ಗಂಟು ಕಟ್ಟಿದ ಕೆಸುವಿನ ಎಲೆಯ ಸಾರು

ರೇಶ್ಮಾ ಸುದೀರ್.

kesa1

ಕೆಸುವಿನ ಎಲೆಯಲ್ಲಿ ಅನೇಕ ಬಗೆಗಳಿವೆ, ನಟ್ಟಿಕೆಸ, ಹಾಲುಕೆಸ, ನೀರುಕೆಸ, ಕರಿಕೆಸ ಹೀಗೆ. ಮಲೆನಾಡಿನ ಅಡುಗೆಯ ಬಗೆಗಳಲ್ಲಿ ಕೆಸುವಿಗೆ ವಿಶೇಶ ಸ್ತಾನವಿದೆ. ಕೆಸುವಿನ ಎಲೆ ಮತ್ತು ಗೆಡ್ಡೆಗಳನ್ನು ಬಳಸಿ ರುಚಿ ರುಚಿಯಾದ ಅಡುಗೆ ಮಾಡುವುದರಲ್ಲಿ ಮಲೆನಾಡಿಗರು ಎತ್ತಿದ ಕೈ. ನಟ್ಟಿಕೆಸದ ಎಲೆಯನ್ನು ಗಂಟಿನಂತೆ ಕಟ್ಟಿ ಅದರಿಂದ ಒಂದು ಅಪರೂಪದ ಅಡುಗೆ ಮಾಡಲಾಗುತ್ತದೆ. ಈ ಬರಹದಲ್ಲಿ ಅದನ್ನು ಪರಿಚಯಿಸಲಾಗಿದೆ.

kesa2

ಗಂಟುಕಟ್ಟಿದ ಕೆಸುವಿನ ಎಲೆ

ಎಳೆಯ ನಟ್ಟಿ ಕೆಸದ ಎಲೆಗಳು–1/2ಕೆ.ಜಿ
ತೆಂಗಿನಕಾಯಿ ತುರಿ—1/2ಬಟ್ಟಲು
ಸಾಸಿವೆ——-1/4 ಚಮಚ
ಮೆಂತೆ——–1/4 ಚಮಚ
ಜೀರಿಗೆ——–1/4 ಚಮಚ
ಅಚ್ಚಕಾರದ ಪುಡಿ—4 ಟಿಚಮಚ
ದನಿಯಪುಡಿ——-1 ಟಿಚಮಚ
ಟೊಮಟೊ——–1
ನೀರುಳ್ಳಿ———-1 ಗೆಡ್ಡೆ
ಬೆಳ್ಳುಳ್ಳಿ———–1 ಗೆಡ್ಡೆ
ಕಂಚಿಹುಳಿ———-1

ಮಾಡುವ ಬಗೆ:

ಕೆಸುವಿನ ಎಲೆಯನ್ನು ಸುರುಳಿಯಾಕಾರದಲ್ಲಿ ಸುತ್ತಿ, ಸರಿಯಾಗಿ ಮುದುರಿಸಿ ಗಂಟು ಹಾಕುವುದನ್ನು ಕೆಸುವಿನ ಎಲೆ ಗಂಟು ಹಾಕುವುದು ಅನ್ನುತ್ತಾರೆ. ಕೆಸುವಿನ ಎಲೆಯ ಗಂಟು ಕಟ್ಟುವುದು ಕೂಡ ಒಂದು ಕಲೆ. ಸರಿಯಾಗಿ ಕಟ್ಟದಿದ್ದರೆ ಸಾರಿನಲ್ಲಿ ಎಲೆ ಬಿಚ್ಚಿಕೊಳ್ಳುತ್ತದೆ, ಎಲೆಯನ್ನು ಗಂಟು ಹಾಕುವ ಬಗೆಯನ್ನು ಈ ಕೆಳಗಿನ ವೀಡಿಯೋದಲ್ಲಿ ತೋರಿಸಲಾಗಿದೆ.

[wpvideo DqqJswqD]

ಎಲೆಗಳನ್ನು ಗಂಟು ಹಾಕಿಕೊಂಡ ನಂತರ, ಮೆಂತೆ, ಸಾಸಿವೆ, ಜೀರಿಗೆಯನ್ನು ಹುರಿದುಕೊಳ್ಳಿ. ತೆಂಗಿನತುರಿಗೆ ಹುರಿದುಕೊಂಡ ಈ ಸಾಮಗ್ರಿಗಳನ್ನು ಹಾಕಿ, ಜೊತೆಗೆ ಕಾರದಪುಡಿ, ದನಿಯಪುಡಿ, ನೀರುಳ್ಳಿ, ಬೆಳ್ಳುಳ್ಳಿ ಹಾಗು ಟೊಮಟೊ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಗಂಟುಕಟ್ಟಿದ ಕೆಸುವಿನ ಎಲೆಯನ್ನು ನೀರು ಹಾಕಿ(ನೀರು ಜಾಸ್ತಿ ಬೇಡ) ಬೇಯಿಸಿ. ಕೆಸುವಿನ ಗಂಟು ಮುಟ್ಟಿದಾಗ ಮೆತ್ತಗಾಗಿದ್ದರೆ ಹದವಾಗಿ ಬೆಂದಿದೆ ಎಂದು ಅರ‍್ತ. ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ರುಚಿಗೆ ಉಪ್ಪು ಹಾಕಿ, ಕಂಚಿಹುಳಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಕಂಚಿಹುಳಿ ಇಲ್ಲದಿದ್ದರೆ ಯಾವ ಹುಳಿಯಾದರು ಆಗುತ್ತದೆ. ಉಪ್ಪು, ಹುಳಿ ಮತ್ತು ಕಾರ ಹದವಾಗಿರ ಬೇಕು. ಹುಳಿ ಕಡಿಮೆ ಆದರೆ ಕೆಸುವಿನ ಎಲೆ ಬಾಯಿ ತುರಿಸುತ್ತದೆ. ಹುಳಿ ಜಾಸ್ತಿಯಾದರು ತೊಂದರೆ ಇಲ್ಲ. ಕುದಿಬಂದ ಸಾರಿಗೆ ಸಾಸಿವೆ ಹಾಗು ಬೆಳ್ಳುಳ್ಳಿ ಒಗ್ಗರಣೆ ಕೊಡಿ.
ಬಾಯಲ್ಲಿ ನೀರೂರಿಸುವ ಕೆಸುವಿನ ಎಲೆಯ ಸಾರು ತಯಾರಾಯಿತು. ಅಕ್ಕಿ ರೊಟ್ಟಿಯೊಂದಿಗೆ ತುಪ್ಪ ಹಾಕಿಕೊಂಡು ತಿನ್ನಿ.

(ಹಾಲುಕೆಸುವಿನ ಎಲೆಯನ್ನು ಈ ಬಗೆಯ ಅಡುಗೆಯಲ್ಲಿ ಬಳಸುವುದಿಲ್ಲ ಇದು ದಪ್ಪನಾದ ಎಲೆ. ಹಾಲುಕೆಸುವಿನ ಗೆಡ್ಡೆಯ ಇನ್ನೊಂದು ಬಗೆಯ ಸಾರನ್ನು ಮಲೆನಾಡಿಗರು ಮಾಡುತ್ತಾರೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: