಬಡಬಗ್ಗರನ್ನು/ಸಂಕಟದಲ್ಲಿರುವವರನ್ನು ಗುರುತಿಸಿ ನೆರವನ್ನು ನೀಡು ; ಪರಿಣಾಮವು+ಅಕ್ಕು ; ಪರಿಣಾಮ=ಒಳಿತು/ಆನಂದ/ಏಳಿಗೆ/ಮಂಗಳ ; ಅಕ್ಕು=ಆಗುವುದು/ದೊರೆಯುವುದು ; ಪದಪು+ಅಕ್ಕು ; ಪದಪು=ಒಲವು/ಆದರ/ಮನ್ನಣೆ/ಹಿಗ್ಗು ; ಕೈಲಾಸ=ಶಿವನು ನೆಲೆಸಿರುವ ತಾಣ/ ಹುಟ್ಟುಬದುಕುಸಾವುಗಳ ಚಕ್ರದಿಂದ ಪಾರಾಗಿ  ಶಿವನ ಬಳಿಸಾರಬೇಕೆಂದು ಬಕುತರು ಹಂಬಲಿಸುವ ತಾಣ  ; ನೆರೆಮನೆಯು+ಅಕ್ಕು ; ನೆರಮನೆ=ಪಕ್ಕದ ಮನೆ ;  ಕೈಲಾಸ ನೆರೆಮನೆಯಕ್ಕು=ಮುಕ್ತಿಯನ್ನು ಪಡೆಯುವುದಕ್ಕೆ ಯೋಗ್ಯನಾಗುವೆ ಎಂಬ ರೂಪಕದ ತಿರುಳಿನಲ್ಲಿ ಈ ಪದಕಂತೆಯು ಬಳಕೆಯಾಗಿದೆ)

59)   ಸೊಡರೆಣ್ಣೆ ತೀರಿದರೆ ಕೊಡನೆತ್ತಿ ಸುರಿದಿಹರೆ
ಕೊಡಬೇಡ ಕೊಡದೆ ಇರಬೇಡ-ದಾನವನು
ಬಿಡಬೇಡವೆಂದ ಸರ್ವಜ್ಞ

ಆದಾಯದ ಮಿತಿಯರಿತು ದಾನವನ್ನು ಮಾಡಬೇಕೆ ಹೊರತು, ತನ್ನಲ್ಲಿರುವುದನ್ನೆಲ್ಲಾ ಇತರರಿಗೆ ನೀಡಿ ಬರಿಗಯ್ ಆಗಬಾರದೆಂಬ ಎಚ್ಚರಿಕೆಯನ್ನು ನೀಡಲಾಗಿದೆ.

(ಸೊಡರ+ಎಣ್ಣೆ ; ಸೊಡರು=ದೀಪ/ದೀವಿಗೆ ; ತೀರಿದರೆ=ಮುಗಿದುಹೋದರೆ ; ಕೊಡನ+ಎತ್ತಿ ; ಕೊಡನ= ಎಣ್ಣೆಯಿಂದ ತುಂಬಿರುವ ಗಡಿಗೆ/ಬಿಂದಿಗೆಯನ್ನು ; ಸುರಿದು+ಇಹರೆ ; ಸುರಿ=ಎರೆ/ಹಾಕು ; ಇಹರೆ=ಇರುವರೆ/ಇರುತ್ತಾರೆಯೇ ; ಸುರಿದಿಹರೆ=ಗಡಿಗೆ/ಬಿಂದಿಗೆಯಲ್ಲಿರುವುದೆಲ್ಲವನ್ನೂ ಬಗ್ಗಿಸುತ್ತಾರೆಯೇ ; ಬಿಡಬೇಡ+ಎಂದ)

60)   ಇಚ್ಚೆಯನರಿದಿತ್ತ ನುಚ್ಚೊಂದು ಮಾಣಿಕ್ಯ
ಇಚ್ಚೆಯು ತೀರ್ದ ಬಳಿಕಿತ್ತ-ಮಾಣಿಕ್ಯ
ನುಚ್ಚಿನಿಂ ಕಷ್ಟ ಸರ್ವಜ್ಞ

ಇತರರು ಸಂಕಟದಲ್ಲಿ/ಆಪತ್ತಿನಲ್ಲಿ/ನೋವಿನಲ್ಲಿ ಬೇಯುತ್ತಿರುವಾಗ, ಅವರ ಅಗತ್ಯವನ್ನು ಅರಿತು ನೀಡುವ ನೆರವಿನ ಬೆಲೆಯು ಬಲುದೊಡ್ಡದೆಂಬುದನ್ನು ಹೇಳಲಾಗಿದೆ.

(ಇಚ್ಚೆಯನು+ಅರಿದು+ಇತ್ತ ; ಇಚ್ಚೆ=ಆಸೆ/ಬಯಕೆ/ಬೇಡಿಕೆ ; ಅರಿದು=ತಿಳಿದು ; ಇತ್ತ=ನೀಡಿದ/ಕೊಟ್ಟ ; ನುಚ್ಚು+ಒಂದು ; ನುಚ್ಚು=ಅಕ್ಕಿರಾಗಿಜೋಳದ ತರಿ/ಪುಡಿ/ಸಣ್ಣಸಣ್ಣಕಣ ; ಮಾಣಿಕ್ಯ=ಬೆಲೆಬಾಳುವ ಹರಳು/ನವರತ್ನಗಳಲ್ಲಿ ಒಂದು ;  ಇಚ್ಚೆಯನರಿದು=ಮತ್ತೊಬ್ಬರಿಗೆ ಬಂದಿರುವ ಸಂಕಟ/ನೋವು/ಬೇಡಿಕೆಯನ್ನು ತಿಳಿದುಕೊಂಡು ; ಇತ್ತ ನುಚ್ಚು=ನೀಡಿದ ಸಣ್ಣ/ತುಸು/ಚಿಕ್ಕ ನೆರವು ; ಒಂದು ಮಾಣಿಕ್ಯ=ಅಗತ್ಯವಿದ್ದಾಗ ದೊರೆತ ನೆರವು ಮಾಣಿಕ್ಯದಂತೆ ಬೆಲೆಯುಳ್ಳದ್ದು ; ತೀರ್ದ=ಮುಗಿದುಹೋದ ಮೇಲೆ ; ಬಳಿಕ+ಇತ್ತ ; ಬಳಿಕ=ಅನಂತರ ; ಇಚ್ಚೆಯು ತೀರ್ದ ಬಳಿಕ=ಸಂಕಟ/ನೋವು/ಆಪತ್ತಿನ ಕಾಲದಲ್ಲಿ ನೆರವನ್ನು ನೀಡದೆ ಅದು ಕಳೆದ ನಂತರ ; ನುಚ್ಚಿನ+ಇಂ=ನುಚ್ಚಿಗಿಂತ ; ಕಷ್ಟ=ಕಡೆ/ಕೀಳು)

( ಚಿತ್ರಸೆಲೆ: wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: