ತಿಳುವಳಿಕೆಯ ಬದುಕನ್ನು ನಡೆಸುವುದು ಹೇಗೆ?

– ರತೀಶ ರತ್ನಾಕರ.

Mirror

ನಮ್ಮ ಎಂದಿನ ಕೆಲಸವು ನಾವಂದುಕೊಂಡತಹ ಚೆಂದದ ಬದುಕಿನತ್ತ ಕೊಂಡೊಯ್ಯುವುದೇ? ನಮ್ಮ ಗುರಿಯನ್ನು ಇದು ಮುಟ್ಟಿಸುವುದೇ? ಈ ಕೇಳ್ವಿಗಳಿಗೆ ಸುಲಬವಾಗಿ ಮರುನುಡಿ ಸಿಗುವುದಿಲ್ಲ. ಆದರೆ ಈಗ ನಡೆಸುತ್ತಿರುವ ಬಾಳ್ಮೆಯತ್ತ ಒಂದು ಕನ್ನಡಿಯನ್ನು ಹಿಡಿದು, ಅದು ನಾವಂದುಕೊಂಡಂತ ಚೆಂದದ ಬದುಕೇ? ಈಗಿನ ಬದುಕು ಚೆಂದದ ಬದುಕಿನತ್ತ ಕೊಂಡೊಯ್ಯುವುದೇ ಎಂದು ಬಿಡಿಸಿನೋಡಲು ಸಾದ್ಯ.

ಈಗಿನ ಬದುಕಿನತ್ತ ಕನ್ನಡಿ ಹಿಡಿಯುವ ಕೆಲಸವನ್ನು ಹೇಗೆ ಮಾಡಬಹುದು ಎಂದು ಹಾರ‍್ವರ‍್ಡ್ ಕಲಿಕೆವೀಡು ಸೇರಿದಂತೆ ಹಲವು ಕಲಿಕೆವೀಡುಗಳಲ್ಲಿ ಅರಕೆಗಳು ನಡೆದಿವೆ ಮತ್ತು ನಡೆಯುತ್ತಿವೆ. ಅದರಲ್ಲಿ ಹಾರ‍್ವರ‍್ಡ್ ನಲ್ಲಿರುವ ಕಲಿಗರಲ್ಲಿ ಕೆಲವರನ್ನು ಆರಿಸಿ ಹಲವು ಗುಂಪುಗಳನ್ನಾಗಿ ಮಾಡಲಾಯಿತು, ಆ ಗುಂಪುಗಳಿಗೆ ಮೇಲುಗರನ್ನು ಮತ್ತು ಸಲಹೆಗಾರರನ್ನು ನೀಡಿ ಕೆಲವು ಕಸರತ್ತುಗಳನ್ನು ಮಾಡಲು ತಿಳಿಸಲಾಯಿತು.

ಅವುಗಳಲ್ಲಿ ಕೆಲವು ಕಸರತ್ತುಗಳು:
1. ಮೊದಲನೆಯ ಕಸರತ್ತಿನಲ್ಲಿ, ಕಾಲೇಜಿನಲ್ಲಿ ಹೊತ್ತನ್ನು ಹೇಗೆ ಕಳೆಯಬೇಕೆಂದು ಕೊಂಡಿದ್ದಾರೆಂದು ಕಲಿಗರಿಗೆ ಕೇಳಲಾಯಿತು. ತರಗತಿಯಲ್ಲಿ ಪಾಟವನ್ನು ಕೇಳುವುದು, ಗೆಳತಿ/ಗೆಳಯರೊಡನೆ ಹರಟುವುದು, ಓದುಮನೆಯಲ್ಲಿ (library) ಓದುವುದು, ಕಲಿಕೆಯಾಚೆಗಿನ ಚಟುವಟಿಕೆ ಎಂದರೆ ಆಟ, ಕಲೆ, ಅಂಕಣ ಇಲ್ಲವೇ ಇತರೆ ಬಳಗಗಳೊಡನೆ ಕೆಲಸ ಮಾಡುವುದು. ಹೀಗೆ ಅವರವರ ಮೆಚ್ಚುಗೆಗಳೇನು ಎಂಬುದನ್ನು ಪಟ್ಟಿ ಮಾಡಲು ಹೇಳಲಾಯಿತು. ಈ ಪಟ್ಟಿ ಸಿದ್ದವಾದ ಮೇಲೆ, ಕಳೆದ ವಾರಗಳಲ್ಲಿ ಅವರು ತೊಡಗಿಸಿಕೊಂಡ ಕೆಲಸಗಳೇನು ಎಂದು ಇನ್ನೊಂದು ಪಟ್ಟಿ ಮಾಡಲು ಹೇಳಿದರು. ಬಳಿಕ ಎರಡೂ ಪಟ್ಟಿಗಳನ್ನು ಹೋಲಿಸಿ ನೋಡಲು ಹೇಳಲಾಯಿತು.
ಕಾಲೇಜಿನಲ್ಲಿ ಸಿಗುವ ಹೊತ್ತಿನಲ್ಲಿ ತಾವಂದುಕೊಂಡಂತೆ ಕಾಲಕಳೆಯುತ್ತಿಲ್ಲ ಎಂದು ಹಲವು ಕಲಿಗರ ಪಟ್ಟಿಗಳ ಹೋಲಿಕೆಯಲ್ಲಿ ಕಂಡುಬಂದಿತು. ತಾವಂದುಕೊಂಡ ಕೆಲಸವನ್ನು ದಿಟವಾಗಿಯೂ ಮಾಡುತ್ತಿದ್ದೇವೆಯೇ? ತಾನು ಸಾಗುತ್ತಿರುವ ದಾರಿ ತನ್ನ ಗುರಿಯತ್ತ ಸಾಗುತ್ತಿದೆಯೇ? ಎಂದು ಒರೆಹಚ್ಚಿ ನೋಡಲು ಈ ಕಸರತ್ತು ನೆರವಾಗಿತ್ತು.

2. ಮತ್ತೊಂದು ಕಸರತ್ತಿನಲ್ಲಿ, ತನ್ನ ಇಂದಿನ ಕಲಿಕೆ ಮತ್ತು ಕೆಲಸಗಳು ತಾನು ಮುಟ್ಟಬೇಕಾಗಿರುವ ಗುರಿ/ಕನಸಿಗೆ ಹೇಗೆ ನೆರವಾಗುತ್ತಿವೆ ಎಂದು ಒರೆಹಚ್ಚಿನೋಡುವುದಾಗಿತ್ತು. ಕೆಲವು ಕಲಿಗರು ಅರಿಮೆಯ ಕಲಿಕೆಯನ್ನು ನಡೆಸುತ್ತಿದ್ದರು ಜೊತೆಗೆ ಅವರಿಗೆ ರಾಜಕೀಯದಲ್ಲಿ ಏನಾದರೊಂದು ಸಾದಿಸಬೇಕೆಂಬ ಗುರಿಯಿತ್ತು. ಅದಕ್ಕಾಗಿ ತಮ್ಮ ಬಿಡುವಿನ ಹೊತ್ತಿನಲ್ಲಿ ರಾಜಕೀಯಕ್ಕೆ ಸಂಬಂದಿಸಿದ ಅಂಕಣಗಳನ್ನು ಓದುವುದು, ಕೆಲಸಗಳಲ್ಲಿ ತೊಡುಗುವುದನ್ನು ಮಾಡುತ್ತಿದ್ದರು. ಆದರೆ ತಾವು ಕಲಿಯುತ್ತಿರುವ ಅರಿಮೆಯ ಸಂಗತಿಗಳು ರಾಜಕೀಯ ಕಲಿಕೆಗೆ ಹೇಗೆ ನೆರವಾಗುತ್ತವೆ ಎಂದು ಅರಿಯಲು ಎಡವಿದ್ದರು. ಇಂತಹ ಸಂಗತಿಗಳನ್ನು ಚರ‍್ಚೆಗೆ ತಂದು, ಸಲಹೆಗಾರರ ನೆರವನ್ನು ಪಡೆದು, ತಾಳೆನೋಡಿ ಅದಕ್ಕೆ ಉತ್ತರವನ್ನು ಕಂಡುಕೊಂಡರು.

3. ಹಲವಾರು ವಿಚಾರಗಳನ್ನು ಸ್ವಲ್ಪ ಸ್ವಲ್ಪ ತಿಳಿಯುವುದು ಒಳ್ಳೆಯದೋ, ಒಂದೇ ವಿಚಾರವನ್ನು ಆಳವಾಗಿ ಅರಿಯುವುದು ಒಳ್ಳೆಯದೋ ಎಂಬುದನ್ನು ಅರಿಯಲು ‘ಅಗಲ ಮತ್ತು ಆಳ’ ಎಂಬ ಕಸರತ್ತನ್ನು ನಡೆಸಲಾಯಿತು. ತಮ್ಮ ಕಲಿಕೆಯ ಬದುಕನ್ನು ತಾವಂದುಕೊಂಡ ಗುರಿಯತ್ತ ಕೊಂಡೊಯ್ಯುವುದು ಹೇಗೆ ಎಂಬ ಚಿಂತನೆಯನ್ನು ನಡೆಸಲು ಕಲಿಗರಿಗೆ ಬಿಡಲಾಯಿತು. ಆ ಮೂಲಕ ತಮ್ಮ ಗುರಿಗೆ ಬೇಕಾದ ವಿಚಾರದತ್ತ ಆಳವಾದ ಕಲಿಕೆ ನಡೆಸಬೇಕು ಎಂದು ಕಲಿಗರಿಗೆ ಮನದಟ್ಟಾಯಿತು.

4. ಬದುಕಿನಲ್ಲಿ ತಾನು ಯಾವುದಕ್ಕೆ ಹೆಚ್ಚು ಬೆಲೆಯನ್ನು ಕೊಡುತ್ತಿದ್ದೇನೆ ಎಂದು ತಿಳಿದುಕೊಳ್ಳಲು ಈ ಮುಂದಿನ ಕಸರತ್ತನ್ನು ಮಾಡಿಸಲಾಯಿತು. ಒಲವು, ನಲಿವು, ಮಂದಿಮೆಚ್ಚುಗೆ, ಆಸ್ತಿ, ಬುದ್ದಿವಂತಿಕೆ ಇಂತಹ 25 ಪದಗಳಿರುವ ಹಾಳೆಯನ್ನು ಕಲಿಗರಿಗೆ ಕೊಟ್ಟು, ಅದರಲ್ಲಿ ಅವರು ಹೆಚ್ಚು ಒತ್ತುಕೊಡುವ ಐದು ಪದಗಳನ್ನು ಗುರುತುಹಾಕಲು ಹೇಳಲಾಯಿತು. ತಾವು ಗುರುತುಹಾಕಿದ ಪದಗಳಲ್ಲಿ ಒಂದಕ್ಕೊಂದು ಎದುರಾದ ಪದಗಳಿವೆಯೇ ಎಂದು ನೋಡಲಾಯಿತು. ಎತ್ತುಗೆಗೆ, ಕಲಿಗರಲ್ಲೊಬ್ಬರಿಗೆ ತಾವು ದೊಡ್ಡ ಕೊಯ್ಮಾಂಜುಗ(Surgeon)ನಾಗಬೇಕು ಎಂಬ ಗುರಿಯಿತ್ತು, ಜೊತೆಗೆ ದೊಡ್ಡ ಸಂಸಾರವನ್ನು ನಡೆಸುವ ಬಯಕೆಯಿತ್ತು. ಅವರು ಒತ್ತುಕೊಟ್ಟಿದ್ದು ‘ನೆರವಾಗಬಲ್ಲ’ ಮತ್ತು ‘ಕುಂಟುಂಬ’ ಪದಗಳಾಗಿದ್ದವು. ದೊಡ್ಡ ಕೊಯ್ಮಾಂಜುಗನಾಗಲು ಹೆಚ್ಚಿನ ಹೊತ್ತನ್ನು ಕೊಡಬೇಕು, ದೊಡ್ಡ ಸಂಸಾರದ ಹೊರೆಯನ್ನು ಹೊತ್ತರೆ ಕೊಯ್ಮಾಂಜುಗ ಕೆಲಸಕ್ಕೆ ಕುತ್ತು ಬರುವುದು. ಹಾಗೆಯೇ ಹೆಚ್ಚು ಹೊತ್ತನ್ನು ಕೆಲಸದಲ್ಲಿ ಕೊಟ್ಟರೆ ದೊಡ್ಡ ಸಂಸಾರವನ್ನು ಸಂಬಾಳಿಸಲು ಕಶ್ಟವಾಗುವುದು. ಇಂತಹ ಇಕ್ಕಟ್ಟಿನ ಸಂದರ‍್ಬಗಳನ್ನು ಗುಂಪಿನ ನಡುವೆ ಚರ‍್ಚೆಗೆ ತಂದು ಇದಕ್ಕೆ ತಕ್ಕುದಾದ ಬಗೆಹರಿಕೆಯನ್ನು ಹುಡುಕಲು ಬಿಡಲಾಯಿತು.
ತಾನು ಯಾವುದಕ್ಕೆ ಹೆಚ್ಚು ಒತ್ತನ್ನು ಕೊಡುತ್ತೇನೆ? ಅವುಗಳಲ್ಲಿ ಯಾವುದಾದರು ಒಂದಕ್ಕೊಂದು ಎದುರಾದ ಸಂಗತಿಗಳಿವೆಯೇ? ಇದ್ದರೆ ಹೇಗೆ ಬಗೆಹರಿಸುವುದು? ತಾನು ಒತ್ತುಕೊಡುವ ಸಂಗತಿಗಳು ತನ್ನ ಬದುಕಿಗೆ ಹೇಗೆ ನಾಟುತ್ತವೆ ಎಂಬುದನ್ನು ಅರಿಯುವುದೇ ಈ ಕಸರತ್ತಿನ ಗುರಿಯಾಗಿತ್ತು.

5. ಒಂದೂರಿನಲ್ಲಿ ಒಬ್ಬ ಮೀನುಗಾರನಿದ್ದ, ದಿನದ ಕೆಲವು ಗಂಟೆಗಳ ಹೊತ್ತು ಮೀನನ್ನು ಹಿಡಿದು ಅದನ್ನು ಗೆಳೆಯರಿಗೆ ಮಾರುತ್ತಿದ್ದ. ದಿನದ ಉಳಿದ ಹೊತ್ತನ್ನು ಹೆಂಡತಿ ಮಕ್ಕಳೊಂದಿಗೆ ಚೆನ್ನಾಗಿ ಕಳೆಯುತ್ತಿದ್ದ. ಮೀನು ಮಾರಾಟದ ಹಣದಲ್ಲಿ ಬದುಕು ಚೆನ್ನಾಗಿ ಸಾಗುತ್ತಿತ್ತು. ಈ ಚೆಂದದ ಬದುಕನ್ನು ಬದಲಿಸಿಕೊಳ್ಳುವ ಗೋಜಿಗೆ ಆತ ಎಂದಿಗೂ ಕೈಹಾಕಲಿಲ್ಲ. ಒಮ್ಮೆ ಆ ಊರಿಗೆ ಬೇಟಿಯಿತ್ತ ಕೆಲವು ವ್ಯಾಪಾರದ ಅರಿಗರು, ಆ ಮೀನುಗಾರನು ಹೆಚ್ಚಿನ ಮೀನನ್ನು ಹಿಡಿದು ಸಿರಿವಂತನಾಗಬಹುದು ಎಂದು ತಿಳಿಸಿದರು. ಹೆಚ್ಚು ಹೆಚ್ಚು ಮೀನನ್ನು ಹಿಡಿದು, ಮೀನಿನ ವ್ಯಾಪಾರದ ಉದ್ದಿಮೆಯನ್ನು ಆರಂಬಿಸಿ, ಮೀನುಗಳನ್ನು ಮಾರಾಟ ಮಾಡಿ ಹೆಚ್ಚು ಲಾಬಗಳಿಸಬಹುದು. ಆತ ಸಿರಿವಂತನಾದ ಮೇಲೆ ಬಡವರಿಗೆ, ಹಸಿದವರಿಗೆ ಊಟವನ್ನು ಹಾಕಬಹುದು ಆ ಮೂಲಕ ಕೂಡಣಕ್ಕೆ ನೆರವಾಗಬಹುದು. ಇಶ್ಟೆಲ್ಲಾ ಆದ ಮೇಲೂ ಆತ ತನ್ನ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕಬಹುದು ಎಂದು ಅರಿಗರು ತಿಳಿಸಿದರು.

ಮೀನುಗಾರನ ಜಾಗದಲ್ಲಿ ತಮ್ಮನ್ನು ತಾವು ಊಹಿಸಿಕೊಳ್ಳಲು ಕಲಿಗರಿಗೆ ತಿಳಿಸಲಾಯಿತು. ತಮಗೆ ಬೇಕಾದಶ್ಟು ಮಾತ್ರ ಗಳಿಸಿ, ಯಾವುದೇ ತೊಂದರೆಯನ್ನು ಎದುರುಹಾಕಿಕೊಳ್ಳದೇ, ಇಲ್ಲವೇ ಹೊಸ ಸಾಹಸಕ್ಕೆ ಕೈಹಾಕದೇ ತಮ್ಮ ಪಾಡಿಗೆ ನೆಮ್ಮದಿಯ ಬದುಕನ್ನು ನಡೆಸಬಹುದು. ಇಲ್ಲವೇ, ತಮ್ಮ ಜಾಣ್ಮೆಯನ್ನು ಬಳಸಿ, ಹೊಸ ಹೊಸ ಸಾಹಸಗಳಿಗೆ ಕೈಹಾಕಿ, ದುಡಿದು, ಹೆಚ್ಚಿನ ಹಣವನ್ನು ಗಳಿಸಿ, ತಾವು ಬೆಳೆದು ಕೂಡಣದ ಬೆಳವಣಿಗೆಗೆ ನೆರವಾಗಬಹುದು. ಕೂತು ಕಾಲಕಳೆಯುವುದಕ್ಕಿಂತ ಕೂಲಿ ಮಾಡುವುದು ಲೇಸು ಎನ್ನುವಂತೆ, ತನ್ನ ತಾಕತ್ತು ಏನು ಎಂದು ಅರಿತು, ದುಡಿದು, ತನ್ನ ಬದುಕಿನ ಹಾಗೆಯೇ ಕೂಡಣದ ಬದುಕನ್ನೂ ಹಸನು ಮಾಡಬಹುದು. ತನ್ನ ಕಲಿಕೆಯ ಕಾಲದಲ್ಲಿಯೇ ಇವುಗಳ ಬಗ್ಗೆ ಚಿಂತನೆ ನಡೆಸಿ, ಚರ‍್ಚೆಯನ್ನು ಮಾಡಿ ಗಟ್ಟಿಯಾದ ಗುರಿಯನ್ನು ಕಟ್ಟಿಕೊಳ್ಳಲು ಈ ಕಸರತ್ತು ಕಲಿಗರಿಗೆ ನೆರವಾಯಿತು.

ಈ ಮೇಲಿನ ಕಸರತ್ತುಗಳು ಕೇವಲ ಕಲಿಗರಿಗೇ ಆಗಬೇಕೆಂದಿಲ್ಲ. ಒಂದು ಗುರಿ ಇಲ್ಲವೇ ಕನಸನ್ನು ಇಟ್ಟುಕೊಂಡಿರುವ ಒಬ್ಬಬ್ಬೊರೂ ಈ ಕಸರತ್ತುಗಳನ್ನು ಮಾಡಿ, ತಾವು ಸರಿಯಾದ ದಾರಿಯಲ್ಲಿ ಹೋಗುತ್ತಿದ್ದೇವೆಯೇ ಎಂದು ಒರೆಹಚ್ಚಿ ನೋಡಿಕೊಳ್ಳಬಹುದು. ಚಿಂತನೆಗಳನ್ನು ನಡೆಸಬಹುದು. ಆ ಮೂಲಕ ತಿಳುವಳಿಕೆಯ ಹಾಗು ಜಾಣ್ಮೆಯ ಬದುಕನ್ನು ನಡೆಸಬಹುದು.

(ಮಾಹಿತಿ ಸೆಲೆ: nytimes.com)
(ಚಿತ್ರ ಸೆಲೆ: essentialthingdevotions.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: